ಡಿ.೨೯ – ಇಂದು ಯಾತ್ರೆ ಅಲ್ವರಿನಿಂದ ಹೊರಟು, ರಾಜಗಢ, ಬಾಂದೀ, ಕುಂಯೀ, ದೌಸಾ ಮಾರ್ಗವಾಗಿ ರಾಜಸ್ಥಾನದ ರಾಜಧಾನಿ ಜೈಪುರವನ್ನು ತಲುಪಿತು.
ರಾಜಗಢದಲ್ಲಿ ಸಂತ ಹರಿಹರಾನಂದ ಜೀ ಬ್ರಹ್ಮಚಾರಿ, ಪೂ. ರಾಮಭಾರತೀ ಮಹಾರಾಜ್ ಮತ್ತು ಪೂ. ನಿರಂಜನನಾಥ ಅವಧೂತ ಜೀ ಇವರು ವೇದಿಕೆಯಲ್ಲಿ ದಿವ್ಯ ಉಪಸ್ಥಿತಿ ನೀಡಿದ್ದರು. ಮೂಲತಃ ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು, ಭಾರತದ ಭೂಮಿ ಹೇಗೆ ಬರಡಾಗುತ್ತಿದೆ, ವಿಷಯುಕ್ತವಾಗುತ್ತಿದೆ ಎಂಬುದನ್ನು ವಿವರಿಸಿದರು ಮತ್ತು ಗೋ ಗ್ರಾಮ ತತ್ತ್ವಕ್ಕೆ ಶರಣಾಗಲು ಹಿತೋಕ್ತಿ ನೀಡಿದರು.
ದಿಲ್ಲಿಯಿಂದ ಬಂದ ವಿಶೇಷಜ್ಞ ಶ್ರೀ ಅಲೋಕ ಗುಪ್ತ ಇವರು ವೈಜ್ಞಾನಿಕ ಕಾರಣಗಳನ್ನು ನೀಡಿ, ಚಿಕ್ಕ ಮಕ್ಕಳು ತಾಯಿಯ ಹಾಲಿನಿಂದ ವಂಚಿತರಾದಲ್ಲಿ ಖಂಡಿತಾ ಅವರಿಗೆ ವಿದೇಶೀ ಹಸುವಿನ ಹಾಲನ್ನು ಕುಡಿಸದಿರುವಂತೆ ಸಲಹೆ ನೀಡಿದರು. ವಿದೇಶೀ ಹಸುವಿನ ಹಾಲಿನಲ್ಲಿ ಕೆಲವು ಅಂಶಗಳು ಚಿಕ್ಕ ವಯಸ್ಸಿನಲ್ಲಿ ಸಕ್ಕರೆ ಖಾಯಿಲೆ ಬರಿಸುತ್ತದೆ ಮತ್ತು ಆ ಮಕ್ಕಳಿಗೆ ಮುಂದೆ ರಕ್ತದೊತ್ತಡ ಖಾಯಿಲೆ ಬರುವುದು ಸರ್ವೇಸಾಮಾನ್ಯ ಎಂದರು. ವಿಟಾಮಿನ್ ಡಿ ವಿಪುಲವಾಗಿರುವ ದೇಶೀಯ ಹಸುವಿನ ಹಾಲನ್ನು ಮಕ್ಕಳಿಗೆ ನೀಡುವಂತೆ ಸಲಹೆ ಇತ್ತರು. ಎಮ್ಮೆಯ ಹಾಲಿನಲ್ಲಿ ಬುದ್ಧಿಕಾರಕ ಅಂಶಗಳಿಲ್ಲದಿರುವುದರಿಂದ ಅದನ್ನು ಮಕ್ಕಳಿಗೆ ನೀಡುವುದು ಶ್ರೇಯಸ್ಕರವಲ್ಲವೆಂದು ಮಾತೆಯರಿಗೆ ಕಿವಿಮಾತು ಹೇಳಿದರು.
ಯಾತ್ರೆ ಮುಂದುವರೆದು ಬಾಂದೀಕುಂಯಿಗೆ ಬಂದು ಮಧ್ಯಾಹ್ನದ ಸಭೆಯಲ್ಲಿ ಭಾಗವಹಿಸಿತು. ವೇದಿಕೆಯಲ್ಲಿ ಪೂಜ್ಯರುಗಳಾದ ಮಹಾಮಂಡಲೇಶ್ವರ ದಯಾಳದಾಸ ಜೀ ಮಹಾರಾಜ್, ಸಂತ ನಾರಾಯಣದಾಸ ಜೀ ಧೌಳೀಗುಂಡಿ, ಪಂಚಮುಖೀ ತ್ಯಾಗಜೀ ಮಹಾರಾಜ್, ಸಂತ ದಿವ್ಯಾನಂದ ಜೀ ಮಹಾರಾಜ್, ಸಂತ ಗಿರಿರಾಜ ಸಿಂಗ್ ಜೀ ಮಹಾರಾಜ್ ಇವರೆಲ್ಲ ದಿವ್ಯ ಉಪಸ್ಥಿತಿ ನೀಡಿ, ಆಶೀರ್ವದಿಸಿ, ಮಾರ್ಗದರ್ಶನ ನೀಡಿದರು. ರಾ.ಸ್ವ.ಸೇ.ಸಂ.ದ ಅಖಿಲಭಾರತ ಸೇವಾ ಪ್ರಮುಖ ಶ್ರೀ ಸೀತಾರಾಮ ಕೆದಿಲಾಯರು ಮುಖ್ಯ ಭಾಷಣ ನೀಡಿದರು.
ಯಾತ್ರೆ ಮುಂದುವರೆದು ದೌಸಾ ಪಟ್ಟಣವನ್ನು ಪ್ರವೇಶಿಸಿ, ಅಲ್ಲಿಯ ಸಭೆಯಲ್ಲಿ ಭಾಗವಹಿಸಿತು. ಸಂತರುಗಳಾದ ಪೂಜ್ಯ ರಾಮದೇವಜೀ ಮಹಾರಾಜ್, ಕಪಿಲದಾಸ ಜೀ ಮಹಾರಾಜ್ ಇವರುಗಳು ಆಶೀರ್ವಾದ ಮಾಡಿ ಮಾರ್ಗದರ್ಶನವನ್ನು ಮಾಡಿದರು. ವಿಶ್ವ ಹಿಂದೂ ಪರಿಷತ್ತಿನ ಹಿರಿಯ ನೇತಾರ ಶ್ರೀ ಹುಕುಂಚಂದ್ ಸಾವ್ಲಾ ಜೀ ಹಾಗೂ ಶ್ರೀ ಸೀತಾರಾಮ ಕೆದಿಲಾಯ ಜೀ ಅವರು ಯಾತ್ರೆ ಹಾಗೂ ಗೋವಿನ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಯಾತ್ರೆ ಅಲ್ಲಿಂದ ಮುಂದುವರೆದು ರಾಜಧಾರಿ ಜಯಪುರದತ್ತ ಮುಖಮಾಡಿತು. ಜಯಪುರಕ್ಕೆ ಮುಟ್ಟಿದಾಗ ಸಂಜೆಯ ೫:೩೦. ಅಲ್ಲಿಂದ ಅಂದಾಜು ಒಂದೂವರೆ ಘಂಟೆಗಳ ಸಮಯ ಸುಂದರ ಶೋಭಾಯಾತ್ರೆ ನಡೆಯಿತು. ಸಾವಿರಾರು ಜನರು, ಮಾತೆಯರು, ಶಾಲಾಮಕ್ಕಳು, ಸ್ವಯಂ ಸೇವಕರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಒಂದು ಸಾವಿರಕ್ಕೂ ಮಿಗಿಲಾದ ಮಹಿಳೆಯರು ಕಲಶವನ್ನು ಹೊತ್ತು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದು ಯಾತ್ರೆಗೆ ವಿಶೇಷ ಮೆರುಗು, ಕಳೆಯನ್ನು ನೀಡಿತು.
ಮುಂದೆ ಯಾತ್ರೆ ಶ್ರೀ ಗೋವಿಂದ ದೇವಜೀ ಮಂದಿರದ ಆವರಣದಲ್ಲಿ ನಡೆದ ಬೃಹತ್ ಸಭೆಯಲ್ಲಿ ಸಮ್ಮಿಳಿತವಾಯ್ತು. ಎಲ್ಲ ದೃಷ್ಟಿಯಿಂದ ಇದೊಂದು ವಿಶೇಷ ಸಭೆ. ಗೋವಿಂದನ ಆಸ್ಥಾನದಲ್ಲಿ ಗೋಮಾತೆಯ ಸಭೆ. ಎಲ್ಲ ಧರ್ಮದವರು ವೇದಿಕೆಗೆ ಬಂದು ತಮ್ಮ ನಿಷ್ಠೆಯನ್ನು ಗೋಮಾತೆಯ ಬಗ್ಗೆ ಘಂಟಾಘೋಷ ಮಾಡಿದ ಸಭೆ.
ವೇದಿಕೆಯಲ್ಲಿ ಸಂತರುಗಳಾದ ಪ.ಪೂ. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ದಿನೇಶಗಿರಿ ಜೀ ಮಹಾರಾಜ್, ರಾಘಾವಾಚಾರ್ಯ ವೇದಾಂತೀ ಜೀ, ನಿರಂಜನನಾಥ ನೀ ಅವಧೂತ ಇವರೆಲ್ಲ ದಿವ್ಯ ಉಪಸ್ಥಿತಿ ನೀಡಿದ್ದರು. ಇತರ ಪ್ರಮುಖರೆಂದರೆ ವಿಶ್ವ ಮಂಗಲ ಗೋ ಗ್ರಾಮ ಯಾತ್ರಾ ಸಮಿತಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಾ. ಎಚ್.ಆರ್. ನಾಗೇಂದ್ರ ಜೀ, ಮುಸ್ಲಿಂ ರಾಷ್ಟ್ರೀಯ ವಿಚಾರ ಮಂಚದ ಪ್ರಮುಖರಾದ ಶ್ರೀ ಇಂದ್ರೇಶ ಜೀ ಹಾಗೂ ಅದರ ಸಂಯೋಜಕರಾದ ದಿಲ್ಲಿಯ ಮೊಹಮ್ಮದ್ ಅಫ್ಜಲ್ ಜೀ ಮುಂತಾದವರು.
ಶ್ರೀ ಇಂದ್ರೇಶ ಜೀ ಅವರು ಗ್ರಾಮ ವಿಕಾಸದಿಂದ ರಾಷ್ಟ್ರಮಂಗಲ ಹಾಗೂ ವಿಶ್ವ ಮಂಗಲವೆಂದರು. ವಿಶ್ವದಲ್ಲಿ ಯಾವ್ಯಾವ ಸಂದರ್ಭದಲ್ಲಿ ಕತ್ತಲೆ (ಅಜ್ಞಾನ) ವ್ಯಾಪಿಸಿತೋ ಆವಾಗಲೆಲ್ಲ ಒಂದು ದೀಪ ಬಂದು ಆ ಕತ್ತಲೆಯನ್ನು ದೂರ ಓಡಿಸಿದೆ. ಅದೇ ರೀತಿ ನಮ್ಮ ದೇಶದಲ್ಲಿ ಗೋಮಾತೆಯ ವಿಷಯದಲ್ಲಿ ಈಗ ಆವರಿಸಿದ ಕತ್ತಲೆಯನ್ನು ಹೊಡೆದೋಡಿಸಲು ವಿಶ್ವ ಮಂಗಲ ಗೋ ಗ್ರಾಮ ಯಾತ್ರೆ ಬಂದಿದೆ ಎಂದರು. ಈ ಯಾತ್ರೆಯು ಪ್ರಾಣಿ ಸಂಕುಲಕ್ಕೆಲ್ಲ ಮಂಗಳಮಯವಾಗಲಿದೆ ಎಂದು ಹಾರೈಸಿದರು.
ಮುಂದೆ ಮಾತನಾಡಿದ ಮುಸ್ಲಿಂ ಮಂಚದ ಶ್ರೀ ಮೊಹಮ್ಮದ್ ಅಫ್ಜಲ್ ಅವರು, ಗೋಮಾತೆಯ ವಿಷಯದಲ್ಲಿ ಮುಸ್ಲಿಂಮರಿಗಿರುವ ನಿಷ್ಠೆಯ ಬಗ್ಗೆ ಭರವಸೆ ನೀಡುತ್ತಾ, ಗೋಮಾತೆಯನ್ನು ರಕ್ಷಿಸುವಲ್ಲಿ ಮುಸ್ಲಿಂಮರ ಬದ್ಧತೆಯನ್ನು ಘಂಟಾಘೋಷವಾಗಿ ನುಡಿದರು. ಗೋಹತ್ಯೆ ಮಾಡಿದವರಿಗೆ ಮರಣದಂಡನೆಯ ಶಾಸನ ಬರಬೇಕೆಂದು ಅವರು ಆಗ್ರಹಿಸಿದರು.
ಯಾತ್ರೆಯ ದಿವ್ಯ ಸಂಕಲ್ಪವನ್ನು ಮಾಡಿದ ಪೂ. ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜೀ ಅವರು ಆಶೀರ್ವಚನ ನೀಡುತ್ತಾ ತಾವು ಇಲ್ಲಿ (ಜೈಪುರದ) ಗೋವಿಂದನ ಆಸ್ಥಾನದಲ್ಲಿ ಅದ್ವೈತವನ್ನು ಕಾಣುತ್ತೇವೆಂದರು. ಗೋವಿಂದ ಹಾಗೂ ಗೋಮಾತೆಯರು ಇಲ್ಲಿ ಒಂದಾಗಿ ಭಕ್ತರನ್ನು ಇಂದು ಕರುಣಿಸುತ್ತಿದ್ದಾರೆಂದರವರು. ಶ್ರೀ ಕೃಷ್ಣ ಕಲಿಯುಗದಲ್ಲಿ ಸಂಘರೂಪದಲ್ಲಿ ಅವತರಿಸುತ್ತಾನೆಂದು, ಇಂದು ಅದು ರಾ.ಸ್ವ.ಸೇ.ಸಂ.ದ ರೂಪದಲ್ಲಿ ಪ್ರಕಟಗೊಂಡಿದೆ ಎಂದು ಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ರಾ.ಸ್ವ.ಸೇ.ಸಂ.ದ ಬೆನ್ನು ತಟ್ಟಿದರು. ಕೆಲವೇ ಕೆಲವು ಸಂಖ್ಯೆಯಲ್ಲಿ ಉಳಿದಿರುವ ಗೋ ಪ್ರಜಾತಿಯನ್ನುಳಿಸಲು ಇದು ಕೊನೆಯ ಅವಕಾಶವೆಂದರು. ಪುತ್ರನೊಬ್ಬ ಮಾತೆಯ ಕೊನೆಯ ಆಸೆಯನ್ನು ನೆರವೇರಿಸುವಂತೆ ಗೋಮಾತೆಯ ರಕ್ಷಣೆಯನ್ನು ಈಗ ಮಾಡುವ ಸಂದರ್ಭ ಬಂದಿದೆಯೆಂದರು. ಯಾತ್ರೆಯ ನೇತೃತ್ವವನ್ನು ರಾಜಸ್ಥಾನ ಮೂಲದ ಶ್ರೀ ಶಂಕರಲಾಲ ಜೀ ಮಾಡುತ್ತಿರುವುದನ್ನು ಪ್ರಶಂಸಿಸುತ್ತಾ, ಗೋರಕ್ಷಣೆಯ ವಿಷಯದಲ್ಲಿ ರಾಜಸ್ಥಾನಿಗಳು ಸದಾ ಮುಂದಿರಬೇಕೆಂದು ಹಾರೈಸಿದರು.
Leave a Reply