ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಧರ್ಮದ್ವಯಗಳು- ಮನೆಗೆ ಬಂದವರನ್ನು ಸತ್ಕರಿಸುವುದು ಹಾಗೂ ಉಂಡ ಮನೆಗೆ ಎರಡು ಬಗೆಯದಿರುವುದು. ಸೀತೆ ಮನೆಗೆ ಬಂದ ಅತಿಥಿಯನ್ನು, ಬ್ರಾಹ್ಮಣ ಯತಿ ರೂಪದಲ್ಲಿ ಬಂದವನನ್ನು ಸತ್ಕರಿಸುತ್ತಾಳೆ. ಸತ್ಕರಿಸುವ ಸ್ಥಿತಿಯಲ್ಲಿ ಅವಳಿಲ್ಲ, ಯಾಕೆಂದರೆ ತನ್ನ ಪ್ರಾಣಕ್ಕಿಂತ ಸಾವಿರಪಾಲು ಪ್ರೀತಿಸುವ ಪತಿಯ ಮರಣಾಕೃಂದನವನ್ನು (ಆದರದು ನಿಜವಲ್ಲ. ಹಾಗೆ ಕೇಳಿಸಿದೆ ಸೀತೆಗೆ) ಅದಾಗ ತಾನೆ ಕೇಳಿದ್ದಾಳೆ ಸೀತೆ. “ಹಾ ಸೀತೆ, ಹಾ ಲಕ್ಷ್ಮಣ” ಎನ್ನುವ ರಾಮಧ್ವನಿಯ ಆರ್ತನಾದವನ್ನು ಕೇಳಿದ್ದಾಳೆ. ರಾಮನಿಗೇನೋ ಆಗಿದೆ, ರಾಮನು ಪ್ರಾಣಾಪಾಯದಲ್ಲಿದ್ದಾನೆ ಎನ್ನುವಂಥಹ ಜೀವಮಾನದ ಸಂಕಟದಲ್ಲಿ ಆಕೆ ಇದ್ದಾಳೆ. ಇನ್ನೊಂದು ತನ್ನ ಪುತ್ರಸಮಾನನಾದ ಲಕ್ಷ್ಮಣನೊಂದಿಗೆ ಮಹಾಸಂಘರ್ಷವು ನಡೆದುಹೋಗಿದೆ. ಎಂದೂ ನಡೆಯದ ಸಂಘರ್ಷನಡೆದು ಹೋಗಿದೆ ಲಕ್ಷ್ಮಣನೊಂದಿಗೆ. ಎಂದೂ ಆಡದ ಮಾತುಗಳನ್ನು ಆಡಿದ್ದಾಳೆ ಅಂದರೆ ಅವಳ ಮನಸ್ಸು ಅಷ್ಟು ವಿಚಲಿತವಾಗಿದೆ. ಅಂಥ ಸ್ಥಿತಿಯಲ್ಲಿಯೂ ಬಂದ ಅತಿಥಿಯನ್ನು ಸತ್ಕರಿಸುತ್ತಾಳೆ. ಆಸನ ಕೊಟ್ಟು, ಪಾದ್ಯ ಕೊಟ್ಟು, ಹಸಿವಾರಿಸುವ ಸಲುವಾಗಿ ವನ್ಯ ಕಂದ ಮೂಲ ಫಲಗಳನ್ನು, ಹಣ್ಣು ಹಂಪಲು, ಗೆಡ್ಡೆ ಗೆಣಸುಗಳನ್ನಿಟ್ಟು, ಒಳ್ಳೆಯ ಮಾತಗಳನ್ನಾಡಿ, ಅತಿಥಿ ಸತ್ಕಾರವನ್ನು ಸಮರ್ಥವಾಗಿ ನಿಭಾಯಿಸಿದಾಳೆ ಸೀತೆ. ಮನೆಗೆ ಬಂದ ಯಾವ ಅತಿಥಿಯನ್ನೂ ಸತ್ಕರಿಸದೇ ಇರಬಾರದು…!

ಮುಂದಿನದು ಉಂಡಮನೆಗೆ ಎರಡು ಬಗೆಯಬಾರದು ಎಂಬುದಕ್ಕೆ ಸರಿಯಾಗಿ ವಿರುದ್ಧವಾಗಿ ರಾವಣ ನಡೆದುಕೊಂಡನು. ತನ್ನ ಪರಿಚಯವನ್ನು ಹೇಳಿದ ಸೀತೆಗೆ ನೀನ್ಯಾರು ಎಂದು ಕೇಳಿದಾಗ, ತನ್ನ ಪರಿಚಯವನ್ನು ಹೇಳುತ್ತಾ ರಾವಣ, “ನಾನು ರಾಕ್ಷಸಲೋಕ ನಾಯಕ” ಎಂಬುದಾಗಿ ಹೇಳಿ, ತಾನು ಬಂದ ಪ್ರಸ್ಥಾಪನೆಯನ್ನಿಟ್ಟ. “ನೀನು ನನ್ನ ಮಡದಿಯಾಗು. ನನ್ನ ಸಾವಿರಾರು ಮಹಿಷಿಯರಿಗೆ ಅಗ್ರ ಮಹಿಷಿಯಾಗು” ಎಂಬುದಾಗಿ ಸೀತೆಯ ಮುಂದೆ ಪ್ರಸ್ತಾಪವನ್ನಿಟ್ಟಾಗ, ಸೀತೆಗೆ ಮೊದಲು ಬಂದಿದ್ದು ಕೋಪ. ಚಾರಿತ್ರ್ಯಕ್ಕೆ ಧಕ್ಕೆ ಬರುವಾಗ, ಅಂಥಹ ಸಂದರ್ಭ ಬಂದಾಗ ತಾಳಲಾರದ ಕೋಪ ಬರಬೇಕು. ಅದೇ ಬಂತು ಸೀತೆಗೆ. ಸೀತೆ ಹೇಳಿದ್ದು, “ನಾನು ರಾಮನಿಗೆ ಅನೂವೃತೆ, ರಾಮನನ್ನನುಸರಿಸುವದೇ ನನ್ನ ಜೀವನದ ವೃತ. ನೀನ್ಯಾರು, ರಾಮನೆಲ್ಲಿ, ನೀನೆಲ್ಲಿ? ರಾಮ ಸಿಂಹನಾದರೆ ನೀನು ನರಿ” ಎಂದಾಗ ರಾವಣನಿಗೆ ಸ್ವಲ್ಪ ಸಿಟ್ಟು ಬಂತು. ಯಾಕೆಂದರೆ, ರಾಮನ ಮುಂದೆ ನೀನು ಯಾರು ಎಂದು ಕೇಳಿದಳು ಎನ್ನುವ ವಿಷಯಕ್ಕೆ. ಹುಬ್ಬುಗಂಟಿಕ್ಕಿ ಸೀತೆಗೆ ತಾನು ಯಾರು ಎಂಬುದನ್ನು ಹೇಳಲಿಕ್ಕೆ ಆರಂಭಿಸಿದನು. ತಾನ್ಯಾರು ಎಂಬುದನ್ನು ತಿಳಿದರೆ ತನ್ನ ಜೊತೆ ಬಂದಾಳು ಎಂದು ಆರಂಭಿಸಿದನು.

ನಾನು ಕುಬೇರನ ಸಹೋದರ. ಅಣ್ಣ ತಮ್ಮ ಸರಿಯಾಗಿಲ್ಲ. ಇದು ಸಂಬಂಧಗಳ ದುರುಪಯೋಗ. ವಿಶ್ವಾಸರಿಗೆ ಗಂಧರ್ವರಲ್ಲಿ ಜನಿಸಿದ್ದು ಕುಬೇರ, ರಾಕ್ಷಸರಲ್ಲಿ ಜನಿಸಿದವನು ರಾವಣ. ಮೊದಲು ಹುಟ್ಟಿದವನು ಅವನು, ಆಮೇಲೆ ಹುಟ್ಟಿದವನು ರಾವಣ. ಮತ್ತೆ ಯಾವುದರಲ್ಲೂ ಹೊಂದಾಣಿಕೆ ಇಲ್ಲ. ಕುಬೇರ ಧರ್ಮಾತ್ಮ. ತಪಸ್ಸು ಮಾಡಿ ಲೋಕಪಾಲಕತ್ವವನ್ನು, ಲೋಕಸೇವೆಯನ್ನು ಮಾಡಬೇಕೆಂದು ಅಂಥಹದ್ದನ್ನ ಪಡೆದುಕೊಂಡ ಕುಬೇರ. ಇವನು ರಾವಣ ತಪಸ್ಸುಮಾಡಿ ಲೋಕಕಂಟಕತ್ವವನ್ನು ಪಡೆದುಕೊಂಡವನು. ತುಂಬ ವ್ಯತ್ಯಾಸವಿದೆ. ಅವನ ರಾಜ್ಯವನ್ನು ಕಿತ್ತುಕೊಂಡವನು ರಾವಣ. ಲಂಕಾರಾಜ್ಯ ಕುಬೇರನದ್ದು. ಅದನ್ನು ಅನ್ಯಾಯವಾಗಿ ಕಿತ್ತುಕೊಂಡವನು. ಆ ಅಣ್ಣನೋ, ನನ್ನದಾದರೇನು ನಿನ್ನದಾದರೇನು ಎಂದು ಬಿಟ್ಟುಕೊಟ್ಟವನು. ಅಂಥವನ ಮೂಲಕ ತನ್ನ ಪರಿಚಯ ಮಾಡ್ತಾ ಇದಾನೆ ರಾವಣ. ಉತ್ತರದಿಕ್ಕಿನ ಒಡೆಯನಾದ, ಧನಕಾಧಿಪತಿಯಾದ ಚಕ್ರವರ್ತಿಯಾದ ಲೋಕಪಾಲಕ ಕುಬೇರನ ಸಹೋದರ. ಹೇ ಸುಂದರಿಯೇ, ನಾನು ಪ್ರತಾಪವಂತ, ಎಷ್ಟರಮಟ್ಟಿಗೆ ಎಂದರೆ, ನನ್ನ ಹೆಸರು ಕೇಳಿದರೆ ಸಾಕು ದೇವತೆಗಳು, ಗಂಧರ್ವರು, ಪಿಶಾಚರು, ಪತಗರು, ಉರಗರು ಭಯಗೊಂಡು ನಡುಗುತ್ತಾರೆ. ನಾನೆಂದರೆ ಮೃತ್ಯುವಿದ್ದಂತೆ, ನೀನು ಮೃತ್ಯುವನ್ನು ವರಿಸು. ಆ ಕುಬೇರ ಕಾರಣಾಂತರದಿಂದ ನನಗೂ ಅವನಿಗೂ ಯುದ್ಧ ಆಯಿತು, ನಾನವನನ್ನು ಸೋಲಿಸಿದೆ. ನನ್ನ ಭಯದಿಂದ ಕುಬೇರನು ಸಮೃದ್ಧವಾದ, ಧನಕನಕಗಳಿಂದ ಕೂಡಿದ ಲಂಕೆಯನ್ನು ಬಿಟ್ಟು, ಕೈಲಾಸಪರ್ವತದಲ್ಲಿ ವಾಸಮಾಡ್ತಾ ಇದ್ದಾನೆ. ಯುದ್ಧ ನಡಿಲಿಲ್ಲ ಬರಿಯ ಮಾತುಕತೆ. ಪ್ರಹಸ್ತ ಹೋಗಿ ಕುಬೇರನ ಹತ್ತಿರ ಹೇಳುತ್ತಾನೆ, ರಾವಣನಿಗೆ ಲಂಕೆ ಬೇಕಂತೆ, ಆಗ ತೆಗೆದುಕೊಳ್ಳಲಿ ಎಂದನು. ಕುಬೇರನು ತುಂಬ ದೊಡ್ಡವನು, ಆದರೆ ರಾವಣ ಏನು ಹೇಳಿದ ಸೀತೆಗೆ ಅಂದರೆ ನನ್ನ ಕಂಡು ಹೆದರಿ ಲಂಕೆಯಿಂದ ಭಾರತದ ಉತ್ತರಕ್ಕೆ ಹೋಗಿ ಕುಳಿತಿದ್ದಾನೆ ಕುಬೇರ.

ಮುಂದಿನದು, ಪುಷ್ಪಕ ಎನ್ನುವುದು ಕುಬೇರನ ವಿಮಾನ. ಬಹಳ ಶ್ರೇಷ್ಠವಾದದ್ದು. ಪುಷ್ಪಕ ವಿಮಾನಕ್ಕೆ ಯಾರು ಒಡೆಯನೋ, ಅವನ ಇಚ್ಛಾನುಸಾರವಾಗಿ ಸಂಚಾರಮಾಡುತ್ತದೆ ಅದು. ಇಚ್ಛೆ ಸಾಕು, ಸೂಚನೆ ಬೇಡ. ಅದನ್ನು ಪರಾಕ್ರಮದಿಂದ ನಾನು ಅದನ್ನು ಪಡೆದಿದ್ದೇನೆ, ಆಗಸದಲ್ಲಿ ಹಾರುತ್ತೇನೆ. ರೋಷಗೊಂಡ ನನ್ನ ಮುಖಗಳನ್ನು ಕಂಡು ಸುರರು ಗಡಗಡನೆ ನಡುಗುತ್ತಾರೆ. ನಾನಿರುವಲ್ಲಿ ಗಾಳಿ ನೋಡಿ ಬೀಸಬೇಕು. ಶಂಕಿತನಾಗಿ ಗಾಳಿ ಬೀಸುತ್ತಾನೆ ವಾಯುದೇವ ಎಂದನು ರಾವಣ. ನಿಜವಾಗಿ ಪ್ರಕೃತಿಗೆ ಗೊತ್ತು ನಮಗೆಷ್ಟು ಗಾಳಿ ಬೇಕು ಎನ್ನುವುದು. ಸೂರ್ಯ ನನ್ನ ಭಯದಿಂದ ಚಂಡಕಿರಣನು ಮಂದಕಿರಣನಾಗ್ತಾನೆ. ಹೀಗಿದೆ ನನ್ನ ಭಯಂಕರತ್ವ. ಮತ್ತೆ ಲಂಕೆಯನ್ನು ವರ್ಣಿಸುತ್ತಾನೆ ರಾವಣ. ಘೋರರಾಕ್ಷಸರಿಂದ ತುಂಬಿದೆ ಲಂಕೆ. ಇಂದ್ರನ ಅಮರಾವತಿಯಂತೆ, ಅಲ್ಲೀ ದೇವರು ದೇವತೆಗಳು ತುಂಬಿರುವಂಥದ್ದು. ಸ್ವಚ್ಛ ಶ್ವೇತ ವರ್ಣದ ಪ್ರಾಕಾರ, ಕೋಟೆಯಿಂದ ಆವೃತವಾಗಿದೆ ಲಂಕಾನಗರಿ. ಸರ್ವವೂ ಸ್ವರ್ಣ. ರತ್ನಗಳು ತುಂಬಿರುವಂಥಹ ರಮಣೀಯವಾಗಿರುವಂಥಹ ಪುರಿಯದು. ಹೇ ರಾಜಪುತ್ರಿಯೇ ನೀನು ವನವಾಸ ಮಾಡಲು ಯೋಗ್ಯಳಲ್ಲ. ನೀನು ಭವನಗಳಲ್ಲಿ ವಾಸಮಾಡಬೇಕು. ನೀನು ನನ್ನೊಟ್ಟಿಗೆ ಲಂಕೆಯಲ್ಲಿದ್ದರೆ, ಮಾನುಷಸುಖದ ಬಯಕೆ ಉಂಟಾಗುವುದಿಲ್ಲ, ಅಲ್ಲಿ ಸರ್ವಸುಖವಿದೆ. ಸೀತೆ ನೀನು ಹೇಳಿದ್ದೆಯಲ್ಲ, ಅಯೋಧ್ಯೆಯಲ್ಲಿ ಮನುಜರನುಭವಿಸುವ ಎಲ್ಲಾ ಸುಖಗಳನ್ನ ಕಂಡಿದ್ದೆ ಅಂದೆಯಲ್ಲ. ಲಂಕೆಗೆ ಬಂದರೆ, ಮನುಷ್ಯರಿಗೆ ಸಿಗದ ಸುಖವನ್ನು ಪಡೆಯಬಹುದು. ರಾಮನ ಸ್ಮರಣೆಯನ್ನೇ ಮಾಡುವುದಿಲ್ಲ ಲಂಕೆಗೆ ಬಂದರೆ. ರಾಮನ ಪ್ರಾಣಸಖಿಗೆ ರಾವಣ ರಾಮನನ್ನು ಪರಿಚಯಿಸುತ್ತಾನೆ. “ರಾಮ ದುರ್ಬಲ, ಅವನಲ್ಲಿ ಶಕ್ತಿಯಿಲ್ಲ. ದಶರಥನ ಅಪ್ರಿಯ ಪುತ್ರ ರಾಮ, ಅದಕ್ಕಾಗಿ ಕಾಡಿಗಟ್ಟಿದರು. ರಾಜ್ಯವನ್ನು ಕಳಕೊಂಡಿದಾನೆ. ಮನಸ್ಸು ದುರ್ಬಲವಾಗಿದೆ. ಅಂತಹ ರಾಮನೊಂದಿಗೆ ಜೀವನ ಮಾಡ್ತೀಯಾ? ವಿಶಾಲಾಕ್ಷಿಯೇ, ರಾಮನೆಂಬ ತಪಸ್ವಿಯ ಜೊತೆಗೆ ಏನು ಮಾಡುವೆ? ನಾನು ಸರ್ವರಾಕ್ಷಸರೊಡೆಯ, ನನ್ನನ್ನು ಇಷ್ಟಪಡು, ನಿರಾಕರಿಸದಿರು. ನನ್ನನ್ನು ನೀನು ತಿರಸ್ಕರಿಸಿದರೆ ಮುಂದೊಂದು ದಿನ ಪಶ್ಚಾತ್ತಾಪ ಪಡುವೆ. ಊರ್ವಶಿ ಪುರೂರವನನ್ನು ತಿರಸ್ಕರಿಸಿದಂತೆ ನೀನು ನನ್ನನ್ನು ತಿರಸ್ಕರಿಸಿ ಪಶ್ಚಾತ್ತಾಪ ಪಡಬೇಡ. ಒಪ್ಪಿಕೊ” ಎಂದೆಲ್ಲ ಹೇಳಿದ ರಾವಣ ಮತ್ತೆ ಹೇಳಿದ “ನನಗೆ ರಾಮನಿಗೆ ಯುದ್ಧವಾದಲ್ಲಿ ಆತ ನನ್ನ ಬೆರಳಿಗೂ ಸಮನಲ್ಲ. ಅವನು ಮನುಷ್ಯ. ನಿನ್ನ ಅದೃಷ್ಟ ನಾನು ನಿನಗೆ ಸಿಕ್ಕಿರುವುದು.”

ಸೀತೆಗೆ ಕೋಪ ಬಂತು. “ನೀನು ಕುಬೇರನ ಸಂಬಂಧ ಎಂದು ಹೇಳಿದೆ. ಅಂಥವನ ತಮ್ಮನಾಗಿ ಇಂತಹ ಅಕಾರ್ಯವನ್ನು ಹೇಗೆ ಮಾಡುವೆ? ಸರ್ವಭೂತನಮಸ್ಕೃತ ಕುಬೇರ. ಈ ಪಾಪವನ್ನು ಮಾಡಹೊರಟೆಯಲ್ಲ. ದೊಡ್ಡವರ ಹೆಸರು ಹೇಳಿ ಅಕಾರ್ಯವನ್ನು ಮಾಡಹೊರಟೆಯಲ್ಲಾ…! ಅವಶ್ಯವಾಗಿ ರಾಕ್ಷಸ ಜಾತಿಯೇ ನಾಶವಾಗುತ್ತದೆ. ನನ್ನನ್ನು ಅಪಹರಿಸಿದರೆ ನಿನಗೆ ಬದುಕಿಲ್ಲ. ಅಮೃತ ಕುಡಿದರೂ ಅಪ್ರಯೋಜಕ” ಎಂದಳು. ಆಗ ರಾವಣ ಅಂದುಕೊಂಡ ತನ್ನ ನಿಜರೂಪ ಕಂಡರೆ ಈಕೆ ತನ್ನನ್ನು ಮೆಚ್ಚಬಹುದೆಂದು, ಮುನಿವೇಷದಿಂದ ನಿಜರೂಪ ತಾಳಿದನು. ಕೈಬಡಿದು ನಿಜರೂಪ ಪ್ರಕಟಗೊಂಡನು. ಬಹುದೊಡ್ಡ ಶರೀರ….! ಆಗ ಮತ್ತೆ ತನ್ನ ವರ್ಣನೆ ಮಾಡಿಕೊಂಡ, “ಆಕಾಶದಲ್ಲಿ ನಿಂತು ಭೂಮಿಯನ್ನು ಎತ್ತಬಲ್ಲೆ. ಸಮುದ್ರವನ್ನೆ ಕುಡಿಯಬಲ್ಲೆ. ಮೃತ್ಯುವನ್ನೇ ಕೊಲ್ಲಬಲ್ಲೆ. ತೀಕ್ಷ್ಣ ವಾದ ಬಾಣಗಳಿಂದ ಸೂರ್ಯನ ಕಿರಣಗಳನ್ನು ತಡೆಹಿಡಿಯಬಲ್ಲೆ. ಭೂಮಿಯನ್ನು ಬೇಧಿಸಬಲ್ಲೆ. ಕೇಳಿದ್ದನ್ನು ಕೊಡಬಲ್ಲೆ” ಎಂದು ಹೇಳಿ ಮಹಾಕ್ರೋಧವನ್ನು ತಾಳಿದನು ರಾವಣ. ಇಪ್ಪತ್ತು ಕಣ್ಣುಗಳಿಂದ ಉದಯಪ್ರಭೆಯ ಸೂರ್ಯನಂತಿರುವ ಸೀತೆಯನ್ನು ನೋಡಿದ. ತ್ರಿಲೋಕವಿಖ್ಯಾತನಾದ ಪತಿ ನಿನಗೆ ಬೇಕು ಅಂತಿದ್ದರೆ, ನನ್ನನ್ನು ಸೇರು. ನಿನಗೆ ನಾನೇ ಸರಿಯಾದ ಪತಿ. ಬಹಳ ಕಾಲ ನಿನ್ನ ಜೊತೆಯಲ್ಲಿರುತ್ತೇನೆ. ನಿನಗೆ ಅಪ್ರಿಯವಾದದ್ದನ್ನು ಮಾಡುವುದಿಲ್ಲ” ಎಂದನು. ಪ್ರೇಮವಾದರೆ ಶಾಶ್ವತವಾಗಿರುತ್ತದೆ, ಕಾಮವಲ್ಲ.

ಸೀತೆಗೆ ರಾಮನ ಜೊತೆಯಲ್ಲೇ ಬದುಕುವಾಸೆ. “ಮಾನುಷಭಾವವನ್ನು ಬಿಡು, ನಿನ್ನ ಮನಸ್ಸನ್ನು ನನ್ನಲ್ಲಿಡು. ಅಲ್ಪಾಯುಷಿಯಾದ ರಾಮನಲ್ಲಿ ಅನುರಾಗವನ್ನು ಹೊಂದಿರುವೆಯಾ? ಮೂಢಳು ನೀನು. ಆ ರಾಮಾ ಒಂದು ಹೆಣ್ಣಿನ ಮಾತು ಕೇಳಿ ಕಾಡುಪಾಲಾದ, ದುರ್ಮತಿ.” ಹೀಗೆಲ್ಲ ಹೇಳಿದ್ದು ಮಾತ್ರವಲ್ಲ, ಕಾಮಮೋಹಿತನಾಗಿ ಹೆಜ್ಜೆಯನ್ನು ಮುಂದಿಟ್ಟ. ಸೀತೆಯನ್ನು ತುಡುಕಿದನು ರಾವಣ. ತನ್ನ ಎಡಗೈಯಿಂದ ಸೀತೆಯ ಕೂದಲು, ಬಲಗೈಯಿಂದ ಸೀತೆಯ ಮೊಣಕಾಲಿನ ಮೇಲ್ಭಾಗವಾದ ಊರನ್ನು ಹಿಡಿದೆತ್ತಿದನು ರಾವಣ. ಕಾಯೇನ ವಾಚಾ ಮನಸಾ ಸೀತೆ ರಾಮನಲ್ಲೇ ಇದ್ದಳು. ಮುಂದೆ ಸೀತೆ ಹೇಳುತ್ತಾಳೆ. ನನ್ನ ಮನಸ್ಸು ನನ್ನ ಅಧೀನ. ಯಾರಾದರು ನನ್ನನ್ನು ಮುಟ್ಟಿದ್ದರೆ, ಅಥವಾ ನಾನು ಯಾರಿಂದಾದರೂ ಮುಟ್ಟಲ್ಪಟ್ಟಿದ್ದರೆ ಅದು ಬಲಾತ್ಕಾರವಾಗಿ. ನನ್ನ ಹೃದಯ ರಾಮನಲ್ಲಿ ಬಿಟ್ಟು ಬೇರೆಲ್ಲೂ ಇಲ್ಲ. ರಾವಣನಿಗೆ ಸೀತೆಯ ಮೇಲೆ ಕಾಮಭಾವವಿದೆ.

ರಾವಣನಿಗೆ ಬ್ರಹ್ಮನಿಂದ ಶಾಪವಿದೆ, ಯಾರಾದರೂ ಹೆಣ್ಣುಮಗಳನ್ನು ಕಾಮಪೂರಿತವಾಗಿ ಬಲಾತ್ಕಾರವಾಗಿ ಮುಟ್ಟಿದರೆ, ರಾವಣನ ತಲೆ ನೂರು ಚೂರಾಗಬೇಕು ಎಂಬುದು. ಹಾಗೇ ಕುಬೇರನ ಮಗನ ಶಾಪವಿದೆ, ಬಲಾತ್ಕಾರದಿಂದ ಹೆಣ್ಣನ್ನು ಕಾಮಸಹಿತನಾಗಿ ಮುಟ್ಟಿದರೆ ರಾವಣನ ತಲೆ ಏಳು ಚೂರಾಗಬೇಕೆಂದು. ಆದ್ದರಿಂದ ಸೀತೆಯನ್ನು ಎತ್ತುವಾಗ ಆತನಿಗೆ ಕಾಮವಿರಲಿಲ್ಲ. ಸಾವು ಎನ್ನುವುದು ಮನೋನಿಯಂತ್ರಣವನ್ನು ಕೊಡುತ್ತದೆ. ಮುಂದೆ ರಾವಣನೇ ಸೀತೆಗೆ ಹೇಳುವನು, ನೀನು ಎಲ್ಲಿಯವರೆಗೆ ಕಾಮವನ್ನು ಹೊಂದುವುದಿಲ್ಲವೋ ಅಲ್ಲಿಯವರೆಗೆ ನಾನು ಆ ಭಾವದಿಂದ ಮುಟ್ಟುವುದಿಲ್ಲ ಎಂದು.

ವನದೇವತೆಗಳಲ್ಲಿ ಸೀತೆಯನ್ನು ಕಾಪಾಡಿ ಎಂದು ಹೇಳಿದ್ದನು ರಾಮ. ಅವರೆಲ್ಲ ದೊಡ್ಡ ಪರ್ವತದ ಆಕಾರಿ ರಾವಣನನ್ನು ನೋಡಿ ಓಡಿದರು. ಆಗ ರಾವಣನ ಪಿಶಾಚಮುಖದ ಕತ್ತೆಯ ರಥವು ಪ್ರಕಟವಾಯಿತು. ರಾವಣನು ಸೀತೆಯನ್ನು ಕೆಟ್ಟ ಮಾತಿನಿಂದ ಬೈದು, ಸೆಳೆದು ರಥದಲ್ಲಿ ಕೂರಿಸಿದನು. ಸೀತೆ ಆಕ್ರಂದಿಸಿದಳು. ಕಂಠಕ್ಕೆ ಪ್ರಾಣ ಇರುವಷ್ಟು “ರಾಮಾ ರಾಮಾ”‘ ಎಂದು ಆಕ್ರಂದಿಸಿ ಕರೆದಳು. ಸೀತೆಗೆ ಒಂದಿಷ್ಟೂ ಕಾಮವಿರಲಿಲ್ಲ. ರಾವಣ ಕಾಮಪೂರಿತ. ಆಕಾಶಕ್ಕೇರಿದನು ರಥದ ಮೂಲಕ. ರಾಮಾಶ್ರಮದ ಮೇಲೆ ಗಗನದಲ್ಲಿ ರಥವು ಚಲಿಸ್ತಾ ಇದೆ. ಹುಚ್ಚುಹಿಡಿದವಳಂತೆ, ಪ್ರಾಣಾಕ್ರಮಣವಾದಂತೆ ಸೀತೆ ಕೂಗಿ ಕರೆದಳು “ಹಾ ಲಕ್ಷ್ಮಣನೇ, ಗುರುಚಿತ್ತಪ್ರಸಾದಕನೇ, ಈ ದುಷ್ಟ ರಾವಣನು ನನ್ನನ್ನು ಸೆಳೆದೊಯ್ಯುತಿರುವುದು ನಿನಗೆ ಗೊತ್ತಾಗುತ್ತಿಲ್ಲವೇ…? ನೀನೂ ಅರಿಯದಾದೆಯಲ್ಲ…! ಧರ್ಮಕ್ಕಾಗಿ ಸರ್ವವನ್ಧು ತ್ಯಜಿಸಿದ ರಾಮನೇ, ಅಧರ್ಮದಿಂದ ಈ ದುಷ್ಟನು ನನ್ನನ್ನು ಸೆಳೆಯುತಿರುವಾಗ ನೀನು ಕಾಣ್ತಾ ಇಲ್ಲ..! ಎಲ್ಲಿ ನೀನು…? ದುಷ್ಟರನ್ನು ಶಿಕ್ಷಿಸುವವ ನೀನು, ನಿನ್ನ ಪ್ರಾಣಸಖಿಯನ್ನು ಕರೆದು ಕದ್ದೊಯ್ಯುವ ಈ ಪರಮಪಾಪಿಯನ್ನು ಶಿಕ್ಷಿಸು. ಲಕ್ಷ್ಮಣ ರಾಮನನ್ನು ಕೊರಳೆತ್ತಿ ಕರೆದ ಸೀತೆ ಕೊನೆಯಲ್ಲಿ, ಪಾಪ ಕಾರ್ಯದ ಫಲಕ್ಕೆ ಕಾಲಬೇಕು. ರಾವಣನನ್ನು ಕುರಿತು ಘೋರಪಾಪಕರ್ಮಿಯೇ ನೀನು ಮಾಡಿದ ಈ ಪಾಪ ಕಾರ್ಯಕ್ಕೆ ಫಲ ಬರದಿರದು. ಆದರೆ ಬಂದಾಗ ರಾಮನಿಂದ ಪ್ರಾಣವನ್ನು ಕಳೆದುಕೊ ಎಂದು ಶಪಿಸಿದಳು. ಅಬಲೆಯವಳು. ಕಾಲ ಬಂದಪ್ಪಳಿಸೀತು ನಿನ್ನನ್ನು. ಸೀತೆ ಶಪಿಸಿದ ಈ ಶಾಪ ಒಂದು ವರ್ಷದೊಳಗಾಗಿ ಫಲಿಸುತ್ತದೆ. ರಾಮನ ಕೈಯಿಂದಲೇ ರಾವಣನಿಗೆ ಮೃತ್ಯು ಬಂತು. ಕೈಕೇಯಿ ನೆನಪಾಯ್ತು ಸೀತೆಗೆ. ತನ್ನ ಬಳಗದವರು, ಬಳಗದೊಡಗೂಡಿ ನಲಿಯುವ ಹೊತ್ತು ಬಂದಿತು. ಇದು ತಾನೆ ಬೇಕಾಗಿದ್ದು ಅವಳಿಗೆ. ನಾವೆಲ್ಲ ಹೀಗಾಗಿ ಹೋಗಲಿ ಎಂಬುದು. ಕಾಡು ಪಾಲಾಗಲಿ, ಕಾಡುರಾಕ್ಷಸರ ಪಾಲಾಗಲಿ ಅಂತ ತಾನೇ ಆಕೆ ಬಯಸಿದ್ದು. ಹಾಗಾಗಿ ಅವಳು ನಲಿಯುವ ಹೊತ್ತು ಬಂತು. ಯಾಕೆಂದರೆ ಧರ್ಮವೇ ಕಾಮ. ಯಾವ ರಾಮನಿಗೆ ಧರ್ಮವೇ ಕಾಮವೋ, ಕಾಮ ಬೇರೆ ಇಲ್ಲ. ಆ ಧರ್ಮಕಾಮನ ಧರ್ಮಪತ್ನಿಯನ್ನು ಹೀಗೆ ಅಪಹರಣ ಮಾಡುತ್ತಿರುವವ ಈ ಹೊತ್ತಿದೆಯಲ್ಲಾ, ಸೆಳೆದೊಯ್ಯುವ ಹೊತ್ತು ನನ್ನನ್ನು, ಇದು ಕೈಕೇಯಿ ಆಸೆಪಟ್ಟಿದ ಹೊತ್ತು ಎಂಬುದಾಗಿ ಕೈಕೇಯಿಯನ್ನು ಅಂತರಂಗದಿಂದ ನಿಂದಿಸುತ್ತಾಳೆ ಸೀತೆ.

ಬಳಿಕ ಒಂದೊಂದು ಒಂದೊಂದು ಸಂಗತಿಯನ್ನು ಕರೆದು ಹೇಳುತ್ತಾಳೆ ಸೀತೆ ರಾಮನಿಗೆ ಹೇಳಿ ಎಂದು. ಮೊದಲು ಕಣ್ಣಿಗೆ ಬಿದ್ದಿದ್ದು ಕಣಿಗಲು ಹೂವಿನ ಮರಗಳು. ಆ ಮರಗಳಿಗೆ ಸೀತೆ ಹೇಳುತ್ತಾಳೆ ಬೇಗ ರಾಮನಿಗೆ ಹೇಳಿ ರಾವಣನು ಸೀತೆಯನ್ನು ಕದ್ದೋಯ್ಯುತ್ತಿದ್ದಾನೆ ಎಂದು. ಪ್ರಸರ್ವಣ ಪರ್ವತಕ್ಕೆ ನಮಸ್ಕಾರ ಮಾಡಿ, ಗೋದಾವರಿ ನದಿಯನ್ನು ವಂದಿಸಿ ಹೇಳ್ತಾಳೆ ಸೀತೆ ಬೇಗ ರಾಮನಿಗೆ ಹೇಳಿ, ರಾವಣನು ಸೀತೆಯನ್ನು ಕದ್ದೊಯ್ಯುತ್ತಿದ್ದಾನೆ. ಈ ವನದ ವಿವಿಧ ವೃಕ್ಷಗಳಲ್ಲಿ ನೆಲೆಸಿರ್ತಕ್ಕಂಥ ದೇವತೆಗಳೇ, ನಿಮಗೆಲ್ಲ ವಂದಿಸ್ತೇನೆ ಹೇಳಿ ನನ್ನೊಡೆಯನಿಗೆ ಸೀತೆಯನ್ನು ರಾವಣ ಬಲಾತ್ಕಾರವಾಗಿ ಕದ್ದೊಯ್ಯುತ್ತಿದ್ದಾನೆ ಎಂದು. ಕಾಡಿನ ಎಲ್ಲ ಜೀವಿಗಳು, ಮೃಗ ಪಕ್ಷಿಗಳು, ಮನುಷ್ಯರು, ಕ್ರಿಮಿ ಕೀಟಗಳು ಎಲ್ಲವುಗಳಿಗೂ ಹೇಳ್ತಾಳೆ ಸೀತೆ ನಿಮಗೆ ನಾನು ಶರಣಾದೆ. ರಾಮನಿಗೆ ಹೇಳಿ ರಾವಣನು ಬಲಾತ್ಕಾರವಾಗಿ, ನನ್ನಿಚ್ಛೆಯಿಂದ ಅಲ್ಲ, ನಾನೊಪ್ಪಿ ಅಲ್ಲ, ನಾನು ನಾನಾಗಿ ಹೋಗಿದ್ದಲ್ಲ, ರಾವಣನು ಬಲಾತ್ಕರಿಸಿ ಕರೆದೊಯ್ದಿದ್ದು ಎಂಬುದಾಗಿ ರಾಮನಿಗೆ ಹೇಳಿ. ರಾಮನಿಗೆ ಗೊತ್ತಾದ್ರೆ ಸಾಕು. ಲಂಕೆಯೇನು, ಯಮಲೋಕಕ್ಕೆ ಹೋದರೂ ಕೂಡಾ, ನನ್ನನ್ನು ಕೊಂದರೂ ಕೂಡಾ ಯಮನೊಡನೆ ಯುದ್ಧವನ್ನು ಮಾಡಿ ಮರಳಿ ಈ ಲೋಕಕ್ಕೆ ಕರೆದುತರಬಲ್ಲ. ಕರೆತರ್ತಾನೆ, ಹೇಳಿ ರಾಮನಿಗೆ. ಏನು ಕಂಡಿತೋ, ಯಾರು ಕಂಡರೋ ಅವರಿಗೆಲ್ಲ, ಅದಕ್ಕೆಲ್ಲ ಹೇಳ್ತಾಳೆ ರಾಮನಿಗೆ ಹೇಳಿ. ರಾಮನಿಗೆ ಸುದ್ದಿ ಮುಟ್ಟಿಸಿ ಮತ್ತು ಇಷ್ಟಪಟ್ಟು ಹೋಗಿದ್ದಲ್ಲ ಅಂತ ಹೇಳಿ, ಬಲವಾಗಿ ಬಲಪೂರ್ವಕವಾಗಿ ಕರೆದೊಯ್ದದ್ದು ಎಂಬುದಾಗಿ ಆಕೆ ಕಂಡ ಕಂಡ ಮರ, ಗಿಡ, ಪ್ರಾಣಿ, ಪಕ್ಷಿ, ನದಿ, ಪರ್ವತ ಹೀಗೆ ಎಲ್ಲವುದಕ್ಕೂ ಹೇಳ್ತಾಳೆ.

ಆಗ ಅವಳ ಕಣ್ಣಿಗೆ ಬಿದ್ದಿದ್ದು ಜಟಾಯು. ಇಲ್ಲಿಂದ ಪ್ರಾರಂಭ ಜಟಾಯು ಪರ್ವ. ಹೀಗೆಲ್ಲಾ ಹಲುಬ್ತಾ ಇದ್ದಾಗ ಒಂದು ವೃಕ್ಷದಲ್ಲಿ ಪಾಪ ನಿದ್ದೆ ಮಾಡ್ತಾ ಇದ್ದ ಜಟಾಯುವನ್ನು ಆ ಸೀತೆ ಕಂಡಳು. ರಾವಣನ ವಶದಲ್ಲಿದ್ದ ಸೀತೆ ದೊಡ್ಡದಾಗಿ ಆಕ್ರಂದಿಸಿದಳು ಏನಾದ್ರು ತನಗೆ ಸಹಾಯ ಮಾಡಲಿ ಎನ್ನುವ ಕಾರಣಕ್ಕೆ. ಗಂಟಲು ಹರಿದು ಹೋಗುವಂತೆ ಕೂಗಿಕೊಂಡಳು. ಭಯವಾಗಿದೆ ಅವಳಿಗೆ. ರಾವಣನ ಭಯಕ್ಕಿಂತ, ಅವಳಿಗೆ ಚಾರಿತ್ರ್ಯದ ಚಿಂತೆ. ರಾಮನ ಚಿಂತೆ. ದುಃಖದಿಂದಾಗಿ ಅವಳ ಸ್ವರ ಸಣ್ಣವಾಗ್ತಾ ಇತ್ತು. ಆಕೆ ಹೇಳಿದ್ದೇನು “ಹೇ ಜಟಾಯುವೇ, ಆರ್ಯನೇ, ನೋಡು ನನ್ನನ್ನು”. ಆರ್ಯ ಅಂದರೆ ಅಜ್ಜ ಎಂದು. ದಶರಥನದೇ ವಯಸ್ಸು ಜಟಾಯುವಿಗೆ. ಅಷ್ಟು ಹಳೆಯವನು. ಜಟಾಯುವೇ, ನೋಡು ನನ್ನನ್ನು ಲೋಕನಾಥನ ಮಡದಿಯಾದ್ರು ಅನಾಥೆಯಂತೆ ನನ್ನನ್ನು ಈ ದುಷ್ಟ ಸೆಳೆದೊಯ್ತಾ ಇದ್ದಾನೆ. ಪಾಪಿ. ಒಂದಿಷ್ಟು ದಯೆ ಇಲ್ಲದವನು. ಕೂಡಲೇ ಅವಳಿಗೆ ಮನಸ್ಸಿಗೆ ಬಂತು ಜಟಾಯು ರಾವಣನ ಜೊತೆ ಯುದ್ಧಕ್ಕೆ ಬರಬಹುದೆಂದು. ಜಟಾಯುವಿಗೆ ಹೇಳ್ತಾಳೆ ಇವನೊಡನೆ ಯುದ್ಧ ನಿನ್ನಿಂದಾಗದು, ಕ್ರೂರ ಇವನು. ಪಾಪಿ ಇವನು. ತುಂಬ ಶಕ್ತಿಯೂ ಇದೆ. ಆಯುಧಗಳೂ ಇದ್ದಾವೆ ಜೊತೆಯಲ್ಲಿ. ಎಲ್ಲ ಕಲೆಯನ್ನು ಬಲ್ಲವನು. ನಿನ್ನಿಂದಾಗದು. ನೀನು ಹೋಗಿ ರಾಮನಿಗೆ ಹೇಳು. ಬೇಗನೆ ಹೋಗಿ ರಾಮನಿಗೆ ಈ ವಾರ್ತೆಯನ್ನು ರಾಮನಿಗೂ ಲಕ್ಷ್ಮಣನಿಗೂ ವಿವರವಾಗಿ ನೀನು ಹೇಳಬೇಕು ಎಂದು ಕೂಗಿ ಕೂಗಿ ಕರೆದಾಗ, ಕರೆದು ಕರೆದು ಕೂಗಿದಾಗ  ನಿದ್ದೆಯಿಂದ ಎದ್ದನು ಜಟಾಯು. ವಯಸ್ಸಾಗಿದೆ ಅವನಿಗೆ. ವಯಸ್ಸು ನಿದ್ದೆಗೆ ಕಾರಣ. ಆ ವಯಸ್ಸಿನಲ್ಲಿ ತೂಕಡಿಕೆ ಇರ್ತದೆ. ತುಂಬ ಸಹಜವಾದ ಸ್ಥಿತಿ ಅದು. ಎಚ್ಚೆತ್ತ ಜಟಾಯು ಮೊದಲು ನೋಡಿದ್ದು ರಾವಣನನ್ನು. ಅರೆಕ್ಷಣದಲ್ಲಿ ಅಲ್ಲಿಯೇ ಇದ್ದ ವೈದೇಹಿಯನ್ನು ಕಂಡ ಜಟಾಯು. ಕಣ್ಣೀರಿನ ಮೈಥಿಲಿಯನ್ನು ಕಂಡಾಗ ರಾವಣನಿಗೆ ಜಟಾಯು ಒಳ್ಳೆಯ ಮಾತನ್ನು ಹೇಳ್ತಾನೆ.

“ಸನಾತನ ಧರ್ಮದಲ್ಲಿ ನೆಲೆಗೊಳ್ಳಬೇಕಾದವನು ನೀನು. ಸತ್ಯವನ್ನು ಆಶ್ರಯಿಸಬೇಕಾದವನು ನೀನು; ಮಿಥ್ಯವನ್ನಲ್ಲ; ಮೋಸವನ್ನಲ್ಲ. ಹೇ ತಮ್ಮಾ, ಇಂಥ ಕಾರ್ಯವನ್ನು ಮಾಡಬಾರದು” ಎಂದು ಜಟಾಯು ರಾವಣನಿಗೆ ಹೇಳ್ತಾನೆ. ಸಜ್ಜನರನ್ನು ನಿಂದೆ ಮಾಡತಕ್ಕಂಥ ಇಂಥಾ ಕಾರ್ಯವನ್ನು ಮಾಡಲಿಕ್ಕೆ ಹೊರಟಿದೆಯಲ್ಲ, ಏನೀಗ ಮಾಡ್ತಾ ಇದ್ದೀಯೇ? ಮಾಡಬಾರದ ಕರ್ಮ ಇದು. ನಾನ್ಯಾರೋ ಅಂತ ಅಂದ್ಕೋಬೇಡ, ಸುಮ್ಮನೆ ಹದ್ದು ಅಂತ ಅಂದ್ಕೋಬೇಡ. ಕ್ರುದ್ಧಗಳ ರಾಜ.

ಪಕ್ಷಿರಾಜನಾದ ನಿನ್ನ ಹಾಗೆ ನಾನು ಕೂಡ ದೊರೆ. ಜಟಾಯು ನಾನು. ದುರ್ಬಲ ಅಂತ ಅಂದ್ಕೋಬೇಡ. ಮಹಾಬಲ ನಾನು. ನನ್ನಲ್ಲಿಯೂ ಕೂಡ ಸಾಮರ್ಥ್ಯವಿದೆ. ಈಗ ದಾಟಿ ಬದಲಾಯಿತು. ತಮ್ಮಾ ಅಂತ ಇಷ್ಟೊತ್ತು ಹೇಳ್ತಿದ್ದವನು. ಜಟಾಯುವಿನ ಮಾತು ಬದಲಾಗ್ತಿದ್ದ ಹಾಗೆ ರಾವಣನ ಭಾವಗಳೂ ಬದಲಾಗ್ತಿದೆ. ಜಟಾಯುವಿನ ಮಾತಿನ ಮೂಲಕ ರಾವಣನ ಮುಖಭಾವಗಳು ಬದಲಾಗ್ತದೆ. ಯಾರು ರಾಮನೆಂದರೆ ಸಮಸ್ತ ಲೋಕದ ದೊರೆ. ಇಕ್ಷ್ವಾಕು ವಂಶಕ್ಕೆ ಸೇರಿದೆ ಇಡೀ ಭೂಮಂಡಳ. ಮಹೇಂದ್ರನಂಥವನು, ವರುಣನಂಥವನು ರಾಮನು. ಸಮಸ್ತ ಲೋಕದ ಒಳಿತು ರಾಮನ ಸಂಕಲ್ಪ, ಯಾರ ಕೇಡನ್ನೂ ಬಯಸುವವನಲ್ಲ. ದಶರಥ ನಂದನ ಲೋಕನಾಥ ರಾಮನ ಪತ್ನಿ ಧರ್ಮಪತ್ನಿ ಸೀತೆ. ನೀನು ಅಪಹರಿಸಹೊರಟದ್ದು ಇಂಥವಳನ್ನು. ಜಗದೊಡೆಯನ ಮಡದಿಯನ್ನು ಅಪಹರಿಸಹೊರಟವನು ನೀನು. ದೊರೆಯ ಪ್ರಥಮ ಕರ್ತವ್ಯ ಪ್ರಜಾಪಾಲನೆ. ಸೀತೆಯಂತೂ ರಾಮನ ಸ್ವತ್ತು. ಅವನಿಗೆ ಸೇರಬೇಕಾದವಳು. ಧರ್ಮಸಿಂಹಾಸನದ ಮೇಲೆ ಕೂರಬೇಕಾದರೆ ಆ ತಾಯಿಯನ್ನು ಹೇಗೆ ಕಾಪಾಡಬೇಕು…, ಈ ನೀಚಬುದ್ಧಿಯನ್ನು ಬಿಡು. ಪರಸ್ತ್ರೀಯರನ್ನು ಕೆಡಿಸುವ ಈ ಬುದ್ಧಿಯನ್ನ ಬಿಡು. ಅಂಥಹ ಕೆಲಸವನ್ನು ಮಾಡಬಾರದು ರಾವಣ. ಎಂಥಹ ಕೆಲಸ ಮಾಡಿದಾಗ ಸಜ್ಜನರು ನಿಂದಿಸುತ್ತಾರೋ, ಪರರು ನಮ್ಮನ್ನು ಹೀಗೆಳಿತಾರೋ, ನಿಂದಿಸುತ್ತಾರೋ, ಅಂತಹ ಕೆಲಸವನ್ನು ಮಾಡಬಾರದು ರಾವಣ. ಮಂಡೋದರಿಗೆ ಯಾರಾದರೂ ಹೀಗೆ ಮಾಡಿದರೆ ಹೇಗಾಗಬಹುದು? ನೀನು ಇಂಥಹ ಕಾರ್ಯ ಮಾಡುವಾಗ ನೀನದನ್ನು ಆಲೋಚಿಸಬೇಕಿತ್ತು. ಈಗಲಾದರೂ ಆಲೋಚಿಸು. ಸಾಮಾನ್ಯ ಮನುಷ್ಯರಿಗೆ ಶಾಸ್ತ್ರ ಗೊತ್ತಿರುವುದಿಲ್ಲ. ದೊರೆಯಾದವನು ಮಾದರಿಯಾಗಬೇಕು. ದೊರೆ ಹೇಗಿರ್ತಾರೋ ಸಾಮಾನ್ಯರು ಹಾಗಿರ್ತಾರೆ. ಇಡೀ ಸಮಾಜದ ದಾರಿ ತಪ್ಪಿಸುತ್ತೀಯೆ ನೀನು. ರಾಜನು ಧರ್ಮ ತಪ್ಪಬಾರದು. ಯಥಾ ರಾಜಾ ತಥಾ ಪ್ರಜಾ. ಹೀಗೆ ಮಾಡಬೇಡ ಇಂಥಹ ಕಾರ್ಯವನ್ನು ಎಂದು ಜಟಾಯು ರಾವಣನಿಗೆ ಹೇಳಿದನು.

ಜಟಾಯುವಿನ ದಾಟಿ ಬದಲಾಯಿತು. ಪಾಪಸ್ವಭಾವಿ ನೀನು. ಕೆಲವರು ಸಾಂದರ್ಭಿಕವಾಗಿ ಪಾಪ ಮಾಡ್ತಾರೆ. ಇದು ಹಾಗಲ್ಲ. ಹೇಗೋ ನೀನು ದೊರೆಯಾದೆ..? ಪಾಪಿಗೆ ಸ್ವರ್ಗ ಸಿಕ್ಕಂತಾಯಿತಲ್ಲೋ…! ಜಟಾಯು ತೀರ್ಮಾನಿಸಿದ, ಸ್ವಭಾವವನ್ನು ತಿದ್ದಲಾಗದು. ಸಾಂದರ್ಭಿಕ ದೋಷವನ್ನು ತೆಗೆಯಬಹುದು. ದುಷ್ಟರ ಮನೆಯಲ್ಲಿ ಶುಭವು, ಸಂಪತ್ತು ಬಹುಕಾಲ ಉಳಿಯಲು ಸಾಧ್ಯವಿಲ್ಲ. ರಾವಣ ಸೀತೆಯನ್ನು ಕದ್ದೊಯ್ದ, ಅವಳು ಸಿಕ್ಕಿದಳಾ? ದಕ್ಕಿತಾ? ಎಲ್ಲಾ ಲಕ್ಷ್ಮಿಯನ್ನೂ ಕೊಂಡೊಯ್ದಳು. ರಾಜ್ಯಲಕ್ಷ್ಮಿ, ದೈನ್ಯಲಕ್ಷ್ಮಿ, ಆಯುರ್ಲಕ್ಷ್ಮಿ, ಸಂತಾನಲಕ್ಷ್ಮಿ ಯಾವ್ದಾದರೂ ಉಳೀತಾ? ರಾಮ ನಿನಗೇನು ಮಾಡಿದ್ದ? ನಿನ್ನ ರಾಜ್ಯಕ್ಕೇನು ಮಾಡಿದ್ದ? ಏನಪರಾಧ ಮಾಡಿದ್ದ?
ನೀನ್ಯಾಕೆ ದ್ರೋಹ ಮಾಡ್ತೀಯಾ? ಶೂರ್ಪಣಕಿಯ ಕಿವಿ ಮೂಗನ್ನು ಕತ್ತರಿಸಿರಬಹುದು, ರಾಕ್ಷಸರನ್ನು ಕೊಂದಿರಬಹುದು. ಕೊರಳಿಗೆ ಬರಬೇಕಾದದ್ದು ಕಿವಿ ಮೂಗಲ್ಲಿ ಹೋಗಿದೆ. ಇನ್ನೂ ಖರಾದಿ ರಾಕ್ಷಸರು ರಾಮನಿದ್ದಲ್ಲಿ ಹೋದದ್ದು, ರಾಮ ಹುಡುಕಿಕೊಂಡು ಬಂದಿರಲಿಲ್ಲ. ಒಂದು ಮಾತೂ ಆಡದೇ ರಾಕ್ಷಸರೆಲ್ಲರೂ ರಾಮಾಶ್ರಮದ ಮೇಲೆ ಆಕ್ರಮಣ ಮಾಡಿದಾಗ ಪ್ರತಿಕ್ರಯಿಸಬೇಕೋ ಬೇಡವೋ…? ಇದರಲ್ಲಿ ರಾಮಾಪರಾಧವೇನಿದೆ? ಒಂದಿನಿತೂ ತಪ್ಪಿಲ್ಲ ರಾಮನದು. ಬಿಡು ರಾಮಪತ್ನಿಯನ್ನು ಈಗಲೇ ಬಿಟ್ಟುಬಿಡು. ರಾಮನು ನಿನ್ನನ್ನು ಕೆಂಗಣ್ಣಿನಿಂದಲೇ ಸುಟ್ಟುಬಿಟ್ಟಾನು…? ಸೆರಗಿನಲ್ಲಿ ಕಚ್ಚುವ ಸರ್ಪವನ್ನು ಇಟ್ಟುಕೊಂಡಂತೆ ಸೀತೆಯೆಂದರೆ. ಕೊರಳಿನಲ್ಲಿ ಕಾಲಪಾಶವಿದ್ದಂತೆ. ಬದುಕಲಾರೆ ಬಹುಕಾಲ ನೀನು.

ಹೊರಲಾಗುವಷ್ಟೇ ಭಾರವನ್ನು ಹೊತ್ತಿಕೊಳ್ಳಬೇಕು. ಭೌತಿಕವಾಗಿ ಸೀತೆ ಭಾರವಿಲ್ಲ ಅನ್ನಿಸಬಹುದು ಆದರೆ ಮುಂದೊಂದು ದಿನ ನಿನ್ನ ಕೊರಳು ಕಡಿವ ಭಾರವಾಗುವುದು. ಬದುಕುವ ಆಸೆಯಿರುವವನು ಇಂಥಹ ಭಾರವನ್ನು ಹೊತ್ತಿಕೊಳ್ಳಬಾರದು. ಜೀರ್ಣವಾಗುವಷ್ಟೇ ಊಟಮಾಡಬೇಕು. ಸೀತೆಯನ್ನು ಜೀರ್ಣಿಸಿಕೊಳ್ಳಲಾರೆ ನೀನು. ಸಾವು ತರುವ ಊಟವನ್ನು ಮಾಡಬೇಕಾ ರಾವಣಾ..? ಯಾವ ಕೆಲಸ ಮಾಡುವುದರಿಂದ ಧರ್ಮವಿಲ್ಲವೋ, ಕೀರ್ತಿಯಿಲ್ಲವೋ, ಯಶಸ್ಸಿಲ್ಲವೋ ಅಂತಹ ಕೆಲಸವನ್ನು ಮಾಡಬಾರದು. ಯಾವ ಕೆಲಸದಿಂದ ಶರೀರಕ್ಕೆ ಕುತ್ತುಬಂದೀತೋ, ಅಂತದ್ದನ್ನು ಯಾರೂ ಮಾಡುವುದಿಲ್ಲ ನಿನ್ನೊಬ್ಬನನ್ನು ಬಿಟ್ಟು…!! ಈಗ ಜಟಾಯುವಿಗೆ ಯುದ್ಧವೇ ಮಾರ್ಗ ಎಂದು ಗೊತ್ತಾಯಿತು. ಆಗ ಜಟಾಯು ಹೇಳಿದ, 60000ವರ್ಷ ಸಂದ ಮುಪ್ಪಿನ ವೃದ್ಧ ನಾನು. ನೀನು ಯುವಕ. ನಿನ್ನಲ್ಲಿ ಶಕ್ತಿ, ಆಯುಧ, ಕವಚ, ರಥವಿದೆ. ನನಗಿದ್ಯಾವುದೂ ಇಲ್ಲ. ಪಕ್ಷಿಗಳಿಂದ ಸಾವಿಲ್ಲ ಎನ್ನುವ ವರಬಲವೂ ನಿನಗಿದೆ. ಈ ದ್ವಂದ್ವ ಯುದ್ಧ ಸಮಬಲಕ್ಕೆ ಸೇರಿದ್ದಲ್ಲ. ಅಧರ್ಮವಿದೆ ರಾವಣನಲ್ಲಿ, ಧರ್ಮದ ಯುದ್ಧ ಜಟಾಯುವಿನದು. ಇದೆಲ್ಲ ಗೊತ್ತಿದೆ ಜಟಾಯುವಿಗೆ, ಆದರೆ ನನ್ನ ಕಣ್ಣೆದುರು ನೀನು ಸೀತೆಯನ್ನು ಕರೆದೊಯ್ಯಲಾರೆ. ನಾನು ಬದುಕಿರ್ತಾ, ನೀನು ಸೀತೆಯನ್ನು ಕದ್ದೊಯ್ಯಲಾರೆ. ವೇದವನ್ನು ತರ್ಕದಿಂದ ವಿರೂಪಗೊಳಿಸಲು ಸಾಧ್ಯವಿಲ್ಲ. ಅದು ನಿತ್ಯ ಶಾಶ್ವತ. ಹಾಗೇ ಸೀತೆಯೂ ಕೂಡ. ನೀನು ನಿಜವಾಗಿ ಶೂರನಾದರೆ, ಸ್ವಲ್ಪ ಹೊತ್ತು ನಿಲ್ಲು ರಾಮ ಬರುವವರೆಗೆ. ಮುಂದೆ ಖರನಂತೆ ಆಗುವುದು ನಿನ್ನ ಕಥೆ. ಯಾವ ರಾಮನು ಹಲವು ಬಾರಿ ದೈತ್ಯದಾನವರನ್ನು ಸಂಹರಿಸಿದನೋ, ಹಾಗೆ ನಿನ್ನನ್ನು ರಾಮನು ಕೊಲ್ಲುತ್ತಾನೆ ರಾವಣ ಎಂದನು ಜಟಾಯು. ಜಟಾಯುವಿಗೆ ಗೊತ್ತು ತಾನು ಈ ಯುದ್ಧದಲ್ಲಿ ಸಾಯ್ತೇನೆ ಎಂದು. ಗೊತ್ತಿದ್ದೂ ಮಾಡ್ತಾನೆ. ಪ್ರಾಣವನ್ನೆತ್ತಿ ರಾಮಚರಣದಲ್ಲಿಟ್ಟೆ ಎಂದು ಮಾಡುವ ಪರಿ ಜಟಾಯುವಿನದು.

ರಾಮ ಲಕ್ಷ್ಮಣರೂ ತುಂಬ ದೂರದಲ್ಲಿದ್ದಾರೆ. ನಾನು ಹೋದರೆ ಇಲ್ಲೇನಾಗುವುದೋ, ಆದರೆ ನೀನು ಅವರಿಂದಲೇ ಸಾಯುತ್ತೀಯ ರಾವಣ. ನೀನು ಹೇಡಿ ರಾವಣ, ಇಲ್ಲದಿದ್ದರೆ, ನೀನು ರಾಮನ ಮುಂದೆ ಹೋಗಬೇಕಿತ್ತು. ಆದರೂ ನಾನು ಬದುಕಿರುವವರೆಗೂ ನೀನು ಏನೂ ಮಾಡಲಾರೆ. ಜಟಾಯುವಿಗೆ ಭವಿಷ್ಯ ಗೊತ್ತು. ಈ ಒಳಿತಿನ ಸಾಕಾರರೂಪ ರಾಮಪ್ರಿಯ ಮಹಿಷಿಯನ್ನು ಕದ್ದೊಯ್ಯಲು ನಾನು ಬಿಡಲಾರೆ. ಪ್ರಾಣಕೊಟ್ಟಾದರೂ ರಾಮಕಾರ್ಯಮಾಡಬೇಕು ನಾನು. ದಶಗ್ರೀವ ನಿಲ್ಲು, ನಿನಗೆ ನಾನು ಸಮರಾತೀಥ್ಯ ಕೊಡ್ತೇನೆ, ಪ್ರಾಣವಿರುವವರೆಗೆ. ಉಸಿರಿರುವವರೆಗೆ. ಈ ನಿನ್ನ ಮಹಾರಥದಿಂದ ನಿನ್ನನ್ನು ಧರೆಗುರುಳಿಸಿಯೇ ಸಿದ್ಧ ಎಂದು ಯುದ್ಧಕ್ಕೆ ಸಿದ್ಧನಾದನು ಜಟಾಯು. ಮುಂದೇನಾಯಿತು…. ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments