ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಸತ್ಯಕ್ಕೆ ಸತ್ಯವೇ ಮಾರ್ಗ. ಮಿಥ್ಯೆಯಂದೂ ಮಾರ್ಗವಲ್ಲ. ಸೀತೆಯನ್ನು ಪಡೆದುಕೊಂಡೆನೆಂದು ರಾವಣನು ಭ್ರಮಿಸಿದ್ದಾನೆ. ಮಾಯಾಮೃಗದಿಂದ ಸೀತೆಯನ್ನು ಪಡೆದೆ ಎಂದು ಭ್ರಮಿಸಿದೆ ಎಂಬುದು ಅವನ ಭ್ರಮೆಯೇ ಹೊರತು, ಅವನು ಅಪಹರಿಸಿದ್ದು ಮಾಯೆಯನ್ನಲ್ಲ. ಇತ್ತ ಮೃಗರೂಪದಲ್ಲಿ ಚಲಿಸುವ ಕಾಮರೂಪಿ, ರಾಕ್ಷಸ ಸ್ವರೂಪಿಯಾದ ಮಾರೀಚನನು ಸಂಹರಿಸಿದ ರಾಮನು ಲಗುಬಗೆಯಲಿ ಹಿಂದಿರುಗುತ್ತಿದ್ದಾನೆ. ನಂತರ ಮೂರಡಿಯನಿಡುತ್ತಿರುವಾಗಲೇ, ರಾಮನ ಮನಸಿಗೆ ಸಂದೇಹವು ಕಾಡಿತು.

ಮೊದಲನೆಯದು- ಲಕ್ಷ್ಮಣನ ವಾಣಿ, ಎರಡನೆಯದು – ಅದು ಚಿನ್ನದ ಜಿಂಕೆಯಲ್ಲ ಅದು ನಾನು ವಧಿಸಿರುವುದು ಮಾರೀಚನನು, ಮೃಗವು ಬಹುವಾಗಿ ಚೆಲ್ಲಾಟವನು ಆಡಿದೆ, ಇನ್ನು ಕೊನೆಯಲ್ಲಿ ಸಾಯುವಾಗ – ಹಾ! ಸೀತೆ….ಹಾ! ಲಕ್ಷ್ಮಣ ಎಂಬ ಆರ್ತದನಿ ಮತ್ತು ಮೃಗದ ರೂಪವನು ಕಳಚಿ ತಾಳೆಮರದೆತ್ತರದಷ್ಟಕೆ ಹಾರಿ ರಾಕ್ಷಸ ರೂಪದಲಿ ದೊಪ್ಪೆಂದು ಕೆಳಗೆ ಬಿದ್ದದ್ದು ಈ ಮೂರು ಸಂಗತಿಗಳು ಸೇರಿದಾಗ ಅದು ಮಿಥ್ಯೆ ಎಂದು ತಿಳಿದು ರಾಮನು, ಆಶ್ರಮವನು ಬೇಗ ಸೇರಿ, ಸೀತೆ, ಲಕ್ಷ್ಮಣನನು ನೋಡಲು ಆತುರದಿಂದ ಆಶ್ರಮದೆಡೆಗೆ ಸಾಗುವಾಗ ಆತನ ಬೆನ್ನ ಹಿಂದಿನಿಂದ ನರಿಯೊಂದು ವಿಕಾರ ಸ್ವರದಲ್ಲಿ ಕೂಗಿತು. ಆಗ ಬಾರದ್ದು ಆಗಿದೆ ಎಂಬುದನು ಸೂಚಿಸುತ್ತಿರುವ ಆ ನರಿಯ ಧ್ವನಿಯನು ರಾಮನು ಗಮನಿಸಿದನು. ಪ್ರಕೃತಿಯು ತನ್ನ ಮೂಲ ಪ್ರಕೃತಿಗಾದ ಅನ್ಯಾಯವನು ಸಾರಿ ಸಾರಿ ಹೇಳುತಿದೆ.

ಆಗ ರಾಮನಿಗೆ ನೇರವಾಗಿ ತನ್ನ ಅಂತರಂಗಕ್ಕೆ ಬಂದ ಭಾವವೆಂದರೆ, ಏನಾಯಿತೋ ವೈದೇಹಿಗೆ ? ರಾಕ್ಷಸರು ವೈದೇಹಿಯನು ತಿಂದು ಹಾಕದಿದ್ದರೆ ಸಾಕು!, ನನ್ನದೇ ಸ್ವರದಲ್ಲಿ ಮಾರೀಚನು ಆಕ್ರಂದನವನು ಮಾಡಿದನಲ್ಲಾ, ಇದನ್ನು ಏನಾದರೂ ಲಕ್ಷ್ಮಣನು ಕೇಳಿ ಸೀತೆಯನು ಬಿಟ್ಟು ಬಂದರೆ ಅಥವಾ ಸೀತೆಯಿಂದಲೇ ಕಳುಹಿಸಲ್ಪಟ್ಟವನಾಗಿ ಇತ್ತ ಬಂದಾನು…! ನನ್ನನು ದುಃಖಪಡಿಸುಲೋಸ್ಕರವಾಗಿ ರಾಕ್ಷಸರು ಏನಾದರು ಮಾಡಿರಬಹುದು ಏಕೆಂದರೆ – ಇದೊಂದೇ ಮಾರ್ಗವಿರುವುದು, ಸೀತೆಗೆ ನೋವಾದರೆ ಅದು ನನಗೆ ನೋವಾದಂತೆ, ನನ್ನನು ದೂರವೊಯ್ಯಿದಿದ್ದೂ ಸಾಲದೇ, ಅಲ್ಲಿ ಹಾ…ಸೀತೆ ! ಹಾ..ಲಕ್ಷ್ಮಣನೆಂದು ಬಾಣ ತಾಗಿದಾಗ ಸೀತಾ-ಲಕ್ಷ್ಣಣರನ್ನು ಕರೆದದ್ದು ಇದು ಮೋಸದ ಸೂಚಕ. ಖರ-ದೂಷಣರ ವಧೆಯ ಬಳಿಕ ನನಗೂ-ರಾಕ್ಷಸರಿಗೂ ವೈರವು ಏರ್ಪಟ್ಟಿದೆ. ರಾಮನು ಶಂಕೆಯನು ತಾಳಿ, ದೈನ್ಯದಿಂದ ಆಶ್ರಮಕ್ಕೆ ತೆರಳುವನು.

ಶಕ್ತಿಯು ದೂರವಾದಾಗ ನಿಶ್ಯಕ್ತಿಯು ಬರಲೇ ಬೇಕು. ರಾಮನು ದೀನನಾಗಿದ್ದಾನೆ. ದೀನನಾದ ರಾಮನನ್ನು ದೈನ್ಯವಾದ ಮೃಗ-ಪಕ್ಷಿಗಳು ಬಂದು ಸೇರಿದವು. ರಾಮನನ್ನು ಅಪ್ರದಕ್ಷಿಣವಾಗಿ ಬಳಸಿಕೊಂಡು ಹೋದವು ಮಾತ್ರವಲ್ಲದೇ, ಅಂಗಲಕಾರಿ ಧ್ವನಿಗಳನ್ನು ಮಾಡಿ, ಆಶ್ರಮದಲ್ಲಿ ಕೇಡಾಗಿದೆ ಎಂಬುದನ್ನು ತಮ್ಮದೇ ಭಾಷೆಯಲ್ಲಿ ವ್ಯಕ್ತಪಡಿಸುವುದನು ನೋಡಿ ಮತ್ತಷ್ಟು ಆಶ್ರಮದ ಕಡೆಗೆ ತ್ವರೆ ಮಾಡಿದನು. ಆದರೆ ರಾಮನು ಆಶ್ರಮವನು ಬಿಟ್ಟು ಬಹುದೂರ ಬಂದಿದ್ದ. ಆಗ ಅನತಿ ದೂರದಲ್ಲಿ ಮಾಸಿ ಹೋದ, ಪ್ರಭೆ ಕುಂದಿದ ಲಕ್ಷ್ಮಣನು ಕಂಡನು.

ಲಕ್ಷ್ಮಣನು ವಿಷಾದನಾಗಿದ್ದ, ರಾಮನು ಪರಮ ವಿಷಾದನಾಗಿದ್ದ. ಅವನನ್ನು ನೋಡಿದಾಗ ರಾಮನಿಗೆ ವೇದ್ಯವಾಯಿತು. ಇತ್ತ ದುಃಖಿತನಾಗಿ ಲಕ್ಷ್ಮಣನು ಬರುತ್ತಿದ್ದರೆ ಅತ್ತ ರಾಮನು ಪರಮ ದುಃಖಿ. ರಾಮನಿಗೆ ಲಕ್ಷ್ಣಣನ ನಡೆ ಇಷ್ಟವಾಗಲಿಲ್ಲ. ಏಕೆಂದರೆ ಅವನ ಅಪ್ಪಣೆಯನು ಮೀರಿ ಸೀತೆಯನು ಬಿಟ್ಟು ಬಂದನಲ್ಲಾ, ಲಕ್ಷ್ಮಣನ ನಡೆಯನು ಖಂಡಿಸಿದನು, ನಿರ್ಜನವಾದ, ರಾಕ್ಷಸ ಸಂಚಾರಿಯಾದ ಕಾಡಿನಲಿ ಸೀತೆಯೊಬ್ಬಳನ್ನೇ ಬಿಟ್ಟು ಬರುವುದೇ ….? ಅದೂ ದೊಡ್ಡ ರಾಕ್ಷಸರ ಸಂಹಾರವಾದ ಬಳಿಕ….?

ರಾಮನು ಲಕ್ಷ್ಣಣನ ಎಡಗೈಯನು ಹಿಡಿದು ಆರ್ತನಾಗಿ ಮಾತುಗಳನ್ನಾಡುವನು – ಅಯ್ಯೋ ಲಕ್ಷ್ಮಣ…. ಕೆಟ್ಟದ್ದನ್ನು ಮಾಡಿದೆ. ಸೀತೆಯನು ಬಿಟ್ಟು ಬಂದದ್ದು ಒಳಿತಾಗುವುದೇ? ನಿನ್ನನು ಕೇಳಿದ್ದು, ನನಗೆ ಯಾವುದೇ ಸಂದೇಹವಿಲ್ಲ, ಕೆಟ್ಟದಾಗಿದೆ. ಸೀತೆಯು ಕಳೆದು ಹೋಗಿರಬಹುದು, ರಾಕ್ಷಸರು ತಿಂದು ಹಾಕಿರಬಹುದು… ಲಕ್ಷ್ಮಣಾ…… ಸೀತೆ ಇನ್ನು ಇಡಿಯಾಗಿ ಸಿಕ್ಕಿಯಾಳೇನೋ???. ನೋಡು ಮೃಗಗಳ ದಾರುಣ ದನಿಯನು ಗಮನಿಸು, ವರ್ತಮಾನದ ದೆಸೆಯಲ್ಲಿ ನಡೆಯುತ್ತಿರುವ ಅಪಶಕುನವನು ನೋಡು, ಸೀತೆಯು ಚೆನ್ನಾಗಿದ್ದಾಳೋ ಎಂಬ ಪ್ರಶ್ನೆಯು ಉಂಟಾಗಿದೆ. ಈ ರಾಕ್ಷಸನು ಎಷ್ಟೋ ದೂರ ಕರೆದುಕೊಂಡು ಹೋಗಿ ನನ್ನ ಬಾಣದಿಂದ ಹತನಾದ. ನನ್ನ ಮನಸಿನಲಿ ಹರ್ಷ ತಾನೇ ತಾನಾಗಿ ಕಡಿಮೆಯಾಗುತ್ತಿದೆ. ಮರದ ಎಲೆಗಳು ಉದುರುತ್ತಿರುವುದನು ನೋಡು, ನನ್ನ ಎಡಗಣ್ಣು ಅದುರುತ್ತಿದೆ. ಒಂದೋ ಸೀತೆ ಅಪಹೃತಳಾಗಿರಬೇಕು,ಇಲ್ಲದಿದ್ದರೇ ಮೃತಳಾಗಿರಬೇಕು, ಅದಲ್ಲದಿದ್ದರೆ ದಾರಿಯಲ್ಲಿರಬೇಕು ಎಂದು ಕರಾರುವಕ್ಕಾಗಿ ಶಕುನದ ಫಲವನು ಹೇಳುವನು.

ಆಗ ಶೂನ್ಯನಾದ ಲಕ್ಷ್ಮಣನನು ರಾಮನು ಪರಿ ಪರಿಯಾಗಿ ಪ್ರಶ್ನಿಸುವನು. ನನ್ನ ಸೀತೆ ಎಲ್ಲಿ? ನಾನು ರಾಜ್ಯವನು ಬಿಟ್ಟು ಕಾಡನ್ನು ಸೇರಿದಾಗ, ನನ್ನ ದುಃಖದಲ್ಲಿ ಸಮಭಾಗಿಯಾದ ಆ ನನ್ನ ಸೀತೆ ಎಲ್ಲಿ ಲಕ್ಷ್ಮಣ? ಸೀತೆಯಿಲ್ಲದಿದ್ದರೆ ನಾನು ಒಂದು ಮುಹೂರ್ತವೂ ಬದುಕಲು ಬಯಸುವುದಿಲ್ಲ. ಅವಳಿಲ್ಲದ ಬದುಕು ಬದುಕಲ್ಲ. ನನ್ನ ಪ್ರಾಣ ಸಹಾಯೆ, ಜೀವನೋತ್ಸಾಹ ಮಾಡಿಸಿದವಳು, ದೇವಕನ್ಯೆ ಆಕೆ. ಅವಳಿದ್ದರೆ ಎಲ್ಲವೂ ಅವಳಿಲ್ಲದಿದ್ದರೆ ಯಾವ ಸುಖವೂ ಬೇಡ, ಸ್ವರ್ಣಕಾಂತಿ ಅಪರಂಜಿ ಅವಳು. ಅಂಥಾ ಸೀತೆ ಎಲ್ಲಿ? ನಿಜ ಹೇಳು, ಯಾವಳು ನನ್ನ ಪ್ರಾಣಕ್ಕಿಂತ ಪ್ರಿಯಳೋ ಆ ಸೀತೆ ಬದುಕಿರುವಳೇ? ನನ್ನ ವನವಾಸವು ಸುಳ್ಳಾಗಿ ಹೋಗದು ತಾನೇ? ಸೀತೆಯ ನಾಶವು ಆದರೆ ರಾಮನು ಇರುವುದಿಲ್ಲ. ನಾನು ಇರದಿದ್ದರೆ ಪ್ರತಿಜ್ಞೆಯು ಪೂರ್ಣವಾಗದು. ಸೀತೆಯು ಇಲ್ಲವಾದರೆ ನಾನು ಮೃತ್ಯುವನ್ನಪ್ಪಿರಲು, ನೀನು ಅಯೋಧ್ಯೆಗೆ ತೆರಳಲು, ಕೈಕೇಯಿಯ ಮೂಲ ಉದ್ದೇಶ ಮತ್ತು ಕೌಸಲ್ಯೆಗೆ ದಾಸ್ಯತ್ವ ಬರದು ತಾನೆ??

ಸೀತೆಯು ಬದುಕಿರುವುದಾದರೆ ನಾನು ತೆರಳುವೆ ಇಲ್ಲವೋ ಇಲ್ಲೇ ಪ್ರಾಣವನು ಬಿಡುವೆನು. ನಿಜ ಹೇಳು ಲಕ್ಷ್ಮಣ ಸೀತೆಯು ಬದುಕಿರುವಳು ತಾನೆ ? ಆ ಮೃದು ಹೃದಯಿಯಾದ ಸುಕೋಮಲೆಯಾದ ಸೀತೆ ಈಗ ನಾನಿಲ್ಲದೇ ಪರಿತಪಿಸುತ್ತಿರಬಹುದು. ಈ ರಾಕ್ಷಸ ಬರೀ ಮಾಯೆ, ಘೋರ, ಹಾ! ಲಕ್ಷ್ಮಣಾ ಎಂದು ಕರೆದಾಗ ನಿನಗೂ ಭಯವಾಯಿತೇನೋ? ಬಹುಶಃ ನನ್ನ ವಂಚನೆಯ ಸ್ವರ ಕೇಳಿ ನಿನ್ನನು ಸೀತೆ ಕಳುಹಿಸಿರಬೇಕು. ಅಥವಾ ಹೇಳದೆಯೇ ಬಿಟ್ಟು ಬಂದಿರಬೇಕು. ಏನೇ ಆದರೂ ಲಕ್ಷ್ಮಣ, ಸೀತೆಯನು ಬಿಟ್ಟು ಬಂದು ದೊಡ್ಡ ತಪ್ಪು ಮಾಡಿದೆ. ರಾಕ್ಷಸರಿಗೆ ಹಗೆ ತೀರಿಸಿಕೊಳ್ಳಲು ನೀನು ದಾರಿ ಮಾಡಿಕೊಟ್ಟೆ. ನಿನ್ನ ಈ ಕೆಲಸದಿಂದಾಗಿ ರಾಕ್ಷಸರು ಆಕೆಯನು ಕೊಂದಿರಬೇಕು. ನಾನು ದೊಡ್ಡ ವ್ಯಸನದಲ್ಲಿ ಸಿಲುಕಿದೆನು. ರಾಮನು ಎಷ್ಟೇ ಜರಿದರೂ ಲಕ್ಷ್ಮಣ ಮಾತನಾಡಲಿಲ್ಲ. ರಾಮನು ಆಶ್ರಮದ ಬಳಿ ಬರುತ್ತಾನೆ. ರಾಮನು ಹಸಿವು, ಬಾಯಾರಿಕೆಗಳಿಂದ ಬಳಲಿದ್ದಾನೆ. ಮುಖ ಒಣಗಿದೆ, ಮೈಬಣ್ಣ ಮಾಸಿದೆ, ಈ ಸ್ಥಿತಿಯಲ್ಲಿದ್ದ ರಾಮನು ಬಂದು ನೋಡಿದ್ದು ಶೂನ್ಯ ಆಶ್ರಮ. ಸುತ್ತಲೂ ಸೀತೆಗಾಗಿ ಹುಡುಕಿದನು ಕಾಣಲಿಲ್ಲ. ಅತಿಶಯವಾದ ವ್ಯಥೆಯಾಯಿತು.

ಆದರೆ ದಾರಿ ಮಧ್ಯದಲಿ ರಾಮನು ಇನ್ನಷ್ಟು ಮಾತುಗಳನ್ನು ಲಕ್ಷ್ಮಣನಲ್ಲಿ ಕೇಳುವನು ಅದೇನೆಂದರೆ-
ಹೇಳು… ಯಾಕೆ ನೀನು ಸೀತೆಯನು ಬಿಟ್ಟು ಬಂದೆ. ನಿನ್ನ ಮೇಲಿನ ಭರವಸೆಯಿಂದ ತಾನೇ ಸೀತೆಯನು ನಾನು ಬಿಟ್ಟು ಹೋದದ್ದು. ನೀನು ಸೀತೆಯನು ಬಿಟ್ಟು ಇಲ್ಲಿಗೆ ಬಂದಾಗ ನನಗೆ ಏನು ಶಂಕೆ ಆಗಿತ್ತೋ ಅದು ಸತ್ಯವಾಯಿತು. ಎಡಗಣ್ಣು ಎಡಬಾಹು ಅದುರುತ್ತಿದೆ. ನನ್ನ ಹೃದಯವು ಕಂಪಿಸುತ್ತಿದೆ. ಯಾಕೆ ಬಿಟ್ಟು ಬಂದೆ ಎಂದು ರಾಮನು ಗಟ್ಟಿಯಾಗಿ ಕೇಳಿದಾಗ ಲಕ್ಷ್ಮಣನು ವಿಷಯವನ್ನು ಹೇಳುವನು.

ನಾನು ಆಕೆಯನು ಬಿಟ್ಟು ಬಂದಿದ್ದು ನಿಜ, ಆದರೆ ನನ್ನಿಚ್ಚೆಯಿಂದಲ್ಲ, ನಾನು ನಾನಾಗಿಯೇ ಬಿಟ್ಟು ಬರಲಿಲ್ಲ. ಅವಳ ಅತ್ಯುಗ್ರವಾದ ಮಾತುಗಳಿಂದಾಗಿ ಬಂದೆ. ನಿನ್ನ ಧ್ವನಿಯಲ್ಲಿ ಯಾರೋ ಹಾ !ಸೀತೆ, ಹಾ! ಲಕ್ಷ್ಮಣ ಎಂಬುದಾಗಿ, ಕಾಪಾಡು ಎಂದು ಕೂಗಿಕೊಂಡದ್ದು ಸೀತೆಗೆ ಕೇಳಿದಾಗ ನಿನ್ನ ಮೇಲಿನ ಅತಿಶಯವಾದ ಪ್ರೀತಿಯಿಂದ ಹೋಗು ಹೋಗೆಂದು ಹೇಳಿದಳು. ಆ ಸಮಯದಲ್ಲಿ ಭಯದಿಂದ ಕೂಡಿದ್ದ ಸೀತೆಯು ಮತ್ತೆ ಮತ್ತೆ ಹೋಗೆಂದು ಒತ್ತಾಯಿಸಿದಳು. ಆಗ ನಾನು ಹೇಳಿದೆ, ರಾಮನ ಬಾಯಿಯಿಂದ ಆರ್ತನಾದವನು ಹೊರಡಿಸುವ ಯಾವ ರಾಕ್ಷಸರೂ, ದೇವತೆಯೂ ಇಲ್ಲ. ಹಾಗಾಗಿ ಧೈರ್ಯ ತಾಳು! ನಮ್ಮಣ್ಣ ಹೇಡಿಗಳ ಕಾರ್ಯವನ್ನು ಮಾಡಲಾರ, ಕಾಪಾಡು ಎಂದು ಕೂಗುವ ಕಾರ್ಯ ನಮ್ಮಣ್ಣನಿಂದ ಎಂದೂ ಆಗದೂ, ನಮ್ಮಣ್ಣ ಸಹಜ ಧೀರ, ಸೋಲು ಎಂಬುದು ಅಸಂಭವ. ಅಕಸ್ಮಾತ್ ಬಂದರೂ ಕೊನೆಯವರೆಗೆ ಹೋರಾಡಿಯಾನು ಹೊರತು ತ್ರಾಹಿ ತ್ರಾಹಿ ಎಂಬುದಾಗಿ ಕೂಗಲಾರ, ಇದು ಬೇರೆ ಯಾರದೊ ಕೆಲಸ. ದೇವತೆಗಳನು ಕಾಪಾಡಬಲ್ಲವನಾದ ನಮ್ಮಣ್ಣ ಸ್ವತಃ ಆರ್ತನಾದ ಮಾಡುವುದುಂಟಾ??? ಇದು ರಾಮನ ದನಿಯಲ್ಲಾ ಎಂಬುದಾಗಿ ಬಿಡಿಸಿ ಹೇಳಿದೆ. ನೀನು ಅಣ್ಣನೊಡನೆ ಒಡನಾಡಿದವಳು.. ಆತನ ಸ್ವಭಾವ ಎಂಥದ್ದು ಎಂಬುದನು ಅರಿತಿರಬೇಕು.

ಆದರೆ ಸೀತೆಯ ಚೇತನವು ಕತ್ತಲಾಗಿತ್ತು ಮತ್ತು ಕ್ರೂರವಾದ ಮಾತುಗಳನ್ನು ಹೇಳಿದಳು. ನನ್ನಲ್ಲಿ ನಿನಗೆ ಕೆಟ್ಟ ಭಾವನೆ ಇದೆ. ರಾಮನ ನಾಶ ನಿನಗೆ ಬೇಕಾಗಿದೆ ಅಥವಾ ಭರತನಿಗೂ ನಿನಗೂ ಒಡಂಬಡಿಕೆ ಇದೆ. ಭರತನೂ ರಾಮನ ಕೇಡನ್ನು ಬಯಸಿದ್ದಾನೆ ಅದರಂತೆಯೇ ನೀನು ಅವನ ಗುಪ್ತ ವೈರಿಯಾಗಿದ್ದೀಯ, ಅಥವಾ ನನನ್ನು ಪಡೆದುಕೊಳ್ಳುವ ಇಚ್ಛೆಯಿಂದ ಈ ರೀತಿ ಮಾಡುತ್ತಿದ್ದೀಯ. ಆಗ ನನಗೆ ಸಿಟ್ಟು ಬಂದಿದ್ದು ನಿಜ ಅದೇನೋ ತಿಳಿಯದು ಆಗ ಅಲ್ಲಿಂದ ಹೊರಟು ಬಂದೆ. ನೀನು ಇಷ್ಟು ಒತ್ತಾಯಿಸಿದ ಕಾರಣ ಹೇಳಿದೆನು.

ಆಗ ರಾಮನು…. ನೀನು ಮೋಸ ಮಾಡಿದೆ ಲಕ್ಷ್ಮಣ, ನೀನು ನಾನು ರಾಕ್ಷಸರನ್ನು ಎದುರಿಸುವಲ್ಲಿ ಸಮರ್ಥನೆಂದು ಗೊತ್ತಿದ್ದರೂ, ಅವಳ ಮಾತನು ಕೇಳಿ ಏಕೆ ಹೊರಟು ಬಂದೆ. ಈ ನಿನ್ನ ಕಾರ್ಯವು ನನಗೆ ಸಂತೋಷ ತಂದಿಲ್ಲ. ತಪ್ಪಾಯಿತು ನಿನ್ನದು. ಸಿಟ್ಟಿಗೆ ಬುದ್ದಿಯನು ಕೊಟ್ಟು ಹಾಳು ಮಾಡಿದೆ. ಅನಂತರ ಮಾರೀಚನ ಸಂಹಾರದ ವಿಷಯವನು ಹೇಳಿದ. ನಂತರದಲಿ ರಾಮನ ಎಡಗಣ್ಣಿನ ರೆಪ್ಪೆಯ ಕೆಳಭಾಗ ಅದುರಿತು, ಇದ್ದಕ್ಕಿದ್ದಂತೆ ರಾಮನು ಎಡವಿದ, ಮೈನಡುಗಿತು, ನಡುವೆ ಬಾರಿ ಬಾರಿಗೆ ತನ್ನ ದೇಹದಲ್ಲಾಗುತ್ತಿರುವ ಈ ಶಕುನ ಸೂಚಕವನ್ನು ಗಮನಿಸಿ, ಸೀತೆ ಕ್ಷೇಮವಾಗಿವಳೋ ಏನಾಯಿತೋ ಸೀತೆಗೆ ಎಂದು ಲಘು ಬಗೆಯಲ್ಲಿ ಆಶ್ರಮದತ್ತ ತೆರಳಿದಾಗ, ಶೂನ್ಯವಾದ ಆಶ್ರಮವನ್ನು ಕಂಡ ರಾಮನು ಉದ್ವಿಗ್ನವಾದವನು. ಆಗ ಆತನ ವೇಗವು ಗಾಳಿಯಲ್ಲಿ ಸಂಚರಿಸುವಂತೆ ಸೀತೆಯನ್ನು ಅತ್ತಿಂದಿತ್ತ ಹೋಗಿ ಆಶ್ರಮ, ಅಂಗಳ, ಪರ್ಣ ಶಾಲೆಯಲ್ಲಿ ಹುಡುಕುತ್ತಾನೆ. ಪರ್ಣಶಾಲೆಗೆ ತೆರಳಿದಾಗ ಅದು ಅಮಂಗಲವಾಗಿತ್ತು ವೃಕ್ಷಗಳು ಅಳುತ್ತಿದ್ದಂತೆ, ಎಲೆಗಳ ನಡುವಿನಿಂದ ಬರುವ ಆ ಗಾಳಿಯ ಶಬ್ದ, ಒಂದೊಂದು ಹೂವು ಬಾಡಿದೆ, ಒಂದೊಂದು ಮೃಗ ಹಕ್ಕಿಯೂ ಬಾಡಿದೆ, ಯಾವ ವನ ದೇವತೆಗಳು ರಾಮನ ಆಶ್ರಮದ ಬಳಿ ನೆಲೆಸಿದ್ದವು ಅವರೆಲ್ಲ ರಾವಣನ ರೂಪ ನೋಡಿ ಪಲಾಯನ ಮಾಡಿದ್ದವು. ದರ್ಬೆ ಹಾಸನ ಎಲ್ಲವೂ ಅಸ್ತವ್ಯಸ್ತವಾಗಿದೆ. ಹೀಗೆ ರಾಮನು ತನ್ನ ಶೂನ್ಯವಾದ ಆಶ್ರಮವನ್ನು ಕಂಡು ವಿಲಪಿಸುವನು.
ಯಾರು ಸೀತೆಯನ್ನು ಕದ್ದೊಯ್ದಿರಬಹುದು, ಕೊಂದಿರಬಹುದು, ತಿನ್ನಲು ಪಟ್ಟಿರಬಹುದು ಇಲ್ಲವೇ ಸೀತೆ ಆಪತ್ತಿನಿಂದ ತಪ್ಪಿಸಲು ಅಡಗಿರಬಹುದು ಅಥವಾ ಹೂ ಕೊಯ್ಯಲು, ನೀರಿಗಾಗಿ ಗೋದಾವರಿಗೆ ತೆರಳಿರಬಹುದು, ಕಮಲದ ಪುಷ್ಪಕ್ಕೆ ಹೋಗಿರಬಹುದು ಎಂದು ವಿಲಪಿಸುತ್ತಾ ಪ್ರಯತ್ನಪೂರ್ವಕವಾಗಿ ಸೀತೆಯನ್ನು ರಾಮ ಹುಡುಕುವನು.

ಕಾಡಿನಲ್ಲಿ ಸೀತೆ ಸಿಗಲಿಲ್ಲ. ಕಣ್ಣು ಶೋಕದಿಂದ ರಾಮನದ್ದು ಕೆಂಪೇರಿದೆ ಉನ್ಮಾದದಿಂದ ಕೂಡಿದ್ದಾರೆ ನದಿಯಿಂದ ನದಿಗೆ, ಬೆಟ್ಟದಿಂದ ಬೆಟ್ಟಕ್ಕೆ ದಾಟುತ್ತಾ ಶೋಕವೇ ಕೆಸರಾಗಿ ಆ ಕೆಸರಿನಲ್ಲಿ ಮುಳುಗಿ ಹೋಗುವ ಸ್ಥಿತಿ. ರಾಮನು ಪ್ರತಿ ಮರದ ಬಳಿಯಲ್ಲೂ ಸೀತೆಯನ್ನು ನೀ ಕಂಡೆಯಾ ?…..ಎಂಬುದಾಗಿ ಕೇಳುವನು .

ಪ್ರಿಯ, ಕದಂಬ ವೃಕ್ಷವೇ ನೀ ಕಂಡೆ ನನ್ನ ಸೀತೆಯನ್ನು ? ಬಿಲ್ವ ನಿನ್ನ ಚೆಲುವೆಯಂಥವಳು… ಅವಳು! ಎಲ್ಲಿ ನನ್ನ ಸೀತೆ ? ಎಲ್ಲಿ ಜನಕ ಸುತೆ? ಅಶೋಕ ವೃಕ್ಷದ ಬಳಿ ಹೋಗಿ ನಾನೀಗ ಶೋಕ ; ನನ್ನನ್ನು ಅಶೋಕನನ್ನಾಗಿ ಮಾಡುವ ಎಲ್ಲಿ ನನ್ನ ಸೀತೆ ಹೇಳು? ಎಂಬುದಾಗಿ ಕೇಳುವನು. ಅನಂತರ ಜಂಬು ಕರಣೀಕರ ವೃಕ್ಷದ ಬಳಿ ಸೀತೆಯನ್ನು ಕಂಡರೆ ಹೇಳಿ ನೀಪ, ದಾಡಿಮೆ, ಪನ್ನಾಗ, ಚಂಪಕ ಹೀಗೆ ಒಂದೊಂದರ ಮುಂದೆ ಹೋಗಿ ಕೇಳುವನು . ಆಗ ರಾಮ ಹುಚ್ಚು ಹಿಡಿದಂತೆ ಕಾಣುತ್ತಿದ್ದ. ನಂತರ ಜಿಂಕೆಗಳಲ್ಲಿ ನಿನ್ನಂತೆ ಕಣ್ಣುಳ್ಳವಳು ಎಲ್ಲಿ? ಆನೆ, ಹುಲಿ ಹೀಗೆ ಒಂದೊಂದು ಮೃಗದ ಬಳಿಯೂ ಸೀತೆಯ ಬಗ್ಗೆ ಕೇಳುವನು.

ಮರೀಚಿಕೆಯಾದ ಅನುಭವದಿ ರಾಮನಿಗೆ ಸೀತೆಯು ದೂರ ದೂರ ಓಡಿ ಹೋದಂತೆ, ಶೂನ್ಯದಲ್ಲಿ ಕಾಣುವಳು. ಏಕೆ ಓಡುತ್ತಿರುವೆ ಸೀತೆ? ಮರದ ಮರೆಯಲ್ಲಿ ಏಕೆ ಮರೆಯಾಗುವೆ? ಒಂದಷ್ಟು ಗಮನಿಸು… ನನ್ನ ಮೇಲೆ ಪ್ರೀತಿ ಇಲ್ಲವೇ? ನಿನ್ನ ಪೀತಾಂಬರವನ್ನು ಕಂಡೆ ಎಂದು ಉನ್ಮಾದದಿಂದ ವಿಲಪಿಸುವನು. ಆ ನನ್ನ ಸೀತೆಯನ್ನು ಬಾಲೆಯನು, ಆ ಸೊಗಸಾದ ನಗುವಿನವಳನು ರಾಕ್ಷಸರು ಕೊಂದಿರುವರೇ? ಅವಳ ಚಾರ ಕುಂಡಲದ ಆ ವದನ, ಸಂಪಿಗೆ ಬಣ್ಣದ ಕೊರಳವಳದು, ಅವಳ ಕುತ್ತಿಗೆಯನ್ನು ಸೀಳಿ ತಿಂದಿರಬಹುದೇ? ಬಾಹುಗಳನ್ನು ಕಚ್ಚಿ ತಿಂದಿರಬಹುದೇ? ನಮ್ಮಾಕೆಯನ್ನು ನಾವೇ ಬಿಟ್ಟಂತಾಯಿತು. ಅವಳಿಗಾರು ಗತಿ? ಆಕೆಯ ಪಾಡುಹೀಗಾಯಿತು. ಹಾ!… ಪ್ರಿಯೆ ಮಂಗಳಕಾರಿಣಿಯೇ ಎಲ್ಲಿ ಹೋದೆ? ಹೀಗೆ ಸೀತಾನ್ವೇಷಣೆಯ ಕಾರ್ಯದಲ್ಲಿ ಸುಂಟರಗಾಳಿಯಲಿ ಸುತ್ತಿದಂತವನಂತೆ ರಾಮನು ಕಂಡನು.

ಒಂದು ಕ್ಷಣವೂ ನಿಲ್ಲದೆ, ಒಂದಂಗುಲವೂ ಬಿಡದೆ ಪರಮ ಪರಿಶ್ರಮದಿಂದ ಸೀತೆಯನ್ನು ರಾಮ ಹುಡುಕಿದ. ಎಲ್ಲೆಲ್ಲಿಯೂ ಸೀತೆಯನ್ನು ಕಾಣದಾದಾಗ ಎರಡೂ ಕೈಗಳನ್ನು ಮೇಲಕ್ಕೆತ್ತಿ ಎಲ್ಲೋ ಲಕ್ಷ್ಮಣ ಸೀತೆ ? ಮೈಥಿಲಿ ಎಲ್ಲಿಗೆ ಹೋದಳು? ಎಂದಾಗ ಮತ್ತೆ ಸೀತೆಯನ್ನು ಕಂಡಂತಾಗಿ ಅದೋ ಮರದ ಹಿಂದೆ ಸೀತೆ ! ನಿನಗೆ ವಿನೋದ ತಾನೆ… ಸಾಕು ಮಾಡು ನಿನ್ನ ನಗು ; ಎಂದು ರಾಮ ಹೇಳುವ. ನೀನೇ ಸಾಕಿದ ಜಿಂಕೆ ಮರಿಗಳು, ನೀನಿಲ್ಲದೆ ಅಳುತ್ತಿವೆ ಅವುಗಳ ಮೇಲೆ ಕನಿಕರ ಇಲ್ಲವೇ ? ಪರಲೋಕದಲ್ಲಿ ತಂದೆಯು ನನ್ನನ್ನು ನೋಡುತ್ತಿರಬಹುದು; ನಾನು ಅಲ್ಲಿ ಹೋಗುವ ಹೊತ್ತು ಬಂತು… ಸೀತೆಯ ಹರಣದಿಂದಾಗಿ ನನ್ನನ್ನು ಅಲ್ಲಿ ನೋಡಿ; ಪ್ರತಿಜ್ಞಾ ಭಂಗ ಮಾಡಿ ಯಾಕೋ ಬಂದೆ ಎಂದು ಗದರಬಹುದು, ವಚನಕ್ಕೆ ಬೆಲೆ ಕೊಡುವವನಲ್ಲ ಎಂದು ಕೇಳುವ ಕಾಲ ಬಂತು, ನಾನು ಅವಸಾನಗೊಳ್ಳುವೆನೆಂದು ಹೇಳುವನು. ನೋಡು ಸೀತೆ ನಿನ್ನ ವಶವಾಗಿರುವೆ, ಭಗ್ನವಾಗಿರುವೆ, ನನ್ನ ಬಿಟ್ಟು ಎಲ್ಲಿ ಹೋದೆಯೋ? ಯಾರು ನೇರ ಮಾರ್ಗದಲ್ಲಿ ಬದುಕುವುದಿಲ್ಲವೋ ಅಂಥವನನ್ನು ಕೀರ್ತಿ ಬಿಟ್ಟು ಹೋಗುವಂತೆ ; ನೀನು ನನ್ನನ್ನು ಬಿಟ್ಟು ಹೋಗಬೇಡ ಎಂದು ವಿಲಪಿಸುವನು .

ಹೀಗೆ ಲಕ್ಷ್ಮಣನು ಕೆಸರಿನ ಆಳದಲಿ ಮಹಾಗಜದ ಕಾಲು ಹೂತು ಹೋಗುವಂತೆ, ಸೀತೆಯ ಶೋಕವು ರಾಮನನು ನುಂಗುತ್ತಿರುವುದನು ಕಂಡನು. ಹೇಗಾದರೂ ರಾಮನನ್ನು ಸಮಾಧಾನ ಮಾಡಲು ಲಕ್ಷ್ಮಣನು ಪ್ರಯತ್ನಿಸುವನು .

ಅಣ್ಣಾ ನೀನು ಮಹಾಬುದ್ಧಿವಂತ ವಿಷಾದ ಪಡೆದಿರುವ; ನಾನಿದ್ದೇನೆ. ನಾವು ಈ ಪರ್ವತವನ್ನು ಹುಡುಕೋಣ.
ಇಲ್ಲಿ ಕಂದರ, ಬೆಟ್ಟಗಳಿವೆ. ಅಲ್ಲಿ ಎಲ್ಲಾದರೂ ಇರಬಹುದು. ಸೀತೆಗೆ ವನವೆಂದರೆ ಅಷ್ಟು ಇಷ್ಟ. ಕಮಲದ ಕೊಳದ ಬಳಿ ಹೋಗಿರಬಹುದು, ಧಗೆಯ ಕಾರಣದಿಂದ ನದಿಯ ಬಳಿ ಹೋಗಿರಬಹುದು, ವಿನೋದಕ್ಕಾಗಿ ಕಾಡಿಗೆ ಹೋಗಿರಬಹುದು, ಪ್ರೀತಿ ಎಷ್ಟಿದೆ ಎಂದು ಪರೀಕ್ಷಿಸುತ್ತಿರಬಹುದು… ಅಣ್ಣನ ಜಾಗದಲ್ಲಿ ನಿಂತು ರಾಮನನ್ನು ಸಂತೈಸುವನು. ನಾವು ಹುಡುಕೋಣ ಮತ್ತೆ ಆಮೂಲಾಗ್ರವಾಗಿ ಇಬ್ಬರು ಶೋಧಿಸುವರು. ಸೀತೆಯು ಕಾಣಲಿಲ್ಲ .
ಬಿಟ್ಟವನು ಹುಡುಕಿದ ಮೇಲೆ; ಲಕ್ಷ್ಮಣನು ಹೇಳುವನು ಅಣ್ಣಾ ನೀನು ಸೀತೆಯನ್ನು ಮತ್ತೆ ಪಡೆಯಬಹುದು ಏನು ಯೋಚಿಸಿದಿರು.

ಆಗ ರಾಮನು- ಎಷ್ಟು ಹುಡುಕಿ ಆಯಿತು… ಆದರೆ ನನ್ನ ಪ್ರಾಣಪ್ರಿಯೆ ಎಲ್ಲೂ ಇಲ್ಲವಲ್ಲಾ? ದೈನ್ಯ, ಶೋಕ ಆವರಿಸಿರಲು ರಾಮನು ವಿಹ್ವಲನಾದನು. ಬುದ್ಧಿಯ ಮೇಲೆ ಅಂಗಾಂಗದ ಮೇಲೆ ಸ್ವಾಧೀನವು ತಪ್ಪಿತು ದೀನನಾಗಿ ರಾಮನು ಕುಸಿದು ಕುಳಿತನು. ಬಿಸಿಯುಸಿರು ಬಿಡುತ್ತ ಹಾಸಿಗೆ ಎಂಬುದಾಗಿ ಕೂಗಿದ. ಲಕ್ಷ್ಮಣ ಕೈ ಮುಗಿದು ದೈನ್ಯದಿಂದ ನಾವಿನ್ನು ಹುಡುಕೋಣ ಎಂದು ಹೇಳಿದನು. ಆಗ ರಾಮ ಸೀತೆಯ ಒಂದಾದರೂ ಸುಳಿವು ಇಲ್ಲ .? ಸೀತೆ ತೊಟ್ಟ ಗೆಜ್ಜೆಯಾದರೂ ಸಿಕ್ಕಿತೆ? ಏನಾಯಿತು ಎಂಬುದನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments