ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರೀಗುರುಕೃಪೆ ಸದಾ ಇರಲಿ..

ಶ್ರೀಗುರುಕೃಪೆ ಸದಾ ಇರಲಿ..

ಜ್ಞಾನಸುಮ 14:

ಅಯಮಾತ್ಮಾ ಬ್ರಹ್ಮ

ವಿದ್ವಾನ್ ಶೇಷಾಚಲ ಶರ್ಮಾ

ಬ್ರಹ್ಮವಿದ್ಯೆಯೇ ಪರಮಪುರುಷಾರ್ಥ ಸಾಧನವು. ಸಕಲ ಉಪನಿಷತ್ತುಗಳೂ ಮುಖ್ಯವಾಗಿ ಬ್ರಹ್ಮವಿದ್ಯೆಯನ್ನು ಪ್ರತಿಪಾದಿಸುತ್ತವೆ. ಸಾಧನಚತುಷ್ಟಯಸಂಪನ್ನನಾದವನೇ ಬ್ರಹ್ಮವಿದ್ಯೆಗೆ ಅಧಿಕಾರಿ. ಬ್ರಹ್ಮವಿದ್ಯೆಯೆಂದರೆ ಬ್ರಹ್ಮಾತ್ಮೈಕತ್ವ ವಿಜ್ಞಾನ. ಮೋಕ್ಷಾಪೇಕ್ಷಿಯಾದ ಉತ್ತಮ ಅಧಿಕಾರಿಗೆ ಜೀವಬ್ರಹ್ಮೈಕ್ಯವನ್ನು ಉಪದೇಶಿಸಲು ನಾಲ್ಕು ಉಪನಿಷದ್ವಾಕ್ಯಾಗಳು ಮಹಾವಾಕ್ಯಗಳೆಂದು ಉಪದೇಶ ವಾಕ್ಯಗಳಾಗಿ ಸಂಪ್ರದಾಯವಿದರ ಪರಂಪರೆಯಲ್ಲಿ ಪರಿಗಣಿತವಾಗಿವೆ. ವಾಕ್ಯಗಳ ಆಕಾರ ದೊಡ್ಡದಲ್ಲದಿದ್ದರೂ ಅವು ಬೋಧಿಸುವ ಜೀವಬ್ರಹ್ಮೈಕ್ಯರೂಪವಾದ ಅರ್ಥದ ಮಹತ್ತ್ವ ಅದ್ಭುತವಾಗಿರುವುದರಿಂದ ಮಹಾವಾಕ್ಯಗಳೆಂದು ಪ್ರಸಿದ್ಧವಾಗಿವೆ. ಜೀವಬ್ರಹ್ಮೈಕ್ಯವನ್ನು ಬೋಧಿಸುವ ವಾಕ್ಯಗಳು ಉಪನಿಷತ್ತುಗಳಲ್ಲಿ ವಿಪುಲವಾಗಿ ಕಂಡುಬರುತ್ತವೆ. ಶಿವಮಹಾಪುರಾಣದಲ್ಲಿ ಇಂತಹ ಇಪ್ಪತ್ತೆರಡು ಮಹಾವಾಕ್ಯಗಳು ನಿರ್ದಿಷ್ಟವಾಗಿವೆ. ಸನ್ಯಾಸದೀಕ್ಷಾಪ್ರದಾನ ಸಮಯದಲ್ಲಿ ಪ್ರಣವವನ್ನು ಅರ್ಥಸಹಿತವಾಗಿ ಉಪದೇಶಿಸಿದ ಮೇಲೆ ಗುರುವು ಶಿಷ್ಯನಿಗೆ ನಾಲ್ಕು ಮಹಾವಾಕ್ಯಗಳನ್ನು ಉಪದೇಶಿಸುವ ಪದ್ಧತಿಯು ಅನೂಚಾನವಾಗಿ ಬಂದಿದೆ. ಇದರ ಬಗ್ಗೆ ವಿಶದವಾದ ವಿವರಣೆಯನ್ನು “ಪ್ರಜ್ಞಾನಂ ಬ್ರಹ್ಮ” ಎಂಬ ಶೀರ್ಷಿಕೆಯ ಲೇಖನದಲ್ಲಿ ಕೊಡಲಾಗಿದೆ. ನಾಲ್ಕು ಮಾಹಾವಾಕ್ಯಗಳು ನಾಲ್ಕು ವೇದಗಳ ಪರಮ ತಾತ್ಪರ್ಯವನ್ನು ಬೋಧಿಸುವ ಪ್ರತಿನಿಧಿವಾಕ್ಯಗಳಾಗಿವೆಯೆಂಬುದಾಗಿ ಗ್ರಹಿಸಬಹುದು. ಗುರುವು ಶಿಷ್ಯನಿಗೆ ಉಪದೇಶಿಸುವ ಈ ನಾಲ್ಕು ಮಾಹಾವಾಕ್ಯಗಳು ಸಚ್ಚಿದಾನಂದ ರೂಪವಾದ ಪರಿಪೂರ್ಣಬ್ರಹ್ಮಾನುಭವದ ಪ್ರಬೋಧಕ್ಕೆ ಪರಮೋತ್ತಮವಾದ ಕೀಲಕಗಳಾಗಿವೆಯೆಂದು ಹೇಳಬಹುದು. ಪ್ರಕೃತ, “ಅಯಮಾತ್ಮಾ ಬ್ರಹ್ಮ” ಎಂಬ ಮಹಾವಾಕ್ಯದ ವಿವರಣೆಯನ್ನು ಮಾಡಲಾಗುವುದು.

ಈ ಮಾಹಾವಾಕ್ಯವು ಅಥರ್ವಣವೇದಕ್ಕೆ ಸೇರಿದ ಮಾಂಡೂಕ್ಯೋಪನಿಷತ್ತಿನಲ್ಲಿದೆ. ಈ ಮಹಾವಾಕ್ಯದಲ್ಲಿ ಅಯಮ್, ಆತ್ಮಾ, ಬ್ರಹ್ಮ- ಎಂಬ ಮೂರು ಪದಗಳಿವೆ. ಪದಾರ್ಥಜ್ಞಾನದಿಂದ ವಾಕ್ಯಾರ್ಥ ಜ್ಞಾನವು ಉಂಟಾಗುತ್ತದೆ. ಮಹಾವಾಕ್ಯಗಳು ಅಖಂಡಾರ್ತವನ್ನೇ ಬೋಧಿಸುತ್ತವೆ ಎಂದು ಅದ್ವೈತಸಿದ್ಧಾಂತವಾಗಿದೆ. ಮಾಂಡೂಕ್ಯೋಪನಿಷತ್ತು ಮೊದಲಿಗೆ ಓಂಕಾರದ ಸರ್ವವ್ಯಾಪಕತೆಯನ್ನು ತಿಳಿಸುತ್ತದೆ. ವಾಚಕವಾದ ಶಬ್ಧಕ್ಕೂ, ವಾಚ್ಯವಾದ ಅರ್ಥಕ್ಕೂ ಏಕತ್ವವನ್ನು ತಿಳಿಸಲಾಗಿದೆ. ಸಮಸ್ತವಾದ ವಾಕ್ಪ್ರಪಂಚವೂ ಓಂಕಾರದಲ್ಲಿ ಅಡಗಿ ಓಂಕಾರರೂಪವಾಗಿದೆಯೆಂದು ತಿಳಿಸಲಾಗಿದೆ. ಕಲ್ಪಿತವಾದ ನಾಮರೂಪ ಪ್ರಪಂಚವನ್ನು ಒಂದೇ ಪ್ರಯತ್ನದಿಂದ ನಿವೃತ್ತಿಗೊಳಿಸಿ ಪ್ರಕೃತವಾದ ಜೀವಬ್ರಹ್ಮೈಕ್ಯವನ್ನು ಬೋಧಿಸಲು ಇದರಿಂದ ಅನುಕೂಲವಾಗುತ್ತದೆ. ಏಕೆಂದರೆ ನಾಮರೂಪ ಪ್ರಪಂಚವೆಲ್ಲವೂ ಕೇವಲ ವಿಕಲ್ಪವೇ ಹೊರತು ವಾಸ್ತವಿಕ ತತ್ತ್ವವಲ್ಲ. ಅಯಮ್ ಎನ್ನುವುದು ಪ್ರತ್ಯಕ್ಷವಾದ ವಸ್ತುವನ್ನು ನಿರ್ದೇಶಿಸುತ್ತದೆ. ಇದರಿಂದ ಈ ಮಹಾವಾಕ್ಯದಲ್ಲಿ ಮುಖ್ಯವಾಗಿ ಪ್ರತಿಪಾದಿತವಾಗಿರುವ ಬ್ರಹ್ಮವಸ್ತುವು ಪರೋಕ್ಷವಾದದ್ದಲ್ಲ. ಅದು ನಿತ್ಯಾಪರೋಕ್ಷವಾದುದು ಎಂದು ಸಿದ್ಧವಾಗುತ್ತದೆ. ಆ ಬ್ರಹ್ಮವಸ್ತುವು ಸ್ವಪ್ರಕಾಶವಾದುದರಿಂದ ನಿತ್ಯಾಪರೋಕ್ಷವಾದುದಾಗಿದೆ. ಶ್ರುತಿಯಲ್ಲಿ ಸರ್ವಾತ್ಮಕವಾದುದು ಎಂದು ಪ್ರತಿಪಾದಿತವಾದ ಬ್ರಹ್ಮವು ಪರೋಕ್ಷವಾದುದಲ್ಲ; ಅಪರೋಕ್ಷವಾದುದು ಎಂದು ತಿಳಿಯಬೇಕು. ವಿಶ್ವ, ತೈಜಸ, ಪ್ರಾಜ್ಞ ಹಾಗೂ ತುರೀಯ ಎಂಬುದಾಗಿ ನಾಲ್ಕು ಪಾದಗಳನ್ನುಳ್ಳದ್ದಾಗಿ “ಸೋsಯಮಾತ್ಮಾ ಚತುಷ್ಪಾತ್” ಎಂದು ಮುಂದೆ ಉಪನಿಷತ್ತಿನಲ್ಲಿ ಹೇಳಲಾಗಿದೆ. ಆತ್ಮನಿಗೆ ಇಲ್ಲಿ ನಾಲ್ಕು ಪಾದಗಳನ್ನು ಹೇಳಿರುವುದು ಗೋವಿಗೆ ನಾಲ್ಕು ಪಾದಗಳಿವೆ ಎಂಬಂತೆ ಅಲ್ಲ. ಆದರೆ ಒಂದು ರೂಪಾಯಿಯಲ್ಲಿ ನಾಲ್ಕು ಪಾದಗಳಿವೆ ಎಂಬಂತೆ ಕೇವಲ ವ್ಯವಹಾರದ ಸೌಕರ್ಯಕ್ಕಾಗಿ ಹೀಗೆ ಹೇಳಲಾಗಿದೆ. ವಿಶ್ವ, ತೈಜಸ, ಪ್ರಾಜ್ಞಗಳು ಕೇವಲ ಪ್ರಾಪ್ತಿಸಾಧನಗಳಾಗಿ ಪಾದಗಳೆಂದು ಕಲ್ಪಿತವಾಗಿವೆ. ತುರೀಯವು ಪ್ರಾಪ್ತವ್ಯ ಎಂಬ ಅರ್ಥದಲ್ಲಿ ಪಾದವೆನಿಸುತ್ತದೆ. ಕಲ್ಪಿತವಾದ ಮೂರೂ ಲಯವಾದರೆ ವಸ್ತುಸತ್ಯವಾದ ತುರೀಯವೊಂದೇ ಅದ್ವಿತೀಯವಾಗಿ ಬೆಳಗುತ್ತದೆ. ಹೀಗೆ ಅಯಮ್ ಎಂದು ಹೇಳಿದುದರಿಂದ ಬ್ರಹ್ಮವು ಅದೃಷ್ಟಾದಿಗಳಂತೆ ನಿತ್ಯಪರೋಕ್ಷವಾದುದೂ ಅಲ್ಲ; ಘಟಾದಿಗಳಂತೆ ದೃಶ್ಯವಸ್ತುವೂ ಅಲ್ಲವೆಂದು ಸಿದ್ಧವಾಗುತ್ತದೆ. “ಆತ್ಮಾ” ಎಂಬ ಶಬ್ಧವು ಪ್ರತ್ಯಗಾತ್ಮವೆನಿಸಿದ ಜೀವಾತ್ಮನನ್ನು ಬೋಧಿಸುತ್ತದೆ. ದೇಹ, ಇಂದ್ರಿಯ, ಮನಸ್ಸು, ಪ್ರಾಣ, ಅಹಂಕಾರ- ಇವುಗಳ ಸಂಘಾತಕ್ಕಿಂತಲೂ ಆಂತರಿಕವಾಗಿ ಅವುಗಳನ್ನು ಬೆಳಗಿಸುತ್ತಾ ಅವುಗಳಿಗೆ ಸಾಕ್ಷಿಯಾಗಿರುವ ಜೀವಚೈತನ್ಯವೇ ಇಲ್ಲಿ ಆತ್ಮಶಬ್ಧದ ಅರ್ಥವೆಂದು ತಿಳಿಯಬೇಕು. “ಬ್ರಹ್ಮ” ಶಬ್ಧವು ಸರ್ವಾಧಿಷ್ಠಾನವಾದ ಪಾರಮಾರ್ಥಿಕ ಪರಚೈತನ್ಯವನ್ನು ತಿಳಿಸುತ್ತದೆ. ಬ್ರಹ್ಮವಸ್ತುವು ದೃಶ್ಯವಾಗಿ ಮಿಥ್ಯಾಭೂತವೆನಿಸಿದ ಆಕಾಶಾದಿಸಮಸ್ತಪ್ರಪಂಚದ ಬಾಧೆಯ ಪರಮಾವಧಿ ಅದು. ಬ್ರಹ್ಮವು ಅದ್ವಿತೀಯವಾದ ಸಚ್ಚಿದಾನಂದರೂಪ. ಹೀಗೆ ಆತ್ಮನು ಪರೋಕ್ಷನೂ ಅಲ್ಲ, ದೃಶ್ಯನೂ ಅಲ್ಲ; ಅವನು ದೇಹಾದಿಸಂಘಾತಕ್ಕೆ ಪರಮಾಧಾರನೂ ಸಾಕ್ಷಿಯೂ ಆಗಿದ್ದಾನೆ. ದೃಶ್ಯವಾದ ಸಮಸ್ತಪ್ರಪಂಚಕ್ಕೆ ಅಧಿಷ್ಠಾನವಾಗಿ ಸ್ವಯಂಪ್ರಕಾಶವಾದುದು ಬ್ರಹ್ಮವಸ್ತುವು. ಹೀಗೆ ಪದಾರ್ಥಜ್ಞಾನವನ್ನು ಪಡೆಯಬೇಕು. ಅಂತಹ ಸ್ವಯಂಪ್ರಕಾಶವಾದ ಪ್ರತ್ಯಗಾತ್ಮನೂ, ಬ್ರಹ್ಮವೂ ಅಭಿನ್ನವಾಗಿ ಅಂದರೆ, ಅದ್ವಿತೀಯವಾಗಿ ಬೆಳಗುತ್ತದೆ ಎಂಬುದಾಗಿ ಈ ಮಹಾವಾಕ್ಯದ ಅಖಂಡಾರ್ಥ ಪ್ರಕಾಶ. ಇದೊಂದು ಅದ್ಭುತವಾದ ಅನುಭವ. ಇದು ಗುರುಶಿಷ್ಯರ ಏಕಾನುಭವದ ನೆಲೆ. ಆದ್ದರಿಂದಲೇ ಬ್ರಹ್ಮವು ತಾನು ಯಾವ ಕಾರಣವನ್ನೂ ಹೊಂದಿಲ್ಲ. ಅದರಿಂದ ಯಾವ ಕಾರ್ಯವೂ ಉಂಟಾಗುವುದಿಲ್ಲ. ಬ್ರಹ್ಮಕ್ಕೆ ಒಳಭೇದವಿಲ್ಲ. ಅದಕ್ಕೆ ಬಾಹ್ಯವಾದ ಭೇದವೂ ಇಲ್ಲ. ಸ್ವಯಂಪ್ರಕಾಶವಾದ ಪ್ರತ್ಯಗಾತ್ಮವೇ ಅದ್ವಿತೀಯವಾದ ಬ್ರಹ್ಮ. ಅದೇ ಸರ್ವಾತ್ಮನಾ ಸರ್ವಾನುಭವಿತೃವಾಗಿ ಪೂರ್ಣಾನುಭವರೂಪವಾಗಿ ಬೆಳಗುತ್ತದೆ. ಸಕಲವೇದಾಂತಗಳ ಪರಮೋಪದೇಶವು ಇದೇ ಆಗಿದೆ.

~*~

Facebook Comments Box