ಡಿ.೩೦ – ಇಂದು ಯಾತ್ರೆ ತನ್ನ ಪರಿಭ್ರಮಣದ ೯೧ನೆಯ ದಿನ ಜಯಪುರದಿಂದ ಹೊರಟು ಟೊಂಕ್, ದೇವಲಿ, ಬೂಂದೀ ಮಾರ್ಗವಾಗಿ ಕೋಟ ಪಟ್ಟಣವನ್ನು ಪ್ರವೇಶಿಸಿತು. ಮೊದಲಿಗೆ ದಾರಿಯಲ್ಲಿ ಚಾಕಸೂ ಮತ್ತು ನಿವಾಯಿಗಳಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಿತು. ನಿವಾಯಿಯಲ್ಲಿ ಒಂದು ಉತ್ತಮ ಗೋಶಾಲೆಯನ್ನು ಯಾತ್ರೆ ಸಂದರ್ಶಿಸಿತು. ಆ ಗೋಶಾಲೆಯ ಸಾಂಪ್ರದಾಯಿಕ ಉದ್ಘಾಟನೆಯೂ ಇಂದೇ ನಡೆಯಿತು ಎಂದೂ ತಿಳಿಯಿತು. ಅಂದಾಜು ೫೦೦ ನಡೆಗಳಿರುವ ಗೋಶಾಲೆಯಲ್ಲಿ ರಾಸುಗಳಿಗೆ ಉತ್ತಮ ವ್ಯವಸ್ಥೆ ಇರುವುದು ವೇದ್ಯವಾಗುತ್ತಿತ್ತು.

ಟೊಂಕ್ನಲ್ಲಿ ಗ್ರಾಮೀಣ ಪರಿಸರದಲ್ಲಿ ಶಿವ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಗೆ ಪ್ರಧಾನ ಸಂತರಾದ ಜೈನಮುನಿ (ದಿಗಂಬರ ಪಂಥ) ೧೦೮ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜ್ ಜೀ ಆಗಮಿಸಿ, ಆಶೀರ್ವಚನ-ಮಾರ್ಗದರ್ಶನ ನೀಡಿದರು.

ಯಾತ್ರೆಗೆ ಮುಂದೆ ದಾರಿಯಲ್ಲಿ ಹಲವಾರು ಕಡೆ ಆತ್ಮೀಯ ಸ್ವಾಗತ ದೊರಕುತ್ತಾ ಇತ್ತು.

ಮಧ್ಯಾಹ್ನದ ಸಭೆ ದೇವಲಿಯಲ್ಲಿ ನಡೆಯಿತು. ವಿಶಾಲ ಮೈದಾನದಲ್ಲಿ ಸಭೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ವೇದಿಕೆಯಲ್ಲಿ ಪೂ. ಸಂತರುಗಳಾದ ಮಹಂತ ಶಂಭುದಾಸ ಜೀ, ಮಹಂತ ಘಾಟೋಲಾಬಾಬಾ ಜೀ ಪರ್ವಾಡ. ಸಂತ ಬಾಲಕದಾಸ ಜೀ (ಇಲಹಾಬಾದ್) ಹಾಗೂ ಪ್ರಹ್ಲಾದನಾಥ ಜೀ (ದೇವಲಿ) ಇವರು ದಿವ್ಯ ಉಪಸ್ಥಿತಿ ನೀಡಿದ್ದರು. ಪ್ರಮುಖ ವಕ್ತಾ ಆಗಿ ಶ್ರೀ ಇಂದ್ರೇಶ ಕುಮಾರ ಅವರು ಭಾಷಣ ಮಾಡಿದರು.

ವಿಶ್ವ ಮಂಗಲ ಗೋ ಗ್ರಾಮ ಯಾತ್ರೆಯ ಉದ್ದೇಶ ಈ ಬದಲಾಗುತ್ತಿರುವ ವಿಶ್ವದಲ್ಲಿ ಗೋವು-ಗ್ರಾಮ-ಪ್ರಕೃತಿಯ ಸಮ್ಮಿಳಿತದೊಂದಿಗೆ ಹೇಗೆ ಬದಕಬೇಕೆಂಬುದನ್ನು ತಿಳಿಸಿಕೊಡುವುದಕ್ಕಾಗಿ ಎಂದರು. ಗೋವು ಇಂಧನ, ಗೋವು ಔಷಧ, ಗೋವು ಪರಿಸರ, ಗೋವು ಎಲ್ಲವೂ ಹೌದು – ಇದನ್ನು ಉಳಿಸಿ, ಬಳಸಿಕೊಳ್ಳುವುದನ್ನು ತಿಳಿಸಲೋಸುಗ ಈ ಯಾತ್ರೆ ಎಂದರು.

ಯಾತ್ರೆಯ ಮುಂದಿನ ನಿಲುಗಡೆ ಬೂಂದಿ ಪಟ್ಟಣದಲ್ಲಿ. ಇದೊಂದು ಐತಿಹಾಸಿಕ ಪ್ರಸಿದ್ಧ ನಗರಿ. ಎಲ್ಲ ಕಡೆ ಪರ್ವತಗಳಿಂದಾವರಿಸಿದ ಕೋಟೆ-ಕೊತ್ತಲಗಳಿಂದಾವೃತ ಪುರಾತನ ಅರಮನೆಗಳಿಂದ ಶೋಭಿತ ನಗರಿ. ನಗರದೊಳಗೆ ಇಂದಿನ ಕಾಲದ ಎಲ್ಲ ಅವ್ಯವಸ್ಥೆಗಳು ಕಂಡರೂ ಒಂದು ಕಾಲದಲ್ಲಿ ಇದು ವೈಭವೋಪೇತವಾಗಿದ್ದಿರಬೇಕೆಂದು ಅಂದಾಜಿಸಬಹುದು. ಅಲ್ಲಿಯೂ ಶ್ರೀ ಇಂದ್ರೇಶ ಕುಮಾರ ಅವರು ಪ್ರಮುಖ ಭಾಷಣ ಮಾಡಿದರು ಮತ್ತು ವೇದಿಕೆಯಿಂದ ಪೂ. ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಮಾರ್ಗದರ್ಶನ ಮಾಡಿದರು.

ಯಾತ್ರೆಯ ಕೊನೆಯ ಮಜಲು ಕೋಟಾ ನಗರ, ಜಿಲ್ಲಾ ಕೇಂದ್ರ. ಕೋಟಾ ಯಾವುದಕ್ಕೆ ಪ್ರಸಿದ್ಧ ಎಂಬುದಕ್ಕೆ ಇಲ್ಲಿನ ನಾಗರಿಕರಿಂದ ಬಂದ ಉತ್ತರ – ಕೋಟಾದ ವಿಶಿಷ್ಟ ಕಲ್ಲುಗಳು, ಕೋಟಾದ ಸೀರೆಗಳು ಮತ್ತು ಕೋಟಾದ ಕಛೋಡಿ (ಒಂದು ಕರಿದ ತಿಂಡಿ) ಎಂದರು. ಅದರ ಜತೆ ಇನ್ನೊಂದು ವಿಶೇಷವೆಂದರೆ ಇಲ್ಲಿನ ವಿಶೇಷ ಟ್ಯೂಷನ್ ವ್ಯವಸ್ಥೆ.

ಇಲ್ಲಿಂದ ಟ್ಯೂಷನ್ ಪಡೆದವರು ಐ.ಎ.ಎಸ್., ಐ.ಟಿ.ಟಿ. ಮುಂತಾದ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ ರಾರಾಜಿಸುತ್ತಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಇಲ್ಲಿನ ಸಭೆಯನ್ನು ಶ್ರೀ ಇಂದ್ರೇಶ ಕುಮಾರ ಅವರು ಸಂಬೋಧಿಸಿದರು. ಯಾತ್ರಾ ಪ್ರಮುಖರೂ, ರಾಷ್ಟ್ರೀಯ ಕಾರ್ಯದರ್ಶಿಗಳೂ ಆದ ಶ್ರೀ ಶಂಕರಲಾಲ ಜೀ ಅವರು ಯಾತ್ರೆಯ ಬಗ್ಗೆ ವಿವರ ನೀಡುತ್ತಾ, ಗೋವಿನ ಮಹತ್ವವನ್ನು ತಿಳಿಸಿದರು. ಯಾತ್ರೆಯು ಸಂಪೂರ್ಣವಾಗಿ ಸಂತರಿಂದ ಆಯೋಜಿತವಾಗಿದ್ದು, ಯಾವುದೇ ರಾಜಕಾರಣಿಗಳಿಗೆ ವೇದಿಕೆಯಲ್ಲಿ ಸ್ಥಾನ ಕೊಡದಿರುವುದು ಈ ಯಾತ್ರೆಯ ವಿಶೇಷ ಎಂದು ಹೇಳಿದರು.

ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ನೇರವಾಗಿ ಗೋವಿನ ಪರವಾಗಿರುವವರು ಅಥವಾ ನೇರವಾಗಿ ಗೋವಿನ ವಿರುದ್ಧವಾಗಿರುವವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿರುವವರು ಈ ಬಣದಲ್ಲಿಲ್ಲದೇ, ಉದಾಸೀನ ಪಂಥದವರು-ತಟಸ್ಥ ವರ್ಗ, ಅವರಿಂದಾಗಿಯೇ ಅಪಾಯವೆಂದು ಹೇಳಿದರು. ಈ ವರ್ಗವನ್ನು ಗೋವಿನ ಪರವಾಗಿ ಭಿವ್ಯಕ್ತಿಪಡಿಸುವಂತೆ ಮಾಡುವುದು ಈ ಯಾತ್ರೆಯ ಉದ್ದೇಶವೆಂದರವರು. ಮನುಷ್ಯ ಯಾವುದನ್ನು ತನ್ನ ಸ್ವಂತಕ್ಕಾದರೆ ಅನ್ಯಾಯ, ಅಧರ್ಮವೆಂದು ಗ್ರಹಿಸುತ್ತಾನೋ, ಅದನ್ನೇ ಗೋವಿಗೂ ಏಕೆ ಅನ್ವಯಿಸುವುದಿಲ್ಲವೆಂದು ಪ್ರಶ್ನಿಸಿದರು. ಯಾವ ತಪ್ಪಿಗಾಗಿ ಜೀವನ ಪರ್ಯಂತ ಮನುಷ್ಯನಿಗಾಗಿ ತನ್ನದೆಲ್ಲವನ್ನೂ ನೀಡುವ ಗೋವಂಶಕ್ಕೆ ಅತ್ಯಂತ ಕ್ರೂರವಾದ ಮರಣದಂಡನೆ, ಚಿತ್ರಹಿಂಸೆ ಎಂದವರು ಪ್ರಶ್ನಿಸಿದರು.

ಯಾತ್ರೆ ಗೋವಿನ ಬಗ್ಗೆ ನಡೆಯಲಿರುವ ಒಂದು ಮಹತ್ತರ ಸಂಗ್ರಾಮಕ್ಕೆ ನಾಂದಿ. ಈ ಸಂಗ್ರಾಮದಲ್ಲಿ ತಮ್ಮನ್ನು ತಾವು ಸಮರ್ಪಿಸಲು ಸನ್ನದ್ಧರಾಗಿ ಒಂದೊಮ್ಮೆ ಅಂಥ ಸಂದರ್ಭ ಬಂದಲ್ಲಿ ತಾವು ಮೊದಲು ತಮ್ಮ ಪ್ರಾಣಾರ್ಪಣೆ ಮಾಡಲು ಸಿದ್ಧವೆಂದವರು ಭಾವುಕರಾಗಿ ನುಡಿದರು.

Facebook Comments Box