ಜ.೪ – ಇಂದು ಯಾತ್ರೆ ಇಂದೋರಿನಿಂದ ಹೊರಟು ದೇವಸ್, ಉಜ್ಜೈನಿ, ಶಾಜಾಪುರ ಮೂಲಕ ಬ್ಯಾವರಾ ನಗರವನ್ನು ತಲುಪಿತು.

ದೇವಸ್ (ದೇವಾವಾಸ) ನಗರ ಮಾತಾ ಚಾಮುಂಡಾ ದೇವಿಯ ಆವಾಸವಿರುವ ಪ್ರಸಿದ್ಧ ಸ್ಥಳ. ಮೈಸೂರಿನ ಚಾಮುಂಡೀ ಬೆಟ್ಟದಂತೆ, ಊರಮಧ್ಯೆಯಲ್ಲಿ ಬೆಟ್ಟ ಮೇಲೆ ಚಾಮುಂಡಾ ಮಂದಿರವಿದೆ. ವೇದಿಕೆಯನ್ನು ದೇವಗಿರಿಯ ಮುಂಭಾಗದಲ್ಲಿ ಶಿವಾಜಿ ಪ್ರತಿಮೆ ಇರುವ ಪ್ರಸಿದ್ಧ ಮೈದಾನದಲ್ಲಿ ವ್ಯವಸ್ಥೆ ಮಾಡಿದ್ದರು.

ವೇದಿಕೆಯಲ್ಲಿ ಸಂತರುಗಳಾದ ಭಕ್ತ ಪಂಡಿತ ರಾಜಜೀ ಮಹಾರಾಜ್ ಜಂಗರಾಕೇಜೀ, ಪೂ. ಅಮರದೀಪ ಬಾಬಾಸಿಯಾ, ಪೂ. ರಾಮಗಿರಿ ಮಹಾರಾಜ್ ಪಿಪಲೇಶ್ವರ, ಸುಂದರದಾಸ ಚಂದ್ರಶೇಖರ ಖಿಡಾಬಾಲ ಬಾಗಲೀ, ಸ್ವಾಮೀ ಅದ್ವೈತಾನಂದಗಿರಿ ಚಾಮುಂಡಾ ಮಾತಾ ಠೇಕರಿ ದೇವಸ್, ಪೂಜ್ಯ ಸುರೇಶ ದತ್ತಾಜೀ ಶಾಸ್ತ್ರಿಜೀ, ಅಂಬಾಮಾತಾ ಆಶ್ರಮ ನೀಮಚ, ಇವರುಗಳು ಉಪಸ್ಥಿತರಿದ್ದರು.

ವಿಶೇಷವಾಗಿ ಕರ್ನಾಟಕದಿಂದ ಆಗಮಿಸಿದ ಬಸಪ್ಪ ಸ್ವಾಮಿಗಳು ಪ್ರತ್ಯೇಕ ವೇದಿಕೆಯಲ್ಲಿ ಉಪಸ್ಥಿತಿ ನೀಡಿದ್ದರು. (ನಂದೀ ಸ್ವಾಮಿಗಳು) ೨.೯೦ ಲಕ್ಷ ಹಸ್ತಾಕ್ಷರ ಸಂಗ್ರಹಿಸಿ ಸಮರ್ಪಿಸಿದರು.

ಗೋರಕ್ಷಣೆಯ ವಿಷಯದಲ್ಲಿ ಸಾಧಕರಿಗೆ ಸಮ್ಮಾನವನ್ನು ಮಾಡಲಾಯಿತು.

ಡಾ. ದಿನೇಶ ಜೀ, ಅಖಿಲ ಭಾರತ ಗ್ರಾಮ ವಿಕಾಸ ಪ್ರಮುಖ ಇವರು ವಾತಾವರಣ ಪ್ರದೂಷಣೆಯನ್ನು ಗೋರಕ್ಷಣೆಯ ಮೂಲಕ ನಿವಾರಿಸಬಹುದೆಂದು ಹೇಳಿದರು. ಪೂರ್ವ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂ ಅವರೂ ಗ್ರಾಮ ಸಂಸ್ಕೃತಿಯನ್ನು ಉಳಿಸುವುದೊಂದೇ ನಮ್ಮ ವಿಕಾಸಕ್ಕೆ ಮಾರ್ಗವೆಂದು ಹೇಳಿರುವ ವಿಚಾರವನ್ನು ಪ್ರಸ್ತುತಪಡಿಸಿ, ಯಾತ್ರೆಯ ಉದ್ದೇಶವೂ ಅದೇ ಎಂದರು. ಪ್ಲಾಸ್ಟಿಕ್ ಉಪಯೋಗ ನಿಲ್ಲಿಸಲು ಮತ್ತು ದನದ ಹಾಲನ್ನು ಕುಡಿಯಲು, ಜನರಿಗೆ ಮನವಿ ಮಾಡಿದರು. ಭಾರತೀಯ ಜೀವನ ಮೌಲ್ಯಗಳ ಪುನರ್ ಸ್ಥಾಪನೆಯೇ ಯಾತ್ರೆಯ ಉದ್ದೇಶವೆಂದು ಹೇಳಿದರು.

ಸಂತ ಜಗಜೀತ್ ಸಿಂಗ್ ನಾಮಧಾರೀ ಇವರ ಪ್ರತಿನಿಧಿ ಶ್ರೀ ಸಂತ ಸೂಬಾ ಸರಬಜೀತ್ ಸಿಂಗ್ ಅವರು ಗೋರಕ್ಷಣೆಯ ವಿಚಾರದಲ್ಲಿ ಸಿಖ್ಖ್ ಜನಾಂಗದ ಕೊಡುಗೆಯನ್ನು ಪರಿಚಯಿಸಿದರು. ಪ್ರತಿ ಮನೆಯಲ್ಲೂ ಒಂದಾದರೂ ದನ ಪಾಲಿಸಲು ಹೇಳಿದರು. ಶ್ರೀ ಕೆ.ಈ.ಎನ್. ರಾಘವನ್, ಯಾತ್ರಾ ಪ್ರಮುಖ, ಇವರು ಯಾತ್ರೆಯ ಪರಿಚಯ ಮಾಡಿಕೊಟ್ಟರು. ಯಾತ್ರೆಯ ಒಂದು ಭಾಗ ಪ್ರಸಿದ್ಧ ಯಾತ್ರಾ ಸ್ಥಳ. ದ್ವಾದಶ ಲಿಂಗಗಳಲ್ಲಿ ಒಂದಾದ ಮಹಾಕಾಲನ ಕ್ಷೇತ್ರವಾದ ಉಜ್ಜೈನಿಯನ್ನು ಪ್ರವೇಶಿಸಿತು. ಅತ್ಯಂತ ದೀರ್ಘ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಅಂದಾಜು 10,000 ಕ್ಕೂ ಅಧಿಕ ಗೋಭಕ್ತರು ಪಾಲ್ಗೊಂಡಿದ್ದರು. ಅವರನ್ನುದ್ದೇಶಿಸಿ ಪ.ಪೂ. ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಪ್ರಮುಖ ಆಶೀರ್ವಾದ ಮಾರ್ಗದರ್ಶನ ನೀಡಿದರು.

ಯಾತ್ರೆಯ ಒಂದುಭಾಗ ಶಾಜಾಪುರ ನಗರವನ್ನು ಪ್ರವೇಶಿಸಿತ್ತು. ಯಾತ್ರಾ ಪ್ರಮುಖರಾದ ಶ್ರೀ ರಾಘವನ್ ಅವರು ಗೋವಿನ ವೈಜ್ಞಾನಿಕ ದೃಷ್ಟಿಕೋನ ಆಂಗ್ಲರಿಂದ ಭಾರತೀಯ ಪುರಾತನ ಜ್ಞಾನ, ಸಂಸ್ಕೃತಿ ಹಾಗೂ ಜೀವನ ಪದ್ಧತಿಗಾದ ಅನ್ಯಾಯ ಮತ್ತು ವಂಚನೆಯನ್ನು ವಿವರಿಸಿ, ಯಾತ್ರೆ ಮತ್ತೊಮ್ಮೆ ಕಳೆದುಹೋದ ಜೀವನ ಮೌಲ್ಯಗಳನ್ನು ಮತ್ತೆ ಜನಜೀವನದಲ್ಲಿ ಜೋಡಿಸುವ ಪ್ರಯತ್ನ ಎಂದರು. ಪಾಶ್ಚಾತ್ಯ ಜೀವನ ಶೈಲಿಗೆ ಮಾರುಹೋಗುತ್ತಿರುವ ಗ್ರಾಮಾ ಜೀವನ ಶೈಲಿಯನ್ನು ಮತ್ತೆ ತನ್ನತನವನ್ನು ಕಾಯ್ದುಕೊಳ್ಳುವ ದಿಕ್ಕಿನಲ್ಲಿ, ಪ್ರಕೃತಿಯ ಸಂರಕ್ಷಣೆಯನ್ನು ಗುರಿಯಾಗಿಟ್ಟುಕೊಡು ಈ ಯಾತ್ರೆ ಪರಿಭ್ರಮಣ ಮಾಡುತ್ತಿದೆ ಎಂದರು.

ಶ್ರೀ ಸತ್ಯನಾರಾಯಣ ಭಟ್, ಇವರು ಯಾತ್ರೆಯ ಹಿನ್ನೆಲೆ ಮತ್ತು ಉದ್ದೇಶಗಳನ್ನು ವಿವರಿಸಿದರು.

ನಾಮಧಾರೀ ಸಂತ ಸೂಬಾ ಸರಬಜೀತ ಸಿಂಗ್ ಅವರು ಗುರುಗೋವಿಂದ ಸಿಂಗರಂತಹ ಗುರುಗಳ ಉದಾಹರಣೆ ಕೊಟ್ಟು, ಗೋವಿಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ ಸಿಖ್ಖರ ನೆನಪು ಮಾಡಿಕೊಟ್ಟರು.

ಸಂತ ಪ.ಪೂ. ಲಕ್ಷಣದಾಸ ಜೀ ಮಹಾರಾಜ್ ಅವರು ಗೋರಕ್ಷಣೆಗಾಗಿ ಸಂತರೆಲ್ಲ ಒಂದಾಗಿದ್ದಾರೆ. ಗೋರಕ್ಷಣೆಯ ಹೊರತಾಗಿ ದೇಶಕ್ಕೆ ಭವಿತವ್ಯವಿಲ್ಲವೆಂದರು.

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿಶೇಷ ಆಶೀರ್ವಚನ ಅನುಗ್ರಹಿಸಿದರು. ಅಂದಾಜು 3 ಗಂಟೆಗಳ ಕಾಲ ಪರಮ ಪೂಜ್ಯರಿಗಾಗಿ ನಿರೀಕ್ಷೆ ಮಾಡುತ್ತಿದ್ದ ಗೋಭಕ್ತರು, ತಮ್ಮ ಜೀವನ ಸಾರ್ಥಕ್ಯವನ್ನು ಅವರ ಆಶೀರ್ವಾದದಿಂದ ಪಡೆದರು.

ಯಾತ್ರೆಯ ಕೊನೆಯ ಗಮ್ಯಸ್ಥಾನ ಬ್ಯಾವರಾ (ವ್ಯಾವರಾ). ಇದು ಗ್ರಾಮೀಣ ಪ್ರದೇಶದ ತಹಸೀಲ್ ಕೇಂದ್ರ. ಇಲ್ಲಿನ ಸಭೆಗೆ ಸುತ್ತಮುತ್ತಲ ನೂರಾರು ಗ್ರಾಮಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಗೋಭಕ್ತರು ಬಂದಿದ್ದರು. ಯಾತ್ರೆಗೆ ಮತ್ತು ಯಾತ್ರೆಯ ದಿವ್ಯ ಸಂಕಲ್ಪ ಮಾಡಿದ ಪೂ. ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಅಭೂತಪೂರ್ವ ಸ್ವಾಗತವನ್ನು ರಾಜ ಮಾರ್ಗಗಳಲ್ಲಿ ಕೋರಲಾಯಿತು.

ವೇದಿಕೆಯಲ್ಲಿ ದಿವ್ಯ ಉಪಸ್ಥಿತಿ ನೀಡಿದ್ದ ಎಲ್ಲ ಸಂತರ ಸಮ್ಮುಖದಲ್ಲಿ ೯ ಲಕ್ಷಕ್ಕಿಂತಲೂ ಅಧಿಕ ಹಸ್ತಾಕ್ಷರ ಸಮರ್ಪಣೆ ಮಾಡಲಾಯಿತು.

ಪೂ. ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ ಆಶೀರ್ವಚನ ಮಾರ್ಗದರ್ಶನ ವಾಣಿಯಲ್ಲಿ, ಸಭೆಯಲ್ಲಿ ಸೇರಿದ್ದ ಸಹಸ್ರಾರು ಸಂಖ್ಯೆಯ ಗೋಭಕ್ತರನ್ನು ಕಂಡು ಪುಳಕಿತರಾಗಿ, ಇಲ್ಲಿ ತಾವು ಭಾರತವನ್ನು ಜೀವಂತವಾಗಿ ಕಾಣುತ್ತಿರುವುದಾಗಿ ಉದಹರಿಸಿದರು. ರಾಜಾ ವಿಕ್ರಮಾದಿತ್ಯನ ನಾಡಿನ ಜನತೆ ಧನ್ಯರು ಎಂದು ಶ್ಲಾಘಿಸಿದರು. ಆದಿಗುರು ಶಂಕರಾಚಾರ್ಯರು ಮಾತೆ ಪಾರ್ವತಿಯಿಂದ ಸ್ತನ್ಯ ಪಾನ ಮಾಡಿಸಿಕೊಂಡು ದೇವತ್ವಕ್ಕೇರಿದರು. ಗೋಮಾತೆ, ಮಾತೆ ಪಾರ್ವತಿಯ ಸ್ವರೂಪ. ಗೋಮಾತೆಯ ಹಾಲನ್ನು ಕುಡಿದವರೂ ತಮ್ಮ ಜೀವನದಲ್ಲಿ ಸಾರ್ಥಕ್ಯವನ್ನು ಕಾಣುತ್ತಾರೆ ಎಂದರು.

ಆಚಾರ್ಯ ಶಂಕರರಿಗೆ ಮಾತೆ ಪಾರ್ವತಿ ಪ್ರಕಟವಾಗಲು, ಬಾಲ ಶಂಕರರ ಪುತ್ರತ್ವದ ತೀವ್ರತೆ ಕಾರಣ. ಹಾಗೆಯೇ ಇಂದು ಗೋಮಾತೆ ನಮ್ಮ ರಕ್ಷಣೆಗೆ ಬರಬೇಕಾದಲ್ಲಿ ನಮ್ಮ ಪುತ್ರತ್ವದ ತೀವ್ರತೆ ಪ್ರಕಟವಾಗಬೇಕು. ದಿನನಿತ್ಯ ಹಿಂಸೆ, ಸಾವನ್ನು ಅನುಭವಿಸುತ್ತಿರುವ ತಾಯಿಯ ನೆರವಿಗೆ ಈಗ ಧಾವಿಸದಿದ್ದಲ್ಲಿ ಇನ್ಯಾವಾಗ ತನ್ನ ಪುತ್ರತ್ವವನ್ನು ಪ್ರಕಟಿಸುವುದು ಎಂದು ಕೇಳಿದರು.

ಗೋಹತ್ಯೆಯ ಪಾಪಕ್ಕೆ, ಅದನ್ನು ನೋಡುತ್ತಾ ತಟಸ್ಥರಾಗಿ ಕೂತವರೆಲ್ಲರೂ ಕಾರಣರು, ಇನ್ನು ತಟಸ್ಥರಾಗುವಂತಿಲ್ಲ. ಕಾರ್ಯರತರಾಗಬೇಕೆಂದರು. ಗೋಮಾತೆಯ ಯಾವ ಅಪರಾಧಕ್ಕಾಗಿ ಅವಳಿಗೆ ಹತ್ಯೆಯ ಶಿಕ್ಷೆ ನೀಡಲಾಗುತ್ತಿದೆ ಎಂದು ಸಮಾಜವನ್ನು, ಸರಕಾರವನ್ನು ಪ್ರಶ್ನಿಸಿದರು.

ಗೋವು ಒಂದು ಪ್ರಾಣಿ ಮಾತ್ರವಲ್ಲ, ಗೋವು ದೇಶದ ಪ್ರಾಣ, ಗೋವು ಜಾನ್ವರ್ ಅಲ್ಲ, ಅದುವೇ ದೇಶದ ಜಾನ್ ಎಂದರು. ಗೋವಿಲ್ಲದಲ್ಲಿ ಭಾರತಕ್ಕೆ ಉಳಿವಿಲ್ಲ. ಇಂದು ಭಾರತ ’ಭೀರತ’ವಾಗುತ್ತಿದೆ ಎಂದು ಇಂದಿನ ಕರಾಳ, ಆತಂಕಕಾರೀ ವಾತಾವರಣವನ್ನು ನೆನಪಿಸಿದರು.

ಹಸ್ತಾಕ್ಷರ ಅಭಿಯಾನದಲ್ಲಿ ಭಾಗವಹಿಸಿ, ಸರಕಾರದ ಮೇಲೆ ಒತ್ತಡ ತರುವಲ್ಲಿ ಸಹಯೋಗ ನೀಡಿ ಎಂದರು. ಇದು ರಾಜಕಾರಣಿಗಳ ಆಂದೋಲನವಲ್ಲ. ಶಂಕರಾಚಾರ್ಯರ ಹಾಗೂ ಎಲ್ಲ ಸಂತರ ಮಾರ್ಗದರ್ಶನದ ಆಂದೋಲನ. ಇದರಲ್ಲಿ ಸ್ವಾರ್ಥವಿಲ್ಲ. ತಮ್ಮ ಜೀವನದ ಏಕಮಾತ್ರ ಉದ್ದೇಶ, ಗುರಿ – ಗೋವು. ಗೋವಿಗಾಗಿ ತಾವು ಪ್ರಾಣತ್ಯಾಗಕ್ಕೂ ಸಿದ್ಧ. ತಮ್ಮೊಂದಿಗೆ ನೀವೂ ಹೋರಾಟಕ್ಕೆ ಸಿದ್ಧರಾಗಿ ಎಂದು ಜನತೆಗೆ ಕರೆ ಇತ್ತರು.

ಮೊದಲಿಗೆ ಮಹಾಮಂಡಲೇಶ್ವರ ಶ್ರೀ ಅಖಿಲಾನಂದ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಒಬ್ಬ ಪುಟ್ಟ ಬಾಲಕನ ಶ್ರೀಕೃಷ್ಣ ಅಭಿನಯವನ್ನು ಕಂಡು ಪ್ರಸನ್ನರಾದ ಪೂಜ್ಯ ಶಂಕರಾಚಾರ್ಯರು ತಾವು ಹೊದೆದಿದ್ದ ಉಣ್ಣೆಯ ಶಾಲನ್ನು ಪ್ರೀತಿಯಿಂದ ಮಗುವಿಗೆ ಉಡುಗೊರೆಯಾಗಿ ಆಶೀರ್ವದಿಸಿದರು.

Facebook Comments