LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ರಾಮಾವತಾರದ ಮುನ್ನ ಪ್ರೇಮಾವತಾರ….

Author: ; Published On: ಗುರುವಾರ, ದಶಂಬರ 16th, 2010;

Switch to language: ಕನ್ನಡ | English | हिंदी         Shortlink:

॥ಹರೇ ರಾಮ॥

ಪ್ರೀತಿ..ನೀತಿ..ರೀತಿ…ಪರಿಣತಿ..
ಅಯೋಧ್ಯೆಯ ಮಂತ್ರಿಗಳನ್ನು ನಾಲ್ಕೇ ಪದಗಳಲ್ಲಿ ಬಣ್ಣಿಸಬಹುದಾದರೆ ಅದು ಹೀಗೆ…!!

ಪ್ರೀತಿ – ಈಶನಲ್ಲಿ..
ಪ್ರೀತಿ – ದೇಶದಲ್ಲಿ..
ಪ್ರೀತಿ – ನರೇಶನಲ್ಲಿ..
ಪ್ರೀತಿ – ಪರಸ್ಪರರಲ್ಲಿ..
ಪ್ರೀತಿ – ಕರ್ತವ್ಯದಲ್ಲಿ..

ಆತ್ಮದ ಅಂತರಾಳದಲ್ಲಿ ಉದಯಿಸಿ ಬರುವ ಪ್ರೀತಿ..
ಅದು ಬಗೆ ಬಗೆಯಲ್ಲಿ ವ್ಯಕ್ತವಾಗಿ ಎಲ್ಲೆಡೆ ಪಸರಿಸುವ ರೀತಿ..

ಲೋಕವು ಅಷ್ಟಾಗಿ ಗಮನಿಸದ ಈ ಎಲೆಮರೆಯ ಕಾಯಿಗಳ ಸಾಮರ್ಥ್ಯ-ಸೇವೆಗಳನ್ನು ಸೂಕ್ಷ್ಮದೃಷ್ಟಿಯಿಂದ ಗಮನಿಸಿ, ಬಣ್ಣಿಸುವ ಋಷಿಪದಗಳನ್ನು ಸಾವಧಾನವಾಗಿ ಗಮನಿಸಿ..

*ನಿತ್ಯಂ ಪ್ರಿಯಹಿತೇ ರತಾಃ :
ಸಾಮ್ರಾಜ್ಯದ – ಸಮ್ರಾಟನ ‘ಪ್ರಿಯ-ಹಿತ’ಗಳಲ್ಲಿ ಅವರು ನಿರತವೂ ನಿರತರಾಗಿದ್ದರು..

ಪ್ರಿಯ-ಹಿತಗಳು ಭುವಿಯ ಬದುಕಿನ ಎರಡು ಧ್ರುವಗಳು..
ನಮಗೆ ಪ್ರಿಯವಾಗುವ ಹಲವು ಸಂಗತಿಗಳು ಜೀವನಕ್ಕೆ ಹಿತವಲ್ಲ..
ಜೀವನಕ್ಕೆ ಹಿತವಾದ ಅದೆಷ್ಟೋ ಸಂಗತಿಗಳು ನಮಗೆ ಪ್ರಿಯವೆನಿಸುವುದೇ ಇಲ್ಲ..
ನಮ್ಮ ಮೇಲೆ ಮಾಯೆಯ ಆಟ ಇಂದಿಗೂ ನಡೆಯುತ್ತಿದ್ದರೆ,ಅದಕ್ಕೆ ಪ್ರಧಾನ ಕಾರಣವೇ ಇದು..
ನಮಗೆ ಹಿತವಾದುದೇ ಪ್ರಿಯವೆನಿಸತೊಡಗಿದರೆ ಮಾಯೆಯನ್ನು ಮೀರಿ ನಾವು ದೇವರೆತ್ತರಕ್ಕೆ ಬೆಳೆದುಬಿಡುವೆವಲ್ಲವೇ..!?

ಪ್ರಿಯ-ಹಿತಗಳು ಒಂದಾಗದಿರುವುದೇ ನಮ್ಮ ಸರ್ವಸಂಕಟಗಳ ಮೂಲ..!
ಹಿತವು ಪ್ರಿಯವಾಗದಿರುವುದರಿಂದ ಸಂಪತ್ತುಗಳು ದೂರವಾದವು..!
ಅಹಿತವು ಪ್ರಿಯವಾದಾಗ ಆಪತ್ತುಗಳು ಹತ್ತಿರವಾದವು..!
ಸಕ್ಕರೆಕಾಯಿಲೆಯವನಿಗೆ ಸವಿಯು ಅಹಿತ, ಆದರದುವೇ ಪರಮಪ್ರಿಯ..!!
ಔಷಧವು ಹಿತ, ಆದರದು ಅತ್ಯಂತ ಅಪ್ರಿಯ..!!

ಹಿತ-ಪ್ರಿಯಗಳೊಂದಾದ ಬದುಕು ಮುಕ್ತಿಗೆ ಸಮಾನ..!
ಹಿತಪ್ರಿಯಗಳೊಂದಾದ ಸಾಮ್ರಾಜ್ಯ ಸ್ವರ್ಗಕ್ಕೆ ಮಿಗಿಲು..!
ಆದರೆ ಇವೆರಡನ್ನೂ ಒಂದುಗೂಡಿಸುವುದು ಉತ್ತರ-ದಕ್ಷಿಣಗಳನ್ನು ಒಂದುಗೂಡಿಸುವಷ್ಟೇ – ಪ್ರಕೃತಿ-ಪರಮಾತ್ಮರನ್ನು ಒಂದುಗೂಡಿಸುವಷ್ಟೇ ಕಠಿಣ..
ಒಂದು ಮನೆಯಲ್ಲಿ, ಹೆಚ್ಚೇಕೆ ? ಒಂದು ಮನದಲ್ಲಿ ಸಾಧಿಸಲು ಅಸಂಭವವೆನಿಸುವ ಈ ಕಾರ್ಯವನ್ನು ಒಂದು ರಾಜ್ಯದಲ್ಲಿ ಸಾಧಿಸಿದ್ದರು ಅಯೋಧ್ಯೆಯ ಅಮಾತ್ಯರು..!

ತನ್ನ ಕಾರ್ಯಸಾಧನೆಗಾಗಿ ಮತ್ತೊಬ್ಬನನ್ನು ಸಂತೋಷಪಡಿಸಬಯಸುವವನು ‘ಮಧುಪಾನ’ ಮಾಡಿಸುತ್ತಾನೆ..
ಇದು ಪ್ರಿಯ, ಆದರೆ ಹಿತವಲ್ಲ..
ರೋಗಿಯೊಬ್ಬನನ್ನು ಆರೋಗ್ಯವಂತನನ್ನಾಗಿಸಲೆಳಸುವ ವೈದ್ಯನು ಕಹಿಯಾದ ಔಷಧವನ್ನು ಕುಡಿಸುತ್ತಾನೆ..
ಇದು ಹಿತ, ಆದರೆ ಪ್ರಿಯವಲ್ಲ..
ಮಗುವಿನ ಸಂತೋಷ- ಸ್ವಾಸ್ಥ್ಯಗಳೆರಡನ್ನೂ ಬಯಸುವ ತಾಯಿಯು ಔಷಧವನ್ನು ಜೇನಿನಲ್ಲಿ ಬೆರೆಸಿ ನೀಡುತ್ತಾಳೆ..
ಇದು ಪ್ರಿಯ-ಹಿತಗಳ ಸಂಗಮ..

ಆಳುವವರ ಆದರ್ಶವಿದು..
ಹಿತವುಂಟುಮಾಡುವೆನೆಂದು ಪ್ರಜೆಗಳನ್ನು ನೋಯಿಸಲೂಬಾರದು..
ಸಂತೋಷಪಡಿಸುವ ಭರದಲ್ಲಿ ಅವರಿಗೆ ಅಂತಿಮವಾಗಿ ಅಹಿತವನ್ನೇ ಉಂಟುಮಾಡುವ ಉಪಕ್ರಮವನ್ನು ತೆಗೆದುಕೊಳ್ಳಲೂಬಾರದು..
(ಅಧಿಕಾರವನ್ನು ಗಳಿಸಿಕೊಳ್ಳುವ, ಉಳಿಸಿಕೊಳ್ಳುವ, ಬೆಳೆಸಿಕೊಳ್ಳುವ, ಸ್ವಾರ್ಥ ಸಾಧನೆಗಾಗಿ ಜನರಿಗೆ ತತ್ಕಾಲಕ್ಕೆ ಪ್ರಿಯವಾಗುವ ಸಂಗತಿಗಳ ಸುರೆಯನ್ನು ಕುಡಿಸಿ ಶಾಶ್ವತವಾಗಿ ಕೇಡುಂಟುಮಾಡುವವರು ಇಂದಿನ ಮಂತ್ರಿಗಳು..)
ಅಯೋಧ್ಯೆಯ ಮಂತ್ರಿಗಳು “ತಮ್ಮ ದೊರೆಗೆ, ದೇಶಕ್ಕೆ ಯಾವುದು ಪ್ರಿಯವಾದೀತು ? ಯಾವುದು ಹಿತವಾದೀತು ? ಯಾವುದು ಎರಡೂ ಆದೀತು..?” ಎಂಬುದನ್ನೇ ನಿತ್ಯವೂ ಚಿಂತಿಸುವವರಾಗಿದ್ದರು..
ಅದನ್ನು ಸಾಧಿಸುವುದರಲ್ಲಿಯೇ ಆನಂದವನ್ನು ಕಾಣುವವರಾಗಿದ್ದರು..

*ಸತತಂ ಪ್ರಿಯವಾದಿನಃ :

ಪ್ರಿಯವಾದ ಸಂಗತಿಯನ್ನು ಪ್ರಿಯವಾಗುವಂತೆ ಹೇಳಬಲ್ಲವರು ಸಾಮಾನ್ಯರು..
ಇಂಥವರಿಗೆ ದೇವರಿತ್ತ ‘ಮಾತು’ ಸಾಧನ..
ಪ್ರಿಯವನ್ನೂ ಅಪ್ರಿಯವಾಗುವಂತೆ ಹೇಳಿಬಿಡುವವರು ಅಧಮರು..
ಇಂಥವರಿಗೆ ದೇವರಿತ್ತ ‘ಮಾತು’ ಶಾಪ..!
ಅಪ್ರಿಯವನ್ನೂ ಪ್ರಿಯವಾಗುವಂತೆ ಹೇಳುವ ಕಲೆ ಎಲ್ಲೋ ಕೆಲವರಿಗೆ ಮಾತ್ರವೇ ಸಿದ್ಧಿಸುವಂಥದು..
ಇಂಥವರಿಗೆ ದೇವರಿತ್ತ ‘ಮಾತು’ ವರ..!
ತಮ್ಮ ಪ್ರಜೆಗಳನ್ನೂ, ಪ್ರಭುವನ್ನೂ ಬಹುವಾಗಿ ಪ್ರೀತಿಸುತ್ತಿದ್ದ ಅಷ್ಟಮಂತ್ರಿಗಳು ಎಲ್ಲಿಯೂ ಅವರಿಗೆ ನೋವಾಗದಂತೆ ಎಚ್ಚರ ವಹಿಸುತ್ತಿದ್ದರು..
ಅಪ್ರಿಯಸತ್ಯಗಳನ್ನೂ ಪ್ರಿಯವಾಗುವಂತೆ ಹೇಳುವ ಮೂಲಕ ವಾಙ್ಮಯತಪಸ್ಸನ್ನೇ ಆಚರಿಸುತ್ತಿದ್ದರು..

*ರಾಜಕೃತ್ಯೇಷು ನಿತ್ಯಶಃ ಅನುರಕ್ತಾಃ :

ಸರ್ವರೂ ಅವರವರ ‘ಕರ್ತವ್ಯ’ಗಳನ್ನು ‘ಕೃತ’ವಾಗಿಸಿದರೆ ಅದುವೇ ಅಲ್ಲವೇ ‘ಕೃತಯುಗ’..!?
ಮತ್ತೆಲ್ಲಿ ಜಗತ್ತಿನಲ್ಲಿ ಸಮಸ್ಯೆ-ಸಂಕಟಗಳಿರಲು ಸಾಧ್ಯ..?
ಆದರೆ ಹೆಚ್ಚಿನವರು ಮಾಡಬೇಕಾದುದೆಲ್ಲವನ್ನೂ ಮಾಡುವುದೇ ಇಲ್ಲ..
ಮಾಡುವವರೂ ಅನೇಕರು ‘ಪ್ರೀತಿ’ಯಿಂದ ಮಾಡುವುದಿಲ್ಲ, ಪರಿಣಾಮಗಳ ಭೀತಿಯಿಂದ ಮಾಡುತ್ತಾರೆ..
ಕರ್ತವ್ಯವನ್ನು ಪ್ರೀತಿಸುವವರು, ಆ ಪ್ರೀತಿಯನ್ನೇ ಕೃತಿಯಾಗಿಸುವವರು ಕೆಲವೇ ಕೆಲವರು..
ಅಯೋಧ್ಯೆಯ ಮಂತ್ರಿಗಳಲ್ಲಿ ಅದನ್ನು ಕಂಡ ಋಷಿ ಉದ್ಗರಿಸಿದ್ದು ..
‘ಅನುರಕ್ತಾಃ ರಾಜಕೃತ್ಯೇಷು ನಿತ್ಯಶಃ’

*ಪರಸ್ಪರಾನುರಕ್ತಾಃ :

ವ್ಯಕ್ತಿಗಳೇನಕವಾದಂತೆ ಮನಸ್ಸುಗಳೂ ಅನೇಕವಾಗುವುದು ‘ಪ್ರಕೃತಿ’
ವಿಷಯವೊಂದರ ಕುರಿತಾಗಿ ಉಂಟಾಗುವ ವಿರೋಧವು ವ್ಯಕ್ತಿವಿರೋಧದಲ್ಲಿ ವಿಶ್ರಾಂತವಾಗುವುದು ‘ವಿಕೃತಿ’
ಚರ್ಚೆಯಲ್ಲಿ ಹಲವಾಗುವ ಮನಗಳು ನಿರ್ಣಯದಲ್ಲಿ ಒಂದಾಗುವುದು ‘ ಸಂಸ್ಕೃತಿ’
ಈ ಸಂಸ್ಕೃತಿಯನ್ನು ಸಾಧ್ಯವಾಗಿಸುವುದು ‘ಪರಸ್ಪರಾನುರಕ್ತಿ’
ಅನನ್ಯವಾದ ಅನ್ಯೋನ್ಯ ಪ್ರೀತಿಯು ದಶರಥನ ಅಷ್ಟ ಮಂತ್ರಿಗಳ ಅಷ್ಟಮನಗಳನ್ನು ಏಕಬುದ್ಧಿಯಲ್ಲಿ ಸಮ್ಮಿಲಿತಗೊಳಿಸಿತು..
ರಾಜ್ಯಭಾರವನ್ನು ಸುಸೂತ್ರಗೊಳಿಸಿತು..

ಸಮಾನತೆಯು ಸಂಗಮಕ್ಕೆ ಹೇಗೆ ಕಾರಣವಾಗುತ್ತದೆಯೋ ಹಾಗೆಯೇ ಸಂಘರ್ಷಕ್ಕೂ ಕಾರಣವಾಗುವುದುಂಟು..
ಬುದ್ಧಿವಂತರಲ್ಲಿ ಸ್ಪರ್ಧೆ..
ಬಲವಂತರಲ್ಲಿ ಹೋರಾಟ..
ರೂಪವಂತರಲ್ಲಿ ಅಸೂಯೆ..
ಒಂದು ಗುಂಪಿನಲ್ಲಿ (ಜಾತಿ-ಕುಟುಂಬ-ಊರು)ನಾಯಕರಿಬ್ಬರು ಹುಟ್ಟಿದರೆ ಅಲ್ಲಿ ಸಂಘರ್ಷ ಕಟ್ಟಿಟ್ಟ ಬುತ್ತಿ..
ಆದರೆ ಅಯೋಧ್ಯೆಯ ಮಂತ್ರಿಗಳು ಇದಕ್ಕೊಂದು ಅಪವಾದ..
ಅವರ ನಡುವೆ ಸ್ಪರ್ಧೆ- ಸಂಘರ್ಷಗಳೇರ್ಪಡಲಿಲ್ಲ..
ಬದಲಾಗಿ ಗಾಢವಾದ ಪರಸ್ಪರ ಪ್ರೀತಿಯೇರ್ಪಟ್ಟಿತು..
(ತುಂಡು ಮಾಂಸಕ್ಕಾಗಿ ಕಚ್ಚಾಡುವ ನಾಯಿಗಳಂತೆ ಕ್ಷುಲ್ಲಕ ಲಾಭಕ್ಕಾಗಿ ನಿತ್ಯ ಕಿತ್ತಾಡುವ ಇಂದಿನ “ತಥಾಕಥಿತ ಮಂತ್ರಿಗಳು” ಶ್ರೀ ರಾಮಾಯಣದ ಈ ಭಾಗವನ್ನು ಒಮ್ಮೆ ಅವಲೋಕಿಸಬೇಕು.)

* ಸೌಹೃದೇಷು ಪರೀಕ್ಷಿತಾಃ :

ಬಲವಿದ್ದಲ್ಲಿ ಕಲಹವಿರುತ್ತದೆ..
ಪ್ರೀತಿಯಿದ್ದಲ್ಲಿ ಪರೀಕ್ಷೆಯಿರುತ್ತದೆ..
ಅದರಲ್ಲಿಯೂ ರಾಜನಾದವನು ಪರೀಕ್ಷಿಸದೇ ಯಾರನ್ನೂ ಪ್ರೀತಿಸಬಾರದು ..
ಪ್ರೀತಿಸುವವರನ್ನೂ ಆಗಾಗ ಪರೀಕ್ಷಿಸದೇ ಇರಬಾರದು..
ಪರೀಕ್ಷೆಗಳಿಗೆ ಅಳುಕಬೇಕಾಗಿಲ್ಲ..
ಸಿದ್ಧತೆ ಸಮರ್ಪಕವಾಗಿದ್ದರೆ, ನಮ್ಮಲ್ಲಿ ಕೊರತೆಯಿಲ್ಲದಿದ್ದರೆ ಪರೀಕ್ಷೆಯೂ ಪದೋನ್ನತಿಯನ್ನೇ ತಂದುಕೊಡುತ್ತದೆ..
ತನ್ನ ಮಂತ್ರಿಗಳ ಸೌಹೃದವೆಂಥದೆಂಬುದು ಗೊತ್ತಿದ್ದರೂ ದಶರಥನು ರಾಜಧರ್ಮದಂತೆ ಅವರನ್ನು ಹಲವು ಬಾರಿ ಪರೀಕ್ಷಿಸಿದನು..
ಅವರೂ ಪ್ರತಿಯೊಂದು ಪರೀಕ್ಷೆಯಲ್ಲಿಯೂ ದೇಶ-ದೊರೆಗಳ ಹೃದಯದಲ್ಲಿ ಎತ್ತರೆತ್ತರ ಬೆಳೆದರು..

* ಸ್ಮಿತಪೂರ್ವಾಭಿಭಾಷಿಣಃ :
“ಮುಗುಳ್ನಗುವಿಲ್ಲದೆ ಮಾತಿಲ್ಲ”

ಬೀಜವು ಮೊಳಕೆಯೊಡೆದು ಮತ್ತೆ ಚಿಗುರುವಂತೆ..
ಅಂತರಾಳದ ಆನಂದ ಬೀಜವು ಮೊದಲು ಮುಗುಳ್ನಗೆಯ ಮೊಳಕೆಯೊಡೆದು, ಮತ್ತೆ ಮಾತಿನ ಚಿಗುರಾಗುವಂತಿದ್ದರೆ ಅದೆಷ್ಟು ಸೊಗಸು..!

ನಾವು ಹಿಮಾಲಯವನ್ನು ತಲುಪುವ ಮೊದಲೇ ಹಿಮಾಲಯದ ತಂಪು ನಮ್ಮನ್ನು ತಲುಪುವಂತೆ, ರಾಮಾವತಾರವಾಗುವ ಮುನ್ನವೇ ಅಯೋಧ್ಯೆಯಲ್ಲಿ “ಪ್ರೇಮಾವತಾರ”ವಾಗಿದ್ದಿತು..!

॥ಹರೇ ರಾಮ॥

18 Responses to ರಾಮಾವತಾರದ ಮುನ್ನ ಪ್ರೇಮಾವತಾರ….

 1. K.N.BHAT

  ಹರೇ ರಾಮ….
  ಪ್ರೀತಿ..ನೀತಿ…ರೀತಿ…ಪರಿಣತಿಯ ನಮಗೂ ಅನುಗ್ರಹಿಸು ಪ್ರಭೂ…….

  [Reply]

 2. seetharama bhat

  ಹರೇರಾಮ್,

  ಈ ಅ೦ಕಣ ನಮಗೆ-
  ಪ್ರಿಯವೂ
  ಹಿತವೂ
  ಆಗಿದೆ

  ಪ್ರೀತಿ-ನೀತಿ-ರೀತಿ-ಪರಿಣತಿ ಯೊ೦ದಿಗೆ
  ರಾಮನಲ್ಲಿ ಶರಣಾಗತಿ
  ಅನುಗ್ರಹಿಸಿ ಗುರುದೇವಾ

  [Reply]

 3. mamata hegde

  Hare Raama

  Raamavatarada.. modale…ayodhye istu sundaravagittu..innu raamavatarada nantara..adestu sundaravagirabahudu. alliya parisarada kalpaneye istu chenda innu anubhavisidavaru adestu dhanyaru…

  [Reply]

 4. Krishna Prasad

  ರಾಮಯಣದ ಕಾಲದ ಬಗ್ಗೆ ಗುರುಗಳ ಅಭಿಪ್ರಾಯ ಏನು?
  ತ್ರೇತಾ ಯುಗದಲ್ಲಿ ರಾಮನ ಅವತಾರ ಅಂತ ಸಾಮನ್ಯ ನಂಬಿಕೆ. ೨೭ನೆಯ ಚತುರ್ಯುಗದ ತ್ರೇತಾ ಯುಗ ಅಂತ ಇನ್ನೊಂದು ನಂಬಿಕೆ.
  ಆದರೆ ರಾಮಯಣದಲ್ಲಿ ಉಲ್ಲೇಖವಾದ ಗ್ರಹಸ್ಥಾನಗಳ (ರಾಮನ ಜನನ ಕುಂಡಲಿ ಪ್ರಕಾರ) ಪ್ರಕಾರ ಜ್ಯೋತಿಷಿಗಳು ಸುಮಾರು ಕ್ರಿ. ಪೂ. ೪೪೦೦-೪೫೦೦ ಸುಮಾರಿಗೆ ರಾಮಾಯಣ ನಡೆದಿತ್ತು ಅಂತ ಹೇಳುತ್ತಾರೆ. ಅಂದರೆ ಅದು ದ್ವಾಪರ ಯುಗ ಎಂದಾಯಿತು.
  ರಾಮಸೇತುವಿನ ಅಧ್ಯಯನ ನಡೆಸಿದ ಭೂ-ತಜ್ಞರಲ್ಲಿ ಗೊಂದಲದ ಅಭಿಪ್ರಾಯಗಳಿವೆ. ಅದು ಮಾನವ ನಿರ್ಮಿತ ಅಂತ ಕೆಲವರೆಂದರೆ ಸ್ವಾಭಾವಿಕವಾದ ರಚನೆ ಅಂತ ಇನ್ನೊಂದು ವಾದ.
  ಮಾನವ ನಿರ್ಮಿತ ಎಂಬ ವಾದದ ಪ್ರಕಾರ ಅದು ಕ್ರಿ. ಪೂ. ೪೪೦೦-೪೫೦೦ ರ ಸಮಯಕ್ಕೆ ಹೊಂದಬಹುದೇನೋ.
  ಸ್ವಾಭಾವಿಕ ಎಂದರೆ ಅದು ಕೆಲವು ಲಕ್ಷ ವರ್ಷ ಹಿಂದೆ ಆಗಿತ್ತು ಎಂದಾಗಿ ಅದು ತ್ರೇತಾಯುಗದ ರಚನೆಗೆ ಪುಷ್ಟಿ ನೀಡುವುದು.

  ಸರಿ ಯಾವದು ಗುರುಗಳೇ?

  [Reply]

 5. Gopalkrishna Hegde

  HARE RAAMA,Antharangada saavira saavira kooti pranamagalu Gurugale.
  Tamma premada sudheyamunde innava prema suheyu satiilla.
  Tamma asheervada beduva,
  GG

  [Reply]

 6. Sharada Jayagovind

  Hareraama Samsthana

  why have the values of Preethi, Nithi, Rithi and Parinathi disappeared from today’s world,especially from the world of politics.? Should we look for them in the Ayodhya of Rama’s time? Today we see only wickedness and greed all around… Has religion failed to refine and elevate people? Forgive, if Iam wrong…

  [Reply]

 7. Anuradha Parvathi

  ಸಂಸ್ಥಾನ, ಮುಂದಿನ ಚಾತುರ್ಮಾಸ್ಯದಲ್ಲಿ ’ರಾಜಕಾರಣ’ ದ ಬಗ್ಗೆ ಒಂದು ಸಂದೇಶ ಕೊಡಬೇಕೆಂದು ಸಾಷ್ಠಾಂಗ ನಮಸ್ಕಾರಗಳೊಂದಿಗೆ ಕೇಳಿಕೊಳ್ಳುತ್ತಿದೇನೆ.

  [Reply]

 8. ಮಂಗ್ಳೂರ ಮಾಣಿ...

  ಹಾಗಾದರೆ ನಮ್ಮೊಳಗೆ ಪ್ರೇಮದ ಆವಾಹನೆಯಾದಾಗ ಮಾತ್ರವೇ ರಾಮನ ಆವಿರ್ಭಾವವೇ ಗುರುಗಳೇ?

  [Reply]

 9. gopalakrishna pakalakunja

  ಹರೇ ರಾಮ!
  ನನಗೆ ಅತ್ಯಂತ ಪ್ರೀಯವೂ ಹಿತವೂ ಆಗುತ್ತಿರುವ ಕಾಲ ಶ್ರೀ ಸಂಸ್ಥಾನ ಸಾಮಿಪ್ಯ.
  ನೋದಿದಷ್ಟೂ ಸಾಕೆನಿಸದ ಆ ಮುಗ್ದ ಮಂದಹಾಸದ ಮುಖಾರವಿಂದ,
  ಕೇಳಿದಷ್ಟೂ ಬೇಕೆನಿಸುವ ಆ ಮಧುರ ವಚನ ಸಾರಾಮೃತಧಾರ ,
  ಅನುಭವಿಸಿದಷ್ಟೂ ಸಾಲದೆನಿಸುವ ನಿಷ್ಕಳಂಕದ ಶುದ್ದ ಹೃದಯ ವೈಶಾಲ್ಯತೆ,
  ಸ್ಪಟಿಕದಂತೆಸವ ಆಚಾರ ವಿಚಾರ ವ್ಯವಹಾರದ ಶಿಷ್ಟಾಚಾರ…

  ಪೂರ್ವ ಜನ್ಮದಲ್ಲಿ ಶ್ರೀ ರಾಮನ ಸಮಕಾಲೀನರೇ ನಾವಿರಬಹುದೆನಿಸುತ್ತದೆ .ಆ ಪುಣ್ಯ ಶೇಷದಿಂದ ವರ್ತಮಾನದ ಕಾಲದ ಶ್ರೀರಾಮ ಸ್ವರೂಪಿ ,ಶ್ರೀ ಶಂಕರರ ಕಿಂಕರರಾಗುವ ಯೋಗ ಭಾಗ್ಯಗಳು ನಮಗಾಗಿವೆ ಎಂದೇ ನನ್ನ ನಂಬಿಕೆ.

  ‘…..ಪ್ರಿಯ-ಹಿತಗಳು ಭುವಿಯ ಬದುಕಿನ ಎರಡು ಧ್ರುವಗಳುಹಿತ..-ಪ್ರಿಯಗಳೊಂದಾದ ಬದುಕು ಮುಕ್ತಿಗೆ ಸಮಾನ..!
  ಹಿತಪ್ರಿಯಗಳೊಂದಸಾಮ್ರಾಜ್ಯ ಸ್ವರ್ಗಕ್ಕೆ ಮಿಗಿಲು..!
  ಆದರೆ ಇವೆರಡನ್ನೂ ಒಂದುಗೂಡಿಸುವುದು ಉತ್ತರ-ದಕ್ಷಿಣಗಳನ್ನು ಒಂದುಗೂಡಿಸುವಷ್ಟೇ – ಪ್ರಕೃತಿ-ಪರಮಾತ್ಮರನ್ನು ಒಂದುಗೂಡಿಸುವಷ್ಟೇ ಕಠಿಣ….”
  ಶ್ರೀ ಗುರು ಅನುಗ್ರಹವಾದರೆ, ಶ್ರದ್ದೆ, ಸೇವೆ ,ಸಾಧನೆ, ಸತ್ಸಂಗ ಗಳಿಂದ ಶ್ರೀ ಸಾನ್ನಿಧ್ಯದಲ್ಲಿ ಪ್ರೀಯವಾದದ್ದೆಲ್ಲ ಹಿತವಾಗಬಹುದು.

  [Reply]

 10. Raghavendra Narayana

  ಅದ್ಭುತ, ಪರಮ ಅದ್ಭುತ..
  ಗುರುಗಳಲ್ಲಿ ರಾಮ ಅಡಗಿದ್ದಾನೆ, ರಾಮಾಯಣ ಅಡಗಿದೆ..
  .
  ಭಾರತದಲ್ಲಿ ರಾಮಾಯಣ ಅಡಗಿದೆ.
  ಹೌದು, ಭಾರತದಲ್ಲಿ ಇ೦ದು ರಾಮಾಯಣ ಅಡಗಿಹೋಗಿದೆ ಉಡುಗಿಹೋಗಿದೆ.
  ಕೆ೦ಡವಾಗಿರುವ ಭಾರತ ಪ್ರಿಯಹಿತವೆ೦ಬ ಗಾಳಿ ಬೀಸಿ ಜ್ವಾಲೆಯಾಗಲಿ, ಅಲ್ಲಿ ಸಪ್ತಋಷಿಗಳು ಕಾಣಿಸಲಿ ಕೇಳಿಸಲಿ.
  .
  ಶ್ರೀ ಗುರುಭ್ಯೋ ನಮಃ

  [Reply]

 11. Madhu Dodderi

  ಮಹತ್ತಾದುದನ್ನೇನಾದರೂ ಎಸಗುವಾಗ ಒಂದಿಷ್ಟು ಪೂರ್ವಸೂಚನೆಗಳನ್ನು ಕೊಡುವುದು ವಿಧಿಯ ಹವ್ಯಾಸವೆಂಬಂತೆ ತೋರುತ್ತದೆ…
  ಆದರೆ ಅಂತಹ ಸೂಚನೆಗಳ ಅಂತರಾರ್ಥ ಪಾಮರರಿಗೆ ತಿಳಿಯುವುದು ಮಾತ್ರ ನಂತರವೇ..

  ಇದು ಎಲ್ಲಕಾಲದಲ್ಲಿಯೂ ಸತ್ಯ!

  [Reply]

 12. ವೇದವ್ಯಾಸ ಆಚಾರ್

  ರಾಮಾಯಣದ ಒಂದೊಂದು ಶ್ಲೋಕದಲ್ಲಿಯೂ ಎಷ್ಟೊಂದು ಅರ್ಥವಿದೆ! ಮತ್ತು ಅದು ಎಲ್ಲ ಕಾಲಕ್ಕೂ ಅದೆಷ್ಟು ಪ್ರಸ್ತುತ!

  ಶ್ರೀಗಳವರು ಸೂಕ್ಷ್ಮದರ್ಶಕದ ಹಾಗೆ ರಾಮಾಯಣದ ಸೂಚ್ಯಾರ್ಥ, ಗೂಡಾರ್ಥಗಳನ್ನು ಪ್ರಕಾಶಿಸಿ ನಮ್ಮ ಜಡಭುದ್ದಿಗೂ ಅರ್ಥವಾಗುವಂತೆ ವಿವರಿಸುತ್ತಿದ್ದಾರೆ…
  ಶ್ರೀಶ್ರೀವಿರಚಿತ ರಾಮಾಯಣ ಅಂತರ್ಜಾಲಕ್ಕೇ ಒಂದು ವಜನು ತಂದುಕೊಟ್ಟಿದೆ…
  ಪ್ರಣಾಮಗಳು…

  [Reply]

 13. ಆತ್ಮಾರಾಮ

  {ಒಮ್ಮೆ ಅವಲೋಕಿಸಬೇಕು}
  ಕ್ಷುಲ್ಲಕ ಕಾರಣಕ್ಕೆ ಕ್ಷಣಕ್ಷಣವೂ, ಕಣಕಣವೂ ಕಾಲಕ್ಷೇಪದಲ್ಲಿ ತೊಡಗಿರುವ ಇಂದಿನ ಮಂತ್ರಿಗಳಿಗೆ ಅವಲೋಕನಕ್ಕೆ ಎಲ್ಲಿ ಸಮಯ ಸಿಕ್ಕೀತು..
  ಅಯೋಧ್ಯೆಯ ಆ ಸುಮಧುರ ಕಾಲ ಮತ್ತೆ ಯಾವಾಗ ಬರುವುದೋ?

  ಹರೇರಾಮ

  [Reply]

 14. sriharsha.jois

  ಪ್ರೀತಿಯೆನ್ನುವುದು ಹೃದಯದಾಳದಿಂದ ಬಂದರೆ ಮಾತ್ರ ಸಹಜವಾಗಿರಲು ಸಾಧ್ಯ ಬದುಕಿನಲ್ಲಿ..
  ಮೊದಲು ದೇವರು ಎನ್ನುವ ಶಕ್ತಿಯನ್ನು ನಂಬಲೇಬೇಕು..ಅದು ಮುಂದಿನ ಕಾರ್ಯಕ್ಕೆ ನಾಂದಿ..
  ಅವನನ್ನು ಪ್ರೀತಿಸಲು ಪ್ರಾರಂಭಿಸಿದರೆ ನಮ್ಮ ದೇಶ ನಮಗೆ ನಮ್ಮ ಪಾಲಿಗೆ ಸ್ವರ್ಗವಾಗುತ್ತದೆ..
  ನಮ್ಮ ದೇಶದೊಡೆಯನನ್ನು ನಾವು ಪ್ರೀತಿಸಲೇಬೇಕು..ಆದರೆ ಅವನು ನಂಬಿಕೆಗೆ ಅರ್ಹನಾಗಿರಬೇಕು..
  ಅವನನ್ನು ಆರಿಸಿಕೊಳ್ಳುವುದು ನಾವೇ ಅಲ್ಲವೇ..?
  ನಮ್ಮ ಆಈಎಯವರನ್ನು ನಂಬದೆ ನಮ್ಮ ಒಡೆಯನನ್ನು ನಾವು ಆರಿಸಿಕೊಳ್ಳಲಾಗದು ಅಲ್ಲವೇ..?
  ನಮ್ಮಲ್ಲಿ ಹೊಂದಾಣಿಕೆ ಬೇಕು..
  ಮೇಲಿನ ಎಲ್ಲಾ ವಿಷಯಗಳಿಗೆ ಪೂರಕವಾದ ಕರ್ತವ್ಯಗಳನ್ನು ನಾವು ಮಎಂದಿಗೂ ಮರೆಯಬಾರದು..

  ಕ್ಷಮಿಸಿ.. ನಾನು ಈ ಸಂದೇಶವನ್ನು ನಮ್ಮ ಬದುಕಿನ ಜೊತೆಗೆ ಕೂಡಿಸಲು ಮುಂದಾದೆ..
  ಆಗ ಅಯೋಧ್ಯೆಯ ಮಂತ್ರಿಗಳು ಹಾಗಿದ್ದಿದ್ದರಿಂದಲೇ ಅದು ಕೊನೆಗೆ ರಾಮರಾಜ್ಯವಾಯಿತು..
  ಈಗಿನ ಸ್ಥಿತಿಯಲ್ಲಿ ನಾವುಗಳು ಹಾಗಾಗಬೇಕು..
  ನಾವೇ ಆರಿಸಿದ ಮಂತ್ರಿಗಳು ನಮ್ಮನ್ನು ಮರೆಯುತ್ತಾರೆ..
  ನಮ್ಮ ಮನೋಭಾವ ಬದಲಾದರೆ ದೇಶ ರಾಮರಾಜ್ಯವಾಗುವುದರಲ್ಲಿ ಸಂದೇಹವೇ ಇಲ್ಲ ಅಲ್ಲವೇ..?

  [Reply]

 15. Raghavendra Narayana

  ರಾಮಾಯಣವ ನಿತ್ಯ ಪರಾಯಣ ಏಕೆ ಮಾಡಬೇಕು? ಒ೦ದು ಕಥೆಯನ್ನು ಓದಿದ ಹಾಗಲ್ಲವೆ? ಎ೦ದುಕೊಳ್ಳುತ್ತಿದ್ದೆ. ಈಗ ಅರ್ಥವಾಯಿತು.
  ಭವ್ಯಭಾವಜೀವನವ ತಿರಸ್ಕರಸಿ ನೆಡೆದ ನಮಗೆ, ಈಗ ಒ೦ದು ಫ಼್ಲಾಟ್, ಒ೦ದು ಕಾರ್, ಒ೦ದು ಮಗು – ರಮ್ಯ ಜೀವನ – ನಮ್ಮ ಜೀವನ.
  ತೊ೦ದರೆ ಇಲ್ಲ, ಕ೦ಡಿದಾಗಿದ್ದೆ, ರಥವ ತಿರುಗಿಸುವ.
  ಪುಣ್ಯ, ಮೋಕ್ಷ, ವೇದಾ೦ತ, ಜ್ಞಾನ, ಭಕ್ತಿ – ಇವುಗಳನೆಲ್ಲ ಆಟದಷ್ಟೆ ಸಲೀಸಾಗಿ, ಊಟದಷ್ಟೆ ರುಚಿಯಾಗಿ ಹೇಳಿಕೊಟ್ಟು ಕ್ರೀಡೆಯಾಗಿಸಿದ್ದರು ಜೀವನವ, ಆನ೦ದವನ್ನೆ ಜೀವನದ ಪ್ರತಿ ಕ್ಷಣದಲ್ಲೂ ಪ್ರತಿ ಹ೦ತದಲ್ಲೂ ಹಾಸುಕೊಕ್ಕಗಿಸಿ ರಸಋಷಿಗಳಾಗಿಸಿದ್ದರು.
  ಋಷಿ ಕವಿ ವಿಜ್ಞಾನಿಗಳು ತು೦ಬಿ ತುಳುಕುತ್ತಿದ್ದರು. ಈ ಮಣ್ಣಿನ ಕಣಕಣವು ಆನ೦ದವನ್ನೆ ಹೊರಸೂಸುತ್ತಿದೆ.
  ಇಲ್ಲೇನಿದೆ ಮಣ್ಣು? ನಾವು ಇರದಿದ್ದರೂ ಇರುವುದು ಮಣ್ಣು, ನಾವು ಇರುವೆವು ಮಣ್ಣಲ್ಲಿ, ಕೋಟ್ಯಾ೦ತರ ಸುಖಾನ೦ದ ಬೀಜಗಳು ಇರುವುದು ಈ ಮಣ್ಣಲ್ಲಿ, ಅದನ್ನು ಚಿಗುರಿಸಲು ಹೆಮ್ಮರವಾಗಿಸಲು ಬೇಕಾದ ನೀರು ಸತ್ವ ಇರುವುದು ಈ ಮಣ್ಣಲ್ಲೆ. ತಿರುಗಿಸುವ ಮನದ ರಥವ. ಮೈ ಬುದ್ಧಿಗಳಿಗೆ ವ್ಯವಸಾಯ ನೀಡುವ.
  .
  ಪ್ರಕೃತಿಯನ್ನು ಮಲಿನ ಮಾಡಬಹುದು, ಆದರೆ ಸ್ವಾರ್ಥ ಬೀಜವ ಅದೆಷ್ಟು ಬಿತ್ತಿದರೂ ನಾವು, ಅದು ಬೆಳೆಸದು. ಸಾರಿ ಸಾರಿ ಹೇಳುತಿಹುದು ತಾ ತಾಯಿಯೆ೦ದು.
  .
  ಜಗವ ಬಿಟ್ಟೇವು, ಸುಧೆಯ ಬಿಟ್ಟೇವು, ಸುರೆಯ ಬಿಡೆವು, ಶಿವತತ್ವದ ಸುರೆಯ ಬಿಡೆವು,
  ಹಾಲ್ಗಡಲ ವೈಕು೦ಠವೇಕೊ ಹರಿಯೆ, ನಾ ನಿನಗೆ ಸೃಷ್ಟಿಸುವೆ ಹೊಸತೊ೦ದು ಲೋಕವ, ನಾವು ಸೇರುವ ಅಲ್ಲಿಯೆ.
  .
  ಶ್ರೀ ಗುರುಭ್ಯೋ ನಮಃ

  [Reply]

 16. Ashwini

  ಕ್ಲಿಷ್ಟಕರ ವಿಷಯಗಳ ಉದಾಹರಿಸಿ ಅರ್ಥಮಾಡಿಸುವುದುಂಟು.
  ಸರ್ವ ಅಜ್ಞರ ಉದ್ದಾರಕ್ಕೆ ಸರ್ವಜ್ಞನೇ ಕರುಣೆಯಿಂದ ಉದಾಹರಣೆಯಾಗುವುದೇ ಜೀವಕಾರುಣ್ಯವಲ್ಲವೇ? ಸಕಲ ಕಾಲದಲ್ಲೂ ದೃಗ್ಗೋಚರ ಸತ್ಯವಿದು.

  ಪರಮಾತ್ಮನು ವಿಧವಿಧ ರೂಪಗಳಲ್ಲಿ ನಡೆ ನುಡಿದು ಜೀವಿಗಳಿಗೆ ತನ್ನೆಡೆಗಿನ ಮಾರ್ಗ ತೋರುವುದುಂಟು.
  ಗತಿ ತಪ್ಪಿದೆಲ್ಲರಿಗೆ ಸದ್ಗತಿಯೋದಗಿಸುವ ಚರಣಗಳೂಡೆಯ ‘ರಾಘವ’ನಲ್ಲವೇ? ಸಕಲ ಆತ್ಮಗಳರಿತ ಅಂತರ್ಗತ ಸತ್ಯವಿದು.

  ಆ ತೇಜಸ್ಸಿನ ಅಂತರಾಳದ ಅನಂತ ಪ್ರೀತಿ,ಶಿಷ್ಯರೆಡೆಗೆ ಅದು ಪ್ರಕಟಗೊಳ್ಳುವ ರೀತಿ,
  ಬದುಕಿನಲ್ಲಿನ ಪರಿಣತಿಗೆ ,ಆ ವಾತ್ಸಲ್ಯಮೂರ್ತಿ ನುಡಿಯುವ ನೀತಿ… ಇವೆಲ್ಲವು ವರ್ಣನಾತೀತ ಅಂತರಂಗದ ನಿಧಿ.

  ಹರೇ ರಾಮ.

  [Reply]

 17. dattu

  ದೇಹವೆಂಬ ಅಯೋಧ್ಯೆಯನ್ನು ಆಳಲು ನಾವು ಗಳಿಸಬೇಕಾದ ಅರ್ಹತೆಗಳ ವಿವರಣೆ. ಅದ್ಭುತ, ಶಬ್ದಗಳ ಸಾಕಾರ

  [Reply]

 18. Jayashree Neeramoole

  ‘ರಾಮಾವತಾರ – ಪ್ರೇಮಾವತಾರ’

  “ರಾಮ ರಾಜ್ಯದಲ್ಲಿ ದ್ವೇಷ, ಅಸೂಯೆ,ದು:ಖಗಳಿರಲಿಲ್ಲ… ಎಲ್ಲರೂ ಪರಸ್ಪರರಲ್ಲಿ ರಾಮನನ್ನೇ ಕಾಣುತ್ತಿದ್ದರು”

  “ರಾಮನೆಂದರೆ ವಿಶ್ವಪ್ರೇಮ”

  ಇಂದಿನ ಈ ಕಲಿಯುಗದಲ್ಲಿ ಮತ್ತೆ ರಾಮಾವತಾರ ಸಾಧ್ಯವಿದೆಯೇ? ಎಂದೆಣಿಸುತ್ತಿದ್ದೆ… ಗುರುಗಳು ಕಣ್ಣು ತೆರೆಸಿದರು… ಜ್ಹಾನ ದೃಷ್ಟಿಯನ್ನು ನೀಡಿದರು…

  “ನಾವು ಆ ವಿಶ್ವಪ್ರೇಮವನ್ನು ಬೆಳೆಸಿಕೊಂಡು ಜಗತ್ತನ್ನು ನೋಡಿದರೆ ಸಾಕು… ಎಲ್ಲೆಲ್ಲೂ ರಾಮನನ್ನೇ ಕಾಣುತ್ತದೆ…”

  [Reply]

Leave a Reply

Highslide for Wordpress Plugin