|| ಹರೇರಾಮ ||

ಮಾತಿಲ್ಲದೆ ಮಾತಾಡುವ ಕಣ್ಣಿನ ಬಗ್ಗೆ ಅದೆಷ್ಟು ಮಾತಾಡಿದರೂ ಹೆಚ್ಚಲ್ಲ..
ನೂರಾರು ಭಾವವನ್ನು ಅಭಿವ್ಯಕ್ತಿಗೊಳಿಸುವ, ಆ ಎರಡು ಕಣ್ಣುಗಳ ಬಗೆಗೆ ನೂರು ಮಾತುಗಳು:

ಸೃಷ್ಟಿಯ ದೃಷ್ಟಿ

ಸೃಷ್ಟಿಯ ದೃಷ್ಟಿ

  1. ದೇಹದಲ್ಲಿ ಬೆಳೆಯುವ ಅದೆಷ್ಟು ಅವಯವಗಳಿಲ್ಲ?
    ಆದರೆ ಬೆಳಗುವ ಅವಯವ ಕಣ್ಣು ಮಾತ್ರ…!
  2. ದೇಹವು ದೇವರಮನೆಯಾದರೆ ಕಣ್ಣು ನಂದಾದೀಪವಲ್ಲವೇ?
  3. ಕಾಣುವ ಕಣ್ಣಿದ್ದರೆ, ಕಲ್ಲಿನಲ್ಲಿಯೂ ಶಿವದರ್ಶನ..
    ಅದಿಲ್ಲದಿದ್ದರೆ ಶಿವನೂ ಕಲ್ಲಾಗಿಯೇ ತೋರುತ್ತಾನೆ.!
  4. ಕೇಳಲು ಕಿವಿಯಿದೆ, ಸವಿಯಲು ನಾಲಿಗೆಯಿದೆ..! ಆಘ್ರಾಣಿಸಲು ಮೂಗಿದೆ ,ಸ್ಪರ್ಶಿಸಲು ಚರ್ಮೇ೦ದ್ರಿಯವಿದೆ..
    ಕಾಣುವ ಕಣ್ಣಿಗೆ ಇವ್ಯಾವುವೂ ಸರಿಮಿಗಿಲಲ್ಲ… ಸರ್ವೇ೦ದ್ರಿಯಾಣಾಂ ನಯನಂ ಪ್ರಧಾನಮ್..!
  5. ಮುಟ್ಟಿ ನೋಡು,  ಮೂಸಿ ನೋಡು, ರುಚಿ ನೋಡು – ಹೀಗೆ ಇತರ ಇಂದ್ರಿಯಗಳ ಕಾರ್ಯಗಳಲ್ಲಿಯೊ “ನೋಡು” ಎನ್ನುವ ಶಬ್ದ ಬಳಕೆಯಾಗುವುದನ್ನು ಗಮನಿಸಿದರೆ, ಇವೆಲ್ಲವೂ ಕಣ್ಣಿನ ಅ೦ಶಾವತಾರಗಳೇ ಸರಿ..!
  6. ಕಣ್ಣೆ೦ದರೆ ಅಂತರಂಗವೆಲ್ಲವೂ ಕರಗಿ ಕಣ್ಣೀರಾಗಿ ಹೊರಗೆ ಹರಿದು ಬರುವ ಮಹಾಮಾರ್ಗ…!
    ಕಣ್ಣೆ೦ದರೆ ಹೊರಪ್ರಪಂಚವೆಲ್ಲವೂ ನಮ್ಮೊಳ ಪ್ರವೇಶಿಸುವ ಮಹಾದ್ವಾರ..!
  7. ಬದುಕು ಚೆನ್ನಾಗಬೇಕೆಂದರೆ ಸೃಷ್ಟಿ ಚೆನ್ನಾದರೆ ಸಾಲದು, ದೃಷ್ಟಿಯೂ ಕೂಡ ಚೆನ್ನಾಗಬೇಕು..!
    ಒಂದೊಮ್ಮೆ ಸೃಷ್ಟಿ ವಿಪರೀತವಾಗಿದ್ದರೂ- ಬದುಕು ವಿಷಮವಾಗಿದ್ದರೂ.. ಚೆನ್ನಾದ ದೃಷ್ಟಿಯಿದ್ದರೆ, ನಮಗೆ ಬಾಧೆ ತಟ್ಟದು..
  8. ಸಂಪೂರ್ಣ ಶರೀರ ವ್ಯವಸ್ಥೆಗೆ ದಿಶಾನಿರ್ದೇಶನ ಕಣ್ಣಿನಿಂದ..!
    ನಾವು ಸಾಗುವ ದಾರಿಯಲ್ಲಿ ಮು೦ದೆ ಮುಳ್ಳಿದೆಯೋ, ಕಲ್ಲಿದೆಯೋ ಎಂಬುದನ್ನು ಕಣ್ಣು ತಾನೇ ತಿಳಿದು ಹೇಳಬೇಕು?
  9. ಭಾವನೆಗಳು ಕಣ್ಣಿನ ಮೂಲಕ ಹೊರಬಂದರೆ ಅದೆಷ್ಟು ರಸಮಯವಾಗಿರುತ್ತವೆ?? ಅದೆಷ್ಟು ಪ್ರಭಾಶಾಲಿಯಾಗಿರುತ್ತವೆ!!?
    ಮಾತುಗಳು ಅದರ ಮು೦ದೆ ಬರೇ ಸಪ್ಪೆ ಸಪ್ಪೆ..!!!
  10. ದೃಷ್ಟಿಗಳು ಮೂರು ವಿಧ..
    ಸ್ಥೂಲದೃಷ್ಟಿ
    , ಸೂಕ್ಷ್ಮದೃಷ್ಟಿ ಮತ್ತು ಪರಾದೃಷ್ಟಿ ಎಂಬುದಾಗಿ..!
  • ಸ್ಥೂಲದೃಷ್ಟಿಗೆ ಗಂಗೆ ಬರಿಯ ನೀರು ಮಾತ್ರ..
    • ಸೂಕ್ಷ್ಮದೃಷ್ಟಿಯಿಂದ ನೋಡಿದರೆ ,ಪಾಪ ಕಳೆಯುವ, ಪರಮಪದವೀಯುವ ಮಹಾದೇವತೆಯವಳು..
      • ಪರಾದೃಷ್ಟಿಯನ್ನು ತೆರೆದರೆ, ಆಕೆ ಪರಿಪೂರ್ಣ ಪರ೦ಜ್ಯೋತಿಯೀ ಸರಿ.
  • ಶ್ರೀರಾಮ ಮನುಷ್ಯನಾಗಿ ಕಾಣುವುದು ಸ್ಥೂಲ ದೃಷ್ಟಿಗೆ..
    • ಸೂಕ್ಷ್ಮದೃಷ್ಟಿಯಲ್ಲಿ ಆತ ಶ್ರೀಮನ್ನಾರಾಯಣ..
      • ಪರಾದೃಷ್ಟಿಗಾದರೋ ನಿರ್ಗುಣ ನಿರ್ವಿಕಾರವಾದ ಬ್ರಹ್ಮ ಜ್ಯೋತಿಯೇ ಅವನು..!
  • ನಮ್ಮ ಒಡನಾಡಿಗಳನ್ನು ನಾವು ನೋಡುವುದು ಸ್ಥೂಲ ದೃಷ್ಟಿಯಿಂದ, ಆದುದರಿಂದ ಅವರು ಮನುಷ್ಯರಾಗಿ ಕಾಣುತ್ತಾರೆ.!
    • ಸೂಕ್ಷ್ಮ ದೃಷ್ಟಿಯಿಂದ ನೋಡಿದರೆ ಈಶ್ವರನ ಅಂಶಗಳೇ ಆದ ಜೀವಿಗಳವರು..! ಈಶ್ವರಾಗ್ನಿಯಿಂದ ಹೊರಹೊಮ್ಮಿದ ಕಿಡಿಗಳು..!!ಈಶ್ವರ ಸಾಗರದ ತರಂಗಗಳು ..!!!
      • ಪರಾ ದೃಷ್ಟಿಗೆ ಪರಮಾತ್ಮನ ಸ್ವರೂಪಿಗಳೇ ಅವರು..!

  • ನಮ್ಮ ದೃಷ್ಟಿಯನ್ನು ಸ್ಥೂಲದಿಂದ ಸೂಕ್ಷ್ಮಕ್ಕೆ ಎತ್ತರಿಸಿದರೆ(UPGRADE ಮಾಡಿದರೆ),ಈ  ಜಗವೆಲ್ಲ ದೇವತಾಮಯ..!
  • ಶಂಕರಾಚಾರ್ಯರ ಹಾಗೆ ಪರಾದೃಷ್ಟಿಯನ್ನು ಅಳವಡಿಸಿಕೊಂಡರಂತೂ , ಪರಮಾತ್ಮನೆಂಬ ಪರಮಾನಂದದ ಹೊರತು ಬೇರೇನೂ ಕಾಣದು..!
  • ದೃಷ್ಟಿಯ ಮಹತ್ವವೇನೆಂದು ಕುಶಲ ಚಿತ್ರಕಾರನನ್ನು ಕೇಳಿ…
    ಆತ ತಪಸ್ವಿಯ ಹಾಗೆ ಬಹುಕಾಲ ಏಕಾಗ್ರವಾಗಿ ಕುಳಿತು ಚಿತ್ರವನ್ನು ಚೆನ್ನಾಗಿ ಚಿತ್ರಿಸುತ್ತಾನೆ.
    ಕೊನೆಯಲ್ಲಿ ದೃಷ್ಟಿಯಿಡುವಾಗ ಸ್ವಲ್ಪ ಅಸ್ತವ್ಯಸ್ತವಾದರೂ ಚಿತ್ರದ ಚೆಲುವೆಲ್ಲ ಸೋರಿಯೇ ಹೋಗಿ ಬಿಡಬಹುದಲ್ಲವೇ?
    ಗುಂಗುರು ಕೂದಲು,ಚಂದ್ರಮುಖ, ಸಂಪಿಗೆ ಮೊಗು, ಸರ್ವಾಂಗಸುಂದರ ಶರೀರ !!
    ಆದರೆ ಕಣ್ಣುಗಳು – ಒಂದು ಉತ್ತರ ಧ್ರುವವನ್ನೂ, ಇನ್ನೊಂದು ದಕ್ಷಿಣ ಧ್ರುವವನ್ನೂ ನೋಡುವಂತಿದ್ದರೆ ಅದೆಷ್ಟು ಚೆನ್ನ..??
  • ದೃಷ್ಟಿ ಕಲುಷಿತವಾದರೆ ಕಂಡಿದ್ದೆಲ್ಲವೂ ಕೊಳೆಯೆನಿಸಬಹುದು..
    ದೃಷ್ಟಿ ಪರಿಶುದ್ಧವಾದರೆ ,ಪ್ರಪಂಚದೆಲ್ಲೆಡೆ ಪರಮಾತ್ಮ ಪ್ರಕಟವಾಗಬಹುದು.

 

ದುರ್ಯೋಧನನ ದೃಷ್ಟಿ ದುಷ್ಟವಾಗಿದ್ದುದರಿಂದ ಆತನಿಗೆ ಎಲ್ಲರೂ ದುಷ್ಟರಾಗಿಯೇ ಕಂಡರು.!
ಇದು ದೃಷ್ಟಿ ದೋಷದ ಪರಿಣಾಮ.!!
ಧರ್ಮರಾಜನ ಕಣ್ಣಿನಲ್ಲಿ ಎಲ್ಲರೂ ದೇವರೇ,ಎಲ್ಲವೂ ಒಳಿತೇ !!
ಇದೂ ದೃಷ್ಟಿಶುದ್ಧಿಯ ಪರಿಣಾಮ..!!
  • ನವಗ್ರಹಗಳಲ್ಲಿ ಶನಿ-ಕುಜರು ನೋಡಿದ ಭಾವಗಳು ಹಾಳಾಗುತ್ತವೆ..!
    ಆದರೆ ಗುರು ನೋಡಿದರೆ ಅಶುಭ ಶುಭವಾಗುತ್ತದೆ, ಶುಭ ಪರಮಶುಭವಾಗುತ್ತದೆ.
  • ಶ್ರೀರಾಮನ ಪಟ್ಟಾಭಿಷೇಕಕ್ಕೆಂದು ಅಯೋಧ್ಯೆಗೆ ಅಯೋಧ್ಯೆಯೇ ಶೃ೦ಗಾರಗೊಂಡು ಸಜ್ಜಾದಾಗ, ಎಲ್ಲೆಡೆ ಆನಂದವೇ ತುಂಬಿದ್ದಾಗ, ಮಂಥರೆ ತನ್ನ ಪಾಪದೃಷ್ಟಿಯನ್ನು ಒಮ್ಮೆ ಅತ್ತ ಹಾಯಿಸಿದಳಂತೆ.!
    ಅಷ್ಟು ಮಾತ್ರಕ್ಕೇ ಸಾಕೇತ ಸ್ಮಶಾನವೇ ಆಗಿಹೋಯಿತು..!
  • ಅಂತರಂಗದ ವಿಷ, ದೃಷ್ಟಿಯ ಮೂಲಕ ಹೊರಸೂಸಿದರೆ ಒಳಿತೆಲ್ಲವೂ ಕೆಡುಕಾಗಿ ಬಿಡುತ್ತದೆ.
  • ಪರಮಗುರುವೊಬ್ಬನಿಗೆ ಶಿಷ್ಯನನ್ನುದ್ಧರಿಸಲು ತನ್ನ ಅಮೃತ ದೃಷ್ಟಿಯೊ೦ದೇ ಸಾಕು.
    ಅಂತರಂಗದ ಅಮೃತ, ದೃಷ್ಟಿಯಿಂದ ಹೊರಸೂಸಿ ದಾನವತೆಯಿಂದ ಮಾನವತೆಗೆ, ಮಾನವತೆಯಿಂದ ಮಾಧವತೆಗೆ ಜೀವರನ್ನೇರಿಸುವ ಪರಿಯಿದು..
  • ದೃಷ್ಟಿಭೇದದಿಂದಲೇ ಜಗತ್ತಿನಲ್ಲಿ ಇಷ್ಟಾರು ದರ್ಶನಗಳು ಹುಟ್ಟಿಕೊಂಡವು..
    ಪರ್ವತವೊಂದು ಪೂರ್ವದಿಂದ ನೋಡಿದಾಗ ಒಂದು ರೀತಿ ಕಂಡರೆ, ಪಶ್ಚಿಮದಿಂದ ನೋಡಿದರೆ ಅದರ ರೂಪವೇ ಬೇರೆ..ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಂಡರೆ, ಬಳಿಸಾರಿದರೆ ಬಗೆ ಬಗೆಯ ರೂಪ- ಏರುವಾಗಲಂತೂ ಕ್ಷಣಕ್ಕೊಂದು ರೂಪ. ಹೀಗೆಯೇ ಪರಮಾತ್ಮನನ್ನು ಮತ್ತು ಅವನ “ವಿಶ್ವರೂಪವನ್ನು” ,ಬೇರೆ ಬೇರೆಯವರು ಬೇರೆ ಬೇರೆ ನೆಲೆಯಲ್ಲಿ ನಿಂತು ನೋಡಿದಾಗ, ಬೇರೆ ಬೇರೆ ದರ್ಶನಗಳು ಪ್ರಾದುರ್ಭವಿಸಿದವು.
  • ಕಣ್ಣೆ೦ದರೆ ದೇಹದ ಮನೆಯೊಳಗೆ ಅಡಗಿ ಕುಳಿತಿರುವ ಆತ್ಮ..ಹೊರ ಪ್ರಪಂಚವನ್ನು ಇಣುಕಿ ನೋಡುವ ಕಿಟಕಿ…
  • ಕಣ್ಣೆ೦ದರೆ ಅಂತರಂಗ-ಬಹಿರಂಗಗಳು ಕೂಡುವ ತಾಣ…
  • ಕೆಲವರು ಒಳಗಣ್ಣು ಮುಚ್ಚಿ ಹೊರಗಣ್ಣು ತೆರೆದು ವಿಶ್ವವನ್ನು ನೋಡಿ ,ಸಂತೋಷ ಪಡುವವರು.
    ಇನ್ನು ಕೆಲವರು ಹೊರಗಣ್ಣು ಮುಚ್ಚಿ,ಒಳಗಣ್ಣು ತೆರೆದು ವಿಶ್ವಂಭರನನ್ನು ಕಂಡು ಆನಂದಪಡುವವರು.
    ಮತ್ತೆ ಕೆಲವರು ಒಂದು ಕಣ್ಣಿನಿಂದ ವ್ಯವಹಾರವನ್ನೂ ,ಇನ್ನೊಂದು ಕಣ್ಣಿನಿಂದ ಪರಮಾರ್ಥವನ್ನೂ ಸಮಕಾಲದಲ್ಲಿ ವೀಕ್ಷಿಸುತ್ತಾ,ಆನಂದ,ಸಂತೋಷಗಳ ಸಮನ್ವಯ ಸಾಧಿಸಿದವರು.
    ಇನ್ನೂ ಕೆಲವರು ಎರಡು ದೃಷ್ಟಿಗಳನ್ನೂ ಕಳೆದುಕೊಂಡು “ಹೊರ ಕತ್ತಲೆ -ಒಳ ಕಾರ್ಗತ್ತಲೆ” ಎಂಬಂತಾಗಿ ತೊಳಲಾಡುವವರು..
  • ಕಣ್ಣೆ೦ದರೆ, ಸುಖ-ದು:ಖಗಳ ಮಹಾಸಂಗಮ.
    ಆನಂದವು ಉಕ್ಕಿ ಹರಿಯುವುದು ಕಣ್ಣಿನಿಂದ ತಂಪಾದ ಪನ್ನೀರಾಗಿ….
    ಸಂಕಟ ಕರಗಿ ಹರಿಯುವುದು ಕೂಡ ಕಣ್ಣಿನಿಂದಲೇ.. ಬಿಸಿಬಿಸಿಯಾದ ಕಣ್ಣೀರಾಗಿ.
    ಗಂಗೆ-ಯಮುನೆಯರನ್ನು ಹೋಲುವ ಜೀವದ ಎರಡು ಭಾವನದಿಗಳ ಉಗಮಸ್ಥಾನ ಅದುವೇ ಅಲ್ಲವೇ?……..

ರಾಮಬಾಣ:


ಸೃಷ್ಟಿಗಿಂತ ವಿಶಾಲವಾಗಬಹುದು ದೃಷ್ಟಿ ..
ಸೃಷ್ಟಿಗಿಂತ ಆಳಕ್ಕಿಳಿಯಬಹುದು ದೃಷ್ಟಿ..
ಸೃಷ್ಟಿಗಿಂತ ಉನ್ನತಕ್ಕೇರಬಹುದು ದೃಷ್ಟಿ..
ಸೃಷ್ಟಿಯಾಚೆಗೂ ವ್ಯಾಪಿಸಿರುವ ಪರಮಾತ್ಮನನ್ನೇ ಕಾಣಬಲ್ಲ ದೃಷ್ಟಿ..
ಅದು,
ಸೃಷ್ಟಿಗಿಂತ ಹಿರಿದಲ್ಲವೇ……!! ??

(ಮು೦ದುವರೆದಿದೆ. . . . . )

Facebook Comments Box