15-Ja-2016, ವಿಜಯನಗರ – ಬೆಂಗಳೂರು:
ವಿಶ್ವ ಯೋಗ ದಿನ, ಫಾದರ್ಸ್ ಡೇಗಳು ಇರುವ ಹಾಗೆ ಗೋವಿಗೂ ಒಂದು ದಿನವನ್ನು ಆಚರಿಸಬೇಕು, ಸಂಕ್ರಾಂತಿಯ ದಿನವನ್ನೇ ಗೋ ದಿನ ಎಂದು ಆಚರಿಸಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕಾರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ಇಂದು ಇಲ್ಲಿನ ವಿಜಯನಗರದಲ್ಲಿ ನಡೆದ ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದ ವಾರ್ಷಿಕೋತ್ಸವವಾದ “ಕಾಮದುಘಾ-ಗೋ ಮಹೋತ್ಸವ”ದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸಂಕ್ರಾಂತಿ ಎಂದರೆ ಬದಲಾವಣೆ,ಅದು ಶುಭದ ಬದಲಾವಣೆ.ಗೋ ಹತ್ಯೆಯಿಂದ ಗೋ ರಕ್ಷಣೆಗೆ ಬದಲಾವಣೆ ಆಗಬೇಕು,ನಾಡಿನಲ್ಲಿ ಗೋ ರಕ್ತದ ಹೊಳೆಯ ಬದಲು ಗೋವಿನ ಹಾಲು ಹರಿಯಲಿ. ಬದಲಾವಣೆ ಬರಲಿ ಎಂದು ಸುಮ್ಮನೆ ಕೂರುವುದಲ್ಲ, ಬದಲಾಗಿ ಬದಲಾವಣೆಯನ್ನು ನಾವು ತರಬೇಕು. ಇಂತಹ ಬದಲಾವಣೆಗಳು ಜನರ ಮನಸ್ಸು ಪರಿವರ್ತನೆಯಾದಾಗ ಮಾತ್ರ ಸಾದ್ಯ. ಗೋವಿನೊಂದಿಗೆ ಒಡನಾಡುವ ಭಾಗ್ಯದಿಂದ ಇಂದಿನ ಮಕ್ಕಳು ವಂಚಿತರಾಗುತ್ತಿದ್ದಾರೆ. ಕೊಟ್ಟಿಗೆ-ಎತ್ತಿನ ಗಾಡಿಗಳು ಭಾರತದ ಚಿತ್ರಣದಿಂದ ಮಾಯವಾಗುತ್ತಿರುವ ಈ ಸಂದರ್ಭದಲ್ಲಿ ಕಾಮದುಘಾ ವಿಭಾಗ ಅವೆಲ್ಲವನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ಮಕ್ಕಳ ಗೋ ಬಗೆಗಿನ ಪ್ರೀತಿ ಹಾಗೂ ಗೋವಿನೊಂದಿಗೆ ಒಡನಾಡುವ ಬಯಕೆಗೆ ಅವರೆಲ್ಲ ಇಂದು ಎತ್ತಿನ ಗಾಡಿ ಪಯಣಕ್ಕೆ ಮಕ್ಕಳು ಮುಗಿಬೀಳುತ್ತಿರುವುದೇ ಸಾಕ್ಷಿ ಎಂದರು.
ಏನೇ ಅಡೆತಡೆಗಳು, ಕಷ್ಟಗಳು ಬಂದರೂ ಹೆದರದೆ ಬೆದರದೇ, ಕುಗ್ಗದೆ ಬಗ್ಗದೇ ಮುನ್ನಡೆಯುವ ಮೂಲಕ ಭಾರತದಲ್ಲಿ ಒಂದು ದೊಡ್ಡ ಕ್ರಾಂತಿಯನ್ನು ಉಂಟುಮಾಡೋಣ. ಗೋಮಾತೆಯ ಶಾಂತಿಗಾಗಿ ಹೋರಾಟ ಮಾಡೋಣ. ಗೋವು ಬಾಳಲಿ-ಗೋವಿನಿಂದ ಜಗತ್ತು ಬಾಳಲಿ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವಹಿಸಿದ್ದ ಸಿದ್ಧಾರೂಡ ಮಿಶನ್ ಡಾ|| ಪ್ರಬುಲಿಂಗ ದೇವರು ಅವರು ಮಾತನಾಡುತ್ತಾ ಉತ್ತರಾಯಣ ಪುಣ್ಯಕಾಲ ಆರಂಭವಾಗಿದೆ.ಗೋ ಮಹೋತ್ಸವದ ಮೂಲಕ ನೀವೆಲ್ಲರೂ ಸಂಕ್ರಾಂತಿಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದೀರಿ. ಈ ಕಾರ್ಯಕ್ರಮದಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕಾರ್ಯಕ್ರಮದ ಮೆರಗನ್ನು ಪರಮಪೂಜ್ಯ ಸ್ವಾಮಿಜಿಯವರು ಹೆಚ್ಚಿಸಿದ್ದಾರೆ. ಪ್ರತಿಯೊಬ್ಬ ಸನ್ನಡತೆಯ ಪ್ರಜೆ ಸ್ವಾಮೀಜಿಯವರನ್ನು ‘ಗೋಸ್ವಾಮಿ’ ಎಂದು ಒಪ್ಪಿಕೊಂಡಿದ್ದಾನೆ. ಹಸುವಿನ ಪ್ರತಿಯೊಂದು ಅಂಶವೂ ನಮ್ಮ ಜೀವನದಲ್ಲಿ ಉಪಕಾರಿಯಾಗಿದೆ. ಸ್ವಾಮೀಜಿಯವರು ಗೋವಿನ ಮಹತ್ವವನ್ನು ವಿಶ್ವ ಗೋ ಸಮ್ಮೇಳನದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ನುಡಿದರು.
ಮಾಜೀ ಸಚೀವ ವಿ. ಸೋಮಣ್ಣ ಅವರು ಮಾತನಾಡಿ ನನ್ನದು ಹಾಗೂ ರಾಘವೇಶ್ವರ ಶ್ರೀಗಳ ನಡುವೆ ತಂದೆ-ಮಗನ ಸಂಬಂಧ ಇದೆ. ಶ್ರೀರಾಮನ ಸಂಕಲ್ಪವನ್ನು ನಾಡಿನ ಬಡವರಿಗೆ ಹಿಂದುಳಿದ ವರ್ಗದವರಿಗೆ ಕಷ್ಟದಲ್ಲಿರುವವರಿಗೆ ತಮ್ಮ ಸಂಕಲ್ಪದ ಮೂಲಕ ಸಮರ್ಪಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವ ಮಹಾಚಿಂತನೆ ರಾಘವೇಶ್ವರ ಶ್ರೀಗಳದ್ದು.. ಪ್ರಭು ಶ್ರೀರಾಮ ರಾಘವೇಶ್ವರ ಶ್ರೀಗಳಿಗೆ ಅದೆಂತಹ ಶಕ್ತಿಯನ್ನು ಕೊಟ್ಟಿದ್ದಾನೆ ಅಂದ್ರೆ ಶ್ರೀಗಳು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಟ ಸಂತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಶಿವಮೊಗ್ಗ ಜಿಲ್ಲೆಯನ್ನು ಹೊರತುಪಡಿಸಿ ಬೇರೆಲ್ಲಿಯೂ ರಾಮಚಂದ್ರಾಪುರ ಮಠದ ಬಗ್ಗೆ ಅರಿವಿರದ ಸಂದರ್ಭದಲ್ಲಿ, ಶ್ರೀಗಳ ಸತ್ಕಾರ್ಯದ ಫಲದಿಂದ ಇಂದು ರಾಮಚಂದ್ರಾಪುರ ಮಠ ವಿಶ್ವದೆಲ್ಲೆಡೆ ಮನೆಮಾತಾಗಿದೆ.
ವಿಧಾನಪರಿಷತ್ ಸದಸ್ಯ ಅಶ್ವತ್ಥ ನಾರಾಯಣ್ ಅವರು ಗೋವಿನ ಜೊತೆ ಸಂಬಂಧ ಬೆಳೆಸಿದರೆ ಪ್ರೀತಿ ವಿಶ್ವಾಸದ ನಿಜವಾದ ಅರ್ಥ ಗೊತ್ತಾಗುತ್ತದೆ. ಸ್ವದೇಶಿ ಗೋವಿನ ಉತ್ಪನ್ನಗಳು ಎಲ್ಲ ರೋಗಗಳಿಗೂ ರಾಮಬಾಣ. ಅಂತಹ ಗೋವುಗಳನ್ನು ಸಂರಕ್ಷಿಸುವ, ಬೆಳೆಸುವ ಮಹತ್ಕಾರ್ಯವನ್ನು ಪೂಜ್ಯ ಸ್ವಾಮೀಜಿಯವರು ಮಾಡಿತ್ತಿದ್ದಾರೆ. ಅವರ ಎಲ್ಲ ಸಂಕಲ್ಪಗಳಿಗೆ ನಾವು ಮುಂದಿನ ದಿನಗಳಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.
ಇದಕ್ಕೂ ಮೊದಲು ನಡೆದ ಗೋ ಮಹೋತ್ಸವವನ್ನು ಶ್ರೀ ಆನಂದ್ ಹೊಸೂರು ಮಾನ್ಯ ಬಿಬಿಎಂಪಿ ಸದಸ್ಯರು ಇವರು ಗೋ ಆರತಿಯ ಮೂಲಕ ಉದ್ಘಾಟಿಸಿದರು. ಇದರಲ್ಲಿ ವಿವಿಧ ಗೋ ತಳಿಗಳ ಪ್ರದರ್ಶನ, ಗವ್ಯೋತ್ಪನ್ನ ಮಳಿಗೆಗಳು ಆಕರ್ಷಣೀಯವಾಗಿದ್ದವು. ವಿಶೇಷವಾಗಿ ಪಾಕೊತ್ಸವದಲ್ಲಿ ಗೋ ಉತ್ಪನ್ನಗಳಿಂದ ತಯಾರಿಸಿದ ಪೇಡಾ, ಬರ್ಫಿ, ಶಿರಾ, ಶ್ರೀಖಂಡ, ಮಜ್ಜಿಗೆಯ ದೋಸೆ ಸೇರಿದಂತೆ ಬಗೆಬಗೆಯ ಆಹಾರ ಪದಾರ್ಥಗಳು ಜನರ ಬಾಯಲ್ಲಿ ನೀರೂರುವಂತೆ ಮಾಡಿತು. ಹಾಗೆಯೇ ಸೇರಿದ ಗೊಭಕ್ತರಿಗಾಗಿ ವಿವಿಧ ಸ್ಪರ್ಧೆಗಳು ನಡೆದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗೋ ರಕ್ಷೆ ಎಂಬ ವಿನೂತನ ಆಟವೂ ಸೇರಿದಂತೆ ಗೋವಿನ ಕುರಿತಾದ ಹಾಡು, ಉತ್ಸವದಲ್ಲಿ ಒಂದು ಛಾಯಾಚಿತ್ರ ತೆಗೆದು ಅದರ ಬಗ್ಗೆ ಲೇಖನ ಬರೆಯುವ ಸ್ಪರ್ಧೆ, ಗೋ ತಳಿ ಹೆಸರಿಸುವ ಸ್ಪರ್ಧೆ, ರಸಪ್ರಶ್ನೆಗಳೂ ಸೇರಿದಂತೆ ಸುಮಾರು ಹತ್ತು ಬಗೆಯ ಗೋ ಆಧಾರಿತ ಸ್ಪರ್ಧೆಗಳು ನಡೆದಿದ್ದು, ಮುನ್ನೂರಕ್ಕೂ ಹೆಚ್ಚು ವಿಧಾರ್ಥಿಗಳು ಹಾಗೂ ಹಿರಿಯರು ಭಾಗವಹಿಸಿದ್ದು ವಿಶೇಷ.
ಇದಕ್ಕೂ ಮುನ್ನ ನಡೆದ ವಿಚಾರ ಸಂಕಿರಣದಲ್ಲಿ NDRIನ ಹಿರಿಯ ವಿಜ್ಞಾನಿ ಡಾ|| ಕೆ.ಪಿ.ರಮೇಶ್ ಅವರು ‘ಎ೧-ಎ೨ ಹಾಲಿನ ತೊಳುನಿಕ ಅಧ್ಯಯನ’ದ ಕುರಿತು, ಹೈದರಾಬಾದಿನ ಪಶುವೈದ್ಯರಾದ ಡಾ|| ಸಾಯಿ ಬುಚ್ಹ ರಾವ್ ಅವರು ‘ದೇಶೀ ಗೋತಳಿ ಹಾಗೂ ಕೃಷಿ’ಯ ಕುರಿತು ಹಾಗೂ ಆಯುರ್ವೇದ ತಜ್ಞರಾದ ಡಾ|| ರಾಮಕೃಷ್ಣ ಬಿ.ಆರ್. ಅವರು ‘ಪಂಚಗವ್ಯ ಮತ್ತು ಆರೋಗ್ಯ’ ಎಂಬ ವಿಚಾರಗಳ ಕುರಿತು ಗೊಷ್ತಿ ನಡೆಸಿದರು.
ನಂತರ ನಡೆದ ಲೋಕಾರ್ಪಣ ಸಂದರ್ಭದಲ್ಲಿ ಶ್ರೀ ರಾಘವೇಶ್ವರ ಶ್ರೀಗಳು ಸಾನಿಧ್ಯವಹಿಸಿ ಕಾಮದುಘಾ ವಿಭಾಗ ಹೊರತಂದಿರುವ ಕಾಮದುಘಾ ಮಾಹಿತಿ ಪತ್ರ, ಭಾರತೀಯ ಗೋವಂಶ ವೈಭವ ಹಾಗೂ ದ್ವಿಮಾಸಾ ಪತ್ರಿಕೆಯಾದ ‘ಕಾಮದುಘಾ-ಗೋಲೋಕದ ಸುತ್ತಮುತ್ತ’ ಎಂಬ ಹೊತ್ತಿಗೆಗಳನ್ನು ಬಿಡುಗಡೆಗೊಳಿಸಿದರು, ಹಾಗೆಯೇ ಮಾ ಗೌ ಗಂಗಾ ಪ್ರಾಡಕ್ಟ್ಸ್ ಸಂಸ್ಥೆ ನೀಮ್ ಸಾಬೂನು, ಮಾಸ್ಕಿಟೋ ರಿಪೆಲ್ಲಂಟ್ ಸೇರಿದಂತೆ ಮೂರು ವಿನೂತನ ಉತ್ಪನ್ನಗಳನ್ನು ಹೊರತಂದಿದ್ದು, ಅವು ಸಂಪೂರ್ಣ ರಾಸಾಯನಿಕ ರಹಿತವಾಗಿರುವುದು ವಿಶೇಷ. ರೈತರಿಗಾಗಿಯೇ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಂತರಾಷ್ಟ್ರೀಯ ಕೃಷಿ ತಜ್ಞ ಡಾ|| ನಾರಾಯಣ ರೆಡ್ಡಿ ಭಾಗವಹಿಸಿ ರೈತರು ದೇಶದ ಬೆನ್ನೆಲುಬು, ರೈತ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಾಗ ದೇಶ ನೆಮ್ಮದಿಯಿಂದ ಬದುಕಲು ಸಾಧ್ಯ. ಕೆಲ ದಿನಗಳಿಂದ ಗೋವಿನೊಂದಿಗೆ ಒಡನಾಟ ಮಾಡುತ್ತಿದ್ದು, ಮತ್ತೆ ಯುವಕನಾಗುತ್ತಿದೇನೆ ಎಂಬ ಭಾವನೆ ಬರುತ್ತಿದೆ, ಅಷ್ಟೊಂದು ಉಲ್ಲಾಸದಾಯಕ ಅನುಭವ ಅದು ಎಂದರು
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಹವ್ಯಕ ಮಹಾಮಮ್ದಳದ ಅಧ್ಯಕ್ಷ ಡಾ|| ವೈ.ವಿ. ಕೃಷ್ಣಮೂರ್ತಿ ಮಾತನಾಡಿ ಪ್ರತಿ ಮನೆಯಲ್ಲಿ ಗೋವು ನೆಮ್ಮದಿಯಿಂದ ಜೀವಿಸುವಂತಹ ವಾತಾವರಣ ನಿರ್ಮಾಣ ಮಾಡಿಕೊಡಿ, ಅದಕ್ಕೆ ಪೂರಕ ವ್ಯವಸ್ಥೆಯನ್ನು ಮಠದಿಂದ ಮಾಡಿಕೊಡಲಾಗುವುದು. ಗವ್ಯೋತ್ಪನ್ನಗಳನ್ನು ಬಳಸುವ ಮೂಲಕ ಗೋವಂಶದ ಅಭೀವ್ರುದ್ದಿಗೆ ಸಹಕರಿಸೋಣ ಎಂದರು.
ಸಮಾರಂಭದಲ್ಲಿ ವಿಜಯನಗರ ಶಾಸಕರಾದ ಕೃಷ್ಣಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ರಘುನಾಥ್ ಹಾಗೂ ಶ್ರೀಮತಿ ಮಹಾಲಕ್ಷ್ಮಿ ಇವರು ಉಪಸ್ಥಿತರಿದ್ದು ಶ್ರೀಗಳಿಂದ ಆಶೀರ್ವಾದ ಪಡೆದರು.
Photos:
Leave a Reply