ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಸುಖವು ನಮ್ಮನ್ನು ಸೆಳೆಯುತ್ತದೆ. ಅನ್ನವನ್ನು ಉಂಡು ಬದುಕುವುದು ದೇಹ;ಆನಂದವನು ಉಂಡು ಬದುಕುವುದು ಜೀವ. ಹೀಗೆ ರಾಮ ಮತ್ತು ರಾಮನಂಥವರು ಯಾರಿರುತ್ತಾರೋ ಅವರು ಎಲ್ಲರನೂ ಸೆಳೆಯುವರು ಮತ್ತು ಅವನ ಕಂಡಾಗ ಆಕರ್ಷಿತರಾಗುವರು.
ಅದರಂತೆಯೇ ಈಗ ಲಕ್ಷ್ಮಣನ ಸರದಿ. ಆತನು ಅಣ್ಣ, ನಾನು ನಿನ್ನೊಡನೆ ಕಾಡಿಗೆ ಬರುವೆ ಎಂದನು. ಅದಕೆ ಕಾರಣ: ಅಣ್ಣನ ಸಾಂಗತ್ಯ, ಅಣ್ಣನೆಂದರೆ ಆತ ಸುಖ-ನಿಧಿ.
ಲಕ್ಷ್ಮಣನಿಗೆ ದುಃಖ ತಡೆಯಲಾಗಲಿಲ್ಲ. ಇತ್ತ ಸೀತೆಗೆ ರಾಮನೊಡನೆ ಕಾಡಿಗೆ ಜೊತೆಗೆ ಬರಲು ಅಪ್ಪಣೆ ಸಿಕ್ಕಿತೆಂದೊಡನೆ ಲಕ್ಷ್ಮಣ ಅಣ್ಣನ ಕಾಲಿಗೆ ಬಿದ್ದು, ಕಾಡಿಗೆ ಹೋಗುವುದಾದರೆ ನಾನು ಧನುಷ್ಪಾಣಿಯಾಗಿರುವೆ, ನನ್ನ ಜೊತೆ ಹಿಂದಿನಿಂದ ಚಲಿಸು,ನನಗೆ ಈ ದೈವ ಲೋಕ, ಸ್ವರ್ಗಲೋಕಗಳಾವುದೂ ಬೇಡ ಎಂದು ರಾಮನ ಬಳಿ ಪರಿ ಪರಿಯಾಗಿ ಹೇಳಿದ. ಈಗ ನೀನು ನಾ ಜೊತೆಗೆ ಬರಲು ಬೇಡ ಎನ್ನಲು ನಾನು ಮಾಡಿದ ತಪ್ಪಾದರು ಏನು???
ಈ ಮೊದಲು “ನಿನ್ನ ಬುದ್ಧಿಯನು ಅನುಸರಿಸು” ಎಂದು ಹೇಳಿದ್ದೆ; ಮತ್ತೆ ಈಗ ಏಕೆ ಬೇಡ? ಎಂದು ಕೇಳುವನು.
ಹೀಗೆ ಸೂಕ್ಷ್ಮಮತಿಯಾದ ಲಕ್ಷ್ಮಣನು ಕೈ ಮುಗಿದು ಯಾಚಿಸುತ್ತಾ ಹೊರಟು ನಿಂತಿದ್ದಾನೆ.

ಆಗ ರಾಮನು ಲಕ್ಷ್ಮಣನಿಗಿರುವ ಪ್ರೀತಿ, ನೀನು ಧರ್ಮಿ, ಸನ್ಮಾರ್ಗದಲ್ಲಿ ಇದ್ದವ, ನನಗಿಷ್ಟ, ನನ್ನ ಪ್ರಾಣವೇ ನೀನು, ನಾನು ಹೇಳಿದ್ದನ್ನ ಮೀರದವ, ನೀನು ತಮ್ಮನೂ ಹೌದು, ಹೆಚ್ಚಾಗಿ ಮಿತ್ರನೂ ಹೌದು. ಮತ್ತೆ ನಿನ್ನಲ್ಲಿ ದೋಷವೇನು ಇಲ್ಲ. ಆದರೆ ನೀನು ನನ್ನ ಜೊತೆಗೆ ಬಂದರೆ ಕೌಸಲ್ಯೆ & ಸುಮಿತ್ರೆಯನ್ನು ನೋಡಿಕೊಳ್ಳುವವರಾರು? ಎಂದು ಕೇಳಿದಾಗ…

ವಾಕ್ಯ ಕೋವಿದನಾದ ರಾಮನಿಗೆ ವಾಕ್ಯಜ್ಞನಾದ ಲಕ್ಷ್ಮಣನು ಈ ರೀತಿ ಹೇಳುವನು. ಅಕಸ್ಮಾತ್ ಭರತನು ತಾಯಂದಿರನ್ನು ನಿನ್ನ ತೇಜಸ್ಸಿನಿಂದ ನೋಡಿಕೊಳ್ಳದಿದ್ದರೆ ನಾನು ಸುಮ್ಮನಿರಲಾರೆ. ಆದರೆ ಸಾವಿರರನು ಸಾಕಿರುವ ಕೌಸಲ್ಯೆಯನು ನಾನು ಸಾಕುವುದೇ! ಆಕೆಯೇ ನಮ್ಮೆಲ್ಲರನು ಸಾಕಿಯಾಳು,ಅಂಥವರನ್ನು ನಾನು ಸಾಕುವುದೇ! ಆಕೆ ತನ್ನನ್ನು ತಾನೇ ಸಲಹಬಲ್ಲಳು ನನ್ನನ್ನು ಅನುಸರಣೆ ಮಾಡೆಂದು ಹೇಳಿದನು.

ನಾನು ಧನುರ್ಬಾಣಗಳನ್ನು ಹಿಡಿದು ಭಟನಂತೆ ಕೆಲಸ ಮಾಡುವೆ, ಗಡ್ಡೆ ಗೆಣಸುಗಳನು ಅಗೆದು(ಸಂಗ್ರಹಿಸಿ) ಕೊಡುವೆ,ನೀ ನಡೆಯುವಾಗ ಸದಾ ನಿನ್ನ ಮುಂದೆ ನಾನೇ ಹೋಗುವೆ, ಪೂಜೆಗೆ ಬೇಕಾದ ಸಾಹಿತ್ಯ-ಪರಿಕರಗಳನ್ನು ಮಾಡಿಕೊಡುವೆ, ನೀನು ವೈದೇಹಿಯೊಡನೆ ಗಿರಿ-ಶಿಖರಗಳನು ನೋಡಿ ರಮಿಸು ಎಂದಾಗ ರಾಮನು-‘ಹೋಗಿ ನಿನ್ನವರಿಗೆ ತಿಳಿಸಿ ಬಾ ಎಂದು ಹೇಳುವನು. ಹಾಗೆಯೇ ಕಾಡಿಗೆ ತೆರಳುವಾಗ ಅವಶ್ಯಕವಾದ ಆಯುಧಗಳನ್ನು ಆಚಾರ್ಯ/ಗುರುಗಳಿಂದ ಕೇಳಿ ಪಡೆದುಕೊಂಡು ಬಾ’ ಎಂದನು.
(ಲಕ್ಷ್ಮಣನು ಆಯುಧಗಳನ್ನು ಗುರುಗಳಿಂದ ಸ್ವೀಕಾರ ಮಾಡುವನು).

ಇದ ನೋಡಿ ಸಂತೋಷವಾಗಿ ರಾಮನು ಈಗ ನಿನ್ನದೇ ಅಪೇಕ್ಷೆಯಲ್ಲಿರುವೆನೆಂದು ಹೇಳಿದನು. ಕಾರಣ: ನನ್ನದಾದ ವಸ್ತುವನ್ನು ದಾನ ಮಾಡಬೇಕು. ಯಾರಿಗೆಂದರೆ- ದಾನಗಳಲ್ಲಿ ಮೊದಲ ಹಕ್ಕಿರುವುದು ತಪಸ್ವಿಗಳಾದ ಬ್ರಾಹ್ಮಣರಿಗೆ, ಹಾಗಾಗಿ ದೃಢವಾದ ಗುರು-ಭಕ್ತಿಯುಳ್ಳ ತಪಸ್ವಿಗಳನ್ನು ಆಯ್ಕೆ ಮಾಡು, ಯಾರು ನಮ್ಮ ಸೇವೆಯನ್ನು ಮಾಡಿದ್ದಾರೆ ಅವರಿಗೆ ದಾನವನ್ನು ಮಾಡಬೇಕು. ಆದುದರಿಂದ ಸುಯಜ್ಞರನು ಕರೆ ತಾ ಎಂದು ಹೇಳಿದನು. ಅದರಂತೆಯೇ ಲಕ್ಷ್ಮಣನು ಸುಯಜ್ಞರ ಬಳಿ ತೆರಳಿ ದುಷ್ಕರಕಾರಿಯಾದ ರಾಮನು ಬರಲು ಹೇಳಿರುವ, ಬನ್ನಿ ಎಂದು ರಾಮನ ಸಂದೇಶವನು ತಿಳಿಸುವನು. ಅದರಂತೆಯೇ ತಮ್ಮ ಸಂಧ್ಯಾವಂದನೆಯನು ಮುಗಿಸಿ ರಾಮನ ಬಳಿ ಲಕ್ಷ್ಮಣನೊಡನೆ ಬರುವರು. ನಂತರ ರಾಮನು ತನ್ನ ಬಳಿ ಇದ್ದ ಮತ್ತು ಧರಿಸಿರುವ ಬೆಳ್ಳಿ – ಬಂಗಾರಗಳನು, ಮುತ್ತು ರತ್ನಗವಚ, ಕಡಗ ಮುಂತಾದವುಗಳನ್ನು ದಾನಮಾಡುವನು. ಅದರಂತೆಯೇ ಸೀತೆಯು ಸುಯಜ್ಞರ ಮಡದಿಗೆ ತನ್ನ ಬಳಿ ಇದ್ದ ಹಾರಗಳು, ಡಾಬು, ಪಟ್ಟಕ, ರತ್ನ ಖಚಿತವಾದ ಮಂಚ ಮುಂತಾದವುಗಳನು ದಾನವಾಗಿ ನೀಡುವರು.

ಅನಂತರ ಕೌಶಿಕ ಅಗಸ್ತ್ಯರನು ಕರೆತರಲು ಹೇಳಿ ಅವರಿಗೆ ತೃಪ್ತಿತಾಗುವಷ್ಟು ಅವರಿಗೆ ವಸ್ತುಗಳನ್ನು ನೀಡಿರೆಂದನು.
ಹಾಗೇಯೇ ತನ್ನಲಿದ್ದ ಪಶು-ಸಂಪತ್ತನ್ನು ಸೂತ ಚಿತ್ರರಥನಿಗೆ ದಾನಗೈದನು. ನಿರಂತರ ಮೋಕ್ಷದ ಗುರಿಯನು ಹೊಂದಿರುವಂತಹ, ನಿರಂತರ ವೇದಾದ್ಯಯನವನು ಮಾಡುವವರಾದ, ದಂಡವನು ಧರಿಸಿದವರಿಗೆ, ಸಾಧನಾ ಪರರಾಗಿದ್ದವರಿಗೆ ಮಾಡಿದ ದಾನವದು ಆನಂದವೆನಿಸುವುದು ಹೇಳಿದನು. ಹೀಗೆ ರಾಮನು ದಾನವನ್ನು ಮಾಡುವಾಗ ಜನರೆಲ್ಲರೂ ಕಣ್ಣಲ್ಲಿ ನೀರನ್ನು ಸುರಿಸುತ್ತಾ ನಿಂತಿದ್ದವರ ಮುಂದೆ ರಾಮನು ಒಂದು ಅಪೇಕ್ಷೆಯನಿಡುವನು. ಅದೇನೆಂದರೆ- ನಾನು ಮರಳಿ ಬರುವ ವರೆಗೆ ಈ ಎರಡು ಭವನಗಳನು ಶೂನ್ಯ ವಾಗದಂತೆ ನೋಡಿಕೊಳ್ಳಿ ಎಂದನು.
ನಂತರ ರಾಮನು ಧನಾಧ್ಯಕ್ಷರನು ಬರ ಹೇಳಿ ಸಂಪತ್ತಿನ ರಾಶಿಯನ್ನು ತರ ಹೇಳಿ;ಆ ಸಂಪತ್ತನ್ನು ಅಗತ್ಯವಿರುವವರಿಗೆ ನೀಡಿ ಎಂದನು. ಆ ಸಂಪತ್ತುಗಳನು ಬಾಲರಿಗೆ, ವಯಸ್ಸಿನಲ್ಲಿ ಹಿರಿಯರಿಗೆ, ವೃದ್ಧರಿಗೆ ಹಂಚಿದ.

ಇಷ್ಟೆಲ್ಲಾ ಆದಮೇಲೆ ಇತ್ತ ರಾಜ್ಯದೊಳಿದ್ದ ಉಂಚ ವೃತ್ತಿಯ ತ್ರಿಜಟನೆಂಬ ಬ್ರಾಹ್ಮಣನ ತರುಣಿ ಪತ್ನಿಯು “ಇಂದಾದರೂ ಈ ಗುದ್ದಲಿ, ಹಾರೆ, ಕೊಕ್ಕೆಯನು ಪಕ್ಕಕ್ಕಿಟ್ಟು ರಾಮನ ಬಳಿ ಹೋದರೆ ಪ್ರಯೋಜನವಾದೀತು ಹೋಗಿ ರಾಮನ ಬಳಿಗೆ ಎಂದಳು.
ಆಗ ತ್ರಿಜಟನು ತನ್ನ ಬಳಿ ಇದ್ದ ಅದೇ ಹರಕು ವಸ್ತ್ರವನು ಹೊದ್ದು ; ರಾಮನ ಬಳಿ ಹೋಗಿ ನನ್ನ ಬಳಿ ‘ಚಿಕ್ಕಾಸಿಲ್ಲ, ಆದರೆ ಮನೆಯಲ್ಲಿ ಚಿಕ್ಕ-ಚಿಕ್ಕ ಮಕ್ಕಳು’ ನನ್ನ ಕಡೆಗೆ ದೃಷ್ಟಿಯನು ಹಾಯಿಸು ಎಂದಾಗ ರಾಮನಿಗೆ ವಿನೋದದಿಂದ ಒಂದು ದಂಡವನು ಕೊಟ್ಟು… ಈ ದಂಡವನು ಎಸೆದಾಗ ಎಲ್ಲಿಯವರೆಗೆ ಹೋಗಿ ಬೀಳುವುದೋ ಅಲ್ಲಿಯವರೆಗಿನ ಪಶು-ಸಂಪತ್ತು ನಿನಗೆ ಎಂದು ಹೇಳಿದನು. ಆಗ ತ್ರಿಜಟನು ಎಸೆದ ಕೋಲು ಸರಯೂ ನದಿಯ ಆಚೆ ಹೋಗಿ ಎತ್ತುಗಳ ಗುಂಪಿರುವಲ್ಲಿವರೆಗೆ ಬಿತ್ತು. ಆಗ ರಾಮನು ತ್ರಿಜಟನನ್ನು ಬಾಚಿ ತಬ್ಬಿಕೊಂಡು ಹೇಳಿದ-ವಿನೋದವನು ಮಾಡಿದ ಉದ್ದೇಶ ಅಂತಃಚಕ್ಷುವಿನ ಪ್ರಕಟಪಡಿಸುವಿಕೆ ಮಾತ್ರವೇ ಹೊರತು ಬೇರೇನಿಲ್ಲ. ಆಗ ತ್ರಿಜಟ ರಾಮನಿಗೆ ನಿನ್ನ ಬಲವು ವೃದ್ಧಿಯಾಗಲಿ, ಕಷ್ಟ ದೂರವಾಗಲಿ, ಪ್ರೀತಿ ಹೆಚ್ಚಲಿ ಎಂಬುದಾಗಿ ಪ್ರೀತಿ ಹೆಚ್ಚುವ ಅನುಗ್ರಹವನು ಮಾಡುವನು.

ಇನ್ನು ಕೊನೆಯದಾಗಿ ಉಳಿದಿರುವುದು ದಶರಥನ ಅರಮನೆಗೆ ಸೀತೆಯೊಡಗೂಡಿ ತೆರಳುವುದು.
ಇತ್ತ ಸ್ವಯಂ ಸೀತೆಯೇ ಅಲಂಕರಿಸಿದ ಆಯುಧಗಳಾದ ಧನುಸ್ಸು, ಖಡ್ಗಗಳು ಕಂಗೊಳಿಸಿದವು.

ಪದಾತಿಯಾದ ರಾಮನ ದರ್ಶನಕ್ಕಾಗಿ ದೀನ ಜನರು ವಿಮಾನ ಶಿಖರಗಳಂತಿದ್ದ ಮಹಡಿ, ಗೋಪುರಗಳನ್ನು ಏರಿದರು,ಸದಾ ಚತುರಂಗ ಬಲಗಳೊಂದಿಗೆ ರಾಜಮಾರ್ಗದಲಿ ಸಾಗುವ ರಾಮನ ಹಿಂದೆ ಇಂದು ಸೀತೆ ಮತ್ತು ಲಕ್ಷ್ಮಣರೀರ್ವರು ಮಾತ್ರ ಇರುವರು, ತಂದೆಯ ಮಾತನು ಉಳಿಸಲು ರಾಮನು ಕಾಡಿಗೆ ತೆರಳಲು ಸಿದ್ಧನಾಗಿರುವನೆಂದು ಶೋಕಿಸಿದರು. ಹೀಗೆ ರಾಮನು ದಶರಥನ ಅಪ್ಪಣೆಗಾಗಿ ತಂದೆಯ ಭವನದತ್ತ ತೆರಳುತ್ತಿದ್ದಾನೆ.

ಸದಾ ಅರಮನೆಯಲ್ಲಿರುತ್ತಿದ್ದ, ಜನಸಾಮಾನ್ಯರು ಕಾಣಲು ದುರ್ಲಭವಾಗಿದ್ದ ಸೀತೆಯನಿಂದು ಆಕಾಶ, ಭೂಮಿ, ಜನಸಾಮಾನ್ಯರೆಲ್ಲರೂ ನೋಡುತ್ತಿದ್ದರು. ಸ್ವರ್ಣವರ್ಣದ ಸೀತೆಯ ಮೈಬಣ್ಣವನಿನ್ನು ಕಾಡಿನ ಮಳೆ, ಸೂರ್ಯನ ಬಿಸಿಲು(ಬೇಸಿಗೆ), ಚಳಿಗಳಿಂದ ಮಾಸುವುದು, ದೊರೆಗೆ ಏನೋ ಗಾಳಿ ಸೋಕಿದೆ, ಯಾವ ಷಟ್ಗುಣಗಳನು ಹೊಂದಿದ ರಾಮನನ್ನು ನೋಡಿ ಲೋಕವು ಸೋತಿದೆಯೋ ಅಂತಹ ರಾಮನನ್ನು ಕಾಡಿಗೆ ಕಳಿಸುವುದೇ? ರಾಮನ ಪೀಡೆ, ಲೋಕ ಪೀಡೆ; ರಾಮನಿಗೆ ದುಃಖವಾದರೆ ನಾವೆಲ್ಲ ನೀರಿನಿಂದ ಹೊರತೆಗೆದ ಮೀನುಗಳಂತೆ; ನಾವೂ ಕೂಡ ಕಾಡಿಗೆ ಹೋಗೋಣ,ಲಕ್ಷ್ಮಣನಂತೆಯೇ ನಾವು ಸಹ ಮಾಡೋಣ, ನಮ್ಮ ಕ್ಷೇತ್ರ, ಮನೆ, ತೋಟ ಮುಂತಾದವುಗಳನ್ನು ತ್ಯಾಗ ಮಾಡಿ ಏಕ-ಮುಖ ಸುಖರಾಗಿ; ನಾವು ರಾಮನೊಡನೆ ಹೋಗೋಣ, ಅವನನ್ನು ಅನುಸರಿಸೋಣ.

ಕೈಕೇಯಿಗೆ ರಾಜ್ಯ ಬೇಕಂತೆ, ಆಕೆಗೆ ನಾವುಗಳು ಹೋದ ಬಳಿಕ ಕ್ಷಾಮ- ಡಾಮರಗಳಲಿ ಮುಳುಗಿ ಹೋದ, ಮಂತ್ರ ಹೋಮ, ಜಪ-ತಪಗಳಿಲ್ಲದ ಶೂನ್ಯ ರಾಜ್ಯ ಕೈಕೇಯಿಗೆ ಸಿಗಲಿ ಎಂದು ಕೈಕೇಯನ್ನು ಶಪಿಸಿದರು.

“ರಾಮನಿರುವ ಕಾಡು ನಾಡಾಗಲಿ, ನಾಡು ಕಾಡಾಗಲಿ”,
ಕಾಡಿನ ಮೃಗಗಳು ನಾಡಿಗೆ ಬರಲಿ ಏಕೆಂದರೆ ರಾಮನಿಗೆ ಕಷ್ಟಗಳು ಬರದಿರಲಿ/ಆಗಬಾರದು, ಆದುದರಿಂದ ನಾವೂ ಸಹ ಕಾಡನು ಸೇರೋಣ.
ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದರು.

ಜನರ ಮಾತನು ಕೇಳಿದ ರಾಮನ ಮನದಲಿ ಏನೊಂದೂ ವಿಕಾರವಿರಲಿಲ್ಲ, ವಿಚಲಿತನಾಗಲಿಲ್ಲ.
ಹೀಗೆ ಹಲವಾರು ರೀತಿಯಲ್ಲಿ ಮಾತನಾಡುವರು… ಅದನು ರಾಮನು ಕೇಳುತ್ತಾ, ಮದ ಗಜದ ನಡಿಗೆಯಂತ್ತಿದ್ದ ರಾಮನ ನಡಿಗೆಯನು ಜನ ಗಮನಿಸುತ್ತಿದ್ದರಲ್ಲದೇ, ನಡೆಯುತ್ತಾ ರಾಜಸದನವನು ಸಮೀಪಿಸುವನು.

ತಂದೆಯ ಮನೆಯನು ಸಮೀಪಿಸಿದ ರಾಮನಿಗೆ ಮನೆಯ ಮುಂದೆ ಸುಮಂತ್ರರನು ಕಂಡನು.
ವಿನೀತರಾಗಿ ಕಾವಲು ಕಾಯುತ್ತಿದ್ದ ಭಟರು ರಾಮನನ್ನು ಕಂಡು ಮತ್ತಷ್ಟು ವಿನೀತರಾದರು, ಜನರ ಆರ್ತನಾದ ಕೇಳಿ ಬರುತ್ತಿತ್ತು… ಆದರೂ ರಾಮ ಮಾಸದ ಮುಗುಳ್ನಗೆಯನು ಬೀರುತ್ತಾ ಸುಮಂತ್ರರನು ಕರೆದು ರಾಮ ಬಂದಿದ್ದಾನೆ ಎಂದು ತಂದೆಗೆ ತಿಳಿಸೆಂದು ಹೇಳುವನು. ವಿಷಾದ, ನೋವು ತುಂಬಿತ್ತು. ಆದರೂ ಕಾಲೆಳೆದುಕೊಂಡು ತನ್ನ ಕರ್ತವ್ಯ ಪಾಲನೆಗಾಗಿ ದಶರಥನೆಡೆಗೆ ತೆರಳಿ ರಾಮ ಬಂದಿದ್ದಾನೆ, ಬಾಗಿಲ ಬಳಿ ನಿಂತಿರುವನೆಂದು ವಿಷಯವನು ಅರಹುವನು.

ಇದು ಅಯೋಧ್ಯಾ ಕಾಂಡದ ಲಕ್ಷ್ಮಣ ವನಾನುಗಮನಭ್ಯಜ್ಞ ಮತ್ತು ಪೌರ ವಾಕ್ಯಂ ಎಂಬ 32 ಹಾಗೂ 33ನೇ ಸರ್ಗದಲ್ಲಿ ಬರಯವ ಕಥಾಭಾಗ.

ಮುಂದಿನ ಕಥಾಭಾಗವನ್ನು ಶ್ರೀಸಂಸ್ಥಾನದವರ ನಾಳೆಯ ಪ್ರವಚನದಲ್ಲಿ ಕೇಳೋಣ

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು

Facebook Comments Box