ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಈ ಜಗತ್ತಿನಲ್ಲಿ ಕೆಲವು ಸಂಗತಿಗಳು ಸಾಮಾನ್ಯ. ಇನ್ನು ಕೆಲವು ಅಸಾಮಾನ್ಯ. ಕಲ್ಲು ತುಂಡುಗಳು ಎಷ್ಟು ಬೇಕಾದರೂ ಕಾಣ ಸಿಗುತ್ತವೆ ಆದರೆ ರತ್ನದ ಹರಳುಗಳು ಅಪರೂಪ. ವೃಕ್ಷಗಳು ಎಷ್ಟು ಬೇಕಾದರೂ ಸಿಗಬಹುದು ಆದರೆ ಚಂದನ ವೃಕ್ಷ ಅಪರೂಪ. ಕಪ್ಪೆಚಿಪ್ಪುಗಳು ಧಾರಾಳ ಆದರೆ ಮುತ್ತಿರುವ ಕಪ್ಪೆಚಿಪ್ಪುಗಳು ಅತ್ಯಂತ ಅಪರೂಪ. ಹೀಗೆ ನಮ್ಮ ನಡುವೆಯೂ ಕೂಡ ಯುಗಕ್ಕೊಬ್ಬ ಜಗಕ್ಕೊಬ್ಬ ಎನ್ನುವಂತವರು ಶಬ್ದವೇ ಹೇಳುವಂತೆ ಅಪರೂಪದಲ್ಲಿರುತ್ತಾರೆ. ಕೋಟ್ಯಂತರ ಕಪಿಗಳು ಸೀತಾನ್ವೇಷಣೆಗಾಗಿ ಹೊರಟು ನಿಂತಾಗ, ಅವರ ಮಧ್ಯದಲ್ಲಿ ಕಪಿರಾಜನಾದ ಸುಗ್ರೀವನು ಒಬ್ಬನನ್ನು ಗುರುತಿಸುತ್ತಾನೆ. ಸುಗ್ರೀವನೆಂದರೆ ಸರ್ವ ವಾನರರ ಅಧಿಪತಿ.
ತನ್ನ ಸೇನೆಯನ್ನು 4 ವಿಭಾಗಗಳಾಗಿ ಮಾಡಿ 4 ದಿಕ್ಕಿಗೆ ಸುಗ್ರೀವನು ಕಳುಹಿಕೊಡುತ್ತಾನೆ. ಎಲ್ಲರಿಗೂ ಅವರಿಗೆ ಬೇಕಾದ ಮಾರ್ಗದರ್ಶನವನ್ನು ಮಾಡುತ್ತಾನೆ. ಆದರೆ ಕೋಟ್ಯಾನುಕೋಟಿ ಕಪಿಗಳಲ್ಲಿ ಸುಗ್ರೀವನಿಗೆ ಒಬ್ಬನ ಮೇಲೆ ಭರವಸೆ ಇತ್ತು. ಯುಗಕ್ಕೊಬ್ಬ, ಜಗಕ್ಕೊಬ್ಬನಾದ ಹನುಮಂತನನ್ನು ಪ್ರತ್ಯೇಕವಾಗಿ ಸುಗ್ರೀವನು ಕರೆದನು.

ಅಸಾಮಾನ್ಯವಾದ ಕಾರ್ಯವನ್ನು ಅಸಾಮಾನ್ಯವಾದ ಪುರುಷರೇ ಮಾಡಬೇಕಾಗುತ್ತದೆ. ― ಶ್ರೀಸೂಕ್ತಿ.

ಹನುಮಂತನ ಕರೆದ ಸುಗ್ರೀವನು ವಿಶೇಷವಾದ ಸಂಗತಿಗಳನ್ನು, ಇನ್ನಿತರರಿಗೆ ಹೇಳದ ರಹಸ್ಯವನ್ನು ಹೇಳಿದನು. ಸುಗ್ರೀವನಿಗೆ ಹನುಮಂತನೇ ಕಾರ್ಯಸಾಧನೆಯನ್ನು ಮಾಡಿಕೊಂಡು ಬರುತ್ತಾನೆ ಎಂಬ ಸ್ಪಷ್ಟ ನಿಶ್ಚಯ ಇತ್ತು. ಎಲ್ಲರ ಮಧ್ಯೆ ಒಬ್ಬ ಕೆಲಸಮಾಡಿದರೂ, ಎಲ್ಲರನ್ನು ಕಳುಹಿಸುವುದು ಧರ್ಮ. ಸರ್ವ ವಾನರರ ಪ್ರಭುವು ಪರಮವಿಕ್ರಮಿಯಾದ ಆಂಜನೇಯನನ್ನು ಕರೆದು “ಭೂಮಿಯಲ್ಲಿ, ಅಂತರಿಕ್ಷದಲ್ಲಿ, ಅಂಬರ, ಸ್ವರ್ಗಲೋಕದಲ್ಲಿ ನಿನ್ನ ಗತಿ/ಚಲನೆಯನ್ನು ತಡೆಯುವವರಿಲ್ಲ. ಎಲ್ಲಕಡೆ ಸಂಚಾರ ಮಾಡುವ ಚೈತನ್ಯ ನಿನ್ನಲ್ಲಿದೆ, ಜಲವು ಕೂಡ ನಿನಗೆ ತಡೆಯನ್ನೊಡ್ಡಲು ಸಾಧ್ಯವಿಲ್ಲ. ಸರ್ವಲೋಕಗಳನ್ನು ಬಲ್ಲವನು ನೀನು. ನಿನಗೆ ಅಂತಹ ವಿದ್ಯೆ ಇದೆ. ನಿನ್ನ ಗತಿ, ತೇಜಸ್ಸು, ಲಾಗವ ಸಮಾನಾದಾದು ಬೇರೆ ಇಲ್ಲ” ಎಂದು ಸುಗ್ರೀವನು ಹನುಮಂತನಿಗೆ ಹೇಳಿದನು. (ಲಾಗವ: ಕಾರ್ಯವನ್ನು ಬಹುಬೇಗನೆ ಮಾಡಿ ಮುಗಿಸುವುದು) ವಾಯುವೆನ್ನುವಂತದ್ದು ಪ್ರವಹಿಸಬೇಕು. ಅದು ಸ್ತಬ್ದವಾದರೆ ಲೋಕವೇ ನಾಶವಾಗುತ್ತದೆ. ಜಲವು ಸರೋವರದಲ್ಲಿ ನಿಂತಿರಬಹುದು. ಆದರೆ ವಾಯುವು ನಿಂತಿರುವುದಿಲ್ಲ.

ಪ್ರಾಣಶಕ್ತಿಯೆಂದರೇ ಸರ್ವ ಕ್ರಿಯಾಶಕ್ತಿಯ ಮೂಲ. ―ಶ್ರೀಸೂಕ್ತಿ.

ಸೀತೆಯು ಲಭಿಸುವಂತೆ ನೀನೇ ಮಾಡಬೇಕು. ಕೋಟ್ಯಾನು ಕಪಿಗಳಲ್ಲಿ ಇದು ನಿನ್ನದೇ ಹೊಣೆ. ಸತ್ಯವಾದಬಲ, ಸತ್ಯವಾದ ಬುದ್ದಿ, ನಿಜಾವಾದ ಪರಾಕ್ರಮವಿದ್ದರೆ ಅದು ನಿನ್ನಲ್ಲಿ ” ಎಂದು ಹನುಮಂತನಿಗೆ ಸುಗ್ರೀವನು ಹೇಳಿದನು. ಹೇ ನಯಪಂಡಿತನೇ ಎಂದು ಹನುಮಂತನನ್ನು ಸಂಬೋಧಿಸಿದ ಸುಗ್ರೀವನು ಸಂಪೂರ್ಣ ಭರವಸೆಯನ್ನು ಹನುಮಂತನಲ್ಲಿಟ್ಟನು”.

ದೇಶ ಮತ್ತು ಕಾಲಕ್ಕೆ ತಕ್ಕಂತೆ ಪ್ರತಿಕ್ರಿಯಿಸುವುದು ಶ್ರೇಷ್ಠ ದೂತರ ಲಕ್ಷಣ ― ಶ್ರೀಸೂಕ್ತಿ.

ಈ ಸಂದರ್ಭದಲ್ಲಿ ರಾಮನು ಹನುಮಂತನನ್ನು ಅವಲೋಕನ ಮಾಡುತ್ತಾನೆ. ರಾಮನಿಗೆ ಮೊದಲು ಕಂಡಿದ್ದು ಹನುಮಂತನಲ್ಲ. ಹನುಮಂತನಲ್ಲಿ ಕಾರ್ಯವೇ ಕಂಡಿತು!!. ಸೀತಾಶೋಧನೆ ಕಾರ್ಯವೇ ಹನುಮಂತನ ರೂಪದಲ್ಲಿ ನಿಂತಿದೆ ಎನ್ನುವ ಹಾಗೆ ಹನುಮಂತನಿಗೆ ಭಾಸವಾಯಿತು. ಕೋಟ್ಯಾನುಕೋಟಿ ಕಪಿಗಳಲ್ಲಿ ಕಾರ್ಯಸಿದ್ದಿಯು ಹನುಮಂತನಲ್ಲಿದೆ ಎಂಬುದನ್ನು ರಾಮನು ಅವಲೋಕಿಸುತ್ತಾನೆ. ಅಲ್ಲಿಂದ ಮುಂದಕ್ಕೆ ರಾಮನು ಹನುಮಂತನ ಅಂತಸ್ಸತ್ವವನ್ನು ಅರಿತುಕೊಂಡನು. ಯಾರು ಹನುಮಂತ ? ಯಾವ ತತ್ವವಿದು ?? ಎಂಬುದನ್ನು ರಾಮನು ಅರ್ಥಮಾಡಿಕೊಂಡು ಸುಗ್ರೀವನ ವಿಶ್ವಾಸವನ್ನು ಗಮನಿಸಿದನು. ಕಪಿರಾಜನಿಗೆ ಮತ್ತು ಸರ್ವ ಲೋಕದ ಒಡೆಯನಾದ ರಾಮನಿಗೆ ಹನುಮಂತನ ಮೇಲೆ ಭರವಸೆ ಮತ್ತು ಇವನೇ ಕಾರ್ಯಸಾಧನೆ ಮಾಡುತ್ತಾನೆ ಎನ್ನುವ ತೀರ್ಮಾನ ಇತ್ತು. ಅದು ವಿಶ್ವಾಸದ ಪರ್ವವೇ ಆಗಿತ್ತು. ಹನುಮಂತನಿಗೆ ಅವನ ಹಿಂದಿನ ಬದುಕು ಅರ್ಥವಾಗದೇ ಇದ್ದರೂ ಕೂಡ ಅರ್ಥಮಾಡಿಕೊಳ್ಳುವ ಕಣ್ಣಿದ್ದವರಿಗೆ, ಸಾಮರ್ಥ್ಯವಿದ್ದವರಿಗೆ ಅರ್ಥ ಮಾಡಿಸಿತ್ತು. ಹನುಮಂತನು ಹುಟ್ಟಿಬಂದ ಬಗೆ, ಬಾಲ್ಯ, ಈವರೆಗೆ ಮಾಡಿದ ಕಾರ್ಯಗಳ ತಿಳುವಳಿಕೆ ಅವನಿಗೆ ಇಲ್ಲದಿದ್ದರೂ ರಾಮನಿಗೆ ತಿಳಿದಿತ್ತು.

ಹನುಮಂತನಿಂದಲೇ ಕಾರ್ಯಸಿದ್ದಿಯಾಗುತ್ತದೆ ಎಂದು ಸ್ಪಷ್ಟವಾಗಿ ರಾಮನು ತಿಳಿದ ಬಳಿಕ ತನ್ನ ಮುದ್ರೆಯುಂಗರವನ್ನು ಹನುಮಂತನಿಗೆ ಕೊಡಲು ತೀರ್ಮಾನಿಸುತ್ತಾನೆ. ಹನುಮಂತನು ಆ ಸಮಯದಲ್ಲಿ “ವ್ಯವಸಾಯೋತ್ತರ”ನಾಗಿ ಕಂಡುಬಂದ. (ವ್ಯವಸಾಯ : ನಿಶ್ಚಯ, ಪ್ರಯತ್ನ, ಕಾರ್ಯಚಟುವಟಿಕೆ). ರಾಮನ ಮುಂದೆ ಹನುಮಂತ, ಹನುಮಂತನ ಮುಂದೆ ಸೀತಾ ಅನ್ವೇಷಣೆಯ ಕಾರ್ಯಸಿದ್ಧಿ ಇತ್ತು. ಆಗ ರಾಮನನ್ನು ಕಾರ್ಯವಾಯಿತು ಎಂಬಂತೆ ಕೃತಾರ್ಥತೆಯ ಭಾವವು ಆವರಿಸಿ ಎಲ್ಲ ಇಂದ್ರಿಯಗಳಲ್ಲಿ ತಂಪು, ಹರ್ಷ ಉಂಟಾಯಿತು.

“ನನಗಿಂತ ಕಿರಿಯವರಿಲ್ಲ” ― ಶ್ರೇಷ್ಠ ಸೇವಕನಲ್ಲಿರಬೇಕಾದ ಭಾವ ― ಶ್ರೀಸೂಕ್ತಿ.

ಹನುಮಂತನಿಗೆ ಅವನು ಯಾರೆಂದು ಅರ್ಥವಾದ ಬಳಿಕವೂ ಸುಗ್ರೀವನ ಸೇನೆಯಲ್ಲಿ ನನಗಿಂತ ಕಿರಿಯವರಿಲ್ಲ ಎನ್ನುವ ಭಾವ ಇತ್ತು. ಅಯೋಧ್ಯೆಯಿಂದ ಹೊರಟು ಬಂದ ರಾಮನಲ್ಲಿ ಅಂಗುಲಿಕವನ್ನು ಬಿಟ್ಟು ಯಾವ ಆಭರಣವು ಉಳಿದಿರಲಿಲ್ಲ. ಆ ಅಂಗುಲಿಕದ ಮೇಲೆ ‘ರಾಮ’ ಎಂದು ಬರೆದಿತ್ತು. ರಾಮಾಯಣದ ಕಾಲದಲ್ಲಿ ಲಿಪಿಯ ಬಳಕೆ ತುಂಬಾ ಪರಿಮಿತವಾಗಿತ್ತು. ಬುದ್ಧಿ ಸಾಕಷ್ಟು ಇದ್ದಿದ್ದರಿಂದ ಬರೆದುಕೊಂಡೇ ನೆನಪಿಟ್ಟುಕೊಳ್ಳಬೇಕು ಎಂದು ಇರಲಿಲ್ಲ. ರಾಮನು ಹನುಮಂತನಿಗೆ ಅಂಗುಲಿಕವನ್ನು (ಮುದ್ರೆಯುಂಗುರ) ಕೊಡುತ್ತಾನೆ. ರಾಮನಿಗೆ ಹನುಮಂತನ ಮೇಲಿರುವ ಪ್ರೇಮದ ಪರಕಾಷ್ಠೆಯನ್ನು ಈ ಸಂಧರ್ಭದಲ್ಲಿ ತಿಳಿಯಬಹುದು. ಮುದ್ರೆಯುಂಗುರವನ್ನು ಸಾಮಾನ್ಯವಾಗಿ ಕೊಡುವ ಪದ್ಧತಿ ಇಲ್ಲ. ಅದರಿಂದ ಮುದ್ರೆ ಒತ್ತಿದರೆ ಅದು ರಾಮನ ಹಸ್ತಾಕ್ಷರವೇ ಆಗುತ್ತದೆ. ವಿವಾಹಕಾಲದಲ್ಲಿ ಜನಕ ಕೊಟ್ಟ ಉಂಗುರವಾಗಿತ್ತು. ಅದು ಬೇರೆ ಭೋಗ ವಸ್ತುವಿನಂತೆ ಅಲ್ಲ. ಅದಕ್ಕಾಗಿ ರಾಮನು ವನವಾಸಕ್ಕೆ ಬರುವಾಗ ಎಲ್ಲ ಆಭರಣವನ್ನು ಬಿಟ್ಟು ಬಂದರೂ ಮುದ್ರೆಯುಂಗರವನ್ನು ಬಿಟ್ಟು ಬಂದಿರಲಿಲ್ಲ. ಮುದ್ರೆಯುಂಗರವನ್ನು ಈ ಸಂದರ್ಭವನ್ನು ಹೊರತುಪಡಿಸಿ ಬೇರೆ ಯಾವ ಕಾರಣಕ್ಕೂ ತೆಗೆದರೆ ಸೀತೆಯ ಮೇಲಿನ ಪ್ರೀತಿಯನ್ನೇ ತೆಗೆದಂತೆ.

ಮುದ್ರೆಯುಂಗರವೆಂದರೇ ಸೀತಾ―ರಾಮರ ಪ್ರೇಮ ಸೇತು.

ಹನುಮಂತನು ರಾಮನ ಕಡೆಯಿಂದ ಬಂದವನು ಹೊರತು ರಾವಣನ ಪಕ್ಷದವವನಲ್ಲ ಎಂದು ಸೀತೆಗೆ ತಿಳಿಯಲು ರಾಮನು ಉಂಗುರವನ್ನು ಕೊಡುತ್ತಾನೆ. ಪ್ರೇಮಸೇತುವಾದ ಅಂಗುಲಿಕವು ಸೀತಾರಾಮರನ್ನು ಬಿಟ್ಟು ಬೇರೆಯವರ ಕೈಗೆ ಹೋಗಿರಲಿಲ್ಲ. ಆದರೆ ಅದು ಹನುಮಂತನಿಗೆ ಸಿಕ್ಕಿತು. ಹನುಮಂತನು ರಾಮನಿಗೆ ಅದೆಷ್ಟೋ ಹತ್ತಿರವಾಗಿದ್ದನ್ನು ಈ ಸಂದರ್ಭದಲ್ಲಿ ಗಮನಿಸಬೇಕು. ಮುದ್ರೆ ಉಂಗುರವು ವಿಶ್ವಾಸದ ಡಂಗುರವಾಗಿತ್ತು ಅಂಗುಲಿಕವನ್ನು ಕೊಟ್ಟ ರಾಮನು ಈ ಉಂಗುರದ ಗುರುತಿನಿಂದ ಸೀತೆಯು ಉದ್ವೇಗವಿಲ್ಲದೆ ನಿನ್ನನ್ನು ನೋಡುತ್ತಾಳೆ ಎಂದು ಹನುಮಂತನಿಗೆ ಹೇಳಿದನು. ಕೊನೆಯಲ್ಲಿ ರಾಮನು ಹನುಮಂತನಿಗೆ ನಿನ್ನಿಂದ ಕಾರ್ಯಸಿದ್ದಿಯ ಸಂದೇಶ ನನಗಿದೆ ಎಂದು ಹೇಳಿದನು. ರಾಮನು ಕೊಟ್ಟ ಉಂಗುರವು ಹನುಮಂತನಿಗೆ ಆಶೀರ್ವಾದ, ವಿಶ್ವಾಸ, ಭರವಸೆಯ ಪ್ರತೀಕವಾಗಿತ್ತು.

ಹನುಮಂತನು ಏನನ್ನು ಮಾತನಾಡಲಿಲ್ಲ. ಹನುಮಂತನು ಉಂಗುರವನ್ನು ಕೈಮುಗಿದು ತೆಗೆದುಕೊಂಡು, ತಲೆಯಮೇಲೆ ಇಟ್ಟುಕೊಂಡನು. ನಂತರ ರಾಮನಿಗೆ ಪಾದಾಭಿವಂದನೆಯನ್ನು ಮಾಡಿ ಹೊರಟನು. ಈ ಸಂದರ್ಭದಲ್ಲಿ ಹನುಮಂತನಿಗೆ ಮಾತಿಗಿಂತ ಮೌನವೇ ಶ್ರೇಷ್ಠ ಎಂದು ಅನ್ನಿಸಿತ್ತು. ಪೂರ್ಣಚಂದ್ರನಂತೆ ಹನುಮಂತ, ಸುತ್ತ ತಾರಾಗಣದಂತೆ ಕಪಿಗಳು ದಕ್ಷಿಣ ದಿಕ್ಕಿನೆಡೆಗೆ ಹೊರಡಲು ಸಿದ್ದರಾಗುತ್ತಾರೆ. ಹೊರಟು ನಿಂತ ಹನುಮಂತನನ್ನು ಕರೆದ ರಾಮನು “ಅತಿಬಲ” ಎಂದು ಸಂಬೋಧಿಸಿ, ನಿನ್ನ ಬಲವನ್ನು ಆಶ್ರಯಿಸಿದವನು ನಾನು. ಎಂದೂ ಸಣ್ಣದಲ್ಲದ ನಿನ್ನ ಪರಾಕ್ರಮದಿಂದ ಸೀತೆಯು ಲಭಿಸುವಂತೆ ಮಾಡು ಎಂದು ಹೇಳುತ್ತಾನೆ.

ಹನುಮಂತನೆಂದರೇ ರಾಮನು ಕಾರ್ಯಸಿದ್ದಿಗಾಗಿ ಎತ್ತಿಕೊಂಡ ಉಪಕರಣ ― ಶ್ರೀಸೂಕ್ತಿ.

ಸುಗ್ರೀವನು ಮತ್ತೊಮ್ಮೆ ಕಪಿಗಳೆಲ್ಲರನ್ನು ಕರೆದು ನಾನು ಹೇಳಿದ ಹಾಗೆ ಅನ್ವೇಷಣೆ ಮಾಡಿ ಎಂದು ಹೇಳುತ್ತಾನೆ.
ಪುರಾಣಗಳು ತತ್ವವನ್ನು ಆಧಾರವಾಗಿಟ್ಟುಕೊಂಡು ರೂಪಕದಂತೆ ವಿಷಯವನ್ನು ವರ್ಣಿಸಿದರೆ, ಇತಿಹಾಸ ಕಾವ್ಯಗಳು ಮಧ್ಯದಲ್ಲಿ ಆಧ್ಯಾತ್ಮದ ವಿಷಯವನ್ನು ಕಟ್ಟಿಕೊಡುತ್ತದೆ. ಯೋಗಸಾಧನೆ ಮಾಡುವಾಗ ಅಂತರಂಗದಲ್ಲಿ ಬರುವ ವಿಘ್ನಗಳನ್ನು ಎದುರಿಸಲು ಯೋಗಿಗಳಿಂದ ಮಾತ್ರ ಸಾಧ್ಯ ― ಶ್ರೀಸೂಕ್ತಿ.

ವಾನರಾರು ತಮ್ಮ ಒಡೆಯನ ಶಾಸನದ ಉಗ್ರತ್ವವನ್ನು ಅರ್ಥೈಸಿಕೊಂಡರು. ವಾನರರು ಹೊರಟ ದೃಶ್ಯ ಸಾವಿರಾರು, ಅಸಂಖ್ಯಾತ ಮಿಡತೆಗಳು ಭೂಮಿಯನ್ನು ಮುಚ್ಚಿ ಪ್ರಯಾಣ ಮಾಡುವ ಹಾಗೆ ಕಂಡಿತು. ಮಿಡತೆಗಳು ಸಾಮೂಹಿಕವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುತ್ತವೆ ಎಂದು ವಿಜ್ಞಾನ ಹೇಳುತ್ತದೆ. ಆ ರೀತಿಯಲ್ಲಿ ವಾನರರು ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಇತ್ತ ರಾಮನು 1 ತಿಂಗಳ ಪ್ರತೀಕ್ಷೆಯಲ್ಲಿ ಲಕ್ಷ್ಮಣನೊಡನೆ ಪ್ರಸ್ರವಣ ಪರ್ವತದಲ್ಲಿ ನೆಲೆಸಿದನು. ಹಿಮಾಲಯದಿಂದ ಕೂಡಿರುವ ಹಿಮಾಲಯಕ್ಕೆ ಶತಬಲಿ ಹೊರಟನು. ಪೂರ್ವಕ್ಕೆ ವಾನರ ನಾಯಕನಾದ ವಿನತ, ದಕ್ಷಿಣಕ್ಕೆ ತಾರ ಮತ್ತು ಅಂಗದಾದಿಗಳಿಂದ ಒಳಗೊಂಡ ಪಹನಸ್ತ, ಪಶ್ಚಿಮ ದಿಕ್ಕಿಗೆ ಸುಷೇಣ ಪ್ರಯಾಣ ಮಾಡುತ್ತಾರೆ. ಹೀಗೆ ಎಲ್ಲ ಕಪಿಗಳನ್ನು ಎಲ್ಲ ದಿಕ್ಕಿಗೆ ಕಳುಹಿಸಿದ ಸುಗ್ರೀವನಿಗೆ ಇದ್ದಕ್ಕಿದ್ದಂತೆ ಸಂತೋಷವಾಯಿತು. ಸುಖಿತಃ, ಸುಖಮ್, ಮುಮೋದ ಎಂಬ 3 ಶಬ್ದಗಳನ್ನು ಬಳಸಿ ವಾಲ್ಮೀಕಿಗಳು ಸುಗ್ರೀವನಿಗೆ ಆದ ಸಂತೋಷವನ್ನು ವರ್ಣಿಸಿದ್ದಾರೆ. ಕಪಿಗಳು ಹೊರಡುವಾಗ ಕಪಿರಾಜನ ಮುಂದೆ ನಿಂತು ಬಡಾಯಿ ಕೊಚ್ಚಲು ಆರಂಭಿಸಿದರು. ಕೆಲವರು ಸೀತೆಯನ್ನು ತರುತ್ತೆವೆ ಮತ್ತು ರಾವಣನನ್ನು ಕೊಲ್ಲುತ್ತೇವೆ ಎಂದು ದೊಡ್ಡದಾಗಿ ಶಬ್ದ ಮಾಡಿದರು. ನದಂತಃ, ಉನ್ನದಂತಃ, ಘರ್ಜಂತಃ, ಚ್ವೆಲಂತಃ, ವಿನದಂತಃ ಎಂದೆಲ್ಲ ವಾಲ್ಮೀಕಿಗಳು ವಾನರಾರು ಮಾಡಿದ ಘರ್ಜನೆಯನ್ನು ವರ್ಣಿಸಿದ್ದಾರೆ. ಇನ್ನು ಕೆಲವು ವಾನರರು ರಾವಣನನ್ನು ಒಬ್ಬರೇ ಸಂಹಾರ ಮಾಡುತ್ತೇವೆ ಎಂದು ಕೂಗಿದರು. ವಾನರರು ಬಲಶಾಲಿಗಳು ಹೌದು ಆದರೆ ರಾವಣನನ್ನು ಕೊಲ್ಲುವಷ್ಟು ಬಲ ಇರಲಿಲ್ಲ. ಒಬ್ಬ ಕಪಿಯು “ಯಾರು ಬರಕೂಡದು, ಎಲ್ಲರೂ ಕಿಷ್ಕಿಂದೆಯಲ್ಲೇ ಇರಲಿ, ನಾನಬ್ಬೊನೆ ರಾವಣನನ್ನು ಕೊಂದು ಸೀತೆಯನ್ನು ಕರೆತರುತ್ತೇನೆ” ಎಂದು ಹೇಳಿದನು. ಮತ್ತೊಬ್ಬ ಕಪಿ ಪಾತಾಳದಲ್ಲಿ ಸೀತೆ ಇದ್ದರೂ ನಾನೊಬ್ಬನೇ ಹೋಗಿ ಕರೆದುಕೊಂಡು ಬರುತ್ತೇನೆ ಎಂದು ಹೇಳಿದನು. ಹೀಗೆ ಒಬ್ಬೊಬ್ಬ ವಾನರಾರು ಒಂದೊಂದು ರೀತಿಯಲ್ಲಿ ತಮ್ಮ ಪರಾಕ್ರಮವನ್ನು ಹೇಳಿಕೊಳ್ಳುತ್ತಾರೆ. ಒಬ್ಬ ವಾನರ ವೃಕ್ಷಗಳನ್ನು ನಾಶ ಮಾಡಬಲ್ಲೆ ಎಂದು ಹೇಳಿದರೆ, ಇನ್ನೊಬ್ಬ ನೂರು ಯೋಜನ ಹಾರಬಲ್ಲೆ ಎಂದು ಹೇಳಿದನು. ಮತ್ತೊಬ್ಬ 200 ಯೋಜನ ಹಾರಬಲ್ಲೆ ಎಂದು ಹೇಳುತ್ತಾನೆ. ಒಬ್ಬೊಬ್ಬ ವಾನರರು ಸುಗ್ರೀವನ ಮುಂದೆ ಬೊಬ್ಬೆ ಹಾಕಿ ಹೇಳಿದರು.

ಸೇವಕರಾದವರಿಗೆ ತಮ್ಮ ಶಕ್ತಿಯ ಅರಿವಿರಬೇಕು. ಅಹಂಕಾರ ಇರಬಾರದು ― ಶ್ರೀಸೂಕ್ತಿ.

ಎಲ್ಲ ಕಪಿಗಳು ಹೊರಟ ಮೇಲೆ ರಾಮನು ಸುಗ್ರೀವನಲ್ಲಿ ನಿನಗೆ ಎಲ್ಲೆಲ್ಲಿ ಏನೇನಿದೆ ಎಂದು ಗೊತ್ತಾಗಿದ್ದು ಹೇಗೆ ..? ಭೂಮಂಡಲದ ಪರಿಚಯ ನಿನಗೆ ಹೇಗೆ ಆಯಿತು …?? ಎಂದು ಕೇಳಿದನು. ಆಗ ಸುಗ್ರೀವನು ರಾಮನಿಗೆ ನಮಸ್ಕಾರ ಮಾಡಿ, ಹೇಗೆ ಭೂಮಂಡಲದ ಪರಿಚಯ ಆಯಿತು ಎಂಬುದನ್ನು ಸ್ವಾರಸ್ಯಕರವಾಗಿ ವರ್ಣಿಸುತ್ತಾನೆ. ಸುಗ್ರೀವನನ್ನು ಕೊಲ್ಲಬೇಕೆಂದು ವಾಲಿ ಅಟ್ಟಿಸಿಕೊಂಡು ಬಂದಾಗ ಸುಗ್ರೀವ ತಪ್ಪಿಸಿಕೊಳ್ಳಲು ಓಡುತ್ತಿದ್ದ. ಮುಂದೆ ಸುಗ್ರೀವ ಹಿಂದೆ ವಾಲಿ, ವಾಲಿ ಸುಗ್ರೀವನಿಗಿಂತ ಬಲಾಧಿಕ. ಆದರೆ ಓಟದಲ್ಲಿ ಸುಗ್ರೀವನೇ ಮೇಲು. ಸುಗ್ರೀವನನ್ನು ಕೊಲ್ಲಲೆಂದು ವಾಲಿಯು ಅಟ್ಟಿಸಿಕೊಂಡು ಬಂದಾಗ ಸುಗ್ರೀವ ಮತ್ತು ಜೊತೆಗಾರರೆಲ್ಲರು ಓಡುತ್ತಾರೆ. ಹನುಮಂತನಿಗೆ ವಾಲಿಯನ್ನು ಎದುರಿಸುವ ಶಕ್ತಿ ಇದ್ದರೂ, ಅವನಿಗೆ ತನ್ನ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ. ಸುಗ್ರೀವ ಮತ್ತು ಜೊತೆಗಾರರೆಲ್ಲರೂ ಓಡಿ, ಓಡುತ್ತಿರುವಾಗ ನಗರ, ನದಿ, ಪರ್ವತ ಎಲ್ಲವನ್ನು ಕಾಣುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಪ್ರಪಂಚವು ಕನ್ನಡಿಯಲ್ಲಿ ಕಂಡಂತೆ ಕಂಡಿದೆ. ಭೂಮಿಯು ಗೋಳಾಕಾರವಾಗಿ ಆ ಸಂದರ್ಭದಲ್ಲಿ ಕಂಡಿದ್ದೇನೆ ಎಂದು ಸುಗ್ರೀವನು ಹೇಳಿದನು. ಬಹಳ ಎತ್ತರಕ್ಕೆ ಹೋದಾಗ ಮಾತ್ರ ಭೂಮಿಯು ಗೋಳಾಕಾರವಾಗಿ ಇರುವುದು ಕಾಣುತ್ತದೆ.

ಸುಗ್ರೀವನು ಪೂರ್ವಕ್ಕೆ ಓಡಿದಾಗ ಅಲ್ಲಿರುವ ನದಿ, ಕಾನನ ಪರ್ವತಗಳನ್ನೆಲ್ಲ ಕಾಣುತ್ತಾನೆ. ಪೂರ್ವಸಾಗರದವರೆಗೆ ಹೋದಮೇಲೆ ಗತಿಯಿಲ್ಲದೆ ದಕ್ಷಿಣಕ್ಕೆ ತಿರುಗುತ್ತಾನೆ. ದಕ್ಷಿಣ ದಿಕ್ಕಿನಲ್ಲಿ ವಿಂಧ್ಯ ಪರ್ವತವೇ ಮೊದಲಾಗಿರುವ ಸಂಪೂರ್ಣ ದಕ್ಷಿಣಾದಿಕ್ಕನ್ನು ತಿರುಗಿದ ನಂತರ, ಕ್ರಮವಾಗಿ ಪಶ್ಚಿಮಕ್ಕೆ ಬರುತ್ತಾನೆ. ಪಶ್ಚಿಮದಲ್ಲಿ ಓಡಿದ ನಂತರವೂ ವಾಲಿಯು ಹಿಂದಿನಿಂದ ಬೆನ್ನಟ್ಟಿ ಬರುತ್ತಿದ್ದರಿಂದ ಉತ್ತರದ ಕಡೆಗೆ ಸುಗ್ರೀವನು ಓಡಿದನು. ಉತ್ತರದಲ್ಲಿ ಹಿಮಾಲಯ, ಉತ್ತರ ಸಾಗರದವರೆಗೆ ಓಡಿರುತ್ತಾನೆ. ನಾವು ಅಣ್ಣ–ತಮ್ಮಂದಿರಿಬ್ಬರು ಸಮಸ್ತ ಪ್ರಪಂಚವನ್ನೇ ತಿರುಗಿದ್ದೇವೆ ಎಂದು ರಾಮನಿಗೆ ಸುಗ್ರೀವನು ವರ್ಣಿಸಿದನು. ಕೊನೆಯಲ್ಲಿ ಹನುಮಂತನಿಗೆ ಋಷ್ಯಮೂಕಕ್ಕೆ ಯಾಕೆ ಹೋಗಬಾರದು ..? ಎಂದು ನೆನಪಾಗುತ್ತದೆ. ಯಾಕೆಂದರೆ ಋಷ್ಯಮೂಕಕ್ಕೆ ವಾಲಿಯು ಬರುವಂತೆ ಇಲ್ಲ. ಮತಂಗ ಮುನಿಯ ಶಾಪವಿದೆ.ಒಂದು ವೇಳೆ ವಾಲಿಯು ಬಂದರೆ ವಾಲಿಯು ಸಾಯುತ್ತಾನೆ ಎಂದು. ಹನುಮಂತನು ಹೇಳಿದ ಮೇಲೆ ನಾವೆಲ್ಲರೂ ಋಷ್ಯಮೂಕಕ್ಕೆ ಹೋದೆವು ಎಂದು ರಾಮನಿಗೆ ಸುಗ್ರೀವನು ಹೇಳಿದನು.

ಯುದ್ಧದಲ್ಲಿ ಹೆದರಿ ಓಡಿದವರನ್ನು ಕೊಲ್ಲಬಾರದು ― ಧರ್ಮಯುದ್ಧದ ನಿಯಮ.

ಅತ್ತ ಕಪಿಗಳು ಜಗತ್ತಿನಾದ್ಯಂತ ಪಸರಿಸಿ ಸೀತೆಯನ್ನು ಹುಡುಕುತ್ತಾ ಇದ್ದರು. ಹಗಲು ಎಲ್ಲರೂ ಬೇರೆ ಬೇರೆಯಾಗಿ ಹುಡುಕಿ, ರಾತ್ರಿ ಎಲ್ಲರೂ ಸೇರಿ ಗೊತ್ತು ಮಾಡಿದ ಒಂದು ಪ್ರದೇಶದಲ್ಲಿ ಬಂದು ಸೇರುತ್ತಿದ್ದರು. ಪೂರ್ವದಿಕ್ಕಿಗೆ ಹೋದ ವಿನಿತನು ಪ್ರಸ್ರವಣ ಪರ್ವತಕ್ಕೆ ಬರಿಗೈಯಲ್ಲಿ ಹಿಂದಿರುಗಿದ. ಶತಬಲಿ ಉತ್ತರ ದಿಕ್ಕನ್ನೆಲ್ಲವನ್ನು ಅನ್ವೇಷಣೆ ಮಾಡಿದ. ಅವನಿಗೆ ಸೀತಾ ದರ್ಶನವಾಗದೇ ಇದ್ದಾಗ ಬರೀಗೈಯಲ್ಲಿ ಮರಳಿದ. ಪಶ್ಚಿಮ ದಿಕ್ಕಿಗೆ ಹೋದ ಸುಷೇಣನು ಚೆನ್ನಾಗಿ ಹುಡುಕಿದ ಮೇಲೆಯೂ ಏನು ಪ್ರಯೋಜನ ಆಗದೆ ಇದ್ದಾಗ ಸುಗ್ರೀವನ ಬಳಿ ಬಂದು ಸೇರಿದ. ಈ ಮೂರು ದಿಕ್ಕಿಗೆ ಹೋದವರು ಬರೀಗೈಯಲ್ಲಿ ಹಿಂದಿರುಗಿದರು. ಅವರೆಲ್ಲ ಹಿಂದಿರುಗಿ ಬರುವ ತನಕವೂ ಸುಗ್ರೀವನ ಜೊತೆ ರಾಮನು ಅಲ್ಲಿಯೇ ಕುಳಿತಿದ್ದನು. ಬರೀಗೈಯಲ್ಲಿ ಹಿಂದಿರುಗಿದ ಕಪಿಗಳೆಲ್ಲರು ಸೀತೆ ಸಿಗದೇ ಇರುವ ವಿಷಯವನ್ನು ರಾಮ ಮತ್ತು ಸುಗ್ರೀವನಿಗೆ ಹೇಳುತ್ತಾರೆ. ಆದರೆ ಹನುಮಂತ ಇನ್ನು ಬಂದಿಲ್ಲ, ಅವನು ಹುಡುಕಿಕೊಂಡೇ ಬರುತ್ತಾನೆ ಎಂದು ಕಪಿಗಳಿಗೂ ಭರವಸೆ ಇತ್ತು. ಕಪಿರಾಜನಿಗೂ, ಎಲ್ಲ ಕಪಿಗಳಿಗೂ, ಶ್ರೀರಾಮನಿಗೂ ಹನುಮಂತನ ಮೇಲೆ ಭರವಸೆ ಇತ್ತು. ಕಪಿಗಳು ಸೀತೆಯನ್ನು ಯಾವ ದಿಕ್ಕಿಗೆ ಕದ್ದೊಯ್ಯಲಾಗಿದೆಯೋ ಅದೇ ದಿಕ್ಕಿಗೆ ಹನುಮಂತನು ಹೋಗಿದ್ದರಿಂದ ಕಾರ್ಯಸಿದ್ದಿ ಆಗುತ್ತದೆ ಎಂದು ಸುಗ್ರೀವನಿಗೆ ಹೇಳಿದರು. ಸುಗ್ರೀವನ ಮಾರ್ಗದರ್ಶನದಂತೆ ಹನುಮಂತನು ದಕ್ಷಿಣ ದಿಕ್ಕಿನಲ್ಲಿರುವ ವಿಂಧ್ಯ ಪರ್ವತದಲ್ಲಿ ಸೀತೆಯನ್ನು ಹುಡುಕುತ್ತಿದ್ದನು. ವಿಂಧ್ಯ ಎಂದರೆ ಪರ್ವತಗಳ ಸಾಲು. ದಕ್ಷಿಣ ದಿಕ್ಕಿನಲ್ಲಿರುವ ಗುಹೆಗಳಲ್ಲಿ, ಗೌಪ್ಯಪ್ರದೇಶಗಳಲ್ಲಿ, ಕಾಡುಗಳಲ್ಲಿ ಹುಡುಕಿದರು. ಎಷ್ಟೇ ಹುಡುಕಿದರೂ ಸೀತೆ ಮಾತ್ರ ಸಿಗಲಿಲ್ಲ. ಕಂದ ಮೂಲ ಫಲಗಳನ್ನು ತಿಂದು ಮತ್ತೆ ಹನುಮಂತನೇ ಮೊದಲಾದ ವಾನರರು ಸೀತೆಯನ್ನು ಹುಡುಕಲು ಆರಂಭಿಸಿದರು.

ಅವರು ಹುಡುಕುತ್ತಿದ್ದ ಪ್ರದೇಶವು ನಿರ್ಜಲ, ನಿರ್ಜನ, ಭಯ ಹುಟ್ಟಿಸುವಂತಹದ್ದಾಗಿತ್ತು. ವಾನರರಿಗೆ ಹಸಿವು ಮತ್ತು ಬಾಯಾರಿಕೆಯಾಗಿತ್ತು. ನಂತರ ಬೇರೆ ಅರಣ್ಯವನ್ನು ಪ್ರವೇಶ ಮಾಡಿದರು. ಅಲ್ಲಿಯೂ ಸಹ ನೀರು ಸಿಗಲಿಲ್ಲ. ಕಪಿಗಳು ಬಾಯಾರಿಕೆಯಿಂದಲೇ ಮತ್ತೊಂದು ಪ್ರದೇಶಕ್ಕೆ ಹೋದರು. ಆ ಪ್ರದೇಶವು ಅತ್ಯಂತ ಭಯಾನಕವಾಗಿತ್ತು. ಮರಗಳಿತ್ತು ಆದರೆ ಮರದಲ್ಲಿ ಎಲೆ, ಹಣ್ಣುಗಳಿರಲಿಲ್ಲ. ನದಿಗಳಿತ್ತು ಆದರೆ ನೀರಿರಲಿಲ್ಲ, ನದಿಯ ಮಾರ್ಗ ಮಾತ್ರ ಇತ್ತು, ಎಷ್ಟೇ ದೂರ ಹೋದರೂ ತಿನ್ನುವ ಯಾವುದೇ ವಸ್ತು ಸಿಗಲಿಲ್ಲ. ಕಾಡುಕೋಣ, ಜಿಂಕೆ, ಆನೆ, ಹುಲಿ, ಪಕ್ಷಿಗಳೂ ಇರಲಿಲ್ಲ. ಮುಂದೆ ಮುಂದೆ ಹೋದಂತೆ ಮರಗಳು ಸಹ ಕಾಣಿಸಲಿಲ್ಲ. ಮರಕ್ಕೆ ಸುತ್ತು ಹಾಕಿಕೊಂಡು ಬೆಳೆಯುವ ಬಳ್ಳಿಗಳು, ನೆಲದಲ್ಲೇ ಬೆಳೆಯುವ ಬಳ್ಳಿಗಳು ಇಲ್ಲವಾಗಿತ್ತು. ಪರಿಮಳ ಭರಿತವಾದ ಕಮಲಗಳು ಇದ್ದರೂ ದುಂಬಿಗಳಿಲ್ಲವಾಗಿತ್ತು. ಈ ಪ್ರದೇಶವು ಯಾಕೆ ಹೀಗಾಯಿತೆಂದು ವಾಲ್ಮೀಕಿಗಳು ವಿವರಿಸಿದ್ದಾರೆ. ಒಂದಾನೊಂದು ಕಾಲದಲ್ಲಿ ಖಂಡು ಎಂಬ ಮಹಾಮುನಿ ವಾಸವಾಗಿದ್ದ. ತಪಸ್ವಿ, ಕಡು ಕೋಪದವನಾಗಿದ್ದ. ಅನೇಕ ನಿಯಮಗಳನ್ನು ಪಾಲನೆ ಮಾಡಿ ತಪಸ್ಸು ಮತ್ತು ಪುಣ್ಯವನ್ನು ಸಂಚಯನಮಾಡಿದ್ದನು.

ಮುನಿಯ ಚಿಕ್ಕ ವಯಸ್ಸಿನ ಮಗನೊಬ್ಬ ಕಾಡಿನಲ್ಲಿ ಕಣ್ಮರೆಯಾದಾಗ, ಮಗನು ಸತ್ತನು ಎಂದು ಭಾವಿಸಿ ಮಹಾಮುನಿಯು ಕಾಡಿಗೆ ಶಾಪವನ್ನು ಕೊಟ್ಟನು. ಮುನಿಯ ಶಾಪದಿಂದಾಗಿ ಮಹಾರಣ್ಯ ಈ ಸ್ವರೂಪಕ್ಕೆ ಬಂದಿತ್ತು. ವಾನರರು ಸ್ಮಶಾನದಂತೆ ಇರುವ ಅರಣ್ಯದಲ್ಲಿ ಹುಡುಕಿದರು. ಕಪಿಗಳಿಗೆ ಸೀತೆಯು ಸಿಗಲಿಲ್ಲ, ರಾವಣನು ಇಲ್ಲ, ಹೊಟ್ಟೆಗೂ ಏನು ಸಿಗಲಿಲ್ಲ. ನಂತರ ಇನ್ನೊಂದು ಕಾಡನ್ನು ಪ್ರವೇಶ ಮಾಡಿದರು. ಆ ಕಾಡಿನಲ್ಲಿ ದೊಡ್ಡ ರಾಕ್ಷಸ ಕಂಡುಬಂದ. ಪರ್ವತದಂತೆ ಇರುವ ರಾಕ್ಷಸನನ್ನು ನೋಡಿದಾಗ ಕಪಿಗಳು ಇವನೇ ರಾವಣ ಎಂದು ಭಾವಿಸಿದರು. ರಾಕ್ಷಸನು ಕಪಿಗಳನ್ನು ಕಂಡೊಡನೆಯೇ “ನಿಲ್ಲಿ! ಮುಗಿಯಿತು ನಿಮ್ಮ ಕಥೆ ” ಎಂದು ಘರ್ಜಿಸುತ್ತಾ, ಮುಷ್ಠಿ ಕಟ್ಟಿ ಬಂದನು. ಕಪಿಗಳ ನಾಯಕ ಅಂಗದ ಅಂಗೈಯಲ್ಲಿ ಒಂದು ಪೆಟ್ಟನ್ನು ಕೊಟ್ಟಾಗ ರಾಕ್ಷಸ ಸತ್ತೇ ಹೋದ. ಈ ಸಂದರ್ಭದಲ್ಲಿ ನಾವು ಬರೀಗೈ ಪ್ರಹಾರದಿಂದ ರಾಕ್ಷಸರನ್ನು ಕೊಲ್ಲುವ ಶಕ್ತಿ ಕಪಿಗಳಿಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ರಾಕ್ಷಸರಿಗಿಂತ ಕಪಿಗಳಿಗೆ ಹೆಚ್ಚು ಸಾಮರ್ಥ್ಯ ಇತ್ತು. ರಾಕ್ಷಸರು ಕವಚವನ್ನು ಧರಿಸಿದ್ದರೂ, ಯಾವುದೇ ಆಯುಧ ಮತ್ತು ಕವಚವನ್ನು ಧರಿಸದೇ ಇರುವ ಕಪಿಗಳನ್ನು ಎದುರಿಸಲಾಗಲಿಲ್ಲ. ನಂತರ ಇನ್ನೊಂದು ಪರ್ವತವನ್ನು ಪ್ರವೇಶಿಸಿ ಅಲ್ಲಿ ಸೀತೆಯನ್ನು ಹುಡುಕಿದರು. ಸೀತೆಯು ಸಿಗದಿದ್ದಾಗ ದೀನರಾಗಿ ಎಲ್ಲ ಕಪಿಗಳು ಮರದ ಬುಡದಲ್ಲಿ ಕುಳಿತುಕೊಂಡರು. ವಿಪರೀತ ಆಯಾಸವಾಗಿದ್ದರೂ ನಾಯಕನಾಗಿದ್ದರಿಂದ ಅಂಗದನು ಎಲ್ಲರನ್ನು ಸಂತೈಸಿ ಚೈತನ್ಯ ತುಂಬುವ ಪ್ರಯತ್ನವನ್ನು ಮಾಡುತ್ತಾನೆ.

ದೊಡ್ಡ ಕಾಲವು ಕಳೆದಿತ್ತು. ಸುಗ್ರೀವನ ಅತ್ಯುಗ್ರವಾದ ಶಾಸನವನ್ನು ಪಾಲಿಸದಿದ್ದರೆ ಬದುಕಲು ಅವಕಾಶವಿಲ್ಲ. ಹಾಗಾಗಿ ಮತ್ತೆ ಪ್ರಾಣ ಹೋಗುವವರೆಗೂ ನಾವು ಹುಡುಕೋಣ, ಬೇಸರ ಮಾಡುವುದು ಬೇಡ ಎಂದು ಅಂಗದನು ಕಪಿಗಳಿಗೆ ಹೇಳಿದನು.

ಕಾರ್ಯ ಸಿದ್ದಿಯಾಗಬೇಕೆಂದರೆ ಸೋಲನ್ನೊಪ್ಪದ ಮನಸ್ಸು, ದಕ್ಷತೆ, ಸಾಮರ್ಥ್ಯ ಇರಬೇಕು ― ಶ್ರೀಸೂಕ್ತಿ.

ನಿರಂತರವಾಗಿ ಒಂದು ಕೆಲಸವನ್ನು ಮಾಡಿದರೆ ಕೊನೆಗೆ ಫಲವು ಬಂದೆ ಬರುತ್ತದೆ. ಸುಗ್ರೀವನ ಬಹುಮಾನ ಮತ್ತು ಶಿಕ್ಷೆ ಎರಡು ಸಹ ದೊಡ್ಡದು. ಮತ್ತೆ ನಾವು ಶ್ರೀರಾಮನ ಬಗ್ಗೆ ಗೌರವ ಇಟ್ಟು ಕೆಲಸ ಮಾಡಬೇಕು ಎಂದು ಅಂಗದನು ಹೇಳಿದನು. ಆಗ ಬಾಯಾರಿಕೆಯಿಂದ ಬಳಲಿದ್ದ ಗಂಧ ಮಾದನನು ಅವ್ಯಕ್ತವಾದ ಧ್ವನಿಯಿಂದ ಅಂಗದ ಹೇಳಿದ್ದು ಸರಿ ಇದೆ, ಈಗ ಚರ್ಚೆ ಮಾಡಲು ಸಮಯವೂ ಇಲ್ಲ, ಹಾಗಾಗಿ ಮತ್ತೆ ಹುಡುಕೋಣ ಎಂದಾಗ ಎಲ್ಲ ಕಪಿಗಳು ವಿಂಧ್ಯಾಪರ್ವತವನ್ನು ಹುಡುಕಲು ಆರಂಭಿಸಿದರು. ಮುಂದೆ ರಜತ ಪರ್ವತದಲ್ಲಿಯೂ ಹುಡುಕಿದರು. ವಾನರರಿಗೆ ಮನಸ್ಸು ನಾಶವಾಗುವ ಪರಿಸ್ಥಿತಿ ಇತ್ತು. ಹಾಗಾಗಿ ಎಲ್ಲ ವಾನರರು ಇನ್ನೊಂದು ಮರದ ಬುಡದಲ್ಲಿ ಕುಳಿತುಕೊಂಡು ವಿಶ್ರಾಂತಿಯನ್ನು ಪಡೆದುಕೊಂಡು ಮತ್ತೆ ಎದ್ದರು. ಸಂಪೂರ್ಣ ದಕ್ಷಿಣ ದಿಕ್ಕನ್ನೇ ಅನ್ವೇಷಣೆ ಮಾಡೋಣ ಎಂದು ಹನುಮಂತನೇ ಮೊದಲಾದ ವಾನರರು ವಿಂಧ್ಯಪರ್ವತದಿಂದ ಹುಡುಕಲು ಆರಂಭಿಸಿದರು. ವಿಂಧ್ಯಪರ್ವತದ ನೈಋತ್ಯ, ಪಶ್ಚಿಮ ದಿಕ್ಕಿನಲ್ಲಿ ಬೇರೆ ಬೇರೆ ಕಪಿವೀರರು ಹುಡುಕಿದರು. ಗಜ, ಗವಾಕ್ಷ, ವಿಂದ, ಗಂದಮಾದನ, ಸುಷೇಣ, ಹನುಮಂತ, ತಾರ ಎಲ್ಲರೂ ಹುಡುಕುತ್ತಿದ್ದಾಗ ದೊಡ್ಡ ಬಿಲವೊಂದನ್ನು ಕಂಡರು. ಆ ಬಿಲಕ್ಕೆ ಕರಡಿ ಬಿಲ ಎಂದು ಹೆಸರಿತ್ತು. ನಯನೆಂಬ ರಾಕ್ಷಸನು ವಾಸಿಸುವ ಗುಹೆಯಾಗಿತ್ತು. ಗುಹೆಯ ಮೇಲೆ ಮರ–ಗಿಡಗಳು ಬೆಳೆದಿದ್ದವು. ಗುಹೆಯ ಒಳಗಿನಿಂದ ಹಂಸಗಳು, ಚಕ್ರವಾಕಗಳೆಲ್ಲ ಹೊರಗೆ ಬರುತ್ತಿದ್ದಿದ್ದನ್ನು ನೋಡಿದರು. ಅವುಗಳ ರೆಕ್ಕೆಗಳೆಲ್ಲ ಒದ್ದೆಯಾಗಿತ್ತು ಮತ್ತು ಕಮಲದ ರೇಣುಗಳು ಇತ್ತು. ಒಳಗೆ ಪ್ರವೇಶ ಮಾಡಿದರೆ ನೀರು ಸಿಗಬಹುದೆಂದು ಎಲ್ಲರೂ ಬಿಲದ ಬಳಿ ಬಂದರು. ಹನುಮಂತನಿಗೆ ಎಲ್ಲ ವನಗಳ ಬಗ್ಗೆ ಜ್ಞಾನ ಇತ್ತು. ಆಗ ಹನುಮಂತನು ಎಲ್ಲ ಕಪಿಗಳಿಗೆ ಒಳಗೆ ಪ್ರವೇಶ ಮಾಡೋಣ, ಇಲ್ಲಿ ನೀರು ಸಿಗುತ್ತದೆ ಎಂದು ಹೇಳಿದನು. ಎಲ್ಲ ಕಪಿಗಳು ಹನುಮಂತನ ಮಾತಿಗೆ ಒಪ್ಪಿ, ಗುಹೆಯೊಳಗೆ ಪ್ರವೇಶ ಮಾಡಿದರು. ಬಿಲದೊಳಗೆ ಬೆಳಕಿನ ಕಿರಣಗಳಿಗೂ ಪ್ರವೇಶ ಮಾಡಲು ಸಾಧ್ಯವಿಲ್ಲವಾಗಿತ್ತು. ಬಿಲದಲ್ಲಿ ಮುಂದೆ ಒಬ್ಬರನ್ನೊಬ್ಬರು ತಬ್ಬಿಕೊಂಡು ಸುಮಾರು 1ಯೋಜನದಷ್ಟು (ಸುಮಾರು 1 ಮೈಲು) ದೂರ ನಡೆದರು. ಆಗ ಎಲ್ಲರಿಗೂ ಬಾಯಾರಿಕೆ, ಗಾಬರಿಯಿಂದ ಪ್ರಜ್ಞೆ ತಪ್ಪುವ ಸ್ಥಿತಿ ಬಂದಿತ್ತು. ಒಂದು ಯೋಜನದಷ್ಟು ದೂರ ಹೋದ ನಂತರ ಇದ್ದಕ್ಕಿದ್ದಂತೆ ಬೆಳಕನ್ನು ಕಾಣುತ್ತಾರೆ ಕಪಿಗಳು. ಬೆಳಕನ್ನು ಕಂಡಾಗ ನಾವು ಇನ್ನು ಬದುಕುವುದಿಲ್ಲ ಎಂದು ಅಂದುಕೊಂಡರು. ಅಲ್ಲಿ ಮರಗಳೆಲ್ಲ ಬಂಗಾರದ ಬಣ್ಣದಲ್ಲಿದ್ದವು. ಅನೇಕ ವೃಕ್ಷಗಳು ಬಂಗಾರದ ಬಣ್ಣದ ಹೂಬಿಟ್ಟಿದ್ದವು. ಮರಗಳಿಗೆ ಕೆಂಪಾದ ಚಿಗುರುಗಳಿತ್ತು. ಅಲ್ಲಿರುವ ಸರೋವರದಲ್ಲಿ ಬಂಗಾರದ ಮೀನು, ಆಮೆಗಳಿದ್ದವು. ಅದಕ್ಕಾಗಿ ಅಲ್ಲಿ ನೀರನ್ನು ಕುಡಿಯಲಿಲ್ಲ. ವಿಚಿತ್ರವಾಗಿರುವ ಸ್ವರ್ಣ-ರಜತಗಳ ಲೋಕವನ್ನು ಕಂಡಾಗ ವಾನರರು ಗಾಬರಿಗೊಂಡರು.

ಮುಂದೇನಾಯಿತು ? ಇದು ನಿಜವಾಗಿ ಯಾವ ಗುಹೆ..? ಅಲ್ಲಿ ಕಂಡಿದ್ದು ಯಾವ ಭವನಗಳು…? ಕಪಿಗಳ ಕಥೆ ಏನಾಯಿತು….?? ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.
ಪ್ರವಚನವನ್ನು ಇಲ್ಲಿ ಕೇಳಿರಿ:


ಪ್ರವಚನವನ್ನು ನೋಡಲು:

Facebook Comments