॥ಹರೇ ರಾಮ॥

ಪ್ರೀತಿ..ನೀತಿ..ರೀತಿ…ಪರಿಣತಿ..
ಅಯೋಧ್ಯೆಯ ಮಂತ್ರಿಗಳನ್ನು ನಾಲ್ಕೇ ಪದಗಳಲ್ಲಿ ಬಣ್ಣಿಸಬಹುದಾದರೆ ಅದು ಹೀಗೆ…!!

ಪ್ರೀತಿ – ಈಶನಲ್ಲಿ..
ಪ್ರೀತಿ – ದೇಶದಲ್ಲಿ..
ಪ್ರೀತಿ – ನರೇಶನಲ್ಲಿ..
ಪ್ರೀತಿ – ಪರಸ್ಪರರಲ್ಲಿ..
ಪ್ರೀತಿ – ಕರ್ತವ್ಯದಲ್ಲಿ..

ಆತ್ಮದ ಅಂತರಾಳದಲ್ಲಿ ಉದಯಿಸಿ ಬರುವ ಪ್ರೀತಿ..
ಅದು ಬಗೆ ಬಗೆಯಲ್ಲಿ ವ್ಯಕ್ತವಾಗಿ ಎಲ್ಲೆಡೆ ಪಸರಿಸುವ ರೀತಿ..

ಲೋಕವು ಅಷ್ಟಾಗಿ ಗಮನಿಸದ ಈ ಎಲೆಮರೆಯ ಕಾಯಿಗಳ ಸಾಮರ್ಥ್ಯ-ಸೇವೆಗಳನ್ನು ಸೂಕ್ಷ್ಮದೃಷ್ಟಿಯಿಂದ ಗಮನಿಸಿ, ಬಣ್ಣಿಸುವ ಋಷಿಪದಗಳನ್ನು ಸಾವಧಾನವಾಗಿ ಗಮನಿಸಿ..

*ನಿತ್ಯಂ ಪ್ರಿಯಹಿತೇ ರತಾಃ :
ಸಾಮ್ರಾಜ್ಯದ – ಸಮ್ರಾಟನ ‘ಪ್ರಿಯ-ಹಿತ’ಗಳಲ್ಲಿ ಅವರು ನಿರತವೂ ನಿರತರಾಗಿದ್ದರು..

ಪ್ರಿಯ-ಹಿತಗಳು ಭುವಿಯ ಬದುಕಿನ ಎರಡು ಧ್ರುವಗಳು..
ನಮಗೆ ಪ್ರಿಯವಾಗುವ ಹಲವು ಸಂಗತಿಗಳು ಜೀವನಕ್ಕೆ ಹಿತವಲ್ಲ..
ಜೀವನಕ್ಕೆ ಹಿತವಾದ ಅದೆಷ್ಟೋ ಸಂಗತಿಗಳು ನಮಗೆ ಪ್ರಿಯವೆನಿಸುವುದೇ ಇಲ್ಲ..
ನಮ್ಮ ಮೇಲೆ ಮಾಯೆಯ ಆಟ ಇಂದಿಗೂ ನಡೆಯುತ್ತಿದ್ದರೆ,ಅದಕ್ಕೆ ಪ್ರಧಾನ ಕಾರಣವೇ ಇದು..
ನಮಗೆ ಹಿತವಾದುದೇ ಪ್ರಿಯವೆನಿಸತೊಡಗಿದರೆ ಮಾಯೆಯನ್ನು ಮೀರಿ ನಾವು ದೇವರೆತ್ತರಕ್ಕೆ ಬೆಳೆದುಬಿಡುವೆವಲ್ಲವೇ..!?

ಪ್ರಿಯ-ಹಿತಗಳು ಒಂದಾಗದಿರುವುದೇ ನಮ್ಮ ಸರ್ವಸಂಕಟಗಳ ಮೂಲ..!
ಹಿತವು ಪ್ರಿಯವಾಗದಿರುವುದರಿಂದ ಸಂಪತ್ತುಗಳು ದೂರವಾದವು..!
ಅಹಿತವು ಪ್ರಿಯವಾದಾಗ ಆಪತ್ತುಗಳು ಹತ್ತಿರವಾದವು..!
ಸಕ್ಕರೆಕಾಯಿಲೆಯವನಿಗೆ ಸವಿಯು ಅಹಿತ, ಆದರದುವೇ ಪರಮಪ್ರಿಯ..!!
ಔಷಧವು ಹಿತ, ಆದರದು ಅತ್ಯಂತ ಅಪ್ರಿಯ..!!

ಹಿತ-ಪ್ರಿಯಗಳೊಂದಾದ ಬದುಕು ಮುಕ್ತಿಗೆ ಸಮಾನ..!
ಹಿತಪ್ರಿಯಗಳೊಂದಾದ ಸಾಮ್ರಾಜ್ಯ ಸ್ವರ್ಗಕ್ಕೆ ಮಿಗಿಲು..!
ಆದರೆ ಇವೆರಡನ್ನೂ ಒಂದುಗೂಡಿಸುವುದು ಉತ್ತರ-ದಕ್ಷಿಣಗಳನ್ನು ಒಂದುಗೂಡಿಸುವಷ್ಟೇ – ಪ್ರಕೃತಿ-ಪರಮಾತ್ಮರನ್ನು ಒಂದುಗೂಡಿಸುವಷ್ಟೇ ಕಠಿಣ..
ಒಂದು ಮನೆಯಲ್ಲಿ, ಹೆಚ್ಚೇಕೆ ? ಒಂದು ಮನದಲ್ಲಿ ಸಾಧಿಸಲು ಅಸಂಭವವೆನಿಸುವ ಈ ಕಾರ್ಯವನ್ನು ಒಂದು ರಾಜ್ಯದಲ್ಲಿ ಸಾಧಿಸಿದ್ದರು ಅಯೋಧ್ಯೆಯ ಅಮಾತ್ಯರು..!

ತನ್ನ ಕಾರ್ಯಸಾಧನೆಗಾಗಿ ಮತ್ತೊಬ್ಬನನ್ನು ಸಂತೋಷಪಡಿಸಬಯಸುವವನು ‘ಮಧುಪಾನ’ ಮಾಡಿಸುತ್ತಾನೆ..
ಇದು ಪ್ರಿಯ, ಆದರೆ ಹಿತವಲ್ಲ..
ರೋಗಿಯೊಬ್ಬನನ್ನು ಆರೋಗ್ಯವಂತನನ್ನಾಗಿಸಲೆಳಸುವ ವೈದ್ಯನು ಕಹಿಯಾದ ಔಷಧವನ್ನು ಕುಡಿಸುತ್ತಾನೆ..
ಇದು ಹಿತ, ಆದರೆ ಪ್ರಿಯವಲ್ಲ..
ಮಗುವಿನ ಸಂತೋಷ- ಸ್ವಾಸ್ಥ್ಯಗಳೆರಡನ್ನೂ ಬಯಸುವ ತಾಯಿಯು ಔಷಧವನ್ನು ಜೇನಿನಲ್ಲಿ ಬೆರೆಸಿ ನೀಡುತ್ತಾಳೆ..
ಇದು ಪ್ರಿಯ-ಹಿತಗಳ ಸಂಗಮ..

ಆಳುವವರ ಆದರ್ಶವಿದು..
ಹಿತವುಂಟುಮಾಡುವೆನೆಂದು ಪ್ರಜೆಗಳನ್ನು ನೋಯಿಸಲೂಬಾರದು..
ಸಂತೋಷಪಡಿಸುವ ಭರದಲ್ಲಿ ಅವರಿಗೆ ಅಂತಿಮವಾಗಿ ಅಹಿತವನ್ನೇ ಉಂಟುಮಾಡುವ ಉಪಕ್ರಮವನ್ನು ತೆಗೆದುಕೊಳ್ಳಲೂಬಾರದು..
(ಅಧಿಕಾರವನ್ನು ಗಳಿಸಿಕೊಳ್ಳುವ, ಉಳಿಸಿಕೊಳ್ಳುವ, ಬೆಳೆಸಿಕೊಳ್ಳುವ, ಸ್ವಾರ್ಥ ಸಾಧನೆಗಾಗಿ ಜನರಿಗೆ ತತ್ಕಾಲಕ್ಕೆ ಪ್ರಿಯವಾಗುವ ಸಂಗತಿಗಳ ಸುರೆಯನ್ನು ಕುಡಿಸಿ ಶಾಶ್ವತವಾಗಿ ಕೇಡುಂಟುಮಾಡುವವರು ಇಂದಿನ ಮಂತ್ರಿಗಳು..)
ಅಯೋಧ್ಯೆಯ ಮಂತ್ರಿಗಳು “ತಮ್ಮ ದೊರೆಗೆ, ದೇಶಕ್ಕೆ ಯಾವುದು ಪ್ರಿಯವಾದೀತು ? ಯಾವುದು ಹಿತವಾದೀತು ? ಯಾವುದು ಎರಡೂ ಆದೀತು..?” ಎಂಬುದನ್ನೇ ನಿತ್ಯವೂ ಚಿಂತಿಸುವವರಾಗಿದ್ದರು..
ಅದನ್ನು ಸಾಧಿಸುವುದರಲ್ಲಿಯೇ ಆನಂದವನ್ನು ಕಾಣುವವರಾಗಿದ್ದರು..

*ಸತತಂ ಪ್ರಿಯವಾದಿನಃ :

ಪ್ರಿಯವಾದ ಸಂಗತಿಯನ್ನು ಪ್ರಿಯವಾಗುವಂತೆ ಹೇಳಬಲ್ಲವರು ಸಾಮಾನ್ಯರು..
ಇಂಥವರಿಗೆ ದೇವರಿತ್ತ ‘ಮಾತು’ ಸಾಧನ..
ಪ್ರಿಯವನ್ನೂ ಅಪ್ರಿಯವಾಗುವಂತೆ ಹೇಳಿಬಿಡುವವರು ಅಧಮರು..
ಇಂಥವರಿಗೆ ದೇವರಿತ್ತ ‘ಮಾತು’ ಶಾಪ..!
ಅಪ್ರಿಯವನ್ನೂ ಪ್ರಿಯವಾಗುವಂತೆ ಹೇಳುವ ಕಲೆ ಎಲ್ಲೋ ಕೆಲವರಿಗೆ ಮಾತ್ರವೇ ಸಿದ್ಧಿಸುವಂಥದು..
ಇಂಥವರಿಗೆ ದೇವರಿತ್ತ ‘ಮಾತು’ ವರ..!
ತಮ್ಮ ಪ್ರಜೆಗಳನ್ನೂ, ಪ್ರಭುವನ್ನೂ ಬಹುವಾಗಿ ಪ್ರೀತಿಸುತ್ತಿದ್ದ ಅಷ್ಟಮಂತ್ರಿಗಳು ಎಲ್ಲಿಯೂ ಅವರಿಗೆ ನೋವಾಗದಂತೆ ಎಚ್ಚರ ವಹಿಸುತ್ತಿದ್ದರು..
ಅಪ್ರಿಯಸತ್ಯಗಳನ್ನೂ ಪ್ರಿಯವಾಗುವಂತೆ ಹೇಳುವ ಮೂಲಕ ವಾಙ್ಮಯತಪಸ್ಸನ್ನೇ ಆಚರಿಸುತ್ತಿದ್ದರು..

*ರಾಜಕೃತ್ಯೇಷು ನಿತ್ಯಶಃ ಅನುರಕ್ತಾಃ :

ಸರ್ವರೂ ಅವರವರ ‘ಕರ್ತವ್ಯ’ಗಳನ್ನು ‘ಕೃತ’ವಾಗಿಸಿದರೆ ಅದುವೇ ಅಲ್ಲವೇ ‘ಕೃತಯುಗ’..!?
ಮತ್ತೆಲ್ಲಿ ಜಗತ್ತಿನಲ್ಲಿ ಸಮಸ್ಯೆ-ಸಂಕಟಗಳಿರಲು ಸಾಧ್ಯ..?
ಆದರೆ ಹೆಚ್ಚಿನವರು ಮಾಡಬೇಕಾದುದೆಲ್ಲವನ್ನೂ ಮಾಡುವುದೇ ಇಲ್ಲ..
ಮಾಡುವವರೂ ಅನೇಕರು ‘ಪ್ರೀತಿ’ಯಿಂದ ಮಾಡುವುದಿಲ್ಲ, ಪರಿಣಾಮಗಳ ಭೀತಿಯಿಂದ ಮಾಡುತ್ತಾರೆ..
ಕರ್ತವ್ಯವನ್ನು ಪ್ರೀತಿಸುವವರು, ಆ ಪ್ರೀತಿಯನ್ನೇ ಕೃತಿಯಾಗಿಸುವವರು ಕೆಲವೇ ಕೆಲವರು..
ಅಯೋಧ್ಯೆಯ ಮಂತ್ರಿಗಳಲ್ಲಿ ಅದನ್ನು ಕಂಡ ಋಷಿ ಉದ್ಗರಿಸಿದ್ದು ..
‘ಅನುರಕ್ತಾಃ ರಾಜಕೃತ್ಯೇಷು ನಿತ್ಯಶಃ’

*ಪರಸ್ಪರಾನುರಕ್ತಾಃ :

ವ್ಯಕ್ತಿಗಳೇನಕವಾದಂತೆ ಮನಸ್ಸುಗಳೂ ಅನೇಕವಾಗುವುದು ‘ಪ್ರಕೃತಿ’
ವಿಷಯವೊಂದರ ಕುರಿತಾಗಿ ಉಂಟಾಗುವ ವಿರೋಧವು ವ್ಯಕ್ತಿವಿರೋಧದಲ್ಲಿ ವಿಶ್ರಾಂತವಾಗುವುದು ‘ವಿಕೃತಿ’
ಚರ್ಚೆಯಲ್ಲಿ ಹಲವಾಗುವ ಮನಗಳು ನಿರ್ಣಯದಲ್ಲಿ ಒಂದಾಗುವುದು ‘ ಸಂಸ್ಕೃತಿ’
ಈ ಸಂಸ್ಕೃತಿಯನ್ನು ಸಾಧ್ಯವಾಗಿಸುವುದು ‘ಪರಸ್ಪರಾನುರಕ್ತಿ’
ಅನನ್ಯವಾದ ಅನ್ಯೋನ್ಯ ಪ್ರೀತಿಯು ದಶರಥನ ಅಷ್ಟ ಮಂತ್ರಿಗಳ ಅಷ್ಟಮನಗಳನ್ನು ಏಕಬುದ್ಧಿಯಲ್ಲಿ ಸಮ್ಮಿಲಿತಗೊಳಿಸಿತು..
ರಾಜ್ಯಭಾರವನ್ನು ಸುಸೂತ್ರಗೊಳಿಸಿತು..

ಸಮಾನತೆಯು ಸಂಗಮಕ್ಕೆ ಹೇಗೆ ಕಾರಣವಾಗುತ್ತದೆಯೋ ಹಾಗೆಯೇ ಸಂಘರ್ಷಕ್ಕೂ ಕಾರಣವಾಗುವುದುಂಟು..
ಬುದ್ಧಿವಂತರಲ್ಲಿ ಸ್ಪರ್ಧೆ..
ಬಲವಂತರಲ್ಲಿ ಹೋರಾಟ..
ರೂಪವಂತರಲ್ಲಿ ಅಸೂಯೆ..
ಒಂದು ಗುಂಪಿನಲ್ಲಿ (ಜಾತಿ-ಕುಟುಂಬ-ಊರು)ನಾಯಕರಿಬ್ಬರು ಹುಟ್ಟಿದರೆ ಅಲ್ಲಿ ಸಂಘರ್ಷ ಕಟ್ಟಿಟ್ಟ ಬುತ್ತಿ..
ಆದರೆ ಅಯೋಧ್ಯೆಯ ಮಂತ್ರಿಗಳು ಇದಕ್ಕೊಂದು ಅಪವಾದ..
ಅವರ ನಡುವೆ ಸ್ಪರ್ಧೆ- ಸಂಘರ್ಷಗಳೇರ್ಪಡಲಿಲ್ಲ..
ಬದಲಾಗಿ ಗಾಢವಾದ ಪರಸ್ಪರ ಪ್ರೀತಿಯೇರ್ಪಟ್ಟಿತು..
(ತುಂಡು ಮಾಂಸಕ್ಕಾಗಿ ಕಚ್ಚಾಡುವ ನಾಯಿಗಳಂತೆ ಕ್ಷುಲ್ಲಕ ಲಾಭಕ್ಕಾಗಿ ನಿತ್ಯ ಕಿತ್ತಾಡುವ ಇಂದಿನ “ತಥಾಕಥಿತ ಮಂತ್ರಿಗಳು” ಶ್ರೀ ರಾಮಾಯಣದ ಈ ಭಾಗವನ್ನು ಒಮ್ಮೆ ಅವಲೋಕಿಸಬೇಕು.)

* ಸೌಹೃದೇಷು ಪರೀಕ್ಷಿತಾಃ :

ಬಲವಿದ್ದಲ್ಲಿ ಕಲಹವಿರುತ್ತದೆ..
ಪ್ರೀತಿಯಿದ್ದಲ್ಲಿ ಪರೀಕ್ಷೆಯಿರುತ್ತದೆ..
ಅದರಲ್ಲಿಯೂ ರಾಜನಾದವನು ಪರೀಕ್ಷಿಸದೇ ಯಾರನ್ನೂ ಪ್ರೀತಿಸಬಾರದು ..
ಪ್ರೀತಿಸುವವರನ್ನೂ ಆಗಾಗ ಪರೀಕ್ಷಿಸದೇ ಇರಬಾರದು..
ಪರೀಕ್ಷೆಗಳಿಗೆ ಅಳುಕಬೇಕಾಗಿಲ್ಲ..
ಸಿದ್ಧತೆ ಸಮರ್ಪಕವಾಗಿದ್ದರೆ, ನಮ್ಮಲ್ಲಿ ಕೊರತೆಯಿಲ್ಲದಿದ್ದರೆ ಪರೀಕ್ಷೆಯೂ ಪದೋನ್ನತಿಯನ್ನೇ ತಂದುಕೊಡುತ್ತದೆ..
ತನ್ನ ಮಂತ್ರಿಗಳ ಸೌಹೃದವೆಂಥದೆಂಬುದು ಗೊತ್ತಿದ್ದರೂ ದಶರಥನು ರಾಜಧರ್ಮದಂತೆ ಅವರನ್ನು ಹಲವು ಬಾರಿ ಪರೀಕ್ಷಿಸಿದನು..
ಅವರೂ ಪ್ರತಿಯೊಂದು ಪರೀಕ್ಷೆಯಲ್ಲಿಯೂ ದೇಶ-ದೊರೆಗಳ ಹೃದಯದಲ್ಲಿ ಎತ್ತರೆತ್ತರ ಬೆಳೆದರು..

* ಸ್ಮಿತಪೂರ್ವಾಭಿಭಾಷಿಣಃ :
“ಮುಗುಳ್ನಗುವಿಲ್ಲದೆ ಮಾತಿಲ್ಲ”

ಬೀಜವು ಮೊಳಕೆಯೊಡೆದು ಮತ್ತೆ ಚಿಗುರುವಂತೆ..
ಅಂತರಾಳದ ಆನಂದ ಬೀಜವು ಮೊದಲು ಮುಗುಳ್ನಗೆಯ ಮೊಳಕೆಯೊಡೆದು, ಮತ್ತೆ ಮಾತಿನ ಚಿಗುರಾಗುವಂತಿದ್ದರೆ ಅದೆಷ್ಟು ಸೊಗಸು..!

ನಾವು ಹಿಮಾಲಯವನ್ನು ತಲುಪುವ ಮೊದಲೇ ಹಿಮಾಲಯದ ತಂಪು ನಮ್ಮನ್ನು ತಲುಪುವಂತೆ, ರಾಮಾವತಾರವಾಗುವ ಮುನ್ನವೇ ಅಯೋಧ್ಯೆಯಲ್ಲಿ “ಪ್ರೇಮಾವತಾರ”ವಾಗಿದ್ದಿತು..!

॥ಹರೇ ರಾಮ॥

Facebook Comments Box