ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ತ್ರಿವೇಣಿ ಸಂಗಮದಿಂದ ತ್ರಿವೇಣಿ ಸಂಗಮಕ್ಕೆ… ಗಂಗೆಯಿಂದ ಮುಂದೆ ರಾಮನ ಯಾತ್ರೆ ತ್ರಿವೇಣಿಸಂಗಮದ ಕಡೆಗೆ. ಇದೂ ಕೂಡ ತ್ರಿವೇಣಿ ಸಂಗಮವೇ. ಆ ಪ್ರಸಿದ್ಧವಾದ ತ್ರಿವೇಣಿ ಸಂಗಮಕ್ಕಿಂತ ಶ್ರೇಷ್ಠವಾದದ್ದು. ಪ್ರಸಿದ್ಧವಾದ ತ್ರಿವೇಣಿ ಸಂಗಮದಲ್ಲಿ ಗಂಗಾ ಯಮುನಾ ಸರಸ್ವತಿ ನದಿಗಳು ಸೇರುತ್ತವೆ. ಎರಡು ಕಾಣಿಸುತ್ತದೆ, ಒಂದು ನದಿ ಕಾಣಿಸುವುದಿಲ್ಲ.

ಆದರೆ ಹೊರಟ ತ್ರಿವೇಣಿಸಂಗಮ “ಗಂಗೆ ಗಂಗೆ ಗಂಗೆ”ಯರ ಸಂಗಮ…. ಗಂಗಾತ್ರಯ….! ಮೂರು ಪ್ರತ್ಯಕ್ಷ. ಯಾವುದದು ಅಂದರೆ, ಒಂದಂತೂ ಗಂಗೆಯೇ, ಇನ್ನೊಂದು ರಾಮಗಂಗೆ, ಮತ್ತೊಂದು ಗುಹಗಂಗೆ. ಈ ಮೂರು ಗಂಗೆ. ಜಲಗಂಗೆ, ಪರಮಾತ್ಮಗಂಗೆ, ಭಕ್ತಿಗಂಗೆ. ಈ ಮೂರು ಗಂಗೆಯರು ಸೇರಿ ತ್ರಿವೇಣಿಸಂಗಮ. ಸ್ವಯಂ ಶುದ್ಧ ಹಾಗೂ ಸಂಪರ್ಕಕ್ಕೆ ಬಂದವರನ್ನೆಲ್ಲಾ ಶುದ್ಧಮಾಡುವಳು ಗಂಗೆ. ನೆನೆದ ಮಾತ್ರಕ್ಕೆ ಪಾಪಗಳು ಪರಿಹಾರ ಎನ್ನುವ ಮಟ್ಟಕ್ಕೆ ಅಂತಃಶುದ್ಧಿಯನ್ನು ಕೊಡುವನು ರಾಮ. ಗುಹನು ಭಕ್ತಿಯಿಂದಲೇ ಪರಮ ಪರಿಶುದ್ಧ.

ನದಿದಾಟಿದ ಮೇಲೆ ಮುಂದೆ ಪ್ರಯಾಣವ ಮುಂದುವರಿಸಿದರು. ರಾಮನು ಲಕ್ಷ್ಮಣನಿಗೆ ಹೇಳಿದನು, ” ಈಗ ನಾವು ಮೂವರಿದ್ದೇವೆ. ಸುಮಂತ್ರನೂ ಇಲ್ಲ. ಮುಂದಿರುವುದು ದಟ್ಟ ಕಾಡು, ತುಂಬ ಜಾಗರೂಕರಾಗಿರಬೇಕು. ನೀನು ಮುಂದಿರು, ನಿನ್ನ ಹಿಂದೆ ಸೀತೆ, ಕೊನೆಯಲ್ಲಿ ನಾನು. ನಿಮ್ಮಿಬ್ಬರ ರಕ್ಷಣೆ ನನ್ನ ಹೊಣೆ. ಮುಹೂರ್ತ ಮೀರಿ ಹೋದಮೇಲೆ ಯಾವುದೂ ಸುಲಭವಲ್ಲ. ಮತ್ತೂ ಮೀರಿದರೆ ಅಸಂಭವವಾಗುತ್ತದೆ” ಎಂದನು.

ಅತ್ತ ಸುಮಂತ್ರ ಆಚೆ ದಡದಲ್ಲಿ ಕುಳಿತು ರಾಮ ಕಾಣುವವರೆಗೆ ನೋಡುತ್ತಾನೆ. ದಾರಿದೂರವಾದಮೇಲೆ, ರಾಮಕಾಣದಾದ ಮೇಲೆ ಕಣ್ಣೀರಿಟ್ಟನು ಸುಮಂತ್ರ.

ನಿರ್ಜನವನದಲ್ಲಿ ರಾಮಲಕ್ಷ್ಮಣಸೀತೆಯರು ಪ್ರಯಾಣ ಮುಂದುವರಿಸಿದರು. ಒಂದು ವನಸ್ಪತಿಯಲ್ಲಿ ವಿಶ್ರಾಂತಿ ಮಾಡುತ್ತಾರೆ. ರಾಮ ಅಂದು ಸ್ವಲ್ಪ ಆಹಾರವನ್ನು ಸ್ವೀಕಾರಮಾಡುತ್ತಾನೆ. ಅಂದಿಗೆ ಮೂರುದಿನದ ಉಪವಾಸವಾಯಿತು ರಾಮನದ್ದು. ಸಂಧ್ಯಾವಂದನೆ ಮುಗಿಸಿ, ಆಹಾರ ಸ್ವೀಕರಿಸಿದನು.” ಇದು ಜನಪದರಿಲ್ಲದ ಮೊದಲ ರಾತ್ರಿ. ದಟ್ಟಕಾಡಿನ ಭೀಕರತೆಯ ಕಂಡು ಹೆದರದಿರು. ಇಂದಿನಿಂದ ನಿತ್ಯ ಜಾಗರಣೆ ಮಾಡಬೇಕು. ಸೀತೆಯ ರಕ್ಷಣೆಯ ಹೊಣೆ ನಮ್ಮ ಮೇಲಿದೆ” ಎಂದು ರಾಮ ಲಕ್ಷ್ಮಣನಿಗೆ ಹೇಳಿದನು.

ರಾಮ ಲಕ್ಷ್ಮಣನನ್ನು ಅಯೋಧ್ಯೆಗೆ ಮರಳಿ ಕಳುಹಿಸುವ ಪ್ರಯತ್ನವನ್ನು ಮಾಡುತ್ತಾನೆ. “ನಿನ್ನನ್ನು ಬಿಟ್ಟು ಬದುಕುವುದಿಲ್ಲ. ನಾನು ಹಾಗೂ ಸೀತೆ ನೀನಿಲ್ಲದಿದ್ದರೆ ನೀರಿಂದ ಹೊರತೆಗೆದ ಮೀನುಗಳು. ನೀನಿಲ್ಲದೇ ಸ್ವರ್ಗವೂ ಬೇಡ. ನಿನ್ನ ಬಿಟ್ಟಿರಲಾರೆವು” ಎಂದನು ಲಕ್ಷ್ಮಣ. ಮುಂದೆ ಪ್ರಯಾಗವನ್ನು ಗುರಿಯಾಗಿಟ್ಟುಕೊಂಡು ಅರಣ್ಯದಲ್ಲಿ ಮುಂದುವರಿದರು.

ಆಶ್ರಮದ ಪರಿಸರದ ಚಿಹ್ನೆಗಳನ್ನು ಗಮನಿಸಿದರು. ಸಂಜೆಯಾಗುವಷ್ಟರಲ್ಲಿ ಭರದ್ವಾಜ ಮುನಿಯ ಆಶ್ರಮವನ್ನು ಸೇರಿದರು. ಭರದ್ವಾಜ ಮುನಿಯ ದರ್ಶನಾಕಾಂಕ್ಷಿಗಳಾಗಿ ನಿಂತರು. ಬಳಿಕ ಏಕಾಗ್ರತೆಯಿಂದ ಕೂಡಿದ ತಪಸ್ಸಿನ ಮೂಲಕ ಮೂರನೇ ಕಣ್ಣನ್ನು ಪಡೆದುಕೊಂಡಂತಹ ಮುನಿಯ ದರ್ಶನವನ್ನು ಮಾಡುತ್ತಾರೆ. ಸೀತಾಲಕ್ಷ್ಮಣರೊಡಗೂಡಿ ರಾಮನು ಭರದ್ವಾಜರ ಹತ್ತಿರ ತಮ್ಮ ಪರಿಚಯವನ್ನು ಹೇಳುತ್ತಾನೆ. “ದಶರಥನ ಮಕ್ಕಳು ನಾವೀರ್ವರು. ಈಕೆ ನನ್ನ ಮಡದಿ, ಕಲ್ಯಾಣಿ, ಜನಕಾತ್ಮೆ, ಅನಿಂದಿತೆ, ಪರಮಪವಿತ್ರಳು. ನಾನು ತಂದೆಯಿಂದ ನಿಯೋಜಿಸಲ್ಪಟ್ಟು ಕಾಡಿಗೆ ಬಂದಿದ್ದೇನೆ. ಇವರಿಬ್ಬರು ನನ್ನೊಟ್ಟಿಗೆ ಬಂದಿದ್ದಾರೆ. ಧರ್ಮವನ್ನೇ ಆಚರಿಸುತ್ತೇವೆ ಅದನ್ನು ಬಿಟ್ಟು ಬೇರೆ ಇಲ್ಲ. ಧರ್ಮವೊಂದರ ಆಚರಣೆಗಾಗಿ ನಾವು ಕಾಡನ್ನು ಸೇರಿದವರು. ಗೆಡ್ಡೆಗೆಣಸುಗಳನ್ನು ಸೇವಿಸಿ ಮುನಿ ಜೀವನವನ್ನು ಮಾಡುವರು” ಎಂದನು ರಾಮ.

ಅದನ್ನು ಕೇಳಿದ ತಕ್ಷಣ, ಮಧುಪರ್ಕಕ್ಕೆ ಏರ್ಪಾಡು ಮಾಡುತ್ತಾರೆ ಭರದ್ವಾಜರು. ಸ್ವಾಗತ ಮಾಡುವಾಗ ಇದೆಲ್ಲಬೇಕು. ಗೋವು ಅಥವಾ ವೃಷಭ ದರ್ಶನ, ಸ್ಪರ್ಶನ ಇದೊಂದು ಸ್ವಾಗತೋಪಚಾರ. ವಾಸಕ್ಕೂ ಏರ್ಪಡಿಸಿದರು. ಮೃಗಪಕ್ಷಿಗಳೊಡಗೊಂಡು ಮುನಿಗಣದ ಜೊತೆ ರಾಮಲಕ್ಷ್ಮಣಸೀತೆಯೊಡಗೂಡಿ ಭರದ್ವಾಜರು ಸಭೆಯ ನಡೆಸಿದರು. ಭರದ್ವಾಜರೆಂದರೆ ಆಶ್ಚರ್ಯಗಳ ನಿಧಿ…!

ಭರದ್ವಾಜರು, “ಎಷ್ಟು ಸಮಯವಾಯಿತು ನಿನ್ನ ನೋಡದೇ.. ಯಾವ ಕಾರಣಕ್ಕೆ ನಿನಗೆ ವನವಾಸವಾಯಿತು ಇದೆಲ್ಲ ತಿಳಿದಿದೆ ಎಂದರು. ಈ ಪ್ರದೇಶ ದಿವ್ಯವೂ ರಮ್ಯವೂ ಆಗಿರುವಂಥದ್ದು. ಇಲ್ಲಿ ನೀನು ಉಳಿಯಬಹುದು” ಎಂದರು. ಆಗ ರಾಮ, ” ನಾವು ಇಲ್ಲೇ ಇದ್ದರೆ, ಅಯೋಧ್ಯೆಗೆ ಅಯೋಧ್ಯೆಯೇ ಇಲ್ಲಿ ಬರುತ್ತದೆ. ಅದೊಂದು ಕಾರಣಕ್ಕಾಗಿ ಇಲ್ಲಿ ಬೇಡ. ನಾವೆಲ್ಲಿರಬಹುದು ಎಂದು ತಾವೇ ನೋಡಿ ಹೇಳಿ ” ಎಂದನು.

“ಹತ್ತು ಹರದಾರಿ ದೂರದಲ್ಲಿ ಒಂದು ಪರ್ವತವಿದೆ. ಪವಿತ್ರ ಪರ್ವತ..! ಚಿತ್ರಕೂಟದ ಮಹಿಮೆ ವಿಶಿಷ್ಟ. ಆ ಪರ್ವತದ ಶೃಂಗಗಳನ್ನು ನೋಡಿದರೆ ಮನುಷ್ಯನ ದುರ್ಬುದ್ಧಿಗಳೆಲ್ಲ ಹೋಗುತ್ತದೆ, ಮಂಗಲಗಳೆಲ್ಲ ಮನಸ್ಸನ್ನು ತುಂಬಿಕೊಳ್ಳುತ್ತದೆ. ಎಲ್ಲಿ ತಪಸ್ಸು ಅಂದರೆ ಋಷಿಗಳಿಗೆ ವಿಹಾರವೋ ಅಂತಹ ಸ್ಥಳದಲ್ಲಿ ಋಷಿಗಣವು ಕಪಾಲಶಿರಸ್ಸಿನೊಂದಿಗೆ ಸ್ವರ್ಗವನ್ನು ಸೇರಿದರು. ಅಷ್ಟು ಶುದ್ಧ, ಪವಿತ್ರ…! ಅಲ್ಲಿ ನೀನು ವಾಸಮಾಡುವುದು ಯುಕ್ತ. ಅಥವಾ ಇದೇ ಆಶ್ರಮದಲ್ಲಾದರೂ ಅಡ್ಡಿಲ್ಲ” ಎಂದರು ಭರದ್ವಾಜರು.

ಬೆಳಗಾಯಿತು. “ಹೇ ಭಗವನ್, ನಮಗೆ ಅಪ್ಪಣೆ ಕೊಡಿ ಹೊರಡಲು” ಎಂದು ರಾಮನು ಕೇಳಿದಾಗ, “ಚಿತ್ರಕೂಟಕ್ಕೆ ಹೋಗು. ಗಂಗಾಯಮುನಾ ಸಂಧಿಯೆಡೆಗೆ ಹೋಗು. ಯಮುನಾ ನದಿಯೆಡೆಗೆ ಹೋಗು. ತೆಪ್ಪವನ್ನು ಮಾಡಿ ನದಿಯನ್ನು ದಾಟಬೇಕು. ನಿಗ್ರೋಧ ವಟವೃಕ್ಷದ ಬಳಿ ಹೋಗಿ, ಅಲ್ಲೇ ಉಳಿಯಬಹುದು. ಮುಂದೆ ದಟ್ಟಕಾಡು, ರಮ್ಯ ಮತ್ತು ಮೃದು. ಅಲ್ಲಿಂದ ಚಿತ್ರಕೂಟದ ದರ್ಶನವಾಗುತ್ತದೆ” ಎಂದು ಬೀಳ್ಕೊಟ್ಟರು.

ಮಹಾತ್ಮರಿಗೆ ನಮ್ಮ ಮೇಲೆ ಅನುಕಂಪ ಬರಬೇಕೆಂದರೆ, ಪೂರ್ವಜನ್ಮದ ಪುಣ್ಯವಿರಬೇಕು ~ ಶ್ರೀಸೂಕ್ತಿ

ಭರದ್ವಾಜರು ಹೇಳಿದಂತೆ ಅದೇ ದಾರಿಯಲ್ಲಿ ನಡೆದರು ರಾಮಲಕ್ಷ್ಮಣಸೀತೆಯರು. ಅವರೇ ತೆಪ್ಪವನ್ನು ಮಾಡಿಕೊಂಡು, ಯಮುನಾನದಿಯನ್ನು ದಾಟಿದರು. ನದಿಯ ಮಧ್ಯಕ್ಕೆ ಬಂದಾಗ ಸೀತೆ ಯಮುನಾಪ್ರಣಾಮ ಮಾಡಿಕೊಂಡು, ಹರಕೆ ಮಾಡಿಕೊಂಡಳು, “ಸುರಕ್ಷಿತವಾಗಿ ಹದಿನಾಲ್ಕು ವರ್ಷ ವನವಾಸಪೂರ್ತಿಮಾಡಿ ರಾಮ ಅಯೋಧ್ಯೆಗೆ ಮರಳಿದರೆ, ನಿನಗೆ ಸಾವಿರಾರು ಗೋವುಗಳನ್ನು ದಾನಮಾಡುತ್ತೇನೆ” ಎನ್ನುತ್ತಾ ಇರುವಾಗ ದಡಬಂದಿತು.

ದೊಡ್ಡ ನಿಗ್ರೋದ ವೃಕ್ಷ ಕಂಡಿತು. ಸೀತೆ, “ಸುರಕ್ಷಿತವಾಗಿ ಹದಿನಾಲ್ಕು ವರ್ಷ ವನವಾಸ ಪೂರೈಸಬೇಕು ರಾಮ ಹಾಗೂ ನಾನು ಕೌಸಲ್ಯೆಯನ್ನು ಸುಮಿತ್ರೆಯನ್ನೂ ಕಾಣಬೇಕು” ಎಂದು ತುಂಬಾ ಪ್ರೀತಿಯಿಂದ ಕೇಳಿಕೊಂಡಳು.

“ಅಧಿಕಾರ ಪ್ರೀತಿಯಿಂದ ಬರಬೇಕು, ಭೀತಿಯಿಂದಲ್ಲ” ~ಶ್ರೀಸೂಕ್ತಿ

ನದಿಯ ತೀರದಲ್ಲೊಂದು ಕಡೆ ರಾತ್ರಿ ವಾಸಮಾಡಿದರು. ಬೆಳಿಗ್ಗೆಯಾಯಿತು. ನಿತ್ಯಕರ್ಮಗಳನ್ನು ಮಾಡಿ, ಚಿತ್ರಕೂಟದೆಡೆಗೆ ಹೊರಟರು. ಚಿತ್ರಕೂಟದ ಸೊಬಗನ್ನು ಸವೆಯುತ್ತಾ, ಮುಂದುವರೆದರು.

ನಂತರ ರಾಮಲಕ್ಷ್ಮಣಸೀತೆಯರು ವಾಲ್ಮೀಕಿ ಮಹರ್ಷಿಗಳ ಆಶ್ರಮವನ್ನು ಪ್ರವೇಶಿಸುತ್ತಾರೆ. ವಾಲ್ಮೀಕಿ ಮಹರ್ಷಿ ಅವರನ್ನು ಸಂತಸದಿಂದ ಸತ್ಕರಿಸಿದರು. ಅಲ್ಲೇ ಪರ್ಣಕುಟೀರವನ್ನು ಕಟ್ಟಲು ರಾಮ ಲಕ್ಷ್ಮಣನಿಗೆ ಅಪ್ಪಣೆಮಾಡಿದನು. ಲಕ್ಷ್ಮಣನೇ ಪರ್ಣಶಾಲೆಯನ್ನು ಕಟ್ಟಿದನು. ವಾಸ್ತುಶಾಂತಿಯನ್ನು ವಿಧಿವತ್ತಾಗಿ ಮಾಡಿ, ಪರ್ಣಶಾಲೆಯನ್ನು ಪ್ರವೇಶ ಮಾಡುತ್ತಾರೆ ರಾಮಸೀತೆಲಕ್ಷ್ಮಣರು. ಸ್ವರ್ಗಸದೃಶವಾಸವಾಗಿತ್ತು.

ಯಾವುದೇ ದುಃಖದೈನ್ಯವಿಲ್ಲದೇ ಅರಮನೆಯಲ್ಲಿದ್ದ ಹಾಗೆ ಸಂತೋಷದಿಂದ ಚಿತ್ರಕೂಟದಲ್ಲಿದ್ದರು ಎನ್ನುವಲ್ಲಿಗೆ ಅಯೋಧ್ಯಾಕಾಂಡದ ಒಂದು ಘಟ್ಟ ಮುಗಿಯಿತು. ಇನ್ನು ಮುಂದೆ ಅಯೋಧ್ಯೆಯಲ್ಲಿ ಏನಾಯಿತು ಎನ್ನುವುದು ಬರುತ್ತದೆ. ತುಂಬಾ ಹೊತ್ತು ಗುಹ-ಸುಮಂತ್ರರು ಮಾತನಾಡಿಕೊಂಡರು. ಚಿತ್ರಕೂಟಕ್ಕೆ ಹೋದಲ್ಲಿಯವರೆಗೆ ರಾಮನ ಕುರಿತು ಮಾಹಿತಿಯನ್ನು ಪಡೆದುಕೊಂಡರು ಗುಹ ಸುಮಂತ್ರರು. ಗಾಢ ದುಃಖದಲ್ಲಿ ಸುಮಂತ್ರನು ಅಯೋಧ್ಯೆಯೆಡೆಗೆ ಹೊರಟನು.

ನಿಶ್ಶಬ್ಧವಾಗಿತ್ತು ಅಯೋಧ್ಯೆ…! ಶೂನ್ಯವಾಗಿತ್ತು..!

ದೊರೆಯಿಂದ ಕೂಡಿದ ನನ್ನ ನಗರಿ ರಾಮನಿಲ್ಲದ ಶೋಕದ ತಾಪದಿಂದ ಸುಟ್ಟುಹೋಯಿತೇ ಎಂದು ಬೇಸರಿಸಿದ ಸುಮಂತ್ರ. ಅರಮನೆಯ ಒಳಹೊಕ್ಕಿದನು, ಸಾವಿರ ಜನರು ಒಟ್ಟಿಗೆ ಸೇರಿ ಮುತ್ತಿದರು ರಥವನ್ನು ಹಾಗೂ ಕೇಳಿದರು, “ರಾಮನೆಲ್ಲಿ..?” ಆಗ ಸುಮಂತ್ರ, ಗಂಗಾನದಿತೀರ ದಾಟಿ ಚಿತ್ರಕೂಟ ಸೇರಿದನು ರಾಮ ಎಂದಾಗ ಜನರು ದುಃಖಿಸಿದರು. ದಶರಥನ ಹಾಗೆ ಜನರಿಗೆ ಬೇಕಾದಂತೆ ಪರಿಪಾಲಿಸುತ್ತಿದ್ದ ರಾಮನು. ಈಗ ಯಾರು ಎಂದು ದುಃಖಿಸಿದರು. ರಾಮನ ಅದರ್ಶನದಿಂದ ಆರ್ತರಾಗಿ ಶೋಕಿಸಿದರು. ರಾಮನೊಟ್ಟಿಗೆ ಹೋದವನು, ರಾಮನನ್ನು ಬಿಟ್ಟುಬಂದಿದ್ದಾನೆ. ಈಗ ಕೌಸಲ್ಯೆಯ ಹತ್ತಿರ ಏನು ಹೇಳುವನೋ ಎಂದು ದುಃಖಿಸಿದರು. ರಾಮ ಹೇಳಿದ್ದೆಲ್ಲವನ್ನೂ ಸುಮಂತ್ರ ಶೋಕಮೂರ್ತಿ ದಶರಥನಿಗೆ ಹೇಳಿದಾಗ ದಶರಥ ಮೂರ್ಛಿತನಾದನು.

ಆಗ ಕುಸಿದುಬಿದ್ದಳು ಕೌಸಲ್ಯೆ. ಮುಂದೇನಾಯಿತು…? ಮುಂದಿನ ಪ್ರವಚನಕ್ಕಾಗಿ ಕಾಯೋಣ

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments Box