ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಏನೋ ಆಗಿದೆ ಎಂಬುದು ಗೊತ್ತಾಗಿದೆ. ಆದರೆ ಏನಾಗಿದೆ ಎಂಬುದು ಗೊತ್ತಾಗಿಲ್ಲ.ಕಷ್ಟದ ಮನಸ್ಥಿತಿ ಇದು. ಏನಾಗಿದೆ ಎಂಬುದು ಗೊತ್ತಾದರೆ ಒಂದು ತರಕ್ಕೆ ಸಮಾಧಾನ. ಇಷ್ಟೇ ಆಗಿರುವುದು ಅಥವಾ ಇದೇ ಆಗಿರುವುದು ಅಂತ. ನಮಗೆ ಅತ್ಯಂತ ಪ್ರಿಯರಾದವರಿಗೆ ಏನೋ ಆಗಿದೆ ಎಂದು ಗೊತ್ತಾಗಿ ಏನಾಗಿದೆ ಎಂದು ಗೊತ್ತಾಗದಿದ್ದರೆ ಮನಸ್ಸಿಗಾಗುವ ಕಷ್ಟ ದೊಡ್ಡದು.

ಸೀತೆಯ ಸ್ಥಿತಿ ಇದು. ರಾಜ್ಯಾಭಿಷೇಕಕ್ಕೆಂದು ಹೋದ ರಾಮ ಕೆಲಕಾಲದ ಬಳಿಕ ಮರಳಿದ್ದಾನೆ. ಆದರೆ ಮರಳುವಾಗ ಹಿಂದಿನಂತಿಲ್ಲ. ಹಾಗೆ ಬೇರೆ ಯಾರಿಗೂ ಅನಿಸಿಲ್ಲ,ಅನಿಸಲು ರಾಮ ಬಿಟ್ಟಿಲ್ಲ. ಆದರೆ ಸೀತೆಯ ಮುಂದೆ ಬಂದಾಗ ಏನೋ ಆಯಿತು ಅವನಿಗೂ. ಪ್ರೀತಿಯ ತೂಕ ಅದು. ಭೂಮಿಯ ತೂಕ ಅವಳು. ಹಾಗಾಗಿ ಎಲ್ಲಿಯೂ ಒಂದು ಸ್ವಲ್ಪವೂ ವಿಚಲಿತನಾಗದವನು ಸೀತೆಯ ಮುಂದೆ ಬಂದಾಗ ಕೊಂಚ ವಿಚಲಿತನಾದ. ಏಕೆಂದರೆ ಯಾವುದು ಆಕೆಗೆ ಸ್ವಲ್ಪವೂ ಇಷ್ಟವಿಲ್ಲವೋ, ಯಾವುದು ಮರಣಕ್ಕಿಂತಲೂ ಕಷ್ಟವೋ ಅದನ್ನು ಹೇಳಬೇಕಿದೆ ರಾಮ. ಹಾಗಾಗಿ ಕಷ್ಟ ಅವನಿಗೆ. ಮುಖವರ್ಣ ವಿವರ್ಣ. ಏನೆಂದೇ ತಿಳಿಯದೆ ಸೀತೆ ವಿಲಪಿಸುತ್ತಿದ್ದಾಳೆ. ಆಕೆಗೆ ವಿಷಯ ಏನೆಂಬುದನ್ನು ಹೇಳಿದ ರಾಮ. ಸೀತೆ, ನನ್ನ ತಂದೆ ನನ್ನನ್ನು ಕಾಡಿಗೆ ಕಳುಹಿಸುತ್ತಿದ್ದಾರೆ. ದೊಡ್ಡ ಕುಲದಲ್ಲಿ ಹುಟ್ಟಿದವಳು ನೀನು, ಅದಕ್ಕಿಂತಲೂ ಮಿಗಿಲಾಗಿ ಕುಲಾತೀತಳು, ಧರ್ಮಜ್ಞೆ, ಧರ್ಮಚಾರಿಣಿ ಈ ಕಾಡಿಗೆ ಹೋಗುವ ವಿಚಾರ ಬಂದಿದ್ದು ಹೇಗೆ ಎಂದು ವಿಸ್ತಾರವಾಗಿ ಕೇಳೆಂದು ಹೇಳಿ ವರದ್ವಯದ ವಿವರವನ್ನು ಹೇಳುತ್ತಾನೆ. ”ಕೈಕೇಯಿಗೆ ಪೂರ್ವದಲ್ಲಿ ಎರಡು ವರಗಳು ಲಭಿಸಿದ್ದವು, ಈಗ ಪಟ್ಟಾಭಿಷೇಕದ ವಾರ್ತೆ ತಿಳಿದಾಗ ಆಕೆ ಅದನ್ನು ಕೇಳಿದ್ದು. ಆ ವರಗಳಲ್ಲಿ ಒಂದು ಭರತನಿಗೆ ಪಟ್ಟಾಭಿಷೇಕ, ಇನ್ನೊಂದು ರಾಮನಿಗೆ 14ವರ್ಷಗಳ ವನವಾಸ.” ಹಾಗಾಗಿ ದೊರೆಯನ್ನು ಸತ್ಯಪ್ರತಿಜ್ಞನನ್ನಾಗಿಸಲು, ದೊರೆಯ ಅಣತಿಯನ್ನು ಪಾಲಿಸುವ ಸಲುವಾಗಿ 14ವರ್ಷಗಳ ಕಾಲ ನಾನು ಕಾಡಿಗೆ ಹೋಗಬೇಕಾಗಿ ಬಂದಿದೆ. ನಿರ್ಜನವಾದ ಕಾಡಿಗೆ ಹೋಗುವ ಮುನ್ನ ಒಮ್ಮೆ ನಿನ್ನ ಮುಖಾವಲೋಕನ ಮಾಡಿ, ಹೋಗಿ ಬರುವೆನೆಂದು ಹೇಳಲು ನಿನ್ನ ಬಳಿ ಬಂದೆ. ನಾನು ಕಾಡಿಗೆ ಹೋದ ಮೇಲೆ ಅರಮನೆಯಲ್ಲಿ ನೀನು ಹೇಗಿರಬೇಕೆಂದು ಹೇಳುತ್ತೇನೆ ಎಂದು ಹೇಳಿ ಮುಖ್ಯವಾದ ವಿಷಯ; ದೊರೆ ಭರತನ ಮುಂದೆ ಹೋಗಿ ನನ್ನ ಗುಣಗಾನ ಮಾಡದಿರು. ವಿಶೇಷ ಸವಲತ್ತುಗಳ ಬಯಸದಿರು. ಅವನಾಗಿ ಕೊಟ್ಟರೂ ಪಡೆಯದಿರು.ಏಕೆಂದರೆ ವಿಶೇಷ ಅವಕಾಶಗಳು ಕ್ಲೇಶಕ್ಕೆ ಕಾರಣವಾಗುತ್ತವೆ. ಅವನಿಗೆ ಪ್ರತಿಕೂಲವಾಗದಂತೆ ಅನಕೂಲವಾಗುವಂತೆ ವ್ಯವಹರಿಸು. ದೊರೆಯನ್ನು ಒಲಿಸಿಕೊಳ್ಳುವ ದಾರಿಯಿದು. ಪ್ರತಿಜ್ಞಾ ಪಾಲನೆಯ ಸಲುವಾಗಿ ಇಂದೇ ಹೊರಟೆ ಕಾಡಿಗೆ. ಸೀತೆ ಗಟ್ಟಿಯಾಗು, ಸ್ಥಿರಳಾಗು. ಮುನಿಸೇವಿತವಾದ ಕಾಡಿಗೆ ನಾನು ಹೋದಾಗ ನೀನು ಭವಿಷ್ಯದ ಒಳಿತಿಗಾಗಿ ವ್ರತಗಳು ಮತ್ತು ನಿಯಮಗಳಲ್ಲಿ ಮಗ್ನಳಾಗಿರು.

ಪ್ರತಿದಿನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ದೇವರ ಪೂಜೆ ಮಾಡಿ, ನನ್ನ ತಂದೆಗೆ ವಂದಿಸಿ, ನೊಂದ ತಾಯಿ ಕೌಸಲ್ಯೆಯ ಗೌರವಿಸಿ, ಆದರಿಸು. ಧರ್ಮವಿದು. ಇನ್ನುಳಿದ ಎಲ್ಲಾ ಮಾತೆಯರನ್ನೂ ವಂದಿಸಿ ಗೌರವಿಸು. ಯಾಕೆಂದರೆ ಪ್ರೀತಿಯಲ್ಲಿ ನಾನು ಯಾವ ಭೇದವನ್ನು ಮಾಡಿಲ್ಲ ಅವರೂ ನನಗೆ ಯಾವ ಭೇದವನ್ನೂ ಮಾಡಿಲ್ಲ. ಇನ್ನು ಭರತ, ಶತ್ರುಘ್ನರು ನನ್ನ ಸಹೋದರರು ನನಗೆ ಮಕ್ಕಳಿದ್ದಂತೆ ಅವರು. ನಿನಗೂ ಹಾಗೆಯೇ ತಮ್ಮಂದಿರವರು ಮಕ್ಕಳಂತೆಯೇ. ಒಡಹುಟ್ಟಿದವರಂತೆ ಮಕ್ಕಳಂತೆ ಕಾಣು. ನಾನು ಹಾಗೆಯೇ ನೋಡಿದ್ದು. ನನ್ನಾತ್ಮ ನೀನು. ದೊರೆಗಳೆಂದರೆ ಲೋಕಪಾಲಕರ ಅಂಶ ಸೇರಿರುವವರು. ಆದ್ದರಿಂದ ಭರತನಿಗೆ ಅಪ್ರಿಯವಾಗುವಂತೆ ನಡೆದುಕೊಳ್ಳಬೇಡ. ನಿನ್ನ ಧರ್ಮವನ್ನು ಬಿಡದಿರು. ಸೀತೆಯ ಪ್ರತಿಕ್ರಿಯೆಯ ಊಹಿಸಿ ಎಲ್ಲವನ್ನೂ ನಿರ್ಣಯದಂತೆ ನುಡಿದು ನಾನು ಕಾಡಿಗೆ ಹೊರಟೆ ಎಂದು ಹೇಳಿದ.

ಕಾಡಿಗೆ ಹೋಗಲು ಸೀತೆಯ ತಕರಾರಿಲ್ಲ. ದೊರೆಯಾಗಿರು, ವನವಾಸಿಯಾಗಿರು ನನಗೇನು ವ್ಯತ್ಯಾಸವಿಲ್ಲ. ಆದರೆ ನಾನು ಕಾಡಿಗೆ ಹೊಗುತ್ತೇನೆ ನೀನು ನಾಡಿನಲ್ಲಿರು ಎಂದಿದ್ದು ಸೀತೆಗೆ ಕೋಪವೇ ಬಂತು. ಅವಳು ರಾಮನಿಗೆ ಒಂದೂ ಅಪ್ರಿಯವಾದ ಮಾತನ್ನಾಡಿದವಳಲ್ಲ. ಹೀಗೆಂದಳು ರಾಮನಿಗೆ ನನ್ನ ಬಿಟ್ಟು ಕಾಡಿಗೆ ಹೋಗುವುದು ವಿನೋದವ? ನಿಜವಾ? ನನಗಿದು ವಿನೋದವೇ. ಹಾಸ್ಯಕ್ಕಾದರೆ ಸರಿ ಇಲ್ಲದಿದ್ದರೆ ಈ ಮಾತನ್ನು ನಾನು ಒಪ್ಪುವುದಿಲ್ಲ. ಆರ್ಯಪುತ್ರ, ಅಪ್ಪ, ಅಮ್ಮ, ಮಗ, ಸೊಸೆ ಎಲ್ಲರೂ ತಮ್ಮ ತಮ್ಮ ಸುಖ ದುಃಖವನ್ನು ಅವರೇ ಉಣ್ಣುತ್ತಾರೆ ಆದರೆ ಪತಿಪತ್ನಿಯರ ಸಂಬಂಧದಲ್ಲಿ ಹಾಗಲ್ಲ. ಇಬ್ಬರ ಸುಖದುಃಖಗಳಲ್ಲಿ ಪಾಪಪುಣ್ಯಗಳಲ್ಲಿ ಇಬ್ಬರಿಗೂ ಸಮಪಾಲಿದೆ. ಪತ್ನಿಯಾದವಳು ಪತಿಗಿಂತ ಬೇರೆಯಲ್ಲ. ಹಾಗಾಗಿ ನಿನಗೆ ಅಪ್ಪಣೆಯಾದರೆ ನನಗೂ ಆದಂತೆ. ಸ್ತ್ರೀಯಾದವಳಿಗೆ ಇಹ ಪರಗಳೆರಡರಲ್ಲೂ ಪತಿಯೇ ಗತಿ. ಹಾಗಾಗಿ ನೀನು ಇಂದೇ ಅರಣ್ಯಕ್ಕೆ ಹೋಗುವುದಾದರೆ ನಿನಗಿಂತ ಮುಂದೆ ನಾನು ಹೋಗುವೆ. ನಿನ್ನ ದಾರಿಯ ಮುಳ್ಳನ್ನು ನಾನು ಮೊದಲು ತುಳಿಯುವೆ. ನನ್ನಲ್ಲಿ ಯಾವ ಪಾಪವೂ ದೋಷವೂ ಇಲ್ಲ ಹಾಗಾಗಿ ನನ್ನನ್ನು ನೀನು ಕರೆದುಕೊಂಡು ಹೋಗಬೇಕು. ನನ್ನ ದೃಷ್ಟಿಯಲ್ಲಿ ನನಗೆ ಮಾಳಿಗೆಯ ಮನೆಗಿಂತ, ಗಗನ ಸಂಚಾರಿಯಾದ ವಿಮಾನಕ್ಕಿಂತ ಉತ್ಕೃಷ್ಟವಾಗಿರುವುದು ಪತಿಯ ಪಾದಚ್ಛಾಯೆ. ನೀನು ಕಾಡಿಗೆ ಹೊರಟರೆ ನಾನೇನು ಮಾಡಬೇಕು ಎಂದು ಯಾರೂ ಹೇಳಬೇಕಾದ್ದಿಲ್ಲ. ನನಗದು ತಿಳಿದಿದೆ. ನನ್ನ ತಂದೆ ತಾಯಿಯರು ತಿಳಿಸಿದ್ದಾರೆ. ದುರ್ಗಮವಾದ, ಹುಲಿ ಸಿಂಹಗಳಿರುವ ಕಾಡಿನಲ್ಲಿ ಯಾವುದೇ ಹೆದರಿಕೆಯಿಲ್ಲದೆ ಸುಖವಾಗಿರುತ್ತೇನೆ. ನನಗೆ ಮೂರ್ಜಗದ ಚಿಂತೆಯಿಲ್ಲ. ನೀನೊಬ್ಬನಿದ್ದರೆ ಸಾಕು. ಅಲ್ಲಿ ಧರ್ಮಾಚರಣೆ ಮಾಡಿ ನಿನ್ನ ಸೇವೆ ಮಾಡುತ್ತೇನೆ, ನಿನ್ನೊಡನೆ ವಿಹರಿಸುತ್ತೇನೆ. ನನಗೆ ನಿನಗಿಂತ ದೊಡ್ಡ ರಕ್ಷಣೆ ಪ್ರಪಂಚದಲ್ಲಿಲ್ಲ. ಎಲ್ಲರನ್ನೂ ಕಾಪಾಡುವ ನೀನು ನನ್ನನ್ನು ರಕ್ಷಿಸುವುದಿಲ್ಲವೇ? ನಿನ್ನೊಡನೆ ಬರುವೆ, ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಿನಗೆ ನಾನು ತೊಂದರೆ ಕೊಡಲಾರೆ. ನಿನಗಿಂತ ಮೊದಲು ಯಾತ್ರೆಯಲ್ಲಿ ನಾನಿರುವೆ.ಊಟದಲ್ಲಿ ನೀನು ತಿಂದುಳಿದಿದ್ದು ಸಾಕು. ನನಗೆ ನದಿ, ಪರ್ವತ, ಕಾಡು, ಹಂಸ, ಕಮಲಗಳಿಂದ ಕೂಡಿದ ಸರೋವರ ನೋಡುವ ಆಸೆ. ಅದೂ ನಿನ್ನೊಡನೆ ಎಂದರೆ ನನಗೆ ಸ್ವರ್ಗವೇ ಅದು. ನಿಶ್ಚಯವನ್ನು ಹೇಳಿ ಯಾಚಿಸಿ, ನಿನ್ನೊಡನೆ ಕಾಡಿಗೆ ಬರುವಾಸೆ ಇಲ್ಲದಿದ್ದರೆ ಮರಣವೇ ಗತಿ. ಕಾಡಿನಲ್ಲಿ ನಾನು ನಿನಗೆ ಭಾರವಾಗಲಾರೆ ಎಂದರೂ ರಾಮ ಕರಗಲಿಲ್ಲ. ನೀನು ಬರುವುದು ಬೇಡ ಎನ್ನಲು ಅನೇಕ ಕಾರಣಗಳನ್ನು ಮುಂದಿಟ್ಟ ರಾಮ. ಕಾಡಿನ ಕಷ್ಟಗಳು ಅವನ ಯೋಚನೆಯಲ್ಲಿದೆ. ಆಕೆಯನ್ನು ಹಿಂದಿರುಗುವಂತೆ ಮಾಡಲು ಹೇಳುತ್ತಾನೆ. ರಾಜವಂಶದಲ್ಲಿ ಹುಟ್ಟಿದವಳು, ರಾಜಕುಮಾರಿ ಆದ್ದರಿಂದ ಇಲ್ಲಿಯೇ ಇದ್ದು ಧರ್ಮಾಚರಣೆ ಮಾಡು. ಕಾಡಿನಲ್ಲಿ ಬಹಳ ತೊಂದರೆಯಿದೆ. ನಿನ್ನಲ್ಲಿ ಯಾವ ದೋಷವೂ ಪಾಪವೂ ಇಲ್ಲ, ನಿನ್ನ ಒಳಿತಿಗಾಗಿ ಇದು. ಕಾಡಿನಲ್ಲಿ ಸುಖವಿಲ್ಲ ದುಃಖವೇ, ಪರ್ವತಾಗ್ರದಿಂದ ಧುಮ್ಮಿಕ್ಕುವ ಝರಿಯ ಸದ್ದು, ಕ್ರೂರ ಮೃಗಗಳು ವಿಹರಿಸುತ್ತಿರುತ್ತವೆ, ಮನುಷ್ಯರ ಕಂಡೊಡನೆ ಬರುತ್ತವೆ. ನದಿ ಹೊಳೆಗಳಲ್ಲಿ ಕೆಸರು, ಮೊಸಳೆಗಳು ಇರುವ ಕಾರಣ ದಾಟುವುದು ಕಷ್ಟ. ಬಳ್ಳಿಗಳು ಕಾಲಿಗೆ ಸಿಕ್ಕಿ ಬೀಳುವಂತೆ, ಮುಳ್ಳುಗಳು, ಕಾಡುಕೋಳಿಗಳ ಶಬ್ಧ, ದುರ್ಗಮ ಮಾರ್ಗಗಳು. ಕಾಡಿನಲ್ಲಿ ತರಗಲೆಗಳಲ್ಲಿ ಮಲಗಿ ಬೆಳಗುಮಾಡಬೇಕು. ಬಿದ್ದ ಹಣ್ಣುಗಳನ್ನು ತಿಂದು ಬದುಕಬೇಕು, ತಣ್ಣೀರು ಸ್ನಾನ ಮಾಡಬೇಕು, ಜಟಾಧಾರಣೆ ಮಾಡಬೇಕು, ನಾರುಡೆ ಉಡಬೇಕು, ದೇವ, ಪಿತೃ ಪೂಜೆ, ಅತಿಥಿ ಸತ್ಕಾರ, ತ್ರಿಕಾಲ ಸ್ನಾನ ಮಾಡಬೇಕು, ಊಟವಾಗಲಿ ನಿದ್ದೆಯಾಗಲಿ ಸಿಕ್ಕಿದ್ದರಲ್ಲಿ ಸಂತೋಷ ಪಡಬೇಕು, ವಿಪರೀತ ಗಾಳಿ, ತೀವ್ರ ಕತ್ತಲೆ, ಹಸಿವು ನಿತ್ಯದ ಕತೆಯಿದು. ಹಾವುಗಳು, ಕ್ರೂರ ಮೃಗಗಳು, ಪತಂಗಗಳು, ಕೀಟಗಳು ನಿತ್ಯ ಬಾಧಿಸುತ್ತವೆ. ಚುಚ್ಚುವ ಹುಲ್ಲುಗಳು, ದರ್ಭೆಗಳು ಇರುತ್ತವೆ. ಹಾಗಾಗಿ ವನ ಜೀವನ ಬಹಳ ಕಷ್ಟ ಎಂದು ಮಕ್ಕಳನ್ನು ರಮಿಸುವಂತೆ ಹೇಳುತ್ತಾನೆ.

ಆದರೂ ಕೇಳಲಿಲ್ಲ ಸೀತೆ, ದುಃಖಿತಳಾಗಿ ಮೆಲ್ಲಗೆ ಹೇಳುತ್ತಾಳೆ. ನೀನುಲ್ಲೇಖಿಸಿದ ದೋಷಗಳೆಲ್ಲವ ಒಂದುಗೂಡಿಸಿ ಹೇಳುವುದಾದರೆ ನೀ ನನ್ನೊಡನಿದ್ದರೆ ಅದೆಲ್ಲವೂ ಗುಣವೇ. ಕ್ರೂರ ಮೃಗಗಳು ನಿನ್ನನ್ನು ಕಂಡೊಡನೆ ಓಡಿ ಹೋಗುತ್ತವೆ ಯಾಕೆಂದರೆ ಹೊಸ ರೂಪ ನೋಡಿದಾಗ ಅವು ಹೆದರಿ ಓಡುವುದು ಸಹಜ. ಎಲ್ಲವನ್ನೂ ಕೂಡಿಸಿ ಹೇಳುವುದಾದರೆ ಗುರುಜನರ ಆಜ್ಞೆಯಂತೆ ಕಾಡಿಗೆ ಬರಬೇಕು ಇಲ್ಲವೇ ಇಲ್ಲಿಯೇ ಪ್ರಾಣ ಬಿಡಬೇಕು. ಪತಿಹೀನಳಾಗಿ ಬದುಕುವುದು ಕಷ್ಟವೆಂದು ನೀನೆ ಹೇಳಿದ್ದೆಯಲ್ಲ ಎಂದು ಹೇಳಿ ಹಿಂದೆ ಮಿಥಿಲೆಯಲ್ಲಿ ಸಾಮುದ್ರಿಕ ಶಾಸ್ತ್ರ ನೋಡಿದವರು ಇವಳಿಗೆ ವನವಾಸದ ಯೋಗವಿದೆ ಎಂದಿದ್ದಾರೆ, ಇನ್ನೊಮ್ಮೆ ಇನ್ನೊಬ್ಬ ಸಾಧ್ವಿ ಬಂದು ನನ್ನನ್ನು ನೋಡಿ ಮುಂದೆ ಇವಳು ಕಾಡಿಗೆ ಹೋಗುವಳು ಎಂದಿದ್ದಾರೆ. ಈಗ ನಿನ್ನೊಡನಿಲ್ಲದಿದ್ದರೆ ಇನ್ನೆಂದು? ನನಗೆ ಕಾಡೆಂದರೆ ಇಷ್ಟ, ಅಲ್ಲಿ ವಿಹರಿಸಬೇಕು ಎಂದು ಕೇಳಿದಾಗ ನೀನು ಅಸ್ತು ಎಂದಿದ್ದಿದೆ ಹಾಗಾಗಿ ನಾನು ಬರುವೆ. ನಮ್ಮೊಳಗಿನ ಪ್ರೇಮವದು ಶುದ್ಧ. ನನಗೆ ನಿನ್ನ ಹೊರತು ಬೇರೆ ದೇವರಿಲ್ಲ. ಈ ಲೋಕದಲ್ಲಿ ಮಾತ್ರವಲ್ಲ ಪರಲೋಕದಲ್ಲಿಯೂ ನಿನ್ನ ಸಾಂಗತ್ಯ ಬಯಸುವವಳು ವನವಾಸದಲ್ಲಿ ಬೇಡವ? ನಿನಗಿರುವ ಏಕೈಕ ಪತ್ನಿ ನಾನು, ನಿಜಕಾರಣ ಹೇಳು. ಸಮಾನ ಸುಖದುಃಖಿನಿ ನಾನು. ಇಷ್ಟಾಗಿಯೂ ನೀನು ನನ್ನ ಬಿಟ್ಟು ಹೋಗುವುದಿದ್ದರೆ ವಿಷ ಕುಡಿದು, ನೀರಿನಲ್ಲಿ ಮುಳುಗಿ ಇಲ್ಲವೇ ಬೆಂಕಿಯಲ್ಲಿ ಬಿದ್ದು ಸಾಯುವೆ ಎಂದು ಏನೇನು ಹೇಳಿದರೂ ಒಪ್ಪಲಿಲ್ಲ ರಾಮ.

ಅಶ್ರುಧಾರೆಯ ಸ್ನಾನವಾಯಿತು ನೆಲಕ್ಕೆ. ಅತಿಯಾದ ಕ್ರೋಧ ಬಂತು ಆಕೆಗೆ ಆಗ ವಿಧವಿಧವಾಗಿ ಅನುನಯಿಸಿದ ರಾಮ ಇನ್ನು ಹೆಚ್ಚಾಯಿತು ಕ್ರೋಧ ಪ್ರೀತಿಯಿಂದ ಸಲುಗೆಯಿಂದ ಆಕ್ಷೇಪಿಸಿದಳು. ನನ್ನ ತಂದೆಗೆ ತಿಳಿಯಲೇ ಇಲ್ಲ ನೀನು ನೋಡಲೂ ಪುರುಷಾಕಾರ ನಿಜವಾಗಿ ಸ್ತ್ರೀ ಎಂದು ನನ್ನ ತಂದೆಗೆ ಗೊತ್ತೇ ಆಗಲಿಲ್ಲ. ಹೇಗೆ ಕೆಣಕಬೇಕೋ ಹಾಗೆ ಕೆಣಕಿದಳು. ಅವರಿಬ್ಬರ ಆತ್ಮೀಯತೆಗದು ಸಮ್ಮತ. ಪ್ರಪಂಚಕ್ಕೆ ಗೊತ್ತಿಲ್ಲ ಸುಳ್ಳು ಹೇಳಿದೆ. ಸೂರ್ಯನಂತಹ ತೇಜಸ್ವಿ ರಾಮ ಹೇಳಿದ್ದು ಸುಳ್ಳು ಎಂದು ಹೇಳಿ ನನ್ನನ್ನು ಕರೆದುಕೊಂಡು ಹೋಗಲು ಭಯವೇನು? ಮೃತ್ಯುಲೋಕದವರೆಗೂ ಹಿಂಬಾಲಿಸಿದ ಸಾವಿತ್ರಿಯಂತಹವಳು ನಾನು. ನಿನ್ನ ಹೊರತು ಬೇರೆ ಯಾರನ್ನೂ ಕಣ್ಣೆತ್ತಿಯೂ ನೋಡಲಿಲ್ಲ. ಕುಮಾರಿ, ಚಿಕ್ಕವಳಿದ್ದಾಗಲೆ ನೀ ವರಿಸಿ ನಿನ್ನೊಂದಿಗೆ ಬಂದವಳು ನಾನು ಈಗ ಬಿಟ್ಟು ಹೋಗಲು ಇದೇನು ನಾಟಕವೇ? ಇಲ್ಲ ಜೀವನ ಇದು. ನಾ ನಿನ್ನೊಂದಿಗೆ ಬರುವೆ , ತಪಸ್ಸಾಗಲಿ, ವನವಾಗಲಿ ಏನಾಗಲಿ ನಿನ್ನ ಜೊತೆಗೆ ನಾನು ಅಷ್ಟೇ. ನೀನು ನನ್ನೊಡನಿದ್ದರೆ ಆ ಮುಳ್ಳುಗಳೂ ಮೃದು, ತರಗೆಲೆಗಳು ಹಂಸತೂಲಿಕಾತಲ್ಪದಂತೆಯೇ, ಪತ್ರ-ಫಲ ಯಾವುದಾದರೂ ದೊರೆತಷ್ಟೇ ಸಾಕು, ನೀ ಕೈಯಾರೆ ಕೊಟ್ಟರೆ ನನಗದು ಅಮೃತ. ನನ್ನಿಂದಾಗಿ ನಿನಗೆ ಯಾವ ದುಃಖವೂ ಇಲ್ಲ ಎಂದು ಹೇಳಿ ಕೊನೆಗೂ ನೀವು ನನ್ನನ್ನು ಕರೆದುಕೊಂಡು ಹೋಗದಿದ್ದರೆ ಮರಣವೇ ನನಗೆ ವರ. ನೀನು ಬಿಟ್ಟು ಹೋಗುವ ಶೋಕವನ್ನು ಒಂದು ಮುಹೂರ್ತವೂ ಸಹಿಸಲಾರೆ ಹೀಗಿರುವಾಗ ಹತ್ತು ವರ್ಷ, ಮೂರು ವರ್ಷ ಮತ್ತೆ ಒಂದು ವರ್ಷ ಬಿಟ್ಟಿರಲು ಸಾಧ್ಯವೇ ಇಲ್ಲ.

ಹೀಗೆ ಆಕೆ ಪರಿಪರಿಯಾಗಿ ಹೇಳಿದಳು. ಹಲವಾರು ವಿಷಯುಕ್ತ ಬಾಣಗಳಿಂದ ಚುಚ್ಚಿದಹೆಣ್ಣಾನೆಯಂತೆ ಆಯಿತು ಆಕೆಯ ಸ್ಥಿತಿ. ಅರಣ್ಯಮಥನದಿಂದ ಬಂದ ಅಗ್ನಿಯಂತಿತ್ತು ಆಕೆಯ ಕಣ್ಣೀರು. ಕಣ್ಣೀರು ಹರಿಸಿ ಹರಿಸಿ ಮುಖ ಬಾಡಿತು. ಎಚ್ಚರ ತಪ್ಪುವ ಸ್ಥಿತಿಯಲ್ಲಿದ್ದಾಳೆ. ಆಗ ರಾಮ ಹೇಳಿದ. ನಿನ್ನನ್ನು ಬಿಟ್ಟು ಹೋಗಲಾರೆ. ಸ್ವರ್ಗವಾದರೂ ಸರಿ . ನನಗಾವ ಭಯವೂ ಇಲ್ಲ. ನಿನ್ನ ರಕ್ಷಿಸುವಷ್ಟು ಶಕ್ತಿ ನನ್ನಲ್ಲಿದೆ. ಕೊನೆಯಲ್ಲಿ ಹೇಳಿದನಂತೆ ನಿನ್ನ ಮನಸ್ಸಿನಲ್ಲಿರುವುದ ಅರಿಯದೆ ಹೇಗೆ ಹೇಳಲಿ? ಹಾಗಾಗಿ ಕರೆದುಕೊಂಡು ಹೋಗಲು ಬೇಡವೆಂದೆ. ಬಾ ನನ್ನೊಡನೆ. ವನವಾಸಕ್ಕೆಂದೆ ಸೃಷ್ಟಿಯಾದವಳು ನೀನು. ಅವಳಿಗೆಲ್ಲ ತಿಳಿದಿರಬೇಕೆಂಬ ಕಾರಣಕ್ಕಾಗಿ ಕಾಡಿಗೆ ಹೋಗಲು ಒಪ್ಪಿದೆ ಎಂದು ಹೇಳುತ್ತಾನೆ. ಧರ್ಮ ಇದು. ಹಿರಿಯರ ಪೂರ್ವಜರ ಮಾತನ್ನು ಕೇಳಬೇಕು. ಧರ್ಮವೆಂದರೆ ಏನೆಂಬುದನ್ನ ವೇದ, ಸ್ಮೃತಿಗಳಿಂದ, ಮಹಾಪುರುಷರ ನಡವಳಿಕೆಯಿಂದ ತಿಳಿದುಕೊಳ್ಳಬೇಕು. ಹಾಗಾಗಿ ವನವಾಸಕ್ಕೆ ಹೊರಟೆ. ತಂದೆ ತಾಯಿಯರ ವಚನ ಮೀರಲಾರೆ. ತಂದೆತಾಯಿ ಗುರು ಪ್ರತ್ಯಕ್ಷ ದೇವರು. ಇವರನ್ನೆ ಆರಾಧಿಸದೆ ಯಾವ ದೇವರನ್ನು ಪೂಜಿಸಿ ಏನು? ತಾಯಿ ತಂದೆ ಗುರುಗಳಲ್ಲಿ ಮೂರು ಲೋಕಗಳೇ ಇವೆ. ಯಾರು ತಂದೆ ತಾಯಿಯರಿಗೆ ವಶವಾಗಿರುತ್ತಾರೋ ಅವರಿಗೆ ಯಾವುದೂ ದುರ್ಲಭವಲ್ಲ. ಹಾಗಾಗಿ ತಂದೆಯ ಮಾತು ಮೀರಲಾರೆ. ನಿಶ್ಚಯಮಾಡಿದೆ. ನಿನ್ನನ್ನೂ ಕರೆದುಕೊಂಡು ಹೋಗುವೆ. ಮಾತಿನ ಮಧ್ಯೆ ಕೌಸಲ್ಯೆಯ ವಿಷಯ ಬಂದಾಗ ಪತಿಯ ಜೊತೆಯೇ ಇರಬೇಕಾದ್ದು ಪತ್ನಿಯ ಧರ್ಮ ಎಂದೆ. ನನಗೇಕೆ ಬೇಡವೆಂದೆ. ನನಗೂ ಅದೇ ಮಾತನ್ನು ಹೇಳು ಎಂದಳು. ರಾಮ ಧರ್ಮಚಾರಿಣಿಯೇ ಬಾ ಕಾಡಿಗೆ ನನ್ನೊಡನೆ. ಜನಕಕುವರಿಯೇ ನಿನ್ನೀ ನಡತೆ ಕುಲವೆರಡಕ್ಕೂ ಸಲ್ಲತಕ್ಕದ್ದು. ಸಿದ್ಧತೆ ಮಾಡು. ಬ್ರಾಹ್ಮಣೋತ್ತಮರಿಗೆ, ಸೇವಕರಿಗೆ, ಭಿಕ್ಷುಗಳಿಗೆ ದಾನ ಮಾಡು. ನಮ್ಮ ಆಭರಣಗಳು, ಬೆಲೆಬಾಳುವ ವಸ್ತುಗಳು ಎಲ್ಲವನ್ನೂ ದಾನಮಾಡಬೇಕು. ಸಂತೋಷವಾಯಿತು ಆಕೆಗೆ.ವನವಾಸಕ್ಕೆ ಹೊರಡಲು ಒಪ್ಪಿಗೆ ಸಿಕ್ಕಿದ್ದಕ್ಕೆ ಅದಕ್ಕಿಂತಲೂ ತಾನು ಬರುವುದು ರಾಮನಿಗೆ ಇಷ್ಟವೇ ಎಂದು ಅರಿತಿದ್ದು. ಆ ಕೂಡಲೇ ಧನ, ರತ್ನಗಳು, ಬೆಲೆಬಾಳುವ ವಸ್ತುಗಳನ್ನು ದಾನಮಾಡಲು ಆರಂಭಿಸಿದಳು.

ಮುಂದಿನದನ್ನು ನಾಳೆಯ ಪ್ರವಚನದಲ್ಲಿ ನಿರೀಕ್ಷಿಸೋಣ

ಪ್ರವಚನವನ್ನು ಇಲ್ಲಿ ಕೇಳಿರಿ:


 

 

ಪ್ರವಚನವನ್ನು ನೋಡಲು:

Facebook Comments