Tag hesaru

ಹೆಸರು- ಕಗ್ಗ

ಬೆಂಗಳೂರಿನ ಶ್ರೀರಾಮಾಶ್ರಮದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಮಂಕುತಿಮ್ಮನ ಕಗ್ಗದ ಕುರಿತಾದ ಪ್ರವಚನ

ಹೆಸರೆಂಬ ಕೆಸರೊಳು..

ಮೊಟ್ಟಮೊದಲಬಾರಿಗೆ ಗಟ್ಟಿ ಗಟ್ಟಿ ಅಕ್ಕಿಯಿಂದ ಮೃದು – ಮೃದುವಾದ, ಮಧುರ – ಮಧುರವಾದ, ರುಚಿ – ರುಚಿಯಾದ ಅನ್ನವನ್ನು ಸಿದ್ಧಪಡಿಸಬಹುದೆಂಬುದನ್ನು ಯಾರು ಕಂಡುಹಿಡಿದರು..?


ಮನವನ್ನು ಮನಗಳೊಂದಿಗೆ ಬೆರೆಸಲು ನೆರವೀಯುವ ಅಕ್ಷರಗಳನ್ನು ಮೊಟ್ಟಮೊದಲು ಕಂಡುಹಿಡಿದವರಾರು..?


ಬೆಣ್ಣೆ- ಬೆಣ್ಣೆಯಂತಹ ಹತ್ತಿಯಿಂದ ಎಳೆ – ಎಳೆಯಾಗಿ ನೂಲೆಳೆದು ಹಾಗೊಂದು – ಹೀಗೊಂದು ನೇಯ್ದು, ಮೈಮರೆಸುವ – ಮೈಮೆರೆಸುವ ಉಡುಗೆ ತೊಡುಗೆಗಳನ್ನು ನಿರ್ಮಿಸಬಹುದೆಂಬುದು ಯಾರ ಅನ್ವೇಷಣೆ..?


ಬಾಯಾರಿದರೆ ಬಾವಿಗಿಳಿಯಬೇಕಾಗಿಲ್ಲ…!

ಕೊಡದ ಕೊರಳಿಗೆ ಕುಣಿಕೆ ತೊಡಿಸಿ ಬಾವಿಗಿಳಿಸಿದರೆ ಅದರೊಳಗೆ ಕುಳಿತು ನೀರೇ ಮೇಲೇರಿ ನಮ್ಮೆಡೆಗೆ ಬರಬಹುದೆಂಬುದನ್ನು ಕಂಡುಹಿಡಿದವನ ಹೆಸರೇನು..?

ಅಕ್ಕಿಯೊಳಗನ್ನವನು ಮೊದಲಾರು ಕಂಡವನು..?|
ಅಕ್ಕರದ ಬರಹಕ್ಕೆ ಮೊದಲಿಗನದಾರು..? ||
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ.. |
ಸಿಕ್ಕುವುದೆ ನಿನಗೆ ಜಸ – ಮಂಕುತಿಮ್ಮ…||

ಬದುಕಿನ ಭವನದ ಮೂಲಾಧಾರಶಿಲೆಗಳನ್ನಿಟ್ಟವರ ಗುರುತೇ ಇಲ್ಲ…!
ಆದರೆ ಹೆಸರಿಗಾಗಿ ಓಟ ಮಾತ್ರ ನಿಂತಿಲ್ಲ..!

ಹೆಸರಿಗಾಗಿ ಉಸಿರುಗಟ್ಟಿ ಓಡುವವರೇ…….!!!!

ಈ ಬ್ರಹ್ಮಾಂಡದಲ್ಲಿ ಅದೆಲ್ಲಿ ಕೆತ್ತಿದರೂ ಶಾಶ್ವತವಾಗಿ ಉಳಿಯದು ನಿಮ್ಮ ಹೆಸರು..!!

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑