ಜ.೧೦ – ಯಾತ್ರೆಯ ೧೦೧ನೆಯ ದಿನ ಇಂದು. ಯಾತ್ರೆಯ ಪರಿಭ್ರಮಣ ಇಂದು ಜಾಬಾಲಿಪುರಂ-ಜಬಲ್ಪುರದಿಂದ ಹೊರಟು ಮಧ್ಯಪ್ರದೇಶದ ಕೊನೆಯ ಸಭಾಸ್ಥಾನ ಮಂಡಲಾ ಮತ್ತು ಅಲ್ಲಿಂದ ಮುಂದುವರೆದು ಛತ್ತೀಸಗಢದ ಕವರ್ಧಾವನ್ನು ತಲುಪಿತು.

ದಾರಿಯಲ್ಲಿ ನಾರಾಯಿಗಂಜಿನಲ್ಲಿ ಗ್ರಾಮೀಣ ಜನರಿಂದ ಪಾರಂಪರಿಕ ಸ್ವಾಗತ-ಆತಿಥ್ಯ ದೊರೆಯಿತು.

ಮಂಡಲಾ-ಮಾಹಿಷ್ಮತೀ ನಗರ-ಸಭೆಯ ವೇದಿಕೆಯಲ್ಲಿ ಪೂಜ್ಯ ಅಖಿಲೇಶ್ವರಾನಂದ ಗಿರೀ ಜೀ ಮತ್ತು ಪೂ. ಹರೇಶ್ವರೀ ಮಹಾರಾಜ್ ಅವರು ದಿವ್ಯ ಉಪಸ್ಥಿತಿ ನೀಡಿದ್ದರು. ಶ್ರೀ ಮೇಘರಾಜ ಜೀ ಜೈನ್ ಅವರು ವಿಶ್ವ ಮಂಗಲ ಯಾತ್ರೆ ಮತ್ತು ಗೋವಿನ ಮಹತ್ವದ ಬಗ್ಗೆ ಮತ್ತು ಯಾತ್ರೆಯ ಹಿನ್ನೆಲೆ-ಇದರೊಂದಿಗೆ ಹಸ್ತ ಜೋಡಿಸಿದ ಮಹನೀಯರು-ಸಂಸ್ಥೆಗಳ ಬಗ್ಗೆ ವಿಷಾದವಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಸಂಗ್ರಹಿಸಿದ 1,45,152 ಹಸ್ತಾಕ್ಷರಗಳನ್ನು ಸಂತರಿಗೆ ಸಮರ್ಪಿಸಲಾಯಿತು.

ಪೂ. ಅಖಿಲೇಶ್ವರಾನಂದ ಜೀ ಅವರು ಮುಖ್ಯ ಸಂತರಾಗಿ ಆಶೀರ್ವಚನ ನೀಡಿ ಮಾರ್ಗದರ್ಶನ ಮಾಡಿದರು.

ಯಾತ್ರೆ ಮುಂದುವರಿದಾಗ ದಾರಿಯಲ್ಲಿ ಬುವಾಬಿಛಿಯಾದಲ್ಲಿ ಸ್ವಾಗತ ದೊರೆಯಿತು.

ಛತ್ತೀಸಗಢ ರಾಜ್ಯವನ್ನು ಪ್ರವೇಶಿಸಿದ ನಂತರ ಚಿಲ್ಪಿ ಊರಲ್ಲಿ ಉತ್ಸಾಹಭರಿತ ಸ್ವಾಗತ ದೊರೆಯಿತು.

ಕವರ್ಧಾ ಸೇರಿದಾಗ ರಾತ್ರಿಯ 7:30. ವೇದಿಕೆಯ ಮೇಲೆ ಸಂತರುಗಳಾದ ದಂಡೀ ಮಹಾರಾಜ್, ಪೂ. ವಿಶುದ್ಧಾನಂದ ಜೀ ಮಹಾರಾಜ್, ಪೂ. ಶ್ರೇಷ್ಠಾಚಾರ್ ಜೀ ಮಹಾರಾಜ್, ಪೂ. ಅಖಿಲೇಶ್ವರಾನಂದ ಜೀ ಗಿರಿ ಮಹಾರಾಜ್ ಮತ್ತು ವಿಶೇಷ ಆಹ್ವಾನಿತರಾದ ಶ್ರೀ ಸೀತಾರಾಮ ಕೆದಿಲಾಯರು, ಶ್ರೀ ಮೇಘರಾಜ ಜೀ ಜೈನ್, ಶ್ರೀ ಶಂಕರಲಾಲ ಜೀ (ಈರ್ವರೂ ರಾಷ್ಟ್ರೀಯ ಕಾರ್ಯದರ್ಶಿಗಳು) ಉಪಸ್ಥಿತರಿದ್ದರು.

ಶ್ರೀ ಮೇಘರಾಜ ಜೀ ಜೈನ್ ಅವರು ಯಾತ್ರೆಯ ಬಗ್ಗೆ, ಗೋವಿನ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಿದರು.

ಶ್ರೀ ಸೀತಾರಾಮ ಕೆದಿಲಾಯ ಅವರು ರಾಮಕೃಷ್ಣ-ಭರತರ ಉದಾಹರಣೆಯನ್ನು ವಿವರಿಸಿ ಗ್ರಾಮ ಜೀವನದ ಮಹತ್ವವನ್ನು ವಿವರಿಸಿದರು. ಮಹಾತ್ಮಾ ಗಾಂಧೀಜಿಯ ಆಶಯವೂ ಅದೇ ಆಗಿತ್ತು. ಆದರೆ ಅದು ಈಡೇರಲಿಲ್ಲ. ಅದರಿಂದಾಗಿ ಭಾರತದಲ್ಲಿ ಇಂದು ಹಿಂಸೆ-ಅನರ್ಥಗಳು ನಡೆಯುತ್ತಿವೆ. ಇವೆಲ್ಲ ನಿಲ್ಲಬೇಕಾದರೆ ಗೋಮಾತೆಯ ರಕ್ಷಣೆ, ಗ್ರಾಮದ ರಕ್ಷಣೆ, ಪ್ರಕೃತಿಯ ರಕ್ಷಣೆ, ನಗರ ಜೀವನದಿಂದ ಗ್ರಾಮ ಜೀವನಕ್ಕೆ ಮುಖ ತಿರುಗಿಸಬೇಕೆಂದು ಕರೆ ನೀಡಿದರು. ಹಣಕ್ಕಾಗಿ ಎಲ್ಲವನ್ನೂ ಮಾರಾಟಮಾಡುವ ಪ್ರವೃತ್ತಿ ನಿಲ್ಲಬೇಕೆಂದರು.

ಗೋವಿಗೆ ವಿಶಿಷ್ಟ ಸಲ್ಲಿಸುತ್ತಿರುವವರನ್ನು ಸಾವಯವ ಕೃಷಿಯಲ್ಲಿ ಸಂಪೂರ್ಣ ತೊಡಗಿಕೊಂಡ ಕೃಷಿಕರನ್ನು ಸಮ್ಮಾನಿಸಲಾಯಿತು. ಜಿಲ್ಲೆಯ 1000 ಗ್ರಾಮದಲ್ಲಿ ಉಪಯಾತ್ರೆ ಮತ್ತು ಮನೆಮನೆ ಸಂಪರ್ಕದ ಮೂಲಕ ಸಂಗ್ರಹಿಸಿದ ಹಸ್ತಾಕ್ಷರವನ್ನು ಸಂತರಿಗೆ ಸಮರ್ಪಿಸಲಾಯಿತು.

ಸಭೆಯ ಅಧ್ಯಕ್ಷತೆವಹಿಸಿದ್ದ ಪ.ಪೂ. ದಂಡೀಸ್ವಾಮಿ ಶ್ರೀ ಶ್ರೀ ವಿಶುದ್ಧಾನಂದ ಜೀ ಅವರು ಸ್ವಾತಂತ್ರ್ಯಾ ನಂತರ ಯಾವ ರೀತಿ ಇಂದಿರಾಗಾಂಧಿಯವರು ಗೋಹತ್ಯೆಗೆ ನಡೆದ ಚಳವಳಿಯನ್ನು ದಮನ ಮಾಡಿದರು ಎಂಬುದನ್ನು ಮನಕಲಕುವಂತೆ ವಿವರಿಸಿದರು. ಗೋಹತ್ಯೆ ಪ್ರತಿಬಂಧಕ ಕಾನೂನು ಸಂಪೂರ್ಣ ಭಾರತದಲ್ಲಿ ಜಾರಿಗೊಳ್ಳಬೇಕು, ಬಡರೈತ ಮುದಿ ದನವನ್ನು, ತನ್ನ ಹೊಲದಲ್ಲಿ ಕೆಲಸವಿಲ್ಲವೆಂದು ಎತ್ತನ್ನು ಮಾರಬಾರದು, ಅವನು ಹಸುಗಳನ್ನು ಮಾರಬೇಕಾದ ಆರ್ಥಿಕ ಪರಿಸ್ಥಿತಿ ಅವನಿಗೆ ಬರದಂತೆ ಸರಕಾರ ಕಾರ್ಯಕ್ರಮ ರೂಪಿಸಬೇಕೆಂದರು. ಗೋವಿಗೆ ಚಿತ್ರಹಿಂಸೆ ಕೊಟ್ಟು ಕೊಲ್ಲುವುದು ನಿಲ್ಲಬೇಕೆಂದರು.

ಜಬಲಪುರದಿಂದ ಕವರ್ಧಾವರೆಗಿನ ದಾರಿ, ಅದರಲ್ಲೂ ಛತ್ತೀಸಗಢವನ್ನು ಪ್ರವೇಶಿಸಿದ ನಂತರದ ದಾರಿ ದಟ್ಟ ಕಾಡುಗಳ ಮಧ್ಯೆ, ಅಲ್ಲಲ್ಲಿ ಗ್ರಾಮಗಳನ್ನು ದಾಟುತ್ತ ಮುಂದೆ ಸಾಗುತ್ತದೆ. ತುಂಬ ರಮಣೀಯ. ಅಲ್ಲಲ್ಲಿ ಗೋವುಗಳ ಮಂದೆ ಮೇಯುತ್ತಿರುವುದೂ ಕಾಣಸಿಗುತ್ತಿತ್ತು. ಯಾತ್ರೆಯ ಸಾರ್ಥಕತೆ ಆಗ ದೊರಕುತ್ತಿತ್ತು.

Facebook Comments