ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಎಲ್ಲವನ್ನೂ ಕಳೆದುಕೊಂಡ ಸುಗ್ರೀವನಿಗೆ ಎಲ್ಲವನ್ನೂ ಕೊಡಿಸಿ, ದಟ್ಟದಾರಿದ್ರ್ಯವನ್ನು ಹೊಂದಿ ಬೆಟ್ಟದಲ್ಲಿ ವಾಸಮಾಡುವವನನ್ನು ಅಖಂಡ ವಾನರ ಸಾಮ್ರಾಜ್ಯಕ್ಕೆ ಚಕ್ರವರ್ತಿಯನ್ನಾಗಿಸಿ, ಅವನನ್ನು ಸಿದ್ಧಾರ್ಥನನ್ನಾಗಿ ಪರಿವರ್ತಿಸಿ, ಬಳಿಕ ಅವನ ಪಟ್ಟಾಭಿಷೇಕವನ್ನು ತಾನು ನಗರದೊಳಗೆ ಪ್ರವೇಶಮಾಡದೇ, ಆ ಸಂಭ್ರಮದಲ್ಲಿ ತಾನು ಭಾಗಿಯಾಗುವಂತಿಲ್ಲ. ಏಕೆಂದರೆ ನಗರವನ್ನಾಗಲಿ, ಗ್ರಾಮವನ್ನಾಗಲಿ 14 ವರ್ಷ ಕಳೆಯುವವರೆಗೆ ಪ್ರವೇಶಿಸುವಂತಿಲ್ಲ. ಹೊರಗಿನಿಂದಲೇ ಸುಗ್ರೀವನ ಪಟ್ಟಾಭಿಷೇಕದ ಸಂಭ್ರಮವನ್ನು ದೂರದಿಂದಲೇ ಅನುಭವಿಸಿ, ಆ ಪಟ್ಟಾಭಿಷೇಕವು ನೆರವೇರಿರಲಾಗಿ, ಸುಗ್ರೀವನು ಗುಹೆಯನ್ನು ಪ್ರವೇಶಿಸಿರಲಾಗಿ ರಾಮನು ಪ್ರಸ್ರವಣಕ್ಕೆ ಬಂದನು. ಪ್ರಸ್ರವಣ ಎಂದರೆ ಝರಿ ಹರಿಯುವ ಗಿರಿ. ಕಿಷ್ಕಿಂಧೆಯ ಬಳಿಯಿರುವ ಪರ್ವತ ಅದು. ಅದು ಸಮೃದ್ಧವಾಗಿತ್ತು. ಬಣ್ಣಬಣ್ಣದ ಧಾತುಗಳು, ನಾನಾ ತರುಲತೆಗಳು, ಬಗೆಬಗೆಯ ಮೃಗಪಕ್ಷಿಗಳು, ಝರಿಗಳು, ಗುಹೆಗಳು, ನದಿಗಳು. ಒಂದು ಮಹಾಪರ್ವತದಲ್ಲಿ ಏನೆಲ್ಲ ಇರಬಹುದೋ ಅವೆಲ್ಲಾ ಪ್ರಕೃತಿಸಂಪತ್ತು ಕೂಡಾ ಪರಿಪೂರ್ಣವಾಗಿರುವಂತಹ ಪರ್ವತ. ಆ ಪರ್ವತದ ಶಿಖರವನ್ನು ರಾಮನು ಏರುತ್ತಾನೆ. ಅಲ್ಲಿ ಒಂದು ಗುಹೆ. ವಿಶಾಲವಾಗಿದೆ. ಆ ಗುಹೆಯನ್ನು ವಾಸಕ್ಕಾಗಿ ಸ್ವೀಕಾರಮಾಡುತ್ತಾನೆ. ಜೊತೆಯಲ್ಲಿ ಎಂದಿನಂತೆ ಲಕ್ಷ್ಮಣ. ಸುಗ್ರೀವನ ಜೊತೆಗೆ ಒಪ್ಪಂದವಾಗಿದೆ. ವರ್ಷರಾತ್ರಾ ಎಂದರೆ ಮಳೆಗಾಲವು ಇಡೀ ವರ್ಷಕ್ಕೆ ರಾತ್ರಿಯಿದ್ದಂತೆ. ಅಂತಹ ನಾಲ್ಕು ತಿಂಗಳ ವರ್ಷಾಕಾಲ ರಾಮನು ಪ್ರತೀಕ್ಷೆಮಾಡಬೇಕು. ನಾಲ್ಕು ತಿಂಗಳು(ಆಷಾಢ, ಶ್ರಾವಣ, ಭಾದ್ರಪದ, ಆಶ್ವೇನ) ಕಳೆಯುತ್ತಿದ್ದಂತೆಯೇ, ಕಾರ್ತೀಕವು ಬರುತ್ತಿದ್ದಂತೆಯೇ ಸೀತಾನ್ವೇಷಣೆಗೆ, ರಾವಣವಧೆಗೆ ಸುಗ್ರೀವನು ಪ್ರಯತ್ನಿಸಬೇಕು. ಇದು ಒಪ್ಪಂದ. ಒಪ್ಪಂದವನ್ನು ಸುಗ್ರೀವನ ಜೊತೆಗೆ ಮಾಡಿಕೊಂಡು, ಬೆಟ್ಟದ ಮೇಲಿನ ಗುಹೆಯನ್ನು ಸೇರಿದ ರಾಮನು ಲಕ್ಷ್ಮಣನಿಗೆ ಇಂತೆಂದನು.

ಲಕ್ಷ್ಮಣ, ಈ ಗಿರಿಗುಹೆ ರಮ್ಯವಾಗಿದೆ, ವಿಶಾಲವಾಗಿದೆ. ಗುಹೆಯ ವಿನ್ಯಾಸದಿಂದಲಾಗಿ ಎಷ್ಟು ಬೇಕೋ ಅಷ್ಟೇ ಗಾಳಿ ಬರುವಂತಿದೆ. ಮಳೆಗಾಲವಿಡೀ ಇಲ್ಲಿಯೇ ವಾಸಮಾಡೋಣ. ಈ ಉನ್ನತವಾದ ಗಿರಿಶೃಂಗವು ರಮ್ಯವಾಗಿದೆ. ನಿಕಟದಲ್ಲಿಯೇ ಕಮಲಗಳುಳ್ಳ ಸರೋವರವು ಶೋಭಿಸುತ್ತಿದೆ. ಬೆಟ್ಟದ ಮೇಲೆ ಸರೋವರವಿದೆ. ಸಮೃದ್ಧಿ ಅದು. (ಅಂದಿನ ಕಾಲದಲ್ಲಿ ಬಳ್ಳಾರಿಯ ಪರಿಸರದಲ್ಲಿ ಬೆಟ್ಟದ ಮೇಲೆ ಕಮಲಗಳುಳ್ಳ ಸರೋವರವಿತ್ತು!). ಆ ಗುಹೆಯು ಈಶಾನ್ಯಕ್ಕೆ ತಗ್ಗು ಮತ್ತು ಸಹಜವಾಗಿ ನೈರುತ್ಯಕ್ಕೆ ಎತ್ತರ. ಅದು ಶುಭ. ಎಲ್ಲಿ ನೀರು ಪೂರ್ವಕ್ಕೋ, ಉತ್ತರಕ್ಕೋ, ಈಶಾನ್ಯಕ್ಕೋ ಹರಿಯುತ್ತದೆಯೋ ಅದು ಶುಭ. ಆ ಗುಹೆ ಹಾಗೆಯೇ ಇತ್ತು. ಹಾಗಾಗಿಯೇ ಹೆಚ್ಚು ಗಾಳಿಯ ಉಪದ್ರವವಿಲ್ಲ. ನೈರುತ್ಯಕ್ಕೆ ದ್ವಾರವಿರಬೇಕು. ಹಾಗಾಗಿ ಹೆಚ್ಚು ಗಾಳಿ ಬರುವುದಕ್ಕೆ ಅವಕಾಶವಿಲ್ಲ. ಮಳೆಗಾಲದಲ್ಲಿ ಮಳೆಯು ಒಳಗೆ ಬರುವುದಿಲ್ಲ. ಹಾಗಾಗಿ ಆ ಗುಹೆಯನ್ನು ರಾಮನು ಆರಿಸಿಕೊಂಡಿದ್ದಾನೆ. ಗುಹೆಯ ಬಾಗಿಲಿನಲ್ಲಿ ಒಂದು ಶಿಲೆ. ಅದು ಸಮತಲವಾಗಿದೆ. ಮನೋಹರವಾಗಿದೆ. ಕಾಡಿಗೆಯ ಕಪ್ಪು ಬಣ್ಣದಲ್ಲಿದೆ. ಅದು ದ್ವಾರ ಗುಹೆಗೆ. ಅಲ್ಲಿಂದ ಉತ್ತರಕ್ಕೊಂದು ಗಿರಿಶೃಂಗ. ಅದು ಕಪ್ಪಗಿದೆ. ದಕ್ಷಿಣಕ್ಕೆ ಇನ್ನೊಂದು ಗಿರಿಶೃಂಗ. ಅದು ಧವಳವರ್ಣದಲ್ಲಿ ಶೋಭಿಸುತ್ತಿದೆ. ಪೂರ್ವದಿಕ್ಕಿಗೆ ಅಭಿಮುಖವಾಗಿ ನದಿಯೊಂದು ಹರಿದಿದೆ. ಚೂರೂ ಕೆಸರಿಲ್ಲ. ಗಂಗೆಯನ್ನು ನೆನಪು ಮಾಡುವ ನದಿಯು ನಿರ್ಮಲವಾಗಿದೆ. ಆ ನದಿಯನ್ನು ಅನೇಕ ಪ್ರಕಾರದಲ್ಲಿ ವರ್ಣಸಿದ್ದಾನೆ ರಾಮ. ಅದರ ತೀರದ ವೃಕ್ಷಗಳು, ಪಕ್ಷಿಗಳು, ಮೃಗಗಳು ಎಲ್ಲವನ್ನೂ ವರ್ಣಸಿದ್ದಾನೆ. ರಮಣೀಯವಾದ ಮರಳಿನ ದಿಣ್ಣೆಗಳಿಂದ, ಹಂಸ-ಸಾರಸಗಳಿಂದ ಕೂಡಿದೆ ನದಿ. ನೋಡಿದರೆ ಸರ್ವಾಭರಣಭೂಷಿತೆಯಾದ ನಾರಿಯು ನಗುವಂತಿದೆ. ನಗುವಿನ ಬಣ್ಣ ಬಿಳಿಯೆಂಬುದು ಹಳೆಯ ಕಾಲದ ಒಪ್ಪಂದ. ಹಾಗಾಗಿ ಹಂಸ-ಸಾರಸಗಳಿಂದ ಕೂಡಿದ ನದಿಯೆಂಬ ನಾರಿಯು ನಗುವಂತಿದೆ. ಎಷ್ಟು ರಮಣೀಯವಾಗಿದೆ ಈ ಪ್ರದೇಶ. ನಾವಿಲ್ಲಿ ದೃಢವಾಗಿ ರಮಿಸೋಣ. ಅಂದರೆ ಅತಿಶಯವಾಗಿ ಸಂತೋಷಪಡಲು ಸಾಧ್ಯವಿದೆ. ಇಲ್ಲಿ ಸುಖವಾಗಿ ವಾಸಮಾಡೋಣ. ಆ ಪರ್ವತದಿಂದ ಹೆಚ್ಚು ದೂರವಲ್ಲ ಕಿಷ್ಕಿಂಧೆ. ಸುಗ್ರೀವನ ನಗರಿ ಹತ್ತಿರದಲ್ಲಿದೆ. ಕಿಷ್ಕಿಂಧೆಯ ಒಳಗಿನ ವಾದ್ಯಘೋಷ ಬೆಟ್ಟದಲ್ಲಿ ಕೇಳುತ್ತಿದೆ. ವಾನರರ ಘರ್ಜನೆ, ಮೃದಂಗಧ್ವನಿ ಕೂಡಾ ಕೇಳುತ್ತಿದೆ. ರಾಮ ಹೇಳಿದ, ತನ್ನ ಪತ್ನಿಯನ್ನು ಮರಳಿ ಪಡೆದಂತಹ ಕಪಿವರನು ದೊಡ್ಡರಾಜ್ಯವನ್ನೂ ಪಡೆದುಕೊಂಡು, ತನ್ನ ಬಂಧು-ಬಾಂಧವರ ಸಹಿತನಾಗಿ ಬಹಳಾ ಸಂತೋಷವಾಗಿರಬಹುದು. ದೊಡ್ಡ ಲಕ್ಷ್ಮಿಯನ್ನೇ ಪಡೆದುಕೊಂಡಿದ್ದಾನೆ. ಅವನಂತಹ ಸಂತೋಷ ಯಾರಿಗಿರಬಹುದು ಎಂಬುದಾಗಿ ಸುಗ್ರೀವನ ಸಂತೋಷಕ್ಕಾಗಿ ಸಂತೋಷಪಡುತ್ತಾ ಬೆಟ್ಟದ ಗುಹೆಯಲ್ಲಿ ವಾಸಮಾಡಿದನು ರಾಮ. ಆ ಪರಿಸರದಲ್ಲಿ ಅನೇಕ ಪ್ರೇಕ್ಷಣೀಯವಾದ ಗುಹೆಗಳಿದ್ದವು, ಲತಾಕುಂಜಗಳು ಕೂಡಾ ಇದ್ದವು. ಆ ಬೆಟ್ಟ ಸುಖಕರವಾಗಿತ್ತು. ಬೇಕಾದುದೆಲ್ಲಾ, ಬೇಕಾಗುವಷ್ಟಿತ್ತು. ಆದರೂ ರಾಮನಿಗೆ ಒಂದಿಷ್ಟೂ ಆನಂದವನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಸೀತೆಯ ಸ್ಮರಣೆಯಿಂದಾಗಿ. ತನ್ನ ಪ್ರಾಣಗಳಿಗಿಂತ ಮಿಗಿಲಾದ, ಅಪಹರಿಸಲ್ಪಟ್ಟ ತನ್ನ ಪ್ರಿಯೆಯನ್ನು ಸ್ಮರಿಸಿದ ರಾಮನು ಸುಖದಿಂದ ದೂರವಾದನು. ಅದರಲ್ಲಿಯೂ ಕೂಡ ಉದಯಿಸಿದ ಪೂರ್ಣಚಂದ್ರನನ್ನು ಕಂಡಾಗ ರಾಮನಿಗೆ ನಿದ್ದೆಯೇ ದೂರವಾಯಿತು. ಅದು ಸೀತೆಯ ನೆನಪನ್ನು ತಂದುಕೊಡುತ್ತಿತ್ತು. ಹಾಗೆಯೇ ನಿರಂತರ ಶೋಕಿಸುವ ರಾಮನನ್ನು ಲಕ್ಷ್ಮಣನು ಸಂತೈಸುತ್ತಾನೆ. ರಾಮನಿಗೇನು ದುಃಖವೋ ಅದೇ ದುಃಖ ಲಕ್ಷ್ಮಣನಿಗೂ ಇದೆ. ಅವನೂ ಹಾಗೆಯೇ ದುಃಖಪಡುತ್ತಾನೆ. ರಾಮನಿಗೆ ಸೀತಾಪಹರಣದ ದುಃಖ. ಲಕ್ಷ್ಮಣನಿಗೆ ರಾಮನ ದುಃಖದಿಂದ ದುಃಖ. ಸೀತೆಯ ಬಗ್ಗೆ ಕೂಡಾ ದುಃಖವಿದೆ ಅವನಿಗೆ. ಆದರೆ ಅಣ್ಣನನ್ನು ಸಂತೈಸುವ ಕಾರ್ಯವನ್ನು ಮಾಡುತ್ತಾನೆ.

ಅಣ್ಣ, ಶೋಕಿಸಬೇಡ. ನಾವು ಶೋಕಿಸಿದರೆ ಕೆಲಸ ಹಾಳು ಹೊರತು ಉಪಯೋಗವೇನೂ ಇಲ್ಲ. ನೀನೆಂಥವನು. ಮಾಡಬೇಕಾದ ಕಾರ್ಯವನ್ನು ಮಾಡುತ್ತಿರುವೆ ಹೊರತು ನಿಷ್ಕ್ರಿಯನಲ್ಲ. ನಾವು ದೇವರನ್ನು ನಂಬಿದವರು. ಆಸ್ತಿಕನೂ ಹೌದು, ಧರ್ಮಶೀಲನೂ ಹೌದು. ಜೊತೆಗೆ ವ್ಯವಸಾಯಿ ಎಂದರೆ ಕರ್ತವ್ಯನಿರತ. ಮತ್ತು ರಾವಣನಂತಹ ಮಹಾರಾಕ್ಷಸ ನಮಗೆ ಶತ್ರು. ಅವನನ್ನು ಸಂಹರಿಸಲು ನೀನು ಸಮರ್ಥನೇ ಹೌದು. ಆದರೆ ಅವನು ಮೋಸಗಾರ. ಹಾಗಾಗಿ ನಾವು ಸಕ್ರಿಯರಾಗಿದ್ದರೆ ಮಾತ್ರವೇ ಅವನನ್ನು ಗೆಲ್ಲಲು, ಸಂಹರಿಸಲು ಸಾಧ್ಯ. ನಾವು ಕುಗ್ಗಿದರೆ ರಾವಣನನ್ನು ಗೆಲ್ಲುವುದು ದೂರದ ಮಾತಾದೀತು. ಹಾಗಾಗಿ ಶೋಕವನ್ನು ಬಿಡು.

ಶೋಕವನ್ನು ಮರೆತು ಕಾರ್ಯತತ್ಪರರಾದಾಗ ಮಾತ್ರ ಕಾರ್ಯಸಾಧನೆ ಸಾಧ್ಯ.
ಕರ್ತವ್ಯದಲ್ಲಿ ಸ್ಥಿರನಾಗು. ಆಗ ನೀನು ಸಪರಿವಾರನಾಗಿ ರಾಕ್ಷಸನನ್ನು ನಿರ್ಮೂಲಮಾಡಲು ಸಮರ್ಥನಾಗುವೆ ಎಂಬುದಾಗಿ ಹೇಳಿ, ನಿನ್ನದೇನು ಸಾಮಾನ್ಯ ಸಾಮರ್ಥ್ಯವೇ? ಸಮುದ್ರ, ಕಾಡು, ಬೆಟ್ಟ ಇವೆಲ್ಲವುಗಳಿಂದ ಕೂಡಿರುವಂತಹ ಭೂಮಂಡಲವನ್ನೇ ಪರಿವರ್ತಿಸಲು ನೀನು ಶಕ್ತ. ರಾವಣನು ಯಾವ ಲೆಕ್ಕ. ನಾವೀಗ ಶರತ್ಕಾಲವನ್ನು ಪ್ರತೀಕ್ಷೆಮಾಡೋಣ. ವರ್ಷಾಕಾಲ ಮುಗಿದು ಶರತ್ಕಾಲ ಬರಬೇಕು. ದೀಪಾವಳಿ ಕಳೆಯಬೇಕು. ಮಳೆಗಾಲದಲ್ಲಿ ಅನ್ವೇಷಣೆಮಾಡುವುದು, ಯುದ್ಧಮಾಡುವುದು ಯಾವುದೂ ಸಾಧ್ಯವಿಲ್ಲ. ಹಾಗಾಗಿ ಶರತ್ಕಾಲವನ್ನು ಪ್ರತೀಕ್ಷೆಮಾಡೋಣ. ಆಗ ರಾವಣವಧೆಯನ್ನು ಮಾಡೋಣ. ಮತ್ತು ನಿನಗೆ ನಾನೇನು ಕೊಡಬೇಕಾಗಿದೆ. ಪರಿಪೂರ್ಣ ನೀನು. ಲೋಕೈಕ ವೀರತ್ವ ನಿನ್ನಲ್ಲಿದೆ. ಅದನ್ನು ಜಾಗೃತಗೊಳಿಸುವುದು ನನ್ನ ಕೆಲಸ. ಹೇಗೆಂದರೆ ಅಗ್ನಿಯು ಕೆಂಡವಾಗಿದೆ. ಮೇಲೆ ಬೂದಿಯಿದೆ. ಅದು ಆರಿ ಹೋದಂತೆ ಕಾಣುತ್ತಿದೆ. ಆಹುತಿಯನ್ನು ಕೊಟ್ಟಾಗ ಭುಗಿಲೇಳುವ ಅಗ್ನಿಯಂತೆ ಈ ನನ್ನ ವಾಕ್ಯಗಳ ಆಹುತಿಯಿಂದ ನಿನ್ನೊಳಗಿರುವ ವೀರಜ್ವಾಲೆಯನ್ನು ಜಾಗೃತಗೊಳಿಸುತ್ತಿದ್ದೇನೆ. ಹೊಸದನ್ನು ಕೊಡಲು ನಾನ್ಯಾರು ಎಂಬುದಾಗಿ ಹೇಳಿದಾಗ ರಾಮನಿಗೆ ಲಕ್ಷ್ಮಣನ ಮಾತು ಹಿಡಿಯಿತು. ಲಕ್ಷ್ಮಣನ ಮಾತುಗಳೇ ರಾಮನಿಗೆ ಪ್ರಥಮ, ಮಧ್ಯಮ, ಅಂತಿಮ ಚಿಕಿತ್ಸೆ. ಅದನ್ನು ಮುಂದೆ ಕೂಡಾ, ಲಕ್ಷ್ಮಣನಿಗೆ ತೊಂದರೆಬಂದ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾನೆ ರಾಮ.

ರಾಮನು ಲಕ್ಷ್ಮಣನಿಗೆ ಹೇಳಿದ. ಅನುರಕ್ತನಾದವನು ಏನನ್ನು ಮಾತನಾಡಬೇಕೋ ಅದನ್ನು ಮಾತನಾಡಿದೆ. ಸತ್ಯದ ವೈಭವವಿದೆ ಲಕ್ಷ್ಮಣನ ಮಾತಿನಲ್ಲಿ. ಇದೋ ಶೋಕವನ್ನು ತ್ಯಜಿಸಿದೆ. ಇದು ಎಲ್ಲವನ್ನೂ ಹಾಳುಮಾಡುತ್ತದೆ. ಹಾಗಾಗಿ ಶೋಕವನ್ನು ಬಿಟ್ಟೆ. ನಿನ್ನ ಮಾತಿನ ಹಾಗೆ ಶರತ್ಕಾಲವನ್ನು ಪ್ರತೀಕ್ಷೆಮಾಡುತ್ತೇನೆ. ಸುಗ್ರೀವನ ಪ್ರಸನ್ನತೆಯನ್ನು ಕಾಯುವುದು ನಮ್ಮ ಕೆಲಸ ಎಂದು ಹೇಳಿ ಸುಭಾಷಿತವೊಂದನ್ನು ಹೇಳಿದ.

ನಿಜವಾಗಿ ವೀರನಾದವನು ಉಪಕಾರಕ್ಕೆ ಪ್ರತ್ಯುಪಕಾರವನ್ನು ತಪ್ಪದೇ ಮಾಡುತ್ತಾನೆ. ಮಾಡುವುದು ಸೂಕ್ತ. ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡದಿದ್ದರೆ ಸತ್ಪುರುಷರ ಮನಸ್ಸು ಘಾಸಿಗೊಳ್ಳುತ್ತದೆ.

ಆಗ ಲಕ್ಷ್ಮಣನು ಅಣ್ಣಾ, ನೀನೇನು ಯೋಚನೆ ಮಾಡಬೇಡ. ನಿನ್ನ ಇಚ್ಛೆಯು ಪೂರ್ಣವಾಗುತ್ತದೆ. ವಾನರ ರಾಜನು ಮಾತಿಗೆ ತಪ್ಪದೇ ನಡೆದುಕೊಳ್ಳುತ್ತಾನೆ. ನೀನು ಶರತ್ಕಾಲವನ್ನು ಪ್ರತೀಕ್ಷೆಮಾಡು. ಮತ್ತು ಈ ಮಳೆಯ ಧಾರೆಯನ್ನು ಸಹಿಸು. 4 ತಿಂಗಳು ನನ್ನೊಟ್ಟಿಗೆ ಗುಹೆಯಲ್ಲಿ ವಾಸಮಾಡು. ಆಮೇಲೆ ಕಾರ್ಯಮಾಡೋಣ ಎಂದು ಹೇಳಿದ.

ಬಳಿಕ ಅದ್ಭುತವಾದ ಮಳೆಗಾಲ. ಆ ಮಳೆಗಾಲವನ್ನು ರಾಮ ವರ್ಣನೆ ಮಾಡಿದ್ದಾನೆ. ಆ ಪರಿಸರದಲ್ಲಿ ಮಳೆಗಾಲ ಎಂಥದ್ದಿತ್ತು ಎಂಬುದು ತಿಳಿಯುತ್ತದೆ. ರಾಮನ ಕವಿತ್ವವನ್ನು ಕಾಣಬಹುದು. ನೋಡು ಲಕ್ಷ್ಮಣ, ಆ ಕಾಲ ಬಂತು. ಜಲಗಾಲ. ಪರ್ವತಾಕಾರದ ಮೋಡಗಳು ಬಂದು ಆಕಾಶವನ್ನು ಆವರಿಸುತ್ತಿದ್ದಾವೆ. ಈ ದಿವಿಯೆಂಬ ನಾರಿ ಸೂರ್ಯನ ಕಿರಣಗಳ ಮೂಲಕವಾಗಿ ಸಮುದ್ರದ ಜಲವನ್ನು ಸೇವಿಸಿ, 9 ತಿಂಗಳು ಗರ್ಭಧಾರಣೆಯನ್ನು ಮಾಡಿ, ಶುದ್ಧಜಲವೆಂಬ ರಸಾಯನವನ್ನು ಪ್ರಸವಿಸುತ್ತಿದ್ದಾಳೆ. ಸರ್ವಶ್ರೇಷ್ಠ ರಸಾಯನ ನೀರು. ಇನ್ನೊಂದು ಚೆಂದದ ವರ್ಣನೆ. ಮಳೆಗಾಲ, ಮೋಡಗಳು ತುಂಬಾ ಇವೆ, ಇಳಿದು ಇಳಿದು ಕೆಳಗೆ ಬಂದಿವೆ. ಬೆಟ್ಟದ ಮೇಲೆನಿಂದ ಕೈಗೆ ಸಿಗುವಂತೆ. ಗಿರಿಮಲ್ಲಿಗೆ ಹೂಬಿಡುವ ಕಾಲವದು. ಈ ಗಿರಿಮಲ್ಲಿಗೆ ಹೂಗಳಿಂದ ಮಾಲೆ ಮಾಡಿ, ಮೇಘಗಳನ್ನು ಹತ್ತಿಹೋಗಿ ನಮ್ಮ ಕುಲಮೂಲನಾದ ಸೂರ್ಯನಿಗೆ ಮಾಲೆ ಹಾಕೋಣ. ಹಾಗೆಯೇ ಭೂಮಿಯಲ್ಲಿ ಹೊಸನೀರು ಹರಿಯುತ್ತಿದೆ. ಆವಿ ಏಳುತ್ತಿದೆ. ಭೂಮಿಯ ಮಗಳು ಸೀತೆ. ಭೂಮಿಯು ಬೇಸಿಗೆಯ ಬಿಸಿಯಿಂದ ತಪ್ತವಾಗಿದೆ. ಸೀತೆ ರಾಮನ ವಿರಹದಿಂದ ತಪ್ತಳಾಗಿದ್ದಾಳೆ. ಇಲ್ಲಿ ಹೊಸನೀರು ಹರಿಯುತ್ತಿದೆ. ಅಲ್ಲಿ ಸೀತೆ ಜೀವಮಾನದಲ್ಲಿ ಕಾಣದ ಕಷ್ಟದ ಕಣ್ಣೀರು. ಭೂಮಿಯು ಭಾಷ್ಪವನ್ನು ಬಿಡುಗಡೆಮಾಡುತ್ತಿರುವಂತೆ, ಸೀತೆಯ ಕಣ್ಣಿಂದ ಕೂಡ ಶೋಕಭಾಷ್ಪವು ಹರಿಯುತ್ತಿದೆ. ತಾಯಿ ಮಗಳಿಬ್ಬರೂ ಒಂದೇ ಸ್ಥಿತಿಯಲ್ಲಿದ್ದಾರೆ. ಮಗಳಿಗಾಗಿ ತಾಯಿ ಕೂಡಾ ದುಃಖಿಸುತ್ತಿರುವಂತೆ. ಇನ್ನೊಂದು ತುಂಬಾ ಚೆಂದದ ವರ್ಣನೆ. ಗಾಳಿಯಲ್ಲಿ ನೀರಿನ ಅಂಶ ತುಂಬಾ. ಮೇಘಗಳ ಮೇಲೆ ಬೀಸಿ ಬಂದಿದೆ. ಆ ಗಾಳಿಯು ಕುಸುಮಗಳ ಪರಿಪಮಳವನ್ನು ಹೊತ್ತಿದೆ.ಪರಿಪಮಳದ ಗಾಳಿಯನ್ನು ಕೈಯಿಂದ ತೆಗೆದು ಕುಡಿಯಬಹುದು. ಪರ್ವತಗಳ ಮೇಲೆ ರಾಮನ ದೃಷ್ಟಿ ಬಿತ್ತು. ಸಮೀಪದ ಒಂದು ಪರ್ವತ. ಅದು ಹೂಬಿಟ್ಟಿದೆ. ಧಾರಕಾರವಾಗಿ ಮಳೆ ಸುರಿಯುತ್ತಿದೆ. ರಾಮನಿಗೆ ಸುಗ್ರೀವನ ನೆನಪಾಯಿತು. ಅವನ ಪಟ್ಟಾಭಿಷೇಕದಂತಿದೆ ಇದು ಎಂದು. ಪರ್ವತಗಳು ವೈದಿಕರಂತೆ ಕಂಡವು ರಾಮನಿಗೆ. ಮೋಡಗಳೇ ಕೃಷ್ಣಾಜಿನ, ಜಲಧಾರೆಯೇ ಯಜ್ಞೋಪವೀತ. ಗುಹೆಗಳಲ್ಲಿ ಗಾಳಿಸುಳಿದಾಗ ಬರುವ ಶಬ್ಧವೇ ಮಂತ್ರ. ಆಕಾಶದಲ್ಲಿ ಗುಡುಗು, ಮಿಂಚು ಇವೆ. ಮಿಂಚಿನ ಚಾಟಿಯನ್ನು ಬೀಸಿ ಯಾರೋ ಗಗನಕ್ಕೆ ಹೊಡೆದವರಂತೆ ಗಗನ ಗುಡುಗಿನ ರೂಪದಲ್ಲಿ ಕೂಗುತ್ತಿದೆ. ಆಗ ರಾಮನಿಗೆ ಸೀತೆಯ ನೆನಪಾಯಿತು. ಮಿಂಚು ಸ್ಥಿರವಾಗಿರುವುದಿಲ್ಲ. ರಾವಣನ ಬಣ್ಣ ಕಪ್ಪು. ಸೀತೆ ಮಿಂಚಿನ ಬಣ್ಣದವಳು. ರಾವಣ ಸೀತೆಯನ್ನು ಸೆಳೆದೊಯ್ಯುವಾಗ ಸೀತೆ ಹೀಗೆಯೇ ನಡುಗಿರಬಹುದು. ರಾವಣ ಮೋಡವಾದರೆ ಸೀತೆ ಮಿಂಚಿನಂತೆ. ಅವಳನ್ನು ಸ್ಮರಣೆ ಮಾಡುತ್ತಾನೆ. ಮೋಡ ಹೆಚ್ಚಾಯಿತು. ಕತ್ತಲೆ ಆವರಿಸಿತು. ಯಾರೋ ಮೋಡಗಳ ಮಸಿಯನ್ನು ತೆಗೆದುಕೊಂಡು ಎಲ್ಲಾ ದಿಕ್ಕಿನಲ್ಲೂ ಹಚ್ಚುತ್ತಿದ್ದಾರೆ. ಏನೂ ಕಾಣದಂತೆ. ಧೂಳು ಸಂಪೂರ್ಣವಾಗಿ ಅಡಗಿತು. ಗಾಳಿಯಲ್ಲಿ ತಂಪಿನ ಅಂಶ ಸೇರಿತು. ಬೇಸಿಗೆಯ ದೋಷಗಳೆಲ್ಲ ಕಳೆದುಹೋಯಿತು. ರಾಜರ ದಂಡಯಾತ್ರೆ ನಿಂತಿತು. ಹಾಗಾಗಿಯೇ ಪ್ರಕೃತಿಯ ಕಾರಣದಿಂದಲೇ ರಾವಣನ ಮೇಲೆ ಯುದ್ಧಕ್ಕೆ ಹೋಗಲಿಲ್ಲ ಆ ಸಂದರ್ಭದಲ್ಲಿ. ಪ್ರವಾಸಕ್ಕೆ ಹೊರಟವರು ಊರನ್ನು ಸೇರುವರು. ಚಕ್ರವಾಕಗಳು ತಮ್ಮ ಪ್ರಿಯೆಯರೊಂದಿಗೆ ಕೂಡಿಕೊಂಡು ಮಾನಸ ಸರೋವರಕ್ಕೆ ಹೊರಟಿವೆ. ಅದು ಕವಿಸಮಯ. ಯತಿಗಳು ತಮ್ಮ ಅಂತರಂಗದ ಸರೋವರಕ್ಕೆ ಹೋಗಿ ಮೌನವನ್ನು ತಾಳುತ್ತಾರೆ. ರಸ್ತೆಯ ಬಗ್ಗೆ ಹೇಳುತ್ತಾನೆ ರಾಮ. ಮತ್ತೆ ಮತ್ತೆ ಬಿದ್ದ ಮಳೆಯಿಂದ ಚೂರುಚೂರಾದ ದಾರಿಗಳಲ್ಲಿ ಯಾರೂ ಸಂಚರಿಸುತ್ತಿಲ್ಲ. ಮೋಡಗಳು ಪರ್ವತದ ಮೇಲೆ ನಿಲ್ಲುತ್ತವೆ. ಆಗ ತಂಪು ಗಾಳಿ ಬೀಸಿದರೆ ಮಳೆ ಬರುವುದು. ಆ ಮೋಡಗಳು ನೀರಿನ ಭಾರವನ್ನು ಹೊತ್ತಿವೆ. ಪರ್ವತದ ಬಳಿ ನಿಂತು ವಿಶ್ರಾಂತಿ ತೆಗೆದುಕೊಂಡು ಮುಂದೆ ಹೋಗುತ್ತಿವೆ. ನದಿಗಳು ಹರಿಯುತ್ತವೆ. ಮೋಡಗಳು ಮಳೆ ಸುರಿಸುತ್ತವೆ. ಮದಿಸಿದ ಆನೆಗಳು ಘರ್ಜಿಸುತ್ತವೆ. ಕಾಡಿನ ಪರಿಸರ ಶೋಭಿಸುತ್ತದೆ. ವಿರಹಿಗಳು ಚಿಂತೆ ಮಾಡುತ್ತಿರುವರು. ನವಿಲುಗಳು ನರ್ತಿಸುತ್ತವೆ. ಮಂಗಗಳು ವಿಶ್ರಾಂತಿಯನ್ನು ಪಡೆಯುತ್ತಿವೆ.

ರಾಮನು ವೀರಯೋಧ. ಯುದ್ಧದ ನೇತೃತ್ವವನ್ನು ಅನೇಕ ಬಾರಿ ವಹಿಸಿರುವವನು. ಅವನಿಗೆ ಮೋಡಗಳನ್ನು ಕಂಡಾಗ ಯುದ್ಧದಲ್ಲಿ ಬಳಸುವ ಮದಗಜಗಳ ಸ್ಮರಣಯಾಯಿತು. ಅವುಗಳ ಮೇಲೆ ಪತಾಕೆಗಳನ್ನು ಹಾಕಿರುತ್ತಾರೆ. ಇಲ್ಲಿ ಮಿಂಚೇ ಪತಾಕೆ. ಆ ಆನೆ ಘೀಂಕಾರ ಮಾಡುವಂತೆ ಗುಡುಗುತ್ತಿದೆ. ಯುದ್ಧಕ್ಕೆ ಹೊರಟ ಆನೆಗಳಂತಿವೆ. ಅಲ್ಲಿ ಕಂಡ ಆನೆಯನ್ನು ವರ್ಣಿಸಿದ. ದಾರಿಹಿಡಿದು ಹೋಗುತ್ತಿರುವಂತಹ ಆನೆ. ಅದಕ್ಕೆ ಗುಡುಗಿನ ಧ್ವನಿ ಕೇಳಿದಾಗ ತನ್ನ ಪ್ರತಿಸ್ಪರ್ಧಿಯಾದ ಮತ್ತೊಂದು ಆನೆ ಯುದ್ಧಾಹ್ವಾನ ಕೊಟ್ಟಂತೆ ಭಾಸವಾಗಿ ತಿರುಗಿ ಯಾರೆಂದು ನೋಡುತ್ತಿದೆ. ಕಾಡಲ್ಲಿ ಸಂಗೀತ ಕಛೇರಿ ನಡೆಯುತ್ತಿದೆ. ದುಂಬಿಗಳ ಝೇಂಕಾರವು ವೀಣಾವಾದನ. ಮೋಡಗಳದ್ದು ಮೃದಂಗಧ್ವನಿ. ಕಪ್ಪೆಗಳ ಕಂಠ. ನಕ್ಷತ್ರಗಳಿಂದ ತುಂಬಿದ ಗಗನವು ಮೋಡದಿಂದ ಮುಚ್ಚಲ್ಪಟ್ಟಿವೆ. ಸೂರ್ಯ ದರ್ಶನವನ್ನೇ ಕೊಡುವುದಿಲ್ಲ. ಹೊಸನೀರಿನಿಂದ ಭೂಮಿಗೆ ಸಂತೃಪ್ತಿಯಾಗಿದೆ. ದಿಕ್ಕುಗಳಿಗೆ ಕತ್ತಲೆಯಾಗಿದೆ. ಶಿಖರಾಗ್ರದ ಮೇಲೆ ನೀರು ಬೀಳುತ್ತಿದೆ. ಅಲ್ಲಿಂದ ಕೆಳಗೆ ಹರಿದುಬಂದು ಗುಹೆಗಳನ್ನು ತುಂಬುತ್ತಿದೆ, ಕೊರಳಿನಲ್ಲಿ ಮುತ್ತಿನಮಾಲೆಯನ್ನು ಹಾಕಿಕೊಂಡಿರುವಾಗ ಅದು ಕಡಿದು ಬಿದ್ದು ನಮ್ಮ ಮಡಿಲು ಅದನ್ನು ಹಿಡಿದುಕೊಳ್ಳುವಂತೆ. ಸೂರ್ಯಾಸ್ತವಾಗಿದ್ದು ಗೊತ್ತಾಗುವುದಿಲ್ಲ. ಪಕ್ಷಿಗಳು ಗೂಡಿಗೆ ಮರಳುವಾಗ, ಕಮಲಗಳು ಮುದುಡುವಾಗ, ಜಾಜಿ ಅರಳುವಾಗ ಅದು ತಿಳಿಯುತ್ತದೆ. ರಾಜರ ದಂಡಯಾತ್ರೆ ಮುಗಿದಿದೆ. ಸೈನ್ಯಗಳೆಲ್ಲ ಮರಳುತ್ತಿವೆ. ಮಾರ್ಗಗಳು ನೀರು ತುಂಬಿದ್ದರಿಂದ ಸಮವಾಗಿಹೋಗಿವೆ ಮತ್ತು ರಾಜರ ವೈರಗಳು ಮಳೆಗಾಲದಿಂದ ಸಮವಾಗಿಹೋಗಿವೆ. ಆಷಾಢ ಬಂದಿದೆ. ಸಾಮಗರು ಸಾಮಗಾನ ಮಾಡುವ ಸಮಯ ಬಂತು. ಕೋಸಲಾಧಿಪನಾದ ಭರತನು ಎಲ್ಲ ಕಾರ್ಯಗಳನ್ನೂ ಪೂರೈಸಿ ವ್ರತವನ್ನು ಆಚರಿಸುತ್ತಿರಬಹುದು. ರಾಮನದ್ದೂ ಕೂಡಾ ವ್ರತವೇ. ಸರಯು ಉಕ್ಕಿ ಉಕ್ಕಿ ಹರಿಯುತ್ತಿರಬಹುದು. ನಾನು ಅಯೋಧ್ಯೆಗೆ ಮರಳಿದರೆ ಜನಸಮೂಹ ಉಕ್ಕಿ ಬರುವಂತೆ.

ಸುಗ್ರೀವ ಎಷ್ಟು ಸುಖವಾಗಿರಬಹುದು ಎಂದು ಸಂತೋಷಪಟ್ಟು, ತನ್ನ ನೆನಪುಮಾಡಿಕೊಂಡ. ನನ್ನ ಪತ್ನಿಯನ್ನು ಅಪಹರಣಮಾಡಲಾಗಿದೆ. ಮಹಾಸಾಮ್ರಾಜ್ಯದಿಂದ ಚ್ಯುತನಾಗಿದ್ದೇನೆ. ಮಳೆಗಾಲದಲ್ಲಿ ನದಿದಂಡೆ ಕೊಚ್ಚಿ ಹೋಗುವಂತೆ ನನ್ನ ಬದುಕಿಗೆ ನೆಲೆಯೇ ಇಲ್ಲದಂತಾಗಿದೆ. ನನ್ನ ಶೋಕಕ್ಕೆ ಅಂತ್ಯವೇ ಇಲ್ಲ. ಮಳೆಗಾಲ ಯಾವಾಗ ಮುಗಿಯುವುದೋ ಎಂದು ಭಾಸವಾಗುತ್ತಿದೆ. ರಾವಣ ದೊಡ್ಡ ಶತ್ರು. ಇದು ಮುಗಿಯುವುದೆಂದು? ಎನ್ನುತ್ತಾ ತಾನೇಕೆ ಸುಗ್ರೀವನಿಗೆ ಉದಾರವಾಗಿ 4 ತಿಂಗಳನ್ನು ಬಿಟ್ಟುಕೊಟ್ಟೆ ಎಂದು ಹೇಳಿದ. ಒಂದು, ಇದು ಪ್ರಯಾಣಕಾಲವಲ್ಲ. ಮಾರ್ಗಗಳು ದುರ್ಗಮವಾಗುತ್ತವೆ ಈಗ. ಸುಗ್ರೀವನನ್ನು ನೋಡಿ ಪಾಪವೆನ್ನಿಸಿತು. ಅನೇಕ ವರ್ಷಗಳಿಂದ ತುಂಬಾ ಕಷ್ಟಪಟ್ಟಿದ್ದ. ಎಲ್ಲಾ ಸಿಕ್ಕಿದೆ ಅವನಿಗೆ. ಸ್ವಲ್ಪದಿನ ಹಾಗೆಯೇ ಇರಲಿ ಎಂದು. ಮತ್ತು ನನ್ನ ಕೆಲಸ ಸಣ್ಣದಲ್ಲ. ಮೊದಲು ಸೀತಾನ್ವೇಷಣೆ. ನಂತರ ದೊಡ್ಡ ಯುದ್ಧ. ಹಾಗಾಗಿ ಅವನು ಕಾಲಬಂದಾಗ ಪ್ರತ್ಯುಪಕಾರ ಮಾಡುತ್ತಾನೆ. ಅದರಲ್ಲಿ ಸಂಶಯವಿಲ್ಲ. ನದಿ, ಸುಗ್ರೀವರ ಪ್ರಸನ್ನತೆಯ ಪ್ರತೀಕ್ಷೆ. ಉಪಕಾರಕ್ಕೆ ಪ್ರತ್ಯುಪಕಾರ ಮಾಡಬೇಕು ಲಕ್ಷ್ಮಣ. ಅದು ಕರ್ತವ್ಯ ಎಂದು ಇನ್ನೊಮ್ಮೆ ಹೇಳಿದಾಗ ಲಕ್ಷ್ಮಣನು ಮತ್ತೆ ಸಮಾಧಾನಪಡಿಸಿದ. ಸುಗ್ರೀವ ಪ್ರತ್ಯುಪಕಾರ ಮಾಡುತ್ತಾನೆ. ಕಾಲಬಂದಾಗ ಅವನೇ ಮುಂದಾಗಿ ಮಾಡುತ್ತಾನೆ ಎಂಬುದಾಗಿ ಹೇಳಿದ.

ಅತ್ತ ಕಿಷ್ಕಿಂಧೆಯಲ್ಲಿ, ಮಳೆಗಾಲ ಕಳೆಯುತ್ತಿದೆ. ರಾಮನ ಹಾಗೆಯೇ ಹನುಮಂತನೂ ಕೂಡಾ ಮಳೆಗಾಲ ಕಳೆಯುವುದನ್ನು ಕಾಯುತ್ತಿದ್ದಾನೆ. ಆದರೆ ಸುಗ್ರೀವ ಕಳೆದುಹೋಗಿದ್ದಾನೆ. ಇತ್ತ ಹನುಮಂತ ಕಾದೂ ಕಾದೂ ಮಳೆಗಾಲ ಮುಗಿಯಿತು. ನಿರ್ಮಲವಾದ ಆಕಾಶವನ್ನು ನೋಡಿದ. ಮೋಡವೂ ಇಲ್ಲ,ಮಿಂಚೂ ಇಲ್ಲ. ಸಾರಸಗಳ ನಾದ ಕೇಳುತ್ತಿದೆ. ಬೆಳದಿಂಗಳನ್ನು ಆಕಾಶಕ್ಕೆ ಹಚ್ಚಲಾಗಿದೆ. ಸುಗ್ರೀವನ ಪರಿಸ್ಥಿತಿ ಗಂಭೀರವಾಗಿದೆ. ಅವನಿಗೆ ಎಲ್ಲವೂ ಸಿಕ್ಕಿದೆ. ಧರ್ಮ, ಅರ್ಥ, ಕಾಮ ತ್ರಿವರ್ಗವಿದು. ಇವುಗಳೆಲ್ಲವೂ ಸಮವಾಗಿರಬೇಕು. ಸುಗ್ರೀವನಿಗೆ ಮೊದಲೆರಡು ಕಳೆದು, ಕಾಮವೊಂದೇ ಉಳಿದಿದೆ. ಆಂಜನೇಯನಿಗೆ ಬೇಸರವಾಯಿತು. ಏನಿದು! ಒಳ್ಳೆಯದಲ್ಲದ ದಾರಿಯಲ್ಲಿ ಹೋಗುತ್ತಿರುವವನೆಂದು. ಯಾವ ಕಾರ್ಯವನ್ನೂ ಮಾಡುತ್ತಿಲ್ಲ. ನಿರಂತರವಾಗಿ ಮದ್ಯ, ಮಾನಿನಿಯರಲ್ಲಿ ಕಾಲ ಕಳೆಯುತ್ತಿದ್ದಾನೆ. ಅವನು ಬಯಸಿರುವುದೆಲ್ಲಾ ಪೂರ್ಣವಾಗಿದೆ. ಅವನ ಪತ್ನಿ ಮರಳಿ ಸಿಕ್ಕಿದ್ದಾಳೆ. ವಾನರರ ಕಾನೂನಿಗನುಸಾರವಾಗಿ ತಾರೆ ಕೂಡಾ ಸಿಕ್ಕಿದ್ದಾಳೆ. ಹಾಗಾಗಿ ಇವನಿಗೆ ಬೇರೆಯ ಕೆಲಸವೇ ಇಲ್ಲ. ಅಹೋರಾತ್ರಿ ವಿಹಾರ. ಬೇರೆ ಯಾವ ಚಿಂತೆಯೂ ಇಲ್ಲ. ದೇವೇಂದ್ರನು ನಂದನವನದಲ್ಲಿ ಅಪ್ಸರೆಯರೊಡನೆ ರಮಿಸುವಂತೆ ಇವನು. ರಾಜ್ಯಭಾರವನ್ನೆಲ್ಲಾ ಮಂತ್ರಿಗಳಿಗೆ ಬಿಟ್ಟುಕೊಟ್ಟಿದ್ದಾನೆ. ಅವರನ್ನೂ ನೋಡುತ್ತಿಲ್ಲ. ರಾಜ್ಯಕ್ಕೂ ಅವನಿಗೂ ಸಂಪರ್ಕವೇ ಇಲ್ಲ. ನಡತೆ ಪೂರ್ತಿ ಕಾಮವೇ. ಅದನ್ನು ಕಂಡು ಆಂಜನೇಯ ಚಿಂತಿತನಾದ. ಅವನಿಗೆ ಕರ್ತವ್ಯವೇನು ಎಂಬುದರ ಸ್ಪಷ್ಟತೆಯಿದೆ. ಅವನು ಸಹಜವಾಗಿಯೇ ಇದ್ದಾನೆ. ಹಾಗಾಗಿ ಅವನು ಆಂಜನೇಯ. ಯಾವುದು ಏನೆಂಬುದು ಚೆನ್ನಾಗಿ ಗೊತ್ತು ಅವನಿಗೆ. ಕಾಲಧರ್ಮ ಗೊತ್ತು. ಅವನು ಕಷ್ಟದಲ್ಲಿ ಸುಗ್ರೀವನನ್ನು ಕಂಡು, ಮಧುರ ವಾಕ್ಯಗಳಿಂದ ಅವನನ್ನು ಪ್ರಸನ್ನಗೊಳಿಸುತ್ತಾನೆ. ಆಮೇಲೆ ನಿಜವನ್ನು ಹೇಳಿದ. ಅದರಲ್ಲಿ ಪ್ರೀತಿ, ಧರ್ಮ, ನೀತಿಯಿತ್ತು. ವಿಶ್ವಾಸಕ್ಕಾಗಿ ಈ ಮಾತುಗಳನ್ನಾಡಿದ.

ದೊರೆ, ರಾಜ್ಯ ಸಿಕ್ಕಿತು ನಿನಗೆ. ಕೀರ್ತಿ ಬಂತು. ಕುಲದ ಸಂಪತ್ತು ಬೆಳೆಯಿತು. ಆದರೆ ಮಿತ್ರರ ಸಂಗ್ರಹ ಉಳಿದಿದೆ. ಅದನ್ನು ಮಾಡುವ ಸಂದರ್ಭ ಬಂದಿದೆ. ಯಾವ ರಾಜ ಮಿತ್ರರೊಡನೆ ಸದಾ ಇರುತ್ತಾನೆಯೋ ಅವನ ರಾಜ್ಯ,ಕೀರ್ತಿ ಬೆಳೆಯುತ್ತದೆ. ಭಂಡಾರ, ಸೈನ್ಯ, ಮಿತ್ರರು, ತಾನು ಈ ನಾಲ್ಕರ ಸಮನ್ವಯವಿದ್ದರೆ ಆ ರಾಜ್ಯ ಬೆಳೆಯುತ್ತದೆ. ಗಮನ ಕೊಡಲಿಲ್ಲವಾದರೆ ಆಪತ್ತಿಗೆ ಕಾರಣವಾಗುತ್ತದೆ. ನೀನು ಒಳ್ಳೆಯ ನಡತೆಯುಳ್ಳವನು. ಹಾಗಾಗಿ ಮಿತ್ರಕಾರ್ಯವನ್ನು ಮಾಡಬೇಕಾಗಿದೆ. ನಮ್ಮೆಲ್ಲಾ ಕಾರ್ಯವನ್ನು ಬಿಟ್ಟು ಮಿತ್ರಕಾರ್ಯವನ್ನು ಮಾಡಬೇಕು. ಹಾಗೆ ಮಾಡದಿದ್ದರೆ ಅನರ್ಥ ಕಾದಿದೆ.

ಮಿತ್ರಕಾರ್ಯವನ್ನು ನಿಸ್ವಾರ್ಥದಿಂದ ಸಕಾಲದಲ್ಲಿ ಮಾಡಬೇಕು. ಅದು ರಾಜನೀತಿ.

ಕಾಲಮಿಂಚಬಾರದು. ನಂತರ ವಿಷಯಕ್ಕೆ ಬಂದ. ಸೀತಾನ್ವೇಷಣೆಗೆ ನಾವು ಹೊರಡಬೇಕು. ರಾಮನ ಕಾರ್ಯವು ಪ್ರಾರಂಭವಾಗಬೇಕು ಎಂದು ನೆನಪಿಸಿದ. ರಾಮನಿಗೆ ತೊರೆಯಿರಬೇಕು. ಅವನು ಪತ್ನಿಯನ್ನು ಅಷ್ಟೆಲ್ಲಾ ಪ್ರೀತಿಸುತ್ತಾನೆ. ಅವಳು ರಾಕ್ಷಸನ ವಶದಲ್ಲಿದ್ದಾಳೆ. 4 ತಿಂಗಳು ಹೇಗೆ ಕಾದನೋ! ಆದರೂ ಸೌಜನ್ಯಕ್ಕಾಗಿ, ನಿನ್ನನ್ನು ನೋಯಿಸಬಾರದೆಂದು ಬಂದು ಹೇಳುತ್ತಿಲ್ಲ ಅವನು. ನಾವು ಅವನನ್ನು ಕಾಯಿಸಬಾರದು ಎಂದನು. ಅವರು ನಿಜವಾಗಿಯೂ ಬೆಟ್ಟದ ಮೇಲೆ ಕಾಯುತ್ತಿದ್ದರು. ಸೌಜನ್ಯಕ್ಕಾಗಿ ಅವರು ಬಂದು ಹೇಳಲಿಲ್ಲ. ನಮ್ಮ ಕಪಿಕುಲಕ್ಕೆ ದೀರ್ಘಬಂಧುವವನು. ಅವನ ಪ್ರಭಾವವನ್ನು ನಾವು ತಿಳಿದುಕೊಳ್ಳಲು ಸಾಧ್ಯವಿಲ್ಲ. ಅವನಂತಹ ಗುಣಗಳು ಇನ್ನೊಬ್ಬರಲ್ಲಿ ಇಲ್ಲ. ಅವನು ನಮಗೆ ಬೇಕಾಗಿದ್ದನ್ನು ಮಾಡಿಕೊಟ್ಟಿದ್ದಾನೆ. ಹಾಗಾಗಿ ಈಗ ನೀನು ಕಪಿನಾಯಕರಿಗೆ ಅಪ್ಪಣೆ ಕೊಡು. ಎಲ್ಲಾ ಬಂದು ಸೇರಲಿ. ಜಗತ್ತಿನ ಎಲ್ಲಾ ವಾನರವೀರರು ಇಲ್ಲಿ ಬರಲಿ. ರಾಮ ಬಂದು ಹೇಳಿದ ಮೇಲೆ ನಾವು ಮಾಡುವುದು ಸರಿಯಲ್ಲ. ಅದಕ್ಕಿಂತ ಮೊದಲೇ ಕೆಲಸ ಪ್ರಾರಂಭವಾಗಬೇಕು. ನೀನು ಉಪಕಾರ ಮಾಡದವರಿಗೂ ಉಪಕಾರ ಮಾಡುವವನು. ಅಂದಮೇಲೆ ವಾಲಿಯ ವಧೆಯನ್ನು ಮಾಡಿ ರಾಜ್ಯಕೊಡಿಸಿದವನಿಗೆ ಹೇಗಿರಬೇಕು ನೀನು? ನಿನಗೆ ಶಕ್ತಿಯಿದೆ. ಪರಾಕ್ರಮವಿದೆ. ನೀನು ಎಲ್ಲಾ ಕಪಿ-ಕರಡಿಗಳಿಗೆ ರಾಜ. ರಾಮನ ಕಾರ್ಯಕ್ಕೆ ಏಕೆ ವಿಳಂಬವಾಗುತ್ತಿದೆ? ರಾಮ ಮನಸ್ಸು ಮಾಡಿದರೆ ಸುರಾಸುರರನ್ನು ವಶಪಡಿಸಿಕೊಳ್ಳಲು ಹೆಚ್ಚುಕಾಲ ಬೇಡ. ಅವನಿಗೆ ನಾವು ಅನಿವಾರ್ಯವಲ್ಲ. ನಿನ್ನೊಂದಿಗೆ ಒಪ್ಪಂದವಾಗಿದೆ. ಹಾಗಾಗಿ ನಿನ್ನ ಪ್ರತಿಜ್ಞೆ ಪೂರ್ಣವಾಗಲಿ ಎಂದು ಕಾಯುತ್ತಿದ್ದಾನೆ. ಅವನು ನಿನ್ನ ಕಾರ್ಯವನ್ನು ಮಾಡಲು ಏನನ್ನೂ ಲೆಕ್ಕಿಸಲಿಲ್ಲ. ಅವನ ಕಾರ್ಯವನ್ನು ನಾವೆಲ್ಲ ಮಾಡೋಣ. ವೈದೇಹಿಯನ್ನು ಭೂಮಿ, ಆಕಾಶ, ಪಾತಾಳ ಎಲ್ಲೆಡೆ ಹುಡುಕೋಣ.

ರಾಮನನ್ನು ಯಾರೂ ಭಯಪಡಿಸಲು ಸಾಧ್ಯವಿಲ್ಲ. ನಿನಗೆ ಅಗ್ನಿಸಾಕ್ಷಿಮಿತ್ರನಾಗಿ ಒದಗಿ ಬಂದಂಥವನು, ನಮಗೆ ಎಂದೆಂದೂ ಬೇಕಾಗುವವನು. ಅವನಿಗೆ ನಮ್ಮ ಸರ್ವಸ್ವವನ್ನು ಕೊಟ್ಟಾದರೂ, ಅವನ ಕಾರ್ಯವನ್ನು ಮಾಡಬೇಕು. ನಿನ್ನಲ್ಲಿ ಏನೂ ಕೊರತೆಯಿಲ್ಲ. ನಮಗೆಲ್ಲಾ ಅಪ್ಪಣೆ ಮಾಡು. ಎಲ್ಲಾದರೂ ಸಂಚರಿಸಬಲ್ಲ ಸಾಮರ್ಥ್ಯ ನಮಗಿದೆ. ಮೊದಲು ಆಜ್ಞೆ ಮಾಡು ಎಂದಾಗ ಸುಗ್ರೀವನಿಗೆ ಅದು ಹೌದು ಎನ್ನಿಸಿತು. ಹನುಮನ ಮೇಲೆ ಅಷ್ಟು ವಿಶ್ವಾಸ ಸುಗ್ರೀವನಿಗೆ. ಹಾಗಾಗಿ ಅವನಿಗೆ ಸಾಧ್ಯವಾಯಿತು ಈ ಕೆಲಸ. ಹನುಮಂತ ಈ ಕೆಲಸ ಮಾಡದೇ ಇದ್ದಿದ್ದರೆ ಸುಗ್ರೀವನ ಬದುಕು ಕಷ್ಟವಿತ್ತು.

ಸುಗ್ರೀವನಿಗೆ ಒಳ್ಳೆಯ ಬುದ್ಧಿ ಬಂದಿತು. ಕೂಡಲೇ ನೀಲನಿಗೆ ಹೇಳಿಕಳುಹಿಸಿದ. ಅಗ್ನಿಯ ಪುತ್ರ ನೀಲ. ಮಹಾಪರಾಕ್ರಮಶಾಲಿ. ವಾನರರ ಸೇನಾಪತಿ. ದೇವಲೋಕದಲ್ಲಿ ಕೂಡಾ ಅಗ್ನಿಯ ಮಗ ಸ್ಕಂದನೇ ಸೇನಾಪತಿ. ಅವನು ನಿತ್ಯೋತ್ಸಾಹಿ. ನಿರಂತರವಾಗಿ ತನ್ನ ಕಾರ್ಯದಲ್ಲಿ ನಿರತ. ಅವನಿಗೆ ಅಪ್ಪಣೆ ಮಾಡಿದ. ಎಲ್ಲಾ ದಿಕ್ಕುಗಳಿಗೆ ದೂತರನ್ನು ಕಳುಹಿಸು. ಇಡೀ ಪ್ರಪಂಚದಾದ್ಯಂತ ಪಸರಿಸಿರುವ ನಮ್ಮವರನ್ನೆಲ್ಲಾ ಬರಹೇಳು. ಸೇನೆಯೆಲ್ಲವೂ ಬಂದು ಕಿಷ್ಕಿಂಧೆಯಲ್ಲಿ ಸೇರಬೇಕು. ಯೂತಪರು ಒಂದೊಂದು ಗುಂಪಿನ ನಾಯಕರಾಗಿರುತ್ತಾರೆ. ಅವರದೊಂದು ಗುಂಪು. ಅವರಿಗೊಬ್ಬ ನಾಯಕ. ಹನುಮಂತನು ಮಹಾಯೂತಪಯೂತಪ. ಇದರಿಂದ ಕೆಲಸ ಸುಲಭ. ಅವರಿಗೆಲ್ಲಾ ಹೇಳಿಕಳುಹಿಸು. ವೇಗವಾದ ಗತಿಯುಳ್ಳವರಿಗೆ ಅಪ್ಪಣೆ ಕೊಡು. ಅವರು ದೂರದೂರದ ತಮ್ಮ ಸೈನ್ಯವನ್ನು ಕರೆದು ತರಲಿ. ಇದು ನನ್ನ ಅಪ್ಪಣೆ. ಸಮೀಪವಿರುವ ಸೈನ್ಯವನ್ನು ನೀನೇ ನೋಡು. ಅವರೆಲ್ಲಾ ಬಂದಮೇಲೆ ಎಲ್ಲವನ್ನೂ ನೀನೇ ನೋಡಿಕೊಳ್ಳಬೇಕು. ಇವೆಲ್ಲಾ ಹೇಳಿ ಒಂದು ಸುಗ್ರೀವಾಜ್ಞೆ ಮಾಡಿದ. ಮೂರೈದು(15) ದಿನದ ಒಳಗೆ ಯಾರು ಕಿಷ್ಕಿಂಧೆಗೆ ಬರುವುದಿಲ್ಲವೋ ಅವನನ್ನು ವಧಿಸಿ. ವಿಚಾರಣೆಯಿಲ್ಲ. ಅವನ ಅಪ್ಪಣೆಯನ್ನು ಮೀರಲು ಸಾಧ್ಯವಿಲ್ಲ. ವಯಸ್ಸಾದ ವಾನರರನ್ನು ಭೇಟಿಮಾಡಲು ಅಂಗದನಿಗೆ ಸೂಚನೆಯನ್ನು ಕೊಟ್ಟನು. ಹೀಗೆಲ್ಲಾ ವ್ಯವಸ್ಥೆಯನ್ನು ಮಾಡಿ ವಾನರ ನಾಯಕರ ನಾಯಕನು ಪುನಃ ಮನೆ ಸೇರಿದನು. ಮತ್ತೆ ಅದೇ ಸ್ಥಿತಿಗೆ ಹೋದನು.

ಮುಂದಿನ ಕಥಾಭಾಗವನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments