ಬೈರಾಗಢ, ಜನವರಿ 05 : ಇಂದು ಯಾತ್ರೆ ಬ್ಯಾವರಾದಿಂದ ಹೊರಟು ಬೈರಸಿಯಾ, ಸಿಹೋರ್ ಮೂಲಕವಾಗಿ ಭೋಪಾಲದ ಹೊರವಲಯದ ಬೈರಾಗಢವನ್ನು ತಲುಪಿ, ಸಭೆ ಮುಗಿಸಿ, ರಾತ್ರಿಯ ವಿಶ್ರಾಂತಿಗಾಗಿ ಭೋಪಾಲದ ಗಾಯತ್ರೀ ಪೀಠವನ್ನು ತಲುಪಿತು.

ಬೈರಾಸಿಯಾದ ದಶರಾ ಮೈದಾನದಲ್ಲಿ ಸಭೆಯ ವ್ಯವಸ್ಥೆ ಮಾಡಲಾಗಿತ್ತು. ಬೈರಾಸಿಯ ಒಂದು ಚಿಕ್ಕ ಪಟ್ಟಣ. ಗ್ರಾಮೀಣ ಇಲಾಖೆಗಳಿಂದ ಜನ ಆಗಮಿಸುತ್ತಿದ್ದರು.

ಯಾತ್ರೆಯ ಪಶ್ಚಿಮ ಮತ್ತು ಮಧ್ಯ ಭಾರತದ ಸಂಯೋಜಕರಾದ ಶ್ರೀ ರಾಮಚಂದ್ರ ಸಹಸ್ರಭೋಜನಿ ವಿಸ್ತಾರವಾಗಿ ಯಾತ್ರೆಯ ಬಗ್ಗೆ ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ವಿವರಿಸಿದರು.

ನಂತರ ಪರವಾಗಿ ಮಹಾಮಂಡಲೇಶ್ವರ ಶ್ರೀ ಅಖಿಲೇಶ್ವರಾನಂದ ಮಹಾರಾಜ್ ಅವರು ಗೋವಿನ ಮಹತ್ವದ ಬಗ್ಗೆ, ಗೋಸಂರಕ್ಷಣೆಯ ಅನಿವಾರ್ಯತೆ ಬಗ್ಗೆ ವಿವರಿಸಿದರು. ಸಂತರ ನೇತೃತ್ವದಲ್ಲಿ ಯಾತ್ರೆಯು ತನ್ನ ಸಫಲತೆಯನ್ನು ಕಾಣುತ್ತಿದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.

ಯಾತ್ರೆ ಮುಂದುವರೆದು ಸಿಹೋರ್ ಕಡೆಗೆ ತೆರಳಿತು. ಇಂದಿನ ವಿಶೇಷತೆ ಎಂದರೆ ಯಾತ್ರೆಯ ದಾರಿಯ ಇಕ್ಕೆಲಗಳಲ್ಲೂ ಹಸಿರಿಂದ ಕಂಗೊಳಿಸುವ ಗೋಧಿಯ ಹೊಲಗಳು. ರಸ್ತೆಯ ಇಕ್ಕೆಲಗಳಲ್ಲಿ ತರುಲತೆಗಳಿಂದ ಕಂಗೊಳಿಸುವ ದೃಶ್ಯ. ದಾರಿಯ ಮಧ್ಯದಲ್ಲಿ ಅಲ್ಲಲ್ಲಿ ಸ್ವಾಗತಗಳೂ ನಡೆದುವು. ಅವೆಲ್ಲವೂ ಗ್ರಾಮೀಣ ಸೊಗಡಿನಿಂದ ಕೂಡಿದ್ದುವು. ಅಲ್ಲಲ್ಲಿ ವಾರದ ಸಂತೆಗಳು ನಡೆಯುತ್ತಿದ್ದುವು. ಅವೂ ತಮ್ಮದೇ ಆದ ಗ್ರಾಮೀಣ ಸಂಸ್ಕೃತಿಯಲ್ಲಿ ನಡೆಯುತ್ತಿತ್ತು. ಸಿಹೋರ್ ವರೆಗಿನ ಯಾತ್ರೆ ತುಂಬ ಆಹ್ಲಾದಕರವಾಗಿ ನಡೆಯಿತು.

ಸಿಹೋರಿನಲ್ಲಿ ವ್ಯಾವಸಾಯಿಕ ಮಂಡಿಯ ಹತ್ತಿರ ನಡೆದ ಸಭೆಯಲ್ಲಿ ಗ್ರಾಮೀಣ ಭಾಗದಿಂದ್ ಬಂದ ಸಾವಿರಾರು ಜನರು ಭಾಗವಹಿಸಿದ್ದರು. ಪೂ. ಅಖಿಲೇಶ್ವರಾನಂದ ಅವರು ಇಲ್ಲಿಯೂ ವಿಸ್ತೃತವಾಗಿ ಗೋಮಹತ್ವವನ್ನು ವಿವರಿಸಿ ಸಂಕಲ್ಪ ಬೋಧಿಸಿದರು.

ಪ.ಪೂ. ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರಧಾನ ಆಶೀರ್ವಚನ ಸಂದೇಶ ನೀಡಿ, ಯಾತ್ರೆಯ ಉದ್ದೇಶ ಈಡೇರುವಲ್ಲಿ ಎಲ್ಲರೂ ತೊಡಗಿಕೊಳ್ಳೀ ಎಂದು ಆದೇಶಿಸಿದರು.

ಯಾತ್ರೆ ಮುಂದುವರೆದು ಭೋಪಾಲದ ಹೊರವಲಯದ ಬೈರಾಗಢವನ್ನು ತಲುಪಿತು. ತುಂಬ ಉತ್ಸಾಹಭರಿತ ಸ್ವಾಗತ ಮಹಿಳೆಯರಿಂದ ಮತ್ತು ಇತರ ಗೋಭಕ್ತ ಉತ್ಸಾಹೀ ಯುವಕರಿಂದ ನಡೆಯಿತು.

ವೇದಿಕೆಯಲ್ಲಿ ಸಂತರಾದ ಅಖಿಲೇಶ್ವರಾನಂದ ಜೀ, ನಾಮಧಾರಿ ಸಂತ ಸೂಬಾ ಸರಬಜೀತ್ ಸಿಂಗ್ ಜೀ, ದಂಡಪಾಣೀ ಸ್ವಾಮೀಜಿ, ಶ್ರೀ ಮೋಹನಾನಂದ ಸರಸ್ವತೀ, ಪ.ಪೂ. ಸಾಧ್ವೀ ಮಾತಾಜೀ, ಪೂ. ಮಮತಾಮಯೀ ಮಾತಾಜೀ ಹಾಗೂ ಪ.ಪೂ. ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯ ಉಪಸ್ಥಿತಿ ನೀಡಿದ್ದರು.

ಡಾ. ದಿನೇಶ ಜೀ ಅವರು ಯಾತ್ರೆಯ ಹಿನ್ನೆಲೆ ಹಾಗೂ ಪ್ರಗತಿ ಬಗ್ಗೆ ಮತ್ತು ಯಾತ್ರೆಯ ಉದ್ದೇಶಗಳ ಈಡೇರಿಕೆಯಲ್ಲಿ ಜನತೆಯ ತಂತ್ರವೇನೆಂಬುದನ್ನು ವಿವರಿಸಿದರು.

ಪೂ. ಅಖಿಲೇಶ್ವರಾನಂದ ಜೀ ಮಹಾರಾಜ್ ಅವರು ಗೋಮಹತ್ವವನ್ನು ವಿವರಿಸಿ ಸಂಕಲ್ಪ ಬೋಧನೆ ಮಾಡಿದರು.

ಪ.ಪೂ. ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಅಂದಿನ ಅಧ್ಯಕ್ಷತೆವಹಿಸಿದ್ದ ಸ್ವಯಂ ನಂದೀ ಮಹಾಸ್ವಾಮಿ ಶ್ರೀ ಬಸಪ್ಪ ಸ್ವಾಮಿಗಳನ್ನು ವಂದಿಸಿ, ಗೋಮಾತೆಗೆ ಪ್ರಣಾಮಗಳನ್ನು ಸಲ್ಲಿಸಿದರು. ಗೋವಿನ ಮೇಲೆ ವಿದೇಶೀ ಪ್ರಭಾವದಿಂದಾಗಿ ಭಾರತದ ವಿಜ್ಞಾನಿಗಳು ತಳಿ ಸಂಕರ ಮಾಡುವುದರ ಮೂಲಕ ನಡೆಸಿದ ಅತ್ಯಾಚಾರಗಳನ್ನು ಖಂಡಿಸಿದರು.

ಮನುಷ್ಯನ ತಾಯಿಗಿಂತಲೂ ಗೋಮಾತೆ ಯಾವ ಕಾರಣಕ್ಕಾಗಿ ಮಿಗಿಲು ಎಂಬುದನ್ನು ವಿವರಿಸಿದರು. ಕಸಾಯಿಖಾನೆ ಮನುಷ್ಯ ಕುಲಕ್ಕೆ ಒಂದು ಕಳಂಕವೆಂದರವರು. ಯಾವ ಅಪರಾಧವನ್ನೂ ಮಾಡದ ಗೋಮಾತೆ ಹಾಗೂ ಇತರ ಮೂಕ ಪ್ರಾಣಿಗಳ ಭಯಂಕರ, ಅಮಾನುಷ ಚಿತ್ರ ಹಿಂಸಾತ್ಮಕ ವಧೆ ಅಲ್ಲಿ ನಡೆಯುತ್ತದೆಂದು ಆಕ್ರೋಶವನ್ನು ವ್ಯಕ್ತಪಡಿಸಿದರು. ಗೋಹತ್ಯೆ ಕ್ರೂರತೆ ಮಾತ್ರವಲ್ಲ ಮೂರ್ಖತೆ ಕೂಡಾ ಎಂದರು. ಯಾವ ಹಸು ತಾನು ಜೀವಿತಪೂರ್ತಿ ಬದುಕಿದ್ದರೆ ಆರ್ಥಿಕವಾಗಿ, ಲಕ್ಷಾಂತರ ರೂಪಾಯಿಗಳ ಸೇವೆಯನ್ನು ನೀಡಬಹುದೋ, ಅಂತಹ ಹಸುವನ್ನು ಆಸೆಬುರುಕತನದಿಂದ ಕೆಲವು ನೂರು ರೂಪಾಯಿಗಳಿಗೆ ಮಾರುವುದು ಚಿನ್ನದ ಮೊಟ್ಟೆ ಕೊಡುವ ಕೋಳಿಯನ್ನು ಕೊಂದು ಮಾರಿದಂತೆ ಎಂದರು.

ಗೋಮಾಂಸ ತಿಂದವರೂ ಸುಖಿಗಳಲ್ಲ. ಏಕೆಂದರೆ ಗೋವು ತಾನು ತಿಂದ ಆಹಾರದ ವಿಷ ಪದಾರ್ಥಗಳನ್ನು ತನ್ನ ದೇಹದ ಮಾಂಸಖಂಡಗಳಲ್ಲಿ ಸಮ್ಮಿಳಿತಗೊಂಡಿರುತ್ತದೆ. ಇದು ಮನುಷ್ಯನಿಗೆ ಆಹಾರ ಯೋಗ್ಯವಲ್ಲ ಎಂದು ವಿಜ್ಞಾನಿಗಳೂ ಹೇಳಿದ್ದಾರೆ ಎಂದರವರು. ಮೊಹಮ್ಮದ್ ಪೈಗಂಬರ್ ಕೂಡಾ ಹಾಲು ಮತ್ತು ತುಪ್ಪ ಔಷಧವಾದರೆ ಗೋಮಾಂಸ ವಿಷವೆಂದು ಬೋಧಿಸಿದ್ದಾನೆ ಎಂಬ ವಿಷಯವನ್ನು ಅವರು ಸ್ಪಷ್ಟಪಡಿಸಿದರು.

ಗೋಹತ್ಯೆಯಲ್ಲಿ ಪಾಪಮಾಡುವವರು – ಅದನ್ನು ಸಹಮತಿಸುವವರು, ಅದನ್ನು ಮೌನವಾಗಿ ನೋಡಿ ವಿರೋಧಿಸುವವರು ಎಲ್ಲರೂ ಪಾಪಿಗಳು, ಪಾತಕಿಗಳು ಎಂದರು (ಕೃತಂ, ಅನುಮತಃ, ದೃಷ್ಟಂ).

ಗೋಮಾತೆಗೆ ನಿಮ್ಮ ಹೃದಯದಲ್ಲಿ ಜಾಗನೀಡಿ, ಯಾತ್ರೆಯ ಉದ್ದೇಶ ಈಡೇರಿಕೆಗೆ ನಿಮ್ಮನ್ನು ಜೋಡಿಸಿಕೊಳ್ಳೀ ಎಂದು ಜನತೆಗೆ ಕರೆ ಇತ್ತರು. ಸರಕಾರಕ್ಕೆ ರಾಸಾಯನಿಕ ಗೊಬ್ಬರಗಳ ಬದಲು ಸಾವಯವ ಕೃಷಿಗೆ ಪ್ರೋತ್ಸಾಹಧನ ನೀಡಲು ಕರೆ ನೀಡಿದರು.

ಸಂತರೆಲ್ಲರೂ ಒಂದಾಗಿ ಗೋಮಾತೆಗಾಗಿ ಆಂದೋಲನದಲ್ಲಿ ತೊಡಗಿದ್ದಾರೆ. ಗೋವಿನ ಒಳಿತಿಗಾಗಿಯಲ್ಲ ಈ ಆಂದೋಲನ ಜನತೆಯ ಒಳಿತಿಗಾಗಿ, ಭಾರತದ ಉಳಿವಿಗಾಗಿ ಎಂದು ಎಚ್ಚರಿಸಿದರು.

ಇತ್ತೀಚೆಗೆ ಭೋಪಾಲದಲ್ಲಿ ನಡೆದ ’ಗೋಕಥಾ’ ಕಾರ್ಯಕ್ರಮದ ಸಿಡಿಯನ್ನು ಪರಮಪೂಜ್ಯರು ಬಿಡುಗಡೆ ಮಾಡಿದರು.

Facebook Comments