ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

‘ತಾ’ ಎಂಬುದು ತಾತ ಮುತ್ತಾತರಿಂದಲೇ ಬಂದು ಬಿಟ್ಟಿದೆ. ‘ಕೊ’ ಎಂಬುದು ಕುಲಕೋಟಿಗೂ ಗೊತ್ತಿಲ್ಲ. ‘ಕೊ’ ಅಂದರೆ ಕೊಡು, ಕುಲಕೋಟಿಗೂ ಗೊತ್ತಿಲ್ಲ. ‘ತಾ’ ಅಂದರೆ ಈ ಕಡೆಯಿಂದ ಕೊಡುವುದು. ಅಂದರೆ “ತನಗೆ ಕೊಡು” ಎಂದು. ‘ತಾ’ ಎನ್ನುವುದು ವಂಶವಾಹಿನಿಯಿಂದಲೇ ಬಂದು ಬಿಟ್ಟಿದೆ. ಇದು ಲೋಕದಲ್ಲಿ ನಡೆಯುವ ರೀತಿ. ತನ್ನದು ತನಗೆ ಸಲ್ಲುವಂಥದ್ದು, ತನಗೆ ಸಲ್ಲುವಂಥದ್ದು ಅಲ್ಲ ಅಂಥದ್ದು ಎಲ್ಲವನ್ನೂ ಸ್ವೀಕರಿಸಲಿಕ್ಕೆ ಮನುಷ್ಯ ಬಾಯ್ದೆರೆದು ಕೈಯೊಡ್ಡಿ ಕುಳಿತಿರುತ್ತಾನೆ. ಸೆರಗು ಯಾವಾಗಲೂ ಒಡ್ಡಿ ಆಗ್ತದೆ ಸ್ವೀಕರಿಸಲಿಕ್ಕೆ. ಆದರೆ ತನ್ನನ್ನು ಅರಸಿ ಬಂದದ್ದನ್ನು, ಮಹಾಭಾಗ್ಯವನ್ನು ಇದು ತನ್ನದಲ್ಲ, ಸಲ್ಲುವವರಿಗೆ ಸಲ್ಲಲಿ ಎನ್ನುವ ಸುಚಿತ್ತ, ಸುಭಾವ ಯಾರಿಗೆ ಸ್ವಭಾವ ಎಂದರೆ ಭರತನಂತವರಿಗೆ. ತರ್ಕಬದ್ಧವಾಗಿ ತನ್ನಣ್ಣ, ವಾದದಲ್ಲಿಯೂ ಅಣ್ಣನೇ. ರಾಜ್ಯ ತನಗೆ ಬೇಡ ನಿನಗೇ ಇರಲಿ ಎಂದು ಮಂಡಿಸಿಯಾಗಿದೆ. ಏಕೆಂದರೆ ಆಸ್ತಿ ವಿಭಾಗ ಮಾಡುವ ಹಕ್ಕು ತಂದೆಯದ್ದು. ತಂದೆ ವಿಭಾಗ ಮಾಡಿ ಕೊಟ್ಟಾಗಿದೆ. ಕಾಡು ನನಗೆ ನಾಡು ನಿನಗೆ. ಅದನ್ನು ಬದಲಿಸಲು ನಾನು ನೀನು ಯಾರು. ವಿಭಾಗಿಸಿಕೊಟ್ಟಿದ್ದನ್ನು ಅನುಭವಿಸೋಣ. ನೀನು ಚಕ್ರವರ್ತಿಯಾಗು, ನಾನು ವನವಾಸಿಯಾಗಿ ಕಾಡಿನಲ್ಲಿ ಇರ್ತೇನೆ. ಎಂಬುದು ರಾಮ ಹೇಳಿದ್ದು.

ಇದಕ್ಕೆ ಭರತನ ಉತ್ತರ, “ದಶರಥನೇ ಕೊಡಲು ಹಕ್ಕುದಾರ. ಯಾರಿಗೆ ಬೇಕೋ ಅವರಿಗೆ ಕೊಡುವ ಹಕ್ಕು. ಅದು ಆಸ್ತಿ ಎಂದಾಗ ಕೆಲವು ಸಂಗತಿಗಳು ಬರುತ್ತವೆ. ಯಾರು ಯಾರಿಗೋ ಕೊಡುವ ಹಾಗಿಲ್ಲ. ಆಸ್ತಿಯನ್ನು ದಶರಥನು ಪಾಲುಮಾಡಿ ಕೊಡಬಹುದು. ನನಗೆ ರಾಜ್ಯದ ಪಾಲು ಬಂದಿದೆ. ನಿನಗೆ ಕಾಡಿನ ಪಾಲು ಬಂದಿದೆ. ಈಗ ನನಗೆ ಬಂದಿದೆಯೋ ಇಲ್ಲವೋ ರಾಜ್ಯ? ನನಗೆ ರಾಜ್ಯ ಬಂದಿದ್ದೇ ಹೌದಾದರೆ, ಅದರ ಮೇಲೆ ನನಗೆ ಹಕ್ಕಿದೆ. ಅದನ್ನು ತೆಗೆದುಕೊಂಡು ನಾನೇನಾದರೂ ಮಾಡಬಹುದು. ನನ್ನ ಪಾಲಿನ ಆಸ್ತಿಯನ್ನು ಅನುಭವಿಸಬಹುದು ಅಥವಾ ದೇವಸ್ಥಾನಕ್ಕೂ ಕೊಡಬಹುದು. ನನ್ನ ಹಕ್ಕು ಅಲ್ವಾ. ನನ್ನ ಪಾಲಿಗೆ ಬಂದ ರಾಜ್ಯವನ್ನು ನಿನಗೆ ಸಮರ್ಪಿಸುತ್ತೇನೆ. ಆ ಹಕ್ಕು ನನಗಿದೆ. ಸಮರ್ಪಣೆ ಮಾಡುವ ಹಕ್ಕು ನನಗಿದೆ. ಅಮ್ಮಾನಿಗೆ ಮಾಡುವ ಸಮಾಧಾನ ಆಗಿದೆ. ತಂದೆ ನನ್ನಮ್ಮನಿಗೆ ಸಾಂತ್ವಾನ ಮಾಡಿದ್ದೂ ಆಯಿತು, ರಾಜ್ಯವನ್ನೂ ಕೊಟ್ಟಿದ್ದೂ ಆಯಿತು. ಈ ರಾಜ್ಯವನ್ನು ನಾನು ನಿನಗೇ ಕೊಡುತ್ತೇನೆ. ಈ ರಾಜ್ಯವನ್ನು ನೀನಾಳು. ಒಂದು ಕಾರಣ.

ಎರಡನೇ ಕಾರಣ, ಇದು ನನ್ನಿಂದಾಗುವಂಥದ್ದಲ್ಲ. ನಾನು ಸುಧಾರಿಸುತ್ತೇನೋ ಇಲ್ಲವೋ ಎಂದು ನೋಡಬೇಕಲ್ಲ. ಯಾರಾದರೂ ಬಂದು ಶತಕೋಟಿ ರೂಪಾಯಿಯನ್ನು ಕೊಟ್ಟುಬಿಡಬಹುದು. ಅದನ್ನು ಇಟ್ಟುಕೊಳ್ಳುವ ಗಟ್ಟಿ ಎದೆ ನಮಗೆ ಇದೆಯೋ ಇಲ್ಲವೋ ಎಂದು ನೋಡಬೇಕಲ್ವಾ, ಕಡು ಬಡವನಿಗೆ ಆನೆಯನ್ನು ಕೊಡುಗೆಯಾಗಿ ಕೊಡುವುದು. ಇವನಿಗೇ ಹೊಟ್ಟೆಗಿಲ್ಲ, ಆನೆಗೆಲ್ಲಿಂದ ತರುತ್ತಾನೆ. ಅವನೇನು ಮಾಡಬೇಕು..! ಆನೆಯನ್ನು ಇನ್ಯಾರಿಗೋ ಕೊಡಬೇಕು, ನನ್ನ ಸ್ಥಿತಿ ಇದು. ಈ ಮಹಾರಾಜ್ಯವನ್ನು ಆದರಿಸಲು, ಆಳಲು ನನ್ನಿಂದಾಗದು. ದೊಡ್ಡ ಪ್ರವಾಹ ಬರ್ತಾ ಇದೆ, ಆಣೆಕಟ್ಟು ಒಡೆದಿದೆ. ಒಡೆದ ಆಣೆಕಟ್ಟಿಗೆ ಅಂಥಹ ಮಹಾ ಪ್ರವಾಹವನ್ನು ತಡೆದು ನಿಲ್ಲಿಸುವಷ್ಟು ಶಕ್ತಿ ಇದೆಯೇ..? ಇಲ್ಲ. ನಾನು ದುರ್ಬಲವಾದ ಆಣೆಕಟ್ಟು, ರಾಜ್ಯ ಎನ್ನುವುದು ಮಾಹಾರಾಜ್ಯ, ಮಹಾ ಪ್ರವಾಹ. ಹಿಡಿದು ನಿಲ್ಲಿಸುವ, ಧರಿಸುವ ಶಕ್ತಿ ನನಗಿಲ್ಲ. ಮತ್ತೆ ನೀನು ಮಾಡಿದ್ದನ್ನೆಲ್ಲ ನಾನು ಮಾಡಲಿಕ್ಕೆ ಸಾಧ್ಯವಿಲ್ಲ. ಉತ್ತಮಾಶ್ವ ಅನುಸರಿಸಿದ್ದನ್ನು ಕತ್ತೆ ಅನುಸರಿಸಲಿಕ್ಕೆ ಸಾಧ್ಯವೇ..? ನೀನು ಉತ್ತಮಾಶ್ವ, ನಿನ್ನ ಮುಂದೆ ಕತ್ತೆ ನಾನು. ಗರುಡನ ವೇಗವನ್ನು ಮತ್ತುಳಿದ ಪಕ್ಷಿಗಳು ಅನುಸರಿಸಲು ಸಾಧ್ಯವೇ..? ಗರುಡ ನೀನು, ನಾನೊಂದು ಸಾಮಾನ್ಯ ಪಕ್ಷಿಯಂತೆ. ಈ ಮಹತ್ಕಾರ್ಯಕ್ಕೆ ಮಹಾನುಭಾವರೇ ಆಗಬೇಕು. ಸಾಮಾನ್ಯನು ಮಹತ್ಕಾರ್ಯವನ್ನು ಮಾಡಲಿಕ್ಕೆ ಮುಂದಾದಾಗ ಸಾಧ್ಯವಾಗದೇ ಕುಸಿಯಬಹುದು. ನನ್ನಿಂದಾಗದು ಅದು. ನೀನೇನು ಹೇಳುತ್ತೀಯ ಅಂತ ಗೊತ್ತು, ಮಂತ್ರಿಗಳಿದ್ದಾರಲ್ಲ?. ಅಷ್ಟಮಂತ್ರಿಗಳು, ಅಷ್ಟಮಂತ್ರಿಗಳ ಮಕ್ಕಳು ಅಷ್ಟ. 8 ಗುರುಮಂತ್ರಿಗಳು, 8 ಅಮಾತ್ಯರು. ವಸಿಷ್ಠರೇ ಮೊದಲಾದ ಅಷ್ಟಗುರುಮಂತ್ರಿಗಳು, ಸುಮಂತ್ರನೇ ಮೊದಲಾಗಿರತಕ್ಕಂಥ ಅಷ್ಟಮಂತ್ರಿಗಳು ಅವರಿಗೆಲ್ಲ ಅನುಭವ ಇದೆ. ನೀನು ಕುಳಿತುಕೊಂಡರೆ ಸಾಕು, ಅವರು ನಡೆಸುತ್ತಾರೆ ಎಂದು ಹೇಳಬಹುದು. ನನಗಂಥಹ ಬದುಕು ಬೇಡ. ಹಾಗಂದರೆ ಇನ್ನೊಬ್ಭನನ್ನು ಅವಲಂಬಿಸಿ ಬದುಕುವಂತಹ ಬದುಕು ತುಚ್ಛವಾದುದು. ಆ ಬದುಕು ಪ್ರಾಶಸ್ತವಲ್ಲ. ನಮ್ಮನ್ನವಲಂಬಿಸಿ ಬೇರೆಯವರು ಬದುಕಬೇಕು. ಅಂಥಹ ಬದುಕು ಶ್ರೇಷ್ಠವಾದುದು. ಆದರೆ ನಾವು ಬೇರೆಯವರನ್ನವಲಂಬಿಸಿ ಬದುಕುವುದು ತುಚ್ಛ ಬದುಕು. ನಾನು ಹಾಗೆ ಬದುಕಲಾರೆ. ನನಗೆ ಸ್ವಂತ ಶಕ್ತಿಯಿದ್ದರೆ ರಾಜ್ಯಭಾರವನ್ನು ಮಾಡಬೇಕು ನಾನು. ಅದಿಲ್ಲದಿದ್ದರೆ ನಾನು ರಾಜ್ಯಭಾರವನ್ನು ಮಾಡಬಾರದು. ಅದಲ್ಲದೇ ಮಂತ್ರಿಗಳನ್ನಾಶ್ರಯಿಸಿ ರಾಜ್ಯಭಾರವನ್ನು ಮಾಡುವಂತೆ ಇಲ್ಲ. ಇನ್ನು ನೀನೇ ಗತಿ” ಎಂದನು ಭರತ.

ಒಂದು, ತಂದೆಯಿತ್ತ ರಾಜ್ಯವನ್ನು ನಾನು ನಿನಗೆ ಕೊಡುತ್ತೇನೆ. ಎರಡನೇಯದು, ನನ್ನಿಂದ ರಾಜ್ಯಭಾರವು ಸಾಧ್ಯವಾಗದ ಮಾತು. ಇದು ನಿನಗೇ ಸರಿ, ಮೂರನೇಯದು, ಅಪ್ಪ ಪಾಲು ಹಂಚಿ ನನಗೆ ರಾಜ್ಯ ಕೊಟ್ಟಿದ್ದು, ನಿನಗೆ ಕಾಡನ್ನು ಕೊಟ್ಟಿದ್ದು ಅಂತ ಹೇಳಿದೆಯಲ್ಲ ಅದು ಹಾಗಲ್ಲ. ಬಾಯಿ ಮಾತಿಂದ ತೋರಿಕೆಗೆ ಅಪ್ಪ ರಾಜ್ಯವನ್ನು ನನಗೆ ಕೊಟ್ಟಿರಬಹುದು. ಆದರೆ ಆತನ ಮನಸ್ಸೇನು ಎನ್ನುವುದು ಲೋಕಕ್ಕೆಲ್ಲ ಗೊತ್ತು. ಇಡೀ ಪ್ರಪಂಚಕ್ಕೆ ಗೊತ್ತು. ನಮ್ಮ ತಂದೆಗೆ ಇಡೀ ರಾಜ್ಯವನ್ನು ನಿನಗೇ ಕೊಡಬೇಕೆಂಬ ಅಭಿಪ್ರಾಯ ಇದ್ದಿತ್ತು. ಆತನ ಮಾತೇ ನಡೆದಿದ್ದರೆ, ಆತನ ಮನಸ್ಸೇ ನಡೆದಿದ್ದರೆ, ರಾಜ್ಯವು ಇಷ್ಟು ಹೊತ್ತಿಗೆ ನಿನ್ನ ಕೈಯಲ್ಲಿ ಇರುತ್ತಿತ್ತು. ರಾಜ್ಯವನ್ನು ನಿನಗೆ ಕೊಡದೇ ನನಗೆ ಕೊಟ್ಟರೆ ಅದಕ್ಕೆ ಅವನಿಚ್ಛೆ ಕಾರಣವಲ್ಲ. ಇಂದು ರಾಜನ ಮನಸ್ಥಿತಿ ಏನು ಎನ್ನುವುದು ಎಲ್ಲರಿಗೂ ಗೊತ್ತು, ಅದಿರಲಿ, ಹಿಂದಿನ ವಿಷಯ ಹೇಳುತ್ತೇನೆ.

ಒಂದು ಉದಾಹರಣೆಗೆ, ಒಬ್ಬ ಕೃಷಿಕ ಗಿಡ ನೆಡ್ತಾನೆ. ಅದಕ್ಕಿಂತ ಮೊದಲು ಸರಿಯಾದ ಭೂಮಿಯನ್ನು ಆಯ್ದುಕೊಂಡು, ಭೂಮಿಯನ್ನು ಮಟ್ಟಮಾಡಿ, ಹದಮಾಡಿ, ಉತ್ತು, ಬೇಲಿಕಟ್ಟಿ, ಬೀಜಹಾಕಿ, ನೀರುಹಾಕಿ ಎಲ್ಲ ಮಾಡುತ್ತಾನೆ. ಅದು ಬೆಳೆಯಲಿಕ್ಕೆ ಆರಂಭವಾಗುತ್ತದೆ. ಕೃಷಿಕನ ಕೃಷಿಯ ಫಲವಾಗಿ, ಆ ಬೀಜವು ಬೆಳೆದು, ಪಿಸಿಲೊಡೆದು, ಅಂಕುರವಾಗುತ್ತದೆ. ಅಂಕುರವು ಗಿಡವಾಗುತ್ತದೆ. ಗಿಡವು ಇನ್ನೂ ಬೆಳೆದು ಮರವಾಗಬೇಕು. ಮರವು ಹೆಮ್ಮರವಾಗಬೇಕು. ಬಹಳ ಪ್ರಯತ್ನ ಮಾಡಿ ವ್ಯಕ್ತಿ ಬೆಳೆಸಿರುತ್ತಾನೆ. ಗಿಡ್ಡ ವ್ಯಕ್ತಿತ್ವದವರು ಆ ಮರವನ್ನೇರುವ ಕನಸೇ ಕಾಣುವಂತಿಲ್ಲ. ಅಷ್ಟೆತ್ತರ ಬೆಳೆದಿರತಕ್ಕಂತ ಕೊಂಬೆಗಳು. ಅದೆಲ್ಲ ಮಾಡಿ, ಫಲ ಕೊಡದೇ ಇದ್ದರೆ ಆ ಕೃಷಿಕ ಎಲ್ಲಿ ಹೋಗಬೇಕು. ಅವನು ಮಾಡಿದ ಪ್ರಯತ್ನಕ್ಕೆ ಬೆಲೆಯೇನು….? ಫಲವೇನು..? ಅವನು ಹುತ್ತಿದ್ದು, ಬಿತ್ತಿದ್ದು, ನೀರು ಹಾಕಿದ್ದು, ಸಾರ ಹಾಕಿದ್ದು ಸುಳ್ಳಾ? ಎಷ್ಟೆಲ್ಲ ಮಾಡಿದಾನೆ ಅವನು. ಇದು ಬಹಳ ಚೆನ್ನಾಗಿ ಬೆಳೆದಿದೆ. ಆದರೆ ಅದನ್ನು ಯಾತಕ್ಕೋಸ್ಕರ ಬೆಳೆಸಲಾಯಿತೋ ಆ ಉದ್ದೇಶ ವಿಫಲವಾಯಿತು. ಇದು ಯಾವುದೋ ಮರದ ಕಥೆಯಲ್ಲ. ರಾಮನ ಕಥೆ. ನೀನೇ ಆ ಮಹಾವೃಕ್ಷ. ನಿನ್ನನ್ನು ನೆಟ್ಟು ಬೆಳೆಸಿದವನು ದಶರಥ. ಫಲ ಕೊಡುವುದೊಂದು ಬಾಕಿಯಿದೆ. ಅಂದರೆ, ನೀನು ರಾಜನಾಗುವುದೊಂದು ಉಳಿದಿದೆ. ಅಪ್ಪ ನಿನ್ನನ್ನು ಪಡೆದುಕೊಂಡಿದ್ದು ಯಾಕೆ? ಒಂದೊಂದು ಶಿಕ್ಷಣ ನೀಡುವಾಗಲೂ, ಒಂದೊಂದು ಬುದ್ಧಿಮಾತು ಹೇಳುವಾಗಲೂ, ಮತ್ತು ಬೇರೆಯವರಿಗೆ ನಿನ್ನ ಕುರಿತು ಒಳ್ಳೆಯ ಮಾತನ್ನು ಹೇಳುವಾಗಲೂ ಏನಿತ್ತು ಅಪ್ಪನ ಮನಸ್ಸಿನಲ್ಲಿ? ನೀನು ದೊರೆಯಾಗಬೇಕು ಅಂತ ತಾನೆ? ರಾಜ್ಯಪಾಲನೆ ಮಾಡಬೇಕು ಅಂತ ತಾನೆ..? ಈಗ ದಶರಥ ಕೃಷಿಕ, ಶ್ರೀರಾಮನೇ ಮಹಾವೃಕ್ಷ. ಪಟ್ಟಾಭಿಷೇಕದ ಏರ್ಪಾಡು ಹೂವು. ಅಲ್ಲಿಯವರೆಗೆ ಬಂದಿದೆ. ಹಣ್ಣು ಅಂದರೆ, ನೀನು ಮಾಡುವ ರಾಜ್ಯಪಾಲನೆ. ಅದನ್ನು ಮಾಡದೇ ಇದ್ದರೆ ಹೇಗೆ ಎಂದು ಇನ್ನೊಂದು ಯುಕ್ತಿಯನ್ನು ಮಾಡುತ್ತಾನೆ ಭರತ.

ಹಾಗಾಗಿ ನೀನು ಬರೇ ಮಾತನ್ನು ನೋಡಬಾರದು. ಅಪ್ಪನ ಮನಸ್ಸನ್ನು ನೋಡು. ಅಪ್ಪನ ಮನಸ್ಸೇನು ಎನ್ನುವುದು ನಿನಗೂ, ನನಗೂ, ಎಲ್ಲರಿಗೂ ಗೊತ್ತು ಇಲ್ಲಿ. ಬರೇ ವಾಕ್ಯವನ್ನು ಹಿಡಿದುಕೊಂಡು ಮಾತನಾಡುವುದಲ್ಲ. ಹಾಗಾಗಿ ನಮ್ಮ ಪೈಕಿಯಲ್ಲಿ ಸರ್ವಶ್ರೇಷ್ಠನಾಗಿರತಕ್ಕಂಥವನು ನೀನು. ವೃಷಭ ಎನ್ನುವ ಶಬ್ದವನ್ನು ಬಳಸ್ತಾನೆ ಭರತ ರಾಮನಿಗೆ. ವೃಷಭ ಎಂದರೆ ಶ್ರೇಷ್ಠ ಎನ್ನುವ ಭಾವ. ನೀನು ನಮ್ಮನ್ನು ದೊರೆಯಾಗಿ ಆಳದೇ ಇದ್ದರೆ, ಈ ಉಪಮೆ ನಿನಗೆ ಬಂತು ಅಂತ ತಿಳಕೊ. ಹಾಗಾಗಿ ಪಟ್ಟವೇರು, ನಮ್ಮನ್ನು ಆಳು” ಎಂದು ಭರತನು ಹೇಳಿದಾಗ ಎಲ್ಲರಿಗೂ ಮನವರಿಕೆಯಾಯಿತಂತೆ. ಭರತನ ಮಾತು ಅಲ್ಲಿ ಸೇರಿದ ಎಲ್ಲರಿಗೂ ಅರ್ಥವಾಯಿತು, ರಾಮನೊಬ್ಬನನ್ನು ಬಿಟ್ಟು. ಸೀತೆಗೂ ಮನವರಿಕೆಯಾಗಿದೆ. ಲಕ್ಷ್ಮಣನಿಗೂ ಮನವರಿಕೆಯಾಗಿದೆ. ಭರತನ ಮಾತನ್ನು ಕೇಳಿದಾಗ ಎಲ್ಲರಿಗೂ “ಇದೇ ಸರಿ” ಎಂದು ಅನ್ನಿಸಿತಂತೆ. ಹಾಗಾಗಿ ಮಹಾಮಂತ್ರಿಯಿಂದ ಆರಂಭ ಮಾಡಿ ಕುಂಬಾರರವರೆಗೆ ಎಲ್ಲರಿಗೂ ಅರ್ಥವಾಯಿತಂತೆ.

ಆಗ ರಾಮ ಭರತನನ್ನು ಗಮನಿಸುತ್ತಾನೆ, ಏನಪ್ಪ ಒಟ್ಟೂ ವಿಷಯ. ಈಗ ರಾಜ್ಯ ನಾನಾಳಿದರೇನು ನೀನಾಳಿದರೇನು, ನಿನಗೇನು ಕಷ್ಟ? ರಾಜ್ಯ ಅಣ್ಣನ ಕೈತಪ್ಪಿದೆ, ಹಾಗಾಗಬಾರದಿತ್ತು ಇಷ್ಟೇ ತಾನೇ ವಿಷಯ. ವನವಾಸವಾಗಿದೆ ಅಣ್ಣನಿಗೆ, ಹಾಗಾಗಬಾರದಿತ್ತು. ಅಗಲಿ ಬದುಕುವ ಯೋಗ ಬಂದುಬಿಟ್ಟಿದೆ ಹಾಗಾಗಬಾರದಿತ್ತು. ಇಷ್ಟೇ ತಾನೇ ಮೂಲವಿಷಯ. ನೀನೇನೇ ವಾದ ಮಂಡನೆ ಮಾಡು, ಏನೇ ಮಾತಾಡು. ಮೂಲ ತತ್ವ, ಮೂಲ ವಿಷಯ ಏನು, ಇದೇ ತಾನೆ. ಇಲ್ಲದಿದ್ದರೆ ನೀನಾಳಿದರೇನು ನಾನಾಳಿದರೇನು ರಾಜ್ಯವನ್ನು. ಅದಕ್ಕೆ ಉತ್ತರವಿದೆ. ತುಂಬಾ ಸಮಾಧಾನವಾಗಿ ಭರತನನ್ನು ಸಂತೈಸುತ್ತಾನೆ. ಅಣ್ಣ ತಮ್ಮ ಎಂದರೆ ತಮ್ಮ ನಿಲುವಿನ ಪಟ್ಟನ್ನು ಸಡಿಲಿಸೋದಿಲ್ಲ ಅವರು. ಗಟ್ಟಿಯಾಗಿ ನಿಂತಿರುತ್ತಾರೆ. ಪ್ರೀತಿ ಮಾತ್ರ ಕಡಿಮೆ ಮಾಡಿಕೊಳ್ಳುವುದಿಲ್ಲ. ಅವರಿಬ್ಬರೂ ವಿಷಯದಲ್ಲಿ ಒಂದಂಗುಲ ಹಿಂದಕ್ಕೆ ಬರುವವರಲ್ಲ. ಆದರೆ ಪ್ರೀತಿಯಲ್ಲಿ ಒಂದು ಚೂರೂ ಕಡಿಮೆಯಿಲ್ಲ. ಹಾಗಾಗಿ ವಿಲಪಿಸುತ್ತಿರುವ ಭರತನನ್ನು ಕುರಿತು ರಾಮ ಹೇಳಿದ್ದು ತತ್ವಕಥೆಯನ್ನು.

ಮೂಲ ವಿಷಯ ಇಷ್ಟೇ. ರಾಜ್ಯ ಕೈತಪ್ಪಿಹೋಗಿದೆ. ತಂದೆ ಮೃತನಾದ. ನಾಡಿನಿಂದ ಹೊರಹಾಕಬೇಕಾಯಿತು. ಇಷ್ಟಮಿತ್ರರಿಂದ ದೂರ ಹೋಗಬೇಕಾಯಿತು.. ಇದೆಲ್ಲ ಸಹಜ. ಈ ಲೋಕಕ್ಕೆ ಬಂದ ಮೇಲೆ ಇರುವಂಥದ್ದು. ನೀನು ಅದಕ್ಕೆಲ್ಲ ತುಂಬ ಚಿಂತೆ ಮಾಡಬೇಕಂತಿಲ್ಲ. ಅದೆಲ್ಲ ಆಗುವಂಥದ್ದು. ನೋಡು, ಈ ಲೋಕದಲ್ಲಿ ನಮ್ಮಿಚ್ಛೆ ನಡೆಯುವುದಿಲ್ಲ. ವಿಧಿಯಿಚ್ಛೆ ನಡೆಯುವಂಥದ್ದು. ಕಾಮಕಾರ, ನನಗೆ ಹೀಗಿಷ್ಟ, ಹೀಗೆ ನಡಿತೇನೆ ಅಂತ ಯಾರು ಹೇಳುವ ಹಾಗಿಲ್ಲ. ವಿಧಿಯ ಪ್ರಕಾರ ನಡೆಯುವಂಥದ್ದು. ಕೆಲವೊಂದು ಕಾಕತಾಳೀಯವಾಗಿ ನಾವು ಅಂದುಕೊಂಡದ್ದು ನಡೆಯುತ್ತದೆ. ಅಂದ ಮಾತ್ರಕ್ಕೆ ನಮ್ಮಿಚ್ಛೆ ನಡೆಯಿತು ಅಂತಲ್ಲ. ದೈವಿಚ್ಛೆ ನಮ್ಮಿಚ್ಛೆ ಎರಡೂ ಆಕಸ್ಮಿಕವಾಗಿ ಒಂದೇ ಆಗಿದ್ದರೆ, ಅದು ಫಲಿಸುತ್ತದೆ. ಹಾಗಾಗಿ ನಮ್ಮದೇನು ನಡೆಯುವುದಲ್ಲ. ಜೀವ ಪ್ರಭುವಲ್ಲ. ಹಾಗಾಗಿ ವಿಧಿಯು ನಮ್ಮನ್ನು ನಡೆಸುತ್ತದೆ. ದುಃಖ ಬರಬಾರದು ಎಂದು ಯಾಕೆ ನೀನು ಅಂದುಕೊಳ್ಳುತ್ತೀಯ? ಈ ವೃದ್ಧಿಗೆಲ್ಲ ಕ್ಷಯವೇ ಮುಕ್ತಾಯ. ಎಲ್ಲ ಉತ್ಥಾನಗಳು ಪತನದಲ್ಲಿ ಮುಕ್ತಾಯವಾಗುತ್ತದೆ. ಎಲ್ಲ ಸಂಯೋಗಗಳು ವಿಯೋಗದಲ್ಲಿ ಮುಕ್ತಾಯವಾಗುತ್ತದೆ. ಬದುಕು ಮರಣದಲ್ಲಿ ಮುಕ್ತಾಯವಾಗುತ್ತದೆ. ಇದು ಲೋಕಸ್ಥಿತಿ, ನೀನು ಯಾಕೆ ಅಳುತ್ತೀಯ. ಎಂದು ಪರಿಪರಿಯಾಗಿ ಲೋಕಸ್ಥಿತಿಯನ್ನ ರಾಮ ಭರತನಿಗೆ ಹೇಳುತ್ತಾನೆ.

ಇನ್ನೊಂದು ಉದಾಹರಣೆ ಕೊಡುತ್ತಾನೆ ರಾಮ. ಸಂಬಂಧಗಳ ಬಗ್ಗೆ ಇದು. ಮಹಾ ಸಮುದ್ರದ ಮಧ್ಯದಲ್ಲಿ ಒಂದು ಕಟ್ಟಿಗೆ ತುಂಡಿದೆ. ಸ್ವಲ್ಪ ದೂರದಲ್ಲಿ ಇನ್ನೊಂದು ಕಟ್ಟಿಗೆ ತುಂಡಿದೆ. ಅಲೆಯ ಹೊಡೆತದಿಂದ ಈ ಕಡೆ ಕಟ್ಟಿಗೆ ಆ ಕಡೆಗೆ ಸಾಗಿದೆ. ಆ ಕಡೆಯದು ಈ ಕಡೆಗೆ ಬಂದಿದೆ. ಅದು ಎರಡು ಸೇರಿಕೊಳ್ಳುತ್ತದೆ ಅಲೆಯ ಸಹಾಯದಿಂದ. ಹೀಗೆ ಸಂಬಂಧಗಳು ಸೇರಿಕೊಳ್ಳುವಂಥದ್ದು. ಮನುಷ್ಯ ಮನುಷ್ಯರು ಹೀಗೆ ಸೇರುತ್ತಾರೆ. ಪಟ್ಟವು ಎಲ್ಲ ಹೀಗೆ ಸಿಗುವಂಥದ್ದು. ಭವಸಾಗರ ಒಂದು ಕಡೆ ಇದೆ. ನಾವು ಇನ್ನೊಂದು ಕಡೆ ಇದ್ದೇವೆ. ಅಲೆಗಳ ಹೊಡೆತಕ್ಕೆ ಸೇರುವಂಥದ್ದು. ಅದು ಶಾಶ್ವತ ಅಲ್ಲ. ಇನ್ನೊಂದು ಸಮಯ ಬಂದರೆ, ಮತ್ತೊಂದು ಅಲೆ ಬಂತೆಂದರೆ ಇದು ಉತ್ತರಕ್ಕೆ ಅದು ದಕ್ಷಿಣಕ್ಕೆ. ಹೀಗೆ ನನಗೆ ರಾಜ್ಯ ಸಿಗಬೇಕು ಅಂದರೂ ಹೀಗೆ. ನಾನೊಂದು ಕಟ್ಟಿಗೆ, ರಾಜ್ಯವೊಂದು ಕಟ್ಟಿಗೆ. ಹತ್ತಿರ ಬಂದು ಸೇರಬೇಕು ಎನ್ನುವಾಗ ಅಲೆ ಬಂತು. ಅದು ಆ ಕಡೆಗೆ ಹೋಯಿತು. ನಾನೀಕಡೆಗೆ ಬಂದೆ. ಇಷ್ಟೇ. ನೀನ್ಯಾಕೆ ಕಷ್ಟಪಡ್ತೀಯೇ..? ನಾನು ಹಾಗೂ ರಾಜ್ಯದ ವಿಷಯ ಅಷ್ಟೇ ಅಲ್ಲ. ಎಲ್ಲ ಸಂಗತಿಯೂ ಹೀಗೆ ಇರುವಂಥದ್ದು. ಸೇರಿದರೂ ನಾಳೆ ಒಂದು ದಿನ ಬೇರೆಯಾಗುವಂಥದ್ದೇ ಅದು. ಯಾಕೇ ನೀನು ಅಷ್ಟು ಕಷ್ಟಪಡ್ತೀಯ? ಎಲ್ಲ ಸಂಬಂಧಗಳೂ ಹೀಗೆ. ನೀನು ನನಗೆ ರಾಜ್ಯ ಕೊಟ್ಟೆ ಅಂದುಕೋ, ರಾಜ್ಯ ಶಾಶ್ವತವೇನು? ಅಥವಾ ನಾನು ಶಾಶ್ವತವಾಗಿ ಇರ್ತೇನಾ? ಇಲ್ಲ ತಾನೆ. ಈಗ ಹೇಗಿದೆಯೋ ಹಾಗೆ ಇರಲಿ ಬಿಡು. ನೀನು ಯಾಕೆ ಅದರಲ್ಲಿ ಕೈಯಾಡಿಸೋದು ಅಂತ ವರ್ಣಿಸಿ, ತಂದೆಯ ಬಗ್ಗೆ ಮಾತಾಡುತ್ತಾನೆ. ದಶರಥನೂ ಹಾಗೆ ಇಷ್ಟು ದಿನ ಇದ್ದು, ಈಗ ಆ ಕಟ್ಟಿಗೆ ಬೇರೆ ಹೋಯಿತು. ಅದಕ್ಕೂ ಈ ಉದಾಹರಣೆ. ಧರ್ಮಾತ್ಮನಾದ ನಮ್ಮ ತಂದೆ ತಾನು ಮಾಡಿದ ಯಜ್ಞಯಾಗಾದಿಗಳಿಂದ ದೂತಪಾಪನಾಗಿ ಸ್ವರ್ಗವನ್ನು ಸೇರಿದ್ದಾನೆ. ಸರಿಯಾಗಿ ತನ್ನ ಸೇವಕರನ್ನು, ಪ್ರಜೆಗಳನ್ನು ನೋಡಿಕೊಂಡಿದ್ದಾನೆ. ನಾನೂ ಹಾಗೇ ಮಾಡಬೇಕೋ ಇಲ್ಲವೋ? ಅವನ ಮಗನಾಗಿ ಸಂಪತ್ತು ಧರ್ಮದಿಂದ ಬರಬೇಕು. ಆತನ ಧರ್ಮಾತ್ಮತ್ವದ ಫಲವಾಗಿ ತಂದೆ ಸ್ವರ್ಗವನ್ನು ಸೇರಿದ್ದು. ಉತ್ತಮ ಆಯಸ್ಸನ್ನು ಹೊಂದಿ, ಇಂದು ಸ್ವರ್ಗಸ್ಥ, ಶೋಕಾರ್ಹವಲ್ಲ. ಒಂದು ದೃಷ್ಟಿಯಿಂದ ಉನ್ನತಿಯದು. ದೇಹವು ಜೀರ್ಣವಾಗಿತ್ತು. ಮುಪ್ಪಡರಿದ ದೇಹ, ದಿವ್ಯ ಸುಖಗಳನ್ನು ನಮ್ಮ ತಂದೆ ಪಡೆದರೆ ನಾವು ಅಳಬಾರದು. ಈ ಶೋಕವನ್ನು ಬಿಡು. ಹೋಗಿ ಅಯೋಧ್ಯಾಪುರಿಯನ್ನಾಳು. ಹಾಗೇ ನಿನಗೆ ತಂದೆಯ ಅಪ್ಪಣೆಯಾಗಿದೆ. ನಾನೂ ಅಪ್ಪ ಹೇಳಿದ್ದನ್ನೇ ಕಾಡಿನಲ್ಲಿ ಮಾಡುತ್ತೇನೆ ಎಂದು ರಾಮನು ಹೇಳಿ ವಿರಮಿಸಿದನು. ಪಿತೃವಾಕ್ಯ ಪರಿಪಾಲನೆಗೆ ಪರಿಪೂರಕವಾಗಿದ್ದು, ಧರ್ಮವನ್ನೇ ಪರಿಪಾಲಿಸುವೆನೆಂದು ತೀರ್ಮಾನಿಸುತ್ತಾನೆ ರಾಮ.

ಇದಕ್ಕೆ ಭರತ, “ಅಣ್ಣ ನಿನ್ನಂಥವರು ಯಾರಿದ್ದಾರೆ ಹೇಳು, ನೀನೆಂಥವನೋ ಅಂಥವರೆಷ್ಟು ಪ್ರಪಂಚದಲ್ಲಿ. ದುಃಖಕ್ಕೆ ವಿಚಲಿತಗೊಳ್ಳದವ. ಸುಖವು ತೇಲಿಸಿ ಕೊಚ್ಚಿಕೊಂಡು ಹೋಗುವುದಿಲ್ಲ. ಹಿಗ್ಗು ಕುಗ್ಗುಗಳಿಲ್ಲದ, ಸಮತೋಲನದ ವ್ಯಕ್ತಿತ್ವ. ದೊರೆಯಾಗುವುದಾದರೆ ಇಂಥವರೆ ಆಗಬೇಕು. ಹಿಗ್ಗು ಕುಗ್ಗುಗಳಿಲ್ಲದವನು, ಸಮಚಿತ್ತನಾಗಿ ಸುಖ ದುಃಖಗಳನ್ನು ಬರಮಾಡಿಕೊಳ್ಳುವವನು ನೀನು. ಮೃತ್ಯುವು ಒಂದೇ ಬದುಕು ಒಂದೇ. ಇದ್ದರೂ ಒಂದೇ, ಇರದಿದ್ದರೂ ಒಂದೇ. ಇಂತಹ ಒಂದು ಮನಸ್ಸಿನ ಸ್ಥಿತಿ ಯಾರಿಗೆ ಇರುತ್ತದೋ ಅಂಥವನು ಜೀವನದಲ್ಲಿ ದುಃಖಪಡುವುದೆಲ್ಲಿಂದ! ಅವನು ಪರಿತಪಿಸುವುದಿಲ್ಲ ಎಂದು ಅಣ್ಣನನ್ನು ಪ್ರಶಂಸಿಸಿ, ತನ್ನ ಮೂಲ ಉದ್ದೇಶದ ಬಗ್ಗೆ ಮಾತಾಡುತ್ತಾನೆ ಭರತ. ನಾನಿಲ್ಲದಾಗ ನನಗಾಗಿ ಮಾಡಿದ ಕಾರ್ಯ ನನಗಿಷ್ಟವಿಲ್ಲದ್ದು. ಪ್ರಸನ್ನನಾಗು ನೀನು. ರಾಜ್ಯವನ್ನು ನನಗೆ ಕೊಡುವಾಗ ನನಗೊಂದು ಮಾತನ್ನು ಕೇಳಬೇಕೋ ಬೇಡವೋ? ತೆಗೆದುಕೊಳ್ಳುತ್ತೀಯಾ ? ಇದೇನು ಇಲ್ಲ. ವಿಷಯವೇ ಗೊತ್ತಿಲ್ಲದೇ ಕಾರ್ಯ ಮಾಡಬಾರದಲ್ಲ. ನನ್ನೊಪ್ಪಿಗೆಯಿದ್ದು ಮಾಡಿದ ಕೆಲಸವಲ್ಲವಿದು. ನನಗೆ ಆಕ್ರೋಶವಿದೆ. ಧರ್ಮಬಂಧನವಿರದಿದ್ದರೆ ನನ್ನಮ್ಮನನ್ನು ಭೂಮಿಯಲ್ಲಿ ಉಳಿಸುತ್ತಿರಲಿಲ್ಲ.ಇಕ್ಷ್ವಾಕು ವಂಶಕ್ಕೆ ಮಾಡಿದ ಅನಾಹುತಕ್ಕೆ ಈ ಅಪರಾಧಕ್ಕೆ ಆಕೆಗೆ ನೋವೋ ಸಾವೋ ಎರಡರಲ್ಲಿ ಒಂದಾಗುತ್ತಿತ್ತು. ಧರ್ಮಬಂಧದಿಂದ ಏನು ಮಾಡಲಾಗದೇ ಸುಮ್ಮನಿದ್ದೇನೆ. ಗುರುಸ್ಥಾನಗಳ ಪೈಕಿಯಲ್ಲಿ ತಂದೆಯೂ ಹೌದು. ಏನು ಮಾಡಲಾಗುವುದಿಲ್ಲ. ದೊರೆ, ವೃದ್ಧ, ಹೋದವರು, ತಂದೆಯನ್ನು ನಿಂದಿಸಬಾರದು. ಇಷ್ಟು ಪಾಶಗಳು ನನ್ನನ್ನು ಕಟ್ಟಿದೆ.

ಸಾಯುವ ಕಾಲದಲ್ಲಿ ಬುದ್ಧಿ ಕೆಡುತ್ತದೆ. ಅವಿವೇಕ ಬರುತ್ತದೆ ಎಂದೆಲ್ಲ ಹೇಳುತ್ತಾರೆ ಜನ. ಆದರೆ ಇಂದು ನಮ್ಮ ತಂದೆಯ ವ್ಯವಸ್ಥೆಯಲ್ಲಿ ಪ್ರತ್ಯಕ್ಷವಾಯಿತು. ಅಮ್ಮನ ಕ್ರೋಧಕ್ಕೆ ಹೆದರಿ ಅಥವಾ ಆಕೆಯ ಮೇಲಿನ ಮೋಹಕ್ಕೊಳಗಾಗಿ ಈ ಅನರ್ಥವನ್ನು ನಮ್ಮ ಅಪ್ಪ ಮಾಡಿದ್ದಾನೆ. ಮಗನಾಗಿ ಸರಿಪಡಿಸುವ ಜವಾಬ್ದಾರಿ ನಿನಗಿದೆ. ಒಂದು ಅನರ್ಥವಾಗಿದೆ, ಅದನ್ನು ಸರಿಪಡಿಸುವುದು ಹಿರಿಯ ಮಗನಾದ ನಿನ್ನ ಜವಾಬ್ದಾರಿ. ಕೊನೆಯದಾಗಿ, ನಿನಗೆ ಕೈಕೇಯಿಯ ಮೇಲೆ, ನನ್ನ ಮೇಲೆ, ಬಂಧು ಬಾಂಧವರ ಮೇಲೆ, ಈ ಪ್ರಜೆಗಳ ಮೇಲೆ, ಕೋಸಲ ರಾಜ್ಯದ ಪ್ರಜೆಗಳ ಮೇಲೆ ಪ್ರೀತಿ ಇದೆಯೋ ಇಲ್ಲವೋ, ಅವರೆಲ್ಲರನ್ನು ನೀನು ಕಾಪಾಡಬೇಕು ಅಂದರೆ ರಾಜ್ಯಭಾರವನ್ನು ಮಾಡಬೇಕು. ನೀನೇನಾದರೂ ಒಪ್ಪದಿದ್ದರೆ ಕೈಕೇಯಿಯ ಕಥೆಯೇನು. ಕೈಕೇಯಿಯ ಅಪವಾದವನ್ನು ತೊಳೆಯಬೇಕಲ್ಲ. ನನ್ನ ಮೇಲೆ ಬಂದ ಲೋಕೋಪವಾದವನ್ನು ತೊಳೆದು ಕೊಡು. ಇಷ್ಟೂ ಜನರ ಕಷ್ಟಗಳು ಒಂದೇಟಿಗೆ ಪರಿಹಾರವಾಗುತ್ತದೆ, ರಾಜ್ಯವ ಸ್ವೀಕರಿಸು. ಕ್ಷತ್ರಧರ್ಮ ನಿನಗೆ ಸಹಜ. ಜಟೆಯೆಲ್ಲಿ? ಕಿರೀಟವೆಲ್ಲಿ? ನಿನಗೆ ಸಹಜವಾದದ್ದನ್ನು ಮಾಡಬೇಕು. ಪ್ರತಿಯೊಬ್ಬನೂ ತನ್ನ ಸ್ವಾಭಾವಿಕವಾದದ್ದನ್ನು ಮಾಡಬೇಕು. ಕ್ಷತ್ರಿಯರ ಪ್ರಥಮ ಧರ್ಮ ಪ್ರಜಾಪಾಲನೆ. ರಾಜ್ಯಭಾರ, ಅನ್ನ, ವಿದ್ಯೆ, ಬಟ್ಟೆ ಇದನ್ನೆಲ್ಲ ಕೊಡಬೇಕು. ನಾಲ್ಕು ಅವಸ್ಥೆಗಳಲ್ಲಿ ಶ್ರೇಷ್ಠವಾದ ಆಶ್ರಮ ಗ್ರಹಸ್ಥಾಶ್ರಮ. ಅದನ್ನು ಬಿಡಕೂಡುದು. ದೊಡ್ಡವರಿರುವಾಗ ಚಿಕ್ಕವರು ರಾಜ್ಯಭಾರವನ್ನು ಮಾಡಬಹುದಾ? ನಾನ್ಯಾರು? ನೀನ್ಯಾರು? ಜ್ಞಾನ, ಪದವಿ, ಜನ್ಮವಿರಲಿ, ಮೂರರಲ್ಲಿಯೂ ನೀನು ಮೇಲಿರುವೆ. ನಾನು ಕಿರಿಯ. ನಾನು ಹೇಗೆ ರಾಜ್ಯಭಾರ ಮಾಡಲಿ? ನನ್ನಿಂದಾಗದು. ನೀನಿಲ್ಲದೇ ನನ್ನ ಬದುಕಿಲ್ಲ. ಹಾಗಾಗಿ ಇಲ್ಲಿಯೇ ಚಿತ್ರಕೂಟದಲ್ಲಿಯೇ ನಿನ್ನ ರಾಜ್ಯಾಭಿಷೇಕವಾಗಲಿ. ನನ್ನಮ್ಮನ ಅಪವಾದವನ್ನು ತೊಳೆ. ಅಪ್ಪನ ಪಾಪವನ್ನು ಕಳೆ. ಪಾದದಲ್ಲಿ ತಲೆಯಿಟ್ಟು ಬೇಡುತ್ತೇನೆ ಕರುಣೆದೋರು. ಮಹಾದೇವನೇ ಕೃಪೆ ತೋರಿಯಾನು. ನಿನ್ನ ಬಳಗದ ಮೇಲೆ ಕೃಪೆತೋರು ಎಂದು ಭರತನು ಅತ್ತೂ ಕರೆದು, ಕಾಡಿ ಬೇಡಿ, ಎಲ್ಲ ಮಾಡಿದರೂ ರಾಮನು ಪ್ರೀತಿ ತೋರಿಸಿದನೇ ಹೊರತು ರಾಜ್ಯವನಾಳಲಿಲ್ಲ.

ಭರತ ಕಾಲಿಗೆ ಬಿದ್ದು ಕಣ್ಣೀರಿಟ್ಟು ತಲೆಯಿಂದ ಬೇಡಿದನು. ಧರ್ಮಪಾಶ ರಾಮನನ್ನು ಬಂಧಿಸಿದೆ. ಜನರಿಗೆ ಅಪರಿಮಿತ ದುಃಖ ಸಂತಸವಾಯಿತು. ಅಯೋಧ್ಯೆಯ ರಾಜ್ಯಭಾರ ಮಾಡುವುದಿಲ್ಲವೆಂದು ದುಃಖವಾಯಿತು. ರಾಮನೆಂತಹ ಸ್ಥಿರಪ್ರತಿಜ್ಞ, ಎಷ್ಟು ದೃಢಮನದವನು ಎಂದು ಸಂತಸವಾಯಿತು.

ಆಗ ಎಲ್ಲರೂ ಪ್ರಯತ್ನಪಟ್ಟರು. ಬ್ರಾಹ್ಮಣೋತ್ತಮರು, ಮಂತ್ರಿಗಣಗಳು, ತಾಯಂದಿರು ಎಲ್ಲರೂ ರಾಮನಿಗೆ ಅಯೋಧ್ಯೆಗೆ ಬಾ ಎಂದು ಪರಿ ಪರಿಯಾಗಿ ಬೇಡಿಕೊಂಡರು. ಆಗ ರಾಮ, ” ನೋಡು ಭರತ, ನಾನು ಇದಕ್ಕೆ ಒಪ್ಪಬಾರದು. ಯಾಕೆಂದರೆ, ನಿನ್ನಲ್ಲಿ ದೋಷವನ್ನು ಹೊರಿಸುವುದಿಲ್ಲ ನಾನು. ಎಂಥಹ ಮಾತನ್ನಾಡಿದೆ. ಈ ಮಾತನ್ನು ನಿನ್ನನ್ನು ಬಿಟ್ಟು ಬೇರೆ ಯಾರೂ ಆಡಲಾರರು. ಇದು ನನ್ನ ನಿನ್ನ ಕಥೆಯಲ್ಲ. ನಾವು ಹುಟ್ಟುವದಕ್ಕಿಂತ ಮುಂಚೆಯ ಕಥೆ, ನಮ್ಮಿಬ್ಬರ ತಂದೆ ನಿನ್ನ ತಾಯಿಯನ್ನು ವರಿಸುವಾಗ ಅಜ್ಜನಾದ ಅಶ್ವಪತಿಗೆ ಒಂದು ಮಾತನ್ನಾಡಿದ್ದಿದೆ. ನಿನ್ನಜ್ಜನಿಗೆ ದಶರಥ ರಾಜ್ಯಶುಲ್ಕವನ್ನು ಮಾತನಾಡಿದ್ದಾನೆ. ಕೈಕೇಯಿಯಲ್ಲಿ ಹುಟ್ಟಿದವನಿಗೆ ರಾಜ್ಯ ಎಂದು ಆಗಲೇ ಮಾತಾಡಿ ಆಗಿದೆ. ಅಶ್ವಪತಿಗೆ ದಶರಥ ಆಡಿದ ಮಾತು ಹಾಗೂ ಕೈಕೇಯಿಗೆ ದಶರಥ ಕೊಟ್ಟ ವಚನಗಳು ಬಿಡದ ಕಟ್ಟಾಗಿ ಪರಿಣಮಿಸಿದೆ. ನೀನು ರಾಜ್ಯಾಭಿಷೇಕ ಮಾಡಿಕೊ. ಈ ಎರಡು ವಚನದಿಂದ ದಶರಥನನ್ನು ಋಣಮುಕ್ತನಾಗಿಸು. ತನ್ನ ತಂದೆತಾಯಿಯನ್ನು ಎಲ್ಲೆಡೆಯಿಂದ ಕಾಪಾಡುವವನು ಪುತ್ರ. ಪ್ರಭುವೇ, ನಮ್ಮಪ್ಪನನ್ನು ಕಾಪಾಡು. ಅಯೋಧ್ಯೆಗೆ ಹೋಗು ಎಂದನು. ರಾಜ್ಯಭಾರವನ್ನು ಮಾಡು..” ಎಂದನು ರಾಮ.

“ಭರತ, ಏನೂ ಬೇಜಾರು ಮಾಡಿಕೊಳ್ಳಬೇಡ. ನೀನು ರಾಜನಾಗು ಮನುಷ್ಯರಿಗೆ, ಅಯೋಧ್ಯೆಗೆ. ನಾನು ವನ್ಯಜೀವಿಗಳಿಗೆ ರಾಜನಾಗುತ್ತೇನೆ. ಕಾಡಿನಲ್ಲಿ ರಾಜ್ಯವಾಳುತ್ತೇನೆ ಎಂದನು. ಕಾಡಿನ ವೃಕ್ಷಗಳ ನೆರಳು ಶ್ವೇತಛತ್ರಕ್ಕಿಂತ ನೆರಳು ಕೊಡುವುದು. ನಾನು ಪರಮ ಸುಖವಾಗಿರುತ್ತೇನೆ. ನಿನ್ನೊಟ್ಟಿಗೆ ಶತ್ರುಘ್ನ, ನನ್ನೊಟ್ಟಿಗೆ ಲಕ್ಷ್ಮಣ. ನಾವು ನಾಲ್ಕೂ ಜನರು ಸೇರಿ ನಮ್ಮ ತಂದೆಯನ್ನು ವಚನಭ್ರಷ್ಟತೆಯಿಂದ ಕಾಪಾಡೋಣ, ಸತ್ಯವಚನನಾಗಿಸೋಣ” ಎಂದನು ರಾಮ.
ಬ್ರಾಹ್ಮಣೋತ್ತಮರು, ಜಾಬಾಲಿಗಳು ಮಾತನಾಡಿದರು, ” ರಾಮಾ, ಈ ಬುದ್ಧಿ ಬೇಡ, ಲೌಕಿಕವಾಗಿ ಅಪ್ರಯೋಜಕವಾದ ಯಾವ ಮಾತುಗಳೂ ಬೇಡ. ಬರೀ ನಾಸ್ತಿಕತ್ವ ಪ್ರಯೋಜನವಿಲ್ಲ. ಅಯೋಧ್ಯೆ ನಿನ್ನನ್ನು ಕಾಯ್ತಾ ಇದ್ದಾಳೆ. ಬಾ ಪಟ್ಟಾಭಿಷೇಕ ಮಾಡಿಕೋ. ದಶರಥ ನಿನಗೇನೂ ಆಗುವುದಿಲ್ಲ. ನೀನು ದಶರಥನಿಗೇನೂ ಅಲ್ಲ. ಧರ್ಮಕ್ಕಾಗಿ, ದುಡ್ಡಿಗಾಗಿ ಏನೂ ಮಾಡಬಾರದು. ಕಷ್ಟಪಡಬಾರದು. ಪಿತೃಕಾರ್ಯ ಇದೆಲ್ಲ ಸುಮ್ಮನೆ…! ದಾನವಶೀಕರಣಕ್ಕಾಗಿ ಬರೆದದ್ದು ಧರ್ಮ, ಪರಲೋಕವಿಲ್ಲ ಎಂದು ನಾಸ್ತಿಕತ್ವದ ಕುರಿತು ಮಾತನಾಡಿ, ರಾಜ್ಯವನ್ನು ಸ್ವೀಕರಿಸು ರಾಮಾ” ಎಂದರು. ಆಗ ರಾಮ, “ಜಾಬಾಲಿಗಳೇ, ನೀವ್ಯಾಕೆ ಇದನ್ನೆಲ್ಲ ಮಾತಾಡುತ್ತಿದ್ದೀರಿ ಎಂದು ತಿಳಿದಿದೆ. ಮರ್ಯಾದೆ ಎಂದರೆ ಚೌಕಟ್ಟು. ಅದು ಹೋಗುತ್ತದೆ. ಅದನ್ನು ಬಿಟ್ಟು ಬೇರೆಯಾವುದೂ ಇಲ್ಲ. ಚಿತ್ರಕ್ಕೆ ಚೌಕಟ್ಟಿಲ್ಲದಿದ್ದರೆ ಏನೂ ಚಂದವಲ್ಲ. ಪಾಪಾಚಾರದಿಂದ ಕೂಡಿದರೆ ಉಳಿದಿದ್ದೇನು..? ಇದು ಲೋಕಸಂಕರ. ನಿಮ್ಮ ಉಪದೇಶವನ್ನು ಕೇಳಿದರೆ ಯಾವ ಸ್ವರ್ಗಕ್ಕೆ ಹೋದೇನು? ರಾಜ್ಯ ಸಿಗ್ತದೆ ಎಂದರೆ ಸುಳ್ಳು ಹೇಳಬಹುದು ಎಂಬ ಸಿದ್ಧಾಂತಕ್ಕೆ ಬಂದರೆ ಎಲ್ಲಿ? ಲೋಕ ಉಳಿಯುವುದು ನಾಸ್ತಿಕರಿಂದಲ್ಲ, ಆಸ್ತಿಕರಿಂದ. ನಂಬಿಕೆಯಿಂದ ಪ್ರಪಂಚ ಉಳಿಯುವುದು, ನಂಬಿಕೆ ಒಂದು ಹೋದರೆ ಲೋಕ ಉಳಿವುದೆಲ್ಲಿ? ಪ್ರಜೆಗಳೆಲ್ಲ ನನ್ನನ್ನು ಪಾಲಿಸಿದರೆ, ಎಂತಹ ಪಾಪಕ್ಕೆ ಗುರಿಯಾಗುತ್ತೇನೆ ನಾನು!!. ಸತ್ಯವೇ ಕರುಣ, ಸತ್ಯವು ರಾಜವೃತ್ತ, ಸತ್ಯವು ಸನಾತನ. ಲೋಕವು ಸತ್ಯದ ಮೇಲೆ ನಿಂತಿದೆ. ಸತ್ಯವೇ ಧರ್ಮ. ಎಲ್ಲಕ್ಕೂ ಮೂಲ ಸತ್ಯ. ಸತ್ಯವೇ ಈಶ್ವರ. ಲಕ್ಷ್ಮಿ ಸತ್ಯದಲ್ಲೇ ನೆಲೆನಿಂತಿದಾಳೆ. ಇದು ಕಳಚಿದರೆ ಲೋಕವಿಲ್ಲ. ಸತ್ಯವನ್ನು ಬಿಟ್ಟು ಸುಳ್ಳಿಗೆ ಶರಣಾಗಿ ಪಡೆದುಕೊಳ್ಳುವುದಾದರೂ ಏನನ್ನು? ಎಲ್ಲವನ್ನೂ ಕಳೆದುಕೊಳ್ಳುತ್ತೇನೆ. ಲೋಭ, ಮೋಹ, ಅಜ್ಞಾನದಿಂದ ಸತ್ಯಪ್ರತಿಜ್ಞೆಯನ್ನು ಮೀರಲಾರೆ. ಹಾಗಾಗಿ ವನವಾಸವನ್ನೇ ಅನುಸರಿಸಿ ಲೋಕಯಾತ್ರೆಯನ್ನು ನಡೆಸುತ್ತೇನೆ” ಎಂದನು ರಾಮ. ಆಗ ಇದ್ದಕ್ಕಿದ್ದ ಹಾಗೆ ಸಿಟ್ಟು ಬಂದು, “ನಮ್ಮ ತಂದೆ ಯಾಕೆ ನಿಮ್ಮನ್ನು ಮಂತ್ರಿಯನ್ನಾಗಿ ಮಾಡಿಕೊಂಡರು? ಈ ಉಪದೇಶ ಮಾಡುವವರನ್ನು…! ನಂಬಿಕೆ ಹಾಳಾದರೆ ನೆಮ್ಮದಿಯಿಲ್ಲ.” ಎಂದು ರಾಮನು ಜಾಬಾಲಿಗಳ ಹತ್ತಿರ ಹೇಳಿದಾಗ, ಅವರು, ” ಹಾಗಲ್ಲ. ನಾಸ್ತಿಕನಲ್ಲ ನಾನು. ನೀನು ಯಾವ ಮಾತನ್ನೂ ಕೇಳದಿದ್ದಾಗ ಹೀಗೊಂದು ಪ್ರಯೋಗಿಸಿದೆ” ಎಂದರು. ಕ್ರುದ್ಧನಾದ ರಾಮನನ್ನು ವಸಿಷ್ಠರು ಸಂತೈಸಿದರು.

ಈಗ ಕುಲಗುರುಗಳು ವಸಿಷ್ಠರು ಭರತನನ್ನು ವಹಿಸಿಕೊಂಡು ರಾಮಾ ಬಾ ಎಂದಾಗ ರಾಮ ಏನೆನ್ನುವನು? ಗುರುಶಿಷ್ಯರ ಮಾತುಗಳೇನು? ಗುರುಗಳ ಮಾತನ್ನು ಮೀರಿ ಅಥವಾ ಅವರ ಮಾತನ್ನು ನಿಭಾಯಿಸಿ ಈ ಘಟ್ಟವನ್ನು ಹೇಗೆ ದಾಟುತ್ತಾನೆ ಎನ್ನುವುದನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments Box