|| ಹರೇ ರಾಮ ||
ಕಣ್ಣೆಂದರೆ ಭಾವಸಾಗರ..!
ತೀರದಲ್ಲಿ ನಿಂತವನಿಗೆ ಕೆಲವು ತರಂಗಗಳನ್ನು ಎಣಿಸಲು ಮಾತ್ರ ಸಾಧ್ಯವಷ್ಟೆ..!

ಮುಂದುವರೆಯಲಿ ಕಣ್ಣೆಂಬ ಕಣ್ಣಿಗೆ ಮಾತೆಂಬ ಮಾತಿನ ಸೇವೆ..!!

ಸೂರ್ಯಚಂದ್ರಾಗ್ನಿಗಳೆಂಬ ಮೂರು ಕಣ್ಣುಗಳಿಂದ ಮೆರೆಯುವ ಮುಕ್ಕಣ್ಣನ ಎರಡನೆಯ ಕಣ್ಣೇ ಚಂದ್ರ..

ಚಂದ್ರ-ಗ್ರಹಣದಲ್ಲಿ ಸೃಷ್ಟಿಯೇ ತನ್ಮಯವಾಗುವ ಮುನ್ನ  ನಮ್ಮ ಚಿತ್ತ ಸರಿಯಲಿ  ವಿಚಾರ-ಗ್ರಹಣದತ್ತ  . . .

ಸೂರ್ಯ-ಚಂದ್ರ ನೇತ್ರ . . . !

  1. ಭಾವುಕನಿಗೆ ಕಣ್ಮುಚ್ಚಿದರೆ ಅಲ್ಲಿಯೇ ದೇವರ ಕೋಣೆ…!!
  2. ಒಬ್ಬನೇ ವ್ಯಕ್ತಿ ಬೇರೆ ಬೇರೆಯವರಿಗೆ ಬೇರೆ ಬೇರೆ ವ್ಯಕ್ತಿತ್ವವಾಗಿ – ತಂದೆಯಾಗಿ- ಮಗನಾಗಿ, ಅಣ್ಣನಾಗಿ- ತಮ್ಮನಾಗಿ, ಮಿತ್ರನಾಗಿ- ಶತ್ರುವಾಗಿ, ಗುರುವಾಗಿ-ಶಿಷ್ಯನಾಗಿ . . . ಕಾಣುವುದು ದೃಷ್ಟಿ ಮಹಿಮೆಯಲ್ಲವೇ.?
  3. ಭೂಮಿಯ ಗುರುತ್ವಾಕರ್ಷಣೆಯ ವಲಯದೊಳಗಿನಿಂದ ನೋಡಿದರೆ  ಸೂರ್ಯ ಉದಯಿಸಿದಂತೆ . . . ಅಸ್ತಮಿಸಿದಂತೆ ತೋರುತ್ತದೆ . .
    ಭೂಮಿಯ ಆಕರ್ಷಣ ವಲಯವನ್ನು ಮೀರಿ ಮೇಲೇರಿದರೆ ಅಲ್ಲಿ ಉದಯಾಸ್ತಗಳಿಲ್ಲ..!
    ಅನವರತ ಸೂರ್ಯದರ್ಶನ..!!
    ಹಾಗೆಯೇ ಭೌತಿಕ ಆಕರ್ಷಣೆಗೆ ಒಳಪಟ್ಟಿರುವಾಗ ಹುಟ್ಟು-ಸಾವುಗಳು..
    ಭೂಮಿಯ ಸೆಳೆತವನ್ನು ಮೀರಿ ಮೇಲೇರಿದವನು ಅಜರಾಮರನಾಗಿ ಆನಂದದಲ್ಲಿ ಬೆಳಗುತ್ತಿರುತ್ತಾನೆ..!!!
  4. ಕಣ್ಣೆಂದರೆ, ಅಂತರಂಗ ಸಾಮ್ರಾಜ್ಯ ಮತ್ತು ಬಹಿರಂಗ ಸಾಮ್ರಾಜ್ಯಗಳ ನಡುವಿನ ಸೀಮಾರೇಖೆ..
  5. ಬರಿಗಣ್ಣಿನ ವ್ಯಾಪ್ತಿ ಬಹಳ ಸೀಮಿತವಾದುದು.
    ಯಾವ ವಸ್ತುವನ್ನೂ ಅದು ಪೂರ್ಣವಾಗಿ ನೋಡಲಾರದು..
    ಮುಂಭಾಗ ಕಂಡರೆ – ಹಿಂಭಾಗ ಕಾಣದು.
    ಹೊರ ಭಾಗ ಕಾಣಬಹುದು, ಆದರೆ ಒಳಭಾಗ ಕಾಣದು.
    ಬೆಳಕು ಕಡಿಮೆಯಾದರೂ ನೋಡಲಾರದು.. ಬೆಳಕು ಹೆಚ್ಚಾದರೂ ನೋಡಲಾರದು..!
    ಅತಿ ಚಿಕ್ಕ ವಸ್ತುವನ್ನೂ ನೋಡಲಾರದು – ಅತಿ ದೊಡ್ಡ ವಸ್ತುವನ್ನೂ ನೋಡಲಾರದು.!
    ಮಧ್ಯೆ ಸಣ್ಣ ತಡೆಯಿದ್ದರೂ ನೋಡಲಾರದು. ತಡೆಯಿಲ್ಲದಿದ್ದರೂ, ವಸ್ತು ಬಹಳ ದೂರದಲ್ಲಿದ್ದರೆ ನೋಡಲಾರದು.!
    ಮಿತಿಮೀರಿ ಸನಿಹವಿದ್ದರೂ ನೋಡಲಾರದು..
    ಕಾಮಾಲೆ ಬಂದರಂತೂ ಇರುವ ಬಣ್ಣವೇ ಬೇರೆ, ತೋರುವ ಬಣ್ಣವೇ ಬೇರೆ.!
    ಎಲ್ಲಕ್ಕಿಂತ ಮಿಗಿಲಾಗಿ ತನ್ನನ್ನೇ ತಾನು ನೋಡಲಾರದು.! ನೋಡುವವನನ್ನೂ ನೋಡಲಾರದು..!!
    ಇಷ್ಟು ಮಿತಿಗಳಿರುವ ಕಣ್ಣಿಗೆ ಕಾಣಲಿಲ್ಲವೆಂದಮಾತ್ರಕ್ಕೆ ದೇವರೇ ಇಲ್ಲವೆನ್ನುವಾಗ ಮೂರ್ಖತನ ತನ್ನ ಚರಮಸೀಮೆಯನ್ನು ಮುಟ್ಟಿತಲ್ಲವೇ…..?!!
  6. ಕಣ್ಣಿನ ಮೇಲಿನ ರೆಪ್ಪೆ ದೇವನಾದರೆ, ಕೆಳಗಿನ ರೆಪ್ಪೆ ಜೀವ..!
    ಹಾಗೆಯೇ ಮೇಲಿನ ರೆಪ್ಪೆ ಪುರುಷನಾದರೆ, ಕೆಳಗಿನದು ಪ್ರಕೃತಿ.
    ಧ್ಯಾನದಲ್ಲಿ ಕಣ್ಮುಚ್ಚಿದಾಗ ಆಗುವುದು ಇವರ ದಿವ್ಯ ಸಮಾಗಮ-ಅದ್ವೈತ..!
  7. ಸಂಸಾರಿಗೆ ಕಣ್ತೆರೆದರೆ ಇಂದ್ರಿಯ ರಾಜ್ಯ, ಕಣ್ಮುಚ್ಚಿದರೆ ಮನೋರಾಜ್ಯ..!
    ಸಂತನಿಗಾದರೋ ಕಣ್ಮುಚ್ಚಿದರೆ ವಿಶ್ವಂಭರನ ದರ್ಶನ.!
    ಕಣ್ತೆರೆದರೆ ಆತನದೇ ವಿಶ್ವರೂಪದ ದರ್ಶನ..!!
  8. ” ನಯನ ಯುಗದಿಂ ಜಗವ ಪೊರೆದು ನಿಟಿಲಾಕ್ಷಿಯಿಂ ಲಯವಡಿಸುವುದದೇನು ಶಿವಯೋಗಲೀಲೆ..? ” (-ಮಂಕುತಿಮ್ಮನ  ಕಗ್ಗ)
    ನಮ್ಮನ್ನು ಹುಟ್ಟಿಸಲು, ಪಾಲಿಸಲು, ಶಿವನಿಗೆ ಎರದು ಕಣ್ಣುಗಳು ಬೇಕು..!
    ಸುಟ್ಟುರುಹಲು ಮೂರನೆಯ ಕಣ್ಣೊಂದೇ ಸಾಕು..!!
    ಯಾವ ಕಣ್ಣು ತೆರೆಸಬೇಕೆಂಬುದು ನಮ್ಮ ಕೈಲಿದೆ.!!!
  9. ಕಣ್ಣೆರಡಾದರೂ – ದೃಷ್ಟಿಯೊಂದೇ..!
    ದ್ವೈತದೊಳಗೊಂದು ಅದ್ವೈತ…
    ಕಣ್ಣುಗಳಲ್ಲಿ ಹುದುಗಿದೆ ಸೃಷ್ಟಿರಹಸ್ಯ..!!
  10. ಮನಸ್ಸಿಗೂ ದೃಷ್ಟಿಗೂ ನಿಕಟ ಸಂಬಂಧವಿದೆ..
    ಮನಸ್ಸು ಚಲಿಸಿದರೆ ದೃಷ್ಟಿ ಚಲಿಸುವುದು – ದೃಷ್ಟಿ ಚಲಿಸಿದರೆ ಮನಸ್ಸು ಚಲಿಸುವುದು..
    ದೃಷ್ಟಿಯನ್ನು ಒಂದೆಡೆ ಸ್ಥಿರಗೊಳಿಸಿದರೆ ಮನಸ್ಸು ತಾನೇ ತಾನಾಗಿ ಏಕಾಗ್ರಗೊಳ್ಳುವುದು, ತನ್ಮಯಗೊಳ್ಳುವುದು..!
    ಇಷ್ಟಾದರೆ ಭುಕ್ತಿ-ಮುಕ್ತಿಗಳು ನಿಮ್ಮ ಅಂಗೈಯಲ್ಲಿ…!!
    ಇದಕ್ಕೆ ಯೋಗದಲ್ಲಿ ತ್ರಾಟಕ ವಿದ್ಯೆ ಎಂದು ಹೆಸರು.
  11. ಧನುರ್ದಾಸ ಆಚಾರ್ಯ ರಾಮಾನುಜರ ಶಿಷ್ಯರಲ್ಲೊಬ್ಬ.
    ರಾಮಾನುಜರಿಗೆ ಆತನೆಂದರೆ ಬಹಳ ಪ್ರೀತಿ..!
    ಬೇರೆ ಶಿಷ್ಯರಿಗೆ ಅಸೂಯೆ. ಒಮ್ಮೆ, ಇತರ ಶಿಷ್ಯರೆಲ್ಲರೂ ಸೇರಿಕೊಂದು ಧನುರ್ದಾಸನಿಗಿದ್ದ ವೇಶ್ಯಾ ಸಹವಾಸದ ಬಗ್ಗೆ ರಾಮಾನುಜರಲ್ಲಿ ದೂರಿತ್ತರು.
    ರಾಮಾನುಜರು ಧನುರ್ದಾಸನನ್ನು ಪ್ರಶ್ನಿಸಿದರು: ನೀನು ವೇಶ್ಯಾ ಸಹವಾಸ ಮಾಡುವುದು ನಿಜವೇ?
    ಧನುರ್ದಾಸ: ನಿಜ!
    ರಾ: ಅವಳ ಯಾವ ವಿಷಯದಲ್ಲಿ ನಿನಗೆ ಆಕರ್ಷಣೆ?
    : ಕಣ್ಣುಗಳು.
    ರಾ: ಅದಕ್ಕಿಂತ ಸುಂದರವಾದ ಕಣ್ಣುಗಳನ್ನು ನಿನಗೆ ತೋರಿಸಲೇ?

    ಧನುರ್ಧಾಸ ರಾಮಾನುಜರನ್ನು ಹಿಂಬಾಲಿಸಿದ. ರಾಮಾನುಜರು ಆತನನ್ನು ದೇವಸ್ಥಾನದೊಳಗೆ ಕರೆದುಕೊಂದು ಹೋಗಿ ಶ್ರೀ ರಂಗನಾಥನ ಮನೋಹರ ನೇತ್ರಗಳನ್ನು ತೋರಿಸಿದರು.
    ರಂಗನಾಥನ ದೃಷ್ಟಿಸಿಂಧುವಿನಲ್ಲಿ ಧನುರ್ದಾಸನ ದೃಷ್ಟಿಬಿಂದು ಸೇರಿಹೋಯಿತು!
    ಸಿಂಧುವಿನಲ್ಲಿ ಸೇರಿದ ಬಿಂದು ಮತ್ತೆ ಹಿಂದಿರುಗಲುಂಟೆ?!
    ಮತ್ತೊಮ್ಮೆ ಅನ್ಯಸಂಗ ಮಾಡಲುಂಟೆ…?!
    ನಯನದ ಆಕರ್ಷಣೆ ನಾರಾಯಣನಲ್ಲಿ ಪರ್ಯವಸಾನವಾಯಿತು…!!!
  12. ಸತ್ವ, ರಜಸ್ಸು, ತಮಸ್ಸು ಎಂಬ ಮೂರು ಮಹಾಗುಣಗಳೇ ಮೂರು ಲೋಕಕ್ಕೂ ಮೂಲಾಧಾರವಾಗಿವೆ.
    ತ್ರಿಗುಣಾತ್ಮಕವೀ ಜಗತ್ತು….!!
    ಇವುಗಳಲ್ಲಿ ಸತ್ವ ಬಿಳಿ, ರಜಸ್ಸು ಕೆಂಪು, ತಮಸ್ಸು ಕಪ್ಪು.!
    ಕಣ್ಣಿನಲ್ಲಿ ಮೂರೂ ವರ್ಣಗಳ ಸಮಾವೇಶವಿದೆ..
    ಕಣ್ಣುಗಳ ಸೀಮೆ ಕೆಂಪಾದರೆ, ನಡುವಿನ ಪಾಪೆ ಕಪ್ಪು..
    ಇವೆರಡಕ್ಕೂ ಆಶ್ರಯ ನೀಡುವ ಕಣ್ಣಿನ ಮತ್ತುಳಿದ ಭಾಗ ಸ್ವಚ್ಛ ಬಿಳಿ…!!
    ಕಣ್ಮುಚ್ಚಿದರೆ ಅನುಭವಕ್ಕೆ ಬರುವ ತಮಸ್ಸು ತಮೋಗುಣ..
    ಕಣ್ಣುಗಳ ಬೆಳಕು, ಅವುಗಳು ಮಾಡುವ ದರ್ಶನ – ಸತ್ವಗುಣ..
    ಕಣ್ಮುಚ್ಚಿದಾಗಲೂ ತೆರೆದಾಗಲೂ, ನಿರಂತರ ಉಂಟಾಗುವ ಪಾಪೆಗಳ ಚಲನೆ ,ರಜೋಗುಣ…!
    ಹೀಗೆ ತ್ರಿಗುಣಾತ್ಮಿಕೆ ಪ್ರಕೃತಿ ಮಾತೆಯ ಪ್ರಕಟೀಕಾರವೇ ಕಣ್ಣುಗಳು…!!
  13. ನಮ್ಮಲ್ಲಿ ತಿಳುವಳಿಕೆಯನ್ನುಂಟುಮಾಡುವ ಇಂದ್ರಿಯಗಳು ಐದು.
    ವಸ್ತುವೊಂದು ನಮ್ಮೆದುರಿದ್ದರೆ ಅದರ ರೂಪದ ತಿಳಿವಳಿಕೆ ಕಣ್ಣಿನಿಂದ . . .
    ಧ್ವನಿಯ ಪರಿಚಯ ಕಿವಿಯಿಂದ, ಅದರ ಪರಿಮಳ ಗೊತ್ತಾಗುವುದು ಮೂಗಿನಿಂದ. . .
    ರುಚಿ ಗೊತ್ತಾಗುವುದು ನಾಲಿಗೆಯಿಂದ,
    ಸ್ಪರ್ಶ (ಮೃದುವೋ, ಕಠಿಣವೋ, ಬಿಸಿಯೋ, ತಣ್ಣಗೋ, ) ಗೊತ್ತಾಗುವುದು ಚರ್ಮದಿಂದ.
    ಇನ್ನು ನಮ್ಮ ದೇಹದ ಕ್ರಿಯೆಗಳಿಗೆ ಸಹಕರಿಸುವ ಇಂದ್ರಿಯಗಳು ಐದು.
    ನಡೆಯಲು ಕಾಲುಗಳು, ಆದಾನ – ಪ್ರದಾನಕ್ಕೆ ಕೈಗಳು, ಮಾತಾಡಲು ಬಾಯಿ, ಜಲಮಲಗಳನ್ನು ಹೊರಹಾಕಲು ಎರಡು ವಿಸರ್ಜನೇಂದ್ರಿಯಗಳು..
    ಹೀಗೇ ಈ ಹತ್ತು ಇಂದ್ರಿಯಗಳು ನಮ್ಮ ಶರೀರದ ಸಕಲ ವ್ಯವಸ್ಥೆಗಳನ್ನು ನಿರ್ವಹಿಸುತ್ತವೆ.
    ಇವುಗಳ ಪೈಕಿ ಸರ್ವೋಚ್ಚ ಸ್ಥಾನ ಕಣ್ಣಿನದೇ.
    ಅದು ಇರುವ ಸ್ಥಳವನ್ನು ಒಮ್ಮೆ ಗಮನಿಸಿ, ಎಲ್ಲ ಇಂದ್ರಿಯಗಳಿಗಿಂತ ಮೇಲೆ, ಮೆದುಳನ್ನು ಹೊರತುಪಡಿಸಿ ಮತ್ತೆಲ್ಲ ಅಂಗಗಳಿಗಿಂತ ಮೇಲೆ..
    ಶಿರಸ್ಸೆಂಬ ಸಿಂಹಾಸನದಲ್ಲಿ ಕುಳಿತು, ಇಂದ್ರಿಯಗಳ ರಾಜನಾಗಿ ಮೆರೆಯುವುದಲ್ಲವೇ…?
  14. ದೇಹವೆಂಬ ದೇಶಕ್ಕೆ ಮಹಾ ಮಸ್ತಿಷ್ಕವೇ ರಾಜ! ಮೆದುಳಿನ ನೇರ ಎದುರಿರುವ ಏಕೈಕ ಇಂದ್ರಿಯವೆಂದರೆ ಕಣ್ಣು.
    ನಿಜಾರ್ಥದಲ್ಲಿ ರಾಜ ಪ್ರತಿನಿಧಿ ಅದು.. !
  15. ಸತ್ತ ಮೇಲೆ ನೇತ್ರದಾನ ಮಾಡುವವರ ಕಾಲವಿದು..!
    ಆದರೆ, ಯಾಚಿಸಿದ ಬ್ರಾಹ್ಮಣನೊಬ್ಬನಿಗೆ ಬದುಕಿರುವಾಗಲೇ ತನ್ನ ಕಣ್ಣುಗಳನ್ನು ಕಿತ್ತುಕೊಟ್ಟು, ದಾನಶೂರತೆಯನ್ನು ಮೆರೆದ – ರಾಜಾ ಅಲರ್ಕನ ಮುಂದೆ ನಾವೆಷ್ಟು ಕುಬ್ಜರಲ್ಲವೇ..?
  16. ಯಾರಿಗೂ ಬೇಡವಾದವನು ಸರ್ವಮಾನ್ಯನಾಗುವುದು ಹೇಗೆ…?
    ಬೇಡರ ಕಣ್ಣಪ್ಪನ ಹಾಗೆ…..!!
    ಮೊದಲು ಅವನು ಮೃಗಗಳಿಗೂ “ಬೇಡ“… ಮುಕ್ಕಣ್ಣನಿಗೆ ತನ್ನ ಕಣ್ಣನ್ನೇ ಕಿತ್ತುಕೊಟ್ಟ ನಂತರ ,”ಭಕ್ತ ಶಿರೋಮಣಿ” ಎನಿಸಲಿಲ್ಲವೇ..?
  17. ಸಹಸ್ರಕಮಲಗಳಿಂದ ಹರನ ಪೂಜೆ ಮಾಡಲೆಳಸಿದನಂತೆ ಹರಿ.
    ಒಂದು ಕಮಲ ಕಡಿಮೆಯಾದಾಗ, ತನ್ನ ನಯನ ಕಮಲವನ್ನೇ ಅರ್ಪಿಸಿದನಂತೆ.!
    ಹರಿಹರರ ಈ ಪೂಜೆಯ ಆಟದಲ್ಲಿ ನಮಗೊಂದು ಪಾಠವಿದೆ..
  18. ಅವಯವಗಳಲ್ಲಿ ಕಾಲು ಎಲ್ಲಕ್ಕಿಂತ ಕೆಳಗಿದೆ, ಕಣ್ಣು ಎಲ್ಲಕ್ಕಿ೦ತ ಮೇಲಿದೆ..
    ಯಾಕೀ ತಾರತಮ್ಯ….?
    ಕಾಲು ಮತ್ತು ಕಣ್ಣುಗಳ ಕಾರ್ಯವೈಖರಿಯಲ್ಲಿ, ಕಂಪನಿಯೊಂದರ ಸಾಮಾನ್ಯ ಕಾರ್ಮಿಕ ಮತ್ತು ಎಮ್.ಡಿ ಗಳ ಮಧ್ಯೆ ಇರುವ ಅಂತರವಿದೆ.
    ಕಾಲಿಗಿಂತ ಅದೆಷ್ಟೋ ವೇಗದಲ್ಲಿ ಕಣ್ಣು ಸಂಚರಿಸಬಲ್ಲದು. ಕಾಲು ಹೋಗದಲ್ಲಿಯೂ ಹೋಗಬಲ್ಲದು..!!
    ಕಾಲು ಮಾತ್ರವಲ್ಲ,ಸಮಗ್ರ ಶರೀರದ ಬಗ್ಗೆಯೂ ಚಿಂತಿಸಿ ಸಲಹೆ ನೀಡಬಲ್ಲದು…!!
    ಕಾಲಿನ ಯೋಗಕ್ಷೇಮವನ್ನೂ ಚಿಂತಿಸಿ, ಹೆಜ್ಜೆ ಎಲ್ಲಿಡಬೆಕು – ಎಲ್ಲಿಡಬಾರದು – ಎಂಬುದರ ಕುರಿತು ಮಾರ್ಗದರ್ಶನ ನೀಡಬಲ್ಲದು.
    ಕಾಲಿನಮುಳ್ಳು ತೆಗೆಯಲು ಕಣ್ಣಿನ ಮಾರ್ಗದರ್ಶನವೇ ಬೇಕಲ್ಲವೇ..?
  19. ಪ್ರಕಾಶಮಾನೇ ಪರಮಾತ್ಮ ಭಾನೌ |
    ನಶ್ಯತ್ಯವಿದ್ಯಾ ತಿಮಿರೇ ಸಮಸ್ತೇ||
    ಅಹೋ ಬುಧಾ ನಿರ್ಮಲ ದೃಷ್ಟಯೋಪಿ|
    ಕಿಂಚಿನ್ನ ಪಶ್ಯಂತಿ ಜಗತ್ ಸಮಗ್ರಮ್||
    (ಪರಮಾತ್ಮನೆಂಬ ಸೂರ್ಯ ಅತಿಶಯವಾಗಿ ಬೆಳಗುತ್ತಿದ್ದರೂ,
    ಅಜ್ಞಾನವೆಂಬ ಕತ್ತಲು ಕರಗಿ ಹೋಗಿದ್ದರೂ. .
    ತನ್ನೆಲ್ಲಾ ಕಲ್ಮಶಗಳನ್ನು ಕಳೆದುಕೊಂಡು ದೃಷ್ಟಿ ಪರಿಶುದ್ಧವಾಗಿದ್ದರೂ. .
    ಅದೇನಾಶ್ಚರ್ಯ…!!
    ಪರಮಜ್ಞಾನಿಗಳ ಕಣ್ಣಿಗೆ ಈ ಜಗ ಕಾಣಿಸುತ್ತಲೇ ಇಲ್ಲವಲ್ಲ..!)
    – ಶ್ರೀ ಶಂಕರಾಚಾರ್ಯರ ಯೋಗ ತಾರಾವಳಿ
    ವಸ್ತುಗಳನ್ನು ನೋಡಲು – ಬೆಳಕಿರಬೇಕು, ಕತ್ತಲಿರಬಾರದು, ದೃಷ್ಟಿ ಚೆನ್ನಾಗಿರಬೇಕು, ನೋಡುವವನಿಗೆ ತಿಳುವಳಿಕೆಯಿರಬೇಕು.!
    ಇವೆಲ್ಲವೂ ಇದ್ದರೂ, ಪರಮಜ್ಞಾನಿಗಳಿಗೆ ಏನೂ ಕಾಣಿಸುತ್ತಿಲ್ಲವೆನ್ನುವುದು ಇಲ್ಲಿ ಮೇಲ್ನೋಟಕ್ಕೆ ಕಾಣುವ ವಿರೋಧ.
    ಸಂಸಾರವನ್ನು ನೋಡುವ ಕಣ್ಣುಗಳಿಗೆ ಪರಮಾತ್ಮ ಹೇಗೆ ಕಾಣಿಸುವುದಿಲ್ಲವೋ, ಹಾಗೆಯೇ ಕಣ್ಣು ಪರಮಾತ್ಮನನ್ನು ನೋಡತೊಡಗಿದರೆ ಜಗತ್ತೇ ಮರೆಯಾಗಿಬಿಡುವುದು.
    ಆ ಅವಸ್ಥೆಯಲ್ಲಿ ಆನಂದವಲ್ಲದೆ ಬೇರೇನೂ ತಿಳಿಯುವುದಿಲ್ಲವೆ೦ಬುದು ವಿರೋಧ ಪರಿಹಾರ..!
  20. ಬ್ರಹ್ಮದೇವ ಶ್ರೀರಾಮನನ್ನು ಸ್ತುತಿಸುವಾಗ ಬರುವ ಒಂದು ಮಾತು:
    ಉನ್ಮೇಷಸ್ತೇ ಭವೇದ್ರಾತ್ರಿಃ ನಿಮೇಷಸ್ತೇ ಭವೇದ್ದಿವಾ
    (ಹೇ ಪ್ರಭು, ನೀ ಕಣ್ಮುಚ್ಚಿದರೆ ಅದು ವಿಶ್ವಕ್ಕೇ ರಾತ್ರಿ, ನೀ ಕಣ್ತೆರೆದರೆ ವಿಶ್ವಕ್ಕೆ ಅದು ಹಗಲು…!!)
  21. ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ |
    ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
    (ತನು ಮನಗಳು ಅದೆಷ್ಟೇ ಅಪವಿತ್ರವಾಗಿರಲಿ,
    ಮೈಲಿಗೆಯ ಪರಾಕಾಷ್ಟೆಯನ್ನೇ ತಲುಪಿರಲಿ,
    ಒಂದೇ ಒಂದು ಬಾರಿ ಪರಮ ಪುರುಷನ ಕಮಲದಳದಂತಿರುವ ನಯನಗಳನ್ನು ನೆನಪಿಸಿಕೊಂಡರೆ ಅಂತರಂಗ ಹಾಗೂ ಬಹಿರಂಗಗಳೆರಡೂ ಪರಿಶುದ್ಧವಾಗುವುವು.. !
    )
  22. ಪರಿವ್ರಾಟ್ ಕಾಮುಕ ಶುನಾಮ್ ಏಕಸ್ಯಾಮ್ ಪ್ರಮದಾ ತನೌ |
    ಕುಣಪಃ ಕಾಮಿನೀ ಭಕ್ಷಂ ಇತಿ ತಿಸ್ರೋ ವಿಕಲ್ಪನಾಃ ||
    (ಒಬ್ಬ ವಿರಕ್ತನ ಕಣ್ಣಿನಲ್ಲಿ ಸ್ತ್ರೀ ಶರೀರ ಪಂಚಭೂತಗಳ ಒಂದು ಬಗೆಯ ಸಮ್ಮಿಲನ ಮಾತ್ರ..!
    ಅದುವೇ ಒಬ್ಬ ಭೋಗಾಸಕ್ತನ ದೃಷ್ಟಿಯಲ್ಲಿ ಕಾಮಿನಿಯಾಗಿ ತೋರಿದರೆ, ಒಂದು ನಾಯಿಯ ಕಣ್ಣಿಗೆ ಅದೊಂದು ತಿಂಡಿ ಮಾತ್ರ…!!
    )
  23. “ದೃಷ್ಟಿಪೂತಂ ನ್ಯಸೇತ್ ಪಾದಂ”
    (ಕಾಲಿಡುವಲ್ಲಿ ಮೊದಲು ಕಣ್ಣಿಡು)
    ಕಾಲುಗಳ ಪಥದಲ್ಲಿ ಕಲ್ಲು-ಮುಳ್ಳುಗಳಿರಬಹುದು,
    ಹಳ್ಳ-ದಿಣ್ಣೆಗಳಿರಬಹುದು, ಕವಲುದಾರಿಗಳಿರಬಹುದು.
    ಆದುದರಿಂದ, ಕಾಲು ಸಂಚರಿಸಬೇಕಾದ ಪ್ರದೇಶವನ್ನು ಕಣ್ಣು ಮೊದಲು ಪರೀಕ್ಷಿಸಿ – “Tested OK“ಎಂದು certify ಮಾಡಿದ ಮೇಲೆ ತಾನೇ ಹೆಜ್ಜೆಯಿಡಬೇಕಾದದ್ದು..!
    ಈ ಮಾತುಗಳು ಜೀವನ ಪಥದಲ್ಲಿಡುವ ಹೆಜ್ಜೆಗಳಿಗೂ ಅನ್ವಯವಾಗುತ್ತವೆ..
  24. ದೇಹವೆಂಬ ದೇಶದಲ್ಲಿ ವೇದನೆಯೆಲ್ಲೇ ಆಗಲಿ, ಅಳುವುದು ಕಣ್ಣೇ ಅಲ್ಲವೇ..?
    ಕಾಲಿಗೆ ಮುಳ್ಳು ಚುಚ್ಚಿದರೆ ಕಣ್ಣು ಕಣ್ಣೀರಿಡುತ್ತದೆ, ಮಾತ್ರವಲ್ಲ..ಮುಳ್ಳು ತೆಗೆಯುವಲ್ಲಿ ಅಗತ್ಯವಾದ ಮಾರ್ಗದರ್ಶನವನ್ನೂ ಕೈಗಳಿಗೆ ನೀಡುತ್ತದೆ..
    ನಾಯಕನಾದವನು ಹೀಗಿರಬೇಕು..
    ಆತನಿಗೆ ದೇಶವು ತನ್ನ ದೇಹದಂತೆಯೇ ಆಗಬೇಕು..
    ದೇಶದಲ್ಲಿ ಎಲ್ಲಿ ಯಾರಿಗೆ ಆಪತ್ತುಂಟಾದರೂ ಆತ ಕರಗಬೇಕು..
    ಬಂದ ಆಪತ್ತನ್ನು ಪರಿಹರಿಸುವಲ್ಲಿ ಅಗತ್ಯ ಮಾರ್ಗದರ್ಶನವೀಯಬೇಕು..
    ನಾಯಕ ಹೀಗಿದ್ದರೆ ಆತನನ್ನು ದೇಶದ ‘ ಕಣ್ಣು ‘ ಎನ್ನಬಹುದಲ್ಲವೇ . . . ?
ಕಾಣುವ ಕಣ್ಣಿನ ಒಳಗೆ ಅದೆಷ್ಟು ಕಣ್ಣುಗಳು..!!
ಬಗೆದಷ್ಟೂ ಬಗೆ-ಬಗೆಯ ಭಾವಗಳು..!!
ನೋಡುತ್ತಲೇ ಇರೋಣವೇ..?
(ಮುಂದುವರಿಯುವುದು…)

Facebook Comments Box