ಸಂತೋಷವು ಹಂಚಿದಷ್ಟೂ ಹೆಚ್ಚು; ಅನುಗ್ರಹವು ಪಡೆದಷ್ಟೂ ಹಿತ! ಅಶ್ವಮೇಧ ಯಾಗವನ್ನು ನಡೆಸಿಕೊಡಲು ಋಷ್ಯಶೃಂಗರು ಸಮ್ಮತಿಸಿದ ಸಂತೋಷವನ್ನು ವಸಿಷ್ಠರೇ ಮೊದಲಾದ ತನ್ನ ಗುರುವೃಂದದೊಡನೆ ಹಂಚಿಕೊಂಡನು ದಶರಥ; ಅವನ ಸಂತೋಷಕ್ಕೆ ಗುರುಗಳ ಸಂತೋಷವೂ ಸೇರಿತು! ಋಷ್ಯಶೃಂಗರ ಅನುಗ್ರಹದಲ್ಲಿ ವಸಿಷ್ಠರೇ ಮೊದಲಾದ ಅಷ್ಟ ಗುರುಗಳ ಅನುಗ್ರಹವೂ ಸಮ್ಮಿಲಿತಗೊಂಡಿತು!

“ನಾಲ್ವರು *ಅಮಿತವಿಕ್ರಮರಾದ ಪುತ್ರರನ್ನು ನೀನು ಪಡೆಯಲಿರುವೆ; ಅಶ್ವಮೇಧಗೈವೆನೆಂಬ ನಿನ್ನೀ ಧರ್ಮಬುದ್ಧಿಯು ಭಾವಿ ಕಾಮನಾಪೂರ್ತಿಯ ಪೀಠಿಕೆ!” – ಗುರುಗಳು ದೊರೆಯನ್ನು ಹರಸಿದ ಪರಿಯಿದು!
ಗುರುವಾಣಿಯಿದು ಅಕ್ಷರಸತ್ಯ! ನಮ್ಮ ಮನಸ್ಸೇ ನಮ್ಮ ಭವಿಷ್ಯ!

ಗುರುಗಳ ಈ ವಚನವು ರಾಜನಲ್ಲಿ ಆನಂದವನ್ನು ತುಂಬಿತು; ಸರಿಯ ಗುರಿ ತಲುಪಿದವರು ‘ನೀನು ಸರಿಯಾದ ದಾರಿಯಲ್ಲಿರುವೆ’ ಎಂದರೆ ಆಗುವ ಸಮಾಧಾನವೇ ಬೇರೆ! ಜೊತೆಯಲ್ಲಿ, ಯಾರ ಮಾತು ಎಂದಿಗೂ ಸುಳ್ಳಾಗದೋ ಅವರ ಬಾಯಿಂದಲೇ “ನಿನಗೆ ಮಕ್ಕಳಾಗುವರು” ಎಂಬ ಭಾವಿ-ಫಲ-ವಚನ; ಅಷ್ಟು ಮಾತ್ರವಲ್ಲ, “ನಾಲ್ವರು ಮಕ್ಕಳಾಗುವರು” ಎಂಬ ನಿಖರತೆ; ಅದರಲ್ಲಿಯೂ “ಅಮಿತವಿಕ್ರಮಿಗಳಾದ ಮಕ್ಕಳಾಗುವರು” ಎನ್ನುವಾಗ ಉತ್ತಮೋತ್ತಮ ಕ್ಷತ್ರಿಯಸಂತಾನದ ಸೂಚನೆ! ದೊರೆಯೆದೆಗೆ ಹಾಲು ಹೊಯ್ದಂತಾಗಿರಬಹುದಲ್ಲವೇ?

ಆನಂದವು ಆದೇಶವಾಗಿ ಹೊರಹೊಮ್ಮಿತು; ಮುಂದಿನ ಕಾರ್ಯಕ್ಕಾಗಿ ಮಂತ್ರಿಗಳನ್ನು ಕರೆದು ಅಪ್ಪಣೆ ಮಾಡಿದನು ನೃಪತಿ: “ಅಮಾತ್ಯರೇ, ಗುರುವಚನವು ರಾಜಾಜ್ಞೆಯಾಗಿ- ಇದೀಗ ಕರ್ತವ್ಯವಾಗಿ ನಿಮ್ಮ ಮುಂದಿದೆ; ಅಶ್ವಮೇಧ ಮಹಾಯಜ್ಞಕ್ಕೆ ಪೂರ್ವರಂಗವನ್ನು ಸಿದ್ಧಗೊಳಿಸಿ; ಸಮರ್ಥರ ಸಂರಕ್ಷಣೆಯಲ್ಲಿ ಅಶ್ವರತ್ನವು ವಿಮೋಚನೆಗೊಳ್ಳಲಿ; ಸರಯೂನದಿಯ ಉತ್ತರತೀರದಲ್ಲಿ ಯಾಗಭೂಮಿಯು ವಿರಚಿತಗೊಳ್ಳಲಿ”

ಮುಂದಿನ ಸಿದ್ಧತೆಯೊಡನೆ ಮುನ್ನೆಚ್ಚರಿಕೆಯ ಮಾತುಗಳನ್ನೂ ಮಹಾರಾಜನು ಮಂತ್ರಿಗಳಿಗೆ ಹೇಳಿದನು: “ಅಶ್ವಮೇಧವನ್ನು ಮಾಡಲು ಎಲ್ಲ ದೊರೆಗಳಿಗೂ ಅವಕಾಶವಿದ್ದರೂ ಮಾಡುವುದು ಅತ್ಯಂತ ಅಪರೂಪದಲ್ಲಿ- ಯಾರೋ ಒಬ್ಬರು- ಯಾವಾಗಲೋ ಒಮ್ಮೆ ಮಾತ್ರ! ಏಕೆಂದರೆ ಅದು ಸುಲಭದ ತುತ್ತಲ್ಲ; ಯಜ್ಞಮಧ್ಯದಲ್ಲಿ ಬರಬಹುದಾದ ಒಂದೇ ಒಂದು ಲೋಪವು ಕರ್ತನ ಸರ್ವನಾಶಕ್ಕೆ ಸಾಕು; ಯಜ್ಞದ ಸಮಗ್ರ‌ ಪರಿಜ್ಞಾನವನ್ನು ಹೊಂದಿದ ಬ್ರಹ್ಮರಾಕ್ಷಸರು ಲೋಪವನ್ನೇ ಕಾಯುತ್ತಿರುತ್ತಾರೆ, ಮಾತ್ರವಲ್ಲ, ಅನ್ವೇಷಿಸುತ್ತಿರುತ್ತಾರೆ; ಸಣ್ಣದೊಂದು ಅವಕಾಶ ಸಿಕ್ಕರೂ ಪುಷ್ಪೋದ್ಯಾನಕ್ಕೆ ನುಗ್ಗುವ ಮಾರಕ ಕ್ರಿಮಿಗಳಂತೆ ಯಾಗದ ಮೇಲೆ ದಾಳಿ ನಡೆಸುತ್ತಾರೆ! ಆದುದರಿಂದ ಯಾಗದಲ್ಲಿ ಯಾವುದೇ ಬಗೆಯ ಲೋಪ-ದೋಷಗಳು ಘಟಿಸದಂತೆ ಜಾಗರೂಕರಾಗಿರಿ.”

ಅಹುದದು! “ಶ್ರೇಯಾಂಸಿ ಬಹುವಿಘ್ನಾನಿ.” ಶುಭಗಳಿಗೆ ವಿಘ್ನಗಳು ಬಹಳ; ಬೆಳೆಗಳನ್ನು ಬಹುವಾಗಿ ಬಾಧಿಸುವ ರೋಗಗಳು ಕಳೆಗಳಿಗೆ ಬರುವುದೇ ಇಲ್ಲ! ಅಶ್ವಮೇಧವಂತೂ ಅಸಮ~ಸಾಹಸಿಗಳಿಗೇ ಮೀಸಲು; ಯಾಗಕರ್ತನು ಕಳುಹಿದ ಅಶ್ವವನ್ನು ಯಾರೂ ಕಟ್ಟಿ ಹಾಕಬಹುದು; ಹಾಗೊಮ್ಮೆ ಕಟ್ಟಿದರೆ ಬಳಿಕ ಸಮರವೊಂದೇ ದಾರಿ! ಇನ್ನು ಯಜ್ಞದಲ್ಲಿ ಕರ್ಮಲೋಪವನ್ನೆಸಗಿದರೆ ಬ್ರಹ್ಮರಾಕ್ಷಸರ ಹಾವಳಿ!

ಹೀಗೆ, ಅಶ್ವಮೇಧವು ಸಾಂಗವಾಗಿ ಸಂಪನ್ನಗೊಂಡರೆ ಮಹಾಫಲ; ಹಾಗಾಗದಿದ್ದರೆ ಮಹಾಪ್ರಳಯ! ಪರ್ಯಾಲೋಚಿಸಿದಾಗ ಯಾಗದ ಭಾರವು ಮಹಾಮೇರುವಿಗೆ ಮಿಗಿಲೆನಿಸಿತು; ತಾನು ತಾಳಿಕೊಳ್ಳಲಾರೆನೆನಿಸಿತು ದೊರೆಗೆ! ತನ್ನ, ತನ್ನ ವಂಶದ ಭಾರವೆಲ್ಲವೂ ಈಗಾಗಲೇ ಯಾರ ಚರಣದಲ್ಲಿ ನಿಹಿತವಾಗಿದೆಯೋ ಆ ಗುರು ವಸಿಷ್ಠರ ಚರಣದಲ್ಲಿಯೇ ಶರಣಾದನು ದಶರಥ

~*~*~

(ಸಶೇಷ)

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ64ನೇ ರಶ್ಮಿ.

 

63 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box