ಜ.೧ – ಇಂದು ಯಾತ್ರೆ ಭಿಲ್ವಾಡಾದಿಂದ ಸಹಾಡಾ, ರಾಜಸಮಂದ (ಕಂಕ್ರೋಲಿ), ನಾಥದ್ವಾರ – ಉದಯಪುರಕ್ಕೆ ಬಂದು ತಲುಪಿತು.

ಸಹಾಡಾದಲ್ಲಿ ಒಳ್ಳೆಯ ಸ್ವಾಗತ ಕಾರ್ಯಕ್ರಮ ನಡೆಯಿತು. ಮುಂದೆ ಕುಂವರಿಯಾದಲ್ಲೂ ಒಳ್ಳೆಯ ರೀತಿಯ ಸ್ವಾಗತ ನಡೆಯಿತು.

ಯಾತ್ರೆ ಮುಂದುವರೆದು ರಾಜಸಮುಂದ (ಹಿಂದಿನ ಹೆಸರು ಕಂಕರೋಲಿ)ವನ್ನು ಸೇರಿತು. ನಗರದಲ್ಲಿ 4 ರಿಂದ 5 ಸಾವಿರ ಜನ ಸ್ವಾಗತ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬಾಲಕೃಷ್ಣ ಸ್ಟೇಡಿಯಂನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂತ ರವಿದಾಸ ಜೀ ಮಹಾರಾಜ್ ಅವರು ವೇದಿಕೆಯಲ್ಲಿ ಉಪಸ್ಥಿತಿ ನೀಡಿದ್ದರು. ಮೊದಲಿಗೆ ರಾಜಸ್ಥಾನ ಪ್ರಾಂತ ಸಂಯೋಜಕರಾದ ಕೈಲಾಶ ಜೀ ಅವರು ಯಾತ್ರೆಯ ಬಗ್ಗೆ ವಿವರಣೆ ನೀಡಿದರು. ನಂತರದಲ್ಲಿ ದಿಲ್ಲಿಯ ವ್ಯವಸಾಯಿ ಶ್ರೀ ಅಲೋಕಗುಪ್ತ ಅವರು ದೇಶೀ ತಳಿಯ ಹಸುವಿನ ಹಾಲಿನ ವಿಶೇಷತೆ ಹಾಗೂ ಇತರ ಹಾಲಿನಲ್ಲಿರುವ ಅವಗುಣಗಳನ್ನು ವಿವರಿಸಿದರು. ವಿ.ಹಿಂ.ಪ.ನ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಶ್ರೀ ಹುಕುಂಚಂದ್ ಜೀ ಸಾವ್ಲಾ ಅವರು ಗೋವಿನ ಭಾವನಾತ್ಮಕ ವಿಷಯಗಳನ್ನು ತುಂಬ ರಸವತ್ತಾಗಿ ವಿವರಿಸಿದರು.

ಯಾತ್ರೆ ಮುಂದುವರೆದು ಪ್ರಸಿದ್ಧ ವಿಷ್ಣುಕ್ಷೇತ್ರ ನಾಥದ್ವಾರವನ್ನು ಪ್ರವೇಶಿಸಿತು. ಬೃಂದಾವನದಿಂದ ಶ್ರೀಕೃಷ್ಣನ ಒಂದು ಮೂರ್ತಿ ಇಲ್ಲಿ ಬಂದು ಪ್ರತಿಷ್ಠಾಪನೆಗೊಂಡಿದೆಯೆಂದು ಪ್ರತೀತಿ.

ನಾಥದ್ವಾರದಲ್ಲಿರುವ ಗೋಶಾಲೆಯನ್ನು ನೋಡಲು ಹೋಗಿದ್ದೆವು. ತುಂಬ ಒಳ್ಳೆಯ ರೀತಿಯಲ್ಲಿ ಗೋವುಗಳನ್ನು ನೋಡಿಕೊಳ್ಳುತ್ತಿದ್ದಾರೆಂದು ಗೊತ್ತಾಗುತ್ತಿತ್ತು. ಅಲ್ಲಿನ ನಂದಿಗಳ ಸೌಂದರ್ಯ ಹಾಗೂ ದೇಹದಾರ್ಢ್ಯವನ್ನು ನೋಡಿಯೇ ಆನಂದಿಸಬೇಕಷ್ಟೇ.

ಯಾತ್ರೆಗೆ ಉದಯಪುರದಲ್ಲಿ ಅಭೂತಪೂರ್ವ ಸ್ವಾಗತ ದೊರೆಯಿತು. ಸುಂದರ ಗಿರಿಕಂದರಗಳಿಂದ ಆವೃತವಾದ ನಗರಿ ಉದಯಪುರ ಸಭೆಯಲ್ಲಿ ಅಂದಾಜು 2000 ಜನರು ಸೇರಿದ್ದರು. ಮಹಿಳೆಯರು ತಮ್ಮ ಸ್ಥಾನವನ್ನು ತುಂಬಿದ್ದರು.

ವೇದಿಕೆಯಲ್ಲಿ ಉದಯಪುರದ ಸಂತ ಪೂ. ಸುರೇಶಗಿರಿ ಮಹಾರಾಜ್ ಅವರು ಮೊದಲಿಗೆ ಆಶೀರ್ವಚನ ನೀಡಿದರು. ಶ್ರೀ ಶಂಕರಲಾಲ ಜೀ, ಶ್ರೀ ಹುಕುಂಚಂದ್ ಜೀ ಸಾವ್ಲಾ, ಶ್ರೀ ಅಲೋಕ ಗುಪ್ತಾ ಇವರು ಜನತೆಗೆ ಗೋಮಾತೆಯ ಬಗ್ಗೆ ತಿಳಿಸಿಕೊಟ್ಟರು. ಪೂಜ್ಯ ಸಂತ ಸುರೇಶಗಿರಿಯವರು ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸುವಂತೆ ಸರಕಾರವನ್ನು ಆಗ್ರಹಿಸಿದರು.

ಪ.ಪೂ. ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಉದಯಪುರವು ಕಾಶ್ಮೀರದಂತೆ ಸುಂದರ ಕಾಶಿಯಂತೆ ಪವಿತ್ರ ಎಂದು ವರ್ಣಿಸಿದರು. ಉದಯಪುರ ಜನತೆ ರಾಣಾ ಪ್ರತಾಪಸಿಂಹನ ಧ್ಯೇಯಗಳನ್ನು ತುಂಬಿಕೊಳ್ಳೀ, ಇದು ಉದಯಪುರ, ಇಲ್ಲಿ ಅಸ್ತವಿಲ್ಲ ಎಂದು ಬಣ್ಣಿಸಿದರು. ಅಂತೆಯೇ ಜನತೆಯೊಳಗಿನ ಸೂರ್ಯನೂ ಅಸ್ತಮಿಸಬಾರದೆಂದರು. ಗೋಮಾತೆಯ ಕಾರಣದಿಂದಾಗಿ ದಕ್ಷಿಣ ಭಾರತದ ತವರಿಗೂ ಉತ್ತರ ಭಾರತದ ಉದಯಪುರದ ಗೋಭಕ್ತರಿಗೂ ಸಮಾಗಮವಾಯಿತೆಂದು ಭಾವುಕರಾಗಿ ನುಡಿದರು. ಗೋಮಾತೆ ಒಂದುಗೂಡಿಸಿದ್ದಾಳೆಂದರು.

ನಮ್ಮ ದೇಶದ ರಾಜಕಾರಣಿ ನೇತಾರರ ಬಗ್ಗೆ ಪ್ರಸ್ತಾಪಿಸುತ್ತಾ, ಅದರ ಸ್ವಾರ್ಥದಿಂದಾಗಿ ಗೋಮಾತೆಗೆ ಇಂಥ ದುಸ್ಥಿತಿ ಬಂದಿದೆ ಎಂದರು. ಪ್ರಥ್ವಿರಾಜ ಗೋವಿಗಾಗಿ, ಧರ್ಮಕ್ಕಾಗಿ ತನ್ನನ್ನು ಪಣಕ್ಕೊಡ್ಡಿದೆ. ಅಂಥ ನಾಡಿನ ನೇತಾರರಿಂದ ಈ ರೀತಿಯ ಅನ್ಯಾಯ ಅಕ್ಷಮ್ಯ ಎಂದರವರು.

ಗೋರಕ್ಷೆ ಎಂದರೆ ಹತ್ಯೆ, ಹಿಂಸೆ, ಉಪೇಕ್ಷೆ ಇವನ್ನು ಬಿಟ್ಟು ಗೋವಿನ ಒಳಿತಿನ ಬಗ್ಗೆ ಏನೆಲ್ಲ ಮಾಡಲು ಸಾಧ್ಯವೋ ಅದನ್ನು ಮಾಡಿ ಎಂಬುದೇ ಈ ಯಾತ್ರೆಯ ಸಂದೇಶವೆಂದರು. ಈ ಯಾತ್ರೆ ಭಾರತೀಯರ ಮುಂದಿನ ಜೀವನ ಕ್ರಮದಲ್ಲಿ ಒಂದು ಬದಲಾವಣೆ ತರಬೇಕು ಎಂದರು. ಈ ಯಾತ್ರೆ ಆಲ್ ಇನ್ ಒನ್ ಯಾತ್ರೆ ಎಂದು ಗೋ ಸಂರಕ್ಷಣೆಯಿಂದ ಭಾರತದ ಆರ್ಥಿಕತೆ, ಸಾಮಾಜಿಕತೆ, ಆರೋಗ್ಯ, ಆಹಾರ, ಮಾನವ ಸಂಪತ್ತು ಇವೆಲ್ಲದರ ಮೇಲೆ ಆಗಬಹುದಾದ ಪರಿಣಾಮಗಳನ್ನು ಈ ಯಾತ್ರೆ ಈಡೇರಿಸಲಿದೆ ಎಂದರು.

Facebook Comments