ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ.

ರಾಮಾಯಣದಲ್ಲಿ ರಾಮ ಹುಟ್ಟುವ ಮೊದಲು ಅಯೋಧ್ಯೆ ಹೇಗಿತ್ತು? ಅಯೋಧ್ಯೆಯ ಪ್ರಜೆಗಳು ಹೇಗಿದ್ದರು? ಎಂಬ ವರ್ಣನೆ. ಆ ವರ್ಣನೆಯಲ್ಲಿ ಮೊದಲನೆಯದು “ಹೃಷ್ಟಾಃ”, ಅಯೋಧ್ಯೆಯಲ್ಲಿ ಎಲ್ಲರೂ ಸಂತೋಷವಾಗಿದ್ದರು ಎಂದು. ಎರಡನೆಯದು “ಧರ್ಮಾತ್ಮಾನಃ”. ಎಲ್ಲರೂ ಧರ್ಮಾತ್ಮರಾಗಿದ್ದರಿಂದ ಸಂತೋಷವಾಗಿದ್ದರು. ಧರ್ಮಾತ್ಮ ಎಂದರೇನು? ಆತ್ಮ ಎಂದರೇನು? ಆತ್ಮ ಎಂದರೆ ಒಳಗಿರುವ ಜ್ಯೋತಿ ಎಂಬ ಅರ್ಥವಷ್ಟೇ ಅಲ್ಲದೆ, ಮನಸ್ಸು, ಬುದ್ಧಿ, ಇಂದ್ರಿಯಗಳು, ಶರೀರ, ಸ್ವಭಾವ ಇದಿಷ್ಟು ಅರ್ಥಗಳೂ ಇದೆ. ಅಯೋಧ್ಯೆಯ ಪ್ರಜೆಗಳು ಧರ್ಮಾತ್ಮರಾಗಿದ್ದರು ಎಂದರೆ, ಅವರ ಮೈ, ಮನಸ್ಸು, ಸ್ವಭಾವ, ಕಣ್ಣು, ಕಿವಿ, ಮೂಗು, ಬಾಯಿ, ನಾಲಿಗೆ ಈ ಎಲ್ಲ ಇಂದ್ರಿಯಗಳೂ ಎಲ್ಲವೂ ಧರ್ಮಮಯವಾಗಿದ್ದವು ಎಂಬುದನ್ನು ಸೂಚಿಸುತ್ತದೆ.  

*ಮೈ ಮಡಿಯಾಗಿದ್ದರೆ ಸಾಲದು, ಮನಸ್ಸು ಕೂಡ ಮಡಿಯಾಗಿರಬೇಕು*. ಅಂತರಂಗ ಬಹಿರಂಗ ಎರಡೂ ಮಡಿಯಾಗಿರಬೇಕು. ಅಂತರಂಗ ಮಡಿಯಿಲ್ಲದೆ ಬಹಿರಂಗ ಮಡಿಯಾಗಿದ್ದರೆ ಅದು ತಿಪ್ಪೆ ಸಾರಿಸಿದಂತೆ. ಒಳಗೆ ತಿಪ್ಪೆ, ಹೊರಗೆ ಸಾರಿಸಿ, ರಂಗೋಲಿ ಹಾಕಿ ಅಲಂಕಾರ ಮಾಡಿಟ್ಟಂತೆ. ಮೇಲಿನಿಂದ ಸುಂದರವಾಗಿ ಕಾಣುತ್ತದೆ, ಬಗೆದರೆ ಒಳಗೆ ಕಲ್ಮಶಗಳ ರಾಶಿ ಇರುವಂತದ್ದು. ಸಮಾಜದಲ್ಲಿ ಇಂತಹ ಮನುಷ್ಯರನ್ನು ಕಾಣುತ್ತೇವೆ. ಹೊರಗಿನಿಂದ ಶುಚಿರ್ಭೂತರಾಗಿ ಕಾಣುತ್ತಾರೆ. ಸ್ನಾನ ಮಾಡಿ, ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡು, ಪರಿಮಳ ದ್ರವ್ಯಗಳನ್ನು ಲೇಪಿಸಿಕೊಂಡು, ಸುಂದರವಾಗಿ ಕಾಣುತ್ತಿರುತ್ತಾರೆ. ಅವರನ್ನು ನೋಡಿದರೆ ಚೂರೂ ಕಲ್ಮಶ ಕಾಣಿಸುವುದಿಲ್ಲ. ಆದರೆ ಒಳಗಡೆ ಇರುವುದು ಬರೀ ಕೊಳಕು. ಇನ್ನು ಕೆಲವರು ಒಳಗಡೆ ತುಂಬಾ ಚೆನ್ನಾಗಿದ್ದರೂ ಹೊರಗಡೆ ಹೇಗೋ ಇರುತ್ತಾರೆ. ಧರ್ಮಾತ್ಮ ಎನ್ನುವಾಗ ಒಳಗಿನಿಂದ ಹೊರಗಿನವರೆಗೆ ಎಲ್ಲವೂ ಧರ್ಮಮಯ. ಮೈ, ಮನಸ್ಸು, ಕಣ್ಣು, ಕಿವಿ, ಮೂಗು ಎಲ್ಲವೂ ಮಡಿ. ಕಣ್ಣು ಕೊಳಕನ್ನು, ಕೆಟ್ಟದ್ದನ್ನು ನೋಡಬಯಸುವುದಿಲ್ಲ, ಒಳಿತನ್ನೇ ಕಾಣುವ ಕಣ್ಣು, ಒಳಿತನ್ನೇ ಕೇಳುವ ಕಿವಿ, ಒಳಿತನ್ನೇ ಸ್ಪರ್ಶಿಸಬಯಸುವ ಚರ್ಮ, ಒಳಿತನ್ನೇ ಆಸ್ವಾದಿಸಬಯಸುವ ನಾಲಿಗೆ, ಹೀಗೆ ಅವರ ಇಡೀ ವ್ಯಕ್ತಿತ್ವ ಧರ್ಮಮಯವಾಗಿತ್ತು ಎಂಬುದನ್ನು ಆ ಶಬ್ದ ಹೇಳುತ್ತದೆ. ಆ ಊರಿನವರೆಲ್ಲರೂ ಧರ್ಮಾತ್ಮರಾಗಿದ್ದರಿಂದ ಆ ಊರೇ ಧರ್ಮಮಯವಾಗಿತ್ತು.

*ಧರ್ಮ ಎಂದರೇನು?* 

ಧರ್ಮ ಎಂದರೇನು ಎಂದು ಗೊತ್ತಾದರೆ ಜೀವನವೇ ಸಾರ್ಥಕವಾಗುತ್ತದೆ. ಅದು ಗೊತ್ತಾಗುವವರೆಗೂ ಜೀವನದಲ್ಲಿ ಹೋರಾಟವಿರುತ್ತದೆ. ಧರ್ಮ ಎಂಬ ಶಬ್ದವೇ ಅದ್ಭುತ. ಜಗತ್ತಿನ ಬೇರೆ ಯಾವ ಭಾಷೆಯಲ್ಲೂ ಈ ಶಬ್ದವಿಲ್ಲ. ಮಾತ್ರವಲ್ಲ, ಈ ಅರ್ಥ ಕೊಡುವ ಬೇರೆ ಯಾವ ಶಬ್ದವೂ ಇಲ್ಲ! ಯಾಕೆಂದರೆ ಧರ್ಮ ಎಂದರೇನು ಎಂದು ಭಾರತೀಯರು ಮಾತ್ರ ಕಂಡುಕೊಂಡಿರುವುದು. ಧರ್ಮ ಸಾಕ್ಷಾತ್ಕಾರ ಭಾರತೀಯರಿಗೆ ಮಾತ್ರ ಆಗಿರುವಂತದ್ದು. ‘ರಿಲೀಜಿನ್’, ‘ರೈಟಸ್ನೆಸ್’ ಈ ಯಾವ ಪದಗಳೂ “ಧರ್ಮ” ಎಂಬ ಪದಕ್ಕೆ ಪೂರ್ಣ ಅರ್ಥದಲ್ಲಿ ಸಮಾನಾರ್ಥಕ ಪದವಲ್ಲ. ಅಂತಹ ಅದ್ಭುತವಾದ ಸಂಗತಿಯದು.  

ವಾಲಿಗೂ ರಾಮನಿಗೂ ಸಂವಾದ ನಡೆದಾಗ, ವಾಲಿಯು ರಾಮನ ಮೇಲೆ ಆಕ್ಷೇಪವನ್ನು ಮಾಡುತ್ತಾನೆ, “ನೀನು ಮರೆಯಲ್ಲಿ ನಿಂತು ನನ್ನ ಮೇಲೆ ಬಾಣ ಪ್ರಯೋಗ ಮಾಡಿದೆ. ಇದು ಅಧರ್ಮ. ಎಷ್ಟು ಸರಿ ಇದು?” ಎಂದು ವಾಲಿ ಕೇಳುತ್ತಾನೆ. ಆಗ ರಾಮನು ಉತ್ತರಿಸುತ್ತಾನೆ. ಆ ಉತ್ತರದ ಪ್ರಾರಂಭದಲ್ಲಿ ಒಂದು ಮಾತು ಬರುತ್ತದೆ, “ಸೂಕ್ಷ್ಮಃ, ಪರಮದುರ್ಜ್ಞೇಯಃ, ಸತಾಂ ಧರ್ಮಃ ಪ್ಲವಂಗಮ” ಎಂದು. “ಧರ್ಮವೆಂಬುದು ಸೂಕ್ಷ್ಮ, ಮಾತ್ರವಲ್ಲ, ಅದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ, ತುಂಬಾ ಕ್ಲಿಷ್ಟ. ನಿನಗೆ ಹೇಗೆ ತಿಳಿಯುತ್ತದೆ? ನೀನು ಪ್ಲವಂಗಮ” ಎಂದು ರಾಮನು ವಾಲಿಗೆ ಹೇಳುತ್ತಾನೆ. ಪ್ಲವಂಗಮ ಎಂದರೆ ಕೊಂಬೆಯಿಂದ ಕೊಂಬೆಗೆ ಹಾರುವ ಕಪಿಗೆ, ನೆಲದಲ್ಲಿ, ನೆಲದ ಆಳದಲ್ಲಿ ಏನಿದೆ ಎಂದು ಹೇಗೆ ಗೊತ್ತಾಗುತ್ತದೆ. ಹಾಗೆ ಅತ್ಯಂತ ಸೂಕ್ಷ್ಮವಾದ, ತಿಳಿದುಕೊಳ್ಳಲು ಅಸಾಧ್ಯವಾಗಿರತಕ್ಕಂತಹ ಧರ್ಮ ನಿನಗೇನು ಗೊತ್ತಾಯಿತು ಹೇಳು, ಗೊತ್ತಾಗಿದ್ದರೆ ನೀನು ಇಂತಹ ಆಕ್ಷೇಪಗಳನ್ನು ಮಾಡುತ್ತಿರಲಿಲ್ಲ ಎಂದು ರಾಮನು ಹೇಳುತ್ತಾನೆ. ಧರ್ಮ ಎಂಬುದು ಅಷ್ಟು ಗಹನವಾಗಿದೆ.

ಧರ್ಮವನ್ನು ಸರಳವಾದ ರೀತಿಯಲ್ಲಿ ರಾಮಭದ್ರಾಚಾರ್ಯರು ಹೇಳುತ್ತಿದ್ದರು. ಅವರು ಸರಿ-ತಪ್ಪುಗಳ ಬಗ್ಗೆ ಹೇಳುತ್ತಿದ್ದರು. ಧರ್ಮಕ್ಕೆ ಪ್ರತಿದ್ವಂದ್ವ ಅಥವಾ ವಿರುದ್ಧಪದ ಅಧರ್ಮ. ಅಧರ್ಮವು ತಾನಿರುವಲ್ಲಿ ಧರ್ಮವನ್ನು ಇರಗೊಡುವುದಿಲ್ಲ. ಧರ್ಮವು ಬಂದು ನೆಲೆಸಿದರೆ ಅಧರ್ಮಕ್ಕೆ ಅಲ್ಲಿ ಇರುವುದಕ್ಕಾಗುವುದಿಲ್ಲ. ಕತ್ತಲೆ-ಬೆಳಕು ಇರುವ ಹಾಗೆ. ಕತ್ತಲೆ ಬೆಳಕಿಗೆ ವಿರೋಧಿ, ಅಂದರೆ ಬೆಳಕಿದ್ದಲ್ಲಿ ಕತ್ತಲೆಯಿರುವುದಿಲ್ಲ, ಹಾಗೆಯೇ ಕತ್ತಲಿದೆ ಎಂದರೆ ಬೆಳಕಿಲ್ಲವೆಂದೇ ಅರ್ಥ. ಹಾಗೆ ಅಧರ್ಮ ಗೊತ್ತಾದರೆ ಧರ್ಮ ಗೊತ್ತಾಗುತ್ತದೆ. ಧರ್ಮ ಗೊತ್ತಾದರೆ ಅಧರ್ಮ ಬಹಳ ಚೆನ್ನಾಗಿ ಗೊತ್ತಾಗುತ್ತದೆ. ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸರಿ ಮತ್ತು ತಪ್ಪು. ನಮಗೆ ಯಾವುದು ಸರಿ, ಯಾವುದು ತಪ್ಪು ಎಂಬುದು ತಿಳಿದಿದೆ ಎಂದೆನಿಸಿದರೂ ಅದನ್ನು ಬಿಡಿಸಿ ಹೇಳಲು ಕಷ್ಟವಾಗುತ್ತದೆ. ರಾಮಭದ್ರಾಚಾರ್ಯರು ಅದನ್ನು ಚೆನ್ನಾಗಿ ಹೇಳುತ್ತಿದ್ದರು. ಜೀವನದ ಪರೀಕ್ಷೆಯಲ್ಲಿ ಬೇಕಾಗುವ, ಜೀವನದ ಕೊನೆಯವರೆಗೂ ಬೇಕಾಗುವ ಮಾತದು. *ಯಾವುದು ನಮ್ಮನ್ನು ಗುರಿಯತ್ತ ಸರಿಸುತ್ತದೆಯೋ ಅದು ಸರಿ, ಯಾವುದು ನಮ್ಮನ್ನು ಗುರಿಯಿಂದ ತಪ್ಪಿಸಿಬಿಡುತ್ತದೆಯೋ ಅದು ತಪ್ಪು*. ಗುರಿಯತ್ತ ಸರಿಸುವುದು ಸರಿ, ತಪ್ಪಿಸುವುದು ತಪ್ಪು. ತಪ್ಪು ಯಾಕೆ ತಪ್ಪು ಎಂದರೆ ಅದು ನಮ್ಮನ್ನು ನಮ್ಮ ಲಕ್ಷ್ಯದಿಂದ ಚ್ಯುತರಾಗುವಂತೆ ಮಾಡುತ್ತದೆ.  ಮುಖ್ಯವಾದ ಗುರಿಯಿಂದ ಚ್ಯುತರಾಗುವಂತೆ ಪರೋಕ್ಷವಾಗಿ ಕಾರಣವಾದುದೆಲ್ಲವೂ ತಪ್ಪು. ಸರಿ ಅಥವಾ ತಪ್ಪಿನ  ಸ್ವಭಾವವೇನೆಂದರೆ ಅದು ಮರಿ ಹಾಕುತ್ತದೆ. ಒಂದು ಸರಿಯಿಂದ ಮತ್ತೊಂದು ಸರಿಯಾಗುತ್ತದೆ. ರಾತ್ರಿ ಬೇಗ ಮಲಗಿದರೆ ಬೆಳಿಗ್ಗೆ ಬೇಗ ಏಳುವುದಕ್ಕಾಗುತ್ತದೆ. ಹಾಗೆಯೇ ತಪ್ಪು ಮತ್ತೊಂದು ತಪ್ಪನ್ನು ಹುಟ್ಟುಹಾಕುತ್ತದೆ. *ಪಾಪವು ನಮ್ಮನ್ನು ಪಾಪಕ್ಕೆ ಎಳೆಯುತ್ತಿರುತ್ತದೆ, ಪುಣ್ಯವು ಪುಣ್ಯಕ್ಕೆ ನಮ್ಮನ್ನು ಎತ್ತುತ್ತಿರುತ್ತದೆ*. ಒಂದು ಒಳ್ಳೆಯ ಕೆಲಸ, ನಾಲ್ಕು ಒಳ್ಳೆಯ ಕೆಲಸಕ್ಕೆ ದಾರಿಮಾಡಿಕೊಡುತ್ತದೆ. ಒಂದು ಕೆಟ್ಟ ಕೆಲಸ, ಮತ್ತೆ ನಾಲ್ಕು ಕೆಟ್ಟ ಕೆಲಸಕ್ಕೆ ಪ್ರೇರಣೆ ಕೊಡುತ್ತದೆ ಮತ್ತು ಅದೇ ತರಹದ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. *ನಾವು ಮಾಡುವ ತಪ್ಪುಗಳು ನಮ್ಮ ಅಕ್ಕಪಕ್ಕದವರನ್ನೂ ದಾರಿ ತಪ್ಪಿಸುತ್ತದೆ.* ಅದನ್ನು ಸಹವಾಸ ದೋಷ ಎಂದು ಕರೆಯುತ್ತೇವೆ. ಸರಿಯು ಕೂಡ ಹಾಗೆ, ಒಬ್ಬ ಸರಿಯನ್ನು ಆಚರಿಸುವಾಗ ಅವನ ಸುತ್ತಲಿನವರಿಗೂ ಆ ಸರಿಯನ್ನು ಆಚರಣೆಗೆ ತರಲು ಮನಸ್ಸಾಗುತ್ತದೆ. ಹಾಗೆ *ಒಂದು ತಪ್ಪು ಹತ್ತು ತಪ್ಪುಗಳಿಗೆ ಪೀಠಿಕೆಯಾದರೆ ಒಂದು ಸರಿ ಹತ್ತು ಸರಿಗಳಿಗೆ ಪ್ರೇರಣೆ*. ಹಾಗಾಗಿ *ನಾವು ಸರಿಯತ್ತಲೇ ಸರಿಯಬೇಕು ಏಕೆಂದರೆ ಅದು ನಮ್ಮನ್ನು ಗುರಿಯತ್ತ ಸರಿಸುತ್ತದೆ*. *ನಾವು ತಪ್ಪಿನತ್ತ ತಪ್ಪಿಯೂ ಸರಿಯಬಾರದು ಏಕೆಂದರೆ ಅದು ನಮ್ಮನ್ನು ತಪ್ಪಿಸಿಯೇ ಬಿಡುತ್ತದೆ*. ನಾವೆಯು ತೀರವನ್ನು ತಲುಪಬೇಕೆಂದರೆ ಅದು ಸರಿಯಾದ ದಾರಿಯಲ್ಲಿ ಹೋಗಬೇಕು. ನಾವೆಗೆ ದಿಕ್ಕು ತಪ್ಪಿದರೆ ತಲುಪಬೇಕಾದ ದಡ ಬಿಟ್ಟು ಯಾವುದೋ ದಡ ಸಿಗುತ್ತದೆ. ಕೆಲವೊಮ್ಮೆ ಯಾವ ದಡವೂ ಸಿಗದೇ ಹೋಗಬಹುದು. *ಬದುಕು ಎನ್ನುವುದು ವಿಧಿ ಒಡ್ಡಿದ ಪರೀಕ್ಷೆ*. ಈ ಪರೀಕ್ಷೆಯಲ್ಲಿ ಗೆದ್ದು, ಭಗವಂತನನ್ನು, ಎಂದರೆ ತುಂಬು ಶಾಂತಿ, ತುಂಬು ನೆಮ್ಮದಿ, ಪರಿಪೂರ್ಣ ಆನಂದವನ್ನು ಹೊಂದಬೇಕು ಎಂದರೆ ಸರಿಯಾದ ದಾರಿಯಲ್ಲಿ ಸಾಗಬೇಕು. ಸುಳ್ಳು ಹೇಳಿದರೆ, ಕಳ್ಳತನ ಮಾಡಿದರೆ, ಇನ್ನೊಬ್ಬನನ್ನು ಹಿಂಸೆ ಮಾಡಿದರೆ, ಹತ್ಯೆ ಮಾಡಿದರೆ, ಮೋಸ ಮಾಡಿದರೆ, ಹೀಗೆ ಮಾಡಬಾರದ್ದನ್ನು ಮಾಡುತ್ತಾ ಹೋದರೆ, ಜೀವದ ಪರಮಗುರಿಯಾದ ದೇವನನ್ನು ಸೇರುವುದಕ್ಕೆ ಬಾಧಕವಾಗುತ್ತದೆ. ತುದಿ-ಮೊದಲಿಲ್ಲದ ಜೀವನದ ಪ್ರಯಾಣಕ್ಕೆ ಸಂಸಾರ ಎಂದು ಹೆಸರು. ಜೀವದ ಪರಮ ಗುರಿಯಾದ ಆ ಭಗವಂತನನ್ನು ಸೇರುವ ದಾರಿಗೆ ಯಾವುದೆಲ್ಲ ಬಾಧಕವೋ ಅದನ್ನೆಲ್ಲ ಪಟ್ಟಿ ಮಾಡಿ ಅದನ್ನು ಪಾಪ, ತಪ್ಪು ಎಂದು ಕರೆದರು. ಯಾವುದೆಲ್ಲ ದೇವನನ್ನು ಸೇರುವ ದಾರಿಗೆ ನಮ್ಮನ್ನು ಸೇರಿಸುತ್ತದೆಯೋ ಅದನ್ನು ಪಟ್ಟಿ ಮಾಡಿ ಅದನ್ನು ಪುಣ್ಯ, ಶುಭ, ಸರಿ ಎಂದು ನಿರೂಪಣೆ ಮಾಡಿದರು. ಯಾವುದರಿಂದ ನಾವು ಭಗವಂತನನ್ನು ಸೇರುತ್ತೇವೆಯೋ ಅದು ಧರ್ಮ.

ರಾಮಭದ್ರಾಚಾರ್ಯರು ತುಂಬಾ ಸುಂದರವಾಗಿ ಧರ್ಮವನ್ನು ವಿವರಿಸುತ್ತಿದ್ದರು. “ಧರ್ಮವೆಂದರೆ ಅದೊಂದು ಸ್ಥಿತಿ” ಎಂದು ಹೇಳುತ್ತಿದ್ದರು. ಉದಾಹರಣೆಗೆ, ಒಂದು ವೀಣೆಯನ್ನು ಶೃತಿ ಮಾಡಿ ಇಟ್ಟರೆ ಅದೊಂದು ಸ್ಥಿತಿ, ಮಿಡಿದಾಗ ಅದೇ ನಾದ ಹೊರಹೊಮ್ಮುತ್ತದೆ. ಅದೇ ಒಂದು ತಂತಿ ಸಡಿಲವಾಗಿದ್ದರೆ, ನಾದ ಬೇರೆಯಾಗುತ್ತದೆ. ಅಂದರೆ ಆ ಸ್ಥಿತಿಯಿಲ್ಲ ಎಂದರ್ಥ. ಆಗ ಅಪಶೃತಿ ಕೇಳುತ್ತದೆ. ಹಾಗೆಯೇ ಯಾವ ಸ್ಥಿತಿ ನಮ್ಮಲ್ಲಿ, ನಮ್ಮ ದೇಹ, ಧಾತುಗಳಲ್ಲಿ, ಅಂತಃಕರಣದಲ್ಲಿ ಇದ್ದಾಗ ನಮಗೆ ದೇವರ ಗೋಚರವಾಗುತ್ತದೆಯೋ, ಅವನ ಪೂರ್ಣಕೃಪೆ ನಮಗಾಗುತ್ತದೆಯೋ, ಆ ಸ್ಥಿತಿ ಧರ್ಮ ಮತ್ತು ಆ ಸ್ಥಿತಿಗೆ ಕಾರಣವಾಗುವಂತಹ ಕ್ರಿಯೆಗಳು ಧರ್ಮ. ಯಾವ ಕಾರ್ಯಗಳಿಂದ, ಯಾವ ಕರ್ಮಗಳಿಂದ ಆ ಸ್ಥಿತಿ ಏರ್ಪಡುತ್ತದೆಯೋ ಆ ಎಲ್ಲ ಕಾರ್ಯಕಲಾಪಗಳು, ನಿಯಮಗಳು ಧರ್ಮ. ಮತ್ತು ಯಾವುದೆಲ್ಲ ಆ ಸ್ಥಿತಿಗೆ ಪೂರಕವಲ್ಲವೋ ಅದೆಲ್ಲವೂ ಅಧರ್ಮ. ಹಾಗಾಗಿ ನಾವು ಧರ್ಮವನ್ನು ಆಚರಿಸಬೇಕು, ಧರ್ಮವಂತರಾಗಬೇಕು, ಧರ್ಮಾತ್ಮರಾಗಬೇಕು. ಒಳಗೂ, ಹೊರಗೂ ಧರ್ಮವನ್ನು ತುಂಬಿಕೊಂಡಿರಬೇಕು.

ಧರ್ಮವೆಂಬುದು ಅಯೋಧ್ಯಾವಾಸಿಗಳ ಸ್ವಭಾವ. ಸಹಜವಾಗಿಯೇ ಅವರು ಧರ್ಮವನ್ನು ಆಚರಿಸುತ್ತಿದ್ದರು. ಹೇಗೆ ಉಸಿರಾಟ, ಹಸಿವಾಗುವುದು ಸ್ವಭಾವವೋ, ಕಣ್ಣಿಗೆ ರೆಪ್ಪೆ ಮುಚ್ಚಿ ತೆಗೆಯುವುದು ಸ್ವಭಾವವೋ, ಅಷ್ಟೇ ಸಹಜವಾಗಿ ಅವರು ಧರ್ಮವನ್ನು ಅಳವಡಿಸಿಕೊಂಡು ಆಚರಿಸುತ್ತಿದ್ದರು. ಹಾಗೆ ಅದು ಸಹಜತೆಯೇ ಆಗುವಷ್ಟು ನಾವು ಅದನ್ನು ಅಭ್ಯಾಸ ಮಾಡಬೇಕು. ಅದನ್ನೇ ಮಾಡುತ್ತಿದ್ದರೆ ಅದು ಸಹಜವಾಗಿ ನಮ್ಮ ಸ್ವಭಾವವಾಗುತ್ತದೆ. ಹಾಗೆ ಮಾಡಿದಾಗ ನಾವೂ ಅಯೋಧ್ಯೆಯ ಪ್ರಜೆಗಳಾಗುವುದಕ್ಕೆ ಸಾಧ್ಯ ಮತ್ತು ನಾವಿರುವ ನಾಡು ಅಯೋಧ್ಯೆ ಆಗಲಿಕ್ಕೆ ಸಾಧ್ಯವಿದೆ. ನಾವಿರುವ ರಾಜ್ಯ ರಾಮರಾಜ್ಯವಾಗುವುದಕ್ಕೆ ಸಾಧ್ಯವಿದೆ. ರಾಮರಾಜ್ಯವಾಗುವುದಕ್ಕೆ ರಾಮ ಹೇಗೆ ಕಾರಣನೋ ಆ ಧರ್ಮಾತ್ಮರಾದ ಪ್ರಜೆಗಳೂ ಅಷ್ಟೇ ಕಾರಣ. ನಾವೆಲ್ಲರೂ ಆ ರೀತಿಯಲ್ಲಿ ಇರೋಣ. ಸರಿ ತಪ್ಪುಗಳ ವಿವೇಚನೆಯಿಂದ ಇರೋಣ. ಯಾರು ಸರಿ ಇರುತ್ತಾನೋ ಅವನು ಸುಖವಾಗಿ ಇರುತ್ತಾನೆ. ಸರಿ ನಡೆಯುವುದು ಧರ್ಮ, ತಪ್ಪಿ ನಡೆಯುವುದು ಅಧರ್ಮ. ಹಾಗಾಗಿ ಸರಿಯಾಗಿ ಬದುಕುವುದನ್ನು ಚಿಕ್ಕ ವಯಸ್ಸಿನಿಂದಲೇ ಆರಂಭಿಸಬೇಕು. ಕೆಲವೊಮ್ಮೆ 60 ವರ್ಷಗಳಾದ ಮೇಲೆ ಧರ್ಮ ಎಂದು ನೆನಪಿಸಿಕೊಂಡಾಗ ಕಳೆದುಹೋದ ಸಮಯವನ್ನು ನೋಡಿ ಪಶ್ಚಾತ್ತಾಪವೊಂದೇ ಉಳಿದಿರುತ್ತದೆ. ಹಾಗಾಗಿ ಚಿಕ್ಕ ವಯಸ್ಸಿನಿಂದಲೇ ಸರಿಯಾಗಿ ಇದ್ದರೆ ಮುಂದೆ ಯಾವಾಗಲೂ ಸರಿಯಾಗಿ ಇರಬಹುದು. ಹಾಗಾಗಿ ಈ ಕ್ಷಣದಿಂದಲೇ ಯಾವುದು ಸರಿಯೋ ಅದನ್ನೇ ಮಾಡುವುದು, ಹೇಗಿದ್ದರೆ ಸರಿಯೋ ಹಾಗೆಯೇ ಇರುವುದನ್ನು ರೂಢಿಸಿಕೊಳ್ಳಬೇಕು. ತಪ್ಪು ಮಾಡುವುದಿಲ್ಲ ಎಂಬ ದೃಢ ನಿಶ್ಚಯದಲ್ಲಿದ್ದು ನಾವು ರಾಮನ ಪ್ರಜೆಗಳಾಗಬೇಕು, ರಾಮನಿಗೆ ಸಲ್ಲುವವರಾಗಬೇಕು.

ಅಯೋಧ್ಯೆಯಂತಹ ಅಯೋಧ್ಯೆ ನಮ್ಮ ಊರುಗಳಾಗಿ, ಕೋಸಲದಂತಹ ಕೋಸಲವು ನಮ್ಮ ರಾಜ್ಯಗಳಾಗಿ, ರಾಮರಾಜ್ಯವು ಎಲ್ಲೆಡೆ ನೆಲೆಸುವಲ್ಲಿ, ನಾವು ಧರ್ಮಮಾರ್ಗದಲ್ಲಿದ್ದು ನಮ್ಮದೊಂದು ಕಿರುಕಾಣಿಕೆಯನ್ನು ಸಲ್ಲಿಸೋಣ. “ನಮ್ಮನ್ನು ನಾವು ಸರಿ ಮಾಡಿಕೊಂಡರೆ ಪ್ರಪಂಚಕ್ಕೆ ಒಬ್ಬ ಕೆಟ್ಟವನು ಕಡಿಮೆಯಾದಂತೆ”. ಸಮಾಜಕ್ಕೆ ಅದೊಂದು ಸೇವೆ, ಕಾಣಿಕೆ. ಹಾಗಾಗಿ ಆ ಕಾಣಿಕೆಯನ್ನು, ನಾವು ಧರ್ಮವಂತರಾಗಿ, ಒಬ್ಬ ಧರ್ಮಪ್ರಜೆಯ ಕಾಣಿಕೆಯನ್ನು ಒಟ್ಟು ಸಮಾಜಕ್ಕೆ, ರಾಷ್ಟ್ರಕ್ಕೆ ನಾವೆಲ್ಲರೂ ಕೊಡೋಣ. ಅದಕ್ಕೆ ಬೇಕಾದ ಮತಿ, ಗತಿಗಳನ್ನು ರಾಮ ನಮಗೆ ನೀಡಲಿ.

|| ಹರೇರಾಮ ||

Jagadguru Shankaracharya Sri Sri Raghaveshwara Bharati Mahaswamiji – Ramayana sessions – Akshararoopa 

ಶ್ರೀಸಂಸ್ಥಾನದವರು ಅನುಗ್ರಹಿಸುತ್ತಿರುವ – ಧರ್ಮಭಾರತೀ ಪ್ರಕಟಿಸುತ್ತಿರುವ  *’ಭಾವ~ರಾಮಾಯಣ’* ವೇ ರಾಮಾಯಣ ಪಾಠದ ಪಠ್ಯ.

*ಶ್ರೀಸಂಸ್ಥಾನದವರು ಧರ್ಮಭಾರತೀ ಮೂಲಕ ಮರ್ಯಾದಾ ಪುರುಷೋತ್ತಮನ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ.* 

ವಿ.ಸೂ: ಚಂದಾ ಮಾಡಲು ಸಂಪರ್ಕಿಸಿ – 9449595254

Facebook Comments Box