ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಮಹಾಪುರುಷರು ನಮ್ಮ ಬದುಕಿಗೆ ಬರುವುದು ಸುಲಭವಲ್ಲ , ಮಹಾಪುಣ್ಯವೇ ಬೇಕು. ಬಂದ ಬಳಿಕ ಅವರನ್ನು ಉಳಿಸಿಕೊಳ್ಳುವುದು ಕೂಡ ಸುಲಭವಲ್ಲ. ಒಳಗೆ ಕೊಳಕಿಲ್ಲದಂತೆ ಶುದ್ಧವಾಗಿ ಇರಬೇಕಾಗುತ್ತದೆ. ಹಾಗಿದ್ದಾಗ ಮಾತ್ರ ಅವರನ್ನು ಇಟ್ಟುಕೊಳ್ಳಲು ಸಾಧ್ಯ. ಅವರು ಕಲಂಕದ ಜೊತೆ ಇರುವವರಲ್ಲ. ನಾವೆಷ್ಟು ಶುದ್ಧವಾಗಿದ್ದೇವೆ ಎಂಬುದರ ಮೇಲೆ ಮಹಾಪುರುಷರನ್ನು ಹೇಗೆ ಇಟ್ಟುಕೊಳ್ಳುತ್ತೇವೆ ಎಂದು ನಿರ್ಣಯವಾಗುತ್ತದೆ.

ಉದಾಹರಣೆಗೆ ಅಯೋಧ್ಯಾ ನಗರಿ. ಇಕ್ಷ್ವಾಕು ವಂಶದ ಧರ್ಮಾತ್ಮರು ಆಳಿದ ನಗರಿ. ಒಬ್ಬೊಬ್ಬರೂ ಕೂಡ ಮಹರ್ಷಿಯಂತೆ ಇದ್ದವರು ಅಯೋಧ್ಯೆಯಲ್ಲಿ. ಇಂತಹ ಅಯೋಧ್ಯೆಯಲ್ಲಿ ಒಬ್ಬಳು ಕೈಕೇಯಿ, ಒಬ್ಬಳು ಮಂಥರೆ ಸಾಕಾಯಿತು ರಾಮ ಹೊರಹೋಗಲು. ಅಯೋಧ್ಯೆಗೆ ಅಯೋಧ್ಯೆಯೇ ಚೆನ್ನಾಗಿದ್ದರೂ ಇವರಿಬ್ಬರ ಫಲವಾಗಿ ರಾಮ ಹೊರನೆಡೆದ. ನಾವು ನಮ್ಮೊಳಗೆ ಮಹಾತ್ಮರನ್ನು, ಮಹಾನ್ ಚೇತನಗಳನ್ನು ಇಟ್ಟುಕೊಳ್ಳಬೇಕಾದರೆ ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆ ಇದು. ಅಯೋಧ್ಯೆಗೆ ರಾಮನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಆತ ತಾತ್ಕಾಲಿಕವಾಗಿ ಹೊರಟ. ದಕ್ಷಿಣದಿಕ್ಕನ್ನಾಶ್ರಯಿಸಿ ಮುಂದೆಹೋದ ರಾಮನ ಹಿಂದೆ ಇಡೀ ಅಯೋಧ್ಯೆಯೇ ಹೊರಟಿದೆ. ಮರಳಿ ಬಾ ರಾಮ ಎಂದು ವಯೋವೃದ್ಧರು, ತಪೋವೃದ್ಧರು, ಜ್ಞಾನವೃದ್ಧರೊಡಗೂಡಿ ಅಯೋಧ್ಯೆಯೇ ಕರೆಯುತಿರುವಾಗ ರಾಮನಿಂತ. ಅವರನ್ನು ತಮಸಾ ನದಿ ತಡೆಯಿತು. ನದಿಯನ್ನು ದಾಟಲು ದೋಣಿಯಾದರೂ ಬೇಕು. ರಥವಾದರೂ ಸಾಕು. ಕೆಲವು ಉಪನದಿಗಳನ್ನು ರಥದಿಂದ ದಾಟಬಹುದು. ಆಗಷ್ಟೇ ಇಳಿದಿದ್ದಾನೆ ರಾಮ ರಥದಿಂದ ಹಾಗಾಗಿ ಪುನಃ ಹತ್ತಲು ಸಾಧ್ಯವಿಲ್ಲ. ಆಗ ತಾಯಿ ತಮಸೆ ನಿಲ್ಲಿಸಿದಳು ಆತನನ್ನು. ತಮಸಾ ನದಿಯ ವಿಶೇಷತೆಯೆಂದರೆ ಸರಯೂ ತೀರದಲ್ಲಿ ರಾಮ ಹುಟ್ಟಿದರೆ ತಮಸಾ ತೀರದಲ್ಲಿ ರಾಮಾಯಣ ಹುಟ್ಟಿದೆ. ಶೋಕ ಮತ್ತು ಕೋಪದ ಫಲವಾಗಿ ಹುಟ್ಟಿದ ‘ಮಾ ನಿಷಾದ’ ರಾಮಾಯಣದ ಮೊದಲ ಶ್ಲೋಕವೂ ಹೌದು, ರಾಮಾಯಣಕ್ಕೆ ಕಾರಣವೂ ಹೌದು. ಹಾಗಾಗಿ ತಮಸೆ ಹೇಳಿದಾಗ ರಾಮ ನಿಂತ. ಸುಮಂತ್ರ ಕುದುರೆಗಳನ್ನು ಬಿಡಿಸಿ ಪರಿಶುದ್ಧವಾದ ತಮಸೆಯ ನೀರನ್ನು ಕುಡಿಸಿ, ಸ್ನಾನ ಮಾಡಿಸಿ ಮೇಯಿಸಿದ. ರಾಮ ನಿಶ್ಚಯಿಸಿದ ಇಂದು ಪ್ರಯಾಣ ಇಲ್ಲಿಗೆ ನಿಲ್ಲಲಿ ಎಂದು. ಒಂದು ರಾತ್ರಿಗಾದರೂ ರಾಮನನ್ನು ಉಳಿಸಿಕೊಂಡಿದ್ದಾರೆ ಅಯೋಧ್ಯೆಯ ಜನರು, ಅಷ್ಟು ಪ್ರೀತಿ ಅವರಿಗೆ ರಾಮನಲ್ಲಿ, ರಾಮನಿಗೂ ಅಷ್ಟೇ ಪ್ರೀತಿ ಅವರಲ್ಲಿ.

ರಾಮ ಸೀತೆಯನ್ನು ನೋಡಿ ಲಕ್ಷ್ಮಣನಿಗೆ ಇಂತೆಂದನಂತೆ : ಇದು ವನವಾಸದ ಮೊದಲ ರಾತ್ರಿ, ಉತ್ಕಂಟಕ್ಕೆ ಒಳಗಾಗದಿರು, ಇಂದು ಅಯೋಧ್ಯೆಗೆ ಅಯೋಧ್ಯೆಯೇ ಶೋಕಿಸುತ್ತದೆ. ಅಯೋಧ್ಯೆಯ ಜನರಿಗೆ ನಿನ್ನಮೇಲೆ, ನನ್ನಮೇಲೆ, ಭರತ, ಶತ್ರುಘ್ನರಮೇಲೆ ಬಹಳ ಪ್ರೀತಿ ಎಂದು ಹೇಳಿ ನನಗೆ ರಾಜ್ಯತ್ಯಾಗದ ಶೋಕವಿಲ್ಲ ಆದರೆ ತಂದೆ ತಾಯಿ ಹೇಗಿರಬಹುದು ಇಂದು ರಾತ್ರಿ? ಅತ್ತು ಅತ್ತು ಕಣ್ಣೀರು ಹಾಕಿ ಕುರುಡಾಗಿರಬಹುದು. ಒಂದು ಸಮಾಧಾನ ಕರುಣಾಪೂರ್ಣನಾದ ಧರ್ಮಜ್ಞನಾದ ಭರತ ಅವರನ್ನು ಸಮಾಧಾನಿಸುತ್ತಾನೆ. ನೀನು ಬಂದಿದ್ದು ಒಳಿತಾಯಿತು ಲಕ್ಷ್ಮಣ ಎಂದು ಇಂದು ರಾತ್ರಿಗೆ ಈ ತಮಸೆಯ ನೀರು ಮಾತ್ರ ಸಾಕು, ನನಗಿಂದು ಇದೇ ಇಷ್ಟವಾಗುತ್ತಿರುವುದು ಎಂದು ಹೇಳಿ ಸುಮಂತ್ರನಿಗೆ ಕುದುರೆಯ ಕಡೆ ಗಮನವಿರಲಿ, ಅಪ್ರಮತ್ತನಾಗಿರು ಎಂದು ಹೇಳಿದ ರಾಮನ ಮಾತನ್ನು ತಿಳಿದು ಅವುಗಳಿಗೆ ಎಷ್ಟು ಅಗತ್ಯವಿದೆಯೋ ಅದಕ್ಕಿಂತ ಸ್ವಲ್ಪ ಹೆಚ್ಚು ಹುಲ್ಲನ್ನೇ ಹಾಕಿ ರಾಮನ ಬಳಿ ಬಂದ.

ಸಾಯಂಸಂಧ್ಯೆಯನ್ನು ಮಾಡಿ ರಾಮ ನೀರು ಕುಡಿದ. ವನವಾಸಕ್ಕೆ ಬಂದರೂ ರಾಮ ಸಂಧ್ಯಾವಂದನೆಯನ್ನು ಬಿಡಲಿಲ್ಲ.

ಪರಿಸ್ಥಿತಿ ಹೇಗಿದ್ದರೂ ನೀತಿ, ನಿಯಮ, ನಿತ್ಯಾನುಷ್ಠಾನಗಳನ್ನು ಬಿಡಬಾರದು ಎಂಬುದಕ್ಕೆ ರಾಮ ಉದಾಹರಣೆ

ಆ ಸಮಯಕ್ಕೆ ಲಕ್ಷ್ಮಣ ಮತ್ತು ಸುಮಂತ್ರ ಎಲೆಗಳಿಂದ ಶಯ್ಯೆಯನ್ನು ತಯಾರಿಸುತ್ತಾರೆ. ಆ ಶಯ್ಯೆಯನ್ನು ಒಮ್ಮೆ ಸಂತೋಷದಿಂದ ಗಮನಿಸಿ ರಾಮ ಮತ್ತು ಸೀತೆ ಅದರಲ್ಲಿಯೇ ಶಯನ ಮಾಡುತ್ತಾರೆ. ಇತ್ತ ಲಕ್ಷ್ಮಣ ಮತ್ತು ಸುಮಂತ್ರ ಮಾತನಾಡಲು ಆರಂಭಿಸುತ್ತಾರೆ. ಲಕ್ಷ್ಮಣ ರಾಮನ ಬೇರೆ ಬೇರೆ ಗುಣಗಳನ್ನು ವರ್ಣಿಸಿ, ಅವನ ಸ್ಮರಣೆ ಮಾಡುತ್ತಾ ಇಡೀ ರಾತ್ರಿ ಕಳೆದರು. ಅಯೋಧ್ಯೆಗೆ ಅಯೋಧ್ಯೆಯೇ ತಮಸಾ ತೀರದಲ್ಲಿ ವಿಶ್ರಾಂತಿ ಮಾಡಿದೆ ಎನ್ನುವಂತಿತ್ತು ಅಲ್ಲಿ.

ಎಲ್ಲರೂ ಏಳುವ ಮೊದಲೇ ರಾಮ ಎದ್ದು ಲಕ್ಷ್ಮಣನನ್ನು ಎಬ್ಬಿಸಿ ತೋರಿಸುತ್ತಾನೆ. ನೋಡು ಲಕ್ಷ್ಮಣ ನಮ್ಮ ಅಪೇಕ್ಷೆ ಮನೆಯ ಉಪೇಕ್ಷೆ ಎಂಬಂತೆ ಮಲಗಿದ್ದಾರೆ ಇವರೆಲ್ಲ. ಲಕ್ಷ್ಮಣ ಇವರು ಪ್ರಾಣ ಬೇಕಾದರೆ ತೊರೆದಾರು ಆದರೆ ನಮ್ಮನ್ನು ಹಿಂಬಾಲಿಸುವುದನ್ನು ಬಿಡಲಾರರು. ಹಾಗಾಗಿ ಇವರೆಲ್ಲ ಏಳುವ ಮೊದಲೆ ಹೊರಡೋಣ. ಈ ಯೋಗ ಇಲ್ಲಿಗೆ ಸಾಕು ಇವರಿಗೆ. ವನವಾಸ ಬಂದಿದ್ದು ನಮಗೆ  ಇವರಿಗಲ್ಲ. ನಮ್ಮ ಸಲುವಾಗಿ ಇವರಿಗೇಕೆ ಕಷ್ಟ?  ನಮ್ಮ ಕಷ್ಟ ನಮಗಿರಲಿ ಇವರಿಗೆ ಹಂಚುವುದು ಬೇಡ. ರಾಜನಾದವನು  ವಿಷಕಂಠನಂತೆ ಪ್ರಜೆಗಳ ದುಃಖವನ್ನು ಸ್ವೀಕರಿಸಿ, ಸುಖವನ್ನು ನೀಡಬೇಕು. ತನಗೆ ಮಹಾಸಂಕಟಬಂದಾಗ ಪ್ರಜೆಗಳಿಗೆ ಅದರ ಬಿಸಿ ತಟ್ಟದಂತೆ ನೋಡಿಕೊಳ್ಳಬೇಕಾಗಿರುವುದು ರಾಜಧರ್ಮ ಎಂದಾಗ ಸಾಕ್ಷಾತ್ ಧರ್ಮದಂತೆ ಗೋಚರಿಸಿದನಂತೆ ರಾಮ ಲಕ್ಷ್ಮಣನಿಗೆ.ಲಕ್ಷ್ಮಣನಿಗೂ ರಾಮನ ಮಾತು ಸರಿಯೆನಿಸಿ ಸುಮಂತ್ರನನ್ನು ಎಬ್ಬಿಸಿದ. ಅರಣ್ಯಕ್ಕೆ ಹೊರಡುವೆವು ಶೀಘ್ರವಾಗಿ ಪ್ರಯಾಣಮಾಡಬೇಕು ಏರ್ಪಾಡು ಮಾಡು ಪ್ರಭೂ ಎಂದನಂತೆ ರಾಮ ಸುಮಂತ್ರನಿಗೆ. ಸುಮಂತ್ರ ತ್ವರೆಯಿಂದ ಕುದುರೆಗಳನ್ನು ತಂದು ರಥಕ್ಕೆ ಕಟ್ಟಿ ರಾಮನಿಗೆ ನಿವೇದನೆ ಮಾಡಿದ. ರಾಮ ರಥವೇರಿ ತಮಸೆಯನ್ನು ದಾಟಿದ. ನದಿಯ ಮಧ್ಯದಲ್ಲೂ ಕೆಲವು ಸ್ಥಳಗಳು ಇರುತ್ತವೆ.  ತಮಸಾ ನದಿಯಲ್ಲಿ ಎಲ್ಲಿ ರಥವನ್ನು ದಾಟಬಹುದೋ ಅಂತಹ ಜಾಗವನ್ನು ನೋಡಿ ಕುಶಲನಾದ ಸಾರಥಿ ಸುಮಂತ್ರ ರಥವನ್ನು ತಮಸಾ ನದಿಯನ್ನು ದಾಟಿಸಿದ ಬೆಳಗಿನಜಾವದಲ್ಲಿ. ಅಲ್ಲಿ ಕಂಟಕವಿಲ್ಲದ ಅಭಯಪ್ರದವಾದ ಧರ್ಮಮಾರ್ಗವು ರಾಮನಿಗೆ ಗೋಚರಿಸಿತಂತೆ.

ಅಯೋಧ್ಯಾವಾಸಿಗಳು ಮತ್ತೆ ಹುಡುಕಿಕೊಂಡು ಬರುತ್ತಾರೆಂದು ತಿಳಿದು ಪೌರರಿಗೆ ದಾರಿ ಗೊತ್ತಾಗದಂತೆ ಉತ್ತರಾಭಿಮುಖವಾಗಿ ಸ್ವಲ್ಪ ದೂರ ಸಾಗಿ ಮರಳಿ ಬಾ, ಈ ಕಡೆಗೆ ಸ್ವಲ್ಪ ದೂರ ಸಾಗು ಎಂದು ಹೇಳಿದಾಗ ಹಾಗೆ ಮಾಡಿ ಬಂದ ಸುಮಂತ್ರನ ರಥವೇರಿ ರಾಮ ಲಕ್ಷ್ಮಣ ಸೀತೆಯರು ತಪೋವನದ ಹಾದಿ ಹಿಡಿದು ಹೋದರು.

ಹೊಸ ಪ್ರಯಾಣ ಆರಂಭಿಸುವಾಗ ಉತ್ತರಾಭಿಮುಖವಾಗಿ ಸ್ವಲ್ಪ ದೂರ ಚಲಿಸಿ ನಂತರ ಹೊರಡುವುದು ಶಾಸ್ತ್ರ.

ಇಲ್ಲಿಂದ ಸರಿಯಾದ ಪ್ರಯಾಣ ಆರಂಭ.  ಬೆಳಗ್ಗೆ ಎದ್ದು ನೋಡಿದಾಗ ಎಲ್ಲವೂ ಹಾಗೆಯೇ ಇದೆ ಆದರೆ ರಾಮ, ಲಕ್ಷ್ಮಣ, ಸೀತೆ, ಸುಮಂತ್ರ ಹಾಗೂ ರಥವನ್ನು ಹೊರತುಪಡಿಸಿ. ಏನೂ ಮಾಡದ ಸ್ತಬ್ಧ ಸ್ಥಿತಿ ಅವರದ್ದು. ರಾಮನ ಬೆಳಕೂ ಕಾಣಲಿಲ್ಲ ಅವರಿಗೆ. ನಮ್ಮ ನಿದ್ದೆಗೆ ಧಿಕ್ಕಾರವಿರಲಿ ಎಂದು ಶಪಿಸಿಕೊಂಡರಂತೆ.

ಯಾವ ರಾಮನು ನಮ್ಮನ್ನು ತಂದೆಯಂತೆ ಪಾಲಿಸುತ್ತಿದ್ದನೋ ಅಂತಹ ರಘುವಂಶದ ಪರಮಶ್ರೇಷ್ಠ ನಮ್ಮನ್ನು ತೊರೆದು ಹೋದನಾ? ನಾವು ಮಹಾಪ್ರಸ್ಥಾನಕ್ಕೆ ಹೋಗೋಣ. ಇಲ್ಲವೇ ಇಲ್ಲಿರುವ ಒಣಕಟ್ಟಿಗೆಗಳ ಸೇರಿಸಿ ಬೆಂಕಿ ಹಚ್ಚಿ ಚಿತೆಗೆ ಹಾರಿಬಿಡೋಣ. ಏಕೆಂದರೆ ರಾಮನ ಜೊತೆಗೆ ಕಾಡಿಗೆ ಹೋಗುತ್ತೇವೆಂದು ಹೇಳಿ ಈಗ ರಾಮನನ್ನು ಬಿಟ್ಟು ಅಯೋಧ್ಯೆಗೆ ಮರಳಿದರೆ ಅಯೋಧ್ಯೆ ನಿರಾನಂದವಾದೀತು ಎಂದು ವಿಲಪಿಸಿದರು.

ರಾಮನ ಊಹೆಯಂತೆಯೇ ಅವರು ರಥದ ಚಕ್ರದ ಗುರುತನ್ನು ಹಿಂಬಾಲಿಸುತ್ತಾರೆ ಸ್ವಲ್ಪ ದೂರ ಹೋದಬಳಿಕ ಏನೂ ಕಾಣದಿದ್ದಾಗ ವಿಧಿ ಎಂದು ವಿಲಪಿಸಿ ನಂತರ ರಾಮನ ನಿರೀಕ್ಷೆಯಂತೆಯೇ ಅಯೋಧ್ಯೆಗೆ ಮರಳಿ ರಾಮ ಬರುವವರೆಗೆ ಪ್ರತೀಕ್ಷಿಸೋಣವೆಂದು  ಮರಳಿದರು. ರಾಮ ಶೂನ್ಯವಾದ ಅಯೋಧ್ಯೆಯನ್ನು ನೋಡಿ ದುಃಖಿಸಿದರು. ಸಂಪತ್ಸಮೃದ್ಧ ತಮ್ಮ ಮನೆಗಳಿಗೆ ಹೋದಾಗ ತಮ್ಮವರಾರು, ತಮ್ಮವರಲ್ಲದವರಾರು ಎಂದು ತಿಳಿಯದ ಮನಸ್ಥಿತಿಯಿತ್ತು ಅವರಲ್ಲಿ.  ಅಂಗಡಿಗಳು ತೆರೆಯಲಿಲ್ಲ, ಮನೆಯಲ್ಲಿ ಯಾರೂ ಅಡಿಗೆ ಮಾಡಲಿಲ್ಲ ಬಹುಷಃ ರಾಮ ಉಪವಾಸ ಇದ್ದಿರುವನೇನೋ ಎಂಬ ಭಾವ. ಅದೇ ದಿನ ವ್ಯಾಪಾರದಲ್ಲಿ ಬಹುದೊಡ್ಡ ಲಾಭವಾಗಿದ್ದರೂ ಸಂತೋಷ ಪಡಲಿಲ್ಲ. ಕಳೆದು ಹೋದ ಅಮೂಲ್ಯ ವಸ್ತುವೊಂದು ಮರಳಿ ಸಿಕ್ಕರೂ ಖುಷಿಯಾಗಲಿಲ್ಲ. ರಾಮನೆಂಬ ಅತ್ಯಮೂಲ್ಯ ರತ್ನ ಇಲ್ಲದಿರುವಾಗ ಇನ್ನಾವ ರತ್ನವೂ ಖುಷಿ ಕೊಡಲಿಲ್ಲ. ಆಗ ತಾನೆ ಜನ್ಮ ನೀಡಿದ ಮಗುವನ್ನು ನೋಡಿದ ತಾಯಿಯೂ ಸಂತೋಷಿಸಲಿಲ್ಲ.

ರಾಮನೊಡನೆ ಹೋಗಿ ಅಯೋಧ್ಯೆಗೆ ಮರಳಿದವರನ್ನು ಅವರ ಹೆಂಡತಿಯರು ನಿಂದಿಸಿದರಂತೆ. ಅಂಕುಶದಿಂದ ಆನೆಯನ್ನು ತಿವಿಯುವಂತೆ ಮಾತಿನ ಅಂಕುಶಗಳಿಂದ ತಿವಿದರಂತೆ. ಈ ಪ್ರಪಂಚದಲ್ಲಿ ಸತ್ಪುರುಷನೆಂದರೆ ಲಕ್ಷ್ಮಣನೊಬ್ಬನೇ ಏಕೆಂದರೆ ಅವನು ಇಂದಿಗೂ ರಾಮನನ್ನು ಹಿಂಬಾಲಿಸುತ್ತಿದ್ದಾನೆ. ರಾಮ ಯಾವ ಸರೋವರದಲ್ಲಿ ಸ್ನಾನ ಮಾಡುತ್ತಾನೋ ಆ ನದಿಗಳೇ ಭಾಗ್ಯವತಿಯರು. ರಾಮನಿಗೆ ಅರಣ್ಯವೇ ಅಲಂಕಾರ.ರಾಮ ಹೋದರೆ ಯಾವ ಗಿರಿ ಕಾಡು ಪರ್ವತಗಳು ಫಲ ಪುಷ್ಪಗಳ ಮೂಲಕ ಆತಿಥ್ಯ ನೀಡುವವು.

ರಾಮ ಇನ್ನೂ ದೂರ ಹೋಗುವ ಮುನ್ನ ನಾವೂ ಹೊರಟುಬಿಡೋಣ. ಏಕೆಂದರೆ ಅವನ ಪಾದದ ನೆರಳೇ ಸುಖ. ನಾವು ಸೀತೆಯ ಸೇವೆ ಮಾಡುತ್ತೇವೆ ನೀವು ರಾಮನ ಸೇವೆ ಮಾಡಿ ಎಂದರಂತೆ ಸ್ತ್ರೀಯರು ಗಂಡಸರಿಗೆ. ನಿಮ್ಮ ಯೋಗಕ್ಷೇಮ ರಾಮ ನೋಡುತ್ತಾನೆ, ನಮ್ಮ ಯೋಗಕ್ಷೇಮ ಸೀತೆ ನೋಡಿಕೊಳ್ಳುತ್ತಾಳೆ. ರಾಮನಿಲ್ಲದ ಅಯೋಧ್ಯೆಯ ವಾಸ ಯಾರಿಗೆ ಬೇಕು.  ಒಂದು ವೇಳೆ, ಯಾರು ತನ್ನ ಸ್ವಾರ್ಥಕ್ಕಾಗಿ ಪತಿಯನ್ನು ಪುತ್ರನನ್ನು ತೊರೆದಳೋ ಅಂತಹ ಕೈಕೇಯಿಯ ರಾಜ್ಯವಾಗುವುದಾದರೆ ಒಂದು ಕ್ಷಣವೂ ಇಲ್ಲಿರುವುದಿಲ್ಲ ನಮ್ಮ ಮಕ್ಕಳ ಮೇಲಾಣೆ ಎಂದರಂತೆ. ಅವಳೂ ಬದುಕಿದ್ದು, ನಾವೂ ಬದುಕಿರಲು ಸಾಧ್ಯವಿಲ್ಲ. ನಿರ್ಗುಣಿ, ನಿಷ್ಕರುಣಿ ಆಕೆ ರಾಮನನ್ನು ಕಾಡಿಗೆ ಅಟ್ಟಿ ನಮ್ಮನ್ನೆಲ್ಲ ಅನಾಥ ಮಾಡಿಬಿಟ್ಟಳಲ್ಲ ಕೈಕೇಯಿ. ರಾಮ ಕಾಡಿಗೆ ಹೋದಮೇಲೆ ದಶರಥ ಹೆಚ್ಚುಕಾಲ ಬದುಕಿರಲಾರ ಎಂದು ಹೇಳಿ ರಾಮನ ವಿರಹದ ಸಿಟ್ಟಿನಿಂದ ವಿಷ ಕುಡಿಯಿರಿ, ಪುಣ್ಯಹೀನರೇ ರಾಮನ ಹಿಂದೆ ಹೋಗಿ ಇಲ್ಲವೇ ಕಣ್ಣಿಗೆ ಕಾಣದಂತೆ ನಡೆಯಿರಿ ಎಂದು ಹೆಂಡತಿಯರು ಗದರಿದರಂತೆ. ನಮ್ಮನ್ನು ಭರತನೆಂಬ ಕಟುಕನ ಬಳಿ ಪಶುಗಳಾಗಿ ಕಟ್ಟಿ ರಾಮನಿಂದ ದೂರ ಮಾಡಲಾಯಿತು ಎಂದು ಹೇಳಿ ರಾಮನ ಸ್ಮರಣೆಯನ್ನು ಮಾಡಿ ಅತ್ತುಕೊಂಡರು. ಹೀಗೆ ಮಾಡುತ್ತಾ ಮಧ್ಯರಾತ್ರಿಯಾಯಿತು. ಅಯೋಧ್ಯೆಗೆ ಕತ್ತಲಾವರಿಸಿತ್ತು. ರಾತ್ರಿಯೂ  ದೀಪಗಳಿಂದ ಶೋಭಿಸುತ್ತಿದ್ದ ನಗರಿಯದು ಆದರೆ ಅಂದು ನಕ್ಷತ್ರಗಳೂ ಇಲ್ಲದೆ ಅಮವಾಸ್ಯೆಯ ರಾತ್ರಿಗಿಂತಲೂ ಕತ್ತಲಾಗಿತ್ತು. ಅಗ್ನಿಹೋತ್ರ, ವೇದಾಧ್ಯಯನಗಳಿಲ್ಲ. ಹಾಳುಬಿದ್ದ ಸ್ಥಿತಿಗೆ ಹೋಗಿತ್ತು ಅಯೋಧ್ಯೆ. ತಮ್ಮದೇ ಮಗನೋ ತಮ್ಮನೋ ಅಣ್ಣನೋ ಇಲ್ಲದಂತೆ ಶೋಕಿಸಿದರು.

ಇತ್ತ ರಾಮ  ಬೆಳಗಾಗುವುದರೊಳಗೆ ತಂದೆಯ ಅಪ್ಪಣೆಯನ್ನು ಪಾಲಿಸಲಾಗಿ ಬಹುದೂರ ಸಾಗಿಯಾಗಿದೆ. ಬೆಳಗ್ಗೆ ರಾಮ ಸಂಧ್ಯಾವಂದನೆ ಮಾಡಿದ. ಹಾಗೆಯೇ ಸಾಗಿ ಉತ್ತರಕೋಸಲದ ತುದಿಗೆ ರಾಮ ಬಂದ. ಅಲ್ಲಿ ಹಳ್ಳಿಗಳಲ್ಲಿ ಗದ್ದೆಗಳಲ್ಲಿ ಉತ್ತು ಬಿತ್ತಿದ್ದಾರೆ. ಅದನ್ನು ನೋಡುತ್ತಾ ರಥದಲ್ಲಿ ಮುಂದೆ ಸಾಗುತ್ತಿರುವಾಗ ಅಲ್ಲಿಯ ಜನ ಮಾತನಾಡಿಕೊಂಡರಂತೆ ದಶರಥನಿಗೆ ಧಿಕ್ಕಾರ. ಕ್ರೂರಿ ಕೈಕೇಯಿ, ರಾಮನನ್ನು ಹೊರಗಟ್ಟಿದಳು. ಸೀತೆಯನ್ನು ನೋಡಿ ಈ ಕೋಮಲೆ ಹೇಗೆ ವನವಾಸ ಮಾಡಿಯಾಳು ಎಂದು ಹೇಳಿಕೊಂಡರು. ಇದನ್ನೆಲ್ಲಾ ಕೇಳುತ್ತಾ ಕೋಸಲೇಶ್ವರ ಕೋಸಲವನ್ನು ದಾಟಿದ. ಅಲ್ಲಿ ವೇದಶ್ರುತಿ ನದಿಯನ್ನು ರಥದ ಮೂಲಕವೇ ದಾಟಿ  ಅಗಸ್ತ್ಯರ ದಕ್ಷಿಣದಿಕ್ಕಿನತ್ತ ನಡೆದ. ಮುಂದೆ ಗೋಮತಿಯನ್ನು ದಾಟಿ, ಸಂಧಿಕಾ ನದಿಯನ್ನು ದಾಟಿ ಹಿಂದಿರುಗಿ ಅಯೋಧ್ಯೆಗೂ, ಕೋಸಲಕ್ಕೂ ಪ್ರಣಾಮವನ್ನು ಸಲ್ಲಿಸಿದ ರಾಮ, ವೈದೇಹಿಗೆ  ಮೊದಲ ಚಕ್ರವರ್ತಿ ಮನು ಇಕ್ಷ್ವಾಕುವಿಗೆ ಕೊಟ್ಟಿದ್ದು ಕೋಸಲರಾಜ್ಯ ಎಂದು ತಿಳಿಸಿದ. ಸುಮಂತ್ರನೊಡನೆ ತನ್ನ ಮೃದುಮಧುರ ಧ್ವನಿಯಲ್ಲಿ ಮಾತನಾಡುತ್ತಾ ಯಾವಾಗ ನಾನು ಕೋಸಲಕ್ಕೆ ಹಿಂದಿರುಗುವೆನೋ, ಸರಯೂ ನದಿ ತೀರದಲ್ಲಿ ತಂದೆತಾಯಿಯರೊಂದಿಗೆ ವಿಹರಿಸುವೆನೋ ಕಾಡಿಗೂ ನಾಡಿಗೂ ಉಪದ್ರವವಾಗುವ  ಮೃಗಗಳನ್ನು ನಿಗ್ರಹಿಸುವೆನೋ ಎಂದು ಹೇಳಿ ಅಯೋಧ್ಯೆಯ ನೆನಪು ಮಾಡಿಕೊಂಡು ಎಂದು ಮರಳುವೆನೋ ಎಂದು ಪ್ರೀತಿ ವ್ಯಕ್ತಪಡಿಸಿ, ಅಯೋಧ್ಯೆಗೆ ನಮಸ್ಕರಿಸಿ, ಮನುಷ್ಯರೊಡನೆ ಮಾತನಾಡಿದಂತೆ ಅಯೋಧ್ಯೆಗೆ ಹೇಳುತ್ತಾನೆ, ಹೇ ಶ್ರೇಷ್ಠನಗರಿಯೇ, (ಸಪ್ತಮೋಕ್ಷ ನಗರಗಳ ಪೈಕಿ ಅಯೋಧ್ಯಾ ಮೊದಲನೆಯದು), ಸೂರ್ಯವಂಶದಿಂದ ಪಾಲಿಸಲ್ಪಟ್ಟವಳೇ ಹೋಗಿಬರುವೆ. ನಿನ್ನಲ್ಲಿ ನೆಲೆಸಿರುವ ಸಮಸ್ತದೇವತೆಗಳಿಗೆ ನಮಸ್ಕಾರವು. ತಂದೆಯ ಋಣವನ್ನು ತೀರಿಸಿ, 14ವರ್ಷಗಳ ಪೂರೈಸಿ ನಿನ್ನೊಳಗೆ ಸೇರುವೆ ಎಂದು ಹೇಳಿ, ಹಳ್ಳಿಯ ಜನರೆಡೆ ತಿರುಗಿ ಎಷ್ಟು ದಯೆ, ಪ್ರೀತಿ ನಿಮಗೆ ನನ್ನಲ್ಲಿ , ಆದರೆ ಹೊರಟುಬಿಡಿ ನಿಮ್ಮೀ ದುಃಖವನ್ನು ನಾನು ನೋಡಲಾರೆ, ನಿಮ್ಮ ಕೆಲಸಗಳಿಗೆ ಹೊರಟುಬಿಡಿ ಎಂದಾಗ ಅವರು ರಾಮನಿಗೆ ಪ್ರದಕ್ಷಿಣೆ ಬಂದು ವಿಲಪಿಸುತ್ತಿರುವಂತೆಯೇ ಹೊರಟು ಕಣ್ಮರೆಯಾದ ರಾಮ.

ರಾಮ ಹೊರಟುಹೋದ ಕೋಸಲದ ವರ್ಣನೆ ಮಾಡುತ್ತಾರೆ ವಾಲ್ಮೀಕಿಗಳು; ಧನಧಾನ್ಯಕ್ಕೆ ಕೊರತೆಯಿಲ್ಲ, ದಾನಶೀಲ ಜನರು, ಮಂಗಲಕರ ನಾಡು ಕೋಸಲ, ಅಭಯರಾಜ್ಯ, ದೇವಸನ್ನಿಧಿ, ಯಜ್ಞಸನ್ನಿಧಿಯಿಂದ ತುಂಬಿದೆ, ಉದ್ಯಾನಗಳು, ಸಮೃದ್ಧಜಲಾಶಯಗಳು, ಸಂತುಷ್ಟ ಜನರು, ಗೋಪಾಲಕರ ಸಮೃದ್ಧಿ, ವೇದಘೋಷಗಳ ನಾಡು ಅಂತಹ ನಾಡನ್ನು ದಾಟಿ ತನ್ನ ನೆಲೆಯನ್ನು,ಧೃತಿಯನ್ನು ಕಳೆದುಕೊಳ್ಳದೆ ಮುಂದೆ ದಾಟಿ ಹೋದ ರಾಮನಿಗೆ ತ್ರಿಲೋಕವ್ಯಾಪಿಸಿ, ತ್ರಿಪಥಗಾ, ಪರಮಪವಿತ್ರ ಗಂಗೆಯನ್ನು ಕಂಡನು ರಾಮ. ಅನತಿದೂರದಲ್ಲಿ ತಪಸ್ಸಿನ ಶೋಭೆಯುಳ್ಳ ಆಶ್ರಮಗಳು, ಕ್ರೀಡಾಪರ್ವತಗಳು, ದೇವೋದ್ಯಾನಗಳಿಂದ ಕೂಡಿದೆ. ನದಿಯ ಮಧ್ಯೆ ಹ್ರದಗಳು ಅಂತಹ ಗಂಗೆಯಲ್ಲಿ ಸ್ನಾನಮಾಡಿದ ರಾಮ. ಕೆಲವುಕಡೆ ಅಟ್ಟಹಾಸಉಗ್ರ, ಬಿಳಿಯತೊರೆ, ಕೆಲವು ಕಡೆ ಜಡೆಯಂತೆ, ಸುರುಳಿಯಂತೆ, ಸ್ಥಿಮಿತಗಂಭೀರ, ನಿರ್ಮಲ ಕನ್ನೈದಿಲೆಗಳಿಂದ ಶೋಭಿಸಿದೆ ಗಂಗೆ. ಕೆಲವುಕಡೆ ವಿಶಾಲ ನಿರ್ಮಲ ಮರಳು, ಹಂಸ, ಸಾರಸ, ಚಕ್ರವಾಕ ಪಕ್ಷಿಗಳ ಚಿಲಿಪಿಲಿ, ಪದ್ಮವನ, ಕಲ್ಮಷವಿಲ್ಲದ ಮುತ್ತಿನಮಣಿಯಂತೆ ಶೋಭಿಸುತ್ತಿದ್ದಾಳೆ ಗಂಗೆ. ಬಿಳಿಯ ಮೊಸಳೆಯ ಮೇಲೇರಿ, ವಿಷ್ಣುವಿನ ಪಾದದಿಂದ ಹರಿದು ಬಂದು, ಶಂಕರನ ಜಟಾಝೂಟದಿಂದ ಇಳಿದು ಬಂದ, ಪಾಪನಾಶಿನಿ, ಸಮುದ್ರರಾಜನ ಪಟ್ಟದರಸಿ ಗಂಗೆಯನ್ನು ಬಂದು ಸೇರಿದ್ದಾನೆ ರಾಮ ಶೃಂಗಿಭೇರಪುರ ತಲುಪಿದ. ರಾಮನು ಲಕ್ಷ್ಮಣ ಸುಮಂತ್ರನಿಗೆ ಇಲ್ಲಿಯೇ ಉಳಿಯೋಣ ಇಂದು ಎಂದು ಹೇಳಿದ. ಇಲ್ಲೊಂದು ಇಂಗುದೀ ವೃಕ್ಷವಿದೆ ಇದರ ಬುಡದಲ್ಲಿಯೇ ವಾಸಮಾಡೋಣ ಅಲ್ಲಿಂದ ಗಂಗಾದರ್ಶನ ಮಾಡೋಣ ಎಂದು ಹೇಳಿದಾಗ ಎಲ್ಲರೂ ರಥವೇರಿ ಆ ವೃಕ್ಷದ ಬಳಿ ಹೋಗುತ್ತಾರೆ. ಅಲ್ಲಿ ರಥದಿಂದ ಇಳಿದು ಕುದುರೆಗಳನ್ನು ಬಿಡಿಸಿ ರಾಮ ಇಂಗುದಿ ವೃಕ್ಷದ ಮೂಲಕ್ಕೆ ಹೋಗಿ ಗಂಗೆಯನ್ನು ನಮಸ್ಕರಿಸುತ್ತಾನೆ. ಅಂತಹ ರಾಮನನ್ನು ಸುಮಂತ್ರ ನಮಿಸುತ್ತಾನೆ.  ಇಲ್ಲಿ ಯಾರೂ ಇಲ್ಲ ನಿಶ್ಚಿಂತೆಯಿಂದ ಇರಬಹುದು ಎಂದು ರಾಮ ಕುಳಿತಿದ್ದಾಗ ಒಂದು ಸಮೂಹಾಧಿಪತಿ ಜನನಾಯಕನೊಬ್ಬ  ಬಂದು ರಾಮನನ್ನು ಭೇಟಿ ಮಾಡುತ್ತಾನೆ.

ಅವನ್ಯಾರು? ರಾಮನ ಮೈತ್ರಿಯ ವ್ಯಾಪ್ತಿ ಏನು? ಅವರಿಬ್ಬರ ಆ ಸಮಾಗಮವನ್ನು ನಾಳೆಯ ಪ್ರವಚನದಲ್ಲಿ ನಿರೀಕ್ಷಿಸೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

 

 

ಪ್ರವಚನವನ್ನು ನೋಡಲು:

 

Facebook Comments