ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ರಾಮಾಶ್ರಮದ ಪರಿಸರದಲ್ಲಿ ಚಿನ್ನದ ಜಿಂಕೆಯನ್ನು ಕಂಡ ಸೀತೆ ಚಕಿತಗೊಂಡಿದ್ದಾಳೆ.ಜಿಂಕೆಯ ಚೆಲುವು ಆಕೆಯನ್ನು ಮರುಳುಗೊಳಿಸಿದೆ. ರಾಮ ಲಕ್ಷ್ಮಣರನ್ನು ಬಳಿ ಕರೆದಿದ್ದಾಳೆ. ಮುಂದೆ ಆ ಜಿಂಕೆಯನ್ನು ತಂದುಕೊಡಿ ಎಂದು ಹೇಳುವವಳಿದ್ದಾಳೆ. ಆಗಲೇ ಲಕ್ಷ್ಮಣ ಜಿಂಕೆಯ ಸತ್ಯವನ್ನು ಬಯಲಿಗೆಳಿತಾನೆ. ಇದು ರಮಣೀಯವಾದ ಜಿಂಕೆಯಲ್ಲ, ಮರಣೀಯವಾದ ರಾಕ್ಷಸ. ಸಿದ್ಧಾಶ್ರಮದಲ್ಲಿ ರಾಮನ ಬಾಣದ ಪೆಟ್ಟನ್ನು ತಿಂದು ಶತಯೋಜನ ದೂರದ ಸಮುದ್ರದಲ್ಲಿ ಹೋಗಿ ಬಿದ್ದವನು, ವನವಾಸದ ಮಧ್ಯದಲ್ಲಿ ಮತ್ತೆ ಮೃಗವಾಗಿ ನಮ್ಮ ಮೇಲೆ ಆಕ್ರಮಣ ಮಾಡಲು ಬಂದು ಪುನಃ ರಾಮನ ಬಾಣದ ರುಚಿಯನ್ನು ಕಂಡು ಹೇಗೋ ಬದುಕಿ ಪಲಾಯನ ಮಾಡಿದವನು. ಅದೇ ಮಾರೀಚ ಮತ್ತೊಮ್ಮೆ ಮೃಗವಾಗಿ ಬಂದು ನಮ್ಮೆದುರು ನಿಂತಿದ್ದಾನೆ.

ಯಾವ ಉಪಕರಣದ ಸಹಾಯವಿಲ್ಲದೇ, ಯಾವ ಚರ್ಚೆಯ ಸಂದರ್ಭವಿಲ್ಲದೇ ನೇರಾ ನೇರ ಲಕ್ಷ್ಮಣ ಅದರ ಸತ್ಯವನ್ನು ಬಯಲಿಗೆಳೀತಾ ಇದ್ದಾನೆ. ಲಕ್ಷ್ಮಣನ ಕೈಯಲಿ ಆಯುಧ ಇದೆ. ಅವನನ್ನ ಯಾರೂ ತಡೆಯುವವರು ಇಲ್ಲದೇ ಇದ್ರೆ ಮುಂದಿನ ಕ್ಷಣದಲ್ಲಿ ಆಯುಧ ಪ್ರಯೋಗ ಆಗ್ತದೆ ಜಿಂಕೆಮೇಲೆ.
ಸೀತೆಯು ತಡೆದಳು ಲಕ್ಷ್ಮಣನನ್ನು. ಸುಮ್ಮನಿರೆಂದು ಅವನ ಮಾತನ್ನೇ ನಿಲ್ಲಿಸಿದಳು. ರಾಮನನ್ನು ಕುರಿತು ಸೀತೆ ಹೇಳ್ತಾಳೆ. ಆರ್ಯಪುತ್ರ, ಈ ಮೃಗವು ಮನೋಜ್ಞವಾಗಿದೆ. ಈ ಮೃಗವನ್ನು ತಂದುಕೊಡು ನನಗೆ. ಇದು ನಮ್ಮ ವಿಹಾರಕ್ಕೆ ಸಾಧನವಾದೀತು. ನಮ್ಮಾಶ್ರಮದ ಸುತ್ತ ಅನೇಕ ಮೃಗಗಳು ಸಂಚರಿಸುತ್ತವೆ. ಆದರೆ ಈ ಮೃಗದ ಸೊಬಗು ಅವ್ಯಾವುದಕ್ಕೂ ಇಲ್ಲ. ಯಾಕೆಂದರೆ ಇದು ನಕಲಿ.

ಯಾವಾಗಲೂ ಅಸಲಿಗಿಂತ ನಕಲಿಯೇ ಬಹಳ ಚೆನ್ನಾಗಿ ಕಾಣುತ್ತದೆ. ಆದರೆ ಅಸಲಿಯೇ ಜೀವಕ್ಕೆ ಹಿತ.

ಇಂಥ ಸುಂದರ ಮೃಗವನ್ನು ಹಿಂದೆಲ್ಲಿಯೂ ಕಂಡಿಲ್ಲ. ಒಂದು ವೇಳೆ ಜೀವಂತ ಸಿಕ್ಕಿದರೆ ಅದ್ಭುತ. ನಾವು ವನವಾಸ ಪೂರೈಸಿ ಅಯೋಧ್ಯೆಗೆ ಮರಳಿ ಹೋದಾಗ ಅಂತಃಪುರದ ಅಲಂಕಾರವಾಗಿರಲಿ ಈ ಜಿಂಕೆ. ಭರತ ಮತ್ತು ತಾಯಂದಿರು ಚಕಿತಗೊಳ್ತಾರೆ ಈ ಜಿಂಕೆಯನ್ನು ನೋಡಿ. ಒಂದು ವೇಳೆ ಯಾವುದೋ ಕಾರಣಕ್ಕೆ ಹಾಗೇನಾದರೂ ಆಗಲಿಲ್ಲ ಎಂದರೆ ಇದರ ಚರ್ಮ ಮಾತ್ರವೇ ಲಭಿಸಿದರೂ ಈ ಚರ್ಮ ಅತ್ಯದ್ಭುತವಾಗಿದ್ದು ಎಂದು ಹೇಳಿ ಈ ರೀತಿಯಾಗಿ ಒತ್ತಾಯ ಮಾಡುವುದು ಸರಿಯಲ್ಲ ಆದರೆ ಈ ಜಿಂಕೆಯ ಸೌಂದರ್ಯ ನನಗೆ ಆ ರೀತಿ ಮಾತನಾಡುವಂತೆ ಪ್ರೇರೇಪಿಸ್ತಿದೆ ಎಂದು ರಾಮನ ಮುಂದೆ ಹೇಳಿದಳು. ರಾಮನಿಗೂ ಆ ಮೃಗವನ್ನು ಕಂಡಾಗ ಆಶ್ಚರ್ಯ ಎನಿಸಿತಂತೆ, ಅವನಿಗೂ ಬೇಕು ಎನಿಸಿತಂತೆ. ಸೀತೆ ಲಕ್ಷ್ಮೀ ಸ್ವರೂಪಿಣಿ. ಆದ್ದರಿಂದ ಮಾರೀಚ ಲಕ್ಷ್ಮೀ ಸಮರ್ಪಣೆಯ ರೂಪದಲ್ಲಿ ಬಂಗಾರದ ಜಿಂಕೆಯಾಗಿ ಬಂದಿದ್ದಾನೆ.

ಆಗ ರಾಮ ಲಕ್ಷ್ಮಣನಿಗೆ ಹೇಳ್ತಾನೆ. ನೋಡು ಲಕ್ಷ್ಮಣ, ವೈದೇಹಿಯ ಆಸೆಯನ್ನು ನೋಡು. ಮೃಗದ ರೂಪವೇನೋ ಅದ್ಭುತ. ನನಗನ್ನಿಸುತ್ತಿದೆ ಇದರ ರೂಪವೇ ಇದಕ್ಕೆ ಮೃತ್ಯು. ತನ್ನ ರೂಪದಿಂದಲೇ ಈ ಮೃಗವು ನಾಶವಾದೀತು. ಆದರೆ ಚಂದವಂತೂ ಹೌದು.
ಸ್ವರ್ಣಮೃಗದ ಈ ರೂಪವನ್ನು ಕಂಡ ಯಾರ ಮನಸ್ಸು ತಾನೆ ಚಕಿತಗೊಳ್ಳದೇ ಇದ್ದೀತು.

ಸಂಸ್ಕೃತದಲ್ಲಿ ಅರ್ಥ ಎಂದರೆ ಸಂಪತ್ತು. ಅರ್ಥಿ ಎಂದರೆ ಸಂಪತ್ತನ್ನು ಬಯಸಿದವನು. ಆತ ಹೆಚ್ಚು ವಿಚಾರ ಮಾಡದೇ ಕಾರ್ಯಕ್ಕೆ ಮುಂದಾಗ್ತಾನೆ. ಸೀತೆಯ ಸ್ಥಿತಿ ಅಂತದ್ದು ಇಲ್ಲಿ.

ರಾಮ ಹೇಳ್ತಾನೆ. ಸಿಕ್ಕಿದರೆ ಈ ಮೃಗದ ಚರ್ಮ ಸಿಕ್ಕೀತು. ಸೀತೆ ನನ್ನೊಡನೆ ಇದರ ಮೇಲೆ ಕುಳಿತು ಉಪಾಸನೆ ಮಾಡಬಹುದು. ಕಾದಲೀ, ಪ್ರಿಯಕಿ, ಪ್ರವೇಣಿ, ಆವಕಿ ಇದೆಲ್ಲವನ್ನೂ ನೀವಾಳಿಸಬೇಕು ಇದರ ಮುಂದೆ. ಎರಡು ಮೃಗಗಳು ಲಕ್ಷ್ಮಣ, ಗಗನಮೃಗ ಅಂದರೆ ಮೃಗಶಿರಾ, ಚಂದ್ರ ಎಂಬ ಹೆಸರನ್ನು ಪಡೆದಿದ್ದು ಅದೂ ಕೂಡ ಜಿಂಕೆಯ ರೂಪವನ್ನೇ ಹೊಂದುತ್ತದೆ. ಇನ್ನು ನೀನು ಹೇಳುತ್ತಿರುವಂತೆ ಮಾರೀಚನೆ ಈ ರೂಪವನ್ನು ಹಾಕಿಕೊಂಡು ಬಂದಿರುವುದಾದರೆ ನನಗೀಗ ಇವನ ಹಿಂದೆ ಹೋಗುವುದು ಕರ್ತವ್ಯ. ಈ ಬಾರಿ ಇವನನ್ನು ಮುಗಿಸುವಂಥದ್ದು ನನಗೆ ಕರ್ತವ್ಯ. ಸೀತೆಯ ಮತ ಇದು ಚೆಲುವಾದ ಜಿಂಕೆ ಬೇಕು ನನಗೆ ಎಂಬ ಅಪೇಕ್ಷೆಯಿದೆ. ಲಕ್ಷ್ಮಣನ ಮತ ಇದು ಮಾರೀಚ. ನಿಮ್ಮಿಬ್ಬರ ಮತದಲ್ಲಿ ಯಾರ ಮತವನ್ನು ಸ್ವೀಕರಿಸಿದರೂ ನಾನು ಈ ಜಿಂಕೆಯ ಹಿಂದೆ ಹೋಗುವುದು ಸರಿಯಾಗ್ತದೆ. ಸೀತೆಯ ಮತವೇ ಹೌದಾದರೆ ತಗೊಂಡು ಬರ್ತೇನೆ ಜಿಂಕೆಯನ್ನು, ಲಕ್ಷ್ಮಣನ ಮತವೇ ಹೌದಾದರೆ ಇವನ ವಧೆಯಾಗ್ತದೆ. ಹೋಗಬೇಕಿರುವುದು ಕರ್ತವ್ಯ ತಾನೇ? ಎಂದು ಹೇಳಿ ಹೆಚ್ಚು ಕಡಿಮೆ ಲಕ್ಷ್ಮಣನ ನಿಲುವಿಗೇ ಬಂದುಬಿಡ್ತಾನೆ. ಈ ದುಷ್ಟ ಮಾರೀಚ ಎಷ್ಟು ಮುನಿಗಳನ್ನು ಹಿಂಸಿಸಲಿಲ್ಲ, ರಾಜರ್ಷಿಗಳನ್ನು ಕೊಲ್ಲಲಿಲ್ಲ. ಮಾರೀಚನೇ ಆದರೆ ನಾನು ಕೊಲ್ಲಲೇಬೇಕು ಇವನನ್ನು ಎಂದು ಹೇಳಿ ವಾತಾಪಿಯ ಕಥೆಯನ್ನು ಹೇಳಿ ಇವನು ಮೃಗದ ರೂಪವನ್ನು ತಾಳಿ ನನ್ನೆದುರು ಬಂದಿದ್ದೇ ಆದರೆ ಅಗಸ್ತ್ಯರು ವಾತಾಪಿಗೆ ಮಾಡಿದ್ದನ್ನೇ ನಾನು ಇವನಿಗೆ ಮಾಡ್ತೇನೆ ಎಂದು ಹೇಳ್ತಾನೆ. ಅದಿರಲಿ, ನಿನಗೆ ಕರ್ತವ್ಯವಿದೆ ಲಕ್ಷ್ಮಣ, ಆಶ್ರಮದ ಪರಿಸರದಲ್ಲಿ ಸರ್ವಸನ್ನದ್ಧನಾಗಿ ಪರಮಜಾಗೃತನಾಗಿ ಇಲ್ಲಿರಬೇಕು. ನಿನ್ನ ಮನಸ್ಸಿನ ಮೇಲೆ ನಿನಗೆ ನಿಯಂತ್ರಣ ಇರಬೇಕು. ಮೈಥಿಲಿಯನ್ನು ರಕ್ಷಿಸು ಎಂಬುದಾಗಿ ಹೇಳಿ ನಮ್ಮಿಂದ ಮುಂದೆ ಆಗಬೇಕಾದ ಮಹತ್ಕಾರ್ಯವು ಇವಳನ್ನವಲಂಬಿಸಿದೆ. ನಮ್ಮ ಎನ್ನುವಾಗ ಧ್ವನಿ ಸ್ಪಷ್ಟ. ಇದು ರಾಮನ ಅವತಾರ ಕಾರ್ಯಕ್ಕೆ ಸಂಬಂಧಪಟ್ಟದ್ದು.

ನಾನು ಈ ಮೃಗವನ್ನು ವಧಿಸ್ತೇನೆ ಅಥವಾ ಹಿಡಿತೇನೆ. ಈ ಚರ್ಮದಿಂದಾಗಿ ಈ ಮೃಗವು ಉಳಿಯುವುದಿಲ್ಲ ಎಂದು ಹೇಳಿ ಲಕ್ಷ್ಮಣ ನೀನು ಯಾವುದೇ ಕಾರಣಕ್ಕೆ ಪ್ರಮಾದಕ್ಕೆ ಎಡೆಗೊಡದಿರು. ಒಂದು ಕ್ಷಣವೂ ಮೈಮರೆಯದಿರು, ನೀನು ಆಶ್ರಮದಲ್ಲಿಯೇ ಇರಬೇಕು. ಆಶ್ರಮವನ್ನು ಬಿಟ್ಟು ಹೊರಬರಕೂಡದು. ಸೀತೆಯನ್ನು ಬಿಟ್ಟಲುಗಕೂಡದು. ಆಜ್ಞೆ ಸ್ಪಷ್ಟ. ಒಂದು ವೇಳೆ ರಾಮ ಸ್ವರ್ಣಮೃಗದ ಹಿಂದೆ ಹೋದರೆ ಯಾವ ಸಮಸ್ಯೆಯೂ ಇರಲಿಲ್ಲ. ಮಾರೀಚನ ವಧೆಯಾಗ್ತಿತ್ತು ಅಷ್ಟೇ ಇನ್ನೇನು ಆಗ್ತಿರಲಿಲ್ಲ. ಆದರೆ ಈ ಮಾತನ್ನು ಲಕ್ಷ್ಮಣ ಪಾಲನೆ ಮಾಡದೇ ಇದ್ದಿದ್ದರಿಂದ, ಸೀತೆ ಪಾಲನೆ ಮಾಡಲು ಬಿಡದೇ ಇದ್ದಿದ್ದರಿಂದ ತೊಂದರೆಗಳು ಬಂದಿದ್ದೇ ಹೊರತು ರಾಮ ನುಡಿದಂತೆ ಇವರು ನಡೆದಿದ್ದರೆ ಯಾವ ಸಮಸ್ಯೆಯೂ ಇರಲಿಲ್ಲ.

ಮತ್ತೆ ಹೇಳ್ತಾನೆ ರಾಮ ಒಂದು ಬಾಣದಿಂದ ಈ ಮೃಗವನ್ನು ಸಂಹರಿಸ್ತೇನೆ. ಜಿಂಕೆಯೆಂದರೆ ಮೂವರಿಗೂ ಪ್ರೀತಿಯೇ ಆದರೆ ಇಲ್ಲಿ ಮಾತ್ರ ನಿಖರವಾಗಿ ಹೇಳ್ತಾನೆ ರಾಮ ಒಂದೇ ಬಾಣದಿಂದ ಸಂಹರಿಸ್ತೇನೆ. ಸಿಕ್ಕಿದರೆ ಆ ಚರ್ಮವನ್ನು ತೆಗೆದುಕೊಂಡು ಹಿಂದಿರುಗಿ ಬರ್ತೇನೆ ಎಂಬುದಾಗಿ ಹೇಳಿ ಕೊನೆಯ ವಾಕ್ಯವನ್ನ ಹೇಳ್ತಾನೆ. ಲಕ್ಷ್ಮಣ, ನೀನು ಅತ್ಯಂತ ಸಮರ್ಥನಾಗಿರುವ, ಕಾರ್ಯದಕ್ಷನಾದ, ಅತಿಬಲನಾದ, ಬುದ್ಧಿವಂತನಾದ ಜಟಾಯುವಿನೊಡನೆ ಸೀತೆಯನ್ನಿರಿಸಿಕೊಂಡು ಅಪ್ರಮತ್ತನಾಗಿರು ಎಂಬುದಾಗಿ ಹೇಳಿ ಪ್ರತಿಕ್ಷಣವೂ ಎಲ್ಲೆಡೆಯಿಂದಲೂ ನೀನು ಶಂಕಿತನಾಗಿರಬೇಕು ಎನ್ನುವಾಗ ಆಪತ್ತು ಹತ್ತಿರವಿದೆ ಎಂಬ ಭಾವ ಸ್ಪಷ್ಟ. ಲಕ್ಷ್ಮಣನಿಗೆ ಇಷ್ಟೆಲ್ಲ ಆಜ್ಞೆ ಮಾಡಿ ರಾಮನು ಚಿನ್ನದ ಹಿಡಿಯ ಖಡ್ಗವನ್ನು ಸೊಂಟಕ್ಕೆ ಕಟ್ಟಿ, ತನ್ನ ಮಹಾಧನುಸ್ಸನ್ನು ಸ್ವೀಕರಿಸಿ, ಬತ್ತಳಿಕೆಗಳೆರಡನ್ನೂ ಬೆನ್ನಿಗೆ ಬಿಗಿದನು. ಧನುಸ್ಸೆಂಬುದು ರಾಮನಿಗೆ ಕೇವಲ ಆಯುಧ ಮಾತ್ರವಲ್ಲ, ಆಭರಣವೂ ಹೌದು.

ರಾಮನು ಜಿಂಕೆಯ ಕಡೆಗೆ ಹೊರಟನು. ಹಿಡಿಯುವುದು ಸುಲಭವಾಗಿದ್ದರೆ ಇಷ್ಟೆಲ್ಲ ತಯಾರಿ ಬೇಕೆಂದಿಲ್ಲ ಇಲ್ಲಿಯೇ ಹಿಡಿಯಬಹುದು. ಆದರೆ ರಾಮನ ಆಯುಧಗಳ ಕಟ್ಟಿ ಹೊರಟ ರೀತಿ ಅದುದೂರದವರೆಗೆ ಹೋಗುವ ತಯಾರಿಯಿದೆ ಎಂಬದು ಸ್ಪಷ್ಟ. ಮಾಮೂಲಿ ಜಿಂಕೆಯಾದರೆ ಇಷ್ಟೆಲ್ಲ ತಯಾರಿ ಬೇಕಾಗುವುದಿಲ್ಲ. ತನ್ನೆಡೆಗೆ ಧಾವಿಸಿಬರುವ ರಾಮನನ್ನು ಕಂಡ ಆ ಮೃಗ ರೂಪಿಯಾದ ಮಾರೀಚನು ರಾಮನನ್ನು ವಂಚಿಸ್ತಾ ಅಂತರ್ಧಾನನಾಗ್ತಾನೆ. ಯಾಕೆ ಅಂದರೆ ಭಯವಾಯಿತು ಮಾರೀಚನಿಗೆ ಹಾಗಾಗಿ ಮಾಯವಾಗ್ತಾನೆ. ಮತ್ತೆ ಕೆಲ ಸಮಯದ ಬಳಿಕ ಪ್ರತ್ಯಕ್ಷನಾಗ್ತಾನೆ. ಸ್ವಲ್ಪ ದೂರದಲ್ಲಿ ಪ್ರಕಟವಾದ. ಧನುಸ್ಸನ್ನು ಖಡ್ಗವನ್ನು ಹಿಡಿದು ಧಾವಿಸ್ತಾನೆ ರಾಮ. ಮುಂದೆ ಕಾಣ್ತಾಯಿದೆ ಧನುಷ್ಪಾಣಿಯಾದ ರಾಮನನ್ನ ನೋಡಿ ನೋಡಿ ಓಡ್ತಾ ಇದೆ. ರಾಮ ಈಗ ಬಾಣ ಪ್ರಯೋಗ ಮಾಡ್ತಾನೆ ಅಂತ ಅನಿಸಿದ ಕೂಡಲೆ ಭಯವಾಗಿ ಮಾರೀಚ ನೆಗೆಯುತಾನೆ. ನೋಡಿದರೆ ಗಾಳಿಯಲ್ಲಿ ಹಾರುವಂತೆ. ಕಂಡು ಕಾಣದಂತೆ, ಕಾಣದೆಯೂ ಕಾಣುವಂತೆ ಎರಡೂ ಅವಸ್ಥೆಗಳಲ್ಲಾ ಆ ಕಾಡಿನ ಪ್ರದೇಶಗಳಲ್ಲಿ ಮಾರೀಚ ಆಟವಾಡಿಸಿದನು. ಹೀಗೆ ದರ್ಶನಾದರ್ಶನಗಳ ಮೂಲಕ ರಾಮನನ್ನು ಆಶ್ರಮದಿಂದ ಬಹುದೂರ ಕೊಂಡೊಯ್ದ. ರಾಮನು ಕ್ರುದ್ಧನಾದನು. ಬಳಲಿ ಕೆಲಕ್ಷಣ ಎಳೆಹುಲ್ಲಿನ ಮೇಲೆ ನೆರಳಿನಲ್ಲಿ ಕುಳಿತುಕೊಳ್ತಾನೆ ರಾಮ. ಮತ್ತೆ ಗೋಚರಿಸಿತು ಮೃಗ. ಉಳಿದ ಜಿಂಕೆಗಳ ಜೊತೆಯಲ್ಲಿ ಹತ್ತಿರದಲ್ಲಿ ಗೋಚರಿಸಿತು. ಹಿಡಿಯ ಹೊರಟ ರಾಮ ಮತ್ತೆ ದೂರ ಓಡಿತು. ಭಯಾಧಿಕ್ಯದಿಂದ ಮಾರೀಚನು ಮಾಯವಾದನು. ಹೀಗಾಗಿ ಸ್ವಲ್ಪ ಸಮಯದ ಬಳಿಕ ಮತ್ತೆ ಮರದ ಬಳಿ ಕಾಣಿಸಿಕೊಂಡಾಗ ಇನ್ನು ಸಾಕು ಎಂಬ ನಿಶ್ಚಯವನ್ನ ರಾಮ ಮಾಡ್ತಾನೆ. ಹಿಡಿಯುವ ಇಚ್ಛೆಯನ್ನು ಬಿಟ್ಟು ಕೊಲ್ಲುವ ನಿಶ್ಚಯವನ್ನು ಮಾಡಿದ ರಾಮನು ಬತ್ತಳಿಕೆಯಿಂದ ಶರವನ್ನು ಹೊರತೆಗೆದನು. ಆ ಶರವು ಸೂರ್ಯರಶ್ಮಿಯಂತೆ ಇತ್ತು. ಶತ್ರುಸಂಹಾರಿಯಾದ ರಾಮನು ಆ ದೃಢವಾದ ಧನುಸ್ಸಿನಲ್ಲಿ ಬಾಣವನ್ನು ಹೂಡಿ ಬಲವಾಗಿ ಸೆಳೆದು ಮೃಗಕ್ಕೆ ಗುರಿಯಿಟ್ಟಿದಾನೆ. ಆ ಬಾಣವು ಬುಸುಗುಡುವ ಸರ್ಪದಂತಿತ್ತು. ಬ್ರಹ್ಮನಿರ್ಮಿತವಾದ ಅಗ್ನಿಯುಗುಳುವ ಆ ಅಸ್ತ್ರವನ್ನು ರಾಮ ಪ್ರಯೋಗಿಸ್ತಾನೆ. ಸಾಧಾರಣ ಜಿಂಕೆಗೆ ಬ್ರಹ್ಮನಿರ್ಮಿತವಾದ ಅಸ್ತ್ರದ ಪ್ರಯೋಗ ಬೇಕಿಲ್ಲ. ಪ್ರಯೋಗ ಮಾಡಬಾರದು ಎಂಬ ನಿಯಮವೂ ಇದೆ. ಇನ್ನೊಂದು, ಆ ಬಲಶಾಲಿಯಾದ ರಾಮನು ಅಸ್ತ್ರವನ್ನು ಅಷ್ಟು ಬಲವಾಗಿ ಸೆಳೆಯುವುದು ಅಂತಹ ಶತ್ರುಗಳ ಮೇಲೆ ಮಾತ್ರ. ವಿದ್ಯುದ್ವೇಗದಲ್ಲಿ ಹೊರಟ ಬಾಣವು ಮೃಗದೊಳಗಿನ ಮಾರೀಚನ ಹೃದಯವನ್ನು ಭೇದಿಸಿತು. ಭೇದಿಸುವಾಗ ಸಿಡಿಲಿನ ಶಕ್ತಿಯನ್ನು ಹೊಂದಿತ್ತು ಆ ಬಾಣ. ರಾಮ ಎಷ್ಟೋ ಬಾರಿ ಸಾಮಾನ್ಯವಾಗಿ ಇರುತ್ತಾನೆ, ಸಾಮಾನ್ಯವಾಗಿ ತೋರುತ್ತಾನೆ ಎನ್ನುವದು ಈ ಪ್ರಕರಣದಲ್ಲಿ ಸ್ಪಷ್ಪ. ಯಾವಾಗ ಆ ಬಾಣವು ಹೃದಯವನ್ನು ಭೇದಿಸಿತೋ ಆಗ ಮಾರೀಚನು ಒಂದು ತಾಳೆಯ ಮರದಷ್ಟೆತ್ತರ ನೆಗೆದು ಬಿದ್ದ. ಅರೆಜೀವವಾಗಿದೆ. ಭಯಂಕರವಾಗಿ ಒಬ್ಬ ರಾಕ್ಷಸನಂತೆ ಬೊಬ್ಬಿರಿತಾ ಬಿದ್ದಿದ್ದಾನೆ. ಸಾಯುವಾಗ ಕೃತಕರೂಪವನ್ನು ತ್ಯಜಿಸಿ ತನ್ನ ರೂಪವನ್ನ ತಂದುಕೊಂಡ ಮಾರೀಚ.

ಸಾವು ಸತ್ಯವನ್ನು ತಂದುಕೊಡುತ್ತದೆ

ರಾವಣನ ಮಾತು ನೆನಪಾಯಿತು ಮಾರೀಚನಿಗೆ. ರಾಮ ಹೋದರೆ ಸಾಲದು, ಲಕ್ಷ್ಮಣನೂ ಆಶ್ರಮವನ್ನು ಬಿಟ್ಟು ಹೊರಹೋಗಬೇಕು. ಹೇಗೆ ಲಕ್ಷ್ಮಣನನ್ನು ಸೀತೆ ದೂರ ಅಟ್ಟುವಂತೆ ಮಾಡಬೇಕು? ಶೂನ್ಯದಲ್ಲಿ ರಾವಣನು ಸೀತೆಯನ್ನು ಅಪಹರಿಸುವಂತೆ ಹೇಗೆ ಮಾಡಬೇಕು? ಎಂದು ಆಲೋಚಿಸ್ತಾನೆ. ರಾವಣನನ್ನು ಸೀತಾಪಹರಣದ ವಿಷಯಕ್ಕೆ ವಿರೋಧಿಸಿದ್ದ ಮಾರೀಚ ಸೀತೆಯನ್ನು ಲಕ್ಷ್ಮಣನೂ ಬಿಟ್ಟು ಬರುವಂತೆ ಯಾಕೆ ಮಾಡಬೇಕು ಎಂದರೆ ರಾಕ್ಷಸ ಪ್ರಾಮಾಣಿಕತೆ. ಮೊದಲೆಲ್ಲ ವಂಚನೆಯೇ ಮಾರೀಚನ ಜೀವನ. ಬೇರೆ ಬೇರೆ ರೂಪ ಧರಿಸಿ ವಂಚಿಸುವಲ್ಲಿ ಪರಿಣಿತ ಮಾರೀಚ. ಹಾಗಾಗಿಯೇ ರಾವಣ ಎಲ್ಲರನ್ನೂ ಬಿಟ್ಟು ಮಾರೀಚನಲ್ಲಿಯೇ ಬಂದಿದ್ದು. ಮಾರೀಚನಂತಹ ಮಾಯಾವಿ ಬೇರೆ ಯಾರೂ ಇಲ್ಲ. ಹಾಗಾಗಿ ಮಾರೀಚನ ಜೀವನ ಪ್ರಾಮಾಣಿಕ ಜೀವನವಲ್ಲ. ಆದರೆ ಎರಡು ಬಾರಿ ರಾಮ ದರ್ಶನ ಮತ್ತು ರಾಮ ಬಾಣದ ಪ್ರಭಾವ ಮಾರೀಚನಿಗೆ ಪ್ರಾಮಾಣಿಕತೆಯನ್ನು ತಂದುಕೊಟ್ಟಿದೆ. ಪ್ರಾಮಾಣಿಕನಾಗಿದಾನೆ ಮಾರೀಚ. ರಾವಣನಿಗೆ ಮಾತುಕೊಟ್ಟಿದ್ದನಲ್ಲ ಮಾರೀಚ, ಅದನ್ನು ಮಾಡ್ತಾ ಇದಾನೆ.

ನಮಗನ್ನಿಸುತ್ತದೆ, ಸುಮ್ಮನೆ ಸತ್ತಿದ್ರೆ ತೊಂದರೆಯೇ ಇರ್ತಿರಲಿಲ್ಲ. ರಾವಣ ಬಳಸಿದ್ದೇನು, ಸೀತೆಗೆ ರಾಮನ ಮೇಲಿರುವ, ರಾಮನಿಗೆ ಸೀತೆಯ ಮೇಲಿರುವ ಪ್ರೀತಿಯನ್ನು ಬಳಸಿದ್ದಾನೆ ಅವನು. ಮೃಗವನ್ನು ಕಂಡ ಕೂಡಲೇ ಅದನ್ನು ತಂದುಕೊಡು ಅಂತ ಸೀತೆ ಹೇಳಬೇಕು. ಪ್ರೀತಿಯ ಕಾರಣಕ್ಕಾಗಿ ತಾನೇ ರಾಮ ಹೋಗುವಂಥದ್ದು. ರಾವಣನ ಷಡ್ಯಂತ್ರದಲ್ಲಿ ರಾಮನ ಪ್ರೀತಿ ಒಂದು ಅಂಗ. ದುಷ್ಟರು ಹಾಗೇ. ಎಲ್ಲಾ ಷಡ್ಯಂತ್ರಗಳನ್ನು ಮಾಡಲು ಸತ್ಯವನ್ನೇ, ಕಾನೂನನ್ನೇ ಬಳಸ್ತಾರೆ. ಪ್ರಾಮಾಣಿಕರನ್ನು ಕೂಡ ಬಳಸ್ತಾರೆ. ಜೀವವನ್ನು ಕೊಟ್ಟು ಅಕಾರ್ಯವನ್ನು ನಡೆಸು ಎನ್ನುವುದಕ್ಕೆ ಮಾರೀಚ ಸಾಧನವಾದ. ಪ್ರಾಮಾಣಿಕತೆ ಒಳ್ಳೆಯದು, ಎಲ್ಲಿಗೆ ನಿಷ್ಠೆ ಎನ್ನುವುದು ಮುಖ್ಯ. ಮಾರೀಚನ ಮನಸ್ಸು ರಾಮನಲ್ಲಿದೆ, ಆದರೆ ನಿಷ್ಠೆ ರಾವಣನಲ್ಲಿದೆ. ಇಂತವರ್ಯಾರೂ ಸಿಗದೇ ಹೋದರೆ, ಪ್ರಪಂಚದಲ್ಲಿ ಅನಾಹುತವೇ ಆಗೋದಿಲ್ಲ. ಎಲ್ಲಾ ಷಡ್ಯಂತ್ರದಲ್ಲಿ ಮಾರೀಚನಂತವರು ಇರ್ತಾರೆ. ಸತ್ಯಕ್ಕೆ ಸತ್ಯವನ್ನು ಸೇರಿಸಿದಾಗ ಮಹಾಸತ್ಯವಾಗುತ್ತದೆ. ಜೀವನವಿಡೀ ನಡೆಸದ ಪ್ರಾಮಾಣಿಕತೆಯನ್ನು ಮಾರೀಚ ಇಲ್ಲಿ ಮಾಡ್ತಾನೆ. ರಾವಣ ಹೇಳಿದ ವಾಕ್ಯ “ಹಾ ಸೀತೆ ಹಾ ಲಕ್ಷ್ಮಣ” ಎನ್ನುವ ವಾಕ್ಯವನ್ನು ಮರಣದಲ್ಲಿಯೂ ಪಾಲಿಸ್ತಾನೆ ಮಾರೀಚ. ಪ್ರಾಣಸಂಕಟದಲ್ಲಿಯೂ ರಾವಣನ ವಾಕ್ಯಪರಿಪಾಲನೆ. ಜೀವನವಿಡೀ ಮಾಡಿದ್ದು ಜೀವದ ಕೊನೆಯಲ್ಲಿ ಬರುತ್ತದೆ. ಮಾರೀಚನಿಗೂ ಹಾಗೇ ಆಯಿತು, ಜೀವನವಿಡೀ ಮಾಡಿದ ಮಾಯೆ, ವಂಚನೆ ಕೊನೆಗಾಲದಲ್ಲಿಯೂ ಅದೇ ಬಂದಿತು…!

ಆ ಸ್ವರವನ್ನು ಮಾಡಿದ ಮಾರೀಚ, ರಾಮನ ಸ್ವರವನ್ನೇ ಹೋಲುವ ಸ್ವರ. “ಹಾ ಸೀತೆ ಹಾ ಲಕ್ಷ್ಮಣ” ಎನ್ನುವ ಆರ್ತನಾದ. ಇದನ್ನ ಹೇಳಿದ ಮೇಲೆ ಮಾರೀಚ ಮತ್ತಿಲ್ಲ. ರಾಮನು ಆ ಮೃಗರೂಪ ರಾಕ್ಷಸನ ಮರ್ಮವನ್ನರಿತು ಪ್ರಯೋಗಿಸಿದ ಅಪರೂಪದ ಬಾಣದಿಂದ ಮತ್ತಿಲ್ಲ ಮಾರೀಚ. ಜೀವಹೋಗುವಾಗ ಮೃಗರೂಪ ಬಿಟ್ಟು ಸರ್ವಾಭರಣ ಭೂಷಿತ ರಾಕ್ಷಸ ಮಾರೀಚನ ಸ್ವರೂಪ ಬಂತು. ರಾಮಬಾಣದಿಂದ ನಿಜರೂಪವನ್ನು ತಾಳಿದ ರಾಕ್ಷಸ. ಪ್ರಾಣೋತ್ಕ್ರಮಣದ ಸಂಕಟದಲ್ಲಿ ಭೂಮಿಮೇಲೆ ಬಿದ್ದು ಚಡಪಡಿಸುತ್ತಿದ್ದಾನೆ. ಅವನನ್ನು ಕಂಡಾಗ ರಾಮ ಕಣ್ಮುಚ್ಚಿ ಸೀತೆಯ ಬಳಿ ಸಾರಿದನು. ಆಗ ರಾಮ ಲಕ್ಷ್ಮಣ ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾನೆ. ಲಕ್ಷ್ಮಣ ಹೇಳಿದ್ದ ಇದು ಮೃಗವಲ್ಲ. ಮೃಗರೂಪದ ಮಾರೀಚ ಎಂದು. ರಾಮ ಕೊಂದಿದ್ದು ಮಾರೀಚನನ್ನು. ಮೃಗವನ್ನಲ್ಲ. ಹೋಗಲಿ, ಯಾಕಿವನು “ಹಾ ಸೀತೆ, ಹಾ ಲಕ್ಷ್ಮಣ” ಎಂದು ಕೂಗಿದನು..! ಸ್ವರವೂ ರಾಮನದ್ದೇ..! ದೊಡ್ಡಸ್ವರ…! ಆಗ ರಾಮನ ಮುಂದೆ ಬಂದ ಪ್ರಶ್ನೆ, “ಹಾ ಸೀತೆ, ಹಾ ಲಕ್ಷ್ಮಣ” ಎಂದು ಆಕ್ರಂದಿಸಿ ಕೂಗಿಕೊಂಡನಲ್ಲಾ, ಸೀತೆಯ ಸ್ಥಿತಿ ಹೇಗಿರಬಹುದು ಎಂದು. ಈ ಧ್ವನಿಯನ್ನು ಕೇಳಿದ ಸೀತೆ ಯಾವ ಸ್ಥಿತಿಗೆ ಹೋದಾಳು? ಲಕ್ಷ್ಮಣ ಯಾವ ಅವಸ್ಥೆ ಹೊಂದಿಯಾನು…!? ಅದನ್ನು ನೆನೆದಾಗ ರಾಮನ ರೋಮರೋಮಗಳು ನಿಮಿರಿ ನಿಂತವು. ಆಗ ರಾಮನಲ್ಲಿ ತೀವ್ರವಾದ ಭಯ ಉಂಟಾಯಿತು. ರಾಮ ಭಯಗೊಳ್ಳುವುದಿಲ್ಲ. ಇಲ್ಲಿ ನೋಡಿ. ತನ್ನವರಿಗೆ ಆಪತ್ತು ಉಂಟಾದಾಗ ಮಾತ್ರ ರಾಮನಿಗೆ ಭಯವುಂಟಾಗುವಂಥದ್ದು. ಮತ್ಯಾವಾಗಲೂ ಇಲ್ಲ. ಮಹಾಯುದ್ಧ, ರಾಕ್ಷಸರಲ್ಲೂ ಹೆದರದವ, ತನ್ನವರಿಗೆ ತನ್ನ ವಿಯೋಗದಿಂದುಂಟಾಗುವ ಸಂದರ್ಭದಲ್ಲಿ ರಾಮನಿಗೆ ಭಯವಾಯಿತು.

ಕ್ಷಿಪ್ರಗತಿಯಲ್ಲಿ ರಾಮ ಜನಸ್ಥಾನದೆಡೆಗೆ ನಡೆದನು. ತನ್ನ ಗಂಡನ ಸ್ವರವನ್ನೇ ಹೋಲವ ಆರ್ತನಾದವೊಂದು ಸೀತೆಗೆ ಕೇಳಿದೆ. ಸೀತೆ ತಡ ಮಾಡಲಿಲ್ಲ. ಲಕ್ಷ್ಮಣನಿಗೆ ಹೇಳಿದಳು ಸೀತೆ, “ಹೋಗು. ರಾಮನಿಗೇನಾಗಿದೆ ನೋಡು. ಈ ಸ್ವರವನ್ನು ಕೇಳಿದ ಮೇಲೆ ಹೃದಯ ನಿಲ್ಲದು. ಅತ್ಯಂತ ಕಷ್ಟಕ್ಕೆ ಸಿಕ್ಕ ರಾಮನು, ಸಹಾಯಕ್ಕಾಗಿ ಆಕ್ರಂದಿಸುತ್ತಿದ್ದಾನೆ, ಆತನನ್ನು ಕಾಪಾಡು” ಎಂದಳು. ಈ ಶಬ್ದಗಳು ರಾಮನಿಗೆ ಹೋಲುವಂಥದ್ದಲ್ಲ. ಸೀತೆಯ ಈ ಮಾತನ್ನು ಕೇಳಿದ ಮೇಲೆಯೂ ಲಕ್ಷ್ಮಣ ಹೋಗಲಿಲ್ಲ. ಸಾಮಾನ್ಯವಾಗಿ ಸೀತೆ ಏನು ಹೇಳಿದರೂ ಮಾಡುತ್ತಾನೆ ಲಕ್ಷ್ಮಣ, ಯಾಕೆಂದರೆ ರಾಮ ಹೇಗೋ ಸೀತೆ ಹಾಗೆ. ಯಾಕೆ ಹೋಗಲಿಲ್ಲ ಅಂದರೆ, ಸೀತೆಯ ಮಾತಿನ ಮೇಲೆ ರಾಮನ ಆಜ್ಞೆಯಿದೆ, ಕಟ್ಟಪ್ಪಣೆಯಿದೆ “ಇಲ್ಲಿಂದ ಕದಲಬೇಡ” ಎಂದು. ಹಾಗಾಗಿ ಲಕ್ಷ್ಮಣ ಕದಲಲಿಲ್ಲ. ಸೀತೆ ಕೋಪಗೊಂಡಳು. ಯಾರಿಗೂ ಇಂಥ ಮಾತನ್ನಾಡಬಾರದು, ಅಂಥದ್ದನ್ನಾಡಿದಳು ಸೀತೆ. ಹೀಗೆಂದಳು, “ಸೌಮಿತ್ರಿಯೇ, ನಿಮ್ಮಣ್ಣನಿಗೆ ಮಿತ್ರರೂಪದಲ್ಲಿರುವ ಶತ್ರು ನೀನು. ಹಿತಶತ್ರು, ಯಾಕೆಂದರೆ ರಾಮ ಆಪತ್ತಿನಲ್ಲಿದ್ದಾನೆ. ಅಲ್ಲಿಗೆ ಹೋಗುವುದಿಲ್ಲ ಅಲ್ವಾ? ನೀನು ರಾಮನ ನಾಶವನ್ನು ಬಯಸಿದವನು. ಯಾಕಾಗಿ ಅಂದರೆ, ನನಗಾಗಿ. ನನ್ನ ಮೇಲೆ ಆಸೆ ಇಟ್ಟುಕೊಂಡು ರಾಮನು ಹೋದರೆ ಹೋಗಲಿ ಎಂಬ ಆಸೆಯನ್ನಿಟ್ಟುಕೊಂಡಿದೀಯ ನೀನು” ಎಂದಳು ಸೀತೆ. ಒಂದು ಸಲ ಹೇಳಿದಳು, ಮತ್ತೆ ಇನ್ನೊಂದು ಸಲ ಹೇಳಿದಳು. “ಲೋಭದಿಂದಾಗಿ ರಾಮನ ರಕ್ಷಣೆಗೆ ಹೋಗ್ತಾ ಇಲ್ಲ. ರಾಮನಾಶಪ್ರಿಯ ಅಲ್ವಾ ನೀನು? ಎಳ್ಳಷ್ಟಾದರೂ ಪ್ರೀತಿ ನಿನಗೆ ರಾಮನ ಬಗ್ಗೆ ಇದೆಯಾ? ಇಲ್ಲ, ಹಾಗಾಗಿ ರಾಮನ ಈ ಸ್ಥಿತಿಯಲ್ಲಿ ನೀನು ವಿಶ್ವಾಸದಿಂದ ನಿಂತಿದ್ದೀಯ. ನಾನು ಅಬಲೆ. ನಾನೇನು ಮಾಡಲಿ…?” ಎನ್ನುವಾಗ ಬಹಳ ಶೋಕವಿದೆ ಅವಳಲ್ಲಿ. ಕಣ್ಣೀರು ಧಾರಾಕಾರವಾಗಿ ಹರಿದಿದೆ. ಆಗ ಲಕ್ಷ್ಮಣ ಅವಳ ಮಾತನ್ನು ತಾಳಿಕೊಂಡು, “ಪನ್ನಗರು, ಅಸುರರು, ಗಂಧರ್ವರು, ದೇವತೆಗಳು, ಮಾನುಷರು, ರಾಕ್ಷಸರು, ಪಕ್ಷಿಗಳು, ಮೃಗಗಳು, ಪಿಶಾಚರು ಇವರಾರು ನಿನ್ನ ಪತಿಯನ್ನು ಗೆಲ್ಲಲು ಸಾಧ್ಯವಿಲ್ಲ. ಇದಲಲ್ಲಿ ಸಂಶಯ ಬೇಡ. ದೇವೀ, ರಾಮನನ್ನು ಗೆಲ್ಲುವದಿರಲಿ, ರಾಮನಿಗೆ ಸರಿಸಮಾನಾಗಿ ಯುದ್ಧಮಾಡಬಲ್ಲವನು ಇನ್ನೂ ಹುಟ್ಟಿಲ್ಲ, ಹುಟ್ಟೋದಿಲ್ಲ. ಯುದ್ಧದಲ್ಲಿ ಅವಧ್ಯ ರಾಮನೆಂದರೆ. ಯುದ್ಧದಲ್ಲಿ ರಾಮನಿಗೆ ಸೋಲು, ಸಾವು ಇಲ್ಲ. ಇಂತಹ ಮಾತುಗಳನ್ನು ರಾಮನ ಕುರಿತು ಹೀಗೆ ಹೇಳಬೇಡ. ನನ್ನ ಸ್ಥಿತಿ ಬೇರೆ. ಈ ಕಾಡಿನಲ್ಲಿ, ರಾಮನಿಲ್ಲದೆ ಇರುವ ನಿನ್ನನ್ನು, ಬಿಟ್ಟು ಹೋಗಲಾರೆ. ಆಜ್ಞೆಬೇರೆ. ವಿವೇಕದ ದೃಷ್ಟಿಯಲ್ಲಿ ಹೇಳುತ್ತೇನೆ ರಾಕ್ಷಸಸಂಚಾರ ಇರುವ ಈ ಕಾಡಿನಲ್ಲಿ ರಾಮನಿಲ್ಲದ ಹೊತ್ತಿನಲ್ಲಿ ನಿನ್ನ ಬಿಟ್ಟು ಹೋಗಲಾರೆ. ಬಲವಂತರ ಬಲಗಳೂ ರಾಮನನ್ನು ಪರಾಭವಗೊಳಿಸಲು ಸಾಧ್ಯವಿಲ್ಲ. ಮೂರುಲೋಕಗಳು ಒಟ್ಟಾಗಿ ಬರಲಿ, ದೇವತೆಗಳೆಲ್ಲ ಸೇರಿ ಬರಲಿ, ಜಗದೀಶ್ವರನೇ ಬರಲಿ, ರಾಮನ ಸೋಲಿಸಲು ಸಾಧ್ಯವಿಲ್ಲ. ನಿನ್ನ ಹೃದಯ ಸಮಾಧಾನಗೊಳ್ಳಲಿ. ಆ ಮೃಗವನು ಸಂಹಾರಮಾಡಿ, ಬರುವನು ರಾಮ. ಇದು ರಾಮನ ಸ್ವರವಲ್ಲ. ಯಾರೋ ಮಾಯೆಯಿಂದ, ಮೋಸಗೊಳಿಸಲು ಮಾಡಿದ ಸ್ವರ. ಇದು ಅದೇ ರಾಕ್ಷಸನ ಮಾಯೆ. ನನಗೆ ಕರ್ತವ್ಯವಿದೆ, ರಾಮನು ನನಗೆ ನಿನ್ನನ್ನು ನ್ಯಾಸವಾಗಿ ಇರಿಸಿದ್ದಾನೆ. ನೋಡಿಕೋ ಅಂತ ಕೊಟ್ಟಿದ್ದು ರಾಮ. ಆ ಮಹಾಪುರುಷ ನನ್ನನ್ನು ನಂಬಿ, ನ್ಯಾಸವಾಗಿ ನಿನ್ನನ್ನು ಬಿಟ್ಟು ಹೋಗಲಾರೆ. ನಮಗೂ ರಾಕ್ಷಸರಿಗೂ ವೈರವಿದೆ. ಶೂರ್ಪಣಕಿಯ ಅವಮಾನದಿಂದ, ಖರದೂಷಣ ಹಾಗೂ ಅನೇಕ ರಾಕ್ಷಸರ ಸಂಹಾರದಿಂದ ವೈರವಿದೆ. ಹೇ ಕಲ್ಯಾಣೀ, ರಾಕ್ಷಸರಿಗೆ ಹಿಂಸೆಯೇ ವಿಧಾನ” ಎಂದು ಲಕ್ಷ್ಮಣ ಎಳೆಎಳೆಯಾಗಿ ಸೀತೆಗೆ ತಿಳಿಸಿ ಹೇಳ್ತಾನೆ. ಆಗವುಳ ಕೋಪ ಹೆಚ್ಚಾಯಿತು. ಕ್ರೂರವಾದ ಮಾತುಗಳನ್ನು ಲಕ್ಷ್ಮಣನಿಗೆ ಹೇಳ್ತಾಳೆ ಸೀತೆ. ಎಂತಹ ಲಕ್ಷ್ಮಣ ಅವನು ಸತ್ಯವನ್ನೇ ಹೇಳ್ತಾ ಇದ್ದಾನೆ. ಅವನ ಮಾತಿನಲ್ಲಿ ಮೋಸವಿರಲಿಲ್ಲ. ಇಂತಹ ಸತ್ಯವಾದಿಯ ಕುರಿತು ಹೇಳಿಬಿಟ್ಟಳು ಸೀತೆ, “ಅನಾರ್ಯ, ದುಶ್ಶೀಲನೇ, ದಯೆಯ ಸುಳಿವೇ ಇಲ್ಲದವನೇ, ನಿರ್ದಯನೇ, ಕ್ರೂರಿ, ಇಕ್ಷ್ವಾಕು ಕುಲಕ್ಕಂಟಿದ ಧೂಳೇ, ನನಗೆ ಸ್ಪಷ್ಟವಾಯಿತು ನೀನು ಬಯಸಿದ್ದು ರಾಮನ ನಾಶವನ್ನು ಎಂದು. ಹಾಗಾಗಿ ರಾಮ ಮಹದಾಪತ್ತಿನಲ್ಲಿರುವಾಗ ಈ ತರ ಧರ್ಮಬೋಧನೆ ಮಾಡ್ತೀಯೆ. ಏನಾಶ್ಚರ್ಯವಿದು…? ನಿನ್ನಂಥವರು ಇರ್ತಾರೆ ಈ ಪ್ರಪಂಚದಲ್ಲಿ. ಹಗೆಯನ್ನು ತೀರಿಸಿಕೊಳ್ಳುವಂತವರು. ನಿನ್ನಂಥಹ ಕ್ರೂರಿಗಳು, ಒಟ್ಟಿಗೆ ಇದ್ದು ಸೇವಕನ ರೂಪದಲ್ಲಿ ಮೋಸಮಾಡುತ್ತಾರೆ. ವೈರವಿದೆ. ಕೇಡುಭಾವವಿದೆ. ಪರಮದುಷ್ಟ ನೀನು. ನೀನು ನಿನ್ನ ನಿಜಬಣ್ಣವನ್ನು ಮರೆಮಾಡಿಕೊಂಡು, ನನಗಾಗಿ ರಾಮನನ್ನು ಹಿಂಬಾಲಿಸುತ್ತಾ ಇದ್ದೀಯೆ ನೀನು..! ಇದೆಲ್ಲ ಮಾತು ಮಾರೀಚನಿಗೆ ಸಲ್ಲುವಂಥದ್ದು. ಅಥವಾ ಭರತನು ನಿನ್ನನ್ನ ನಿಯಂತ್ರಿಸಿದ್ದಾನೆ.

ಸಜ್ಜನರನ್ನು ಶಂಕಿಸಿದರೆ, ಆಗಬಾರದ್ದಾಗುತ್ತದೆ. ಇಬ್ಬರನ್ನು ಶಂಕಿಸಿದಳು. “ಭರತನ ಗುಪ್ತಚರ ನೀನು. ನಿನ್ನಿಚ್ಛೆಯೋ ಭರತನ ಇಚ್ಛೆಯೋ ಫಲಿಸದು. ನೀನಾಗಲಿ, ಭರತನಾಗಲಿ ನನ್ನನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಭರತನ ಮೇಲೆ ಆ ಪ್ರಮಾಣದ ಶಂಕೆ ಮಾಡಿದಳು. ಆ ಪದ್ಮಪತ್ರಲೋಚನ ರಾಮನನ್ನು ಬಿಟ್ಟು ಬೇರೆಯವರನ್ನು ಹೇಗೆ ಇಷ್ಟಪಡಲಿ. ನಿನ್ನ ಮುಂದೆಯೇ ಪ್ರಾಣವನ್ನು ಬಿಟ್ಟೇನು, ರಾಮನನ್ನು ಬಿಡಲಾರೆ” ಎಂದು ಕ್ರೌರವಾಗಿ ಹೇಳಿದಾಗ ಲಕ್ಷ್ಮಣನಿಗೆ ರೋಮಗಳುನಿಮಿರಿ ನಿಂದವು. ಆ ಮಾತುಗಳನ್ನು ಕೇಳಿ, ಬೆನ್ನಹುರಿಯಲ್ಲಿ ಚಳಿ ಹುಟ್ಟಿತು. ಎಲ್ಲಿದ್ದೇನೆ ನಾನು ಎಂಬ ಸ್ಥಿತಿ. ತನ್ನನ್ನು ತಾನು ಸಂಯಮದಿಂದ ನಿಯಂತ್ರಿಸಿಕೊಂಡು, ಆಕೆಗೆ ಕೈಮುಗಿತಾನೆ, “ಇದಕ್ಕೆ ಉತ್ತರವನ್ನು ಹೇಳಲಾರೆ. ಯಾಕೆಂದರೆ ನೀನು ನನ್ನ ದೇವತೆ. ದೇವತೆಗೆ ಹೇಗೆ ಕೆಟ್ಟಮಾತನಾಡುವೆ. ಆಡಲಾರೆ.” ಎಂದು ಹೇಳಿದನು. ಸೀತೆಯನ್ನು ಬಿಟ್ಟು ಉಳಿದ ಸ್ತ್ರೀಗಳ ಕುರಿತು ಕೋಪಗೊಂಡು ಹೀಗಂದ, ಸ್ತ್ರೀಯರೇ ಹಾಗೆ. ಧರ್ಮವನ್ನೇ ಬಿಡ್ತಾರೆ ಅಂತ ಹೇಳಿದವನು ಅವನು ಸೀತೆಯೆಡೆಗೆ ನೋಡಿದಾಗ ಹೇಳಿದನು, “ಇದೊಂದು ಮಾತನ್ಧು ಸಹಿಸಲಾರೆ, ಕಾದ ಬಾಣವನ್ನು ಕಿವಿಯಲ್ಲಿರಿಸಿದಂತಾಗುತಿದೆ. ಸಾಕ್ಷಿಗಳೇ ಕೇಳಿ ವನದೇವತೆಗಳೆಲ್ಲ, ಪಂಚವಟಿಯ ಜೀವಗಳೆಲ್ಲ ಕೇಳಿ, ” ನಾನು ನ್ಯಾಯವಾದಿ. ಸುಳ್ಳು ಹೇಳುವುದಿಲ್ಲ. ನ್ಯಾಯವಾಗಿ ಮಾತನಾಡುವ ನನಗೆ ಎಂತ ಮಾತನ್ನು ಕೇಳುವ ಕಾಲ ಬಂದಿತು.” ಎನ್ನುವುದನ್ನು ದಂಡಕಾರಣ್ಯದ ಸಕಲ ಜೀವಗಳೂ ಕೇಳಲಿ. ನಿನಗೆ ಧಿಕ್ಕಾರವಿರಲಿ…! ರಾಮನನ್ನು ತಂದೆಯೆಂದು, ಸೀತೆಯನ್ನು ತಾಯಿಯೆಂದು ತಿಳಿದೆನಲ್ಲಾ…! ನಾನಾದರೂ ಮಾಡಿದ್ದೇನು ನನ್ನ ಗುರು, ನನ್ನ ರಾಮನ ಅಪ್ಪಣೆಯನ್ನು ಪಾಲನೆಮಾಡ್ತಾ ಇದ್ದೇನೆ, “ನೀನು ಇಲ್ಲಿಂದ ಕದಲದಿರು” ಎಂಬ ಮಾತಿಗೆ ಇಲ್ಲಿದ್ದೇನೆ. ನೀನು ಇಂಥಹ ಮಾತನಾಡುತ್ತಿದ್ದಿಯಾ…?” ಎಂಬುದಾಗಿ ಶಪಿಸಿದನು ಲಕ್ಷ್ಮಣ.

ಲಕ್ಷ್ಮಣನ ಮಾತು ಸತ್ಯವಾಯಿತು… ಮತ್ತು ಅಲ್ಲಿಂದ ಮುಂದೆ ರಾಮನ ಸೌಖ್ಯ ನಿರಂತರವಾಗಿ ಸಿಗಲಿಲ್ಲ. ಯಾವ ಅಪವಾದವನ್ನು ಲಕ್ಷ್ಮಣನಿಗೆ ಹೊರಿಸ್ತಾಳೋ, ಅದೇ ಮಾತು ಅವಳಿಗೆ ಮುಂದೆ ನೂರು ಸಾವಿರವಾಗಿ ಬಂತು. ರಾಮನನ್ನು ಬಿಟ್ಟಿರಲಾರೆ ಎಂದಳು ಸೀತೆ, ಬಿಟ್ಟಿರಲೇಬೇಕಾಯಿತು ಮುಂದೆ. ಇದೆಲ್ಲ ನಮಾಗೆ ಪಾಠ. ಮಾಹಾನುಭಾವರು ತಾವನುಭವಿಸಿ ಇಟ್ಟ ಪಾಠವಿದು. ಹೀಗೆ ಮಾಡಿದರೆ ಹೀಗಾಗುತ್ತದೆ ಎನ್ನುವಂಥದ್ದು.

ಹೊರಟೆ ನಾನು. ಒಳ್ಳೆಯದಾಗಲಿ ನಿನಗೆ. ವನದೇವತೆಗಳಿಗೆಲ್ಲ ಪ್ರಾರ್ಥನೆ ಮಾಡ್ತಾನೆ ಲಕ್ಷ್ಮಣ, ಸೀತೆಗೇನೂ ಆಗದಿರಲೆಂದು. ಅಪಶಕುನಗಳುಂಟಾದವು. ಲಕ್ಷ್ಮಣನಿಗೆ ನಿಮಿತ್ತಗಳು ತಿಳಿದವು. ಸೀತೆಗೆ ನಿನ್ನನ್ನು ಮಾತ್ತೂ ರಾಮನನ್ನು ನೋಡುವ ಯೋಗ ಬರಲಿ ಎಂದನು. ಸೀತೆಗೆ ಯಾವುದೂ ಅರ್ಥವಾಗಲಿಲ್ಲ. ಮತ್ತೆ ಮುಂದುವರಿದು, ನಾನು ಗೋದಾವರಿಯಲ್ಲಿ ಬೀಳ್ತೇನೆ. ವಿಷವನ್ನು ಕುಡಿತೇನೆ, ಬೆಂಕಿಗೆ ಹಾರ್ತೇನೆ. ರಾಮನಲ್ಲದೇ ಬೇರೆ ಯಾರನ್ನೂ ಎಡಗಾಲಿನ ತುದಿಯಲ್ಲಿಯೂ ಮುಟ್ಟಲಾರೆ. ಹೀಗೆ ಲಕ್ಷ್ಮಣನನ್ನು ನಿಂದಿಸಿದ ಸೀತೆ ತನ್ನುದರವನ್ನ ಬಡಿದುಕೊಂಡಳು. ಲಕ್ಷ್ಮಣನು ಮತ್ತೆ ಸಂತೈಸಲು ಯತ್ನಿಸಿದನು. ಸೀತೆ ಅವನ ಹತ್ತಿರ ಮಾತೂ ಆಡಲಿಲ್ಲ. ರಾವಣಪ್ರವೇಶಕ್ಕೆ ಪೀಠಿಕೆಯಿದು. ಮೃಗವ ನೋಡಿ ಬಯಸಿದಳು, ಧರ್ಮವನ್ನು ದೂರಮಾಡಿಕೊಂಡಳು. ಮತ್ತೆ ಅಧರ್ಮದ ಪ್ರವೇಶ ಮಾಡಿದಳು. ಜೀವವು ಮಾಯೆಗೆ ಮರುಳಾದಾಗ ದೇವನನ್ನು ಮರೀತದೆ. ಆಗ ಅಧರ್ಮ ನಮ್ಮನ್ನು ಕೊಂಡೊಯ್ಯುತ್ತದೆ. ಸಂಸಾರ ಸಾಗರದ ಮಧ್ಯ ಕಾಮಾ ಕ್ರೋಧಧ ಮಧ್ಯೆ ಇದ್ದೇವೆ. ಎಲುಬಿಲ್ಲದ ನಾಲಿಗೆ, ಏನೇನೋ ಮಾತಾಡುತ್ತೇವೆ. ನೋಡಿ ಈ ಮಾತುಗಳನ್ನು.

ದೊಡ್ಡವರಲ್ಲಿ ಮಾಡಿದ ಸಣ್ಣ ತಪ್ಪೂ ದೊಡ್ಡ ಪ್ರಭಾವವನ್ನುಂಟು ಮಾಡುತ್ತದೆ. -ಶ್ರೀಸೂಕ್ತಿ.

ಹಾಲಾಹಲ ವಿಷಕ್ಕಿಂಥ ಕಠೋರ ಮಾತುಗಳನ್ನು ಆಡಿದಳು ಸೀತೆ. ಅದರ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ ಲಕ್ಷ್ಮಣನಿಗೆ. ಅದರ ಪರಿಣಾಮ ಅಲ್ಲಿಯೇ ಬಂತು.
ಪ್ರವಚನವನ್ನು ಇಲ್ಲಿ ಕೇಳಿರಿ:


ಪ್ರವಚನವನ್ನು ನೋಡಲು:

Facebook Comments