ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಭಗವಂತ ಮನೆಬಾಗಿಲಿಗೆ ಬರುವುದುಂಟು, ಒಮ್ಮೊಮ್ಮೆ ತನ್ನ ದೂತರನ್ನು ಕೂಡಾ ಕಳುಹುವುದುಂಟು. ಆಗ ನಾವು ಕಲ್ಲೆತ್ತಬಾರದು, ಕೋಲೆತ್ತಬಾರದು ಬದಲಾಗಿ ಆದರದಿಂದ ಬರಮಾಡಿಕೊಳ್ಳಬೇಕು. ಏಕೆಂದರೆ ಹಾಗೆ ಬಂದ ಭಗವಂತನು ಅಥವಾ ಅವನ ದೂತನು ನಿಗ್ರಹಿಸಿದರೂ ಅದು ಅನುಗ್ರಹವೇ. ಲಕ್ಷ್ಮಣ ರಾಮನ ದೂತನಾಗಿ ಕಿಷ್ಕಿಂಧೆಯ ಬಾಗಿಲಿಗೆ ಬಂದಾಗ ಅವನಿಗೆ ಮೊದಲು ಸ್ವಾಗತವಾಗಿದ್ದು ಬಂಡೆಗಳು ಮತ್ತು ಮರಗಳಿಂದಲೇ. ಪ್ರಯೋಗ ಮಾಡಲಿಲ್ಲ ಆದರೆ ಎತ್ತಿ ತೋರಿಸಿದ್ದಾರೆ. ತಡವಾದರೂ ಸಹ ಬುದ್ಧಿ ಬಂದಿದೆ. ಕಾಲ ಮಿಂಚಿ ಹೋಗುವ ಮುನ್ನ ಬುದ್ಧಿ ಬಂದಿದ್ದರಿಂದ ಅಂಗದ ಗುಹೆಯ ಬಾಗಿಲ ಬಳಿ ಬಂದ. ಅಂಗದ ವಿನೀತನಾಗಿ ಲಕ್ಷ್ಮಣನ ಬಳಿ ಒಳಗೆ ಬರಬೇಕು ಎಂದು ನಿವೇದನೆ ಮಾಡಿಕೊಂಡ. ಸುಗ್ರೀವನ ಅಪ್ಪಣೆಯಿಂದಲ್ಲ ಬದಲಾಗಿ ರಾಮನ ಅಪ್ಪಣೆಯ ಮೇರೆಗೆ ಲಕ್ಷ್ಮಣ ರಮ್ಯಮನೋಹರವಾದ ಕಿಷ್ಕಿಂಧೆಯನ್ನು ಪ್ರವೇಶಮಾಡಿದ. ಬಾಗಿಲಿನಲ್ಲಿ ಭದ್ರಭಟರು, ಮಹಾಬಲರು, ಘೋರವಾನರರಿದ್ದರು. ಲಕ್ಷ್ಮಣ ಒಳಗೆ ಪ್ರವೇಶಿಸುತ್ತಿರುವಾಗ ಅವರೆಲ್ಲರೂ ತಲೆಬಾಗಿದರು. ಇನ್ನೂ ನಿಟ್ಟುಸಿರು, ಕ್ರೋಧ ಹಾಗೆ ಇದೆ ಲಕ್ಷ್ಮಣನಿಗೆ ಬಹಳಾ ವ್ಯತ್ಯಾಸವೇನೂ ಆಗಿಲ್ಲ ಹಾಗಾಗಿ ಎಂದಿನಂತೆ ಕಪಿಗಳು ಲಕ್ಷ್ಮಣನನ್ನು ಸುತ್ತುವರೆಯಲಿಲ್ಲ. ಅವರ ಪ್ರೀತಿ, ಸದ್ಭಾವ ಅವರ ಹೃದಯದಲ್ಲಿ ಉಳಿಯಿತು ಹೊರತು ವ್ಯಕ್ತವಾಗಿದ್ದು ಗೌರವ ಮತ್ತು ಭಯ ಮಾತ್ರ ಹಾಗಾಗಿ ಪ್ರಾಂಜಲಿಗಳಾಗಿ ಕೈಮುಗಿದರು. ಕಿಷ್ಕಿಂಧೆ ಎಂಬ ಗುಹಾನಗರಿಯನ್ನು ಪ್ರವೇಶಮಾಡಿ ಲಕ್ಷ್ಮಣ ಕಂಡಿದ್ದೇನು?

ಕಿಷ್ಕಿಂಧೆಯು ದಿವ್ಯ, ರಮ್ಯಮಯ, ಮತ್ತು ರತ್ನಮಯವಾಗಿತ್ತು, ಗುಹೆಯೊಳಗೆ ಹೂವುಗಳಿಂದ ಕೂಡಿದ ಕಾಡಿತ್ತು. ಕಿಷ್ಕಿಂಧೆಯೊಳಗೆ ಸಾಲು ಸಾಲಾಗಿ ಬಹಳ ಭವನಗಳಿದ್ದವು. ಪರ್ವತವನ್ನು ಹೋಲುವಂತಹ ದೇವಸ್ಥಾನ, ರಾಜಭವನ, ಮಂತ್ರಿಭವನ, ಶ್ರೀಮಂತರ ಭವನಗಳು ಇದ್ದವು. ಅಲ್ಲಲ್ಲಿ ತಿಳಿನೀರಿನಿಂದ ಕೂಡಿದ ನದಿಗಳು, ತೊರೆ, ಸರೋವರಗಳಿದ್ದವು, ಅಂಗಡಿಗಳ ಸಾಲು ಮತ್ತು ವರ್ಷಪೂರ್ತಿ ಹಣ್ಣು ಬಿಡುವಂತಹ ಮರಗಳಿದ್ದವು. ನೋಡಲು ದೇವಪುತ್ರರು, ಗಂಧರ್ವಪುತ್ರರಾಗಿರುವಂತಹ ವಾನರರು. ತಮಗೆ ಬೇಕಾದ ರೂಪವನ್ನು ತಾಳುವ ಶಕ್ತಿ ಆ ವಾನರರಿಗಿತ್ತು. ದಿವ್ಯ ವಸ್ತ್ರ ಮತ್ತು ಮಾಲೆಗಳನ್ನು ಧರಿಸಿದ ವಾನರರು ಪ್ರಿಯದರ್ಶನರು. ಗುಹೆಯೊಳಗಿನ ಹೆದ್ದಾರಿ ಚಂದನ, ಕಮಲ ಮತ್ತು ಕಪಿಗಳಿಗೆ ಪ್ರಿಯವಾದ ಜೇನಿನ ಪರಿಮಳವನ್ನು ಬೀರುತಿತ್ತು. ಇಂತಹ ಕಿಷ್ಕಿಂಧೆಯೊಳಗೆ ಪ್ರವೇಶಿಸಿದ ಲಕ್ಷ್ಮಣ. ಮೊದಲಾಗಿ ಕಂಡಿದ್ದು ರಮ್ಯವಾದ ಅಂಗದನ ಗೃಹ, ಅಶ್ವಿನಿದೇವತೆಗಳ ಮಕ್ಕಳು ಮೈಂದ್ಯದ್ಯುವಿದರರು ಅವರ ಭವನ, ಗವಯನ ಭವನ, ಗವಾಕ್ಷನ ಭವನ, ವಿದ್ಯುನ್ಮಾಲಿ, ಸಂಪಾತಿ, ಸೂರ್ಯಕ್ಷ ಮತ್ತು ಹನುಮಂತನ ಭವನ. ವೀರಬಾಹು ಮತ್ತು ಸುಬಾಹು ಎಂಬ ವಾನರ ನಾಯಕರ ಭವನ ಮತ್ತು ಮಹಾತ್ಮನಾದ ಕಪಿಗಳ ವಿಶ್ವಕರ್ಮನ ಭವನ, ಕುಮುದನ ಭವನ, ತಾರೆಯ ಪಿತ ಸುಶೇಣನ ಭವನ, ಜಾoಬವಂತನ ಭವನ, ದಧಿಮುಖನ ಭವನ, ಕಪಿಸೇನಾಪತಿ ನೀಲನ ಭವನ, ಸುಪಾಟ ಮತ್ತು ಸುನೇತ್ರರ ಭವನ ಇವೆಲ್ಲವನ್ನೂ ಇಕ್ಕೆಲಗಳಲ್ಲಿ ಕಂಡನು. ಬೆಳ್ಳಿಮೋಡಗಳಂತೆ ಶೋಭಿಸುವ, ಪುಷ್ಪಮಾಲೆಯಿಂದ ಅಲಂಕೃತವಾದ ಭವನಗಳು. ಧನಧಾನ್ಯದಿಂದ, ಸ್ತ್ರೀರತ್ನರಿಂದ ಕೂಡಿದ ಭವನಗಳು. ಇದೆಲ್ಲ ದಾಟಿ ವಾನರಗೃಹಕ್ಕೆ ಬರುತ್ತಾನೆ ಲಕ್ಷ್ಮಣ. ರಾಜಭವನದ ಪ್ರಕಾರಹೇಗಿದೆ ಎಂದರೆ, ಸ್ವಚ್ಚ ಬಿಳಿಯಬಣ್ಣ, ಧವಳಶಿಖರದಂತಹ ಗೋಪುರಗಳು, ಉತ್ತಮೋತ್ತಮವಾದ ಹೂವಿನ ಗಿಡ, ಬಳ್ಳಿಗಳು, ಸರ್ವಕಾಲವೂ ಫಲಗಳಿಂದ ತುಂಬಿರುವ ವೃಕ್ಷಗಳು ಆ ರಾಜಭವನದ ಸುತ್ತಲೂ ಇದ್ದವು. ತನ್ನ ಮಗ ವಾಲಿಗೆ ಇಂದ್ರ ಕೊಟ್ಟಿದ್ದಂತಹ ಅನೇಕ ವೃಕ್ಷಗಳು ಅಲ್ಲಿದ್ದವು. ಶೀತಛಾಯೆ, ದಿವ್ಯಪರಿಮಳಭರಿತ ಹೂವು ಮತ್ತು ಹಣ್ಣುಗಳಿದ್ದ ವೃಕ್ಷಗಳಿಂದ ಕೂಡಿದ ರಾಜಭವನ ಅದು. ಶುಭ್ರವಾದ ದಿವ್ಯಮಾಲೆಗಳನ್ನು ಮತ್ತು ಅಪರಂಜಿ ಚಿನ್ನದಿಂದ ವಿರಚಿತವಾದ, ಕಂಗೊಳಿಸುವ ತೋರಣವನ್ನು ಆ ರಾಜಭವನಕ್ಕೆ ಹಾಕಲಾಗಿತ್ತು. ಸುಗ್ರೀವನ ಮನೆಯ ಬಾಗಿಲಿನಲ್ಲಿ ಅತೀ ಬಲವಂತರಾದ ವೀರವಾನರರು ಆಯುಧಗಳನ್ನು ಹಿಡಿದು ನಿಂತಿದ್ದರು. ಅಂತಹ ರಮ್ಯಮಯವಾದ ಸುಗ್ರೀವನ ಮನೆಯನ್ನು ಲಕ್ಷ್ಮಣ ಪ್ರವೇಶಿಸುವಾಗ ಭಾಸ್ಕರನು ಮಹಾಮೇಘದೊಳಗೆ ಪ್ರವೇಶಿಸಿದಂತೆ ಕಂಡುಬಂತು. ಲಕ್ಷ್ಮಣ ಸುಗ್ರೀವನ ಮನೆಯನ್ನು ಪ್ರವೇಶಿಸುವುದನ್ನು ತಡೆಯುವ ಧೈರ್ಯ ಯಾರಿಗೂ ಇರಲಿಲ್ಲ. ಅಲ್ಲಿ ಏಳು ಕಕ್ಷೆಗಳನ್ನು ದಾಟಿ ಮುಂದಕ್ಕೆ ಹೋಗುತ್ತಾನೆ ಲಕ್ಷ್ಮಣ. ಅಲ್ಲಲ್ಲಿ ಬೆಳ್ಳಿ ಮತ್ತು ಬಂಗಾರದ ಆಸನಗಳು, ಮಂಚಗಳು ಅವುಗಳ ಮೇಲೆ ಉತ್ತಮ ಮೇಲುಹಾಸುಗಳು. ಮಧುರಸ್ವರದ ಸಂಗೀತವೂ ಮತ್ತು ವೀಣಾವಾದನವೂ ಕೇಳಿಬಂತು. ಮತ್ತೂ ಮುಂದುವರೆದಾಗ ರೂಪ, ಯೌವನಗಳ ಗರ್ವವುಳ್ಳ ಅನೇಕ ಸ್ತ್ರೀಯರನ್ನು ಕಂಡನು ಲಕ್ಷ್ಮಣ. ಸುಗ್ರೀವನ ಸೇವಕರನ್ನು ಲಕ್ಷ್ಮಣ ಗಮನಿಸಿದ. ದಿವ್ಯವಸ್ತ್ರಗಳು, ಆಭರಣಗಳನ್ನು ಧರಿಸಿದ್ದರು. ಅವರಲ್ಲಿ ಅತೃಪ್ತರು ಯಾರು ಇಲ್ಲ, ಎಲ್ಲರೂ ತೃಪ್ತರು. ವ್ಯಗ್ರರು ಇರಲಿಲ್ಲ. ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಏಕಾಗ್ರತೆ ಉಳ್ಳವರು. ಗೆಜ್ಜೆಗಳ ಮತ್ತು ಡಾಬುಗಳ ಸದ್ದನು ಕೇಳಿದಾಗ ಲಕ್ಷ್ಮಣನಿಗೆ ನಾಚಿಕೆಯಾಯಿತು ಹಾಗೂ ಸಿಟ್ಟು ಬಂತು, ಧನುಷ್ಠೇoಕಾರವನ್ನು ಮಾಡಿದ. ಆಗ ಗುಹೆ ಮಾರ್ಮೊಳಗಿತು, ದಿಕ್ಕುಗಳು ತುಂಬಿಹೋದವು. ಒಂದು ಮೂಲೆಯಲ್ಲಿ ಮೈಮುದುಡಿ ನಿಂತುಕೊಂಡಾಗ ಅವನಲ್ಲಿ ರಾಮಶೋಕ ಆವರಿಸಿತ್ತು. ಲಕ್ಷ್ಮಣ ಬಂದ ಶಬ್ದವನ್ನು ಕೇಳಿ ಗಡಿಬಿಡಿಯಲ್ಲಿ ತನ್ನ ಆಸನವನ್ನು ಬಿಟ್ಟು ಮೇಲೆದ್ದನು ಸುಗ್ರೀವ. ಮನಸ್ಸಿನಲ್ಲಿ ಅಂದುಕೊಂಡ ಅಂಗದ ಹೇಳಿದ್ದು ಹೌದು, ಲಕ್ಷ್ಮಣ ಬಂದಿದ್ದು ಹೌದು ಮತ್ತು ಲಕ್ಷ್ಮಣನಿಗೆ ಸಿಟ್ಟು ಬಂದಿದ್ದು ಹೌದು. ಸುಗ್ರೀವನ ಮುಖ ಬಾಡಿಹೋಯಿತು, ಆಗ ತಾರೆಯನ್ನು ಕರೆದು ಕೇಳಿದ; ಲಕ್ಷ್ಮಣನಿಗೆ ಸಿಟ್ಟು ಬಂದಿದೆ, ಇದಕ್ಕೆ ಏನು ಕಾರಣ ತಾರೆ? ಇದು ಅವನ ಸ್ವಭಾವ ಅಲ್ಲ, ಅವನದ್ದು ಮೃದುಮನಸ್ಸು. ಆ ನರಶ್ರೇಷ್ಠನು ಅಕಾರಣವಾಗಿ ಕೋಪಮಾಡಿಕೊಳ್ಳುವವನಲ್ಲ. ನಾವೇನಾದರೂ ರಾಮಲಕ್ಷ್ಮಣರ ಮನಸ್ಸಿಗೆ ನೋವನ್ನು ತರುವ ಕೆಲಸವನ್ನು ಮಾಡಿದ್ದೇವಾ? ತಾರೆ ಸರಿಯಾಗಿ ಯೋಚಿಸಿ ಬೇಗ ಹೇಳು ಅಥವಾ ನೀನೇ ಹೋಗಿ ಮಾತನಾಡಿಸು ಅವನನ್ನು ಎಂದ. ಮತ್ತು ಒಂದಿಷ್ಟು ಸಮಾಧಾನದ, ಪ್ರೀತಿಯ ಮಾತುಗಳಿಂದ ಅವನನ್ನು ಪ್ರಸನ್ನಗೊಳಿಸು. ಅವನ ಮನಸ್ಸು ತಿಳಿಯಾದಮೇಲೆ ನಾನು ಅವನನ್ನು ಮಾತನಾಡಿಸುತ್ತೇನೆ ಎಂದ.

“ಮಹಾತ್ಮರಾದವರು ಅಥವಾ ದೊಡ್ಡವರು ಸ್ತ್ರೀಯರಲ್ಲಿ ಯಾವತ್ತೂ ಕೋಪತೋರುವುದಿಲ್ಲ ಅಥವಾ ಸ್ತ್ರೀಯರಲ್ಲಿ ಕೋಪತೋರುವವರು ಮಹಾತ್ಮರಲ್ಲ.”

ತಾರೆ ಭಯಪಡದೇ ಲಕ್ಷ್ಮಣನನ್ನು ಮಾತನಾಡಿಸಲು ಮುಂದಾದಳು. ನಡೆದುಕೊಂಡು ಹೋಗುವಾಗ ಪಾನಗೋಷ್ಠಿಯಲ್ಲಿ ಪಾನ ಮಾಡಿದ ಅಮಲಿನಿಂದ ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದಳು. ಆದರೆ ಅಂತಹ ತಾರೆ ಲಕ್ಷ್ಮಣನ ಬಳಿಗೆ ಬರುವಾಗ ಅವಳ ಮೈಬಾಗಿತ್ತು. ಮುಂದೆ ಸ್ತ್ರೀಯನ್ನು ಕಂಡು ಅವನು ಕೋಪವನ್ನು ಬಿಟ್ಟು ಉದಾಸೀನ, ಲಜ್ಜೆಯ ಭಾವನೆಗೆ ಬಂದುಬಿಟ್ಟ ಲಕ್ಷ್ಮಣ. ಪಾನಗೋಷ್ಠಿಯಲ್ಲಿ ತೊಡಗಿದ ಕಾರಣದಿಂದ ಲಜ್ಜೆ ಬಿಟ್ಟು , ಧೈರ್ಯದಿಂದ ತಾರೆ ಮಾತನಾಡಲು ಪ್ರಾರಂಭಿಸಿದಳು; ಹೇ ರಾಜಕುಮಾರನೇ ಯಾಕೆ ಕೋಪ? ನಿನ್ನ ಆದೇಶವನ್ನು ಮೀರುವ ಧೈರ್ಯ ಇಲ್ಲಿ ಯಾರಿಗಿದೆ? ಇನ್ನು ಯಾರಾದರೂ ನಿನ್ನ ಮಾತನ್ನು ಮೀರುತ್ತಾರೆ ಎಂದರೆ ಅವರು ಸಾವಿಗೆ ಹತ್ತಿರವಿದ್ದಾರೆ ಎಂದರ್ಥ. ಒಣಗಿದ ಮರಗಳ ಕಾಡನ್ನು ಸುಡುವ ಕಾಡ್ಗಿಚ್ಚಿನಲ್ಲಿ ಯಾರಾದರೂ ಹೋಗಿ ಬೀಳುತ್ತಾರಾ? ನಿನ್ನ ಮಾತನ್ನು ಮೀರುವವರು ಕಿಷ್ಕಿಂಧೆಯಲ್ಲಿ ಇಲ್ಲ ಎಂದಾಗ ಲಕ್ಷ್ಮಣ ಪ್ರೀತಿಯುಕ್ತವಾಗಿ ಮಾತನಾಡುತ್ತಾನೆ; ಏನಮ್ಮಾ ನಿನ್ನ ಯಜಮಾನ ಕಾಮವೃತ್ತನಾದ? ದೊರೆಯಾದವನು ಧರ್ಮಸಂಪಾದನೆ, ಅರ್ಥಸಂಪಾದನೆಯನ್ನು ಮಾಡಬೇಕು. ಧರ್ಮ, ಅರ್ಥಕ್ಕೆ ಹಾನಿ. ಉಪಕಾರಕ್ಕೆ ಪ್ರತ್ಯುಪಕಾರ ಮಾಡದಿರುವುದರಿಂದ ಧರ್ಮನಾಶ. ಗುಣವಂತನಾದ ಮಿತ್ರ ಸಂಪತ್ತನ್ನು ಕಳೆದುಕೊಳ್ಳುವುದು ಅರ್ಥನಾಶ. ಧರ್ಮ, ಅರ್ಥ ಬೇಡವಾ ತಾರೆ ಜೀವನಕ್ಕೆ ಎಂದ. ಪತಿಯ ಶ್ರೇಯಸ್ಸನ್ನು ಬಯಸುವವಳು ನೀನೂ ಅರಿಯದೇ ಹೋದೆಯಾ? ನಿನಗೂ ತಿಳಿಯದೇ ಹೋಯಿತಾ? ನೋಡು ತಾರೆ ಈ ಸುಗ್ರೀವನಿಗೆ ನಮ್ಮ ಯೋಚನೆಯೇ ಇಲ್ಲ. ನಾವಲ್ಲಿ ಸೀತೆಯ ವಿಷಯದಲ್ಲಿ ದುಃಖದಲ್ಲಿ ಬೆಟ್ಟದಮೇಲೆ ಕುಳಿತ್ತಿದ್ದರೆ ಇವನಿಗೆ ಅದು ನೆನಪೇ ಇಲ್ಲ. ರಾಮ ಮತ್ತು ಸುಗ್ರೀವನ ಅಂದರೆ ಮಿತ್ರರ ನಡುವೆ ಆದ ಒಪ್ಪಂದ ಅದು. ಅಲ್ಲದೇ ಸೀತೆ ಅಯೋಧ್ಯೆಯ ಕುಲಸ್ತ್ರೀ ಅದು ಅಯೋಧ್ಯೆ ಮತ್ತು ಕಿಷ್ಕಿಂಧೆಯ ನಡುವೆ ಆದ 4 ತಿಂಗಳ ಒಪ್ಪಂದವನ್ನು ಮರೆತು ಹೋದನಾ? 4 ತಿಂಗಳು ಕಳೆದಾಗಿದೆ, ಅನ್ಯಾನ್ಯ ಭೋಗಗಳಲ್ಲಿ ಮಟ್ಟಿ ಅಮಲಿನಲ್ಲಿ ಒಪ್ಪಂದವನ್ನು ಮರೆತು ಹೋಗಿದ್ದಾನೆ. ನೋಡು ತಾರೆ ಧರ್ಮಸಿದ್ಧಿಗೆ, ಅರ್ಥಸಿದ್ಧಿಗೆ ಮೂರು ಹೊತ್ತು ಪಾನ ಮಾಡಬೇಕು ಎಂದು ಹೇಳಿದ್ದಾರಾ? ಹಾಗೆ ಕುಡಿಯುವುದರಿಂದ ಮೊದಲು ಧರ್ಮಲೋಪ, ಅರ್ಥಲೋಪ ನಂತರ ಎಲ್ಲಾ ಕಳೆದಕೊಂಡಮೇಲೆ ಕಾಮಲೋಪ. ಪ್ರಯೋಜನ ಏನು? ನೋಡು ಯಾರಿಂದ ಉಪಕಾರವಾಗಿದೆಯೋ ಅವರಿಗೆ ಪ್ರತ್ಯುಪಕಾರ ಮಾಡದಿದ್ದರೆ ದೊಡ್ಡ ಹಾನಿಯಾಗುತ್ತದೆ. ಯಾರೊಬ್ಬ ಜೊತೆಗಿದ್ದರೆ ಸರ್ವಸಂಪತ್ತು ಜೊತೆಗಿದ್ದಂತೆಯೋ ಅಂತಹ ಉತ್ಕೃಷ್ಟ ಮಿತ್ರನನ್ನು ಯಾರಾದರೂ ಕಳೆದುಕೊಳ್ಳುತ್ತಾರಾ? ಎರಡನ್ನೂ ಬಿಟ್ಟು ಕುಳಿತಿದ್ದಾನೆ ನಿನ್ನ ವಲ್ಲಭ ಮತ್ತು ಧರ್ಮದಲ್ಲಿ ನೆಲೆನಿಲ್ಲಲಿಲ್ಲ. ನೋಡು ಈಗ ಇಲ್ಲಿಯವರೆಗೆ ಬಂದು ನಿಂತಿದೆ ವಿಷಯ. ನೀನು ಕಾರ್ಯತತ್ವಜ್ಞೆ ನೀನೇ ಹೇಳು ಮುಂದೆ ಏನು ಮಾಡಬೇಕು ಎಂಬುದಾಗಿ ತಾರೆಗೆ ಬಿಟ್ಟ. ಲಕ್ಷ್ಮಣನ ಮಾತು ಸೂಕ್ತವಾಗಿ ಇತ್ತು, ಯಾವ ಲೋಪವೂ ಇರಲಿಲ್ಲ ಬಹಳಾ ಮಧುರವಾಗಿ ಮಾತನಾಡಿದ್ದಾನೆ ಲಕ್ಷ್ಮಣ.

ತಾರೆ ಲಕ್ಷ್ಮಣನ ಮಾತನ್ನು ಕೇಳುತ್ತಾಳೆ. ಹೌದು ರಾಮನ ಕಾರ್ಯವು ಇನ್ನೂ ಪೂರೈಸಿಲ್ಲ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು. ಆ ಕಾರ್ಯವನ್ನು ನಡೆಸುವಂತಹ ವಿಶ್ವಾಸದಲ್ಲಿ ಲಕ್ಷ್ಮಣನಿಗೆ ಹೇಳುತ್ತಾಳೆ; ಕೋಪಕ್ಕಿದು ಕಾಲವಲ್ಲ ಲಕ್ಷ್ಮಣ ಮತ್ತೆ ಅತಿ ಕೋಪವನ್ನು ನಾವು ನಮ್ಮ ಜನರ ಮೇಲೆ ಮಾಡಬಾರದು. ನಿಜವಾಗಿಯೂ ನಿಮ್ಮ ಮೇಲೆ ಪ್ರೀತಿ, ಒಲವು ಇಟ್ಟಿರುವವನು ಸುಗ್ರೀವ. ನಿಮ್ಮ ಕಾರ್ಯಸಾಧನೆ ಆಗಬೇಕು ಎನ್ನುವುದು ಅವನ ಅಪೇಕ್ಷೆಯೂ ಹೌದು, ಪ್ರಮಾದವಾಗಿದೆ ಆದರೆ ಅದಕ್ಕೆ ಕ್ಷಮೆಯಿದೆ. ಮತ್ತೆ ನೀನು ಉತ್ಕೃಷ್ಟ ಸುಗ್ರೀವ ನಿನಗೆ ಸಮಾನನಲ್ಲ, ತಪೋಗುಣನಾದ ನಿನಗೆ ಕೋಪ ಸರಿ ಹೊಂದುವುದಿಲ್ಲ. ಸುಗ್ರೀವನ ಪರಮಬಂಧು ರಾಮನಿಗೆ ಕೋಪ ಏಕೆ ಎಂದು ನನಗೆ ಗೊತ್ತು. ರಾಮಕಾರ್ಯಕ್ಕೆ ಯಾವ ಕಾಲ ಸರಿ ಯಾವ ಕಾಲ ತಪ್ಪು ಎಂಬುದನ್ನೂ ನಾನು ತಿಳಿದಿದ್ದೇನೆ. ಮತ್ತೆ ನಿಮ್ಮಿಂದ ಸುಗ್ರೀವನಿಗೆ, ಕಿಷ್ಕಿಂಧೆಗೆ ಆದ ಉಪಕಾರವನ್ನೂ ಬಲ್ಲೆ. ಈಗ ತಪ್ಪಾದದನ್ನು ಸರಿಮಾಡುವುದನ್ನೂ ಬಲ್ಲೆ. ಹಾಗೆಯೇ ಕಾಮನೆಗಳು, ಭೋಗವಾಂಛೆಯ ಶಕ್ತಿಯನ್ನೂ ಕೂಡ ಬಲ್ಲೆ. ಸುಗ್ರೀವನ ಬುದ್ದಿಕೆಟ್ಟಿಲ್ಲ, ನಿರ್ಧಾರ ಬದಲಾಗಿಲ್ಲ ಆದರೆ ಕಾಮನೆಗಳು ಕೊಚ್ಚಿಕೊಂಡು ಹೋಗಿದೆ ಅವನನ್ನು. ನಿನಗೆ ಅದು ಅರ್ಥ ಆಗುವುದಿಲ್ಲ ಯಾಕೆಂದರೆ ನೀನು ಕಾಮಪ್ರಧಾನ ಅಲ್ಲ. ಈಗ ನೀನು ಕ್ರೋಧವಶನಾಗಿಲ್ಲವಾ ಹಾಗೆಯೇ ಸುಗ್ರೀವ ಕಾಮವಶನಾಗಿದ್ದಾನೆ. ನೋಡು ಲಕ್ಷ್ಮಣ ಯಾವ ಮನುಷ್ಯನು ಕಾಮವಶನಾಗಿರುತ್ತಾನೋ ಅವನಿಗೆ ದೇಶ, ಕಾಲಗಳು ಮರೆತು ಹೋಗುತ್ತದೆ. ಅದು ಕಾಮದ ಸ್ವಭಾವ. ಈಗಾದ ತಪ್ಪಿಗೆ ಸುಗ್ರೀವ ಮಾತ್ರ ಅಲ್ಲ ನಾವೆಲ್ಲರೂ ಕಾರಣ. ಹಾಗಾಗಿ ದೌರ್ಬಲ್ಯಕ್ಕೆ ಒಳಗಾಗಿ ಕೊಂಚದೂರ ಹೋಗಿರುವ ನಿನ್ನ ಸಹೋದರನನ್ನು ಕ್ಷಮಿಸು. ಮತ್ತೆ ಇದು ಸುಗ್ರೀವನಿಗೆ ಮಾತ್ರ ಅಲ್ಲ ದೊಡ್ಡ ದೊಡ್ಡ ಋಷಿಗಳಿಗೂ ಹೀಗೆ ಆಗಿದೆ. ಮಹರ್ಷಿಗಳೆಂದರೆ ಏನು? ಅವರು ಧರ್ಮಕಾಮರು, ತಪಃಕಾಮರು ಅಂತವರು ಮೋಹಕ್ಕೆ ಒಳಗಾಗಲಿಲ್ಲವಾ? ಅವರ ಮುಂದೆ ಇವನೇನು? ಸುಗ್ರೀವ ನೈಸರ್ಗಿಕವಾಗಿ ಚಂಚಲ ಮನಸ್ಥಿತಿಯವನು ಎಂಬುದಾಗಿ ಹೇಳಿದಳು. ವಿಶ್ವಾಮಿತ್ರರ ಒಂದು ಉದಾಹರಣೆಯನ್ನು ನೀಡಿದಳು.

ವಿಶ್ವಾಮಿತ್ರರ ಆಶ್ರಮಕ್ಕೆ ಘೃತಾಚಿ ಬಂದಳು. ವಿಶ್ವಾಮಿತ್ರರು ಕಾಮ ಪರವಶರಾದರು, ಮೋಹ ಪರವಶರಾದರು. ನಂತರ ಆಕೆಯ ಜೊತೆ ಸಂಸಾರವನ್ನೇ ಮಾಡಿದರು. ಅದು ಪುಷ್ಕರ ಸರೋವರದ ಪರಿಸರದಲ್ಲಿ ನಡೆದ ಘಟನೆ. ಕೊನೆಗೆ ಒಂದು ದಿನ ಸಂಧ್ಯಾವಂದನೆಗೆ ಹೊರಟಾಗ ಅವರ ಪರಿಕರಗಳು ಒಂದೂ ಸಿಗಲಿಲ್ಲ. ಅದನ್ನು ಹುಡುಕುತ್ತಿದ್ದಾಗ, ಘೃತಾಚಿ ಹೇಳಿದಳು; ನೀವು ಸಂಧ್ಯಾವಂದನೆ ಮಾಡದೇ ಯಾವ ಕಾಲವಾಗಿದೆ ಎಂಬುದು ತಿಳಿದಿದೆಯಾ? ಆಗ ಹೇಳಿದರು; ಬೆಳಿಗ್ಗೆ ಮಾಡಿದ್ದೆ ನಂತರ ನೀನು ಬಂದೆ ಈಗ ಸಂಜೆಯಾಗಿದೆ ಸಂಧ್ಯಾವಂದನೆಯ ಕಾಲ ಎಂದರು. ಆಗ ಆಕೆ ಹೇಳಿದಳು; ಒಂದು ದಿನವಲ್ಲ. ಹತ್ತು ವರ್ಷ ಕಳೆದಿದೆ. ಹತ್ತು ವರ್ಷವನ್ನು ಒಂದು ಹಗಲು ಎಂದು ಭಾವಿಸಿದ ಧರ್ಮಾತ್ಮಾ.

ಹಾಗಾಗಿ ವಿಶ್ವಾಮಿತ್ರರೇ ಹಾಗೆ ಎಂದ ಮೇಲೆ ಸುಗ್ರೀವ ಇನ್ನೇನು? ಎಂದಾಗ ಅದು ಹೌದು ಎಂದು ಎನಿಸಿತಂತೆ ಲಕ್ಷ್ಮಣನಿಗೆ. ಮತ್ತೆ ಹೇಳಿದಳು; ಲಕ್ಷ್ಮಣ ಕಿಷ್ಕಿಂಧೆ ಸುಮ್ಮನೆ ಕುಳಿತಿಲ್ಲ ನಿಮ್ಮ ಸೇವೆಯಲ್ಲಿ ನಿರತವಾಗಿದೆ. ಜಗತ್ತಿನಲ್ಲಿರುವ ವಾನರ ಸೇನಾಪತಿಯನ್ನು, ಸೈನಿಕರನ್ನು ಕರೆತರಲು ಬಹುಕಾಲದ ಹಿಂದೆಯೇ ಸುಗ್ರೀವನಿಂದ ಆಜ್ಞೆಯಾಗಿದೆ. ಹೀಗೆ ಕಾಮವಶನಾಗಿ ಕೊಚ್ಚಿಕೊಂಡು ಹೋಗುವಾಗಲೂ ಕೂಡಾ ಈ ಕೆಲಸವನ್ನು ಮಾಡಿದ್ದಾನೆ ಸುಗ್ರೀವ. ಮೆಚ್ಚಬೇಕು ಅದನ್ನು. ರಾಮಕಾರ್ಯದ ಆಜ್ಞೆಯಿಂದಾಗಿ ಕಿಷ್ಕಿಂಧೆಯು ಈಗಾಗಲೇ ಉದ್ಯುಕ್ತವಾಗಿದೆ. ಕಪಿರಾಜನ ಆಜ್ಞೆಯನ್ನು ಪಾಲಿಸಿ ಅಸಂಖ್ಯಾತ ಕಪಿಗಳು ಈಗಾಗಲೇ ಕಿಷ್ಕಿಂಧೆಯನ್ನು ತಲುಪಿವೆ. ಅವರು ಇಲ್ಲಿಯವರಲ್ಲ. ವಿಂಧ್ಯ ಪರ್ವತ, ಮೇರುಪರ್ವತ, ಮಲೆಯ ಪರ್ವತದಲ್ಲಿ ವಾಸಿಸುವ ಕಪಿಗಲೆಲ್ಲಾ ಬಂದಿವೆ ಹಾಗಾಗಿ ಕಾರ್ಯವೇನು ಕೆಟ್ಟಿಲ್ಲ ಎಂದು ಹೇಳಿ, ಬಾ ಸುಗ್ರೀವನನ್ನು ಕಾಣಲು ತೆರಳೋಣ ಎಂದಾಗ ಲಕ್ಷ್ಮಣ ಹೆಜ್ಜೆಯನ್ನು ಕಿತ್ತಿಡಲಿಲ್ಲ. ಆಗ ಅವನಿಗೆ ಸಮಾಧಾನ ಮಾಡಿದಳು. ಇಲ್ಲಪ್ಪಾ ನಿನ್ನ ಚಾರಿತ್ರ್ಯಕ್ಕೆ ಏನೂ ತೊಂದರೆ ಆಗುವುದಿಲ್ಲ ಎಂದು ಒತ್ತಾಯ ಮಾಡಿದಾಗ ಬಂದ. ಅವನು ಬರಲು ಎರಡು ಕಾರಣ ಒಂದು ತಾರೆಯ ಒಪ್ಪಿಗೆಯ ಮೇರೆಗೆ ಅಂತಃ ಪುರಕ್ಕೆ ಬರಲು ಒಪ್ಪಿದ ಮತ್ತೆ ಇನ್ನೊಂದು ಕಾರ್ಯಸಾಧನೆ.

ಸುಗ್ರೀವನ ಅಂತಃಪುರವನ್ನು ಪ್ರವೇಶಮಾಡುತ್ತಾನೆ ಲಕ್ಷ್ಮಣ. ಅಲ್ಲಿ ಸುಗ್ರೀವ ಬಂಗಾರದ ಸಿಂಹಾಸನದ ಮೇಲೆ ಕುಳಿತಿದ್ದ. ಸೂರ್ಯನಂತೆ ಶೋಭಿಸುತ್ತಿದ್ದಾನೆ. ದಿವ್ಯಾಭರಣಗಳು, ದಿವ್ಯರೂಪ, ಮಾಲೆಗಳು. ದೇವೇಂದ್ರನಂತೆ ಕಾಣುತ್ತಿದ್ದಾನೆ. ಸುತ್ತಮುತ್ತಲೂ ಅನೇಕ ಸ್ತ್ರೀಯರು. ಅದನ್ನು ನೋಡಿದ ಮೇಲೆ ಲಕ್ಷ್ಮಣನ ಮನಸ್ಸು ಮತ್ತೆ ಹಾಳಾಗಿತು. ಸುಗ್ರೀವನ ಯೋಜನೆ ವಿಫಲವಾಗಿದೆ. ಕುಪಿತನಾದ ಲಕ್ಷ್ಮಣ.

ಒಳ್ಳೆಯ ಬಂಗಾರದ ಬಣ್ಣ ಸುಗ್ರೀವನದ್ದು. ಇಬ್ಬರೂ ಒಬ್ಬರನ್ನೊಬ್ಬರು ನೋಡಿದರು. ಅದು ಹೇಗಿತ್ತು ಎಂದರೆ; ವಿಶಾಲನೇತ್ರನಾದ ಸುಗ್ರೀವನು ಸುವಿಶಾಲನೇತ್ರನಾದ ಲಕ್ಷ್ಮಣನನ್ನು ನೋಡಿದ. ಲಕ್ಷ್ಮಣನ ಕೋಪವನ್ನು ನೋಡಿ ಸುಗ್ರೀವನಿಗೆ ವ್ಯಥೆಯಾಯಿತು. ಉಸಿರು ಬಿಡುತ್ತಿದ್ದಾನೆ ಲಕ್ಷ್ಮಣ, ಅಣ್ಣನ ದುಃಖ ಕೋಪ ತಂದಿದೆ. ಲಕ್ಷ್ಮಣನನ್ನು ಕಂಡು ಆಸನವನ್ನು ತೊರೆದೆದ್ದನು ಸುಗ್ರೀವ. ಸುಗ್ರೀವ ಎದ್ದು ನಿಂತಾಗ ಇಂದ್ರಧ್ವಜದಂತೆ ಶೋಭಿಸಿದನು. ಅವನ ಜೊತೆ ರುಮೆ ಮೊದಲಾದ ಎಲ್ಲಾ ಸ್ತ್ರೀಯರು ಎದ್ದು ನಿಂತರು. ಆಗ ಪೂರ್ಣ ಚಂದ್ರನ ಸುತ್ತಲೂ ಇರುವ ನಕ್ಷತ್ರದಂತೆ ಶೋಭಿಸಿತು. ಸುಗ್ರೀವನ ಕಣ್ಣು ಕೊಂಚ ಕೆಂಪಾಗಿದೆ ಅದಕ್ಕೆ ಪಾನಗೋಷ್ಠಿ ಕಾರಣ. ಅವನು ಕೈಮುಗಿದು ಲಕ್ಷ್ಮಣನನ್ನು ಸಮೀಪಿಸುತ್ತಾನೆ. ಸ್ರ್ತೀಯರ ಜೊತೆಯಿರುವ ಸುಗ್ರೀವನನ್ನು ನೋಡಿ ಲಕ್ಷ್ಮಣ ಕಠೋರವಾದ ಮಾತನ್ನು ಹೇಳಿದನು; ಒಳ್ಳೆಯ ಕುಲದಲ್ಲಿ ಹುಟ್ಟಿದವನು, ರಾಜನಾದವನು, ಕರುಣೆ ಉಳ್ಳವನಾಗಿ, ಇಂದ್ರಿಯಗಳನ್ನು ಗೆದ್ದವನಾಗಿ, ಸತ್ಯವಾದಿಯಾಗಿ ಇದ್ದರೆ ಆ ರಾಜನಿಗೆ ವಿಖ್ಯಾತಿ ಬರುತ್ತದೆ. ಆ ರಾಜನನ್ನು ಲೋಕ ಮಾನ್ಯಮಾಡುತ್ತದೆ. ಲಕ್ಷ್ಮಣನ ಪರೋಕ್ಷ ಪ್ರಶ್ನೆ; ನೀನು ಯಾವ ಕುಲದಲ್ಲಿ ಹುಟ್ಟಿದವನು? ನೀನು ಮಾಡುತ್ತಿರುವುದು ಏನು? ನಿನಗೆ ಅನುಕಂಪ ಬೇಡವಾ? ರಾಜನಿಗೆ ಇಂದ್ರಿಯಜಯ ಬೇಡವಾ? ಕೃತಜ್ಞತೆ ಬೇಡವಾ? ಲೋಕದಲ್ಲಿ ಯಾವ ರಾಜನಿಗೆ ಮಹತ್ವ ಬರುತ್ತದೆ ಎಂದರೆ ಯಾರು ಸತ್ವ, ಗುಣ, ಕುಲಸಂಪನ್ನನೂ, ಸತ್ಯವಾದಿಯೋ, ಕೃತಜ್ಞನೋ ಅಂತವನಿಗೆ ಲೋಕದಲ್ಲಿ ರಾಜನಾಗಿ ಮಹತ್ವ ಬರುತ್ತದೆ. ಇನ್ನು ಯಾವ ರಾಜ ಧರ್ಮದಲ್ಲಿ ನೆಲೆನಿಲ್ಲದೆ, ಅಧರ್ಮವನ್ನು ಹೊಂದಿ, ಪೂರ್ವಉಪಕಾರ ಮಾಡಿದ ಮಿತ್ರರಿಗೆ ಕೊಟ್ಟ ಮಾತನ್ನು ತಪ್ಪುತ್ತಾನೋ, ಮಿಥ್ಯಾಪ್ರತಿಜ್ಞನಾಗುತ್ತಾನೋ ಅವನಿಗಿಂತ ಘಾತುಕರು ಯಾರು? ಅಂತವನು ಘಾತುಕ.

“ಕುದುರೆಯ ವಿಷಯದಲ್ಲಿ ಒಂದು ಸುಳ್ಳು ಹೇಳಿದರೆ ಅದು ನೂರು ಕುದುರೆಯನ್ನು ಕೊಂದ ಪಾಪ ಬರುತ್ತದೆ. ಗೋವಿನ ವಿಷಯದಲ್ಲಿ ಒಂದು ಸುಳ್ಳು ಹೇಳಿದರೆ ಅದು ಸಾವಿರ ಗೋವನ್ನು ಕೊಂದಷ್ಟು ಪಾಪ. ಇನ್ನು ಮನುಷ್ಯರ ವಿಷಯದಲ್ಲಿ ಸುಳ್ಳು ನುಡಿದರೆ ತನ್ನನ್ನು ಹತ್ಯೆಮಾಡಿಕೊಂಡು ಮತ್ತು ತಮ್ಮವರೆಲ್ಲರನ್ನೂ ಹತ್ಯೆ ಮಾಡಿ ಕೊಂದ ಪಾಪ.” ಮಿತ್ರರಿಗೆ ಮಾತುಕೊಟ್ಟು ಆ ಮಾತನ್ನು ನಡೆಸದಿದ್ದರೆ ಅದು ದಂಡನೆಗೆ ಯೋಗ್ಯ.

ಸರ್ವಲೋಕ ನಮಸ್ಕೃತನಾದ ಬ್ರಹ್ಮದೇವನ ಒಂದು ಶ್ಲೋಕವನ್ನು ಉಲ್ಲೇಖಿಸುತ್ತಾನೆ ಲಕ್ಷ್ಮಣ. ಬ್ರಹ್ಮದೇವ ಕೃತಘ್ನನನ್ನು ಕುರಿತು ಕೋಪಗೊಂಡು ಉಲ್ಲೇಖಿಸಿದ ಶ್ಲೋಕ; “ಬ್ರಹ್ಮಹತ್ಯೆಗೆ ಪ್ರಾಯಶ್ಚಿತ್ತ ಇದೆ, ಸುರಾಪಾನಕ್ಕೆ ಪ್ರಾಯಶ್ಚಿತ್ತ ಇದೆ, ಗೋಹತ್ಯೆಗೆ ಪ್ರಾಯಶ್ಚಿತ್ತ ಇದೆ, ವ್ರತಭಂಗಕ್ಕೆ ಪ್ರಾಯಶ್ಚಿತ್ತ ಇದೆ ಆದರೆ ಕೃತಘ್ನತೆಗೆ ಪ್ರಾಯಶ್ಚಿತ್ತ ಇಲ್ಲ”. ಬ್ರಹ್ಮವಾಣಿ ಇದು.

ಇಷ್ಟನ್ನೂ ಗಂಭೀರವಾಗಿ ಹೇಳಿದ. ಇನ್ನೂ ಕೋಪಗೊಂಡು, ನೇರವಾಗಿ ಸುಗ್ರೀವನನ್ನು ಕುರಿತು ಆಕ್ಷೇಪಿಸುತ್ತಾನೆ; ಅನಾರ್ಯ ನೀನು, ಸುಳ್ಳುಗಾರ ನೀನು, ಕೃತಘ್ನ, ಮಿಥ್ಯಾವಾದಿ. ರಾಮನಿಂದ ಉಪಕಾರವನ್ನು ಪಡೆದು ರಾಮನಿಗೆ ಪ್ರತ್ಯುಪಕಾರವನ್ನು ಮಾಡಲಿಲ್ಲವಲ್ಲಾ ನೀನು. ನಿನ್ನ ಕಾರ್ಯಸಿದ್ಧಿಯಾದ ಬಳಿಕ ಸೀತಾನ್ವೇಷಣೆಯನ್ನು ಮಾಡಬೇಕಿತ್ತು. ಪ್ರಯತ್ನವನ್ನಾದರೂ ಮಾಡಬಹುದಿತ್ತು ಬದಲಾಗಿ ಚಿಲ್ಲರೆ ಸುಖದಲ್ಲಿ ಮುಳುಗಿ ಆಡಿದ ಮಾತನ್ನು ತಪ್ಪಿದೆಯಲ್ಲಾ. ರಾಮನಿಗೆ ನೀನು ಯಾರು ಎಂಬುದು ತಿಳಿಯದೆ ಹೋಯಿತು. ಕಪ್ಪೆಯಂತೆ ಸದ್ದುಮಾಡುವ ಸರ್ಪ ನೀನು. ರಾಮನು ಮಹಾತ್ಮ, ಕರುಣಾಮಯೀ ನಿನ್ನಂತಹ ಕ್ಷುದ್ರನಿಗೆ ವಾನರಸಾಮ್ರಾಜ್ಯವನ್ನೇ ಕೊಡಿಸಿದ. ಆದರೆ ನೀನು ಮಾಡುತ್ತಿರುವುದೇನು? ಒಪ್ಪಂದದಂತೆ ನಡೆಯದಿದ್ದರೆ, ರಾಮಕಾರ್ಯವನ್ನು ಮಾಡದಿದ್ದರೆ ನಮ್ಮ ಬಾಣಗಳ ಫಲವಾಗಿ ವಾಲಿಯನ್ನು ಕಾಣುತ್ತೀಯ. ಸಿಟ್ಟಿನಲ್ಲಿ ಅಣ್ಣ ರಾಮ ಹೇಳಬೇಡ ಎಂದಿದ್ದ ಶ್ಲೋಕವನ್ನು ಹೇಳಿದ; ವಾಲಿಯು ಹೋದ ದಾರಿ ಇನ್ನೂ ತೆರೆದೇ ಇದೆ. ಹಾಗಾಗಿ ಮಾತಿಗೆ ನಿಲ್ಲು ಇಲ್ಲವೇ ವಾಲಿಯ ದಾರಿಯನ್ನ ಹಿಡಿ. ಸುಗ್ರೀವ ನಡುಗಿ ಹೋದ. ಅವನಿಗೆ ತನ್ನ ಅಂತ್ಯಕಾಲ ಸಮೀಪವಿದೆ ಎಂದೆನಿಸಿತು. ಆಗ ಸುಗ್ರೀವನನ್ನು ಕಾಪಾಡಲು ತಾರೆ ಮುಂದೆ ಬಂದಳು. ಚಂದ್ರಮುಖವುಳ್ಳ ತಾರೆ ಲಕ್ಷ್ಮಣನ ಮೇಲೆ ಬೆಳಕು ಚೆಲ್ಲಿದಳು. ಅವರಿಬ್ಬರ ಮಧ್ಯ ನಿಂತು ಹೇಳಿದಳು; ಲಕ್ಷ್ಮಣ ಹೀಗೆ ಹೇಳಬೇಡ. ಈ ಕ್ರೂರ ಮಾತುಗಳು ಸುಗ್ರೀವನಿಗೆ ಸಲ್ಲುವುದಿಲ್ಲ. ಅದು ನಿನ್ನ ಬಾಯಿಂದ ಸುಗ್ರೀವನಿಗೆ ಇಂತಹ ಮಾತುಗಳು ಬರಬಾರದು. ಸುಗ್ರೀವ ಕೃತಘ್ನನಲ್ಲ, ಸುಳ್ಳುಗಾರನಲ್ಲ, ಮೊಸಗಾರನಲ್ಲ. ನೀವು ಮಾಡಿದ ಉಪಕಾರವನ್ನು ಸುಗ್ರೀವ ಮರೆತಿಲ್ಲ. ರಾಮ ಮಾಡಿದ ಕಾರ್ಯ ಸಣ್ಣದಾ? ಸುಗ್ರೀವನ ಸಲುವಾಗಿ ರಾಮ ಮಾಡಿದ ಕಾರ್ಯವನ್ನು ಇನ್ಯಾರು ಮಾಡಲು ಸಾಧ್ಯವಿಲ್ಲ. ಅದು ಅವನಿಗೆ ನೆನಪಿದೆ. ರಾಮನ ಕೃಪೆಯಿಂದ ಸುಗ್ರೀವನಿಗೆ ಕೀರ್ತಿಲಭಿಸಿತು, ಕಪಿರಾಜ್ಯ ಲಭಿಸಿತು. ಹಾಗೆಯೇ ರುಮೆ ಮತ್ತು ನಾನು ಇಬ್ಬರೂ ಕೂಡ ಸುಗ್ರೀವನಿಗೆ ಲಭಿಸಿದ್ದರೆ ಅದು ರಾಮನ ಕರುಣದಿಂದ. ಆಗಿದ್ದೇನು? ಸುಗ್ರೀವ ಋಷ್ಯಮೂಖಪರ್ವತದ ಮೇಲೆ ಸುಖವನ್ನೇ ಕಾಣದೇ ಕಷ್ಟದಿಂದ ಕಳೆದ ಕಾಲವೆಷ್ಟೋ. ಯಾವ ಸುಖವನ್ನೂ ಕಾಣದವನಿಗೆ ಇದ್ದಕ್ಕಿದ್ದಂತೆ ಸುಖಸಿಕ್ಕಂತಾಗಿದೆ. ವಿಶ್ವಾಮಿತ್ರರಂತೆ ಆಗಿದೆ. ಸುಗ್ರೀವನಿಗೆ ಏನಾಗಿದೆ? ಕಾಯಿಲೆ ಏನು ಎಂದರೆ ದೇಹಧರ್ಮವನ್ನು ಹೊಂದಿದ್ದಾನೆ ಸುಗ್ರೀವ. ಮನಸ್ಸು ಕೆಟ್ಟಿಲ್ಲ ಆದರೆ ಮನಸ್ಸು ದೇಹಬಯಸುವ ಸುಖಗಳಲ್ಲಿ ಹಾಳಾಗಿದೆ. ಬಳಲಿ ಬೆಂಡಾಗಿ ಬಂದವನು ಕಿಷ್ಕಿಂಧೆಗೆ ಸುಗ್ರೀವ ಹಾಗಾಗಿ ಎಷ್ಟೋ ಕಾಲದ ಹಸಿವು ತೃಪ್ತಿಯಾಗಿಲ್ಲ. ಸಿಕ್ಕಿದ ಹಾಗೆ ಮತ್ತೂ ಬೇಕು ಎಂದು ಎನಿಸುವಂತೆ ಆಗಿದೆ. ರೋಷವನ್ನು ಹೊಂದಬೇಡ. ಸಾಮಾನ್ಯ ಮನುಷ್ಯನಂತೆ ನೀನು ಕೋಪ ಮಾಡಿಕೊಳ್ಳಬಾರದು. ಇದೋ ಒಂದೇ ಮನಸ್ಸಿನಿಂದ ನಿನಗೆ ಶರಣಾದೆ, ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ ನಾನು. ಸುಗ್ರೀವನ ಸಲುವಾಗಿ ರೋಷದಿಂದ ಬಂದ ಕ್ಷೋಭೆಯನ್ನು ತ್ಯಜಿಸು. ರಾಮನಿಗೆ ಸಂತೋಷ ತರುವುದರ ಸಲುವಾಗಿ ಸುಗ್ರೀವ ರುಮೆಯನ್ನು ಬಿಟ್ಟ. ನನ್ನನ್ನು ತ್ಯಜಿಸಿಯಾನು, ಕಪಿರಾಜ್ಯವನ್ನೂ, ಧನಧಾನ್ಯ ಸಂಪತ್ತನೂ ತ್ಯಜಿಸಿಯಾನು. ಗೊತ್ತಿಲ್ಲದೇ ಆದ ತಪ್ಪು ಇದು. ತಿಳಿದು ಮಾಡುವುದಾದರೆ ನಮ್ಮೆಲ್ಲರನ್ನೂ ರಾಮನಿಗಾಗಿ ತ್ಯಜಿಸಿಯಾನು, ಅದು ಮಾತ್ರವಲ್ಲ ರಾಮಸೀತೆಯನ್ನು ಒಂದುಗೂಡಿಸುವಲ್ಲಿ ಸುಗ್ರೀವ ಸಫಲನಾಗಿಯೇ ಆಗುತ್ತಾನೆ. ಯಾವ ಸಂಶಯವೂ ಇಲ್ಲ. ಆದರೆ ಸುಗ್ರೀವನೊಬ್ಬನೇ ಹೋಗುವಂತಿಲ್ಲ. ಲಂಕೆಯಲ್ಲಿ ಇರುವ ರಾಕ್ಷಸರ ಸಂಖ್ಯೆಯನ್ನು ವಾಲಿ ನನಗೆ ಹೇಳಿದ್ದಾನೆ. ಅದು ಬಹುದೊಡ್ಡ ಸಂಖ್ಯೆ. ಅಂತಹ ರಾವಣನ ಬಲವನ್ನು ಸುಗ್ರೀವನೊಬ್ಬನೇ ಹೋಗಿ ನಿಗ್ರಹಮಾಡಲು ಸಾಧ್ಯವಿಲ್ಲ ಎಂಬುದಾಗಿ ವಾಲಿ ನನಗೆ ಹೇಳಿದ್ದ. ಸ್ವತಃ ನಾನು ಲಂಕೆಗೆ ಹೋಗಿ ನೋಡಿಲ್ಲ. ನನಗೆ ವಾಲಿ ಹೇಳಿದ ಮಾತುಗಳು ಗೊತ್ತು. ಹಾಗಾಗಿ ಇಡೀ ಜಗತ್ತಿನಲ್ಲಿ ಇರುವಂತಹ ಕಪಿಗಳನ್ನು ಕರೆತರಲು ರಾಜಾಜ್ಞೆಯಾಗಿದೆ. ಸುಗ್ರೀವನು ಅವರ ನೀರಿಕ್ಷೆಯಲ್ಲಿ ಇರುವಂತದ್ದು. ಅವರೆಲ್ಲರೂ ಬಂದ ಕೂಡಲೇ ಹೊರಡುವುದೇ. ಇನ್ನು ಸುಗ್ರೀವನು 15 ದಿನದ ಗಡುವನ್ನು ಕೊಟ್ಟಿದ್ದಾನೆ. ಅಷ್ಟರೊಳಗೆ ಕಪಿಗಳು ಬಂದು ತಲುಪದಿದ್ದರೆ ಅವರಿಗೆ ವಿಚಾರಣೆ ಇಲ್ಲ ವಧೆ. ಇಂದಿಗೆ 15 ದಿನ ಪೂರ್ಣವಾಗುತ್ತದೆ. ಇಂದೇ ಅವರೆಲ್ಲರೂ ಬರುತ್ತಾರೆ. ಕೋಟ್ಯಾಂತರ ಗೋಲಾಂಗುಲಗಳು, ಕಪಿಗಳು, ಕರಡಿಗಳು ಇಂದು ಬರುತ್ತಾರೆ ಹಾಗಾಗಿ ನೀನು ಕೋಪಗೊಳ್ಳಬಾರದು. ನೋಡು ನೀನು ಕೋಪಗೊಂಡಿದ್ದನ್ನು ಕಂಡು ಸುಗ್ರೀವನ ಸ್ತ್ರೀಯರು ಗಾಬರಿಗೊಂಡಿದ್ದಾರೆ. ಈಗಾಗಲೇ ಕಿಷ್ಕಿಂದೆಯಲ್ಲಿ ಒಂದು ಶವವನ್ನು ಕಂಡಿದ್ದಾರೆ. ಇನ್ನೊಂದರ ಭೀತಿಯಲ್ಲಿದ್ದಾರೆ. ಹಾಗಾಗಿ ಅಭಯವನ್ನು ಕೊಡು ಎಂದು ತಾರೆ ಹೇಳಿದಾಗ ಲಕ್ಷ್ಮಣನಿಗೆ ಸಮಾಧಾನವಾಯಿತು. ತಾರೆಯ ಮಾತನ್ನು ಸ್ವೀಕರಿಸಿ, ಲಕ್ಷ್ಮಣ ತನ್ನ ಮೃದು ಸ್ವಭಾವಕ್ಕೆ ಮರಳಿದನು. ಲಕ್ಷ್ಮಣ ತಾರೆಯ ಮಾತನ್ನು ಒಪ್ಪಿದನು ಎಂಬುದು ಯಾವಾಗ ಸುಗ್ರೀವನಿಗೆ ಗೊತ್ತಾಯಿತೋ ಬದುಕಿದೆ ಅಂದುಕೊಂಡ. ದೊಡ್ಡ ಜೀವಭಯ ದೂರವಾಯಿತು.

ಸುಗ್ರೀವ ಮೊದಲು ಮಾಡಿದ ಕೆಲಸವೇನೆಂದರೆ ತನ್ನ ಕೊರಳಲ್ಲಿ ಇದ್ದ ವಿಚಿತ್ರವಾದ ಪುಷ್ಪಮಾಲೆಯನ್ನು ಹರಿದು ಒಗೆದು , ಪೂರ್ತಿಯಾಗಿ ಅಮಲನ್ನು ಕಳೆದುಕೊಂಡು ಹಳೆಯ ಸುಗ್ರೀವನಾದ. ಆ ಮಾಲೆ ಕಾಮಮದವರ್ಧಕ. ಲಕ್ಷ್ಮಣನಿಗೆ ಸುಗ್ರೀವ ಹೇಳುತ್ತಾನೆ ; ನೋಡು ಲಕ್ಷ್ಮಣ ಕಳೆದುಕೊಂಡ ಕೀರ್ತಿ, ಕಪಿರಾಜ್ಯ ಇವೆಲ್ಲವೂ ನನಗೆ ಬಂದಿದ್ದು ರಾಮನಿಂದ. ಅಂತಹ ರಾಮನಿಗೆ ಪ್ರತ್ಯುಪಕಾರ ಮಾಡಬಲ್ಲೆನಾ? ಹೆಚ್ಚು ಏನು ಮಾಡಲು ಸಾಧ್ಯ ನನಗೆ? ರಾಮ ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರ ಎನ್ನುವಂತದ್ದು ಇಲ್ಲ. ಮತ್ತೆ ಸೀತೆಯನ್ನು ರಾಮ ಪಡೆದುಕೊಳ್ಳುತ್ತಾನೆ. ರಾವಣನನ್ನೂ ಸಂಹಾರ ಮಾಡುತ್ತಾನೆ ನಾನು ಆತನ ಹಿಂದೆ ಸುಮ್ಮನೆ ಹೋಗುತ್ತೇನೆ ಅಷ್ಟೇ. ಮತ್ತೆ ನನ್ನದೇ ಶಕ್ತಿಯಿಂದ ರಾಮನು ಸೀತೆಯನ್ನು ಪಡೆಯುವನು ಆದರೆ ನಾನು ಅವನ ಪರಿವಾರ ಮಾತ್ರ. ಯಾವ ರಾಮನ ಒಂದೇ ಬಾಣವು ಸಪ್ತಸಾಲ ವೃಕ್ಷವನ್ನು, ಪರ್ವತವನ್ನು ಭೇದಿಸಿತೋ ಬಳಿಕ ಭೂಮಿಯನ್ನೇ ಭೇದಿಸಿತು. ಅವನ ಧನುಷ್ಠೇoಕಾರ ಜಗತ್ತನ್ನೇ ನಡುಗಿಸುತ್ತದೆ. ಅಂತಹ ರಾಮನಿಗೆ ಈ ಕಪಿ ಮಾಡುವ ಸಹಾಯವೇನು? ನಾನು ರಾಮನ ಬಾಲವಷ್ಟೇ ಹೊರತು ನಾನು ಮಾಡುತ್ತೇನೆ, ನನ್ನಿಂದ ಕಾರ್ಯವಾಗುತ್ತದೆ ಎನ್ನುವುದೇನಿದೆ? ಎಂಬ ವಿನಯವನ್ನು ಸುಗ್ರೀವನು ಪ್ರಕಟಮಾಡುತ್ತಾನೆ. ನೋಡು ಲಕ್ಷ್ಮಣ ಅತಿಯಾದ ವಿಶ್ವಾಸ, ಎಂದೂ ರಾಮ ನನ್ನ ಕೈಬಿಡುವುದಿಲ್ಲ ಎಂಬ ಅತಿಯಾದ ನಂಬಿಕೆ ಒಂದೆಡೆ ಮತ್ತು ಅತಿಯಾದ ಪ್ರೀತಿ ಇವುಗಳ ಪರಿಣಾಮವಾಗಿ ಈ ದಾಸನ ಕಡೆಯಿಂದ ಆದ ಅಪರಾಧವನ್ನು, ತಪ್ಪನ್ನು ಕ್ಷಮಿಸಬೇಕು. ತಪ್ಪು ಮಾಡದೇ ಇರುವವರು ಯಾರಿದ್ದಾರೆ ಪ್ರಪಂಚದಲ್ಲಿ? ದೊಡ್ಡವರು ಕ್ಷಮಿಸಬೇಕು ಎಂದಾಗ ಲಕ್ಷ್ಮಣ ಪೂರ್ತಿಯಾಗಿ ಕರಗಿಹೋದ. ಎಷ್ಟರಮಟ್ಟಿಗೆ ಎಂದರೆ ಅವನಿಗೆ ಪಶ್ಚಾತ್ತಾಪವಾಯಿತು. ಅಷ್ಟರಮಟ್ಟಿಗೆ ಕರಗಿದ. ಮುಂದಿನ ಮಾತುಗಳು ಪ್ರೀತಿ ತುಂಬಿ ಬಂದವು; ನಮ್ಮ ಅಣ್ಣ ತಾನು ಅನಾಥ ಎಂದುಕೊಳ್ಳುತ್ತಿದ್ದ ಇಲ್ಲ ಅವನು ಸನಾಥ, ನೀನು ನಮ್ಮ ಕುಟುಂಬದ ಯಜಮಾನ. ನಮಗೆ ನೀನೇ ಮುಂದೆ. ಎಂತಹ ವಿನಯ ನಿನ್ನದು. ಆಶ್ಚರ್ಯ ವಾನರ ಚಕ್ರವರ್ತಿಗೆ ಇರವ ವಿನಯ ಎಂತದ್ದು! ನಿನ್ನ ಮನಶುದ್ಧಿಗೆ, ಸರಳತೆಗೆ ನೀನು ಕಪಿರಾಜನಾಗಿರುವುದು ಸರ್ವತಾ ಅರ್ಹ. ಇಂತಹ ಸಂಪತ್ತಿಗೆ ನೀನೇ ಯೋಗ್ಯ. ಸುಗ್ರೀವ ನೀನು ನಮ್ಮ ಜೊತೆಗಿದ್ದರೆ ನಮ್ಮ ಅಣ್ಣ ಎಂತಹಾ ಶಕ್ತಿಯನ್ನೂ ವಧಿಸಿಯಾನು ಅದರಲ್ಲಿ ಸಂಶಯವಿಲ್ಲ. ಎಂತಹ ಧರ್ಮಜ್ಞ ನೀನು, ವೀರ ನೀನು. ಇಂತಹ ಮಾತು ಬಂದರೆ ನಿನ್ನ ಬಾಯಿಂದ ಬರಬೇಕು. ಬೇರೊಬ್ಬರು ಇಂತಹ ಮಾತುಗಳನ್ನಾಡಲು ಸಾಧ್ಯವಿಲ್ಲ. ಸಾಮರ್ಥ್ಯವುಳ್ಳವನು ತನ್ನ ದೋಷವನ್ನು ತಿಳಿದುಕೊಳ್ಳುವುದು ಕಷ್ಟ. ತಿಳಿದುಕೊಂಡರೂ ಒಪ್ಪುವುದು ಕಷ್ಟ. ಹೀಗೆ ಸಾಮರ್ಥ್ಯ, ಅಧಿಕಾರ ಉಳ್ಳವನು ವಿನಯಪೂರಕವಾಗಿ ತಪ್ಪಾಯಿತು ಎಂದು ಕೇಳಲು ಒಂದು ನನ್ನ ಅಣ್ಣನಿಂದ ಸಾಧ್ಯ ಅವನನ್ನು ಬಿಟ್ಟರೆ ನಿನ್ನಿಂದ ಮಾತ್ರ ಸಾಧ್ಯ. ನಿಮ್ಮಿಬ್ಬರನ್ನು ಬಿಟ್ಟು ಮತ್ತೆ ಯಾರೂ ಹೀಗೆ ಮಾಡಲಾರರು. ನೀನು ವಿಕ್ರಮದಲ್ಲಾಗಲೀ, ಬಲದಲ್ಲಾಗಲೀ ರಾಮನಿಗೆ ಸಲ್ಲುವವನು. ನಮ್ಮ ಅಣ್ಣನಿಗೆ ನೀನೇ ಸಾಟಿ. ನಮ್ಮ ಅಣ್ಣನಿಗೆ ದೇವರು ಕೊಟ್ಟ ನೀನು. ಆದರೆ ಇನ್ನು ತಡಮಾಡಬೇಡ. ಏಳು ಹೋಗೋಣ ಅಲ್ಲಿ ಅಣ್ಣ ಒಬ್ಬನೇ ಕುಳಿತುಕೊಂಡು ನೋವು ತಿನ್ನುತ್ತಿದ್ದಾನೆ. ಹಾಗಾಗಿ ಸೀತಾಹರಣ ಚಿಂತಿತನಾಗಿ ರಾಮ ನೊಂದಿದ್ದಾನೆ. ಬಾ ನಾವಿಬ್ಬರೂ ಸೇರಿ ಅವನನ್ನು ಸಮಾಧಾನಗೊಳಿಸೋಣ ಎಂದು ಹೇಳಿ ಕೊನೆಯ ಮಾತನ್ನು ಹೇಳಿದ; ನನಗೆ ರಾಮ ತುಂಬಾ ದುಃಖದಿಂದ ನೊಂದು ನುಡಿದ ನುಡಿಗಳಿದೆಯಲ್ಲಾ ಅದು ನನ್ನ ಮನಸ್ಸನ್ನು ವಿಚಲಿತ ಗೊಳಿಸಿತ್ತು. ನಾನು ಲಕ್ಷ್ಮಣನೇ ಆಗಿರಲಿಲ್ಲ. ನನ್ನ ಮನಸ್ಸು ಪೂರ್ತಿ ಕೆಟ್ಟುಹೋಗಿತ್ತು. ಆಗ ನಾನು ನಿನಗೆ ಬಹಳಾ ಬೇಡವಾದ, ಕ್ರೂರವಾದ, ಕಠೋರವಾದ ಮಾತುಗಳನ್ನು ಆಡಿದ್ದೇನೆ ಹಾಗಾಗಿ ಅದನ್ನು ನೀನು ಕ್ಷಮಿಸಬೇಕು ಎಂದು ಲಕ್ಷ್ಮಣನು ಸುಗ್ರೀವನಿಗೆ ಕ್ಷಮೆಕೇಳುವಲ್ಲಿಗೆ ಪೂರ್ತಿ ಸರಿಹೋಯಿತು. ರಾಮಲಕ್ಷ್ಮಣ ಮತ್ತು ಸುಗ್ರೀವರ ಸ್ನೇಹಸಂಬಂಧ ಮೊದಲಿನಂತೆ ಆಯಿತು. ಮುಂದೇನಾಯಿತು ಎಂಬುದನ್ನು ಮುಂದಿನ ಪ್ರವಚನದಲ್ಲಿ ನೋಡೋಣ…….
ಪ್ರವಚನವನ್ನು ಇಲ್ಲಿ ಕೇಳಿರಿ:


ಪ್ರವಚನವನ್ನು ನೋಡಲು:

Facebook Comments