ಗೋಕರ್ಣ:೧೦ ಲೋಕಕ್ಕೇ ಬೆಳಕು ನೀಡುವ ಸೂರ್ಯನಿಂದ ಪ್ರಸಿದ್ಧವಾದ ವಂಶದಲ್ಲಿ ಹುಟ್ಟಿ ಮಾನವರಾಗಿ ಹೇಗೆ ಬಾಳಬೇಕು ಎಂಬುದನ್ನು ವಿಶ್ವಕ್ಕೆ ಆದರ್ಶಮಯವಾದ ತನ್ನ ಜೀವನದ ನಡೆನುಡಿಗಳಿಂದ  ತೋರಿಸಿಕೊಟ್ಟವನು ಮರ್ಯಾದಾಪುರುಷೋತ್ತಮನೆಂದೇ ಖ್ಯಾತನಾದ ಪ್ರಭು ಶ್ರೀರಾಮಚಂದ್ರ. ದಿವಿಭುವಿಗಳಿಗೆ ಧರ್ಮದ ಸೇತುವನ್ನು ಕಟ್ಟಿ ಅವತಾರ  ಕಾರ್ಯವನ್ನು ಪೂರೈಸಿದ ಆ ಮಹಾತ್ಮನೇ ಆರಾಧ್ಯದೈವವಾದ ನಮ್ಮ ಈ ಮಠದಲ್ಲಿ ಸದಾ ಆತನ ಅರ್ಚನೆ, ಸ್ಮರಣೆ ನಡೆಯುತ್ತಲೇ ಇರುತ್ತದೆ. ರಾಮನ ಆದರ್ಶ ಇಷ್ಟಕ್ಕೇ ಸೀಮಿತವಾಗಬಾರದು. ಎಲ್ಲಡೆಗೂ ಶ್ರೀರಾಮನ ಸಂದೇಶವು ವಿಸ್ತೃತವಾಗಬೇಕು. ಆ ಉದ್ದೇಶದಿಂದಲೇ ನಾವು ವಿನೂತನವಾದ ಶ್ರೀರಾಮಕಥಾವನ್ನು ಯೋಜಿಸಿ ಜನಮಾನಸದಲ್ಲಿ ರಾಮಾಯಣದ ಪುನರುತ್ಥಾನದ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಚಾತುರ್ಮಾಸ್ಯದ ನಿಮಿತ್ತವಾಗಿ ಅಶೋಕೆಯಲ್ಲಿ ಆಯೋಜಿತವಾಗಿದ್ದ ಕುಮುಟಾ ಮಂಡಲದ  ಅಂಕೋಲಾ. ಕಾರವಾರ, ಉಪ್ಪಿನಪಟ್ಟಣ, ಚಂದಾವರ ಹಾಗೂ ಮೂರೂರು-ಕಲ್ಲಬ್ಬೆ ವಲಯಗಳ ಶಿಷ್ಯಸಮುದಾಯದ ಶ್ರೀಗುರುದೇವತಾಸೇವೆಯನ್ನು ಹಾಗೂ ದೈವಜ್ಞ ಸಮಾಜದಶಿಷ್ಯರ ಶ್ರೀಗುರುಪಾದುಕಾಪೂಜೆಯನ್ನು ಸ್ವೀಕರಿಸಿ ಧರ್ಮಸಭೆಯಲ್ಲಿ ಆಶೀರ್ವಚನವನ್ನು ಅನುಗ್ರಹಿಸುತ್ತಿದ್ದ ಪೂಜ್ಯಶ್ರೀಗಳು, ರಾಮಾಯಣವು ನಮ್ಮ ಬದುಕಿನ ಆದರ್ಶದೀಪ. ಅದರ ಬೆಳಕಿನಲ್ಲಿ ನಡೆದಾಗ ನಮ್ಮ ಜೀವನ ಸಾರ್ಥಕ. ನಮ್ಮ ಪ್ರಯತ್ನ ರಾಮಾಯಣದ ಕಥೆಯನ್ನು ಕೇಳುವಷ್ಟಕ್ಕೇ ಸೀಮಿತವಾಗದೆ ಅದರ ತತ್ವಗಳನ್ನು ಬಾಳಿನಲ್ಲಿ ಅಳವಡಿಸಿಕೊಳ್ಳುವಂತಾದರೆ ಮಾತ್ರ ಉದ್ದೇಶವು ಸಫಲವಾಗುತ್ತದೆ ಎಂದು ಹೇಳಿ, ನಮ್ಮೆಲ್ಲರ ಜೀವನವೂ ರಾಮಮಯವಾಗಲಿ ಎಂದರು. ಅಲ್ಲದೆ ತೀವ್ರವಾದ ಕಲಬೆರಕೆ, ವಿಷಯುಕ್ತವಾದ ಆಹಾರವನ್ನು ಸೇವಿಸಿ ಸ್ವಾಸ್ಥ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ, ರಾಸಾಯನಿಕ ಮುಕ್ತವಾದ ಆಹಾರದ ಸೇವನೆಯ ಮೂಲಕ ಆರೋಗ್ಯಪೂರ್ಣ ಜೀವನ ಸಾಧ್ಯವೆಂದು ತೋರಿಸಿಕೊಡುವುದಕ್ಕಾಗಿಯೇ ಈ ಚಾತುರ್ಮಾಸ್ಯಕಾಲದಲ್ಲಿ ಸಂಪೂರ್ಣ ಸಾವಯವ ಸಾಮಗ್ರಿಗಳನ್ನು ಉಪಯೋಗಿಸಿ ಸಿದ್ಧಪಡಿಸಿದ ಆಹಾರವನ್ನೇ ಪ್ರಸಾದಭೋಜನದಲ್ಲಿ ನೀಡಲಾಗಿದೆ ಎಂದೂ ಹೇಳಿ, ಮುಂದಿನ ದಿನಗಳಲ್ಲಿ ಈ ಕ್ರಮವು ಸಾರ್ವತ್ರಿಕವಾಗಲೆಂದೂ ಆಶಿಸಿದರು.

ಎಂದಿನಂತೆ ವಿಶಿಷ್ಟಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮೂಲಮಠ ನಿರ್ಮಾಣ ದೇಣಿಗೆ, ಸಾವಿರದೆಡೆ ಅಭಿಯಾನ  ಮೊದಲಾದ ಶ್ರೀಮಠದ ಯೋಜನೆಗಳ ವಿವರಣೆ ಹಾಗೂ ಸಮರ್ಪಣೆಗಳು ಆಯೋಜಿತವಾಗಿದ್ದವು. ಶ್ರೀಮಠದ ಸವಾರಿ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.

 

   ಗೋಕರ್ಣದ ಕೋಟಿತೀರ್ಥದ ಸಮಗ್ರ ಸ್ವಚ್ಛತೆ ಹಾಗೂ ನವೀಕರಣ.

 

ಗೋಕರ್ಣ: ಪ್ರಸಿದ್ಧ ಐತಿಹಾಸಿಕ ಪುಣ್ಯಕ್ಷೇತ್ರ ಗೋಕರ್ಣದ ಕೋಟಿತೀರ್ಥವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ನವೀಕರಿಸುವುದಲ್ಲದೆ, ಸ್ಥಳಿಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೋಟಿತೀರ್ಥಪರಿಸರದಲ್ಲಿ ಒಳಚರಂಡಿ ಯೋಜನೆಯನ್ನೂ ರೂಪಿಸಿ ಈ ಬಗ್ಗೆ ಸುಮಾರು ಐದುಕೋಟಿ ರೂಪಾಯಿಗಳ ವೆಚ್ಚದಲ್ಲಿ ಸರ್ಕಾರದ ಒಪ್ಪಿಗೆ ಪಡೆದು ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ. ಕೋಟಿತೀರ್ಥದಲ್ಲಿ ಬಟ್ಟೆಯೊಗೆಯುವ ವ್ಯವಸ್ಥೆ, ಮಹಿಳೆಯರಿಗೆ ವಸ್ತ್ರ ಬದಲಾವಣೆಗೆ ಕೊಠಡಿ ಮೊದಲಾದ ನಿರ್ಮಾಣಗಳನ್ನು ಸ್ಥಳೀಯರ ಜೊತೆ ಸಂವಾದ ನಡೆಸಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಸಮಗ್ರ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಇಂದು ಅಶೋಕೆಯಲ್ಲಿ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ನಾಗರಾಜ ಶೆಟ್ಟರ ಉಪಸ್ಥಿತಿಯಲ್ಲಿ ಈ ಕುರಿತು ಸಭೆಯು ಆಯೋಜಿತವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯಶ್ರೀಗಳು, ಹಿಂದೆ ಗೋಕರ್ಣದಲ್ಲಿ ಜ್ಞಾನಮಂಟಪ, ವೈರಾಗ್ಯಮಂಟಪ ಹಾಗೂ ಮುಕ್ತಿಮಂಟಪಗಳೆಂಬ ಮೂರು ಮಂಟಪಗಳಿದ್ದವು. ಅವೂ ಸಹ ಈ ಸಂದರ್ಭದಲ್ಲಿ ಪುನಾರಚಿತವಾಗಬೇಕು ಎಂದರಲ್ಲದೆ, ಮುಖ್ಯವಾಗಿ ಒಳಚರಂಡಿಯು ನಿರ್ಮಾಣವಾಗಬೇಕೆಂದು ನುಡಿದರು. ಗೋಕರ್ಣ ಗ್ರಾಮಪಂಚಾಯತು, ತಾಲೂಕು ಪಂಚಾಯತದ ಅನೇಕ ಸದಸ್ಯರು ಭಾಗವಹಿಸಿದ್ದ ಈಸಭೆಯಲ್ಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀ ನರಸಿಂಹ ಮೂರ್ತಿ, ಗೇರುಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ವಿನೋದ ಪ್ರಭು, ತಾಲೂಕು ಪಂಚಾಯತ ಅಧ್ಯಕ್ಷೆ ಶ್ರೀಮತಿ ನೀಲಾಂಬಿಕಾ ನಾಯಕ್,  ಸದಸ್ಯೆ ಶ್ರೀಮತಿ ಭಾರತೀ ದೇವತೆ ಪಂಚಾಯತ ಸದಸ್ಯ ಶ್ರಿ ಮಹೇಶ ಶೆಟ್ಟಿ ಮೊದಲಾದ ಅನೇಕ ಗಣ್ಯರು ಪ್ರಾಧಿಕಾರದ ಮೂವರು ನಿರ್ದೇಶಕರು ಪಾಲ್ಗೊಂಡಿದ್ದರು.

Facebook Comments Box