ಡಿ.೩೧ – ಕ್ರಿಸ್ತಶಕ ೨೦೦೯ರ ಕೊನೆಯ ದಿನ ಇಂದು ರಾತ್ರಿ ಚಂದ್ರಗ್ರಹಣವೂ ಇರುವುದೊಂದು ವಿಶೇಷ. ಹೊಸವರ್ಷ ಪ್ರಾರಂಭವಾದ ಕೂಡಲೇ ಗ್ರಹಣ ಸಮಾಧಾನವೆಂದರೆ ಹೊಸವರ್ಷದ ಸೂರ್ಯೋದಯವಾಗುವಾಗ ಚಂದ್ರ ಗ್ರಹಣ ಮುಕ್ತನಾಗಿರುತ್ತಾನೆ.

ಇಂದು ಯಾತ್ರೆ ಕೋಟಾ ನಗರದಿಂದ ಹೊರಟು ಡಾಬೀ, ಬಿಜೋಲಿಯಾ, ಚಿತ್ತೋಡಗಢದ ಮೂಲಕ ಭೀಲವಾಡಾ ನಗರವನ್ನು ಪ್ರವೇಶಿಸಿತು.

ಬಿಜೋಲಿಯಾದಲ್ಲಿ ಅಂದಾಜು ೨೦೦೦ ಜನರು ಮಧ್ಯಾಹ್ನದ ಬಿಸಿಲಿನಲ್ಲೂ ಸಭೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಸೀತಾರಾಮ ಕೆದಿಲಾಯರು ಪ್ರಮುಖ ಭಾಷಣ ಮಾಡಿದರು. ಶ್ರೀ ಹುಕುಂಚಂದ್ ಜೀ ಸಾವ್ಲಾ ಅವರೂ ತಮ್ಮ ವಿಶಿಷ್ಟ ಶೈಲಿಯಲ್ಲಿ ಮಾರ್ಮಿಕವಾಗಿ ಗೋವನ್ನು ವಿವರಿಸಿದರು.

ಚಿತ್ತೋರಘರ್ ಐತಿಹಾಸಿಕ ಸ್ಥಳ. ಅಲ್ಲಿನ ಕೋಟೆಯ ದೃಶ್ಯವೇ ಹೃದಯಂಗಮಯ. ಕೋಟೆಯನ್ನು ನೋಡುತ್ತಿದ್ದರೆ ಇತಿಹಾಸದ ಒಂದೊಂದೇ ಘಟನೆಗಳ ನೆನಪು ಮಸುಕು ಮಸುಕುಕಾಗಿಯಾದರೂ ಬಾರದಿರದು. ಅಂತಹ ಐತಿಹಾಸಿಕ ಕೋಟೆಗೆ ಅಭಿಮುಖವಾಗಿ ಗೋ ಸಭೆ ಆಯೋಜಿತವಾಗಿತ್ತು. ವೇದಿಕೆಯಲ್ಲಿ ಪ.ಪೂ. ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಸಂತ ಶ್ರೀ ಚೇತನದಾಸ ಜೀ ಮಹಾರಾಜ್, ಸಂತ ರಮತಾರಾಮ ಮಹಾರಾಜ್, ಪೂ. ನಯನಾಭಿರಾಮ ಜೀ ಮಹಾರಾಜ್, ಪೂ. ನಿರಂಜನನಾಥ ಜೀ ಅವಧೂತ ಇವರೆಲ್ಲ ದಿವ್ಯ ಉಪಸ್ಥಿತಿ ನೀಡಿದ್ದರು. ಅಲ್ಲದೇ ಮುಸ್ಲಿಂ ರಾಷ್ಟ್ರೀಯ ಮಂಚದ ಚಿಂತಕ ಶ್ರೀ ಇಂದ್ರೇಶ ಕುಮಾರ್ ಜೀ, ಸಂಯೋಜಕ ಶ್ರೀ ಮೊಹಮ್ಮದ್ ಅಫ್ಜಲ್ ಹಾಗೂ ಸುಪ್ರೀಂಕೋರ್ಟ್ ನ್ಯಾಯವಾದಿ ಶ್ರೀ ಫಿರೋಜ್ ಖುರೇಶಿ, ಶ್ರೀ ಹುಕುಂಚಂದ್ ಜೀ ಸಾವ್ಲಾ ಇವರೆಲ್ಲ ಉಪಸ್ಥಿತರಿದ್ದರು.

ಶ್ರೀ ಇಂದ್ರೇಶಕುಮಾರ್, ಗೋವು ಪರಮಾರ್ಥದ ಪ್ರತೀಕವೆಂದರು. ಗೋವು ತನಗಾಗಿ ಏನೂ ಮಾಡುವುದಿಲ್ಲ. ಎಲ್ಲವೂ ಪರರಿಗಾಗಿ. ಅಂಥ ಗೋವಿನ ಸೇವೆ ಮಾಡಲು ಆಹ್ವಾನವಿತ್ತರು.

ಶ್ರೀ ಫಿರೋಜ್ ಖುರೇಶಿಯವರು ತಮ್ಮ ಮತ್ತು ಗೋವಿನ ಸಂಬಂಧವನ್ನು ವಿವರಿಸುತ್ತಾ, ತನ್ನ ಜೀವನದ ಏಳಿಗೆಗೆ ಗೋವಿನ ಆಶೀರ್ವಾದ ಕಾರಣವೆಂದು ಉದ್ಗರಿಸಿದರು. ಪ.ಪೂ. ಶ್ರೀ ಶ್ರೀ ರಾಘವೇಶ್ವರ ಭಾರತಿಯವರು ಚಿತ್ತೋರ್ಘರ್ ಬಗ್ಗೆ ತುಂಬ ಭಾವುಕರಾಗಿದ್ದರು. ಇತಿಹಾಸದ ದಿನಗಳನ್ನು ಅವರು ಮೆಲುಕು ಹಾಕಿದರು. ಮಹಾರಾಣಾ ಪ್ರತಾಪಸಿಂಹ ಮಹಾರಾಜನಿಂದ, ಅವನು ಅಪೂರ್ಣ ಬಿಟ್ಟುಹೋದ ಕೆಲಸವನ್ನು ಪೂರ್ಣಗೊಳಿಸಿ ಎಂದು ಜನರಿಗೆ ಕರೆಯಿತ್ತರು. ಮಹಾರಾಣಾ ಪ್ರತಾಪ ಇನ್ನೆಲ್ಲೋ ಇಲ್ಲ. ಪ್ರತಿಯೊಬ್ಬರಲ್ಲೂ ಇದ್ದಾನೆ. ಆದರೆ ಈಗ ಪ್ರಕಟವಾಗಿ ಹೋರಾಟ ಮಾಡಬೇಕಿದೆ ಎಂದರು. ಸಂತರೂ ಸೈನಿಕರಾಗುವ ಕಾಲ ಇದೀಗ ಬಂದಿದೆ. ಈಗ ನಿರ್ವೀರ್ಯರಾಗಿ ಕುಳಿತಿರುವಂತಿಲ್ಲ. ಗೋವಂಶವನ್ನು ಬದುಕಿಸುವುದಿದ್ದಲ್ಲಿ ಇದೀಗ ಸಮಯ. ಸಮಯ ಮೀರಿದಲ್ಲಿ ಸಂತರ ಚಿಂತಿಸಿ ಫಲವಿಲ್ಲವೆಂದರು. ಇಂದಿನಿಂದಲೇ ಗೋಮಾತೆಯ ರಕ್ಷಣೆಯ ಪವಿತ್ರ ಕಾರ್ಯದ ಸಂಕಲ್ಪ ಮಾಡಿ ಎಂದರು. ಕೆಂಪು ಕೋಟೆಯ ಮೇಲೆ ದಿಲ್ಲಿಯಲ್ಲಿ ಗೋಮಾತೆಯ ರಾಷ್ಟ್ರಧ್ವಜ ಹಾರಾಡುವಲ್ಲಿಯವರೆಗೂ ಈ ಸಂಗ್ರಾಮ ಮುಂದುವರೆಯಲಿದೆ ಎಂದು ರಣಕಹಳೆ ಮೊಳಗಿಸಿದರು.

ಮುಂದಿನ ಸಭೆ ಕೈಗಾರಿಕಾ ನಗರ ಭಿಲ್ವಾಡಾದಲ್ಲಿ. ಭಿಲ್ವಾಡಾ ಒಂದು ಉತ್ತಮ ಗೋಶಾಲೆಗಾಗಿಯೂ ಪ್ರಸಿದ್ಧ. ಭಿಲ್ವಾಡಾದ ಸಭೆಯಲ್ಲಿಯೂ ಪ.ಪೂ. ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ನೀಡಿದ್ದರು. ತಮ್ಮ ಆಶೀರ್ವಚನ ಮಾರ್ಗದರ್ಶನದಲ್ಲಿ ಅವರು ಬೃಹತ್ ಸಭೆಯನ್ನು ನೋಡಿ ಆನಂದಭರಿತರಾಗಿ, ಇಲ್ಲಿ ರಾಮರಾಜ್ಯವಿದೆಯೆಂದು ಉದ್ಗರಿಸಿದರು. ಎಲ್ಲೆಲ್ಲೂ ಗೋಭಕ್ತರು ತುಂಬಿದ್ದರಿಂದ ಇಲ್ಲಿ ದುಃಖವಿಲ್ಲ, ಹಿಂಸೆಯಿಲ್ಲ, ಹಾಗಾಗಿ ಇದು ರಾಮರಾಜ್ಯಕ್ಕೆ ಸಮಾನವೆಂದರು.

ಇಂದು ಚಂದ್ರಗ್ರಹಣ. ಚಂದ್ರನಿಗೂ ಗೋವಿಗೂ ಹೋಲಿಕೆ ಕಲ್ಪಿಸಿ, ಗೋವಿನ ಗ್ರಹಣ (ದಾರುಣ ಮರಣ) ದೂರಾಗುವ ಕಾಲ ಎಂದು ಬಂದೀತೆಂದು ಪ್ರಶ್ನಿಸಿದರು. ಗೋಪ್ರಜಾತಿಗಳಲ್ಲಿ ನಷ್ಟವಾದ ತಳಿಗಳು ಇನ್ನು ಎಷ್ಟು ಪ್ರಯತ್ನಿಸಿದರೂ ದೊರಕದೆಂದು ಕರಾಳ ಸತ್ಯವನ್ನು ಮುಂದಿಟ್ಟರು. ಗೋವಿಗಾಗಿ ಈ ಯಾತ್ರೆ, ಮುಂದೆ ನಡೆಯಲಿರುವ ಸಂಗ್ರಾಮದ ಸಿದ್ಧತಾ ಯಾತ್ರೆಯೆಂದರು. ಗೋವಿಗಾಗಿ ತಮ್ಮ ಪ್ರಾಣವನ್ನು ತೆರಬೇಕಾದಲ್ಲಿ ತಾವು ಸಂತೋಷದಿಂದ ಆ ಕೆಲಸ ಮಾಡುವುದಾಗಿ ಅವರು ಘೋಷಿಸಿದರು. ತಮ್ಮ ಪರಂಪರೆಯ ೩೬ನೇ ಶಂಕರಾಚಾರ್ಯರಾಗಿ ಈ ಅತ್ಯಂತ ಸ್ತುತ್ಯ ಕಾರ್ಯ ಮಾಡಾಲು ತಾವು ಸಿದ್ಧರೆಂದರು. ಗೋವು ಪ್ರಾಣಿಯಲ್ಲ. ದೇಶದ ಪ್ರಾಣ, ಕೊನೆಯ ಪಕ್ಷ ಗೋವು ರಾಷ್ಟ್ರೀಯ ಪ್ರಾಣಿಯೆಂದಾದರೂ ಸರಕಾರ ಘೋಷಿಸಲಿ ಎಂದರು.

ನಿಜವಾದ ಸ್ವಾತಂತ್ರ್ಯ ಇನ್ನಷ್ಟೇ ದೊರಕಬೇಕಿದೆ. ಅದಕ್ಕೆ ಬೇಕಾದ ಒತ್ತಡವನ್ನು ತಮ್ಮ ಮತಗಳ ಮೂಲಕ ತನ್ನಿ, ಯಾವ ಸರಕಾರ ಗೋಮಾತೆಯನ್ನು ರಕ್ಷಿಸುತ್ತದೆಯೋ ಅಂಥ ಸರಕಾರವನ್ನು ತನ್ನಿ ಎಂದು ಜನತೆಗೆ ಆಹ್ವಾನವಿತ್ತರು.

ಇದಕ್ಕೂ ಮೊದಲು ಮಾತನಾಡಿದ ಶ್ರೀ ಕೈಲಾಸಚಂದ್ರ ಜೀ (ರಾ.ಸ್ವ.ಸೇ.ಸಂ.ದ ರಾಜಸ್ತಾನದ ಹಿರಿಯ ಸ್ವಯಂ ಸೇವಕರು) ಪರಮಪೂಜ್ಯರನ್ನು ಜಾಂಬವಂತನಿಗೆ ಹೋಲಿಸಿದ್ದು ವಿಶಿಷ್ಟವಾಗಿತ್ತು. ಹನುಮಂತನ ಶಕ್ತಿಯನ್ನು ಅವನಿಗೆ ತಿಳಿಸಿಕೊಡಲು ಜಾಂಬವಂತ ಬರಬೇಕಾಯಿತು. ಹಾಗೇ ನಮ್ಮ (ಜನತೆಯ) ಶಕ್ತಿಯನ್ನು ತಿಳಿಸಿಕೊಡಲು ಶಂಕರಾಚಾರ್ಯರು ಬರಬೇಕಾಯಿತು ಎಂದರು.

Facebook Comments