ಬಾಹುಬಲಕ್ಕಿಂತ ಭಾವಬಲ ದೊಡ್ಡದು : ಶ್ರೀಸಂಸ್ಥಾನ

13735058_863593583771734_6087598341587699372_o

ಬೆಂಗಳೂರು, ಜು. 24 : ಮಹರ್ಷಿ ವಶಿಷ್ಠರಲ್ಲಿಗೇ ಸಾಕ್ಷಾತ್ ರಾಜನೇ ಬಂದು ಗೋವನ್ನು ಕೇಳಿದರೂ ಪ್ರಯತ್ನಪೂರ್ವಕವಾಗಿ ಗೋವನ್ನು  ರಕ್ಷಿಸಿಕೊಂಡರು, ಆದರೆ ಇಂದು ಕಟುಕರು ಕೊಡುವ ಪುಡಿಗಾಸಿಗೆ ಗೋವನ್ನು ಕಸಾಯಿಕಾನೆಗೆ ತಳ್ಳುತ್ತಿರುವುದು ವಿಷಾಧನೀಯ. ಜಗತ್ತು ಗೋವನ್ನು ಆಶ್ರಯಿಸಿದ್ದು, ಗೋವಿಲ್ಲದ ಬದುಕು ದುರ್ಬರ, ಹಾಗಾಗಿ ಕಲ್ಪವೃಕ್ಷವಾದ ಕಾಮಧೇನುವಿನ ಮೇಲೆ ಕತ್ತಿಪ್ರಯೋಗಮಾಡಬಾರದು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದ ಪರಿಸರದಲ್ಲಿ ನಡೆದ “ಗೋಕಥೆ”ಯಲ್ಲಿ ಸಾನ್ನಿಧ್ಯವಹಿಸಿದ ಶ್ರೀಗಳು, ಕೌಶಿಕ ರಾಜ ಹಾಗೂ ವಶಿಷ್ಠಾಶ್ರಮದ ಕಾಮಧೇನುವಿನ ಪ್ರಕರಣವನ್ನು ಪ್ರವಚನ, ಗಾಯನ, ರೂಪಕ, ಚಿತ್ರರಚನೆಗಳಿಂದ ಕೂಡಿದ  ವಿಶಿಷ್ಟವಾದ ಗೋಕಥಾ ಕಾರ್ಯಕ್ರಮದಲ್ಲಿ ನಿರೂಪಿಸಿದರು.

ಗೋವಿನ ಕುರಿತಾದ ಗಾನದಮೂಲಕ ಗೋಕಥಾವನ್ನು ಆರಂಭಿಸಿದ ಶ್ರೀಗಳು, ರಾಜ ಕೌಶಿಕನು ವಶಿಷ್ಠಾಶ್ರಮವನ್ನು ಪ್ರವೇಶಿಸುವುದು, ವಶಿಷ್ಠಾಶ್ರಮದ ವರ್ಣನೆ, ರಾಜ ಹಾಗೂ ಋಷಿಯ ಉಭಯಕುಶಲೋಪರಿ, ಸೈನ್ಯಸಮೇತನಾದ ಕೌಶಿಕನಿಗೆ ಕಾಮಧೇನುವಿನ ಸಹಾಯದೋಂದಿಗೆ ಆತಿಥ್ಯ ನೀಡುವುದು ಇತ್ಯಾದಿ ಪ್ರಸಂಗಗಳನ್ನು ಮನೋಜ್ಞವಾಗಿ ವಿವರಿಸಿದರು.

ಆತಿಥ್ಯ ನೀಡಿದ ಮಹರ್ಷಿಗಳಿಂದ ಕಾಮಧೇನುವನ್ನು ಬಲಾತ್ಕಾರವಾಗಿ ಕೊಂಡೊಯ್ಯಲು ಉದ್ಯುಕ್ತನಾದ ಕೌಶಿಕರಾಜನನ್ನು ಉದಾಹರಿಸಿ ಮಾತನಾಡಿ, ಅನುಚಿತ ಆಸೆ ಒಳ್ಳೆಯದಲ್ಲ, ರಾಜನೇ ಧೇನುವನ್ನು ಅಪಹರಿಸಲು ಮುಂದಾಗುವುದು ಬೇಲಿಯೇ ಮೇಲೆದ್ದು ಹೊಲವನ್ನು ಮೇಯ್ದಂತಾಗುತ್ತದೆ. ಮಠ – ಮಂದಿರಗಳು, ಸಾಧಕರ ಸ್ವತ್ತಿಗೆ ರಾಜತ್ವ ಕೈ ಹಾಕಬಾರದು. ಹಾಗೆಯೇ ರಾಜತ್ವವೇ ಎದುರಾದರೂ ವಶಿಷ್ಠರು ಗೋವನ್ನು ರಕ್ಷಿಸಿದಂತೆ ನಾವು ಗೋವುಗಳನ್ನು ರಕ್ಷಿಸಬೇಕು ಎಂದರು.

 

ಕಾಮಧೇನುವಿಗಾಗಿ ಕೌಶಿಕ ಹಾಗೂ ಮಹರ್ಷಿ ವಶಿಷ್ಠರ ಕಾಳಗವನ್ನು ವಿವರಿಸಿ, ರಾಜನ ಎಲ್ಲಾ ಅಸ್ತ್ರ ಶಸ್ತ್ರಗಳನ್ನು ವಶಿಷ್ಠರು ತಮ್ಮ ಬ್ರಹ್ಮದಂಡದ ಮೂಲಕವೇ ಎದುರಿಸಿದರು, ಆಮೂಲಕ ಬಾಹುಬಲಕ್ಕಿಂತ ಭಾವಬಲ, ಸತ್ವಬಲವೇ ದೊಡ್ಡದು ಎಂದು ನಿರೂಪಿಸಿದರು.

ಕಥೆಯ ನಿರೂಪಣೆಯ ಜೊತೆಜೊತೆಗೆ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ನೀರ್ನಳ್ಳಿ ಗಣಪತಿ ಹೆಗಡೆ ಮನಮೋಹಕವಾಗಿ ಚಿತ್ರಿಸಿದರು, ಚಂದ್ರಶೇಖರ ಕೆದಿಲಾಯ, ಶ್ರೀಪಾದ್ ಭಟ್, ಕುಮಾರಿ ದೀಪಿಕಾ ಹಾಗೂ ತಂಡದ ಗಾಯನ ಕಥೆಯ ಅಂದವನ್ನು ಹೆಚ್ಚಿಸಿತು, ನಂತರ ಕೋರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಸಾರಥ್ಯದಲ್ಲಿ ‘ಧರ್ಮಧೇನು’ರೂಪಕ ಮೂಡಿಬಂದಿತು.

ಗೋಕಥೆಯ ನಂತರ, ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಇದಕ್ಕೂ ಮೊದಲು ಮಧ್ಯಾಹ್ನ ನಡೆದ ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ಸಾಧನಾಪಂಚಕ ಧ್ವನಿಮುದ್ರಿಕೆ ಹಾಗೂ ಲಲಿತಾ ಸಹಸ್ರನಾಮ  ಹೊತ್ತಿಗೆಯನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆಗೊಳಿಸಿದರು. ತುಂಬಿದ ಸಭೆ ಗೋಕಥೆಯನ್ನು ಕಣ್ಣುತುಂಬಿಕೊಂಡಿತು. ಶ್ರೀಮಠದ ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

ಇಂದಿನ ಕಾರ್ಯಕ್ರಮ (25.07.2016):

ಬೆಳಗ್ಗೆ 9.00 : ಕುಂಕುಮಾರ್ಚನೆ

ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ

ಬೆಳಗ್ಗೆ 11.30 : ಆದಿತ್ಯಹೃದಯ ಪಠಣ

ಬೆಳಗ್ಗೆ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ

ಅಪರಾಹ್ನ 3.00 :

ಲೋಕಾರ್ಪಣೆ: ಜಿಜ್ಞಾಸೆ – ಪುಸ್ತಕ, ಸಾಧನಾಪಂಚಕ ಪ್ರವಚನಮಾಲಿಕೆ – ಧ್ವನಿಮುದ್ರಿಕೆ

ಗೋಸೇವಕ ಪುರಸ್ಕಾರ :

ಸಂತ ಸಂದೇಶ : ಶ್ರೀ ಆರೂಢಭಾರತೀ ಸ್ವಾಮಿಜಿ, ಸಿಧ್ಧಾರೂಢ ಮಿಷನ್ ಆಶ್ರಮ. ಬೆಂಗಳೂರು

ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ

ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ

ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

 

13767287_863591767105249_6633867449638329445_o13680386_863592317105194_5678580647344646448_o 13690979_863593987105027_3096451666366623929_o 13724085_863592363771856_7214680688555461257_o

13701074_863593810438378_1583630419971476274_o  13725038_863592460438513_5644024995687251984_o

13782235_863593540438405_3073457893276561841_n

Facebook Comments Box