ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಏನು ಬೇಕಾದರೂ ಆಗಬಹುದು. ಕಾಲಪ್ರವಾಹ ಕರ್ಮಪ್ರಹಾರ ಯಾರನ್ನು ಏನು ಬೇಕಾದರೂ ಮಾಡಬಹುದು. ಉನ್ನತದಲ್ಲಿರುವವರನ್ನು ಪಾತಾಳಕ್ಕಿಳಿಸಬಹುದು. ಪಾತಾಳದಲ್ಲಿರುವವರನ್ನು ವೈಕುಂಠಕ್ಕೇರಬಹುದು. ಸೂರ್ಯವಂಶದ ಚಕ್ರವರ್ತಿ ತನ್ನದೇ ಮನೆಯಲ್ಲಿ ಪಟ್ಟದ ರಾಣಿಯ ಭವನದ ನೆಲದ ಮೇಲೆ ಬಿದ್ದು ಹೊರಳಾಡುವದೆಂದರೇನು..! ಅದು ಅವನಿಗೆ ಅನುಚಿತ…!!

ಸಾಯುವ ಮೊದಲೇ ಸತ್ತ ಸಂದರ್ಭ ದಶರಥನಿಗೆ. ಅನುಭವಿಸಲಾರದ ಹಿಂಸೆಯನ್ನು ಅನುಭವಿಸುತ್ತಿದ್ದಾನೆ ದಶರಥ. ರಾಮ ಬರುವುದಕ್ಕಿಂತ ಮೊದಲು ಎಲ್ಲರಿಗಿಂತ ಮಿಗಿಲಾದ ಪ್ರೀತಿಯನ್ನು ಯಾರಿಗೆ ಕೊಟ್ಟನೋ ಆ ಪ್ರೀತಿಯ ಮಡದಿ ದಶರಥನ ಕೊರಳಿಗೆ ಉರುಳಾದಳು. ಮನೆಯೊಳಗಿಂದ ಆಕ್ರಮಣವಾಯಿತು.

ರಾಮನಿಗಾಗಿ ಕೊಟ್ಟ ಮಾತನ್ನು ಬಿಟ್ಟಾನು, ಆದರೆ ರಾಮ ಮೇಲೆ ಆಣೆ ಮಾಡಿ ಪ್ರತಿಜ್ಞೆ ಮಾಡಿದ್ದಾನೆ. ನಾನಾ ರೀತಿಯಿಂದ ದಶರಥ ಕೈಕೇಯಿಯ ಮನವೊಲಿಸಲು ಪ್ರಯತ್ನಿಸಿದನು. ಎಲ್ಲಿ ಪ್ರೀತಿಯು ಆಳಬೇಕಿತ್ತೋ ಅಲ್ಲಿ ಭೀತಿಯು ಆಳುತ್ತಿದೆ….!!

ಆಗ ಕೈಕೇಯಿ, “ಸತ್ಯವಾದಿ, ಸತ್ಯವನ್ನು ಬಿಡುವವನಲ್ಲ ಎನ್ನುತ್ತೀಯಲ್ಲಾ, ಈ ವರವನ್ನು ಪೂರ್ತಿಗೊಳಿಸು” ಎಂದಳು.

ಬಹಳ ಶ್ರಮದಿಂದ ಪಡೆದ ದೊಡ್ಡ ಯೋಗ್ಯತೆಯ ಮಗನನ್ನು ಹೇಗೆ ಕಾಡಿಗೆ ಕಳುಹಿಸಲಿ….?

ದಶರಥ ಹೇಳಿದ, “ಸತಿಪತಿಯ ಧರ್ಮವನ್ನು ಬಿಟ್ಟೇ, ನಿನ್ನ ಮಗನನ್ನು ಬಿಟ್ಟೆ”. ಪರಿಹಾರ ಭರತನೇ ಆಗಿದ್ದ. ಆತನಿಗೂ ರಾಮನಲ್ಲದೇ ತಾನು ರಾಜ್ಯವಾಳುವುದು ಇಷ್ಟವಿರಲಿಲ್ಲ. ಅದನ್ನು ಯೋಚಿಸದೇ, ಕೈಕೇಯಿ ನಿರ್ಧರಿಸಿದಳು. ಆದರೆ ಇಲ್ಲಿ ವಿಧಿಯಾಟವಾಡಿತು. “ನೀನು ಸತಿಯೂ ಅಲ್ಲ, ಬಾಂಧವ್ಯವೂ ಇಲ್ಲ. ಇದಕ್ಕೆ ರಾಮನೇ ಪರಿಹಾರ ಕೊಡ್ತಾನೆ.” ಎಂದನು ದಶರಥ.

“ರಾಮನ ರಾಜ್ಯಾಭಿಷೇಕದ ಸಾಮಗ್ರಿಯಿಂದಲೇ ನನ್ನ ಅಂತ್ಯಕ್ರಿಯೆ ನಡೆಸು ಎಂದು ಬೇಸರಿಸಿದ. ಈ ಮಾತನ್ನು ಕೇಳಿ ಕುಂದುವ ಜನರ ಮುಖವನ್ನು ಹೇಗೆ ನೋಡಲಿ” ಎಂದು ತುಂಬಾ ದುಃಖಪಟ್ಟನು.

ಆ ಕಡೆಗೆ ರಾಮರಾಜ್ಯಾಭಿಷೇಕದ ಸಂತೋಷ ಮಹೋತ್ಸವದ ರೂಪತಾಳಿತ್ತು. ಅಯೋಧ್ಯೆ ಸರ್ವಸಿದ್ಧವಾಗಿತ್ತು ಪಟ್ಟಾಭಿಷೇಕಕ್ಕೆ. ದಶರಥ ಇನ್ನೂ ಬರದ ಕಾರಣ, ಸುಮಂತ್ರನು ರಾಜಭವನವನ್ನು ಪ್ರವೇಶಿಸಿ, ದಶರಥನನ್ನು ಕುರಿತು ಸ್ತುತಿಸುತ್ತಾನೆ. ರಾಜರನ್ನು ಏಳಿಸುವ ಕ್ರಮವೇ ಬೇರೆಯಿತ್ತು.

ರಾಮರಾಜ್ಯಾಭಿಷೇಕಕ್ಕೆ ಸರ್ವಸಿದ್ಧತೆಯಾಗಿದೆ, ಬನ್ನಿ ಪ್ರಭು ಎಂದು ಸುಮಂತ್ರನು ಏಳಿಸುವನು. “ನಿನ್ನ ವಾಕ್ಯವು ನನ್ನ ಮರ್ಮವನ್ನು ಕತ್ತರಿಸುತ್ತಿದೆ” ಎಂದು ಬೇಸರಿಸಿದ. ಆಗ ಕೈಕೇಯಿ, “ರಾಮರಾಜ್ಯಾಭಿಷೇಕದ ಆನಂದದಿಂದ ರಾಜನಿಗೆ ನಿದ್ದೆಯೇ ಬಂದಿಲ್ಲ. ಅದಕ್ಕಾಗಿ ಆತನಿಗೆ ಈಗ ನಿದ್ದೆ ಬರುತ್ತಿದೆ. ಈಗಲೇ ಹೋಗಿ ರಾಮನನ್ನು ಕರೆದುಕೊಂಡು ಬಾ” ಎಂದು ಸುಮಂತ್ರನಿಗೆ ಹೇಳಿದಳು. ರಾಮನನ್ನು ಕರೆತರಲು ತಾನು ಹೋಗುತ್ತಿದ್ದೇನೆ ಎಂದು ಸುಮಂತ್ರನು ಅತ್ಯಂತ ಖುಷಿಪಡುವನು.

ಮತ್ತೆ ಸುಮಂತ್ರನು ದಶರಥನಲ್ಲಿಗೆ ಬಂದು ನೋಡಿದಾಗ ದುಃಖದಲ್ಲಿದ್ದದನ್ನು ಕಂಡಾಗ, “ರಾಮನನ್ನು ಕರೆದುಕೊಂಡು ಬಾ ಅಂದೆನಲ್ಲ, ಹೋಗು” ಎಂದನು ದಶರಥ.

ಅದ್ಭುತ ಸೌಧ ರಾಮನ ಭವನ. ಪರಿಮಳಯುಕ್ತ, ನಿನಾದಮಯ, ಚಿತ್ರಭಿತ್ತಿಗಳನ್ನೊಳಗೊಂಡ ಮಹೇಂದ್ರನ ಅರಮನೆಯಂತಿತ್ತು ರಾಮನ ಅರಮನೆ. ಈಗ ರಾಮಭವನ ಕೈಮುಗಿವ ಜನರ ಗುಂಪಾಗಿತ್ತು. ರಾಮನ ದರ್ಶನಕ್ಕೆ ಕಾಯುತ್ತಿದ್ದರು.

ಸುಮಂತ್ರ ರಾಮನ ಮನೆ ಪ್ರವೇಶಿಸುತ್ತಾ ಇದಾನೆ, ಪುರರಿಗೆಲ್ಲ ರೋಮಾಂಚನ. ಸುಮಂತ್ರನಿಗೆ ಸಂಭ್ರಮ, ರಾಮನನ್ನು ತಾನು ಕರೆದುಕೊಂಡು ಹೋಗುತ್ತೇನೆ ಎಂದು. ಯುವಕರು ಕಾವಲು ಕಾಯ್ತಾ ಇದ್ದರು. ವೃದ್ಧರು, ಸ್ತ್ರೀಯರೆಲ್ಲರೂ ರಾಮನಿಗಾಗಿ ಕಾಯುತ್ತಿದ್ದರು.

ರಾಮನು ಸುಮಂತ್ರನನ್ನು ತನ್ನಲ್ಲಿಗೆ ಬರಮಾಡಿಕೊಳ್ಳುತ್ತಾನೆ. ಕುಬೇರನಂತೆ ಚಿನ್ನದ ಮಂಟಪದಲ್ಲಿ ಕುಳಿತಿದ್ದಾನೆ. ಪಕ್ಕದಲ್ಲಿ ಸೀತೆ ಚಾಮರಸೇವೆ ಮಾಡುತ್ತಿದ್ದಾಳೆ. ಅವರ ಸಮಾಗಮ ಚಿತ್ರಾನಕ್ಷತ್ರ ಚಂದ್ರನ ಜೊತೆ ಇರುವಂತೆ ತೋರುತ್ತಿತ್ತು. ತಪಿಸುವ ಆದಿತ್ಯನಂತೆ ಸ್ವಯಂ ಪ್ರಭೆಯಿಂದ ಶೋಭಿಸುತ್ತಿದ್ದನು ರಾಮ. ವಿನೀತನಾಗಿ ಸುಮಂತ್ರನು ವಿಹಾರಸುಖ, ಪ್ರಾಜಂಲಿಸುಖ, ನಿದ್ರಾಸುಖ ಇತ್ಯಾದಿ ಕುಶಲಪ್ರಶ್ನೆಗಳನ್ನು ಕೇಳುತ್ತಾನೆ.

ಕೈಕೇಯಿ ಸನ್ನಿಹಿತನಾದ ದಶರಥ ನಿನ್ನನ್ನು ನೋಡಬಯಸುತ್ತಾನೆ. ತಡಮಾಡದೇ ಹೋಗೋಣ ಎಂದನು ಸುಮಂತ್ರ. ಆಗ ರಾಮ ಸೀತೆಗೆ, “ದೇವಿ, ನನ್ನ ತಂದೆ ತಾಯಿ ನನ್ನ ಪಟ್ಟಾಭಿಷೇಕದ ವಿಷಯವನ್ನೇ ಮಾತಾಡುತ್ತಿದ್ದಾರೆ. ಕೈಕೇಯಿಯು ಪಟ್ಟಾಭಿಷೇಕದ ವಿಷಯ ತಿಳಿದು, ಪ್ರಿಯವನ್ನು ಬಯಸುವವಳಾಗಿ ಏನೋ ಮಾಡಲು ಹೊರಟಿದ್ದಾಳೆ. ರಾಜನನ್ನು ಕಾಣುತ್ತೇನೆ. ನೀನು ಇಲ್ಲೇ ಇರು” ಎಂದನು. ಬಾಗಿಲವರೆಗೆ ಜೊತೆಗೆ ಬಂದು ಮಂಗಲವನ್ನು ಬಯಸಿದಳು ಸೀತೆ.

ಪರ್ವತದೊಳಗಿಂದ ಸಿಂಹವು ಹೊರಬರುವಂತೆ ರಾಮನು ಹೊರಬಂದನು. ಈವರೆಗೆ ರಾಮನು ಮುದ್ದು ಮಗನಾಗಿದ್ದನು. ಇಲ್ಲಿಂದ ಮುಂದೆ ರಾಮನ ರಾಮತ್ವ ಪ್ರಕಟವಾಗುತ್ತದೆ.

ಮಹಾರಥವನ್ನೇರಿ ರಾಮನು ಹೊರಟನು. ರಾಮ ಬಂದದ್ದು ಎಲ್ಲರಿಗೂ ಗೊತ್ತಾಯಿತು. ದೊಡ್ಡ ಮೋಡದ ಮರೆಯಿಂದ ಹೊರಬರುವ ಚಂದ್ರನಂತೆ ರಾಮನು ಶೋಭಿಸಿದನು. ಇಡೀ ಜನಸ್ತೋಮ, ಎಷ್ಟೆಷ್ಟೋ ಗಜಗಳು ಅಶ್ವಗಳು, ಯೋಧರು, ಶೂರರು, ಪೌರರು, ಜನಪದರು, ಸ್ತ್ರೀಯರು ಹೀಗೆ ಎಲ್ಲರೂ ರಾಮನನ್ನು ಮಂಗಲವಾದ್ಯಗಳಿಂದೊಳಗೊಂಡು ನಮಿಸಿದರು.

ಆಗ ಸ್ತ್ರೀಯರೆಲ್ಲರೂ ” ಕೌಸಲ್ಯೆಗೆ ಆನಂದವೆಂದರೆ ಇಂದು ಬಂದಿರಬೇಕು. ಪರಮ ಆನಂದ ಅವಳನ್ನಾವರಿಸಿರಬೇಕು. ನಂತರ ಸೀತೆಯ ಬಗ್ಗೆ, ಸೀತೆಯೆಂದರೆ ಸ್ತ್ರೀಕುಲದ ರತ್ನ. ರಾಮನ ವಲ್ಲಭನಾಗಿ ಪಡೆಯಲು ಹಳೆಯ ಪುಣ್ಯವೆ ಇರಬೇಕೆಂದರು.”

ರಾಮನು ದೊರೆಯಾದರೆ ಅಯೋಧ್ಯೆಗೆ ಹೊಸ ಕಾಲ ಬಂದ ಹಾಗೆ. ಇನ್ನು ಮುಂದೆ ನಮ್ಮನ್ನು ದುಃಖ ಮುಟ್ಟದು. ರಾಜನಗರಿಯಲ್ಲಿ ದೊಡ್ಡ ಮೆರವಣಿಗೆಯೇ ನಡೆಯುತ್ತಿತ್ತು.

ರಾಮ ಬರುವ ಮುನ್ನ ದಾರಿಯನ್ನೇ ನೋಡುತ್ತಿದ್ದರು. ರಾಮ ಬಂದ ಕೂಡಲೇ ರಾಮನಲ್ಲೇ ಸರ್ವರ ದೃಷ್ಟಿ, ಮನಸ್ಸು ನೆಟ್ಟಿದ್ದರು. ಪ್ರಯತ್ನಪಟ್ಟರೂ ಕೂಡ ತೆಗೆಯಲಾರಲಾಗಲಿಲ್ಲ. ಅಂಥಹ ಪ್ರಭೆ ರಾಮನದು.

ಯಾರು ರಾಮನನ್ನು ನೋಡಲಿಲ್ಲವೋ, ರಾಮ ಯಾರನ್ನು ನೋಡಲಿಲ್ಲವೋ ಅವನ ಜೀವ ವ್ಯರ್ಥ ಎಂದು ಮಾತನಾಡಿಕೊಳ್ಳುತ್ತಿತ್ತು ಜನಸ್ತೋಮ.

ರಾಮನಿಗಾಗಿ ಯುಗದ ಮೆರವಣಿಗೆ ನಡೆದಿದೆ. ಗಂಭೀರನಾಗಿ, ಮುಗುಳ್ನಗೆಯುಳ್ಳ ರಾಮನು ರಾಜಭವನಕ್ಕೆ ರಾಜ ತಲುಪಿದನು.

ಹೇಗೆ ತಾನೆ ರಾಜನು ರಾಮನಿಗೆ ಆ ವಿಷಯವನ್ನು ಹೇಳಿಯಾನು… , ಸೀತೆ ಹೇಗೆ ಸ್ವೀಕರಿಸಿಯಾಳು. ಲಕ್ಷ್ಮಣ ಹೇಗೆ ಸ್ವೀಕರಿಸಿಯಾನು. ಈ ಸಂದರ್ಭದಲ್ಲಿ ರಾಮನು ಸ್ವೀಕರಿಸುವ ರೀತಿಯು ತುಂಬಾ ದೊಡ್ಡದು. ನಾಳೆ ಬನ್ನಿ, ಅತ್ಯಂತ ಪ್ರೀತಿಯುಳ್ಳ ತಂದೆ ಮಗನ ಮಧ್ಯೆ ಏನು ಸಂಭಾಷಣೆ ನಡೆಯಿತು ಎಂದು ಕೇಳೋಣ. ರಾಮನ ಪಟ್ಟಾಭಿಷೇಕ ಎಷ್ಟು ದೊಡ್ಡದೋ, ರಾಮನ ರಾಜ್ಯತ್ಯಾಗವೂ ಅಷ್ಟೇ ದೊಡ್ಡದು. ನಾಳೆ ನೋಡೋಣ ಅಲ್ಲಿನ ಸಂದರ್ಭವನ್ನು.

ಪ್ರವಚನವನ್ನು ಇಲ್ಲಿ ಕೇಳಿರಿ:


 

 

ಪ್ರವಚನವನ್ನು ನೋಡಲು:

Facebook Comments