ಜ.೦೯ – ಇಂದು ಯಾತ್ರೆ ಪನ್ನಾ ನಗರದಿಂದ ಹೊರಟು ಸತನಾ ನಗರ, ಕಟ್ನೀ ಪಟ್ಟಣದ ಮೂಲಕ ಜಬಲಪುರವನ್ನು ತಲುಪಿತು. ಇಂದು ಯಾತ್ರೆ ಅಂದಾಜು 270 ಕಿಮೀ ದೂರವನ್ನು ಕ್ರಮಿಸಿತು.

ಸತನಾ ನಗರ ಪನ್ನಾದಿಂದ 70 ಕಿಮೀ ದೂರದಲ್ಲಿದೆ. ಸತನಾ ಜಿಲ್ಲಾ ಕೇಂದ್ರ. ಜಿಲ್ಲೆಯ ಮೈಹರಿನಲ್ಲಿ ಶಾರದಾ ದೇವಿಯ ದೇವಸ್ಥಾನವಿದೆ. ಈ ದೇವಾಲಯ ಬಹಳ ಪ್ರಸಿದ್ಧ ಯಾತ್ರಾ ಸ್ಥಳ.

ಸತನಾದ ಸಭೆಯ ವೇದಿಕೆಯಲ್ಲಿ ಪ.ಪೂ. ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಪೂ. ಅಖಿಲೇಶ್ವರಾನಂದ ಗಿರಿ ಮಹಾರಾಜ್, ಪ್ರಯಾಗದ ಜಗದ್ಗುರು ತ್ರಿದಂಡೀ ರಂಗ ರಾಮಾನುಜಾಚಾರ್ಯ ಜೀ, ಡಾ. ತ್ರ್ಯಂಬಕ ರಮಣ ಗೋವಿಂದಾಚಾರ್ಯ ಜೀ (ಬಡಾ ಅಖಾಡಾ), ಪೂ. ಧರಣೀಧರ ಜೀ ಮಹಾರಾಜ್ (ಛೋಟಾ ಅಖಾಡಾ) ದಿವ್ಯ ಉಪಸ್ಥಿತಿ ನೀಡಿದ್ದರು.

ಶ್ರೀ ಸೀತಾರಾಮ ಕೆದಿಲಾಯ ತಮ್ಮ ಭಾಷಣದಲ್ಲಿ ಇಂದು ಭಾರತದಲ್ಲಿ ಗ್ರಾಮಗಳು ಸಮಾಪ್ತವಾಗುತ್ತಿವೆ, ಕಾರಣ ಭಾರತವೇ ವಿಸ್ತಾರವಾಗುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸುವುದು ಯಾತ್ರೆಯ ಉದ್ದೇಶವೆಂದರು. ಭಾರತದ ಯುವಕರಿಗೆ ಸರಿಯಾದ ಮಾರ್ಗದರ್ಶನ ಮಾಡುವುದಕ್ಕಾಗಿ ಈ ಯಾತ್ರೆ, ಕೃಷ್ಣ-ರಾಮರ ಜೀವನದ ಉದಾಹರಣೆ ನಮಗೆ ಗ್ರಾಮ ಮತ್ತು ಪ್ರಕೃತಿಯ ಮಧ್ಯೆ ಬಾಳಲು ಮಾರ್ಗದರ್ಶನ ನೀಡುತ್ತಿದೆ ಎಂದರು.

ಪ.ಪೂ. ರಾಘವೇಶ್ವರಭಾರತೀ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಗೋವು (ಪಶು) ಮತ್ತು ಮಕ್ಕಳು (ಶಿಷ್ಯ) ಇಬ್ಬರೂ ದೇವರ ಸಮಾನ. ಹಾಗಾಗಿ ಇಂದು ಇಲ್ಲಿ ಸೇರಿದ ಮಕ್ಕಳ ಸಮೂಹ. ಒಬ್ಬ ದೇವನನ್ನು ಬಂದ ಇನ್ನೊಬ್ಬ ದೇವರಂತೆ ಎಂದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಶಾಲಾ ಬಾಲಕ-ಬಾಲಕಿಯರು ಸೇರಿದ್ದು ಅವರು ಮುಖ್ಯವಾಗಿ ಅವರನ್ನೇ ಉದ್ದೇಶಿಸಿ ಮಾಡಿದರು.

ಇಂದಿನ ಮಕ್ಕಳೇ ಮುಂದಿನ ಮಧ್ಯ ಪ್ರದೇಶವನ್ನು ಹಾಗೂ ಭಾರತವನ್ನು ಮುನ್ನಡೆಸಬೇಕು. ಹಾಗಾಗಿ ಈ ಮಕ್ಕಳು ದೊಡ್ಡವರಾಗಲು, ಆರೋಗ್ಯವಂತ, ಬುದ್ಧಿವಂತರಾಗಲು ಭಾರತೀಯ ದನದ ಹಾಲು ಅತ್ಯಂತ ಮುಖ್ಯ ಎಂದರು. ಆದರೆಇಂದು ಮಕ್ಕಳು-ಅದರಲ್ಲೂ ನಗರವಾಸಿ ಮಕ್ಕಳು ಕುಡಿಯುವುದು ಹಾಲಲ್ಲ, ಅದು ಹಾಲಾಹಲ. ಅದು ಬಿಳಿಯ ಬಣ್ಣದ ದ್ರವ. ಹಾಲಿನ ಬಣ್ಣ ಅರಸಿನವಿರಬೇಕು. ವಿಶೇಷ ರುಚಿ ಇರಬೇಕು. ಆದರೆ ಇಂದು ಅವರು ಕುಡಿಯುವ ಹಾಲಲ್ಲಿ ಈ ಯಾವ ಗುಣಗಳೂ ಇಲ್ಲ. ಯಾಕೆ ಹೀಗೆ? ನಮ್ಮನ್ನು ಗೋವನ್ನು ಮೂರ್ಖತನದಿಂದ ಕೊಲ್ಲುತ್ತಿರುವುದೇ ಇದಕ್ಕೆ ಕಾರಣ. ಮಾತ್ರವಲ್ಲ ನಮ್ಮ ಭೂಮಾತೆ, ಭಾರತ ಮಾತೆಯನ್ನು ರಾಸಾಯನಿಕ ವಿಷವುಣಿಸುವುದರ ಮೂಲಕ ಕೊಲ್ಲುತ್ತಿದ್ದೇವೆ. ಅದರಿಂದಾಗಿ ಅನ್ನವೂ ವಿಷವಾಗುತ್ತಿದೆ. ಇಂದು ಗೋವು ಒಂದು ಪ್ರಾಣಿ ಅಲ್ಲ. ಅದು ಭಾರತದ ಪ್ರಾಣ. ಜಾನುವಾರ್ ಅಲ್ಲ ಅದುವೇ ಜಾನ್. ಅಂಥ ಪ್ರಾಣದ ಹತ್ಯೆ ಇಂದಾಗುತ್ತಿದೆ. ಇಂದು ಗೋರಕ್ಷಣೆಯ ಮೂಲಕ ಭಾರತದ ರಕ್ಷಣೆಯಾಗಬೇಕು ಹಾಗೂ ಇಂದಿನ ಮಕ್ಕಳಿಂದಲೇ ಆ ಕೆಲಸವಾಗಬೇಕು ಎಂದರು.

ಸತ್ನದ ಹತ್ತಿರವೇ ಚಿತ್ರಕೂಟವಿರುವುದು. ಶ್ರೀ ರಾಮನ ಚಿತ್ರಕೂಟ. ರಾಮನ ಅಂತಿಮ ಆದೇಶವೆಂದರೆ ಧರ್ಮ ಒಂದು ಸೇತು-ಜೀವಜೀವಗಳ ಮಧ್ಯದ ಸೇತು. ಇದನ್ನು ಶಿಥಿಲವಾಗಲು ಬಿಡಬಾರದು ಎಂಬುದು. ಚಿತ್ರಕೂಟದ ಪರಿಸರದಲ್ಲಿರುವ ಮಕ್ಕಳು ಮುಂದಿನ ರಾಮರಾಗಿ ರಾಮರಾಜ್ಯವನ್ನು ತರಬೇಕು ಎಂದು ಆಶಿಸಿದರು.

ಭೂಮಾತೆಗೆ ಊಟವನ್ನು ನೀಡುವ ಗೋಮಾತೆಯ ರಕ್ಷಣೆಯಾಗಬೇಕು. ತನ್ಮೂಲಕ ಮನುಷ್ಯರಿಗೆ ಆರೋಗ್ಯ, ಪೂರ್ಣ ಆಹಾರ ದೊರಕಬೇಕು. ಈಗ ಗೋವು ಉಳಿಯದಿದ್ದಲ್ಲಿ ಇನ್ನೆಂದೂ ಅದನ್ನು ಉಳಿಸುವ ಸಂದರ್ಭವೇ ಇರುವುದಿಲ್ಲ.

ಭಾರತೀಯ ತಳಿಯ ಗೋವನ್ನು ಉಳಿಸುವ ಅಂತಿಮ ಅವಕಾಶದ ಆಂದೋಲನ ಈ ಯಾತ್ರೆ. ಅತಿ ದೊಡ್ಡ ಯಾತ್ರೆ. ಮುಂದಿನ ಸಂಗ್ರಾಮಕ್ಕೆ ತಯಾರಾಗಿ ಎಂದು ಕರೆಯಿತ್ತರು. ಸಂತರ ನೇತೃತ್ವದಲ್ಲಿ ನಡೆಯುವ ಈ ಯಾತ್ರೆಯಲ್ಲಿ ತಮ್ಮನ್ನು ಜೋಡಿಸಿಕೊಳ್ಳಿ, ತಮ್ಮ ಸರ್ವಸ್ವವನ್ನು ನೀಡಿ ಎಂದು ಜನತೆಗೆ ಆಹ್ವಾನವಿತ್ತರು.

ಜಗದ್ಗುರು ತ್ರಿದಂಡೀ ರಂಗ ರಾಮಾನುಜಾಚಾರ್ಯ ಅವರು ತಮ್ಮ ಆಶೀರ್ವಚನದಲ್ಲಿ ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳಿಂದ ಪ್ರಾರಂಭಗೊಂಡ ಈ ಯಾತ್ರೆಯಲ್ಲಿ ಎಲ್ಲರೂ ಒಂದಾಗಿ ಯಾತ್ರೆಯ ಉದ್ದೇಶವನ್ನು ಈಡೇರಿಸಿ ಎಂದರು. ನಿಮ್ಮ ಮನದಲ್ಲಿ ಪರಿವರ್ತನೆಯಾಗಲಿ, ಧರ್ಮ ನಿರಪೇಕ್ಷವಲ್ಲ. ಧರ್ಮ ಅಪೇಕ್ಷಿಗಳಾಗಿ, ಎಲ್ಲಿಯವರೆಗೆ ಗೋಹತ್ಯೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶದಲ್ಲಿರುವ ದುರ್ಭಿಕ್ಷ, ಆತಂಕವಾದಗಳು ನಿಲ್ಲಲು ಸಾಧ್ಯವಿಲ್ಲವೆಂದರು. ಸಂತರೂ ತಮ್ಮ ಆತ್ಮ ಪರಿವರ್ತನೆ ಮಾಡಿಕೊಳ್ಳಲು ತಯಾರಾಗಬೇಕೆಂದರು.

ಸರಕಾರದಿಂದ ನಿರೀಕ್ಷೆ ಬೇಡ. ನಿಮ್ಮ ಓಟಿನ ಬಲದಿಂದ ಗೋರಕ್ಷಣೆ ಮಾಡುವ ಸರಕಾರವನ್ನು ತನ್ನಿ. ಶಂಕರಾಚಾರ್ಯರ ಪರಿಶ್ರಮಕ್ಕೆ ಸಾರ್ಥಕತೆ ತನ್ನಿ ಎಂದು ಕರೆಯಿತ್ತರು.

ಯಾತ್ರೆ ಮುಂದುವರೆದು ಜಬಲ್ಪುರದ ಕಡೆಗೆ ನಡೆಯಿತು. ದಾರಿಯಲ್ಲಿ ಮಯಿಹರ, ದನ್ವಾರಾ, ಉಚೆಹರಾ ಇಲ್ಲೆಲ್ಲಾ ಸ್ವಾಗತ ದೊರಕಿತು.

ಕಟನೀಯಲ್ಲಿ ನಡೆದ ಸಭೆಯಲ್ಲಿ ಪೂ. ಅಖಿಲಾನಂದೇಶ್ವರ ಜೀ ಗಿರಿ ಮಹಾರಾಜ್, ಪೂ. ರಾಮಕೃಷ್ಣಾಚಾರ್ಯ, ಪೂ. ಅಮರನಾಥ ಶಾಸ್ತ್ರಿ ಜೀ ಹಾಗೂ ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಮೇಘರಾಜ ಜೈನ್ ಮತ್ತು ಶ್ರೀ ಶಂಕರಲಾಲ್ ಅವರು ಉಪಸ್ಥಿತರಿದ್ದರು. ಸಭೆಯಲ್ಲಿ ಹಲವರು ಸಾಧಕರನ್ನು ಸಮ್ಮಾನಿಸಲಾಯಿತು.

ಯಾತ್ರೆ ಮುಂದುವರೆದು ಸಿರೋಹದ ಸಭೆಯಲ್ಲಿ ಭಾಗವಹಿಸಿತು. ಪೂ. ಅಖಿಲೇಶ್ವರಾನಂದ ಜೀ ಅವರು ಮುಖ್ಯ ಸಂತರಾಗಿ ಸಭೆಯಲ್ಲಿ ಭಾಗವಹಿಸಿದರು.

ಯಾತ್ರೆ ತನ್ನ ಕೊನೆಯ ಸ್ಥಾನ ಜಬಲಪುರವನ್ನು ತಲುಪಿದಾಗ ರಾತ್ರಿಯ 8 ಗಂಟೆ. ಜನ ಇನ್ನೂ ಕಾಯುತ್ತಿದ್ದರು. ಸಭೆಯ ಅಧ್ಯಕ್ಷತೆಯನ್ನು ನಂದೀ ಸ್ವಾಮಿ – ಬಸಪ್ಪ ಸ್ವಾಮಿಗಳು ವಹಿಸಿದ್ದರು.

ವೇದಿಕೆಯಲ್ಲಿ ಪ.ಪೂ. ರಾಘವೇಶ್ವರಭಾರತೀ ಮಹಾಸ್ವಾಮೀಜಿ, ಪೂ. ಅಖಿಲೇಶ್ವರಾನಂದ ಗಿರಿ ಮಹಾರಾಜ್, ಪೂ. ಪಗತಾನಂದ ಜೀ, ಪ್ಯಾರೇನಂದ ಜೀ ಮಹಾರಾಜ್, ಪೂ. ಮುಕುಂದದಾಸ ಜೀ ಮಹಾರಾಜ್, ಪೂ. ರಾಧೇಚೈತನ್ಯ ಮಹಾರಾಜ್, ಸ್ವಾಮಿ ಶಾಮದಾಸ ಜೀ ಮಹಾರಾಜ್ ಇವರೆಲ್ಲ ದಿವ್ಯ ಉಪಸ್ಥಿತಿ ನೀಡಿದ್ದರು. ಪೂ. ಅಖಿಲೇಶ್ವರಾನಂದ ಜೀ ಗಿರಿ ಮತ್ತು ಪೂ. ಸ್ವಾಮೀ ಶ್ಯಾಮದಾಸ ಜೀ ಮಹಾರಾಜ್ ಇವರು ಜನರನ್ನುದ್ದೇಶಿಸಿ ಆಶೀ ಸಂದೇಶ ನೀಡಿದರು.

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ ಸಂದೇಶದಲ್ಲಿ ಗೋಮಾತೆ, ಶ್ರೀರಾಮ, ನರ್ಮದಾ ಮಾತೆ, ಭಗವಾನ್ ವಿಂಧ್ಯಾಚಲ, ಮಹರ್ಷಿ ಜಾಬಾಲಿ ಜೀ, ಮಹಾರಾಣೀ ದುರ್ಗಾವತೀ ಜೀ ಇವರೆಲ್ಲರನ್ನು ಸ್ಮರಿಸಿದರು. ಗೊವಿನ ಪೀಡೆಯನ್ನು ಅರ್ಥಮಾಡಿಕೊಳ್ಳಿ. ಭಾರತಕ್ಕೆ ಪರಮಾತ್ಮ ಹಲವು ರತ್ನಗಳನ್ನು ಕೊಟ್ಟಿದ್ದಾರೆ. ದೇಶದ ಮೂರು ದಿಕ್ಕಲ್ಲಿ ಸಾಗರಗಳು, ಉತ್ತರದ್ಲಿಹಿಮಾಲಯ ಶ್ರೇಣಿ, ಗಂಗಾಮಾತೆ ಮತ್ತು ಎಲ್ಲಕ್ಕೂ ಮಿಗಿಲಾಗಿ ಗೋಮಾತೆ ಇವೆಲ್ಲವನ್ನೂ ಕೊಟ್ಟಿದ್ದಾನೆ. ಅವೆಲ್ಲವುಗಳಲ್ಲಿ ಗೋಮಾತೆ ದುರ್ಲಭರತ್ನ. ಅದನ್ನಿಂದುಳಿಸಿಕೊಳ್ಳಬೇಕಾಗಿದೆ. ಹಲವು ಪ್ರಜಾತಿಗಳು ಇಂದು ಸಂಪೂರ್ಣ ನಷ್ಟವಾಗಿವೆ. ಇನ್ನುಳಿದವನ್ನಾದರೂ ಉಳಿಸಿಕೊಳ್ಳದಿದ್ದಲ್ಲಿ ಮುಂದೆ ಅವಕಾಶವೇ ಸಿಗದಿದ್ದೀತು. ಭಾರತದ ಆರ್ಥಿಕ ಬಲವೇ ಗೋಮಾತೆ. ಭಾರತದ ಆರೋಗ್ಯ ಭಂಡಾರ ಗೋಮಾತೆ. ತಮ್ಮ ಪುರಾಣಗಳ ಪ್ರಕಾರವೂ ಗೋಮಾತೆಯ ಮೌಲ್ಯವನ್ನು ವಿವರಿಸುವ ಹಲವು ಘಟನೆಗಳಿವೆ. ಗೋವು ಮತ್ತು ನಂದಿ ಸಂತರಿಂದ ಮಿಗಿಲು. ಈ ಸಭೆಯಲ್ಲಿ ನಿಜವಾದ ಸಮ್ಮಾನಸಿಗಬೇಕಾದ್ದು ನಮಗಲ್ಲ, ನಂದಿಗೆ ಎಂದು ಗೋಮಹತ್ವವನ್ನು ಸಾರಿದರು. ಆದರೆ ಅಂಧ ನಂದಿಗೆ ಇಂದು ಎಲ್ಲೂ ಸ್ಥಾನವೇ ಇಲ್ಲವೆಂದು ದುಃಖಿಸಿದರು. ಸರಕಾರ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವ ಬದಲು ರಾಸಾಯನಿಕ ಗೊಬ್ಬರಕ್ಕೆ ಸಹಾಯ ನೀಡುತ್ತಿದೆ, ಎಂಥ ವಿಪರ್ಯಾಸವೆಂದರು. ಹಾಗೆಯೇ ಗೋಮಾಂಸ ಸೇವನೆಯ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ಗೋರಕ್ಷಣೆ ಮೂಕದರ್ಶನದಿಂದ ಸಾಧ್ಯವಿಲ್ಲ. ಎದ್ದೇಳಿ, ಗೋಮಾತೆಯ ಉಳಿವಿಗಾಗಿ ಸಂಗ್ರಾಮಕ್ಕೆ ಸಿದ್ಧರಾಗಿ – ಜುಡೋ-ಲಡೋ ಎಂದು ಜನತೆಗೆ ಕರೆ ಇತ್ತರು. ಭಾರತದಲ್ಲಿ ಮತ್ತೊಮ್ಮೆ ಧರ್ಮಭಾರತ ಉದಯವಾಗಲಿ, ಧರ್ಮದ ಬೆಳಕು ನಮ್ಮನ್ನು ಮುನ್ನಡೆಸಲಿ ಎಂದು ಹಾರೈಸಿದರು.

Facebook Comments