ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ನಗುವು ಅಳುವಾಗುವುದುಂಟು, ಅಳುವೂ ನಗುವಾಗುವುದುಂಟು. ನಿನ್ನೆಯ ಸಂತೋಷ ಇಂದಿನ ದುಃಖ, ನಿನ್ನೆಯ ದುಃಖ ಇಂದಿನ ಸಂತೋಷ. ದುಃಖವು ಮೊದಲು ಬಂದು ಮತ್ತೆ ಸುಖವು ಬಂದರೆ ಸುಖದ ಕಾಲದಲ್ಲಿ ನೆನಪು ಮಾಡಿಕೊಂಡಾಗ ಹಿಂದಿನ ದುಃಖವೂ ಕೂಡ ಸಂತೋಷವನ್ನೇ ಕೊಡುತ್ತದೆ. ಹಿತವನ್ನೇ ಉಂಟುಮಾಡುತ್ತದೆ. ಅದೇ, ಇದು ಹಿಂದು ಮುಂದಾದರೆ, ಮೊದಲು ಸುಖ, ಬಳಿಕ ದುಃಖವಾದರೆ ಮೃಷ್ಟಾನ್ನ ಉಂಡುಕೊಂಡಿದ್ದವನು ಗಂಜಿ ಉಣ್ಣುವ ಸಂದರ್ಭ ಬಂದರೆ, ಹಿಂದಿನ ಮೃಷ್ಣಾನ್ನ ಇಂದು ನೆನಪಾದಾಗ ದುಃಖವನ್ನೇ ಕೊಡುವಂಥದ್ದು.
ಇದು ರಾಮಾಯಣದಲ್ಲಿ ಅಂಥದ್ದೊಂದು ಸಂದರ್ಭ.

ರಾಮ ಸೀತೆಯರು ಸುಖವಾಗಿದ್ದ ಕಾಲವು ಅದೆಷ್ಟು! ಬಹಳ ಸುಖವಾಗಿದ್ದರು. ಆ ಸುಖದ ಕ್ಷಣಗಳೆಲ್ಲೇ ಈವರೆಗೆ ಇದ್ದದ್ದು. ಅವರು ಎಲ್ಲವನ್ನೂ ಕಳೆದುಕೊಂಡರೂ ಪರಸ್ಪರರನ್ನು ಕಳೆದುಕೊಂಡಿರಲಿಲ್ಲ. ರಾಜ್ಯವನ್ನು ಕಳೆದುಕೊಂಡರೂ ರಾಮ ಸೀತೆಯನ್ನು, ಸೀತೆ ರಾಮನನ್ನು ಕಳೆದುಕೊಂಡಿರಲಿಲ್ಲ. ಹಾಗಾಗಿಯೇ ಅವರು ಬೇರೆಲ್ಲ ದುಃಖವನ್ನು ಮರೆಯಲಿಕ್ಕೆ ಸಾಧ್ಯವಾಗಿದ್ದು. ರಾಮನಿಗೆ ಸೀತೆಯಿದ್ದಳು, ಸೀತೆಗೆ ರಾಮನಿದ್ದನು. ಈಗ ಸೀತೆ ಕಾಣದಾದಾಗ ಆ ಹಿಂದಿನ ನೆನಪುಗಳೆಲ್ಲವೂ ರಾಮನಿಗೆ ದುಃಖವನ್ನೇ ಕೊಟ್ಟಿತು. ಇಲ್ಲಿ ಭೂತಕಾಲವು ಬಂದು ವರ್ತಮಾನ ಕಾಲದಲ್ಲಿ ಮಿಶ್ರಗೊಂಡು ಬಿಟ್ಟಿದೆ‌. ರಾಮನಿಗೆ ಎಲ್ಲವೂ ಈಗ ನಡೆದಂತೆ, ಇರುವಂತೆ ತೋರುತ್ತಿದೆ. ತೀವ್ರವಾದ ವೇದನೆ. ಒಮ್ಮೆ ಸೀತೆ ಕಂಡಂತೆ, ಒಮ್ಮೆ ಕಾಣದಂತೆ‌.

ಹಾಗಾಗಿ, ರಾಮನ ಮಾತುಗಳೂ ಸ್ಪಷ್ಟವಾಗುತ್ತಿರಲಿಲ್ಲ. ಗಂಟಲು ಕಟ್ಟಿ ಬರುತ್ತಿತ್ತು. ಆ ಮಾತುಗಳು ಗದ್ಗದಿತ ಧ್ವನಿಯಿಂದಾಗಿ ಅಸ್ಪಷ್ಟವಾಗುತ್ತಿದ್ದವು‌. ಆದರೆ, ಮನಸ್ಸೆಲ್ಲವೂ ಮಾತಾಗಿ ಹೊರಗಡೆ ಬರುತ್ತಲಿದೆ. ಸೀತೆಯೊಡನೆ ರಾಮ‌ ತನ್ನಷ್ಟಕೇ ಮಾತಾಡುತ್ತಾನೆ. ಮತ್ತೆ ಲಕ್ಷ್ಮಣನಿಗೆ, ” ಇಲ್ಲ, ಬಹುಷಃ ಅವಳು ಇಲ್ಲಿಲ್ಲ. ಇದ್ದಿದ್ದರೆ ಬಂದೇ ಬರುತ್ತಿದ್ದಳು. ನನ್ನ ಬಳಿಗೆ ಬಾರದಿರುವುದನ್ನು ನೋಡಿದರೆ ಸ್ಪಷ್ಟ. ರಾಕ್ಷಸರಿಂದ ಒಂದೋ ಆಕೆ ಅಪಹೃತಳಾಗಿದ್ದಾಳೆ. ಇಲ್ಲಾ, ರಾಕ್ಷಸರು ಆಕೆಯನ್ನು ಕೊಂದು ತಿಂದುಬಿಟ್ಟಿದ್ದಾರೆ” ಎಂದು “ಹಾ ಆರ್ಯೆಯೇ!! ಎಲ್ಲಿ ಹೋದೆ ಸಾಧ್ವಿ? ಸುಂದರಾಂಗಿ.. ? ಹಾ! ಕೈಕೇಯಿಯ ಕಾಮನೆಯು ಪೂರ್ತಿಯಾಯಿತು. ನಾನು ಹೇಗೆ ಅಯೋಧ್ಯೆಗೆ ಮರಳಲಿ? ಸೀತೆಯೊಡನೆ ಹೊರಟವನು ಸೀತೆಯ ಹೊರತು ಬಂದರೆ ಆ ಶೂನ್ಯಾವಸ್ಥೆಯಲ್ಲಿ ಹೇಗೆ ನಾನು ಅಂತಃಪುರವನ್ನು ಪ್ರವೇಶಿಸಲಿ? ಲೋಕವು ನನ್ನನ್ನು ಸಾಮರ್ಥ್ಯ, ದಯೆ, ಧೈರ್ಯ ಇಲ್ಲದವನು ಎಂದು ಜರೆಯುವುದು ನಿಶ್ಚಿತ. ಅವೆಲ್ಲ ಇದ್ದರೆ ಸೀತೆಯನ್ನು ಕಾಪಾಡುತ್ತಿದ್ದ ಎಂಬುದಾಗಿ ಜನರು ನನ್ನ ಅವಗುಣಗಳನ್ನು ಎತ್ತಿ ಆಡುವರು. ವನವಾಸ ಮುಗಿದ ಬಳಿಕ ಜನಕನು ಇದಿರಾದರೆ ಸೀತೆಯ ಬಗ್ಗೆ ಏನುತ್ತರ ಕೊಡಲಿ? ಜನಕನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ. ಅಷ್ಟು ಪ್ರೀತಿಯಿಂದ ಬೆಳೆಸಿದ ಮಗಳನ್ನು ಧಾರೆಯೆರೆದು ಅವನು ನನಗೆ ಕೊಟ್ಟಿದ್ದಾನೆ. ಆ ವಿದೇಹ ರಾಜನು ಸೀತೆಯ ವಿನಾಶವನ್ನು ಕೇಳಿ ಮೂರ್ಛಿತನಾಗುವುದು ನಿಶ್ಚಿತ. ನಾನು ಅಯೋಧ್ಯೆಗೆ ಹೋಗುವುದಿಲ್ಲ. ಸ್ವರ್ಗವೂ ನನ್ನ ಪಾಲಿಗೆ ಶೂನ್ಯ. ಲಕ್ಷ್ಮಣ, ನೀನು ನನ್ನನ್ನು ಬಿಟ್ಟು ಹೋಗಿಬಿಡು ಅಯೋಧ್ಯೆಗೆ‌. ನನ್ನ ಪರವಾಗಿ ಭರತನನ್ನು ಗಾಢವಾಗಿ ಅಪ್ಪಿ ಅಯೋಧ್ಯೆಯನ್ನು ಅವನಿಗೇ ಬಿಟ್ಟು ಕೊಟ್ಟಿರುವೆನೆಂದು ಹೇಳು, ಕೌಸಲ್ಯೆಗೆ ಯಾರಿಲ್ಲ. ಅವಳನ್ನು ನೀನೇ ನೋಡಿಕೊಳ್ಳಬೇಕು. ಸೀತೆಯ ವಿನಾಶ ಮತ್ತು ಅದೇ ಕಾರಣಕ್ಕೆ‌ ನನ್ನ ವಿನಾಶವನ್ನು ಅಮ್ಮನಿಗೆ ವಿಸ್ತಾರವಾಗಿ ಹೇಳು” ಹೀಗೆಂದು ರಾಮ ವಿಲಪಿಸುತ್ತಿರಲು ಲಕ್ಷ್ಮಣನಿಗೆ ಭಯವಾಯಿತು.

ಏನಾಗಬಹುದು ಅಣ್ಣನಿಗೆ? ಹೇಗೆ ಅಣ್ಣ ಮೊದಲಿನ ಸ್ಥಿತಿಗಡ ಬಂದಾನು? ಕ್ಷಣಕ್ಷಣವೂ ಉನ್ಮಾದಕ್ಕೊಳಗಾಗುವ, ವಿಲಪಿಸುತ್ತಿರುವ, ರಾಮನನ್ನು ಕಂಡು ಲಕ್ಷ್ಮಣನ ಮುಖ ವಿವರ್ಣವಾಯಿತು. ಶೋಕಪೀಡಿತ ರಾಮನು ಶೋಕಪೀಡಿತ ಲಕ್ಷ್ಮಣನಿಗೆ ನಿಟ್ಟುಸಿರು ಬಿಟ್ಟು ಹೇಳ್ತಾನೆ, ‘ನೋಡು, ನನ್ನಂತಹ ದೌರ್ಭಾಗ್ಯವಂತರು ಜಗತ್ತಿನಲ್ಲಿ ಇನ್ನೊಬ್ಬರಿಲ್ಲ. ಒಂದು ಶೋಕವಾದ ಮೇಲೆ ಮತ್ತೊಂದು. ಎಷ್ಟಾಯಿತು? ರಾಜ್ಯ, ಬಂಧು ಮಿತ್ರರ ಸಹವಾಸ, ತಂದೆ, ಈಗ ಸೀತೆ. ನನ್ನೊಳಗೆ ಜೀರ್ಣವಾಗಿದ್ದ ಶೋಕಗಳೆಲ್ಲವೂ ಸೀತಾವಿಯೋಗದಿಂದ ಮತ್ತೆ ಭುಗಿಲೆದ್ದಿವೆ’.

ಅಷ್ಟು ಹೊತ್ತಿಗೆ ದೃಶ್ಯವೊಂದು ರಾಮನ ಕಣ್ಣಿಗೆ ಕಟ್ಟಿತು. ‘ರಾಕ್ಷಸನಿಂದ ಅಪಹರಿಸಲ್ಪಟ್ಟು ಆಕಾಶಕ್ಕೆ ಎತ್ತಿಕೊಂಡು ಹೋದಾಗ ಆ ನನ್ನ ಮಡದಿಯು ‌ಭಯಗೊಂಡವಳಾಗಿ ಅಪಸ್ವರದಲ್ಲಿ ಕಿರುಚಿಕೊಂಡಿರಬೇಕು’ ಎಂದು ದುಃಖಿಸುತ್ತಾನೆ. ಈ ಘಟನೆ ಹೀಗೆಯೇ ನಡೆದಿದೆ. ಅದನ್ನೇ ನೋಡಿದವನಂತೆ ರಾಮ ಹೇಳ್ತಾನೆ. ವಿಚಿತ್ರ ಅದು‌.
‘ಸೀತೆಯ ಸುಂದರ ವದನವು ಕಂದಿರಬಹುದು. ಆಕೆಯು ಆರ್ತನಾದ ಮಾಡಿರಬಹುದು’ ಎಂಬುದಾಗಿ ಸ್ವತಃ ಕಂಡಂತೆ ರಾಮ ವರ್ಣಿಸುತ್ತಾನೆ‌. ನಂತರ ಆದಿತ್ಯನನ್ನು ಕೇಳ್ತಾನೆ, ವಾಯುವನ್ನು ಕೇಳ್ತಾನೆ. ಹೀಗೆಲ್ಲ ವಿಲಪಿಸುತ್ತಿರುವ ರಾಮನನ್ನು ನೋಡಿ ತಮ್ಮ ಸೌಮಿತ್ರಿಯು ಅಣ್ಣನಾಗಿ ರಾಮನನ್ನು ಸಂತೈಸುವ ಪ್ರಯತ್ನ ಮಾಡ್ತಾನೆ. ನೀನು ಉತ್ಸಾಹ ಕಳೆದುಕೊಂಡರೆ ಸೀತೆಯನ್ನು ಹುಡುಕುವುದು ಹೇಗೆ? ಉತ್ಸಾಹವುಳ್ಳವರಿಗೇ ಕಾರ್ಯಸಿದ್ಧಿಯಾಗುವುದು ಎಂದು ಲಕ್ಷ್ಮಣ ಹೇಳಿದರೆ ಕೇಳಲೇ ಇಲ್ಲ ರಾಮ. ದುಃಖದಿಂದ ದೊಡ್ಡ ದುಃಖ.. ಮತ್ತೂ ದೊಡ್ಡ ದುಃಖದಿಂದ ವಿಲಪಿಸ್ತಾನೆ.

ಅತ್ತ ಜಟಾಯು ರಾಮನಿಗಾಗಿ ಕಾಯ್ತಾ ಇದ್ದಾನೆ. ರಕ್ತ ಹರೀತಾ ಇದೆ. ಎಲ್ಲ ಕಡೆ ರಾಮ ಲಕ್ಷ್ಮಣರು ಹುಡುಕಿದ್ದಾರೆ, ಆದರೆ ಜಟಾಯು ಇದ್ದ ಸ್ಥಾನವನ್ನು ಬಿಟ್ಟು. ಜಟಾಯು ರಾಮನ ಪ್ರತೀಕ್ಷೆಯಲ್ಲಿ ಇನ್ನೂ ಜೀವ ಹಿಡಿದುಕೊಂಡಿದ್ದಾನೆ. ಅದು ಮನಃಶಕ್ತಿ ಹೊರತು ತನುಃಶಕ್ತಿಯಲ್ಲ. ಅದು ರಾಮನಿಗಾಗಿ ಮಾತ್ರ.

ಇತ್ತ ರಾಮ ಲಕ್ಷ್ಮಣರು ಗೋದಾವರಿ ನದಿಯ ಬಳಿ ಮತ್ತೆ ಹುಡುಕುತ್ತಾರೆ‌. ರಾವಣನಿಗೆ ಹೆದರಿ ಗೋದಾವರಿಯೂ ಬಾಯಿ ಬಿಡದಾದಾಗ ಮಹಾ ಬಲಶಾಲಿಗಳಾದ ಕ್ರೂರಮೃಗಗಳು ಕೆಲವು ರಾಮನ ಬಳಿ ಬಂದು ರಾಮನ ಮುಖ ನೋಡು, ಏನನ್ನೋ ಹೇಳುವ ಪ್ರಯತ್ನ ಮಾಡ್ತಾರೆ. ರಾಮ ಗಮನಿಸ್ತಾನೆ. ಲಕ್ಷ್ಮಣನಿಗೆ “ಈ ಬಲಶಾಲಿ ಮೃಗಗಳು ಮತ್ತೆ ಮತ್ತೆ ನನ್ನನ್ನು ನೋಡುತ್ತಿವೆ” ಎಂದು ಗದ್ಗದಿತನಾಗಿ “ಎಲ್ಲಿ ಸೀತೆ” ಎಂದಾಗ ಮೃಗಗಳು ಇದ್ದಕ್ಕಿದ್ದಂತೆ ಎದ್ದು ದಕ್ಷಿಣಕ್ಕೆ ಮುಖಮಾಡಿ ತಮ್ಮ ಮುಖವನ್ನು ಮಾತ್ರ ಮೇಲಕ್ಕೆತ್ತಿ ಆಕಾಶ ತೋರಿಸುತ್ತಾ ದಕ್ಷಿಣಕ್ಕೆ ಧಾವಿಸಿದವಂತೆ. ಇದು ಮೊದಲ ಸುಳಿವು. ರಾವಣನು ಸೀತೆಯನ್ನು ಒಯ್ದ ದಿಕ್ಕಿನಲ್ಲಿಯೇ ಓಡ್ತವೆ, ನಿಲ್ತವೆ, ಹಿಂದಿರುಗಿ ನೋಡ್ತವೆ, ಮತ್ತೆ ಮುಂದೆ ಹೋಗ್ತವೆ. ಹೀಗೆ ರಾಮನಿಗೆ ತಿಳಿಸುವ ಪ್ರಯತ್ನ ಮಾಡಿದವು‌. ರಾಮನಿಗೆ ಮನಸ್ಸಿಗೆ ಬರಲಿಲ್ಲ. ಲಕ್ಷ್ಮಣ ಗಮನಿಸಿದ. ಸೀತೆಯನ್ನು ಕದ್ದೊಯ್ದ ಮಾರ್ಗ… ಭೂಮಿ… ಆ ಮೃಗಗಳು ಅನ್ವೇಷಣೆಯನ್ನು ಬಯಸಿದ್ದವು. ಅವುಗಳ ಹಾವಭಾವ ಲಕ್ಷ್ಮಣನಿಗೆ ಅರ್ಥವಾಯಿತು. ಬಹು ಅಂಶ ಗೊತ್ತಾಯಿತು. ಈ ದಿಕ್ಕಿನಲ್ಲಿ‌ ಸೀತೆ ಹೋಗಿದ್ದಾಳೆ ಎನ್ನುವುದು ಗೊತ್ತಾಯಿತು. ಆಕಾಶದಲ್ಲಿ ಅಂತ ಗೊತ್ತಾಗಲಿಲ್ಲ.

ಬುದ್ಧಿವಂತ ಲಕ್ಷ್ಮಣ ಅಣ್ಣನಿಗೆ ತನಗೆ ಅರ್ಥವಾಗಿದ್ದಷ್ಟನ್ನು ಹೇಳಿದನು. ಅಣ್ಣಾ, ನಾವು ಈ ದಿಕ್ಕು ಹಿಡಿದು ಹೋಗೋಣ. ನಮಗೇನಾದರೂ ಗುರುತು ಸಿಕ್ಕೀತು ಅಥವಾ ಸೀತೆಯೇ ಸಿಕ್ಕಿಯಾಳು ಎಂದಾಗ “ಹುಂ” ಎಂದನಂತೆ ರಾಮ. ಅಣ್ಣ ತಮ್ಮ ಮೃಗಗಳು ತೋರಿದ ದಿಕ್ಕಿಗೆ ನಡೆದರು‌. ಮುಂದೆ ರಾಮ, ಹಿಂದೆ ಲಕ್ಷ್ಮಣ. ಆಗ ಭೂಮಿಯಲ್ಲಿ ಮತ್ತೊಂದು ಕುರುಹು ಕಂಡಿತು. ಉದ್ದಕೆ ಹೂವಿನ ದಾರಿ. ಆಗ ರಾಮ ದುಃಖಿತನಾಗಿ, “ಲಕ್ಷ್ಮಣ, ನಾನೇ ಕೊಯ್ದ ಹೂವುಗಳಿವು. ಕೈಯ್ಯಾರೆ ನಾನೇ ಸೀತೆಗೆ ಇಂದು ಮುಡಿಸಿದ ಹೂವುಗಳು ಬಿದ್ದಿವೆ ನೋಡು” ಎಂದು ಹೇಳಿ ಬಳಿಕ ಪರ್ವತವನ್ನು ರಾಮ ಕೇಳ್ತಾನೆ, ‘ ಹೇ ಪರ್ವತರಾಜನೇ, ನನ್ನಿಂದ ವಿರಹಿತಳಾದ ಸೀತೆಯನ್ನು ಕಂಡೆಯಾ’ ಎಂದು ಪ್ರಶ್ನಿಸಿದಾಗ ಆ ಗಿರಿಯು ಸೀತೆಯನ್ನು ಕಂಡೆ ನಾನು ಎಂಬ ಅರ್ಥ ಬರುವಂತೆ ಪ್ರತಿಧ್ವನಿಸಿತಂತೆ. ಆದರೆ ವಿವರಗಳಿಲ್ಲ. ಕೋಪ ಬಂತು ರಾಮನಿಗೆ. ರಾಮ ಕ್ರುದ್ಧನಾಗಿ ಪರ್ವತವನ್ನು ಗದರಿದನಂತೆ, ‘ಅಪರಂಜಿಯಂತಹ ಸೀತೆಯನ್ನು ತೋರಿಸು, ಇಲ್ಲದಿದ್ದರೆ ನಿನ್ನನ್ನು ಪುಡಿ ಮಾಡಿಯೇನು’ ಎಂದನು. ಆಗ ಇನ್ನಷ್ಟು ಕೋಪದಿಂದ, ‘ನನ್ನ ಬಾಣದಿಂದ ಸುಡುವೆ ನಿನ್ನನ್ನು ಸುಟ್ಟು ಬೂದಿಯಾಗು. ನಿನ್ನನ್ನು ಯಾರೂ ಸೇವಿಸಲು ಸಾಧ್ಯವಿಲ್ಲ. ನಾಶ ಮಾಡುತ್ತೇನೆ, ಗೋದಾವರಿಯನ್ನೂ ಉಳಿಸಲಾರೆ’ ಎಂಬುದಾಗಿ ಹೇಳಿದ ರಾಮನ ಕಣ್ಣುಗಳಿಂದ ಕ್ರೋಧದ ಕಿಡಿಯುಕ್ಕಲು ಇನ್ನೊಂದು ಕುರುಹು ಕಂಡಿತು. ಏನದು? ಹೆಜ್ಜೆ!!

ದೊಡ್ಡ ಹೆಜ್ಜೆ, ಅದರ ಹಿಂದೆ ಸಣ್ಣ ಹೆಜ್ಜೆ. ಏನದು? ಹಿಂದಿನದು ರಾವಣನ ಹೆಜ್ಜೆ. ಮುಂದಿನದು ಸೀತೆಯ ಹೆಜ್ಜೆ. ರಾವಣನು ಸೀತೆಯನ್ನು ಅಟ್ಟಿಸಿಕೊಂಡು ಹೋಗುವಾಗ ಸೀತೆಯು ಓಡುವಾಗಿನ ಹೆಜ್ಜೆಗಳು. ಆ ಹೆಜ್ಜೆ ನೋಡಿದರೆ ‘ಇದು ರಾಕ್ಷಸನ ಹೆಜ್ಜೆ’ ಅನ್ನುವಂತಿತ್ತು. ಅಲ್ಲಿಂದ ಮುಂದೆ, ಭಯಗೊಂಡ, ರಾಮನನ್ನು ತೀವ್ರವಾಗಿ ಬಯಸಿದ, ರಾವಣನಿಂದ ಅನುವೃತ್ತಳಾದ ಸೀತೆಯ ಹೆಜ್ಜೆಗಳು. ಅಲ್ಲೇ ಪಕ್ಕದಲ್ಲಿ ದೊಡ್ಡ ಧನುಸ್ಸೊಂದು ಬಿದ್ದಿದೆ. ಎರಡು ಬತ್ತಳಿಕೆಗಳು ಭಗ್ನವಾಗಿ ಬಿದ್ದಿವೆ. ರಥವೊಂದು ನೂರಾರು ಚೂರಾಗಿ ಬಿದ್ದಿದೆ‌. ರಾಮ ಸಂಭ್ರಮದಿಂದ ತಮ್ಮನಿಗೆ ಪ್ರಿಯವನ್ನು ಹೇಳಿದನು. ಕುರುಹೊಂದು ನೋಡು ಲಕ್ಷ್ಮಣ, ಏನೋ ನಡೆದಿದೆ ಇಲ್ಲಿ. ರಥ, ಧನುಸ್ಸು ನೋಡು. ಅಷ್ಟು ಹೊತ್ತಿಗೆ ಸೀತೆಯ ಆಭರಣದ ಚಿನ್ನದ ಬಿಂದುಗಳು ಕಂಡವು. ಕೊಂಚ ಮುಂದೆ ಹೊಳೆಯುವ ರಕ್ತ, ಭೂಮಿಯೆಲ್ಲಾ ಚೆಲ್ಲಾಡಿದೆ. ನಿಜವಾಗಿ ರಾವಣ-ಜಟಾಯುವಿನ ರಕ್ತವದು. ಆದರೆ ರಾಮನಿಗೆ ಸೀತೆಯ ನೆನಪು. ಅವನ ಭಾವ ಬೇರೆಯಾಯಿತು.

ರಾಕ್ಷಸರು ಸೀತೆಯನ್ನು ಪಾಲು ಹಂಚಿಕೊಂಡು ತಿಂದಿರಬೇಕು ಅಥವಾ ಸೀತೆಗಾಗಿ ಈರ್ವರು ರಾಕ್ಷಸರು ಹೊಡೆದಾಡಿರಬೇಕು. ಚಿಹ್ನೆಗಳು ನೋಡು, ಯಾರದೀ ಮಹಾಧನುಸ್ಸು? ಕವಚ ಹರಿದು ಬಿದ್ದಿದೆ.. ವೈಡೂರ್ಯ ಹರಡಿದೆ‌, ನೂರು ಕಡ್ಡಿಗಳ ಛತ್ರದ ದಂಡ ಮುರಿದಿದೆ. ಯಾರೀ ಘೋರ ಕರ್ಮನಿವನು. ಪಕ್ಕದಲ್ಲಿ ಸಾರಥಿ ಸತ್ತು ಬಿದ್ದಿದ್ದಾನೆ.

ರಾಮನಿಗೆ ಧರ್ಮದ ಮೇಲೆ‌ ಬೇಸರವಾಯಿತು. ಒಬ್ಬಂಟಿ ಸೀತೆಯು ಸಂಕಷ್ಟದಲ್ಲಿದ್ದಾಗ ಧರ್ಮವು ಸೀತೆಯನ್ನು ಕಾಯಬೇಡವೇ? ದೇವತೆಗಳು ಇನ್ನು ನನಗೆ ಮಾಡಬೇಕಾದ್ದು ಏನಿದೆ? ದೇವತೆಗಳ ಕಾರ್ಯ ಮಾಡಿಲ್ಲವೇ ನಾನು? ಈಗಲೂ ಮಾಡದಿದ್ದರೆ ಇನ್ನು ನನಗೆ ಅವರು ಮಾಡುವಂಥದ್ದು ಏನೂ ಇಲ್ಲ. ಇನ್ನೇನಿದೆ ನನ್ನ ಬದುಕಿನಲ್ಲಿ?

ಕೋಪ ಬಂತು ರಾಮನಿಗೆ. ಮೃದುವಾಗಿದ್ದು ತಪ್ಪಾಯಿತು, ತಾನು ‘ನಿರ್ವೀರ್ಯ’ ಎಂಬುದಾಗಿ ಭಾವಿಸಿದ್ದಾರೆ, ಇವೆಲ್ಲ ದೋಷಗಳಾದವು. ಇನ್ನು ಈ ಗುಣಗಳು ಬೇಡ, ಇನ್ನು ನಾನು ಪ್ರಳಯಂಕರನಾಗಬೇಕು, ಲೋಕಸಂಹಾರಿಯಾಗಬೇಕು. ಆಗಲೇ ಇವರಿಗೆಲ್ಲ ಬುದ್ಧಿ ಬರುವುದು ಎಂದುಕೊಂಡು ಸೀತೆಯ ಒಂದು ಕೂದಲು ಕೊಂಕದಂತೆ ಮರಳದಿದ್ದಲ್ಲಿ ಜಗತ್ತಿನ ಸರ್ವನಾಶ ಮಾಡುವುದಾಗಿ ಹೇಳುವ ರಾಮನ ಮಾತುಗಳನ್ನಾಲಿಸಿ‌ ಲಕ್ಷ್ಮಣನಿಗೆ ಭಯವಾಯಿತು. ರಾಮನ ಗಮನವನ್ನು ಉಪಾಯವಾಗಿ ಬೇರೆಡೆಗೆ ಸೆಳೆಯುವ ಪ್ರಯತ್ನವನ್ನು ಮಾಡ್ತಾನೆ ಮತ್ತು ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ಕೊಡುವುದು ರಾಜಧರ್ಮ ಎಂದು ನೆನಪಿಸುತ್ತಾನೆ. ಸೀತೆಯನ್ನು ಅಪಹರಿಸಿದವನನ್ನು ಹುಡುಕಿ ಅವನನ್ನು ಸಂಹರಿಸೋಣ. ಎಷ್ಟು ಹುಡುಕಿದಾಗಲೂ ಸಿಗದಿದ್ದರೆ ದೇವತೆಗಳ ಸಹಾಯ ಕೇಳೋಣ, ಆಗಲೂ ಆಗದಿದ್ದರೆ ನೀನೆಂದಂತೆ ಮುಂದುವರಿಯುವುದರ ಕುರಿತು ಯೋಚಿಸೋಣ ಎನ್ನುತ್ತಾ ಸರ್ವನಾಶ ಸಲ್ಲ ಎಂಬುದಾಗಿ ಮನವರಿಕೆ ಮಾಡಿಕೊಡುತ್ತಾನೆ.

ಕೊನೆಗೆ, ‘ಅಣ್ಣಾ, ಇದೆಲ್ಲ ನೀನೇ ನನಗೆ ಹೇಳಿದ್ದು ಮೊದಲು, ನೀನು ನೂರಾರು ಬಾರಿ ಹೇಳಿದ್ದನ್ನು ನಾನು ಒಂದು ಬಾರಿ ನಿನಗೆ ಹೇಳ್ತಾ ಇದ್ದೇನೆ. ಹಾಗಾಗಿ, ಮತ್ತೆ… ನಿನಗೆ ತಿಳಿಸಿ ಹೇಳಲು ಬೃಹಸ್ಪತಿಗೂ ಸಾಧ್ಯವಿಲ್ಲ. ಪ್ರಾಜ್ಞ ನೀನು. ನಿನ್ನೊಳಗೆ ಸುಪ್ತವಾಗಿರುವ ದಿವ್ಯಭಾವವನ್ನು ಎಚ್ಚರಿಸುವ ಪ್ರಯತ್ನ ನನ್ನದು’ ಎಂದು ನೆನಪಿಸಿ ಹೇಳಿ ಲಕ್ಷ್ಮಣ ತನ್ನ ಕಾರ್ಯವನ್ನು ಮಾಡ್ತಾನೆ.

ಇಬ್ಬರೂ ಮುಂದುವರಿಯಬೇಕು. ಅಲ್ಲಿಯೇ ಪಕ್ಕದಲ್ಲಿದ್ದಾನೆ ಜಟಾಯು. ಅವನು ಕೂಗುವ ಸ್ಥಿತಿಯಲ್ಲಿಲ್ಲ. ಅನತಿ ದೂರದಲ್ಲಿರುವನಷ್ಟೇ. ಇಲ್ಲಿ ರಾಮ ಲಕ್ಷ್ಮಣ ಸಂಭಾಷಣೆ ನಡೆಯುತ್ತಿದೆ‌. ಮುಂದಿನ ಕಥೆ: ಜಟಾಯು~ರಾಮರ ಆ ಸನ್ನಿವೇಶ. ಅದು ಎಲ್ಲಿ ಬರುತ್ತದೆ? ಯಾವಾಗ ಬರುತ್ತದೆ? ಹೇಗೆ ಬರುತ್ತದೆ? ಭಾವವನ್ನು ಮೀರಿದ ಆ ಮಹಾಸಮಾಗಮಕ್ಕೆ ನಾವು ನೀವು ಮುಂದಿನ ಪ್ರವಚನದಲ್ಲಿ ಸಾಕ್ಷಿಗಳಾಗೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments