ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಸಂಸ್ಕೃತದ ಒಳ್ಳೆಯ ಸುಭಾಷಿತವಿದು. ಮಂತ್ರವಲ್ಲದ ಅಕ್ಷರವಿಲ್ಲ, ಔಷಧವಲ್ಲದ ಗಿಡಮೂಲಿಕೆಯಿಲ್ಲ, ಯೋಗ್ಯನಲ್ಲದ ವ್ಯಕ್ತಿಯೇ ಇಲ್ಲ. ಯೋಜಕರಿಲ್ಲದೇ ಇವುಗಳ ಉಪಯೋಗ ಸಮಾಜಕ್ಕೆ ಸಿಗುವುದಿಲ್ಲ. ಒಳಗೆ ಹುದುಗಿದ ಶಕ್ತಿ ಅದು ಹೊರಗೆ ಬರಬೇಕು ಅಂತ ಆದರೆ, ಯಾರೋ ಒಬ್ಬನು ಗುರುತಿಸುವವನು ಬೇಕು, ಮಾರ್ಗದರ್ಶಕನು, ಯೋಜಕನು ಬೇಕು. ”ಅ”ದಿಂದ “ಜ್ಞ”ದವರೆಗೆ ಎಲ್ಲ ಅಕ್ಷರವೂ ಮಂತ್ರವಂತೆ. ಆದರೆ ಅದು ಹೇಗೆ ಮಂತ್ರ, ಉಚ್ಛರಿಸುವುದು ಹೇಗೆ, ಜಪಿಸುವುದು ಹೇಗೆ ಎಂಬುದನ್ನು ಯೋಜಿಸಿಕೊಡುವವ ಇಲ್ಲದಿದ್ದರೆ ಅದು ಅಕ್ಷರವಾಗಿ ಉಳಿಯುತ್ತದೆ, ಮಂತ್ರವಾಗುವುದಿಲ್ಲ. ಭಗವಂತನ ಸೃಷ್ಟಿಯಲ್ಲಿ ರೋಗಗಳೆಷ್ಟೋ ಗಿಡಮೂಲಿಕೆಗಳೂ ಅಷ್ಟೇ ಇದೆಯಂತೆ. ಯೋಗ್ಯರಲ್ಲದವರು ಯಾರೂ ಇಲ್ಲ. ಯಾವುದಕ್ಕೆ ಯೋಗ್ಯರು, ಯಾವಾಗ ಯೋಗ್ಯರು, ಹೇಗೆ ಯೋಗ್ಯರಾಗ್ತಾರೆ ಎನ್ನುವುದನ್ನು ಗುರುತಿಸಲು ಗುರು ಬೇಕಾಗುತ್ತಾನೆ. ಜಾಂಬವಂತನು ಒಂದು ಬಗೆಯಲ್ಲಿ ಗುರು, ಹನುಮಂತನ ಅಂತಸ್ಸತ್ವವನ್ನು ಪ್ರಕಟಪಡಿಸಿದವನು. ಪ್ರಪಂಚಕ್ಕೆ ಹನುಮನನು ಕೊಟ್ಟವನು. ಪ್ರಪಂಚಕ್ಕೆ ಒಂದು ಬಗೆಯಲ್ಲಿ ಹನುಮನಿಗೆ ಜಾಂಬವಂತ ಎರಡನೆಯ ತಾಯಿ. ಕಪಿಗಳಿಗೆಲ್ಲ ಸ್ಪಷ್ಟವಾಗಿ ಗೊತ್ತಿದೆ, ಸೀತೆ ಸಮುದ್ರದಾಚೆ ಇರುವಳೆಂದು. ಆದರೆ ಹನುಮಂತನಿಗೆ ಗೊತ್ತಿಲ್ಲ ತನ್ನಲ್ಲೆಷ್ಟು ಶಕ್ತಿಯಿದೆ ಎಂದು. ಜಾಂಬವಂತನಿಗೆ ಸ್ಪಷ್ಟವಾಗಿ ತಿಳಿದಿದೆ ಹನುಮಂತನ ಬಗ್ಗೆ. ಎಲ್ಲವೂ ಇದೆ, ಆದರೆ switch ON ಮಾಡುವವರು ಬೇಕಲ್ಲಾ….?

ಹನುಮಂತನಿಗೆ ತನ್ನ ಬಲದ ಮೇಲೆ ಮೊದಲೇ ಗೊತ್ತಿದ್ದರೆ, ರಾಮ ಸಿಗುತ್ತಿರಲಿಲ್ಲ. ಕಪಿಗಳಿಗೆ ಬಾಯಾರಿಕೆ, ಹಸಿವಾಯಿತು. ವಿಧಿಯ ನೋಡಿ, ಸ್ವಯಂಪ್ರಭೆಯ ಮೂಲಕ ಅವರ ಹಸಿವು ಬಾಯಾರಿಕೆ, ವಿಶ್ರಾಂತಿಯು ತೀರಿತು. ಅಷ್ಟೇ ಅಲ್ಲ ಮುಂದೆ ಏನು ಎನ್ನುವ ಪ್ರಶ್ನೆಗೆ ವಿಧಿಯೇ ಉತ್ತರವನ್ನು ಕೊಟ್ಟಿತು. ಸಂಪಾತಿಯ ಕಾಲ್ಬುಡದಲ್ಲಿ ಬಂದರು ಕಪಿಗಳು ಕಣ್ಮುಚ್ಚಿ ಬಿಡುವಷ್ಟರಲ್ಲಿ. ಅಲ್ಲೇ ಮುಂದೆ ದಕ್ಷಿಣಸಮುದ್ರ, ಲಂಕೆ. ಸ್ವಯಂಪ್ರಭೆ ಅವಳು ಎಷ್ಟು ಸರಿಯಾದ ಜಾಗಕ್ಕೆ ತಂದು ಬಿಟ್ಟಳು, ಸಂಪಾತಿಯ ಹತ್ತಿರ, ಅಂದರೆ ಇದೆಲ್ಲದಕ್ಕೂ ಒಂದು ಕಾಣದ ಕೈ ಅವರನ್ನು ನಡೆಸುತ್ತಿದೆಯಲ್ಲವೇ..!? ಮುಂದೆ ಕಪಿಗಳು ಸಮುದ್ರದ ಬಾಗಿಲಿಗೆ ಬಂದು ನಿಂತು, ನಾನು ಹತ್ತು, ನಾನು ಇಪ್ಪತ್ತು, ನಾನು ಮೂವತ್ತು, ನಾನು ನೂರು. ಆದರೆ ಮರಳಿ ಬರುವ ದಾರಿ ಗೊತ್ತಿಲ್ಲ ಎನ್ನುವವರೆಗೂ ಮಾತಾಡಿದರು. ಹನುಮಂತನ ಮುಂದೆ ಜಾಂಬವಂತ ಬಂದು ನಿಂತನು. ಜಾಂಬವಂತ ಒಮ್ಮೆ ಕಪಿಸೇನೆಯನ್ನೂ, ಮೈಮರೆತ ಹನುಮಂತನನ್ನು ಅವಲೋಕನ ಮಾಡ್ತಾನೆ. ಜಾಂಬವಂತ ಹೀಗೆ ಹೇಳಿದನು, ” ವೀರನೇ, ವಾನರ ಲೋಕದ ವೀರಾದಿವೀರನೇ, ಸರ್ವಶಾಸ್ತ್ರವಿಶಾರದನೇ, ಸುಮ್ಮನೆ ಏಕೆ ಮೂಲೆ ಸೇರಿದೆ? ಮಾತನಾಡುವುದಿಲ್ಲ ಏಕೆ? ಈ ಪರಿಯ ಸಂಕಟದಲ್ಲಿ ನಾವೆಲ್ಲ ಇದ್ದಾಗ, ಏಕೆ ಮೌನತಾಳಿದೆ? ಯಾರು ನೀನು? ಕಪಿರಾಜ ಸುಗ್ರೀವನಿಗೆ ನೀನು ಕಡಿಮೆಯಲ್ಲ, ರಾಮಲಕ್ಷ್ಮಣರ ತೇಜಸ್ಸಿಗೆ ನೀನು ಸಮಾನ. ಅವರ ಸಾಮರ್ಥ್ಯಕ್ಕೆ ಸಮಾನ ನಿನ್ನ ಸಾಮರ್ಥ್ಯ. ಗೊತ್ತಿಲ್ಲ ಹನುಮನಿಗೆ..! ನಾನು ವೈನತೇಯನನ್ನು ಅನೇಕ ಬಾರಿ ಕಂಡಿದ್ದೇನೆ. ಆ ವೈನತೇಯನ ರೆಕ್ಕೆಗಳಿಗೇನು ಬಲವೋ ನಿನ್ನ ಭುಜಗಳಿಗೂ ಅದೇ ಬಲ. ನಿನ್ನ ಬಲದಂತೆ, ಬುದ್ಧಿಯಂತೆ ಯಾರಿಗೂ ಇಲ್ಲ. ನೀನು ಸರ್ವಜೀವಿಗಳಲ್ಲಿ ವಿಶಿಷ್ಟ. ಆದರೆ ಯಾಕೆ ನೀನರಿಯೆ?

ನೀನ್ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ…? ಯಾರು ನೀನು? ದಿವ್ಯತೆ ನಿನ್ನ ಮೂಲ. ನಿನ್ನ ತಾಯಿ ದೇವಲೋಕದವಳು. ನಿನ್ನ ತಾಯಿ ಕಾರಣಾಂತರದಿಂದ ಈ ಭೂಮಿಗೆ ಬಂದವಳು. ಒಂದು ಅಭಿಶಾಪ! ಪುಂಜಕಸ್ಥಲ ಎಂಬ ಅಪ್ಸರೆಗೆ ಶಾಪ ಬಂತು. ಋಷಿಯೊಬ್ಬನು ಕಪಿವೇಷದಲ್ಲಿ ತಪಸ್ಸು ಮಾಡುತ್ತಿರುವಾಗ ಈಕೆಗೆ ಆತನನ್ನು ನೋಡಿ ನಗೆ ಉಕ್ಕಿ ಬಂದಿತು. ಕಪಿಮುನಿಯ ಮೇಲೆ ಹೂಹಣ್ಣುಗಳನ್ನು ಎಸೆದು ಛೇಡಿಸಿದಳು. ಮುನಿ ಕಣ್ಣುಬಿಟ್ಟು, ಶಾಪ ಕೊಟ್ಟ, ಕಪಿಯಾಗು ಎಂದನು. ಹಾಗೇ ನಿನ್ನ ತಾಯಿ ಶ್ರೇಷ್ಠ ಅಪ್ಸರೆಯಾಗಿದ್ದಳು. ಕುಂಜರನೆಂಬ ವಾನರೇಂದ್ರನ ಮಗಳಾದಳು. ಮೇರು ಪರ್ವತವನ್ನಾಳುವ ಕೇಸರನೆಂಬ ಮಹಾವಾನರನ ಪತ್ನಿಯಾದಳು. ಇಚ್ಛಾನುಸಾರ ರೂಪಧಾರಿಣಿ. ಒಮ್ಮೆ ಅಂಜನೆ ಮನೋಹರವಾದ ಮಾನುಷರೂಪ ಧಾರಣೆ ಮಾಡಿದಳು. ಧರಿಸಿ, ಗೋಕರ್ಣದ ಶತಶೃಂಗ ಪರ್ವತಾಗ್ರವನ್ನೇರಿ ವಿಹರಿಸಿದಳು. ಆಕೆಯನ್ನು ವಾಯುದೇವನು ನೋಡಿದನು. ಆತ ಅಂಜನೆಗೆ ಮನಸೋತನು. ತನ್ನ ದೀರ್ಘವಾದ ಬಾಹುಗಳಿಂದ ಮಾರುತನು ಅವಳನ್ನಾಲಿಂಗಿಸಿದನು. ಚಾರಿತ್ರ್ಯವತಿಯಾದ ಅಂಜನೆಯು ಗಾಬರಿಗೊಂಡು ಕೂಗಿಕೊಂಡಳು. ಆಗ ಮಾರುತದೇವನು ಉತ್ತರಿಸಿದನು. ಅಂಜನೇ, ನಾನು ನಿನ್ನನ್ನು ಪೀಡಿಸುವುದಿಲ್ಲ. ಒಳಿತನ್ನು ಮಾಡಲು ಬಂದಿದ್ದೇನೆ. ನಿನ್ನ ಮೂಲಕ ಈ ಪ್ರಪಂಚಕ್ಕೆ ಒಳಿತನ್ನು ಮಾಡಲು ಬಂದಿದ್ದೇನೆ. ಸ್ವಲ್ಪವೂ ಭಯಪಡಬೇಡ ಎಂದು ಹೇಳಿ, ನಿನಗೊಬ್ಬ ಪುತ್ರರತ್ನನು ಜನಿಸುವನು. ವೀರತೆಗೆ ಅವನು ಆಗರ, ಬುದ್ಧಿಯ ಸಾಗರ. ಮಹಾಬಲ, ಮಹಾಪರಾಕ್ರಮ, ಲಂಘನದಲ್ಲಿ ನನಗೆ ಸಮ. ಈ ಘಟನೆ ಏರ್ಪಾಡಾಗುತ್ತಿರುವುದು ಅವನಿಗಾಗಿ. ಅಂಜನೆಗೆ ಸಮಾಧಾನವಾಯಿತು. ಮಹಾಸಂಕಲ್ಪದ ನಡೆಯಿತು. ಇಷ್ಟೇ ಘಟನೆಯಲ್ಲಿ ಆಕೆಯ ಗರ್ಭದಲ್ಲಿ ಪ್ರಾವಿರ್ಭವಿಸಿತು. ಅದು ನೀನು ಆಂಜನೇಯ…! ಹಾಗಾಗಿ ನಿನ್ನ ಮೂಲ ದಿವ್ಯ, ತಂದೆ ಪ್ರಾಣದೇವ. ಗತಿಯೆಂಬುದೇ ಪ್ರಾಣದಿಂದ. ಅಂತ ಪ್ರಾಣದೇವನ ಮಗ ನೀನು. ಗುಹೆಯೊಂದರಲ್ಲಿ ನಿನ್ನನ್ನು ಪಡೆದಳು ಅಂಜನೆ. ಇದು ನಿನ್ನ ಜನ್ಮದ ಕಥೆ. ನಿನ್ನ ಆವಿರ್ಭಾವವಿದು.

ಬಾಲ್ಯದ ಕಥೆಯೇನು…? ಸುಪ್ರಸಿದ್ಧವಾದ ಸೂರ್ಯಫಲನ ಕಥೆ. ಚಿಕ್ಕ ಮಗುವಾಗಿದ್ದಾಗ ನಿನಗೆ ಹಸಿವಾಯಿತು, ನೀನು ಹಾಗೆ ಹೊರಬಂದೆ. ನೋಡಿದ್ದು ಬಾಲಸೂರ್ಯನನ್ನು. ಸೂರ್ಯನನ್ನು ತಿನ್ನುವ ಹಣ್ಣೆಂದು ಭಾವಿಸಿ, ಗಗನಕ್ಕೆ ನೆಗೆದವನು ನೀನು. ಎಂಥ ನೆಗೆತ! ಮುನ್ನೂರು ಯೋಜನದೆತ್ತರ ನೆಗೆದೆ ನೀನು. ಅಷ್ಟೆತ್ತರ ನೀನು ನೆಗೆದಾಗ ಆಗಿದ್ದೇನು? ಸೂರ್ಯ ದೂರ ಇದ್ದರೆ ಬೆಳಕು. ಹತ್ತಿರ ಹೋದರೆ ಬೆಂಕಿಯ ತಾಪ. ಆ ತಾಪದಲ್ಲೂ ನೀನು ವಿಚಲಿತನಾಗಲಿಲ್ಲ. ನಿನಗದು ಲೆಕ್ಕವೇ ಆಗಲಿಲ್ಲ. ನಿನಗೆ ಚಿಂತೆಯಿಲ್ಲದಿದ್ದರೂ, ದೇವತೆಗಳಿಗೆ ಚಿಂತೆಯಾಯಿತು. ಆಗ ರಾಹು ಬಂದನು, ಹೆದರಿ ಇಂದ್ರನಲ್ಲಿಗೆ ಹೋದನು. ಆಗ ಇಂದ್ರನು ಕ್ರೋಧಗೊಂಡನು. ವಜ್ರಾಯುಧವನ್ನು ಶಿಶುವಿನ ಮೇಲೆ ಪ್ರಯೋಗಿಸಿದನು ಇಂದ್ರ. ಹನುಮಂತನಿಗೆ ಶರೀರದಲ್ಲೇನೂ ಆಗಲಿಲ್ಲ. ವಜ್ರಾಯುಧ ಪ್ರಯೋಗದಿಂದ ಗಗನದಿಂದ ಭೂಮಿಗೆ ಬಿದ್ದನು. ಬೀಳುವಾಗ, ಹನುಮಂತನ ಎಡ ದವಡೆ ಹಲ್ಲಿಗೆ ಪರ್ವತವೊಂದು ತಾಗಿದೆ. ಒಂದು ಹಲ್ಲು ಮುರಿಯಿತು. ದವಡೆಗೆ ಹನು ಎಂದು ಹೆಸರು. ಈ ಕಾರಣದಿಂದ ಆತನಿಗೆ ಹನೂಮಾನ್ ಎಂಬ ಹೆಸರು ಬಂತು. ಸ್ವಾರ್ಜಿತ ನಾಮಧೇಯ. ವಾಯುದೇವನಿಗೆ ಕೋಪಬಂತು. ಮಗನೆಂಬ ಮಮತೆಯಿದೆ ವಾಯುವಿಗೆ. ಪ್ರಪಂಚದಲ್ಲಿ ವಾಯುವಿಲ್ಲದೇ, ಗುಹೆಯಲ್ಲಿ ಮಗನನ್ನು ಕರೆದುಕೊಂಡು ಹೋದನು. ದೇವತೆಗಳು ಗಾಬರಿಗೊಂಡು, ಬ್ರಹ್ಮದೇವ ಸಮೇತರಾಗಿ ಗುಹೆಯನ್ನು ಪ್ರವೇಶಿಸಿ, ಬೇಡಿಕೊಂಡರಂತೆ. ಹನುಮಂತನಿಗೆ ವರಗಳನ್ನು ಕೊಟ್ಟರು. ಬ್ರಹ್ಮ ಕೊಟ್ಟ ವರವೇನು, ಯುದ್ಧದಲ್ಲಿ ಯಾವ ಶಸ್ತ್ರಗಳಿಂದಲೂ ಅವಧ್ಯ, ಯಾವ ಶಸ್ತ್ರವೂ ನಿನ್ನನ್ನು ಬಂಧಿಸಲಾರದು. ಇಂದ್ರ ಸಂತಸಗೊಂಡನು. ವಜ್ರಾಯುಧ ಪ್ರಯೋಗದಿಂದಲೂ ಏನು ಆಗಲಿಲ್ಲವಲ್ಲ, ವಜ್ರಕಾಯನೇ ಎಂದು ವರಕೊಟ್ಟನು; ನಿನ್ನ ಮರಣ ನಿನ್ನಿಚ್ಛೆ. ಸೂರ್ಯ ಕೊಟ್ಟ ವರ, ತನ್ನ ತೇಜಾಂಶವನ್ನು ನಿನ್ನಲ್ಲಿಟ್ಟೆ. ಶಾಸ್ತ್ರೋಪದೇಶವನ್ನು ಅಧ್ಯಯನ ಮಾಡಿಸ್ತೇನೆ ಎಂದನು ಸೂರ್ಯ. ಸೂರ್ಯ ಗುರು ಹನುಮಂತನಿಗೆ. ವರುಣ ನನ್ನ ಪಾಶಕ್ಕೆ ಮೀರಿದವನು ನೀನು ಎಂದು, ಯಮನು ಮೃತ್ಯುದಂಡವನ್ನೇ ಮೀರಿದವನು ನೀನು ಎಂದು ವರವನ್ನು ಕೊಟ್ಟರು. ಅರೋಗಿತ್ವ, ಯಾವ ರೋಗಗಳೂ ನಿನ್ನನ್ನು ಬಾಧಿಸುವುದಿಲ್ಲ. ಎಂತಹ ಯುದ್ಧ ಕಾಲದಲ್ಲಿಯೂ ನಿನಗೆ ವಿಷಾದ ಉಂಟಾಗದು. ಕುಬೇರನು, ನನ್ನ ಗಧೆಯನ್ನು ಮೀರುತ್ತೀಯ ನೀನು. ಶಿವನು, ನನ್ನ ಶೂಲಕ್ಕೇ ಅವಧ್ಯ ನೀನು. ಹೀಗೆ ಎಲ್ಲರೂ ವರಕೊಟ್ಟರು. ವಿಶ್ವಕರ್ಮನು ವರಕೊಟ್ಟನು. ಪ್ರಪಂಚದ ಎಲ್ಲ ಶಸ್ತ್ರಗಳೂ ನನ್ನ ನಿರ್ಮಾಣ. ನೀನು ಅದೆಲ್ಲದಕ್ಕೂ ಅವಧ್ಯ. ಎಂದು ಎಲ್ಲ ದೇವತೆಗಳು ವರಕೊಟ್ಟರು. ನಂತರ ಬ್ರಹ್ಮದೇವನು ವಾಯುದೇವನಿಗೆ ಹೇಳಿದನಂತೆ, ಶತ್ರುಗಳಿಗೆ ಭಯಂಕರನೂ, ಮಿತ್ರರಿಗೆ ಅಭಯಂಕರನಾಗುತ್ತಾನೆ ಹನುಮಂತ. ಇವನ ಗತಿಗೆ ತಡೆಯಿಲ್ಲ. ಶಾಶ್ವತ ಕೀರ್ತಿ ಇವನದ್ದಾಗುತ್ತದೆ. ಬ್ರಹ್ಮದೇವನ ವರವಿದು. ಆಗ ವಾಯುದೇವನು ಗಾಳಿಯನ್ನು ಸರಿಯಾಗಿ ಬೀಸಲು ಆರಂಭಿಸಿದ. ಇಷ್ಟೂ ದಿವ್ಯರ ಚೈತನ್ಯ ಆಂಜನೇಯನಲ್ಲಿ ಹರಿದಿದೆ. ವಾಯುದೇವ ಸಂಜಾತ. ಇಂತಹ ನಿನ್ನ ಬಲವನ್ನು ಹೇಗೆ ವರ್ಣಿಸಲಿ…? ಎಂದು ಹೇಳಿ ಜಾಂಬವಂತ, ಅಸಾಮಾನ್ಯವಾದ ಕಾರ್ಯಕ್ಕೆ ಅಸಾಮಾನ್ಯರೇ ಬೇಕು. ನೀನೇ ಶಕ್ತ. ಸಾಗರೋಲ್ಲಂಘನಕ್ಕೆ ನೀನೇ ಶಕ್ತ. ಸೀತೆಯನ್ನು ನೋಡುವವನು ನೀನೇ…. ಸತ್ತ ನಮ್ಮ ಬಾಳಿಗೆ ಸಂಜೀವಿನಿಯಾಗು..! ಕಾಪಾಡಲಾರೆಯಾ ನೀನು… ಒಂದು ಕಾಲದಲ್ಲಿ ತ್ರಿವಿಕ್ರಮಾವತಾರದಲ್ಲಿ ಇಪ್ಪತ್ತೊಂದು ಬಾರಿ ಭೂಮಂಡಲವನ್ನು ಪ್ರದಕ್ಷಿಣೆ ಮಾಡಿದವನು ನಾನು. ಸಮುದ್ರಮಥನದ ಕಾಲದಲ್ಲಿ ಅಮೃತೋತ್ಪದಕ್ಕೆ ಕಾರಣರಾದವರು ನಾವು. ಆದರೆ ಈಗ ಇದು ನಿನ್ನ ಕಾಲ. ನಿನ್ನ ಸಾಮರ್ಥ್ಯವನ್ನು ಕಾಣಲು ನಾವು ಎದುರು ನೋಡುತ್ತಿದ್ದೇವೆ. ಹನುಮಾನ್, ಸಾಗರೋಲ್ಲಂಘನಕ್ಕೆ ಮೊದಲಾಗು. ವಿಕ್ರಮಿಸು ಎಂದನು ಜಾಂಬವಂತ.

ಹೀಗೆ ಜಾಂಬವಂತ ಹೇಳಿದಾಗ, ತಾನಾರೆಂಬುದು ಹನುಮಂತನಿಗೆ ಅರಿವಾಯಿತು. ತನ್ನ ಗತಿಯೇನು, ವೇಗವೇನು ಎಂಬುದು ಅರಿವಿಗೆ ಬಂತು. ಜಾಂಬವಂತನ ಪ್ರಚೋದನೆ ಸಂಪೂರ್ಣ ಸಹಾಯವನ್ನು ಮಾಡಿತು. ಕಪಿಸೇನೆಯಲ್ಲಿ ಆನಂದದ ಹಬ್ಬವನ್ನೇರಿ, ಬೆಳೆದನು ಹನುಮಂತ. ಹನುಮನ ಗುಣವನ್ನು ಹೊಗಳಿ, ಸ್ತುತಿಸಿದರು. ಅವರ ಒಂದೊಂದು ಅಕ್ಷರಕ್ಕೆ ಬೆಳೆದನು. ಹರ್ಷಗೊಂಡನು. ಹರ್ಷದಿಂದ ಬೆಳೆದನು ಮತ್ತೆ. ತೇಜಸ್ಸು ತುಂಬುತ್ತಿದೆ ಹನುಮನಲ್ಲಿ. ದಿವ್ಯರೂಪವನ್ನು ತಾಳಿದನು ಹನುಮಂತ. ಬೆಳೆದ ಹನುಮಂತನನ್ನು ಕಂಡರು ಕಪಿಗಳು. ವಿಕ್ರಮ, ತೇಜಸ್ಸು ತುಂಬುತ್ತಿದೆ ಅವನಲ್ಲಿ. ಕಪಿಗಳ ಚಿಂತೆ ಓಡಿಹೋಯಿತು. ಹರ್ಷವು ತುಂಬಿತು. ಕಪಿಗಳು ಘರ್ಜಿಸಿದರು ಸಂತಸಗೊಂಡು. ಒಂದು ಹರ್ಷಾತಿರೇಕ, ಇನ್ನೊಂದು ವಿಸ್ಮಯ! ಇವನು ನಮ್ಮ ಹನುಮನೇ ಎಂಬುದು ಕಪಿಗಳಲ್ಲಿ…! ಮುಹೂರ್ತ ಬರುವವರೆಗೆ ಬಲಸಾಮರ್ಥ್ಯಗಳು ಗೊತ್ತಾಗದಿರಲೆಂಬ ಶಾಪವಿತ್ತು. ಈಗ ಜಾಂಬವಂತನಿಂದ ಗೊತ್ತಾಯಿತು ಹನುಮನ ತ್ರಿವಿಕ್ರಮಾವತಾರ. ಎದ್ದು ನಿಂತ ಹನುಮನು ಹುಲ್ಲುಗಳ ಮಧ್ಯೆ ಮಹಾವೃಕ್ಷವಿದ್ದಂತೆ. ಬಗ್ಗಿ ನಮಸ್ಕಾರ ಮಾಡಿದನಂತೆ ಕಪಿಗಳ ಸಮೂಹಕ್ಕೆ. ಹನುಮಂತನ ಲೋಕಮರ್ಯಾದೆಯ ಪಾಲನೆಯನ್ನು ಗಮನಿಸಿ. ಎಷ್ಟು ಬೆಳೆದರೂ ತನ್ನ ಮೂಲವನ್ನು ಮರೆಯಲಿಲ್ಲ.

ನಂತರ ತನ್ನ ಪರಿಚಯವನ್ನು ಹೇಳಿದನಂತೆ, ತನ್ನ ಸಾಮರ್ಥ್ಯವನ್ನು ಹೇಳಬೇಕಲ್ಲವೇ.. ತನ್ನ ತಂದೆಯ ಮೂಲಕ ತನ್ನ ಪರಿಚಯವನ್ನು ನೀಡಿದನು. ಊಹಾತೀತ ವೇಗದಲ್ಲಿ ಬಂದು ಪರ್ವತವನ್ನು ಮುರಿದೆಸೆಯಬಲ್ಲ ಚಂಡಮಾರುತನ ಮಗ ನಾನು. ಬೆಂಕಿಯ ಗೆಳೆಯ, ಅನಲ ಸಖ ಅನಿಲನ, ಬೆಂಕಿಯ ಪುತ್ರ ನಾನು. ವಾಯುವೆಂದರೆ ಎಲ್ಲ ಬಲಗಳ ಆಕರ, ನಮ್ಮ ತಿಳುವಳಿಕೆಗೆ ಮೀರಿರುವಂಥದ್ದು. ಅಂತವನ ಮಗ ನಾನು. ಲಂಘಿಸುವಲ್ಲಿ ನನಗೆ ಸಮಾನರಿಲ್ಲ. ಪರ್ವತಗಳಲ್ಲಿ ಸರ್ವಶ್ರೇಷ್ಠ ಮೇರು ಪರ್ವತ. ಒಂದು ಲಕ್ಷ ಯೋಜನ ಎತ್ತರದ್ದು, 37ಸಾವಿರ ಯೋಜನ ಅಗಲದ್ದು. ಈ ಪರ್ವತವನ್ನು ಲೆಕ್ಕವಿಲ್ಲದಷ್ಟು ಬಾರಿ ಸುತ್ತಬಲ್ಲೆ; ಎಲ್ಲಿಯೂ ನೆಲವನ್ನು, ಪರ್ವತವನ್ನು ಮುಟ್ಟದೇ. ಎರಡೂ ಭದ್ರ ಬಾಹುಗಳಿಂದ ಮೇದಿನಿಯನ್ನು ತೇಲಿಸಬಲ್ಲೆ. ತೊಡೆಗಳ ವೇಗದಿಂದ ಸಮುದ್ರದ ನೀರನ್ನು ಆಕಾಶಕ್ಕೆ ಹಾರಿಸಬಲ್ಲೆ. ಗರುಡನಿಗೆ ವೇಗದಲ್ಲಿ ಸಮಾನರಿಲ್ಲ. ಅಂತಹ ಗರುಡನು ತನ್ನ ವೇಗದಲ್ಲಿ ಸಾಗಲಿ, ಅವನನ್ನು ಸಾವಿರ ಬಾರಿ ಪ್ರದಕ್ಷಿಣೆ ಮಾಡ್ತೇನೆ ನಾನು. ಇವನ ವೇಗವನ್ನು ಗಮನಿಸಿ. ಉದಯಪರ್ವತದಿಂದ ಸೂರ್ಯ ಸಂಚಾರವನ್ನು ಪ್ರಾರಂಭಿಸಲಿ, ನಾನೂ ಹೊರಡುತ್ತೇನೆ. ಅವನಿಗಿಂತ ಎಷ್ಟೋ ಮೊದಲು ಅಸ್ತಪರ್ವತವನ್ನು ತಲುಪುತ್ತೇನೆ. ಅಷ್ಟೇ ಅಲ್ಲ, ಮಧ್ಯಾಹ್ನದ ಹೊತ್ತಿಗೆ ಆತನೆದುರು ಇರುತ್ತೇನೆ. ಅದಾದ ಮೇಲೆ ಭೂಮಿಯನ್ನು ಮುಟ್ಟದೇ, ಅಲ್ಲಿಂದಿಲ್ಲಿಗೆ ಸಂಚರಿಸಬಲ್ಲೆ. ಪರ್ವತವನ್ನು ಕಂಪನಗೊಳಿಸುವೆ, ಭೂಮಿಯನ್ನು ಛೇದಿಸುವೆ. ನಾನು ಮುಂದೆ ಹಾರುವಾಗ ಹಿಂದೆ ಸಮುದ್ರ ಬರುತ್ತದೆ. ಪರ್ವತವನ್ನೊದ್ದು ಹಾರಿದರೆ, ವೃಕ್ಷಗಳು, ಹೂವುಗಳು ನನ್ನನ್ನು ಹಿಂಬಾಲಿಸುತ್ತವೆ. ನನ್ನ ಗತಿಯಲ್ಲಿ ಮೇಲ್ಮುಖವಾದ, ಕೆಳಮುಖವಾದ ಗತಿಯನ್ನು ನೀವು ನೋಡಬಹುದು.

ವಾನರರೇ, ನನ್ನ ಜ್ಞಾನನೇತ್ರದಿಂದ ಸೀತೆಯನ್ನು ಕಂಡೆ ನಾನು. ಈ ಕಾರ್ಯ ನೆರವೇರುತ್ತದೆ. ಕಪಿಗಳೇ, ಈಗಲೇ ಸಂತೋಷಪಡಿ. ಸ್ವಯಂ ಬ್ರಹ್ಮದೇವ ಬಂದರೂ, ಅವನ ಕೈಯಲ್ಲಿರುವ ಅಮೃತವನ್ನು ಕಿತ್ತುತಂದೇನು. ಇಡಿಯ ಲಂಕಾದ್ವೀಪವನ್ನೇ ಕಿತ್ತೆತ್ತಿ ತರುವೆ. ಹತ್ತುಸಾವಿರ ಯೋಜನದವರೆಗೆ ನಾನು ನೆಗಿಯಬಲ್ಲೆ. ನಿಶ್ಚಿಂತೆಯಿಂದಿರಿ ಎಂದು ಕಪಿಗಳಿಗೆ ಅಭಯವನ್ನು ಕೊಟ್ಟನು. ಇಷ್ಟು ಹೇಳಿ ಸಿಂಹನಾದ ಮಾಡಿದಾಗ, ಉಳಿದ ಕಪಿಗಳೆಲ್ಲರೂ ಪರಮಾಶ್ಚರ್ಯದಲ್ಲಿ ನೋಡ್ತಾ ಇದ್ದಾರೆ. ಜಾಂಬವಂತ ಎದ್ದು, ಹೇ ಕೇಸರೀಪುತ್ರ, ಹೇ ಹನುಮನ್, ಹೇ ವೀರ, ನಿನ್ನ ಸಮಸ್ತ ಬಳಗದವರ ಅಪಾರ ಶೋಕವು ನಿನ್ನಿಂದ ಬೇರೆ ಮಾಡಲ್ಪಟ್ಟಿತು. ನಿನ್ನ ಮಂಗಲವನ್ನು, ಶ್ರೇಯಸ್ಸನ್ನು ಹಾರೈಸುತ್ತಿದ್ದಾರೆ. ಋಷಿಗಳ ಪ್ರಸನ್ನತೆ, ಕಪಿವೃದ್ಧರ ಆಶೀರ್ವಾದದಿಂದ, ಗುರುಗಳ ಕೃಪೆಯಿಂದ ಲಂಘಿಸು ಸಾಗರವನ್ನು ಎಂದು ಹರಸಿದ ಜಾಂಬವಂತ. ನೀನು ಮರಳಿ ಬರುವವರೆಗೆ ನಾವು ಒಂಟಿಕಾಲಲ್ಲಿ ನಿಂತಿರುತ್ತೇವೆ. ಯಾಕೆಂದರೆ ನಮ್ಮ ಪ್ರಾಣಗಳು ನಿನ್ನಲ್ಲಿವೆ. ಅಂದರೆ ಹನುಮಂತನಿಗೆ ಎಷ್ಟು ದೊಡ್ಡ ಜವಾಬ್ದಾರಿ ಎಂದನು ಜಾಂಬವಂತ. ಆಗ ಹನುಮಂತ ಇಂತೆಂದನು, ನನ್ನ ಲಂಘನವನ್ನು ಈ ನೆಲ ಸಹಿಸಲಾರದು. ಪಾದಾಘಾತವನ್ನು ಈ ನೆಲ ಸಹಿಸಲಾರದು. ದೊಡ್ಡ ದೊಡ್ಡ ಬಂಡೆಗಳಿಂದ ಕೂಡಿರುವಂತಹ, ಮಹೇಂದ್ರ ಪರ್ವತದ ಶಿಖರಗಳು ಸರಿ. ಅಲ್ಲಿ ನನ್ನ ವೇಗವನ್ನು ಪ್ರಯೋಗ ಮಾಡುತ್ತೇನೆ ಎಂದು ಹೇಳಿದನು. ಮಹೇಂದ್ರಪರ್ವತವನ್ನು ಏರಲಾರಂಭಿಸಿದನು. ಮಹೇಂದ್ರ ಪರ್ವತವು ಕಂಪಿಸುತ್ತಿದೆ ಹನುಮನ ಪಾದಾಘಾತದಿಂದ. ಪಕ್ಷಿಗಳು, ಮೃಗಗಳೆಲ್ಲರಿಗೂ ಏನಾಯಿತೆಂದೇ ಗೊತ್ತಾಗದ ಸ್ಥಿತಿ. ದೊಡ್ಡ ದೊಡ್ಡ ಸರ್ಪಗಳು ಬಿಲವನ್ನು ಸೇರಿದವು. ಪರ್ವತದ ಶಿಖರಗಳು ಜಾರಿ ಕೆಳಗೆ ಬರುತ್ತಿವೆ. ಋಷಿಗಳು ಆಕಾಶವನ್ನು ಸೇರುತ್ತಾರೆ. ಉಳಿದವರೆಲ್ಲರೂ ಮಹೇಂದ್ರ ಪರ್ವತವನ್ನು ಬಿಟ್ಟು ಹೋಗ್ತಾರೆ.

ಮಹಾಶಕ್ತಿ ನಮ್ಮನ್ನು ಪ್ರವೇಶಿಸುವಾಗ, ಮತ್ತೆಲ್ಲ ಆಚೀಚೆ ಸರಿಯುವುದು. ಅದು ಇಡೀ ನಮ್ಮ ಬದುಕನ್ನಾವರಿಸುವುದು, ಒಳಿತಿಗಾಗಿ. ಮಹಾಪರ್ವತವನ್ನೇರಿದ ಹನುಮಂತ ವೇಗವನ್ನು ಆವಾಹನೆ ಮಾಡಿದನು, ಏಕಾಗ್ರಗೊಳಿಸಿಕೊಂಡನು. ಸಮಾಧಾನ ಸ್ಥಿತಿಯನ್ನು ಕಂಡು, ಲಂಕೆಗೆ ಹಾರಿದನು. ಮೊದಲು ಅವನ ಮನಸ್ಸು ಲಂಕೆಗೆ ಹೋಯಿತು, ಶರೀರವು ಅನುಸರಿಸಿತು ಎನ್ನುವಲ್ಲಿಗೆ ಕಿಷ್ಕಿಂಧಾಕಾಂಡ ಮುಗಿಯಿತು. ಮುಂದೆ ಸುಂದರಕಾಂಡ. ಹನುಮ ಸುಂದರ. ವಾಲ್ಮೀಕಿ ರಾಮಾಯಣದಲ್ಲೇ ಅತಿ ಸುಂದರವಾದ, ಮುದನೀಡುವ ಕಾಂಡವಿದು. ಉತ್ತರಕಾಂಡದಲ್ಲಿ ರಾಮಾಯಣವನ್ನು ಆಳುವನು ಹನುಮ.

ಸುಂದರಕಾಂಡದ ಕುರಿತು ಮುಂದಿನ ಪ್ರವಚನದಲ್ಲಿ ಕೇಳೋಣ
ಪ್ರವಚನವನ್ನು ಇಲ್ಲಿ ಕೇಳಿರಿ:


ಪ್ರವಚನವನ್ನು ನೋಡಲು:

Facebook Comments