ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಹ ಕೋಪ ಎನ್ನುವ ಗಾದೆಯನ್ನು ನಾವು ಕೇಳಿದ್ದೇವೆ. ದಂಡಕಾರಣ್ಯದ ಮಧ್ಯದಲ್ಲಿ ಪಂಚವಟಿಯ ಪರಿಸರದಲ್ಲಿ ಸೀತೆಯನ್ನು ವಂಚನೆಯಿಂದ ಅಪಹರಿಸಿ ಕೊಂಡೊಯ್ಯುತ್ತಿದ್ದ ರಾವಣನ ಕುರಿತು ಜಟಾಯುವು ಆಡಿದ ಮಾತುಗಳು ನ್ಯಾಯ ಸಮ್ಮತವಾಗಿದ್ದವು. ಅವುಗಳಲ್ಲಿ ಯಾವ ತಪ್ಪೂ, ದೋಷವೂ ಪೂರ್ವಾಗ್ರಹಗಳೂ ಇರಲಿಲ್ಲ. ಸರ್ವಕಾಲ ಸರ್ವದೇಶಗಳಿಗೆ ಸೇರುವವುಗಳಾಗಿದ್ದವು ಅವು. ಆದರೆ ರಾವಣನಿಗೆ ಕೋಪ ಬಂತು. ಕ್ರೋಧಗೊಂಡ ರಾವಣನ ಇಪ್ಪತ್ತು ಕಣ್ಣುಗಳು ಬೆಂಕಿಯಂತೆ ಉರಿದವು. ಕೋಪ ಪಾಪ ತುಂಬಿದ ಹೃದಯ ರಾವಣನದು. ಜಟಾಯು ಆಡಿದ ಮಾತುಗಳನ್ನು ಸಹಿಸಲಾರದವನಾಗಿ ಜಟಾಯುವಿನ ಮೇಲೇರಿ ಹೋದನು. ಪತಗೇಂದ್ರನ ಮೇಲೇರಿದನು ರಾಕ್ಷಸೇಂದ್ರನು. ಪಂಚವಟಿಯ ಕಾಡಿನಲ್ಲಿ ಅವರೀರ್ವರ ಮಧ್ಯೆ ಘೋರಸಂಗ್ರಾಮವು ನಡೆಯಿತು. ಸಂಘರ್ಷವು ಅತಿ ಭಯಂಕರವಾದ ಬಹುಕಾಲ ನಡೆಯುವಂತಹ ಸಂಗ್ರಾಮವಾಗಿ ಮಾರ್ಪಟ್ಟಿತು.

ಬಿರುಗಾಳಿಯ ಪರಿಣಾಮದಿಂದ ಎತ್ತರಕ್ಕೇರಿದ ಎರಡು ಮಹಾಮೇಘಗಳು ಒಂದಕ್ಕೊಂದು ಘರ್ಷಿಸಿಕೊಂಡಂತೆ ಇತ್ತು ಯುದ್ಧ. ರಾವಣನದು ಬೃಹದಾಕಾರ. ಜಟಾಯುವಿನದೂ ಬೃಹದಾಕಾರವೇ ಹೌದು. ಒಂದು ಸಾತ್ವಿಕ ಬೃಹದಾಕಾರ. ಇನ್ನೊಂದು ತಾಮಸದ ಆಕಾರ. ಎರಡು ಮಹಾಪರ್ವತಗಳು ಘರ್ಷಿಸಿಕೊಂಡಂತೆ ಇತ್ತು ಇವರ ಯುದ್ಧ. ರಾವಣರಥವು ಆಕಾಶಗಾಮಿ. ಹಾಗಾಗಿ ಆಗಸದಲ್ಲಿ ಯುದ್ಧ ನಡೆಯಿತು. ಮೊದಲ ಪ್ರಹಾರ ರಾವಣನಿಂದ. ಮಹಾಘೋರವಾದ ಬಾಣಗಳ ಪ್ರವಾಹವನ್ನು ರಾವಣನು ಜಟಾಯುವಿನ ಮೇಲ್ಗರೆದ. ನಾಲೀಕ, ನಾರಾಚ ಇದೇ ಮೊದಲಾದ ತೀಕ್ಷ್ಣಾಗ್ರವಾದ ಬಾಣಗಳ ಮಳೆಯನ್ನು ವೃದ್ಧಾಗ್ರನ ಮೇಲೆ ಸುರಿದ ರಾವಣ. ರಾವಣನ ಬಾಣಗಳು ಮುಂದೆ ಬಂದಾಗ ಪಕ್ಷಿರಾಜನು ಹಿಂಜರಿಯಲಿಲ್ಲ. ಧೈರ್ಯವಾಗಿ ಆ ಬಾಣಗಳನ್ನು ಸ್ವೀಕರಿಸಿದನು ಜಟಾಯು. ಹದ್ದುಗಳಿಗೆ ಇದ್ದಕ್ಕಿಂದತೆ ಹೋಗಿ ಲಕ್ಷ್ಯವನ್ನು ಸೇರುವ ಶಕ್ತಿಯಿದೆ. ಅದಕ್ಕಾಗಿ ಅವು ಇದ್ದಕ್ಕಿದ್ದಂತೆ ಆಕಾಶದಿಂದ ಭುವಿಗಿಳಿದು ತಮಗೆ ಬೇಕಾದ್ದನ್ನು ಎತ್ತಿಕೊಂಡು ಹೋಗುತ್ತವೆ. ಇದೇ ಕ್ರಮದಲ್ಲಿ ಜಟಾಯು ರಥದೊಳಗೆ ನುಗ್ಗಿಹೋಗಿ ರಾವಣನಿಗೆ ತನ್ನ ಉಗುರಗಳಿಂದ ದೊಡ್ಡ ದೊಡ್ಡ ಗಾಯಗಳನ್ನು ಮಾಡ್ತಾನೆ. ಜಟಾಯುವಿಗೇನು ಆಯುಧ ಅಂದರೆ, ಎರಡು ಕಾಲು, ಎರಡು ರೆಕ್ಕೆ ಮತ್ತು ತೀಕ್ಷ್ಣ ವಾದ ಕೊಕ್ಕು. ಇದನ್ನು ಬಾರಿ ಬಾರಿ ಮಾಡ್ತಾನೆ ಜಟಾಯು. ರಾವಣನ ಮೈತುಂಬ ಗಾಯಗಳಾದವು.

ಕುಪಿತನಾದ ರಾವಣ. ಜಟಾಯುವನ್ನು ಶತ್ರುವಾಗಿ ಭಾವಿಸಿದ. ಹಾಗಾಗಿ ಜಟಾಯುವಿನ ವಧೆಗಾಗಿ ಹತ್ತು ಘೋರ ಬಾಣಗಳನ್ನು ಕೈಗೆ ತೆಗೆದುಕೊಂಡ. ಮೃತ್ಯುದಂಡವನ್ಧು ಹೋಲುವಂತಹ ಬಾಣಗಳವು. ಶತ್ರುವಿನ ನಿಧನಕ್ಕೆ ಪರ್ಯಾಪ್ತವಾದ ಬಾಣಗಳವು. ತನ್ನೆಲ್ಲ ಶಕ್ತಿಗಳಿಂದ ಹೆದೆಯನ್ನು ಸೆಳೆದು ಬಾಣವನ್ನು ಬಿಟ್ಟನು ರಾವಣ. ಜಟಾಯುವಿನ ಪ್ರಾಣ ಹೋಗಲಿ ಎನ್ನುವುದು ರಾವಣನ ಭಾವ. ಆ ಘೋರ ಬಾಣಗಳು ಜಟಾಯುವಿನ ಮೇಲೆ ಪ್ರಯುಕ್ತವಾದವು. ಜಟಾಯುವಿಗೆ ಆ ಹೊತ್ತಿಗೆ ರಾವಣನ ರಥದೊಳಗಿರುವ ಜಾನಕಿ ಕಣ್ಣಿಗೆ ಬಿದ್ದಳು. ಕಣ್ಣೀರಿಡುತ್ತಿರುವ ಜಾನಕಿಯನ್ನು ಕಂಡ ಜಟಾಯುವಿಗೆ ಉಳಿದೆಲ್ಲವೂ ಮರೆತುಹೋಯಿತು. ಹತ್ತೂ ಬಾಣಗಳೂ ಜಟಾಯುವನ್ನು ಬೇಧಿಸಿಹೋದವು. ಇದಕ್ಕೆ ಮುಂದೆ ಪರಿಣಾಮವಿದೆ. ಹತ್ತೂ ರಂಧ್ರಗಳಲ್ಲಿ ರಕ್ತ ಸುರಿಯುತ್ತದೆ. ರಾಕ್ಷಸನ ಮೇಲೆರಿ ಹೋದನು ಜಟಾಯು…!

ರಾವಣನ ಕೈಯಲ್ಲಿ ಮಹಾಧನಸ್ಸಿತ್ತು. ಅದು ಆನೆಯ ಸೊಂಡಿಲಷ್ಟು ದಪ್ಪವಾಗಿತ್ತು. ಮುತ್ತಿನ ಮಣಿಗಳಿಂದಲಂಕೃತವಾಗಿದೆ. ರಥದೊಳಗೆ ನುಗ್ಗಿದ ಜಟಾಯು ಆ ಧನುಸ್ಸನ್ನು ಕಿತ್ತುಕೊಂಡ. ಹತ್ತು ಕೈಯಿಂದ ರಾವಣ ಹಿಡಿದ ಆ ಧನುಸ್ಸನ್ನು ಜಟಾಯು ಮುರಿದೆಸೆದ. ಜಟಾಯುವಿನದು ಸಹಜ ಬಲವಲ್ಲ, ಜಾನಕಿಯನ್ನು ನೋಡಿದಾಗ ಬಂದ ಭಾವಬಲವದು. ಇನ್ನೊಂದು ಧನುಸ್ಸನ್ನು ಸ್ವೀಕರಿಸಿ, ನೂರಾರು ಸಾವಿರಾರು ಬಾಣಗಳನ್ನು ಪ್ರಯೋಗಿಸಿದನು ರಾವಣ. ಬಾಣಗಳ ಗೂಡಿನೊಳಗಿರುವ ಪಕ್ಷಿಯಂತೆ ಕಂಡನು ಜಟಾಯು. ಭಯಪಡಲಿಲ್ಲ ಜಟಾಯು. ತನ್ನ ಎರಡೂ ರೆಕ್ಕೆಗಳಿಂದ ಬಾಣಗಳನ್ನು ಒದರಿದನು. ಮತ್ತೊಮ್ಮೆ ರಥದೊಳಗೆ ಹೋಗಿ, ರಾವಣನ ಇನ್ನೊಂದು ಧನುಸ್ಸನ್ನೂ ಕಿತ್ತುಕೊಂಡನು ಜಟಾಯು. ಮತ್ತೆ ತನ್ನೆರಡೂ ಕಾಲುಗಳಿಂದ ಧನುಸ್ಸನ್ನು ಮುರಿದೆಸೆದ. ತನ್ನ ರೆಕ್ಕೆಗಳಿಂದ ರಾವಣನ ಕವಚವನ್ನು ಹರಿದೊಗೆದನು ಜಟಾಯು. ಶರೀರ ಕತ್ತೆಗಳದ್ದು, ಮುಖ ಪಿಶಾಚವಾದ ರಾವಣನ ರಥದ ಪಿಶಾಚಮುಖದ ಕುದುರೆಗಳನ್ನು ಜಟಾಯು ಕೊಂದನು. ರಾವಣನ ನವರತ್ನಭೂಷಿತ ರಥವನ್ನು ಮುರಿದನು ಜಟಾಯು. ಛತ್ರವನ್ನು, ವ್ಯಜನಗಳನ್ನು ಬೀಳಿಸಿದನು ಜಟಾಯು. ಛತ್ರಗ್ರಾಹಿಯನ್ನೂ ಕೊಂದನು ಜಟಾಯು. ನೋಡುನೋಡುತ್ತಿದ್ದಂತೆಯೇ ಜಟಾಯು ಒಂದೊಂದಾಗಿ ಮುರಿಯುತ್ತ ಬಂದನು. ಜಟಾಯು ತನ್ನ ತೀಕ್ಷ್ಣ ವಾದ ಕೊಕ್ಕಿನಿಂದ ರಾವಣನ ರಥದ ಸಾರಥಿಯ ತಲೆಯನ್ನು ತೆಗೆದುಕೊಂಡು ಬೇರೆ ಕಡೆ ಚಲಿಸಿದ.

ರಾವಣನ ಪರಿಸ್ಥಿತಿ…? ಎಲ್ಲವನ್ನು ಕಳೆದುಕೊಂಡ ರಾವಣನು ಧರೆಗುರುಳಿದನು. ಆದರೆ ಈ ಸ್ಥಿತಿಯಲ್ಲಿಯೂ ಕೂಡ ಸೀತೆಯನ್ನು ಬಿಡಲಿಲ್ಲ. ಆಗ ಆಗಸದಲ್ಲಿ ಸೇರಿದವರೆಲ್ಲ ಜಟಾಯುವನ್ನು ಬಹುವಾಗಿ ಗೌರವಿಸಿದರು. ಇಂಥಹ ಕೆಲಸವನ್ನು ಯಾರು ಮಾಡ್ತಾರೆ. ಲೋಕಪಾಲಕನನ್ನು ಹಿಮ್ಮೆಟ್ಟಿದ ರಾವಣನನ್ನು ಭಗ್ನಗೊಳಿಸಿದನು ಜಟಾಯು. ರಾವಣನಿಗೆ ದೊಡ್ಡ ಆಘಾತವಾಗಿದೆ, ಇದನ್ನು ರಾವಣ ನಿರೀಕ್ಷೆ ಮಾಡಿರಲಿಲ್ಲ. ಒಂದು ಮುದಿಪಕ್ಷಿ ಏನು ಮಾಡೀತು ಅಂದುಕೊಂಡಿದ್ದ. ಆದರೀಗ ರಾವಣನ ಅಹಂಗೆ ಪೆಟ್ಟುಬಿದ್ದಿದೆ. ಎದ್ದು ನೋಡಿದನು ರಾವಣ. ಆದರೆ ಆಗ ಜಟಾಯುವಿಗೆ ಬಳಲಿಕೆಯಾಗಿತ್ತು. ಮುಪ್ಪಿನಿಂದ ಜಟಾಯು ಬಳಲಿದ್ದನ್ನು ಗಮನಿಸಿ ರಾವಣ ಸಂತೋಷದಿಂದ ಸೀತೆಯನ್ನು ಸೆಳೆದು ಆಕಾಶಕ್ಕೆ ಹಾರುತ್ತಾನೆ ರಾವಣ, ಯಾಕೆಂದರೆ ರಥವಿಲ್ಲ ಈಗ. ಗಗನ ಸಂಚಾರ ಸಾಮರ್ಥ್ಯವಿದೆ ರಾಕ್ಷಸರಿಗೆ.

ಏಳಲಾಗದೆ ಜಟಾಯು ಮತ್ತೆ ಹಾರಿದನು, ರಾವಣನನ್ನು ಅಡ್ಡಗಟ್ಟಿ ಹೇಳಿದನು ಜಟಾಯು, ನೀನು ಅಪಹರಿಸುತ್ತಿರುವುದು ರಾಮನ ಮಡದಿಯನ್ನು. ಯಾರ ಬಾಣ ತಾಗಿದರೆ ಸಿಡಿಲುಬಡಿದಂತಾಗುವುದೋ ಅಂತವನ ಮಡದಿಯಿವಳು. ಬುದ್ಧಿ ಇದೆಯಾ ನಿನಗೆ? ರಾಕ್ಷಸರ ಕುಲನಾಶ ಮಾಡ್ತಾ ಇದ್ದೀಯ. ನಿನ್ನ ಬಳಗಕ್ಕೆಲ್ಲ ವಿಷವನ್ನು ಕುಡಿಸ್ತಾ ಇದೀಯೆ. ನಿಮ್ಮೆಲ್ಲರ ನಾಶ ರಾಮನಿಂದ ಇದು ಕಟ್ಟಿಟ್ಟ ಬುತ್ತಿ. ಕರ್ಮದ ಫಲವೇನು ಎಂದು ನೋಡದೆ ಯಾರು ದುಷ್ಕರ್ಮವನ್ಧು ಮಾಡ್ತಾರೋ ಅವರು ಹಾಳಾಗಿ ಹೋಗ್ತಾರೆ. ಈಗ ಅವರಿಗೆ ಫಲ ಕಾಣಿಸದಿರಬಹುದು, ಆದರೆ ಅದು ಸಂಹರಿಸದಿರದು. ಸೀತೆಯ ರೂಪದಲ್ಲಿ ವಿಧಿ ನಿನಗೆ ಗಾಳವನ್ನು ಹಾಕಿದೆ. ನಿನಗೆ ನಾಶ ಕಾದಿದೆ, ರಾಮನಿಂದ ಹೇಗೆ ತಪ್ಪಿಸಿಕೊಳ್ಳುತ್ತೀಯೆ? ಇದನ್ನು ರಾಮಲಕ್ಷ್ಮಣರು ಸಹಿಸರು. ನೀನು ಮಾಡಿದ್ದು ವೀರಮಾರ್ಗವಲ್ಲ, ಕಳ್ಳದಾರಿಯಿದು. ನಿಜವಾಗಲೂ ವೀರನಾದರೆ ಈಗಲೂ ನಿಲ್ಲು, ರಾಮ ಬರುವವರೆಗೆ ನಿಲ್ಲು. ಹೋರಾಡು ಆತನ ಜೊತೆ. ಪರಸ್ತ್ರೀಯರನ್ನು ಅಪಹರಿಸುವುದು ಯಾವತ್ತೂ ಸರಿಯಲ್ಲ. ನೀನೀಗ ಕಾಯದಿದ್ದರೆ, ಯಾವ ಮಣ್ಣಿನಲ್ಲಿ ಖರನು ಮಣ್ಣಾಗಿ ಹೋದನೋ ಅದೇ ಮಣ್ಣಿನಲ್ಲಿ ನೀನೂ ಹಾಗೆ ಸಾಯ್ತೀಯೆ. ಅದು ರಾವಣನಿಗೂ ಗೊತ್ತು, ಹಾಗಾಗಿ ಈ ದಾರಿ ಅವನದು. ಎಂಬುದಾಗಿ ಹೇಳಿದ ಜಟಾಯು.

ಅತ್ತ ರಾವಣ ಜಟಾಯುವಿನ ಮಾತನ್ನೂ ಕೇಳದೇ ಸೀತೆಯನ್ನೆಳೆದು ಹೋಗ್ತಾ ಇದ್ದಾನೆ. ಆಗ ಜಟಾಯು ರಾವಣನ ಬೆನ್ನ ಮೇಲೇರಿ ತನ್ನ ಉಗುರುಗಳಿಂದ ಮತ್ತೆ ಗಾಯಗೊಳಿಸಿದನು. ಎಷ್ಟು ಕೋಪ ಬಂದಿತ್ತು ಜಟಾಯುವಿಗೆ ಎಂದರೆ ರಾವಣನ ಕೂದಲನ್ನು ಕಿತ್ತನು. ರಾವಣನಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಜಟಾಯುವನ್ನು ಬಲವಾಗಿ ರಾವಣ ತನ್ನ ಬಲಗೈಗಳಿಂದ ಹಿಡಿದೆಸೆದ. ರಾವಣನು ತನ್ನ ಎಡಗೈಗಳಿಂದ ಸೀತೆಯನ್ನು ಹಿಡಿದುಕೊಂಡಿದ್ದದ್ದನ್ನು ನೋಡಿ ತಾಳಲಾರದೇ ಜಟಾಯು ರಾವಣನ ಹತ್ತೂ ಕೈಗಳನ್ನು ಕೊಕ್ಕುಗಳಿಂದ ತೆಗೆದೊಗೆದ. ನ್ಯಾಯವಾಗಿ ಜಟಾಯುವಿಗೆ ಗೆಲುವಾಗಬೇಕಿತ್ತು. ಆದರೆ ರಾವಣನ ಆ ಹತ್ತೂ ಕೈಗಳು ಮತ್ತೆ ಹುಟ್ಟಿಬಂದವು. ಜಟಾಯುವಿನಲ್ಲಿ ಬೇರೆ ದಾರಿಗಳಿರಲಿಲ್ಲ. ಆದರೂ ಜಟಾಯು ಸುಮ್ಮನಿರಲಿಲ್ಲ. ಒಂದು ಮುಹೂರ್ತಕಾಲ ಮತ್ತೆ ಯುದ್ಧ ನಡೆಯಿತು. ಗೆಲುವು ಕಾಣದ ರಾವಣ ಮಾಯೆಯನ್ನು ಪ್ರಯೋಗಿಸಿದ. ಪರಿಣಾಮವಾಗಿ ಬಿರುಗಾಳಿ ಬೀಸಿದವು, ಕತ್ತಲೆ ಮುಸುಕಿತು. ಆ ಹೊತ್ತಿನಲ್ಲಿ ಜಟಾಯುವಿನ ಪಾದಗಳನ್ನು, ಪಾರ್ಶ್ವಗಳನ್ನು, ರೆಕ್ಕೆಗಳನ್ನೂ ತನ್ನ ಖಡ್ಡಗಳಿಂದ ತುಂಡರಿಸಿದನು ರಾವಣ.

ಅಧರ್ಮಮಾರ್ಗದಲ್ಲಿ ರಾವಣ ಮುನ್ನಡೆದನು. ರೆಕ್ಕೆ ಕಳೆದುಕೊಂಡ ಜಟಾಯು ಧರೆಗುರುಳಿ ಬಿದ್ದನು. ಪ್ರಾಣವಿತ್ತು ಹಾಗೆ, ರಾಮ ಬರುವವರೆಗೆ ಆತನ ಪ್ರಾಣ ಹೋಗುವುದಿಲ್ಲ. ಉಸಿರುಳಿಯಿತು ಜಟಾಯುವಿನದ್ದು. ಒಂದು ಬಾರಿ ರಾವಣನನ್ನು ತಡೆದು ಸೀತೆಯನ್ನು ವಿಮೋಚನೆಮಾಡಿದ್ದನು ಜಟಾಯು. ರಾವಣನ ರಥಭಂಗ ಮಾಡಿದ ಕೀರ್ತಿ, ಕವಚಭಂಗ ಮಾಡಿದ ಕೀರ್ತಿ ಜಟಾಯುವಿಗೆ ಸಲ್ಲುವಂಥದ್ದು. ತನ್ನ ಹತ್ತಿರದ ಬಂಧುವಂತೆ ಸೀತೆ ಜಟಾಯುವಿನ ಕಡೆಗೆ ಧಾವಿಸಿದಳು. ರಕ್ತಮಯವಾಗಿದ್ದ ಜಟಾಯು. ಸ್ವಚ್ಛ ಬಿಳಿ ಜಟಾಯುವಿನ ದೇಹ. ಕಾಡ್ಗಿಚ್ಚು ಆರಿ ಹೋಗುವಂತಿದ್ದ ಜಟಾಯು. ಹೋಗಿ ಜಟಾಯುವನ್ನು ಬಾಚಿ ತಬ್ಬಿದಳು ಸೀತೆ. ರೋದಿಸಿದಳು ಸೀತೆ. ಇದು ಜಟಾಯುಪರ್ವ. ಏಳು ಕಾಂಡದಲ್ಲಿ ಒಮ್ಮೆ ಬರುವ ಪಾತ್ರ ಜಟಾಯುವಿನದು. ಆದರೂ ಆತ ಮನಸ್ಸಲ್ಲಿ ಉಳಿದುಕೊಳ್ಳುತ್ತಾನೆ. ಆತನಿಗೆ ಯಾರೂ ಅಪ್ಪಣೆ ಮಾಡಲಿಲ್ಲ, ಸೀತೆಯನ್ನು ಕಾಪಾಡು ಎಂದು. ಅವನಾಗಿಯೇ ಬಂದನು. ಗೊತ್ತಿದ್ದು ಗೊತ್ತಿದ್ದೂ ಯುದ್ಧಮಾಡ್ತಾನೆ. ತನ್ನ ಪ್ರಾಣವನ್ನು ಹೃದಯದ ಪೆಟ್ಟಿಗೆಯಲ್ಲಿಟ್ಟು ರಾಮನ ಪಾದಕ್ಕರ್ಪಿಸಿದ ಜಟಾಯು. ರಾಮ ಬರುವವರೆಗೂ ಕಾದನು. ಮಾರೀಚ ಹೇಳಿದ ಕೊನೆಯ ಸುಳ್ಳು ಸೀತಾಪಹರಣಕ್ಕೆ ಕಾರಣವಾಯಿತು. ಜಟಾಯು ಕೊನೆಯ ಕಾಲದಲ್ಲಿ ಹೇಳಿದ ಸತ್ಯ ಸೀತೆಯ ಪುನಃಪ್ರಾಪ್ತಿಗೆ ಕಾರಣವಾಯಿತು. ಸೀತಾಪರಣಕ್ಕಿಂತ ಅತೀ ದುಃಖ ರಾಮನಿಗೆ ಯಾವುದೂ ಇಲ್ಲ. ಆದರೆ ಜಟಾಯುವಿನ ಮೃತ್ಯು ರಾಮನಿಗೆ ಇನ್ನೂ ದುಃಖವಾಯಿತು. ದಶರಥನಿಗೆ ಸಿಗದ ಸಂಸ್ಕಾರ ರಾಮನ ಕೈಯಿಂದ ಜಟಾಯುವಿಗೆ ಸಿಕ್ಕಿತು. ಪಾವನ ಜಟಾಯು. ಧರ್ಮಕ್ಕಾಗಿ ಸೀತೆಗಾಗಿ ರಾಮನಿಗಾಗಿ ಪ್ರಾಣಾರ್ಪಣೆ ಮಾಡಿದ ಜಟಾಯು.

ನಂತರ ಸೀತೆ, ನಿಮಿತ್ತಗಳನ್ನು ಅರಿಯುವ ರಾಮನಿಗೆ ಹೇಳಿದಳು, ನನಗೇನಾಗಿದೆ ಎಂದು ಪ್ರಕೃತಿಸೂಚನೆಯಿಂದ ಗೊತ್ತಾಗಬಹುದು. ರಾಮಾ ಕಾಪಾಡು, ಲಕ್ಷ್ಮಣ ಕಾಪಾಡು ಎಂದು ಕೂಗಿಕೊಂಡಳು ಸೀತೆ. ರಾವಣ ಸೀತೆಯೆಡೆಗೆ ಧಾವಿಸಿದಾಗ ಆಕೆ ಓಡಿ ಒಂದು ವೃಕ್ಷವನ್ನು ತಬ್ಬಿದಳು, ಆಗ ರಾವಣ ಸೀತೆಯ ಕೂದಲನ್ನು ಹಿಡಿದ. ಪರಸ್ತ್ರೀಯರ ಮುಡಿಯನ್ನು ಹಿಡಿಯಬಾರದು, ಮೃತ್ಯುವಿನಲ್ಲಿ ಪರ್ಯವಸನವಾಗುತ್ತದೆ. ಒಮ್ಮೆ ವೇದವತಿಯ ಮುಡಿಯನ್ನು ಹಿಡಿದಿದ್ದ ರಾವಣ. ಆಗ ಆಕೆ ಮುಡಿಯನ್ನೇ ಕಡಿದಿದ್ದಳು. ಶಪಿಸಿದ್ದಳು ಆಕೆ, ಮತ್ತೆ ಬರುತ್ತೇನೆ. ನಿನ್ನನ್ನು, ನಿನ್ನ ಲಂಕೆಯನ್ನು ಕೋಟಿ ಕೋಟಿ ಕಪಿಗಳು ಬಂದು ಮುತ್ತುತ್ತಾರೆ. ನಿನ್ನ ಸಂಹಾರವಾಗುತ್ತದೆ. ಅದೇ ವೇದವತಿ ಇವಳು. ಈಗ ಸೀತೆಯ ಮುಡಿಯನ್ನು ಹಿಡಿದಾಗ ಪ್ರಕೃತಿ ಸ್ವಭಾವವನ್ನು ಬಿಟ್ಟವು. ಸೂರ್ಯ ತೇಜೋಹೀನನಾದನು. ಬ್ರಹ್ಮ ಈ ಸ್ಥಿತಿಯಲ್ಲಿ ಸೀತೆಯನ್ನು ನೋಡುತ್ತಾನೆ. ಎರಡು ಶಬ್ದಗಳು “ಕೆಲಸವಾಯಿತು” ಎಂದನು ಚತುರ್ಮುಖ ಬ್ರಹ್ಮ. ಸೃಷ್ಟಿಗೊಳಿತಾಗುವ ಕೆಲಸವಾಯಿತು ಎಂದನು. ಇಷ್ಟಾದ ಮೇಲೆ ರಾವಣವಧೆ ನಿಶ್ಚಿತ ಎಂದುಕೊಂಡನು.

ವೀರಾವೇಶದಲ್ಲಿ ಭಾವಬಲ ಹೆಚ್ಚುವುದು, ಜಟಾಯುವೇ ಉದಾಹರಣೆ. ದಂಡಕಾರಣ್ಯ ವಾಸಿ ಋಷಿಗಳಿಗೆ ಒಂದೆಡೆ ಸಂತಸ, ಇನ್ನೊಂದೆಡೆ ದುಃಖವುಂಟಾಯಿತು. ಸೀತೆಯು ರಾವಣನ ಕೈವಶವಾದ್ದರಿಂದ ಕಡು ದುಃಖ. ರಾವಣನ ವಿನಾಶವನ್ನು ಗೃಹಿಸಿ ಪರಮ ಸುಖ. ತಾನಾಗಿ ಹೋಗಿ ಮೃತ್ಯುವನ್ನು ಆಹ್ವಾನಿಸಿದ ರಾವಣ. ಆ ಸಂದರ್ಭದಲ್ಲಿ “ರಾಮಾ ರಾಮಾ ಲಕ್ಷ್ಮಣ ಲಕ್ಷ್ಮಣಾ” ಎಂದು ಕರೆಯುತಿರುವ ಸೀತೆಯನ್ನೆತ್ತಿಕೊಂಡು ಹೋದ ರಾವಣ. ಗಗನದಲ್ಲಿ ಸೀತೆ ಮಿಂಚಿನಂತೆ ಕಂಡಳು. ರಾವಣ ಬೆಂಕಿ ಹಿಡಿದ ಬೆಟ್ಟದಂತೆ ಕಂಡನು. ರಾವಣನ ಶವದಹನ ಮುಂದಾಗುವಂಥದ್ದು. ಹಾಗಾಗಿ ಸೀತೆ ಈಗ ಬೆಂಕಿಯಂತೆ ಕಂಡಳೋ ಏನೋ. ವಾಲ್ಮೀಕಿಯ ವರ್ಣನೆಯಿದು. ಸೀತೆ ತನ್ನ ಕಮಲಗಳನ್ನೆಲ್ಲ ಎಸೆದಳು ಕೆಳಗೆ. ಶೋಭಿಸಲಿಲ್ಲ ಸೀತೆ ರಾಮನಿಲ್ಲದೇ…! ಜಟೆಯಲ್ಲಿ ಧರಿಸಿದ ಹೂವುಗಳು ಧರೆಯಲ್ಲಿ ಬಿದ್ದವು. ಅವಳ ನೂಪುರ ಕೆಳಗೆ ಬಿತ್ತು. ಬೆಳಕನ್ನು ಕದ್ದೊಯ್ಯುವ ಹಾಗೆ ಕಾಣುತ್ತಿದ್ದಳು. ರತ್ನದ ಹಾರ, ಅವಳು ಧರಿಸಿದ ಆಭರಣಗಳೆಲ್ಲ ಭೂಮಿಯಲ್ಲಿ ಬಿದ್ದವು. ಆಗ ವೃಕ್ಷಗಳು, ಹೆದರಬೇಡ ಎಂದವು. ಪ್ರಕೃತಿಯ ಎಲ್ಲ ಜೀವಗಳೂ ರೋದಿಸಿದವು ಧರ್ಮಕ್ಕಾಗಿ, ದಯೆಗಾಗಿ, ಸೀತೆಗಾಗಿ. ಆಗಲೂ ಸೀತೆ ರಾವಣನಿಗೆಂದಳು ರಾಮನಿಲ್ಲದ ನನ್ನನ್ನು ಕಳ್ಳನಂತೆ ಕರೆದೊಯ್ಯಲು ನಾಚಿಕೆಯಾಗುವುದಿಲ್ಲವೇ, ಮೃಗದ ಆಲೋಚನೆ ನಿನ್ನದೇ. ಸ್ತ್ರೀಹರಣ ನೀಚ, ಪತಿಯಿಲ್ಲದಿರುವಾಗ ಮಾಡುವುದು ಇನ್ನೂ ನೀಚವಾದದ್ದು. ನಿನ್ನ ಕುಲಕ್ಕೇ ಕಲಂಕ ಈ ಕಾರ್ಯ. ವ್ರದ್ಧ ಜಟಾಯುವನ್ನು ಅನ್ಯಾಯದಿಂದ ಕೊಂದೆಯಲ್ಲಾ, ಆ ನಿನ್ನ ಬಲಕ್ಕೆ ಧಿಕ್ಕಾರ, ನಿನ್ನ ಚಾರಿತ್ರ್ಯಕ್ಕೆ ಧಿಕ್ಕಾರ! ಕಾಡ್ಗಿಚ್ಚನ್ನು ಸಹಿಸುವ ಶಕ್ತಿ ನಿನ್ನಲ್ಲಿಲ್ಲ ಎಂದು ಹೇಳಿ ಸೀತೆ, ಬಿಟ್ಟುಬಿಡು ನನ್ನನ್ನು. ನಾನೆಂದಿಗೂ ನಿನ್ನ ವಶವಾಗಲಾರೆ, ಬಿಡು ನನ್ನನ್ನು, ಶವವಾದೇನು ವಶವಾಗಲಾರೆನು ಎಂದಳು. ಸಾವಿನ ಸೂಚನೆ ನಿನ್ನ ಮುಂದಿದೆ. ಕ್ಷಣಮಾತ್ರದಲ್ಲಿ 14000 ರಾಕ್ಷಸರನ್ನು ಕೊಂದ ರಾಮನನ್ನು ನೆನಪಿಸಿಕೊಂಡು ನನ್ನನ್ನು ಬಿಟ್ಟು ಬಿಡು ಎಂದಳು. ಕೂಗಿದಳು, ಬೈದಳು, ಅತ್ತಳು ಹೇಗೇಗೆ ಹೇಳಿದರೂ ರಾವಣನೆಂಬ ಮೃಗಕ್ಕೆ ಕಿವಿಯೇ ಇಲ್ಲ.

ಹೀಗೆ ನಡುಗುವ ಸೀತೆಯನ್ನು, ರಾಮಾ ರಾಮಾ ಎನ್ನುವ ಸೀತೆಯನ್ನು ಆ ಪಾಪಿ ರಾವಣನು ಅಪಹರಿಸಿದನು. ಯಾರಿಗೂ ಕಾಣಲಿಲ್ಲ ಎಂದುಕೊಂಡನಂತೆ ರಾವಣ. ಆದರೆ ಭುವಿಯಿಂದ ಹತ್ತು ಕಣ್ಣುಗಳು ನೋಡಿದವು. ರಾಮನಿಗೆ ಹತ್ತಿರವಾಗುವ, ಸೀತೆಗೆ ಹತ್ತಿರವಾಗುವ ಆ ಹತ್ತುಕಣ್ಣುಗಳು ನೋಡುತ್ತಿದ್ದವಾದರೂ, ಏನು ಮಾಡಲಿಲ್ಲ. ಆ ಹತ್ತು ಕಣ್ಣುಗಳು ಯಾರದ್ದು ಎನ್ನುವ ನಿರೀಕ್ಷೆಯಲ್ಲಿ ಮುಂದಿನ ಪ್ರವಚನ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments