ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
“ಹಿಂದಿನ ಸೋಲುಗಳನ್ನು ನೆನಪಿಸಿಕೊಂಡು ಮುಂದಿರುವ ಬದುಕನ್ನು ಎದುರಿಸುವಲ್ಲಿ ನಾವು ಕಂಗೆಡುತ್ತೇವೆ.” ನಮಗೆ ಭೂತದ ಭೂತವೇ ನೆನಪು, ಮುಂದೆ ಒಳಿತಾಗುವುದು ಎಂಬ ಭಾವನೆಯು ಕಡಿಮೆ. ಹೀಗೆ ಸುಗ್ರೀವನು ಕಿಷ್ಕಿಂಧೆಗೆ ಬಂದಿರುವನು. ಬಳಿಕ ಅದೇ ಕಿಷ್ಕಿಂಧೆಯಲ್ಲಿ ಅನಪೇಕ್ಷಿತ ಘಟನೆಗಳು ನಡೆದು ಉಟ್ಟ ಬಟ್ಟೆಯಲ್ಲಿ ಹೊರನಡೆದವ ಸುಗ್ರೀವ. ನಂತರ ಕಿಷ್ಕಿಂಧೆಯ ಬಾಗಿಲಲ್ಲಿ ವಾಲಿ-ಸುಗ್ರೀವರಿಗೆ ಅನೇಕ ಯುದ್ಧಗಳು ನಡೆಯುತ್ತದೆ. ಆದರೆ ಸುಗ್ರೀವನಿಗೆ ಪ್ರತೀಬಾರಿಯೂ ಸೋಲು. ಸೋಲೇ ಗೆಲುವಿನ ಸೋಪಾನ ಎಂಬಂತೆ ತನ್ನ ಪತ್ನಿಗಾಗಿ ಪದೇ ಪದೇ ಬರುತ್ತಾನೆ. ಆದರೆ ಪ್ರತಿ ಬಾರಿಯು ಸೋಲು ಕಂಡಾಗ ಕುಂದುವಾಗ ಜೀವಕ್ಕೆ ಚೈತನ್ಯವನು ತುಂಬುವವರು ಬೇಕಾಗುತ್ತದೆ. ಅದರಂತೆಯೇ ಈ ಬಾರಿ ಸುಗ್ರೀವನು ಹೊಸ ಚೈತನ್ಯದಿಂದ ಬಂದನು. ಕಾರಣ- ರಾಮನ ಬಲವಿದೆ ಅಂದರೆ ಸುಗ್ರೀವನಲ್ಲಿ ದೇವ ಬಲವಿದೆ. ಹಿಂದಿನ ಬಾರಿಯಂತೆ ಉಳಿದವರೆಲ್ಲರೂ ಮೊದಲಿನಂತೆ ಅಣತಿ ದೂರದಲ್ಲಿ ಮರೆಯಲ್ಲಿ ನಿಂತಿದ್ದಾರೆ.

ಇಂದು ಬಂದು ಕಿಷ್ಕಿಂಧೆಯ ಬಾಗಿಲಿನಲ್ಲಿ ನಿಂತ ಗತಿಯೇ ಬೇರೆಯಾಗಿತ್ತು. ಆತನಿಗೆ ಕಾಡು ಪ್ರಿಯ. ಆ ಕಾಡಿನ ಕಡೆಗೆ ಪ್ರೀತಿಯ ದೃಷ್ಟಿಯನ್ನು ಬೀರಿ, ಅಣ್ಣ ಮಾಡಿದ ಅನ್ಯಾಯಗಳನ್ನು ನೆನಪಿಸಿಕೊಳ್ಳುತ್ತಾ ಬಹಳ ಕೋಪವನ್ನು ತಂದುಕೊಡನು. ಸುಗ್ರೀವ ಎಂದರೆ ಕೊರಳು ತುಂಬಾ ವಿಪುಲ, ಅಂತಹ ಸುಗ್ರೀವ ಗಗನವು ಭೋರ್ಗರೆವಂತೆ ಘೋರ ಘರ್ಜನೆಯನು ಮಾಡಿ ವಾಲಿಯನು ಯುದ್ಧಕ್ಕೆ ಕರೆದನು. ಆತನ ಘರ್ಜನೆಯು ಬಿರುಗಾಳಿಯು ಮಹಾವಾಹನವ ಏರಿ ಬರುವ ಮೇಘದಂತಿತ್ತು. ಆಗ ಉದಯ ಸೂರ್ಯನಂತ ಸುಗ್ರೀವ ಕ್ರಿಯಾಲಕ್ಷ್ಯನಾದ ರಾಮನಿಗೆ ಕೆಲವು ಮಾತುಗಳನು ಹೇಳುವನು. ಇದು ಕಿಷ್ಕಿಂಧೆಯ ಮಹಾಬಾಗಿಲು, ಅದಕೆ ಅಪರಂಜಿಯ ತೋರಣವಿದೆ. ಅದನ್ನು ನೋಡಿ ಮರುಳಾದರೆ ವಾನರ ವೀರರ ಬಲೆಗೆ ಬೀಳಬೇಕಾದೀತು. ಅಂತಹ ಕಿಷ್ಕಿಂಧೆ ಇದು, ಉಚ್ಛವಾದ ಧ್ವಜಗಳು, ಯಂತ್ರಗಳು ಇರುವ ವಾಲಿಯ ನಗರಿ. ವಾಲಿಯ ಕುರಿತು ಏನು ಪ್ರತಿಜ್ಞೆಯನು ಮಾಡಿರುವೆಯೋ ಅದನ್ನು ಈಡೇರಿಸು, ಈ ಬಾರಿ ವ್ಯತ್ಯಾಸವಾಗಬಾರದು.

ಆಗ ರಾಮನು ಸುಗ್ರೀವನಲಿ ಕೊರಳಲ್ಲಿ ಗಜಪುಷ್ಪ ಬಳ್ಳಿಯು ಇದೆ ತಾನೆ; ಸ್ವತಃ ಲಕ್ಷ್ಮಣನೇ ನಿನಗೆ ತೊಡಿಸಿದ್ದಾನೆ. ಹಗಲು ಸೂರ್ಯನು ನಕ್ಷತ್ರ ಮಾಲೆಗಳನ್ನು ಧರಿಸಿದಂತೆ ನೀನು ಶೋಭಿಸುತ್ತಿದ್ದೀಯ ಎಂದು ನುಡಿವನು ರಾಮ. ನೋಡು ಸುಗ್ರೀವ, ನನ್ನ ದೃಷ್ಟಿಗೆ ವಾಲಿ ಬಿದ್ದ ಮೇಲೆ ಬದುಕುವುದಿಲ್ಲ. ಹಾಗೆ ಬದುಕುಳಿದರೆ ನೀನು ನನ್ನನ್ನು ನಿಂದಿಸು; ಮತ್ತು ನಿನಗೆ ನನ್ನ ಸಾಮರ್ಥ್ಯ ಗೊತ್ತು, ನಿನ್ನ ಕಣ್ಣ ಮುಂದೆಯೇ ನಾನು ಏಳು ಸಾಲು ಮರಗಳ ಬೇಧಿಸಿರುವೆ, ಮತ್ತೇಕೆ ನಿನಗೆ ಚಿಂತೆ; ರಾಜ್ಯವೇ ಕೈಚೆಲ್ಲಿ ಹೋಗುವಾಗ ನಾನು ಮಾತು ಸುಳ್ಳಾಗಿಸಲಿಲ್ಲ. ನಾನು ಧರ್ಮದ ಲೋಭದಿಂದ, ಅಧರ್ಮದ ನಾಶಕ್ಕಾಗಿ ಸುಳ್ಳಾಡಲಾರೆ, ಹೋಗು ಕೂಗು ವಾಲಿಯನ್ನು, ಕಾಲು ಕೆರೆದು ಯುದ್ಧಕ್ಕೆ ಬರುವವನು ಆತ, ಆದ್ದರಿಂದ ವಾಲಿಯನ್ನು ಕೂಗು ಎಂದನು.

ಅದರಂತೆಯೇ ಹೇಮ ಪಿಂಗಲನಾದ ಸುಗ್ರೀವ ಕ್ರೂರ ಧ್ವನಿಯಲಿ ವಾಲಿಯನು ಕೂಗಿ ಕರೆದ. ಅವನ ಕ್ರೂರ ಧ್ವನಿಗೆ ಹತ್ತಿರದಲ್ಲಿದ್ದ ಗೋವುಗಳು ಹೆದರಿ ಓಡಿದವು, ಜಿಂಕೆಗಳ ಹಿಂಡು ಛಾಟಿಯ ಏಟಿಗೆ ಓಡಿದಂತೆ ಓಡಿಹೋದವು. ಸುಗ್ರೀವನು ಸಮಸ್ತ ಜೀವರಾಶಿಗಳು ನಡುಗಿಸಬಲ್ಲ ಧ್ವನಿಯನು ಮಾಡಿದ್ದ. ಅದನು ಕೇಳಿದ ವಾಲಿಗೆ ಏರಿದ ಮತ್ತೆಲ್ಲವೂ ಇಳಿದು ಹೋಯಿತು. ಸಂಧ್ಯಾ ಕಾಲದ ಮೋಡದಂತೆ ಬಂದಿದ್ದ ರೋಷವು ಇಡೀ ಮೈಯನು ಆವರಿಸಿತು, ಗ್ರಹಣದ ಸೂರ್ಯನಂತೆ ವಾಲಿಯು ಇದ್ದಕ್ಕಿದ್ದಂತೆ ಕಾಂತಿ ಹೀನನಾದ, ವಿಷ್ಪ್ರಭನಾದ. ಹಲ್ಲನ್ನು ಕೋಪದಿಂದ ಕೆರೆದಿದ್ದಾನೆ, ಕಣ್ಣುಗಳು ಕೋಪದಿಂದ ಪ್ರಜ್ವಲಿಸುತ್ತಿದ್ದವು. ಸಹಿಸಲಾರದ ಸುಗ್ರೀವನ ಘರ್ಜನೆಯನು ಕೇಳಿ, ಭೂಮಿಯೇ ನಡುಗುವಂತೆ ಹೆಜ್ಜೆಯನಿಡುತ್ತಾ ಹೊರಟ.

ಆಗ ತಾರೆಯು ಬಂದು ಅವನನ್ನು ಆಲಂಗಿಸಿ, ಕೆಲವು ಮಾತುಗಳನ್ನು ಹೇಳಿದಳು. ಆದರೆ ಆಕೆಯು ಭಯ ಮತ್ತು ಆತಂಕದಿಂದ ಕೂಡಿದ್ದಳು. ಬಿಡು ಕ್ರೋಧವನು, ನಿನಗೆ ಮಳೆಗಾಲದ ಪ್ರವಾಹದಂತೆ ಕೋಪವು ಬರುತ್ತಿದೆ, ನಿನಗೆ ಯುದ್ಧವನು ಮಾಡಬೇಕೆಂದಾದರೆ ನಾಳೆ ಮಾಡು, ಯುದ್ಧಕ್ಕೂ ಒಂದು ಕಾಲ, ಸಮಯ ಇಲ್ಲವೇ? ದುರ್ಬಲನಾದರೆ ಅಥವಾ ಭಯವಾದರೆ ಯುದ್ಧಕ್ಕೆ ಅವಸರ ಮಾಡಬೇಕು ಆದರೆ ಅದೇನು ಇಲ್ಲವಲ್ಲ, ನೀನು ಈ ಹೊತ್ತಿನಲ್ಲಿ ಹೊರಗೆ ಯುದ್ಧಕ್ಕೆ ತೆರಳುವುದು ನನಗೆ ಸರಿ ಕಾಣುತ್ತಿಲ್ಲ. ನೀನು ಹೊರಗೆ ಯುದ್ಧಕ್ಕೆ ಹೋಗುವುದು ಬೇಡ ಎನ್ನಲು ಕಾರಣಗಳಿವೆ. ಮೊದಲನೆಯದು- ಸ್ವಲ್ಪ ಹೊತ್ತಿನ ಮೊದಲು ನಿನ್ನ ಕೈಯಲ್ಲಿ ಪೆಟ್ಟು ತಿಂದು ಪಲಾಯನ ಮಾಡಿದವ ಮತ್ತೆ ಪುನಃ ಏಕೆ ಕರೆದ? ಇದು ಸಹಜವಲ್ಲ, ನನಗೆ ಶಂಕೆಯು ಇದೆ. ಎರಡನೆಯದು- ಈ ಪರಿಯ ಘರ್ಜನೆಯನು ಮಾಡಲು ದರ್ಪ ಎಲ್ಲಿಂದ, ಶಕ್ತಿ ಎಲ್ಲಿಂದ ಬಂತು? ನನ್ನ ಪ್ರಕಾರ ಸುಗ್ರೀವ ಏಕಾಂಗಿಯಲ್ಲ; ಯಾರನ್ನೋ ಸಹಾಯವಾಗಿ ಆಶ್ರಯಿಸಿದ್ದಾನೆ, ಸುಗ್ರೀವ ಆತ ಹುಟ್ಟು ನಿಪುಣ, ಬುದ್ಧಿವಂತ ವಾನರ, ಯಾರನ್ನು ಸೇರುವುದಾದರೆ ಬಲಾಬಲವನ್ನು ಪರೀಕ್ಷಿಸುತ್ತಾನೆ ಎಂಬುದನ್ನು ತಿಳಿದೇ ಆಶ್ರಯವನ್ನು ಪಡೆಯುತ್ತಾನೆ.

ಸಾಮಾರ್ಥ್ಯ ಏನೆಂದು ತಿಳಿಯದೇ ಸುಗ್ರೀವ ಯಾರನ್ನು ಸೇರಲಾರ. ಅಂಗದ ಕಿಷ್ಕಿಂಧೆಯ ಅಂಚಿಗೆ ಹೋದಾಗ ಕೆಲವು ಮಾಹಿತಿಗಳು ಗುಪ್ತಚರರ ಮೂಲಕ ನನಗೆ ಬಂದಿವೆ, ಅದನ್ನು ಕೇಳು- ಅಯೋಧ್ಯಾಧಿಪತಿಯ ಇಬ್ಬರು ಮಕ್ಕಳಾದ ರಾಮ-ಲಕ್ಷ್ಮಣರು ಸುಗ್ರೀವನಿಗೆ ಸಹಾಯ ಮಾಡುವರಂತೆ.

ರಾಮನೆಂದರೆ ಪ್ರಖ್ಯಾತ, ಶತ್ರುಗಳನ್ನು ಯುದ್ಧದಲ್ಲಿ ಪ್ರಳಯ ಕಾಲದ ಅಗ್ನಿಯಂತೆ ಸಂಹಾರ ಮಾಡಬಲ್ಲವನು, ಒಳ್ಳೆಯವ, ವಾಸುದೇವವೆಂಬ ವೃಕ್ಷದ ನೆರಳು ಹೇಗೆ ತಾಪವೂ ಇಲ್ಲದಂತೆ, ಶೀತವೂ ಇಲ್ಲದಂತೆ ಇರುವುದೋ ಅದರಂತೆಯೇ ಆತ ತಾಪ ನಿವಾರಕ, ಒಳ್ಳೆಯವರಿಗೆ ಆಶ್ರಯದಾತ ಆದ್ದರಿಂದ ಆತ ಕೀರ್ತಿಗೆ ಪಾತ್ರನು.
ಒಂದು ಮಹಾಪರ್ವತದಲ್ಲಿ ಬಗೆ ಬಗೆಯ ಧಾತುಗಳಿರುವಂತೆ, ಅವನು ಮಹಾ-ಗುಣಗಳ ಖನಿ ಆತ. ನೀನು ರಾಮನನ್ನು ವಿರೋಧಿಸುವುದು ನನಗೆ ಸಮ್ಮತಿಯಿಲ್ಲ.

ಆತ ಅಪ್ರಮೇಯ, ನಿನ್ನ ಬುದ್ಧಿಗೆ ನಿಲುಕದು, ನೀನು ಅವನೊಂದಿಗೆ ಯುದ್ಧವನು ಮಾಡುವುದು ಸಲ್ಲದು. ಮುಂದುವರೆದು ತಾರೆಯು ಹೇಳುವಳು… ಸುಗ್ರೀವನನ್ನು ಕರೆದು ಯುವರಾಜನನ್ನಾಗಿ ಮಾಡು, ನಿನ್ನ ತಮ್ಮ ಅವನು, ಕಾಳಗ ಬೇಡ, ರಾಮನ ಪ್ರೀತಿ ನಮಗೆ ಬೇಕು, ವೈರವನ್ನು ದೂರಮಾಡು, ಮುದ್ದಿಸು ಸುಗ್ರೀವನನ್ನು, ಎಲ್ಲಿಯೇ ಇದ್ದರೂ ಆತ ನಿನಗೆ ಬಂಧು, ಈಗಲಾದರೂ ಇದನ್ನರಿತು ಅವನನ್ನು ಕರೆದು ತಾ, ಆತನನ್ನು ಗೌರವಿಸು, ನಿನ್ನ ಮುಂದಿರುವ ದಾರಿಯೊಂದೇ ಈಗ “ಸುಗ್ರೀವ ಜೊತೆ ಸ್ನೇಹ”.

ವಾಲಿಗೆ ತಾರೆಯ ಮೇಲೆ ಬಹಳ ಪ್ರೀತಿ… ಆದ್ದರಿಂದ ನಾನು ನಿನ್ನ ಹಿತೈಷಿಯಾಗಿದ್ದರೆ ನನ್ನ ಮಾತನು ಕೇಳು; “ಕೋಸಲೇಂದ್ರನ ಜೊತೆಗೆ ಯುದ್ಧ ತರವಲ್ಲ, ಯಾವ ಕಾರಣಕ್ಕೂ ಸಲ್ಲದು, ಕೋಪಕ್ಕೆ ಬುದ್ಧಿಯನು ಕೊಡದಿರು” ಎಂದು ತಾರೆಯು ಹೇಳಿದಾಗ ವಾಲಿಗೆ ಅದು ಇಷ್ಟವಾಗಲಿಲ್ಲ. ಕಾರಣ ವಾಲಿಗೆ ಸಾವು ಕರೆದಿತ್ತು. ಮತ್ತು ತಾರೆಯು ಬೈದು ಭಂಗಿಸಿದನು. ಮುಂದುವರೆದು ವಾಲಿಯು – ಆ ರೀತಿಯಾಗಿ ಸುಗ್ರೀವನು ಘರ್ಜಿಸುವಾಗ ನಾನೇಕೆ ಸುಮ್ಮನಿರಬೇಕು? ಅವನ ಯುದ್ದಾಹ್ವಾನವನು ಕೇಳಿ ಸಹಿಸುವುದು ಹೇಗೆ? ಹಾಗೆ ಸಹಿಸಿದರೆ, ಅದು ಸತ್ತ ಹಾಗೆ. ನನ್ನಿಂದ ಅದು ಸಾಧ್ಯವಿಲ್ಲ. ಆತ ಹೀನಗ್ರೀವ. ಮತ್ತೆ ರಾಮ ನನಗೇನು ಮಾಡಲಾರ ಕಾರಣ ಆತನು ಧರ್ಮಜ್ಞ. ಹಿಂದಿರುಗು ನೀನು, ನೀನೇನು ಚಿಂತೆ ಮಾಡಬೇಡ.

ಸುಗ್ರೀವನನ್ನು ಸಾಯಿಸಲಾರೆ, ಆತನ ಸೊಕ್ಕನಿಳಿಸಿ ಬರುವೆ, ಆತ ದುರಾತ್ಮ ಮತ್ತೆ ಬಂದಿರುವನು ಯುದ್ಧಕ್ಕೆ ಎಂದು ಹೇಳಿ ನನ್ನ ಪ್ರಾಣದ ಮೇಲಾಣೆ, ಹಿಂದಿರುಗು ಎಂದಾಗ ತಾರೆ ಕೋಪಗೊಳ್ಳದೇ… ಪ್ರೀತಿಯಿಂದ ಆಲಂಗಿಸಿ, ಪ್ರದಕ್ಷಿಣೆಯನು ಬಂದು ನಿಧಾನವಾಗಿ ಹೆಜ್ಜೆಯನು ಇಡುತ್ತಾ ಪ್ರಯಾಣಕ್ಕೆ ಹೊರಡುವ ಮುನ್ನ ಮಾಡಬೇಕಾದ ಮಂಗಲಾಚರಣೆಗಳನು ಮಾಡಿದಳು. ಬಳಿಕ ಅಂತಃಪುರಕ್ಕೆ ಶೋಕಮೋಹಿತಳಾಗಿ ತೆರಳಿದಳು.

ಮಹಾ ಸರ್ಪದಂತೆ ಬುಸುಗುಡುತ್ತಾ ಬಂದ ವಾಲಿಯು ಸುಗ್ರೀವನನ್ನು ಅರಸುತ್ತಾ ಬಂದಾಗ, ವಾಲಿಯು ಮಹಾ ಬಾಗಿಲ ಬಳಿ ನೆಲೆನಿಂತು ಸನ್ನದ್ಧನಾಗಿದ್ದ ಸುಗ್ರೀವನನ್ನು ನೋಡಿದ.

ಯುದ್ಧೋತ್ಸಾಹದಿಂದ ವಾಲಿಯು ಮುಷ್ಠಿಯನು ಕಟ್ಟಿ ಸುಗ್ರೀವನ ಕಡೆಗೆ ನಡೆದ. ಅಣ್ಣ ತಮ್ಮಂದಿರಿಬ್ಬರೂ ಸಹ ಪರಸ್ಪರರೆಡೆಗೆ ಮುಷ್ಠಿಯನು ಹಿಡಿದು ಗುದ್ದುವೆನೆಂಬುದಾಗಿ ಹೇಳುತ್ತಿರುವಾಗಲೇ ವಾಲಿಯು ಸುಗ್ರೀವನಿಗೆ ಗುದ್ದುವನು, ಆಗ ಸುಗ್ರೀವನ ಶರೀರದಿಂದ ರಕ್ತವು ಚಿಮ್ಮುವುದು.

ವಾಲಿಯನು ಉಳಿಸುವುದು ತರವಲ್ಲ ಎಂದರಿತ ಸುಗ್ರೀವನು ಪಕ್ಕದಲ್ಲೇ ಇದ್ದ ಸಾಲ್ವಮರವನು ಕಿತ್ತು ಬಲವಾಗಿ ವಾಲಿಗೆ ಪ್ರಹಾರವನ್ನು ಮಾಡಿದಾಗ ವಾಲಿಯು ‘ಸಮುದ್ರ ಮಧ್ಯದಲಿ ಭಾರ ತಾಳಲಾರದೇ ಬಿರುಗಾಳಿಗೆ ತೊಯ್ದಾಡುವ ನೌಕೆಯಂತೆ ನಡುಗಿದನು. ಯುದ್ಧದಲಿ ವಾಲಿಯ ಕೈ ಮೇಲಾಗುತ್ತಾ ಹೋಯಿತು, ಸುಗ್ರೀವನು ಕ್ಷೀಣಿಸಿದ. ಅಸಹನೆಯಿಂದ ಕೂಡಿದವನಾಗಿ ಕೈ ಚಳಕದಿಂದ ವಾಲಿಯ ಮೇಲೆ ಸುಗ್ರೀವನು ಪ್ರಹಾರವನ್ನು ಮಾಡಿದ.

ಯುದ್ಧವು ಘೋರವಾಯಿತು. ಇಬ್ಬರ ಮೈ ಪೂರ್ತಿ ರಕ್ತ-ಸಿಕ್ತವಾಗಿದೆ. ಆದರೂ ಯುದ್ಧ ಮುಂದುವರಿಯುತ್ತಿದೆ ಮತ್ತು ಅದರ ಮಧ್ಯೆ ಬೈಗುಳಗಳು. ಸುಗ್ರೀವನು ಕ್ಷೀಣಿಸುತ್ತಿದ್ದ ಮತ್ತು ಸುತ್ತಲೂ ವೀಕ್ಷಿಸುತ್ತಿದ್ದ. ಆಗ ರಾಮನು ಬಾಣವನು ಹಿಡಿದು ಧನುಸ್ಸನ್ನು ಹೆದೆಯೇರಿಸಿದಾಗ, ಕಾಲಚಕ್ರವನ್ನು ಎತ್ತಿ ಹಿಡಿದ ಕಾಲನಂತೆ ರಾಮನು ಕಾಣುವನು. ಹೆದೆಯೇರಿಸಿದ ಬಿಲ್ಲಿನ ನಾದವನು ಕೇಳಿ ಪಕ್ಷಿಗಳು ಹೆದರಿದವು. ಬಾಣವನು ಬಿಟ್ಟಾಗ ಅದು ವಾಲಿಯ ಎದೆಗೆ ಬಿತ್ತು.

ಆಗ ವಾಲಿಯು ಧರೆಗುರುಳಿದನು. ತ್ರಿಪುರ ಹರನು ಪ್ರಳಯ ಕಾಲದಲ್ಲಿ ತನ್ನ ಬಾಯಿಯಿಂದ ಹೊಗೆಯುಗುಳುವಂತೆ… ರಾಮನ ಬಾಣವು ವಾಲಿಯ ಎದೆಗೆ ತಾಗಿತು. ಕಾಡಿನ ಕ್ಷೋಭೆಯು ಕ್ಷೀಣಿಸಿತು, ಆದರೆ ವಾಲಿಯ ಶೋಭೆಯು ತಂದೆಯಾದ ಇಂದ್ರ ಕೊಟ್ಟ ಮಾಲೆಯೊಳಿತ್ತು; ಅದು ಶೋಭಿಸಿತು ಮತ್ತು ರಾಮನ ಬಾಣದಿಂದ ರಕ್ತ-ಸಿಕ್ತವಾಗಿ ಕೂಡ ಶೋಭಿಸಿದ್ದರಿಂದ ಇಬ್ಬಗೆಯ ಶೋಭೆಯಾಯಿತು.

ವೀರನಾದ ವಾಲಿಯಲ್ಲಿನ ಅಂಶಕ್ಕೆ ರಾಮನ ಅಸ್ತ್ರವು ಸ್ವರ್ಗವನ್ನು, ಜೀವಕ್ಕೆ ಮುಕ್ತಿಯನು ಕೊಟ್ಟು ಅಸ್ತ್ರವು ಲಯವನ್ನು ಹೊಂದಿತು. ಬಳಿಕ ದರ್ಶನವನು ಕೊಡುವುದರ ಸಲುವಾಗಿ, ಭರವಸೆಯನ್ನು ನೀಡುವುದರ ಸಲುವಾಗಿ ವಾಲಿಯನ್ನು ಸಮೀಪಿಸುವನು.

ನಂತರ ನಡೆಯುವ ಅವರಿಬ್ಬರ ಧರ್ಮ ಸಂವಾದವನ್ನು ಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments