ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 29:

ಪಂಚಯಜ್ಞಗಳು ಮತ್ತು ಅನುಷ್ಠಾನಗಳು   

ಚ.ಮೂ. ಈಶ್ವರ ಶಾಸ್ತ್ರೀ

“ಮಾತಾಪಿತ್ರೋಃ ಪದಾಂಭೋಜೇ ಪಾರ್ವತೀಶಂಭುರೂಪಯೋಃ ||
ಗುರೂಣಾಂ ದೇವಕಲ್ಪಾನಾಂ ವಂದೇ ಮಂತ್ರಪ್ರದಾಯಿನಾಂ ||”

ಜಂತೂನಾಂ ನರಜನ್ಮ ದುರ್ಲಭಂ‘ ಇದು ಆದ್ಯಶಂಕರಾಚಾರ್ಯರ ಕೃತಿಯ ಒಂದಂಶ. ೮೪ ಲಕ್ಷ ಜಾತಿಯ ಚರಾಚರ ಪ್ರಾಣಿಗಳಲ್ಲಿ ಮನುಷ್ಯ ಜನ್ಮ ಪ್ರಾಪ್ತಿಯು ಅಸಂಖ್ಯ ಪುಣ್ಯಫಲದಿಂದ ಕೊನೆಯದಾಗಿದೆ.  ಆ ಮನುಷ್ಯ ಜನ್ಮದಲ್ಲಿಯೂ ಶ್ರೋತ್ರಿಯ ಬ್ರಾಹ್ಮಣ ಜಾತಿಯ ಗೃಹಸ್ಥಾಶ್ರಮಿಯಾಗಿ ಬಾಳಲು ಇನ್ನೂ ಹೆಚ್ಚಿನ ಪುಣ್ಯವಿಶೇಷವು ಬೇಕಾಗುವುದು. ಇಂತಹ ಪುಣ್ಯಸಂಗ್ರಹದ ಕಾರಣದಿಂದ ಪ್ರಾಪ್ತವಾದ ಮನುಷ್ಯ ಜನ್ಮದಲ್ಲಿ ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ನಾವು ಸಾಧಿಸಬೇಕೆಂದು ಶಾಸ್ತ್ರಪುರಾಣಗಳು ಸಾರುತ್ತಿವೆ. ಆ ಪುರುಷಾರ್ಥಗಳಲ್ಲಿ ಮೊದಲನೆಯದಾದ ಧರ್ಮಾಚರಣೆಯು ಮುಖ್ಯವಾದುದು.  ‘ಧರ್ಮಾದರ್ಥಶ್ಚ ಕಾಮಶ್ಚಸ ಕಿಮರ್ಥಂ ನ ಸೇವ್ಯತೇ’ ಧರ್ಮಾಚರಣೆಯಿಂದ ಧನಪ್ರಾಪ್ತಿಯೂ, ಧನಾಗಮದಿಂದ ಸದಿಚ್ಛಾಪೂರ್ತಿಯೂ ಆಗುವ ಕಾರಣ ಆ ಧರ್ಮಾಚರಣೆಯು ಏಕೆ ಮಾಡಲ್ಪಡುವುದಿಲ್ಲ? ಎಂದು ವ್ಯಾಸರು ಪ್ರಶ್ನಿಸಿದ್ದಾರೆ. ಈ ಮೂರು ಪುರುಷಾರ್ಥಗಳ ಪ್ರಾಪ್ತಿಯಿಂದ ದೇಹಾಂತದಲ್ಲಿ ಮೋಕ್ಷವನ್ನು ಹೊಂದಬಹುದು. ಈ ಧರ್ಮಾಚರಣೆಯಲ್ಲಿ ನಿತ್ಯಕರ್ಮಾನುಷ್ಠಾನಗಳು ಅತಿಪ್ರಾಮುಖ್ಯವಾದವುಗಳು. ಈ ನಿತ್ಯಕರ್ಮಗಳಲ್ಲಿ ಪಂಚಮಹಾಯಜ್ಞಗಳು ಅಡಗಿವೆ.

ನಿತ್ಯಕರ್ಮಗಳಲ್ಲಿ ‘ಮಮ ಉಪಾತ್ತದುರಿತಕ್ಷಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಸಂಧ್ಯಾಮುಪಾಸಿಷ್ಯೇ’ ಇತ್ಯಾದಿ ಸಂಕಲ್ಪ ಮಾಡಬೇಕೆಂದು ನಮ್ಮ ಪೂರ್ವಜರು ಹೇಳಿದ್ದಾರೆ. ಬೇರೆ ಯಾವ ಫಲಾಪೇಕ್ಷೆಯಿಂದಲೂ ನಿತ್ಯಕರ್ಮಗಳನ್ನು ಮಾಡುವುದಲ್ಲ. ‘ನನಗೆ ಉಂಟಾದ ಪಾಪಗಳ ಪರಿಹಾರದ ಮೂಲಕ ಶ್ರೀಪರಬ್ರಹ್ಮನ ಪ್ರೀತಿಗಾಗಿ ಸಂಧ್ಯಾವಂದನಾದಿಗಳನ್ನು ಮಾಡುವೆನು’ ಎಂದು ಈ ಸಂಕಲ್ಪದ ಅರ್ಥ.  ದುಃಖಕ್ಕೆ ಕಾರಣವು ಪಾಪವು ಮತ್ತು ಸುಖಕ್ಕೆ ಕಾರಣವು ಪುಣ್ಯವು.  ನಾವು ದುಃಖ ಬರಬಾರದೆಂದು ಹೇಳುತ್ತೇವೆ. ಅದಕ್ಕೆ ಕಾರಣವಾದ ಪಾಪವನ್ನು ತಿಳಿದೂ ತಿಳಿದೂ ಮಾಡುತ್ತೇವೆ. ಸುಖಕ್ಕೆ ಕಾರಣವಾದ ಪುಣ್ಯಸಂಪಾದನೆಯನ್ನು ಮಾಡುವುದರಲ್ಲಿ ಆಸಕ್ತಿತೋರುವುದಿಲ್ಲ. ಜೀವನದಲ್ಲಿ ಪಾಪಮಾಡದೆ ಬದುಕಲಿಕ್ಕೇ ಸಾಧ್ಯವಿಲ್ಲ. ಅದರ ಪರಿಹಾರಕ್ಕಾಗಿಯೇ ನಾವು ಪ್ರಾತಃಕಾಲ ಮಧ್ಯಾಹ್ನಕಾಲ ಸಾಯಂಕಾಲಗಳಲ್ಲಿ ಸಂಧ್ಯಾವಂದನ, ದೇವತಾಸ್ತುತಿ, ದೇವರನಾಮ ಸಂಕೀರ್ತನಾದಿಗಳನ್ನು ಮಾಡಬೇಕು. ಇದರಿಂದ ಪಾಪಪರಿಹಾರವಾಗಿ ಪುಣ್ಯಸಂಚಯವಾಗುತ್ತದೆ. ಅರ್ಥಾತ್ ದುಃಖನಾಶವಾಗಿ ಸುಖಪ್ರಾಪ್ತಿಯಾಗುತ್ತದೆ. ಈ ನಿತ್ಯಕರ್ಮಗಳು ಕೇವಲ ಬ್ರಾಹ್ಮಣರಿಗೆ ಹಾಗೂ ಪುರುಷರಿಗೆಂದು ಭಾವಿಸಬಾರದು. ಮಂತ್ರ ಕಲಿಯಲು ಅರ್ಹರಾದವರು ಮಂತ್ರೋಚ್ಚಾರ ಪೂರ್ವಕವೂ, ಅನರ್ಹರು ಮಂತ್ರರಹಿತವಾಗಿ ಶ್ರದ್ಧಾಭಕ್ತಿ ಸಮನ್ವಿತರಾಗಿ ಪುರಾಣಶ್ಲೋಕ ಅಥವಾ ಸಂಸ್ಕೃತ ಮಾತೃಭಾಷಾ ವಾಕ್ಯಗಳನ್ನುಚ್ಚರಿಸುತ್ತಾ ಉಕ್ತಕಾಲಗಳಲ್ಲಿ ನಿತ್ಯಕರ್ಮಾನುಷ್ಠಾನ ಮಾಡಿದರೆ ಸುಖಶಾಂತಿಯನ್ನೂ, ಪುನರ್ಜನ್ಮವಿಲ್ಲದಂತಹ ಮೋಕ್ಷರೂಪವಾದ ಸಾಯುಜ್ಯಪದವಿಯನ್ನೂ ಹೊಂದಬಹುದು. ನಾವು ಈ ವಿಚಾರದಲ್ಲಿ ಉದಾಸೀನರಾಗಬಾರದು. ಪ್ರಸ್ತುತ ಪಂಚಮಹಾಯಜ್ಞಗಳು ಮತ್ತು ಅವುಗಳ ಅನುಷ್ಠಾನಗಳು’ ಈ ಕುರಿತು ತಿಳಿದುಕೊಳ್ಳುವ. ಇವುಗಳ ಅನುಕ್ರಮದಲ್ಲಿ ಹಾಗೂ ಅನುಷ್ಠಾನಕಾಲದ ವಿಷಯದಲ್ಲಿ ಅನೇಕ ಮತಭೇದಗಳಿವೆ. ನಾನು ಶ್ರೀಮಹರ್ಷಿಬೋಧಾಯನಾಚಾರ್ಯಪ್ರಣೀತ ಗೃಹ್ಯಸೂತ್ರದಲ್ಲಿ ಬರೆದಂತೆ ವಿವರಿಸುತ್ತಿದ್ದೇನೆ. (1) ದೇವಯಜ್ಞ,(1) ಪಿತೃಯಜ್ಞ, (3) ಭೂತಯಜ್ಞ, (4) ಮನುಷ್ಯಯಜ್ಞ, (5) ಬ್ರಹ್ಮಯಜ್ಞ. ಕೃಷ್ಣಯಜುರ್ಬ್ರಾಹ್ಮಣಾಂತರ್ಗತ ಮಹಾನಾರಾಯಣೋಪನಿಷತ್ತಿನಲ್ಲಿಯೂ ಇದೇ ಅನುಕ್ರಮವಿದೆ. ಇವುಗಳ ಅನುಷ್ಠಾನಕಾಲವು ದಿವಾಮಾನವನ್ನು 8 ಪಾಲು ಮಾಡಿದರೆ 4ನೇ ಯ ಪಾಲಿನ ಸಮಯ. ಮಧ್ಯಾಹ್ನ ಸಂಧ್ಯೋಪಾಸನೆಯ ಮೊದಲು ವಾ ಮತ್ತೆ ಮಾಡಬಹುದು.ಪಾಪಪರಿಹಾರ ಪೂರ್ವಕ ಪರಮೇಶ್ವರ ಪ್ರೀತಿಯೇ ಇದರ ಫಲ. ಲೌಕಿಕವಾಗಿ ಜನಾನುರಾಗ, ಸುಖಶಾಂತಿ ಕೀರ್ತಿ, ವಿದ್ಯಾಬುದ್ದಿ,ಧನ, ಐಶ್ವರ್ಯ,ಪುತ್ರಪೌತ್ರಾದಿ ದೈವೀಸಂಪತ್ತುಗಳ ಪ್ರಾಪ್ತಿ, ಮರಣಾನಂತರ ಮೋಕ್ಷ ಪದವಿ ಸಿಗುವುದು.

ಪಂಚಮಹಾಯಜ್ಞಗಳನ್ನು ಮಾಡುವ  ಅಧಿಕಾರಿಗಳು ಪ್ರಾಮುಖ್ಯವಾಗಿ ಗೃಹಸ್ಥರು. ಮನುಷ್ಯನಿಗೆ ಬ್ರಹ್ಮಚರ್ಯ,, ಗಾರ್ಹಸ್ಥ್ಯ, ವಾನಪ್ರಸ್ಥ, ಸನ್ಯಾಸಗಳೆಂಬ ನಾಲ್ಕು ಆಶ್ರಮಗಳಿವೆ. ಮನುಷ್ಯನ ಆಯುಸ್ಸು 120 ವರ್ಷಗಳೆಂದು ನಿರ್ಧರಿಸಲ್ಪಟ್ಟಿದೆ. ಈ ನಿರ್ಧಾರದ ಪ್ರಕಾರ 30 ವರ್ಷಪ್ರಾಯದ ತನಕ ಬ್ರಹ್ಮಚರ್ಯಾಶ್ರಮವು. ಅನಂತರದ 30 ವರ್ಷಗಳ ತನಕ ಗೃಹಸ್ಥಾಶ್ರಮವು. ಅನಂತರದ 30 ವರ್ಷಗಳ ತನಕ ವಾನಪ್ರಸ್ಥಾಶ್ರಮವು. ಅನಂತರದ 30 ವರ್ಷಗಳ ತನಕ ಸನ್ಯಾಸಾಶ್ರಮವು. ಈ ಪಂಚಮಹಾಯಜ್ಞಗಳನ್ನು ಗೃಹಸ್ಥಾಶ್ರಮಿಯು ಪ್ರತಿದಿನ ಮಾಡುವುದಾಗಿದೆ. ಆದರೂ ಬ್ರಹ್ಮಚರ್ಯಾಶ್ರಮಿಯೂ ವಾನಪ್ರಸ್ಥಾಶ್ರಮಿಯೂ ಯೋಗ್ಯತಾನುಸಾರ ಮಾಡಬಹುದು. ಯಜ್ಞ ಶಬ್ದಕ್ಕೆ ಪೂಜೆ, ತ್ಯಾಗ, ದಾನಗಳೆಂಬ ಮೂರು ಅರ್ಥಗಳಿವೆ. ಗೃಹಸ್ಥಾಶ್ರಮಿಯು ನಾಲ್ಕು ಆಶ್ರಮಿಗಳಿಗೂ ಮೂಲಕಾರಣನೆಂದೂ ಆಶ್ರಯನೆಂದೂ ಮನುಸ್ಮೃತಿಯ ಆಧಾರವಿದೆ. ವ್ಯಾವಹಾರಿಕವಾಗಿ ವೀಕ್ಷಿಸಿದರೂ ಸದಾಚಾರ ಸಂಪನ್ನರು, ಸಾಧುಸಂತರು, ವೈದ್ಯರು, ವೀರಸೈನಿಕರು, ಪಂಡಿತರು, ವಿಜ್ಞಾನಿಗಳು ಇತರ ಮನುಷ್ಯರೆಲ್ಲರೂ ಗೃಹಸ್ಥಾಶ್ರಮಿಗಳಿಂದಲೇ ಉತ್ಪನ್ನರಾಗುತ್ತಾರೆ. ಗೃಹಸ್ಥಾಶ್ರಮಿಗಳು ಈ ದೇವಪಿತೃಭೂತ ಮನುಷ್ಯಬ್ರಹ್ಮಯಜ್ಞಗಳನ್ನು ಮಾಡದಿದ್ದರೆ ಅವರಿಂದ ಹುಟ್ಟುವ ಪ್ರಜೆಗಳು ಸತ್ಪ್ರಜೆಗಳಾಗುವುದಿಲ್ಲ. ದೇವತೆಗಳಿಗೆ ಹಾಗೂ ದೇವಸ್ವರೂಪರಾದ ಪಿತೃಭೂತ ಮನುಷ್ಯಋಷಿಗಳಿಗೆ ಕಿಂಚಿತ್ತನ್ನಾದರೂ ಸಮರ್ಪಿಸದೆ ಅವರಿಂದ ಕೊಡಲ್ಪಟ್ಟ ಸಂಪತ್ತನ್ನು ಅನುಭವಿಸುವವನು ಕಳ್ಳನೆಂದು ಭಗವದ್ಗೀತೆಯಲ್ಲಿ ಉಕ್ತವಾಗಿದೆ. ‘ಇಷ್ಟಾನ್ ಭೋಗಾನ್ ಹಿ ವೋ ದೇವಾ ದಾಸ್ಯಂತೇ ಯಜ್ಞಭಾವಿತಾಃ ||  ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ ||’ ಆದ್ದರಿಂದ ಮನುಷ್ಯರೆಲ್ಲರೂ ಅವರವರ ಯೋಗ್ಯತಾನುಸಾರ ಈ ಪಂಚಮಹಾಯಜ್ಞಗಳ ಅನುಷ್ಠಾನ ಮಾಡುವುದೊಳ್ಳೆಯದು.

ಪಂಚಮಹಾಯಜ್ಞಗಳಲ್ಲಿ-

1 ದೇವಯಜ್ಞದ ವಿವರ:
ದೇವಯಜ್ಞವು ‘ಸ್ವಾಹಾ’ ಕಾರವು. ಅಂದರೆ ದೇವತೆಗಳ ಪ್ರೀತಿಗಾಗಿ ಮಂತ್ರಗಳ ಕೊನೆಗೆ ‘ಸ್ವಾಹಾ’ ಕಾರವನ್ನು ಸೇರಿಸಿ ಸಮಿತ್, ಚರು, ಆಜ್ಯ ಮೊದಲಾದ ಹಮಿಸ್ಸುಗಳನ್ನು ಅಗ್ನಿಯಲ್ಲಿ ಹೋಮಿಸುವುದು. ಬ್ರಹ್ಮಚಾರಿಯು ಅಗ್ನಿಕಾರ್ಯವೆಂದೂ, ಗೃಹಸ್ಥನು ಔಪಾಸನ ವೈಶ್ವದೇವಾದಿ ಹೋಮವೆಂದೂ ಅಗ್ನಿಯೇ ಮೊದಲಾದ ದೇವತೆಗಳನ್ನು ಉದ್ದೇಶಿಸಿ ಹೋಮಿಸುವುದರಿಂದ ದೇವತೆಗಳು ಸಂಪ್ರೀತರಾಗಿ ಇಷ್ಟಾರ್ಥಗಳನ್ನು ಕೊಡುವರು ಮತ್ತು ಹೋಮಧೂಮ ಪರಿಮಳಗಳಿಂದ ವಾತಾವರಣ ಶುದ್ಧಿಯಾಗಿ ಆರೋಗ್ಯವಾಗುವುದು.

2 ಪಿತೃಯಜ್ಞ ವಿಚಾರ:
ಪಿತೃಗಳೆಂದರೆ ನಮ್ಮ ಜನ್ಮಕ್ಕೆ ಕಾರಣರಾದ ಮೃತರಾದ ತಂದೆತಾಯಿ ಮೊದಲಾದವರು. ಇವರಿಗೆ ‘ಸ್ವಧಾ’ ಶಬ್ದವನ್ನುಚ್ಚರಿಸಿ ಪಿಂಡಪ್ರದಾನ ತಿಲೋದಕ ತರ್ಪಣಾದಿಗಳನ್ನು ಕೊಡುವುದು.ಕೆಲವು ಸಂದರ್ಭಗಳಲ್ಲಿ ಅಗ್ನಿಯ ಮೂಲಕ ‘ಸ್ವಧಾನಮಃ ಸ್ವಾಹಾ’ ಎಂದು ಹೋಮಿಸುವುದೂ ಉಂಟು. ವೇದಮತ ಪ್ರಕಾರ ನಮಗೆ ಪಿತೃಗಳೇ ಪರಮ ಪೂಜ್ಯದೈವಗಳು. ಅವರಿಂದಲೇ ನಮ್ಮ ಜನ್ಮ ಬೆಳವಣಿಗೆ ಶಿಕ್ಷಣಗಳಾಗಿವೆ.ಆದುದರಿಂದ ಅವರಿಗೆ ನಾವು ಸದಾ ಕೃತಜ್ಞರಾಗಿರಬೇಕು.

3 ಭೂತಯಜ್ಞ ವಿವರಣ:
ಭೂತವೆಂದರೆ ಪಶುಪಕ್ಷಿಪ್ರಾಣಿಗಳೆಂದು ಇಲ್ಲಿ ತಿಳಿಯಬೇಕು. ನಾವು ಗೋವುಗಳನ್ನು ಪೂಜಿಸುವವರು. ಅವುಗಳಿಗೆ ನಮಸ್ಕಾರಪೂರ್ವಕ ಪೂಜಿಸಿ ಅನ್ನಪಾನಾದಿ ಆಹಾರಗಳನ್ನು ಕೊಡಬೇಕು. ಗೋವುಗಳಿಂದ ನಾವು ಅತ್ಯಾವಶ್ಯಕವಾದ ಹಾಲು ಮೊದಲಾದ ಅಸಂಖ್ಯವಸ್ತುಗಳನ್ನು ಪಡೆಯುತ್ತೇವೆ. ಹಾಗೆಯೇ ನಾವು ಉಪಕಾರ ಹೊಂದುವ ನಾಯಿ, ಬೆಕ್ಕು, ಆನೆ, ಕುದುರೆ, ಒಂಟೆ, ಕತ್ತೆ, ಆಡು, ಹಂದಿ ಮೊದಲಾದ ಪಶುಗಳನ್ನೂ, ಕಾಗೆ, ಕೋಳಿ, ಗಿಣಿ, ನವಿಲು ಮೊದಲಾದ ಪಕ್ಷಿಗಳನ್ನೂ ಸಾಕಬೇಕು. ಅಂದರೆ ಅವುಗಳಿಗೆ ಯೋಗ್ಯವಾದ ಅನ್ನಧಾನ್ಯಾದಿಗಳನ್ನು ತಿನ್ನಲು ಕೊಡಬೇಕು. ಈ ಪಶುಪಕ್ಷಿಗಳ ಹೆಸರು ಎಲ್ಲ ವರ್ಣದವರಿಗಾಗಿ ಬರೆಯಲ್ಪಟ್ಟಿದೆ. ಈ ಯಜ್ಞದಿಂದ ಪ್ರಾಣಿದಯೆ ವರ್ಧಿಸುತ್ತದೆ. ಜಗತ್ತಿನಲ್ಲಿ ತನಗಿಂತ ಕೀಳಾದವರನ್ನು ಅಲಕ್ಷಿಸದೆ ಅವರಲ್ಲಿಯೂ ಭಗವಂತನು ಅಂತರ್ಯಾಮಿಯಾಗಿದ್ದಾನೆಂಬುದನ್ನು ಸದಾ ಅನುಭವಿಸಲು ಈ ಯಜ್ಞವು ಸಹಕಾರಿಯಾಗುತ್ತದೆ.

4 ಮನುಷ್ಯಯಜ್ಞ ವ್ಯಾಖ್ಯಾನ:
ಇದು ‘ದಾನ’ ಪ್ರಧಾನವಾದುದು. ಮನೆಗೆ ಅತಿಥಿಯಾಗಿ ಬಂದವರಿಗೆ ಅನ್ನಪಾನಾದಿಗಳನ್ನು ದಾನ ಮಾಡಿ ಉಪಚರಿಸುವುದು ಪ್ರತಿಯೊಬ್ಬ ಗೃಹಸ್ಥನ ನಿತ್ಯ ಕರ್ತವ್ಯ.ಇಷ್ಟರಿಂದಲೇ ಮನುಷ್ಯಯಜ್ಞ ಮಾಡಿದಂತಾಗುವುದಿಲ್ಲ. ಮನೆ ಇಲ್ಲದವರಿಗೆ, ಆರ್ತರಿಗೆ, ದೀನರಿಗೆ, ರಿಕ್ತರಿಗೆ ಆರ್ಥಿಕ ಸಹಾಯ ಕೊಡುವುದು ಹಾಗೂ ಮಾನವರ ಉನ್ನತಿಗಾಗಿ ತಾನು ಜಗತ್ತಿನಲ್ಲಿ ಮಾಡಲು ಸಾಧ್ಯವಾಗುವ ಎಲ್ಲ ವಿಧದ ಸೇವಾಕಾರ್ಯಗಳೂ ಈ ಯಜ್ಞದಲ್ಲಿ ಅಡಕವಾಗಿವೆ.

5 ಬ್ರಹ್ಮಯಜ್ಞ ಅನುಷ್ಠಾನ:
ಇದರಲ್ಲಿ ‘ಓಂ’ಕಾರಕ್ಕೆ ಪ್ರಾಧಾನ್ಯವು. ‘ಓಮಿತ್ಯೇಕಾಕ್ಷರಂ ಬ್ರಹ್ಮ’ ಇದು ವೇದವಾಕ್ಯ. ವೇದಗಳಿಗೆ ಆದಿಯಲ್ಲಿ ಮತ್ತು ಅಂತ್ಯದಲ್ಲಿ ಓಂಕಾರವನ್ನು ಉಚ್ಚರಿಸಬೇಕೆಂಬ ನಿಯಮವಿದೆ. ‘ಯೋ ವೇದಾದೌ ಸ್ವರಃ ಪ್ರೋಕ್ತೋ ವೇದಾಂತೇ ಚ ಪ್ರತಿಷ್ಠಿತಃ’ ಈ ವೇದ ವಾಕ್ಯವೇ ಈ ನಿಯಮಕ್ಕೆ ಆಧಾರ. ಈ ಯಜ್ಞದಲ್ಲಿ ವೇದಶಾಸ್ತ್ರ ಪುರಾಣ ಇತಿಹಾಸಗಳನ್ನು ಅಂಶಾಂಶವನ್ನಾದರೂ ಹೇಳಬೇಕು. ಸಂಪೂರ್ಣವಾಗಿ ಕಲಿತಿರಬೇಕು. ಹಾಗೆಯೇ ಮುಂದಿನ ಪೀಳಿಗೆಯವರಿಗೆ ಕಲಿಸಬೇಕು.ಹೀಗೆ ಪ್ರತಿದಿನವೂ ಮಾಡುವುದರಿಂದ ತನ್ನ ಜ್ಞಾನಾಭಿವೃದ್ಧಿಯಾಗುವುದಲ್ಲದೆ ತನ್ನ ಇಂದ್ರಿಯಗಳನ್ನು ಹತೋಟಿಯಲ್ಲಿಡಲು, ಉತ್ತಮ ಮನಃಸ್ಥಿತಿಯನ್ನು ಹೊಂದಿ ವಿವೇಕ ಯೋಗ್ಯತೆಗಳಿಂದ ಕೂಡಿ ಬಾಳಲು ಮನುಷ್ಯನಿಗೆ ಸಾಧ್ಯವಾಗುತ್ತದೆ. ಹೀಗೆ ಈ ಯಜ್ಞವನ್ನು ಮಾಡುವುದರ ಮೂಲಕ ಋಷಿಗಳಿಂದ ಪ್ರಣೀತವಾದ ವೇದವಿದ್ಯೆಯ ರಕ್ಷಣೆ ಮತ್ತು ಪೋಷಣೆ ಮಾಡಿದಂತಾಗುತ್ತದೆ. ಹಾಗೆಯೇ ಋಷಿಮುನಿಗಳ ಸೇವೆ ಮತ್ತು ಪೂಜೆ ಮಾಡಿದಂತಾಗಿ ಯಜ್ಞಕರ್ತನು ಅವರ ಅನುಗ್ರಹಕ್ಕೂ ಪಾತ್ರನಾಗುತ್ತಾನೆ. ಈ ರೀತಿ ಪ್ರತಿದಿನ ಪಂಚಮಹಾಯಜ್ಞಗಳನ್ನು ಮಾಡಿ ದೇವಋಣ, ಪಿತೃಋಣ, ಋಷಿಋಣಗಳೆಂಬ ಮೂರು ತರದ ಸಾಲಗಳನ್ನು ತೀರಿಸಿ ಕೃತಾರ್ಥರಾಗೋಣ.

‘ರವಿಶಶಿಕುಜಸೌಮ್ಯಾಃ ಶಕ್ರವಂದ್ಯಶ್ಚಶುಕ್ರೋ | ದಿನಕರಸುತರಾಹೂಕೇತವಃ ಕ್ಷೇತ್ರಪಾಲಾಃ ||
ಕಮಲಜಹರಿರುದ್ರಾಃ ಪಾರ್ವತೀ ವಿಘ್ನರಾಜಃ | ಸಕಲಮುನಯ ಏತೇ ಮಂಗಲಂ ನೋ ದಿಶಂತು ||

              || ಶ್ರೀ ಕೃಷ್ಣಾರ್ಪಣಮಸ್ತು ||

Facebook Comments Box