ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಮಾತು‌ ಜೀವ ಜೀವಗಳನ್ನು ಬೆಸೆಯುವ ಸೇತು‌. ಮಾತು ಭಾವ ಭಾವಗಳನ್ನು ಬೆಸೆಯುವ ಸೇತು‌. ಒಂದು ಜೀವದ ಭಾವ ಇನ್ನೊಂದು ಜೀವಕ್ಕೆ ಸವಿವರವಾಗಿ ತಲುಪುವಂತೆ ಮಾಡುವಂಥಾ ಸೇತು ಕರ್ಮ ಮಾತಿನದು. ನಾವೆಷ್ಟೇ ಶುದ್ಧವಾಗಿದ್ದರೂ ನಮ್ಮ ಮಾತು ದೋಷಯುಕ್ತವಾಗಿದ್ದರೆ ನಮ್ಮ ಶುದ್ಧಿಯನ್ನು ಅದು ಇನ್ನೊಂದು ಜೀವಕ್ಕೆ ತಲುಪಿಸುವುದಿಲ್ಲ. ನಮ್ಮ ಹೃದಯ ಎಷ್ಟೇ ಶುದ್ಧವಾಗಿದ್ದರೂ ಆ ಮಾತೆಂಬ ನಳಿಕೆಯಲ್ಲಿ ದೋಷವಿದ್ದಾಗ ಅಲ್ಲಿಂದ ಹೋಗುವ ನಮ್ಮ ‌ಭಾವ ದೋಷಯುಕ್ತವಾಗಿಯೇ ಹೊರಗೆ ಹೋಗುತ್ತದೆ.

ಒಂದರ್ಥದಲ್ಲಿ ಸ್ವರವೆಂಬುದು ನಮ್ಮ ಇಡೀ ಜೀವನದ ಪ್ರತಿನಿಧಿ. ನಮ್ಮ ಒಳಗನ್ನು ಹೊರಗೆ ಮಾಡುವ ಸಂಗತಿಯದು. ಅದು ಚೆನ್ನಾಗಿದ್ದರೆ ಅಷ್ಟು ಚೆನ್ನ, ಕಲುಷಿತವಾಗಿದ್ದರೆ ತನ್ನ ಕಾರ್ಯವನ್ನು ಮಾಡದು, ಮಾತ್ರವಲ್ಲ; ಅಕಾರ್ಯವನ್ನು ಮಾಡಿಬಿಟ್ಟೀತು. ಹಾಗಾಗಿ ಮಾತು ಬಹಳ ಮುಖ್ಯ.
ಮಾತು ಹೇಗಿರಬೇಕು ಎನ್ನುವುದನ್ನು 6 ವೇದಾಂಗಗಳ ಪೈಕಿಯಲ್ಲಿ ಮೊದಲನೆಯದಾದ ‘ಶಿಕ್ಷಾ’ ಹೇಳ್ತದೆ. ಹಾಗಿದ್ದರೆ ಚೆನ್ನ. ಹನುಮಂತನ ಮಾತು ಹೀಗಿತ್ತು.

ಅಪರಿಚಿತರನ್ನು ಮಾತನಾಡಿಸುವಾಗ ನಾವು ಹೇಗೆ ಮಾತನಾಡಿಸಬೇಕು ಎನ್ನುವುದನ್ನು ನಾವು ಹನುಮಂತನಿಂದ ಕಲೀಬೇಕು. ವರ್ಣಗಳನ್ನು ಸರಿಯಾಗಿ ಉಚ್ಛರಿಸಿದರೆ ಅದೇ ಪುಣ್ಯದಲ್ಲಿ ಬ್ರಹ್ಮಲೋಕದಲ್ಲಿಯೂ ಸ್ಥಾನ ಲಭಿಸುವುದು. ಇದೆಲ್ಲವೂ ಸಂಗತವಾಗಿದೆ ಎನ್ನುವುದನ್ನು ರಾಮ ಹೇಳ್ತಾನೆ ಹನುಮನ ಬಗ್ಗೆ. ಅನಗತ್ಯ ವಿಸ್ತಾರವಿಲ್ಲ, ಹಾಗಂತ ಮನಸ್ಸಿನಲ್ಲಿ ಸಂದೇಹವೂ ಉಳಿಯೋದಿಲ್ಲ. ಎಲ್ಲೂ ಅನಗತ್ಯ ವಿಳಂಬವಿಲ್ಲ, ಅನಗತ್ಯ ವೇಗವೂ ಇಲ್ಲ. ಹೃದಯದ ಮಾತು ಕಂಠಕ್ಕೆ ಬಂತು. ಹೊರಬರುವಾಗ ಮಧ್ಯಮ ಸ್ವರದಲ್ಲಿ ಮಾತು ಅಭಿವ್ಯಕ್ತವಾಗ್ತಾ ಇದೆ. ಭಗವಂತ (ರಾಮ) ಭಕ್ತ (ಹನುಮಂತ)ನ ವರ್ಣನೆ ಮಾಡ್ತಿದ್ದಾನೆ. ಮಾತು ಸಂಸ್ಕಾರ, ಕ್ರಮ ಸಂಪನ್ನ. ಕಲ್ಯಾಣಿಯಾದ ‘ವಾಕ್’ ಅನ್ನು ಉಚ್ಛರಿಸುತ್ತಿದ್ದಾನೆ. ಅದು ನನ್ನ ಹೃದಯವನ್ನು ಅಪಹರಿಸ್ತಾ ಇದೆ. ನೋಡು ಲಕ್ಷ್ಮಣ, ಆಶ್ಚರ್ಯ ಈ ಮಾತುಗಳು! ಇದು ಕೋಟಿಗೊಬ್ಬರು, ಜಗಕ್ಕೊಬ್ಬರು, ಯುಗಕ್ಕೊಬ್ಬರು ಬಳಸುವಂಥ ಸಮರ್ಪಕವಾದ ಮಾತುಗಳು ಎಂದು ಕರಾರುವಾಕ್ಕಾಗಿ ಗುರುತಿಸಿ ಮೆಚ್ಚಿಕೊಳ್ತಾನೆ ರಾಮ.

ಇದ್ದರೆ ದೂತ ಹೀಗಿರಬೇಕು, ಹನುಮನಂತೆ. ಯಾವ ದೊರೆಗೆ ಇವನಂಥಾ ದೂತರಿಲ್ಲವೋ, ಆ ದೊರೆಯ ಕಾರ್ಯಗಳು ಸಿದ್ಧವಾಗುವುದು ಹೇಗೆ? ಎನ್ನುವಾಗ ರಾಜನೀತಿ ಬಂತು. ಯಾವುದೇ ರಾಜ್ಯಕ್ಕೆ, ಯಾವುದೇ ರಾಜನಿಗೆ ಯೋಗ್ಯ ಪ್ರತಿನಿಧಿಗಳಿರಬೇಕು. ಎಲ್ಲವನ್ನೂ ರಾಜನಾದವನೇ ಮಾತನಾಡಬಾರದು, ಬೇರೆಯವರ ಮೂಲಕ ಮಾತನಾಡಬೇಕು‌. ಇಲ್ಲಿಯೇ, ರಾಮ ತಾನು ಮಾತಾಡ್ತಾ ಇಲ್ಲ, ಲಕ್ಷ್ಮಣನಿಗೆ ನೀನು ಮಾತನಾಡೆಂದು ಆದೇಶಿಸುತ್ತಾನೆ. ಕೆಲವು ಬಾರಿ ರಾಜನಲ್ಲಿ ದೋಷವಿದ್ದರೂ ಕೂಡ ಪ್ರತಿನಿಧಿ ಚೆನ್ನಾಗಿದ್ದರೆ ಕಾರ್ಯ ಕೈಗೂಡುತ್ತದೆ. ದೂತರಿದ್ದರೆ ಹೀಗಿರಬೇಕು ಎನ್ನುವಾಗ, ಎಲ್ಲೋ ಒಂದು ಕಡೆಗೆ:
ಇವನು ಅವನಿಗೆ ನಾಥನಾದ,
ಅವನು ಇವನಿಗೆ ದೂತನಾದ!
ಸಹಜವಾದ ಆಯ್ಕೆಯದು.

ಒಂದಲ್ಲ, ಎರಡಲ್ಲ, ಗುಣದ ಗಣಗಳಿಂದ ಯುಕ್ತನಾದವನು ಇವನು. ಇಂತಹ ದೂತರಿದ್ದರೆ ಯಾವುದೇ ಕೆಲಸವನ್ನು ಅವರಿಗೆ ಕೊಡಬಹುದು, ಅಂಥವರಿದ್ದರೆ ಎಲ್ಲಾ ಕಾರ್ಯಗಳೂ ಕೈಗೂಡ್ತವೆ ಎಂಬುದಾಗಿ ರಾಮನು ಬಾಯಿ ತುಂಬಾ ಹೊಗಳ್ತಾನೆ ಆಂಜನೇಯನನ್ನು. ಪ್ರಥಮ ಸಮಾಗಮವೇ ಹೀಗಾಗಿದೆ ರಾಮ-ಆಂಜನೇಯರದು. ಇಬ್ಬರೂ ಒಬ್ಬರನ್ನೊಬ್ಬರು ಮೆಚ್ಚಿಕೊಂಡು ಬಿಟ್ಟಿದ್ದಾರೆ. ಹಾಗಾಗಿಯೇ, ರಾಮನನ್ನು ಬಿಟ್ಟು ಹನುಮನಿಲ್ಲ, ಹನುಮನನ್ನು ಬಿಟ್ಟು ರಾಮನಿಲ್ಲ. ಈ ಪ್ರೀತಿ ಶಾಶ್ವತವಾದುದು. ಕೊನೆಯ ವರೆಗೆ ಅಲ್ಲಿ ಒಂದು ಸಣ್ಣ ಗೆರೆಯೂ ಕೂಡ ಬರಲಿಲ್ಲ. ರಾಮನಿಗಾಗಿ ಯಾವ ತ್ಯಾಗವನ್ನು ಮಾಡಲೂ ಹನುಮ ಸಿದ್ಧ. ಅಂಥಾ ಸೇವಕರು,ದೂತರು, ಸ್ವಾಮಿನಿಷ್ಠರು ಯುಗಯುಗಗಳಿಗೆ ಸಿಗಲಿಕ್ಕೆ ಸಾಧ್ಯವಿಲ್ಲ.
ಹನುಮಂತನ ನಿಷ್ಠೆ ಅಂಥದ್ದು. ಇಷ್ಟೆಲ್ಲ ರಾಮ ಲಕ್ಷ್ಮಣನಿಗೆ ಮಾತನಾಡಿದ್ದು ಮೆಚ್ಚುಗೆಯ ಅಭಿವ್ಯಕ್ತಿ, ಜೊತೆಯಲ್ಲಿ ಲಕ್ಷ್ಮಣನಿಗೆ ನೀನೀಗ ಹೇಗೆ ಮಾತನಾಡಬೇಕು ಅನ್ನುವುದಕ್ಕೆ ಸೂಚನೆ.

ಆಗ ವಾಕ್ಯಜ್ಞನಾದ ಲಕ್ಷ್ಮಣನು ವಾಕ್ಯಜ್ಞನಾದ ಸುಗ್ರೀವನ ಸಚಿವ (ಹನುಮಂತ)ನಿಗೆ ಮುಂದೆ ಕಂಡಂತೆ ಮಾತಾಡ್ತಾನೆ:
‘ಹನುಮನ್, ಸುಗ್ರೀವ ಸಣ್ಣವನಲ್ಲ. ಗೊತ್ತು ನಮಗದು. ಆ ಸುಗ್ರೀವನ ಗುಣಗಳೂ ನನಗೆ ವಿದಿತ. ಆ ಕಪಿರಾಜನನ್ನು, ಆ ಮಹಾಪುರುಷನನ್ನು ನಾವೂ ಕೂಡ ಹುಡುಕುತ್ತಾ ಇದ್ದಂತವರು. ತದಂಗವಾಗಿ ನಾವಿಲ್ಲಿಗೆ ಬಂದಿದ್ದೇವೆ. ನಮ್ಮ ಮುಂದಿನ ಹೆಜ್ಜೆ ಸುಗ್ರೀವನನ್ನೂ ನಿನ್ನನ್ನೂ ಹೊಂದಿಕೊಂಡಿದೆ. ಹಾಗಾಗಿ ಮುಂದೆ ಏನು ಮಾಡಬೇಕೆಂದು ನೀನು ಹೇಳು’ ಎಂದಾಗ ಸಂತೋಷವಾಯಿತು ಆಂಜನೇಯನಿಗೆ.

‘ಓಹೋ, ಕಾರ್ಯ ಕೈಗೂಡಿತು’ ಎಂದುಕೊಂಡ. ಸ್ಥೂಲ ದೃಷ್ಟಿಯಿಂದ ನೋಡಿದರೆ, ಸುಗ್ರೀವನ ಕೆಲಸವಾಯಿತು ಅಂತ. ಸೂಕ್ಷ್ಮ ದೃಷ್ಟಿಯಿಂದ ನೋಡಿದರೆ, ಬಂತು ಸೇವೆಗೆ ಸದವಕಾಶ. ಹನುಮಂತನ ಬದುಕು ಪ್ರಾರಂಭ ಆಯ್ತು ಇಲ್ಲಿಂದ. ಇದಕ್ಕಿಂತ ಹಿಂದಿನದು ‘ಗರ್ಭ’ ಅದು. ಇಲ್ಲಿಂದಲೇ ಪ್ರಾರಂಭ ಹನುಮಂತನ ಬದುಕು. ರಾಮನ ಬೆಳಕಿನಲ್ಲಿ ಹನುಮಂತ ಬೆಳಗಿದ್ದು ಹೊರತು ಅದಿಲ್ಲದಿದ್ದರೆ ಹನುಮಂತ ಎಲ್ಲ ಇದ್ದೂ ಕೂಡ ಯಾರೂ ಅಲ್ಲ, ಏನೂ ಅಲ್ಲ. ಆದರೆ ಇನ್ನು ಮುಂದೆ ಅವನು ಬೆಳಗುವ ಪರಿ ಎಷ್ಟರ ಮಟ್ಟಿಗೆಂದರೆ, ‘ರಾಮನೋ? ಹನುಮನೋ?’ ಯಾರು ಅಂತ ನಮಗೆ ಭ್ರಮೆ ಬರಬೇಕು. ಹಾಗೆ ಆ ಎರಡು ಪಾತ್ರಗಳು ಬೆಳಗ್ತವೆ‌.

ನಿಪುಣವಾದ ಲಕ್ಷ್ಮಣನ ವಾಕ್ಯವನ್ನು ಹೇಳಿದ ಹನುಮ ಸಂತೋಷಗೊಂಡು ಜಯದ ಮೇಲೆ ಮನಸ್ಸು ನೆಟ್ಟು ಸಖ್ಯವನ್ನು ಮಾಡಲು ಬಯಸಿದನು. ತಾನು ರಾಮ-ಸುಗ್ರೀವರ ಸಖ್ಯವನ್ನು ಮಾಡಿಸಬೇಕು ಎನ್ನುವ ಸ್ಪಷ್ಟತೆ ಮನಸ್ಸಿನಲ್ಲಿ, ತಿಳಿಯಾಗಿದೆ ಮನಸ್ಸು. ರಾಜನೀತಿಯಿಂದ ನೋಡಿದರೂ, ಸುಗ್ರೀವ ಸುಗ್ರೀವನಾಗಿ ಇನ್ನೋನೂ ಮಾಡಲು ಸಾಧ್ಯವಿಲ್ಲ. ಆದರೆ ಅವನ ಬದುಕಿಗೆ ಬೆಳಕು ಬರಬೇಕಾದರೆ ಅದು ರಾಮನಿಂದಲೇ ಬರಬೇಕು. ರಾಮನಿಗೆ ಆಗಬೇಕಾದ ಕಾರ್ಯವಿದೆ ಎಂದು ಗೊತ್ತಾದಾಗ ತುಂಬ ಸಂತೋಷಗೊಂಡು ಹನುಮ ಮನಸ್ಸಿನಲ್ಲಿಯೇ ಸುಗ್ರೀವನನ್ನು ನೆನೆಸಿಕೊಂಡು ‘ನೀನು ಬದುಕಿದೆ’ ಅಂದುಕೊಂಡ, ಮತ್ತು ರಾಮ-ಲಕ್ಷ್ಮಣರ ಮಧುರ ಭಾವವನ್ನು ಗ್ರಹಿಸಿದ.

ಈಗ ಏನಿಲ್ಲದ ಅನಾಥನಾಗಿರುವ ಸುಗ್ರೀವ ವಾನರ ಚಕ್ರವರ್ತಿ ಆಗುವುದು ಅವನ ಕಣ್ಮುಂದೆ ಕಟ್ಟಿತು. ಒಂದು ಕೆಲಸ ಸುಗ್ರೀವನಿಂದ ಆಗಬೇಕಾದ್ದಿದೆ ರಾಮ-ಲಕ್ಷ್ಮಣರಿಗೆ ಅಂದರೆ, ನೋಡಿದಾಗಲೇ ಗೊತ್ತಾಯಿತು ಅವರ ಯೋಗ್ಯತೆ ಆಂಜನೇಯನಿಗೆ. ಹಾಗಾಗಿ, ಸುಗ್ರೀವನಿಗೆ ಆ ಭಿಕ್ಷೆ ಬೇಕಾದಷ್ಟಾಯಿತು ಎಂದು ಪರಮ ಸಂತೋಷ ಉಳ್ಳವನಾಗಿ ರಾಮನನ್ನು ಪ್ರಶ್ನಿಸ್ತಾನೆ, ‘ಈ ಪಂಪಾ ಕಾನನ ಮಂಡಿತವಾದ ಈ ಘೋರಪ್ರದೇಶಕ್ಕೆ ತಮ್ಮನ ಸಹಿತವಾಗಿ ನೀನು ಪಾದವಿಡಲಿಕ್ಕೆ ಏನು ಕಾರಣ?’ ಅಂದಾಗ ರಾಮ ಮತ್ತೆ ಲಕ್ಷ್ಮಣನನ್ನು ಕುಟ್ಟಿದನಂತೆ.

ಯಾರು ರಾಮ? ಎಂಬುದನ್ನು ಲಕ್ಷ್ಮಣ ಮೊದಲು ಪರಿಚಯಿಸಿಕೊಡ್ತಾನೆ. ಮೊದಲು ಆತ ಯಾರ ಮಗ, ನಂತರ ವ್ಯಕ್ತಿತ್ವ, ಮತ್ತೆ ಯಾಕೆ ಬಂದ ಎನ್ನುವುದನ್ನು ವಿವರಿಸ್ತಾನೆ. ನಂತರ ಸೀತೆಯ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ ಜೊತೆಗೆ ನನ್ನನ್ನೂ ಕರೆದುಕೊಂಡು ಬಂದ ಎಂದಾಗ ‘ನೀನ್ಯಾಕೆ ಬಂದೆ ಜೊತೆಗೆ?’ ಅನ್ನೋ ಪ್ರಶ್ನೆಗೆ ಲಕ್ಷ್ಮಣ ಉತ್ತರಿಸ್ತಾನೆ , ತನ್ನ ಪರಿಚಯವನ್ನು ಹೇಳ್ತಾನೆ. ಮತ್ತೆ ಮುಂದಿನ ಕಥೆಯನ್ನು ಹೇಳ್ತಾನೆ.

‘ರಾಮ ಸುಖಾರ್ಹ, ಮಹಾರ್ಹ(ತುಂಬ ಬೆಲೆಬಾಳುವ ವ್ಯಕ್ತಿತ್ವ) ಮತ್ತು ಯಾವ ಭೇದಭಾವವಿಲ್ಲದೇ ಎಲ್ಲರಿಗೂ ಒಳ್ಳೆಯದಾಗಬೇಕೆಂದು ಬಯಸುವವನು. ಅಂಥವನು ಪ್ರಭುತ್ವ ಕಳೆದುಕೊಂಡು ವನವಾಸಿ ಆಗಬೇಕಾಯಿತು.
ಈ ಸಂದರ್ಭ ಒಂದು ದುರ್ಘಟನೆ ನಡೆದುಹೋಗಿದೆ. ರಾಕ್ಷಸನೊಬ್ಬ ನಾವಿಬ್ಬರೂ ಇಲ್ಲದ ಹೊತ್ತಿನಲ್ಲಿ ರಾಮನ ಪತ್ನಿ ಸೀತೆಯನ್ನು ಅಪಹರಿಸಿದ್ದಾನೆ. ಯಾರು? ಏನು? ಅಂತ ವಿವರ ಗೊತ್ತಾಗ್ತಾ ಇಲ್ಲ. ನಾವು ಸೀತೆಯನ್ನು ಹುಡುಕುತ್ತಾ ಬಂದೆವು. ಕಬಂಧನಾಗಿದ್ದ ಧನು ಶಾಪಮುಕ್ತನಾದಾಗ ಸುಗ್ರೀವನ ಬಗ್ಗೆ ನಮಗೆ ಹೇಳಿದ, ಅವನು ಎಲ್ಲಿರ್ತಾನೆ ಎಂಬುದರ ಸವಿವರ ವಿಳಾಸ ಕೊಟ್ಟ. ಇದು ನಿಜವಾದ ವಿಷಯ. ಮುಂದೆ ಸುಗ್ರೀವನು ನಮಗೆ ಸಿಗಬೇಕು.

ಅಣ್ಣನನ್ನು ತೋರಿಸಿ ಲಕ್ಷ್ಮಣ, ‘ನಮ್ಮಣ್ಣ ಮಾಡಿದ ದಾನ-ಧರ್ಮಕ್ಕೆ ಲೆಕ್ಕ ಇಲ್ಲ, ಪಡೆದ ಕೀರ್ತಿ ಸಣ್ಣದಲ್ಲ. ಒಂದು ಕಾಲದಲ್ಲಿ ಲೋಕಕ್ಕೆಲ್ಲ ಒಡೆಯ. ಅವನೀಗ ಸುಗ್ರೀವನನ್ನೇ ಮುಂದಿನ ದಾರಿಯಾಗಿ ನಿಶ್ಚಯಿಸಿ ಇಲ್ಲಿಗೆ ಬಂದಿದ್ದಾನೆ’ ಎಂದು ದೈನ್ಯದ ಮೂರ್ತಿಯಾಗಿ ಹನುಮಂತನ ಬಳಿ ಹೇಳ್ತಾನೆ. ಸುಗ್ರೀವ ಒದಗಿ ಬಂದು ರಾಮನ ಕಾರ್ಯ ಮಾಡಿಕೊಡಬೇಕು ಎಂಬುದಾಗಿ ಲಕ್ಷ್ಮಣ ಹನುಮಂತನ ಬಳಿಗೆ ಮೆಟ್ಟಿಲು, ಮೆಟ್ಟಿಲು, ಮೆಟ್ಟಿಲುಗಳ ಕೆಳಗಿಳಿದು ಬಂದು ಹೇಳುವಾಗ ಆತನ ಕಣ್ಣಲ್ಲಿ‌ ನೀರು ಬಂತು‌. ಯಾಕೆಂದರೆ, ರಾಮನು ಯಾರ ಸಹಾಯವನ್ನೂ ಕೇಳಬೇಕಾದ್ದಿಲ್ಲ. ಕಾಡುಪಾಲಾದ ಮೇಲೂ ಸ್ವಾಭಿಮಾನದಲ್ಲಿ ಬದುಕಿದ್ದಾರೆ ಮೂರು ವರ್ಷ.

ಹನುಮಂತ ಸರಿ ಮಾಡ್ತಾನೆ ಅದನ್ನು, ‘ನಿಮ್ಮಂಥವರನ್ನು ಕಾಣಲು ಸುಗ್ರೀವನೇ ಬರಬೇಕಿತ್ತು, ನೀವೇ ಬಂದು ಬಿಟ್ಟಿದ್ದೀರಿ, ಅವನಿಗೆ ದರ್ಶನ ಕೊಡ್ತಾ ಇದ್ದೀರಿ, ಪುಣ್ಯ ಅವನದು. ಅವನೂ ಕಷ್ಟದಲ್ಲಿಯೇ ಇದ್ದಾನೆ. ಅವನೂ ರಾಜ್ಯಭ್ರಷ್ಟನಾಗಿದ್ದಾನೆ, ಬಲಾಢ್ಯ ವಾಲಿಯೊಂದಿಗೆ ವೈರ ಕಟ್ಟಿಕೊಂಡಿದೆ. ಸುಗ್ರೀವನ ಪತ್ನಿಯ ಅಪಹರಣವಾಗಿದೆ. ಕಾಡಲ್ಲೂ ಕೊಲ್ಲಲಿಕ್ಕೆ ಪ್ರಯತ್ನ ಮಾಡ್ತಾನೆ ವಾಲಿ. ನಿಮ್ಮನ್ನು ಅವನು ಆಶ್ರಯಿಸ್ತಾನೆ ಎಂಬ ಧ್ವನಿಯನ್ನು ವ್ಯಕ್ತಪಡಿಸುತ್ತಾನೆ ಹನುಮಂತ. ಸುಗ್ರೀವ ನಿಮ್ಮ ಸಹಾಯಕ್ಕೆ ಬಂದೇ ಬರುತ್ತಾನೆ ಅಂತ ಹೇಳಿ, ನಾವಿದ್ದೇವೆ, ನಮ್ಮ ಜೊತೆ ಸೇರಿ ಅವನೂ ಮಾಡ್ತಾನೆ ಎನ್ನುವಾಗ ಭವಿಷ್ಯದ ಬೆಳಕು ಒಂದು ಸಣ್ಣ ಕಿಂಡಿ ತೆರೆದು ಗೋಚರಿಸಿತು. ಮಾಮೂಲಿ ಬಾಂಧವ್ಯವಲ್ಲ ಇದು. ಅವನಿಗೇ ಒಲವಿದೆ ಎಂಬುದು ಬಲು ಸ್ಪಷ್ಟ. ಸೀತೆಯನ್ನು ಹುಡುಕೋಣ. ಹೀಗೆಲ್ಲ ಮಧುರವಾದ ಮಾತಿನಿಂದ ಹೇಳಿ ಮತ್ತೆ ರಾಮನನ್ನು ಕುರಿತು, ‘ಹೋಗೋಣ’.

ಹೀಗೆ ಮಹಾಪ್ರಾಜ್ಞನಾದ ಹನುಮಂತನು ರಾಮ ಲಕ್ಷ್ಮಣರನ್ನು ಈ ಮಾತುಕತೆಯ ಬಳಿಕ ಭಿಕ್ಷುರೂಪವನ್ನು ಪರಿತ್ಯಜಿಸಿ ನಿಜರೂಪವನ್ನು ತಾಳಿ ತನ್ನ ಬೆನ್ನ ಮೇಲೆ ರಾಮ ಲಕ್ಷ್ಮಣರನ್ನು ಇರಿಸಿಕೊಂಡು ವಾಯುಮಾರ್ಗದಲ್ಲಿ ಸಾಗಿದನು ಸುಗ್ರೀವನ ಬಳಿಗೆ. ಅವನ ಮನಸ್ಸಿನಲ್ಲಿ ಎರಡೂ ವಿಷಯದ ಬಗ್ಗೆ ‘ಕೆಲಸವಾಯಿತು’ ಎನ್ನುವ ಭಾವ, ಸಂತೋಷ ತುಂಬಿತ್ತು.

ಮುಂದಿನ ಪ್ರವಚನದಲ್ಲಿ ರಾಮ ಸುಗ್ರೀವರ ಸಮಾಗಮವನ್ನು ನೋಡೋಣ.
ಪ್ರವಚನವನ್ನು ಇಲ್ಲಿ ಕೇಳಿರಿ:


ಪ್ರವಚನವನ್ನು ನೋಡಲು:

Facebook Comments