ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಪಕ್ಷಿ ರಾಜನಾದ ಜಟಾಯುವು ರಾಕ್ಷಸ ರಾಜನಾದ ರಾವಣನ ಮುಂದೆ ತೋರಿದ ಪರಾಕ್ರಮವು ದೊಡ್ಡದು. ಆದರೆ ಅದಕ್ಕಿಂತ ದೊಡ್ಡದು ಅವನ ಧೃತಿ. ರಾಮ ಯಾವಾಗ ಬರುವನೋ, ಅವನು ಬಂದಾಗ ಸೀತಾಪಹರಣದ ವಿಷಯವನ್ನು ಅವನಿಗೆ ಹೇಳಲು ನಿಲ್ಲದ ಜೀವವನ್ನು ಹಿಡಿದುಕೊಂಡಿದ್ದ. ಬಾಯಿಂದ ರಕ್ತ ಮಾತ್ರವಲ್ಲದೆ ಮಾಂಸವೇ ಹೊರಬರುವ ಸಮಯದಲ್ಲೂ ರಾಮನಿಗೆ ವಿಷಯ ಹೇಳಲು ಜಟಾಯು ಮುಂದಾಗುತ್ತಾನೆ.
ಮರಣ ಸಂಕಟದಲ್ಲೂ ತೋರುವ ಸಮಚಿತ್ತ ; ಅದು ಧೃತಿ. ― ಶ್ರೀಸೂಕ್ತಿ.

ಹಾಗಾಗಿ ಜಟಾಯುವು ರಾವಣನ ಮುಂದೆ ತೋರಿದ ಪರಾಕ್ರಮಕ್ಕಿಂತ ರಾಮನ ಮುಂದೆ ತೋರಿದ ಧೃತಿ ದೊಡ್ಡದು. ಸ್ವತಃ ರಾಮನು ಪಕ್ಷಿ ರಾಜನಿಗೆ ಸಂಸ್ಕಾರ ನೀಡುವುದರ ಮೂಲಕ ” ಬ್ರಹ್ಮಾಂಡ ರತ್ನ ” ಎಂದೇ ಕರೆಯಬಹುದಾದ ಸನ್ಮಾನವನ್ನು ಜಟಾಯುವಿಗೆ ಮಾಡುತ್ತಾನೆ. ತನ್ನ ವಾಕ್ಯಗಳಿಂದ ಜಟಾಯುವಿಗೆ ಉತ್ಕೃಷ್ಟ ಲೋಕಗಳು ಪ್ರಾಪ್ತಿಯಾಗಲಿ ಎಂದು ರಾಮನು ಅಪ್ಪಣೆ ಕೊಡುತ್ತಾನೆ. ಇದರಿಂದ ಜಟಾಯುವಿಗೆ ಪರಮಪದ ಪ್ರಾಪ್ತವಾಯಿತು. ಜಟಾಯುವಿಗೆ ಜಲತರ್ಪಣವನ್ನು ಕೊಟ್ಟು ರಾಮ – ಲಕ್ಷ್ಮಣರು ಹೊರಟರು. ಶರ, ಚಾಪ, ಖಡ್ಗದಾರಿಗಳಾಗಿ ಮಹಾರಣ್ಯವನ್ನು ದಾಟಿ, ದಕ್ಷಿಣ ದಿಕ್ಕಿನಲ್ಲಿ ಮುಂದುವರೆಯುತ್ತಾರೆ. ಮೂರು ಕ್ರೋಷದಷ್ಟು ದೂರ ಕ್ರಮಿಸಿದ ರಾಮ – ಲಕ್ಷ್ಮಣರು ಕ್ರೌಂಚಾರಣ್ಯವನ್ನು ಪ್ರವೇಶಿಸಿದರು.

★ಕ್ರೋಷ : ಕೂಗಿದ್ದು ಎಷ್ಟು ದೂರದವರೆಗೆ ಕೇಳುವುದೋ ಅಷ್ಟು ದೂರವನ್ನು ಕ್ರೋಷ ಎಂದು ಕರೆಯುತ್ತಾರೆ.

ಕ್ರೌಂಚಾರಣ್ಯದಲ್ಲಿ ರಾಮ – ಲಕ್ಷ್ಮಣರು ಸೀತೆಯನ್ನು ಹುಡುಕಿದರು. ನಂತರ ಕ್ರೌಂಚಾರಣ್ಯವನ್ನು ದಾಟಿ ಮತಂಗವನದೆಡೆಗೆ ಪ್ರಯಾಣ ಬೆಳೆಸಿದರು. ಕ್ರೌಂಚಾರಣ್ಯ ಮತ್ತು ಮತಂಗಾವನದ ಮಧ್ಯೆ ಒಂದು ಕಾಡು ಇತ್ತು. ಅಲ್ಲಿ ಪಾತಾಳದಂತೆ ಆಳ ಇರುವ ಗುಹೆ ಇತ್ತು. ರಾಮ – ಲಕ್ಷ್ಮಣರಿಗೆ ಬಹುದೊಡ್ಡ ಆಕಾರದ, ವಿಕೃತ ಮುಖದ ರಾಕ್ಷಸಿ ಕಾಣುತ್ತಾಳೆ. ಭೀಭತ್ಸ, ರೌದ್ರ ದರ್ಶನ, ಲಂಬೋಧರಿ(ಡೊಳ್ಳು ಹೊಟ್ಟೆ), ಚೂಪಾದ ಹಲ್ಲುಗಳು, ಒರಟು ಚರ್ಮ ಇವೆಲ್ಲವೂ ಅವಳ ಲಕ್ಷಣವಾಗಿತ್ತು. ರಾಮ – ಲಕ್ಷ್ಮಣರು ಅವಳನ್ನು ನೋಡುವಾಗ ಕೂದಲನ್ನು ಹರಡಿಕೊಂಡು ಮೃಗಗಳ ಭಕ್ಷಣೆಯನ್ನು ಮಾಡುತ್ತಿದ್ದಳು. ರಾಮ – ಲಕ್ಷ್ಮಣರು ಸಾಗುತ್ತಿರುವುದನ್ನು ನೋಡಿ ರಾಕ್ಷಸಿಗೆ ಪ್ರೇಮಾಂಕುರವಾಯಿತು. ಇದ್ದಕ್ಕಿದ್ದಂತೆ ಹಿಂದಿನಿಂದ ಬಂದು ಲಕ್ಷ್ಮಣನನ್ನು ಹಿಡಿದುಕೊಂಡು ನಾವಿಬ್ಬರೂ ವಿಹರಿಸೋಣ ಬಾ ಎಂದು ಕರೆದಳು. ನನ್ನ ಹೆಸರು ಅಯೋಮುಖಿ (ಕಬ್ಬಿಣದ ಮುಖದವಳು) , ನನಗಿಂದು ಆದ ದೊಡ್ಡ ಲಾಭ ನೀನು ಸಿಕ್ಕಿದ್ದು ಎಂದು ರಾಕ್ಷಸಿ ಹೇಳಿದಾಗ, ಕೋಪಗೊಂಡ ಲಕ್ಷ್ಮಣನು ಕಿವಿ ಮೂಗುಗಳನ್ನು ಕತ್ತರಿಸಿದನು. ಆಗ ರಾಕ್ಷಸಿಯು ಜೋರಾಗಿ ಕೂಗುತ್ತಾ ಓಡಿ ಹೋದಳು.

ಕಾಮಕ್ರೋಧಗಳ ಅವ್ಯವಸ್ಥೆಯೇ ರಾಕ್ಷಸತ್ವ ― ಶ್ರೀಸೂಕ್ತಿ.

ಸ್ತ್ರೀಯರಿಗೆ ಮೃತ್ಯುದಂಡವನ್ನು ಕೊಡಬಾರದು ಎನ್ನುವ ರಾಮನ ನಿಲುವಿಗೆ ಬದ್ಧನಾದ ಲಕ್ಷ್ಮಣನು ರಾಕ್ಷಸಿಯನ್ನು ಕೊಲ್ಲಲಿಲ್ಲ. ನಂತರ ಮುಂದುವರೆದ ರಾಮ – ಲಕ್ಷ್ಮಣರು ಮತ್ತೊಂದು ಕಾಡನ್ನು ಪ್ರವೇಶ ಮಾಡುತ್ತಾರೆ. ಆಗ ಲಕ್ಷ್ಮಣನು ರಾಮನಿಗೆ, ಅಣ್ಣಾ ! ನನ್ನ ಶರೀರದಲ್ಲಿ ನಿಮಿತ್ತ ಕಾಣುತ್ತಿದೆ. ಬಾಹುಗಳು ಉದುರುತ್ತಿವೆ. ಅನಿಷ್ಠವಾದ ನಿಮಿತ್ತ ಕಾಣಬರುತ್ತಿದೆ, ಗಾಬರಿಯ ಸನ್ನಿವೇಶವು ಉಂಟಾಗುತ್ತಿದೆ, ಸಜ್ಜಾಗು ಎಂದು ಹೇಳುತ್ತಾನೆ. ವಂಚುಲಕ ಎನ್ನುವ ಪಕ್ಷಿಯ ಸದ್ದನ್ನು ಕೇಳಿದ ಲಕ್ಷ್ಮಣನು ವಿಜಯ ನಮ್ಮದು ಎಂದು ರಾಮನಿಗೆ ಹೇಳುತ್ತಿರುವಂತೆಯೇ ಕಾಡಿಗೆ ಕಾಡೆ ಮುರಿದು ಹೋದ ಶಬ್ದ ಉಂಟಾಯಿತು. ರಾಮನು ಆ ಶಬ್ದದ ಹಿಂದೆ ತನ್ನ ಮನಸ್ಸನ್ನು ಓಡಿಸಿ, ಏನಿರಬಹುದು ? .. ಯಾರದು ??… ಎಂದು ನೋಡಿದಾಗ ಪೊದೆಯೊಂದರ ಬಳಿಯಲ್ಲಿ ಬಹು ದೊಡ್ಡ ಶರೀರದ ರಾಕ್ಷಸನೊಬ್ಬ ಕಾಣಿಸಿಕೊಂಡ. ತಲೆಯೇ ಇಲ್ಲದ, ದೊಡ್ಡ ಎದೆಯುಳ್ಳ, ಹೊಟ್ಟೆಯಲ್ಲಿ ದೊಡ್ಡ ಬಾಯಿಯುಳ್ಳ, ಮುಳ್ಳಿನಂತಿರುವ ಶರೀರದ ರೋಮಗಳು, ಧ್ವನಿ ಕಾರ್ಮೋಡದ ಗುಡುಗಿನಂತೆ, ಎದೆಯಲ್ಲಿ ಬೆಂಕಿ ಉರಿಯುಂತಿರುವ ಒಂದೇ ಕಣ್ಣು ಇರುವ ರಾಕ್ಷಸನಾಗಿದ್ದ. ರಾಕ್ಷಸನು ತನ್ನ ನಾಲಿಗೆಯಿಂದ ಕಟವಾಯಿಗಳನ್ನು ನೆಕ್ಕುತ್ತಾ ಇರುವ ದೃಶ್ಯವನ್ನು ರಾಮನು ನೋಡುತ್ತಾನೆ. ಆನೆ, ಸಿಂಹದಂತಹ ದೊಡ್ಡ ಮೃಗಗಳೇ ಅವನ ಆಹಾರವಾಗಿದ್ದವು. ಒಂದು ಕ್ರೋಷ ದೂರದಲ್ಲಿ ರಾಮ – ಲಕ್ಷ್ಮಣರು ಕಬಂದ ರೂಪದ, ಅತೀ ಘೋರನಾದ ರಾಕ್ಷಸನನ್ನು ನೋಡಿದರು.

ತನ್ನ ಎರಡು ಕೈಗಳಿಂದ ಕಬಂದನು ರಾಮ-ಲಕ್ಷ್ಮಣರೀರ್ವರನ್ನು ನೋವಾಗುವಂತೆ ಹಿಡಿದುಕೊಳ್ಳುತ್ತಾನೆ. ಶೂರನಾದ ರಾಮನು ವಿಚಲಿತನಾಗದೇ ಸಹಜವಾಗಿಯೇ ಇದ್ದ. ವಿಚಲಿತನಾದ ಲಕ್ಷ್ಮಣನು ತಾನು ರಾಕ್ಷಸನ ಮುಂದೆ ಸಣ್ಣ ಮಗು ಎಂದು ಭಾವಿಸಿ, ರಾಮನಿಗೆ ನೋಡು ಅಣ್ಣಾ ರಾಕ್ಷಸನ ವಶವಾದೆ, ನನ್ನನ್ನು ಭೂತಬಲಿಯಾಗಿ ಕೊಟ್ಟು ನೀನು ಬದುಕು ಎಂದು ಹೇಳುತ್ತಾನೆ. ಬಂಧನಕ್ಕೆ ಒಳಗಾದ ಕಷ್ಟದ ಸಮಯದಲ್ಲೂ ಲಕ್ಷ್ಮಣನಿಗಿದ್ದ ಭ್ರಾತ್ವಪ್ರೇಮವನ್ನು ರಾಮಾಯಣವು ವರ್ಣಿಸಿದೆ. ಸೀತೆ ನಿನಗೆ ಶೀಘ್ರದಲ್ಲಿಯೇ ಸಿಗುತ್ತಾಳೆ, ನೀನು ಮುಂದೆ ಅಯೋಧ್ಯೆಯ ಸಿಂಹಾಸನ್ನೇರಿದ ಮೇಲೆ ನನ್ನ ನೆನಪನ್ನು ಮಾಡಿಕೋ ಎಂದು ರಾಮನಿಗೆ ಹೇಳಿದನು. ಲಕ್ಷ್ಮಣನ ಮಾತುಗಳನ್ನು ಕೇಳಿದ ರಾಮ, ಲಕ್ಷ್ಮಣನಿಗೆ ಸಮಾಧಾನ ಮಾಡುವಾಗ ಕ್ರೂರ ಕಬಂದನು ಗುಡುಗಿನ ಸ್ವರದಲ್ಲಿ ರಾಮ – ಲಕ್ಷ್ಮಣರನ್ನು ಯಾರು ನೀವು..?, ಈ ಘನಘೋರ ಪ್ರದೇಶಕ್ಕೆ ಹೇಗೆ ಬಂದಿರಿ..??, ನನ್ನ ಅದೃಷ್ಟವಶಾತ್ ಸಿಕ್ಕಿದ್ದಿರಿ. ಹಸಿವಿನಿಂದ ನಾನು ಕಾಯುತ್ತಿರುವಾಗ ನನ್ನಲ್ಲಿಗೆ ಬಂದಿದ್ದು ಏಕೆ …?? ಇನ್ನು ನಿಮಗೆ ಬದುಕಿಲ್ಲ ಎಂದು ಹೇಳಿದನು. ಆಗ ರಾಮನಿಗೆ ಸೀತೆಯ ನೆನಪಾಗಿ ಬಹಳ ಬೇಸರವಾಯಿತು. ಲಕ್ಷ್ಮಣನಿಗೆ ರಾಮನು ಶಕ್ತಿವಂತರನ್ನು, ಸಕಲವಿದ್ಯಾಸಂಪನ್ನರನ್ನು ಕಾಲವು ತನ್ನ ಬಲವಿದ್ದಾಗ ನಾಶ ಮಾಡಿ ಬಿಡುತ್ತದೆ ನೋಡು ಎಂದು ಬಾಯಯಲ್ಲಿ ಹೇಳುತ್ತಾ , ಮನಸ್ಸನ್ನು ದೃಢಪಡಿಸಿದ. ದೇವರು ಕೊಟ್ಟ ಬುದ್ದಿಯಿಂದ ನೀವು ಓಡುವುದನ್ನು ಬಿಟ್ಟು, ನನ್ನಲ್ಲಿಗೆ ಬಂದಿದ್ದೀರಿ ಎಂದು ಕಬಂದ ಹೇಳಿದಾಗ, ಲಕ್ಷ್ಮಣನು ತಮ್ಮ ವಿಕ್ರಮವನ್ನು ತೋರಿಸಬೇಕು ರಾಮನಿಗೆ ಎಂದು ಹೇಳಿದನು. ಈತನು ನಮ್ಮನ್ನು ಕೈಗಳಿಂದ ಬಾಯಿಯೊಳಗೆ ಇಟ್ಟುಕೊಳ್ಳುವ ಮೊದಲು ಕೈಯನ್ನೇ ಕಡಿದುಬಿಡೋಣ, ಕೈ ಕಡಿದ ಮೇಲೆ ಹಾಗೆಯೇ ಬಿಟ್ಟು ಮುಂದುವರೆಯೋಣ ಎಂದು ಲಕ್ಷ್ಮಣನು ರಾಮನಿಗೆ ಹೇಳಿದನು. ಲಕ್ಷ್ಮಣನ ಮಾತನ್ನು ಕೇಳಿದ ಕಬಂದನು ರಾಮ-ಲಕ್ಷ್ಮಣರೀರ್ವರನ್ನು ತಿನ್ನಲು ಮುಂದಾಗುತ್ತಾನೆ. ಆಗ ರಾಮ-ಲಕ್ಷ್ಮಣರಿಬ್ಬರು ವೀರತ್ವವನ್ನು ಹೊಂದಿದವರಾಗಿ ರಾಕ್ಷಸನ ಬಾಹುಗಳನ್ನು ಕಡಿದರು. ಆಗ ಕಬಂದನು ಆಕಾಶ ಭೂಮಿಯೇ ಒಂದಾಗುವಂತೆ ಆರ್ತನಾದ ಮಾಡಿ, ರಾಮ – ಲಕ್ಷ್ಮಣರನ್ನು ನೀವು ಯಾರೆಂದು ಕೇಳಿದನು. ಆಗ ಲಕ್ಷ್ಮಣನು ರಾಮನ ಪರಿಚಯದಿಂದ ಆರಂಭಿಸಿ ಸೀತಾಪಹರಣದವರೆಗಿನ ಕಥೆಯನ್ನು ಹೇಳಿ, ನೀನು ಯಾರು ಎಂದು ಕಬಂದನನ್ನು ಪ್ರಶ್ನಿಸಿದನು. ಲಕ್ಷ್ಮಣನ ಮಾತುಗಳನ್ನು ಕೇಳಿದ ಕಬಂದನಿಗೆ ಪರಮಾನಂದವಾಯಿತು. ಏಕೆಂದರೆ ಶಬರಿಯ ಹಾಗೆ ಕಬಂದನು ರಾಮ – ಲಕ್ಷ್ಮಣರನ್ನು ಕಾಯುತ್ತಿದ್ದನು. ಕಬಂದನಿಗೆ ಇಂದ್ರನ ಮಾತು ನೆನಪಾಯಿತು. ತನ್ನ ಮಾತನ್ನು ಮುಂದುರೆಸಿ, ನನ್ನ ಅದೃಷ್ಟ ನಿಮ್ಮಿಬ್ಬರನ್ನು ಕಂಡೆ ನಾನು, ನನ್ನ ಭಾಗ್ಯ ತೆರೆಯಿತು, ಇದು ನನ್ನ ನಿಜವಾದ ರೂಪ ಅಲ್ಲ. ಅವಿನಿಯದ ಪರಿಣಾಮದಿಂದ ಈ ರೂಪ ಬಂತು. ಹೇಗೆ ಬಂತು ಎಂಬುದನ್ನು ಕಬಂದ ರಾಮ – ಲಕ್ಷ್ಮಣರಿಗೆ ವಿವರಿಸುತ್ತಾನೆ. ಮೊದಲು ತ್ರೈಲೋಕ್ಯ ಮೋಹನವಾದ, ಕಲ್ಪನೆಗೆ ಮೀರಿದ ರೂಪ ಇತ್ತು. ಚೆಂದವಾದ ರೂಪ ಇದ್ದರೂ ಬೇರೆಯವರನ್ನು ಹೆದರಿಸಲೆಂದೇ ರಾಕ್ಷಸನ ರೂಪವನ್ನು ಧಾರಣೆ ಮಾಡುತ್ತಿದ್ದೆ. ಒಮ್ಮೆ ಸ್ಥೂಲಶಿರ ಎಂಬ ಋಷಿಯ ಮುಂದೆ ರಾಕ್ಷಸನ ರೂಪ ಪ್ರಕಟಿಸಿ ಭಯಪಡಿಸಲು ಪ್ರಯತ್ನಿಸಿದಾಗ, ಋಷಿಗಳು ಇದೆ ರೂಪವೇ ಶಾಶ್ವತವಾಗಲಿ ಎಂದು ಶಪಿಸಿದರು. ಆಗ ಶಾಪವಿಮೋಚನೆ ಹೇಗೆ ಎಂದು ಕೇಳಿದಾಗ ಋಷಿಗಳು ಮುಂದೆ ರಾಮನು ನಿನ್ನ ಬಳಿಗೆ ಬಂದಾಗ, ರಾಮನು ನಿನ್ನ ಭುಜಗಳನ್ನು ಕಡಿದು ನಿನ್ನನ್ನು ಸುಡುವನು, ರಾಮನ ಕೈಯಿಂದ ಸಂಸ್ಕಾರವಾದಗ ನಿನಗೆ ಮೂಲರೂಪ ಮರಳಿ ಪ್ರಾಪ್ತವಾಗುತ್ತದೆ ಎಂದು ಹೇಳಿದ್ದನ್ನು ನೆನಪಿಸಿಕೊಂಡನು. ಶಾಪ ಬಂದ ಮೇಲೆ ತಪಸ್ಸನ್ನು ಮಾಡಿ ದೀರ್ಘಾಯುಸ್ಸನ್ನು ಪಡೆದುಕೊಂಡೆ ಎಂದು ಕಬಂದ ರಾಮ – ಲಕ್ಷ್ಮಣರಿಗೆ ಹೇಳುತ್ತಾನೆ. ವರವನ್ನು ಪಡೆದುಕೊಂಡ ಮೇಲೆ ಇಂದ್ರನ ಮೇಲೆ ಆಕ್ರಮಣ ಮಾಡಿದಾಗ, ಇಂದ್ರನು ವಜ್ರಾಯುಧದಿಂದ ತಲೆಗೆ ಅಪ್ಪಳಿಸಿದಾಗ ತಲೆಯು ಎದೆಯೊಳಗೆ ಸೇರಿಕೊಂಡಿತು ಕಬಂದನು ಎನ್ನುವುದನ್ನು ಹೇಳಿದನು.

ಎಲ್ಲವೂ ಒಳಿತೇ, ಒಳಿತಲ್ಲದ್ದು ಜಗದಲ್ಲಿಲ್ಲ . ― ಶ್ರೀಸೂಕ್ತಿ.

ಮಾತನ್ನು ಮುಂದುವರೆಸಿದ ಕಬಂದನು ರಾಮನಿಗೆ ಇನ್ನೊಂದು ಕಾರ್ಯ ಮಾಡಬೇಕು, ಈ ಶರೀರವನ್ನು ಸುಡಬೇಕು ಎಂದು ಹೇಳಿದನು. ಸೀತೆಯನ್ನು ಮರಳಿ ಪಡೆಯುವಲ್ಲಿ ಮುಂದಿನ ಮಾರ್ಗವನ್ನು ಹೇಳಬಲ್ಲೆ ಆದರೆ ಈ ಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ಹೇಳಿದನು. ರಾಮನು ಧನುವಿಗೆ ರಾವಣನು ಸೀತೆಯನ್ನು ಕದ್ದೊಯ್ದಿದ್ದಾನೆ. ಅವನ ಹೆಸರು ಮಾತ್ರ ಗೊತ್ತು. ಅವನ ಮನೆ, ಪ್ರಭಾವದ ಬಗ್ಗೆ ತಿಳಿದಿಲ್ಲ ಎಂದು ಹೇಳಿದನು. ನಿನಗೆ ದಹನ ಸಂಸ್ಕಾರವನ್ನು ಕೊಟ್ಟರೆ ಸೀತೆಯನ್ನು ಹುಡುಕುವ ದಾರಿಯನ್ನು ಹೇಳುವೆಯಾ..? ಎಂದು ರಾಮನು ಪ್ರಶ್ನಿಸಿದನು. ಆಗ ಕಬಂದನು ನನಗೆ ಈಗ ಪೂರ್ಣ ಜ್ಞಾನ ಇಲ್ಲ. ದಹನ ಸಂಸ್ಕಾರ ಮಾಡಿದ ಮೇಲೆ ಪೂರ್ಣ ಜ್ಞಾನ ಬರುತ್ತದೆ. ಸೂರ್ಯಾಸ್ತದ ಒಳಗೆ ದಹನ ಸಂಸ್ಕಾರವನ್ನು ಮಾಡಿ, ನಂತರ ದಾರಿಯನ್ನು ಹೇಳುತ್ತೇನೆ ಎಂದು ಹೇಳಿದನು. ರಾಮ – ಲಕ್ಷ್ಮಣರು ಕಬಂದನು ಹೇಳಿದ ರೀತಿಯಲ್ಲಿ ಕಟ್ಟಿಗೆ ರಾಶಿ ಮಾಡಿ, ಅದರಲ್ಲಿ ಅವನನ್ನು ತಳ್ಳಿ ಲಕ್ಷ್ಮಣನು ಎಲ್ಲ ದಿಕ್ಕಿನಿಂದಲೂ ಅಗ್ನಿ ಸ್ಪರ್ಶವನ್ನು ಮಾಡಿದನು. ಶರೀರವು ದಹನವಾಗುತ್ತಿದ್ದಂತೆಯೇ ಚಿತೆಯನ್ನು ತ್ಯಜಿಸಿ, ದಿವ್ಯಪುರುಷನೊಬ್ಬನು ಮೇಲೆದ್ದನು. ಆ ದೃಶ್ಯವು ಅಗ್ನಿಯಿಂದ ಅಗ್ನಿ ಮೇಲೆದ್ದು ಬಂದಂತೆ ಇತ್ತು. ಅಗ್ನಿಯಿಂದ ಹೊರಬಂದಾಗ ತೇಜಸ್ವಿಯಾಗಿ, ಅಂಗಾಂಗದಲ್ಲಿ ಭೂಷಣಗಳಿಂದ ಕಂಗೊಳಿಸುತ್ತಿದ್ದ. ಆಗ ತೇಜೋಮಯವಾಗಿರುವ ವಿಮಾನದಲ್ಲಿ ಕುಳಿತು ತನ್ನ ಪ್ರಭೆಯಿಂದ ಹತ್ತು ದಿಕ್ಕುಗಳ ಕತ್ತಲೆಯನ್ನು ತೊಳೆದನು.

ಗಗನದಲ್ಲೇ ನಿಂತು ರಾಮಲಕ್ಷ್ಮಣರಿಗೆ ಕಬಂದನು ಸಂದೇಶವನ್ನು ಕೊಡುತ್ತಾನೆ. ಸುಗ್ರೀವನೆಂಬ ವಾನರ ಶ್ರೇಷ್ಠನೂ ನಿನ್ನದೇ ಸ್ಥಿತಿಯಲ್ಲಿದ್ದಾನೆ. ಅವನ ಸ್ನೇಹ ಮಾಡಿಕೋ ಎಂದು ಹೇಳಿದನು. ಸುಗ್ರೀವನು ನಾಲ್ಕು ವಾನರರ ಜೊತೆಯಲ್ಲಿ ಪಂಪಾಸರೋವರದ ಪಕ್ಕದಲ್ಲಿ ಶೋಭಿಸುವ ಗಿರಿಶ್ರೇಷ್ಠ ಋಷ್ಯಮೂಕಪರ್ವತದಲ್ಲಿ ವಾಸ ಮಾಡುತ್ತಾನೆ. ಸುಗ್ರೀವನು ಮಹಾ ತೇಜಸ್ವಿ, ಸತ್ಯ ಸಂದ, ಮಹಾವೀರ್ಯ, ಕೃತಜ್ಞ, ಮತಿವಂತ, ವಾಗ್ಮೀ, ದಕ್ಷನೂ ಹೌದು. ಇಂತವನನ್ನು ವಾಲಿಯು ರಾಜ್ಯದ ಕಾರಣಕ್ಕೆ ಹೊರನೂಕಿದ್ದಾನೆ. ಸುಗ್ರೀವನು ನಿನಗೆ ಸಹಾಯ ಮಾಡುತ್ತಾನೆ, ಸೀತಾ ಅನ್ವೇಷಣೆ ಆಗುತ್ತದೆ, ನೀನು ಶೋಕ ಪಡಬೇಡ ಎಂದು ಕಬಂದನು ರಾಮನಿಗೆ ಹೇಳಿದನು. ವಾನರ ಜಾತಿ ಎಂದು ಕಡೆಗಣಿಸಬೇಕಿಲ್ಲ. ಬುದ್ದಿ, ಪರಾಕ್ರಮ ಎಲ್ಲ ಸುಗ್ರೀವನಲ್ಲಿದೆ ಎಂದು ಹೇಳಿ, ಋಷ್ಯಮೂಕಕ್ಕೆ ಹೋಗಲು ರಾಮನಿಗೆ ಪಶ್ಚಿಮ ದಿಕ್ಕಿನಲ್ಲಿ ದಾರಿಯನ್ನು ತೋರಿಸುತ್ತಾನೆ. ದಾರಿಯಲ್ಲಿ ಇರುವ ಎಲ್ಲ ಹಣ್ಣುಗಳನ್ನು ವಿವರಿಸಿದನು. ಪಂಪಾ ಸರೋವರದ ನೀರಿನಲ್ಲಿ ಕಾಲಿಗೆ ಅಹಿತವಾಗುವ ಒಂದೇ ಒಂದು ಕಲ್ಲು ಇಲ್ಲ. ಸರೋವರದ ತೀರ್ಥದಲ್ಲಿ ಸಮತ್ವವಿದೆ. ಕಮಲಗಳು, ಹಂಸಗಳು, ಜಲಚರ ಪಕ್ಷಿಗಳು, ನಾನಾ ರೀತಿಯ ಮೀನುಗಳು ಇವೆ. ಪಂಪಾ ಸರೋವರದ ನೀರಿಗೆ ಕಮಲದ ಸುಗಂಧವಿದೆ, ರೋಗಗಳನ್ನು ಪರಿಹರಿಸಿ ಆರೋಗ್ಯವನ್ನು ಕೊಡುವಂತಹ ನೀರು ಎಂದು ಕಬಂದನು ಪಂಪಾಸರೋವರನ್ನು ವರ್ಣಿಸಿದನು. ಪತಂಗ ಮುನಿಗಳ ಶಿಷ್ಯರು ಪಂಪಾಸರೋವರದ ತೀರದಲ್ಲಿ ವಾಸವಾಗಿದ್ದರು. ಆ ಸಮಯದಲ್ಲಿ ಮುನಿಗಳಿಗೆ ಹೂ- ಹಣ್ಣನ್ನು ತರುವಾಗ ಶಿಷ್ಯರ ಬೆವರಿನಿಂದ ಬಿದ್ದ ಒಂದೊಂದು ಹನಿಗಳು ಹೂವುಗಳಾಗಿವೆ. ಅದಕ್ಕಾಗಿ ಆ ಹೂವುಗಳು ಬಾಡುವುದಿಲ್ಲ.

ಗುರುಸೇವೆ ಮಾಡುವವರ ಬದುಕು ಎಂದು ಬಾಡದ ಹೂವಿನಂತೆ ―ಶ್ರೀಸೂಕ್ತಿ.

ಮತಂಗ ಶಿಷ್ಯರ ಸೇವೆ ಮಾಡಿಕೊಂಡಿದ್ದ ಒಬ್ಬಳು ಇನ್ನು ನಿನಗಾಗಿ ಕಾಯುತ್ತಾ ಇದ್ದಾಳೆ. ದೀರ್ಘಾವಯಸ್ಸಿನ ಧರ್ಮದಲ್ಲಿ ನೆಲೆನಿಂತ ಶಬರಿ, ಸಮಸ್ತ ದೇವತೆಗಳೂ ಯಾರಿಗೆ ನಮಸ್ಕಾರ ಮಾಡಬೇಕೋ, ಅಂತಹ ನಿನಗೆ ನಮಸ್ಕಾರ ಮಾಡಿ ಸ್ವರ್ಗ ಲೋಕಕ್ಕೆ ಹೋಗುತ್ತಾಳೆ ಎಂದು ಕಬಂದನು ರಾಮನಿಗೆ ಹೇಳಿದನು. ಪಂಪಾಸರೋವರದ ಪಶ್ಚಿಮಕ್ಕೆ ಮತಂಗಾಶ್ರಮವಿದೆ. ಆ ಪ್ರದೇಶದಲ್ಲಿ ತುಂಬಾ ಆನೆಗಳು ಇದ್ದರೂ, ಮುನಿಯ ಪ್ರಭಾವದಿಂದಾಗಿ ಆಶ್ರಮಕ್ಕೆ ಪ್ರವೇಶಿಸುವುದಿಲ್ಲ. ಆಶ್ರಮದಿಂದ ಕಾಡಿಗೆ ಆ ಹೆಸರು ಬಂದಿದೆ. ಋಷ್ಯಮೂಕ ಪರ್ವತವನ್ನು ಏರಿದವನಿಗೆ ಸ್ವಪ್ನದಲ್ಲಿ ಕಂಡ ನಿಧಿಯು ಎಚ್ಚರದಲ್ಲಿ ಪ್ರಾಪ್ತವಾಗುತ್ತದೆ. ಪಾಪ ಮಾಡಿದವನು ಆ ಪರ್ವತವನ್ನು ಏರಿದರೆ ಶಿಶುನಾಗಗಳು ಕಚ್ಚಿ ಕೊಲ್ಲುತ್ತವೆ. ನಾಗಗಳಿಂದ ತಪ್ಪಿಸಿಕೊಂಡು ಮಲಗಿದರೆ ರಾಕ್ಷಸರು ಆಕ್ರಮಣ ಮಾಡಿ ಕೊಲ್ಲುತ್ತಾರೆ. ಋಷ್ಯಮುಖದ ಪರ್ವತದ ಶಿಖರಾಗ್ರದಲ್ಲಿ ದೊಡ್ಡ ಗುಹೆ ಇದೆ. ಆ ಗುಹೆಯಲ್ಲಿ ಸುಗ್ರೀವನು ನಾಲ್ವರು ವಾನರರ ಜೊತೆ ವಾಸ ಮಾಡುತ್ತಾನೆ. ಗುಹೆಯ ಬಾಗಿಲನ್ನು ತೆರೆಯುವುದು ಕಷ್ಟ. ಸುಗ್ರೀವನೇ ಹೊರಬಂದಾಗ ಭೇಟಿಯಾದರೆ ಸೀತಾ ಅನ್ವೇಷಣೆ ಆಗುತ್ತದೆ ಎಂದು ರಾಮನಿಗೆ ಹೇಳಿ ಕಬಂದನು ಗಗನದಲ್ಲಿ ಚಂದ್ರನಂತೆ ಶೋಭಿಸಿದನು. ಕಬಂದನಿಂದ ವಿವರವನ್ನು ಪಡೆದ ರಾಮ ― ಲಕ್ಷ್ಮಣರು ಶಬರಿಯೆಡೆಗೆ ಹೊರಟರು.

ಮುಂದೇನಾಯಿತು ……??
ಅತ್ತ ಶಬರಿ ರಾಮ-ಲಕ್ಷ್ಮಣರಿಗಾಗಿ ಕಾಯುತ್ತಿದ್ದಳು. ಶಬರಿ ಮತ್ತು ರಾಮ-ಲಕ್ಷ್ಮಣರ ಭೇಟಿಯನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments Box