ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ.
ಸುಖ: ಪ್ರತಿ ಜೀವದ ಅಪೇಕ್ಷೆ
ಸುಖವು ಜೀವನದಲ್ಲಿ ತುಂಬ ಮುಖ್ಯವಾದುದು ಎಂಬ ಮಾತನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇಲ್ಲಿ ಪ್ರತಿಯೊಂದು ಜೀವದ ಅಪೇಕ್ಷೆಯೂ,”ಸುಖಂ ಮೇ ಭೂಯಾತ್.. ಸುಖಂ ಮೇ ಭೂಯಾತ್ (ನನಗೆ ಸುಖವಾಗಲಿ)” ಎಂದಾಗಿರುತ್ತದೆ. ಸುಖವನ್ನು ಬಯಸುವುದು, ಪಡೆಯುವುದು, ಪಡುವುದು ತಪ್ಪಲ್ಲ. ಆದರೆ ಅದು ಎಂತಹ ಸುಖ, ಸುಖವು ಬಂದ ದಾರಿ ಯಾವುದು ಎಂಬುವುದನ್ನು ಗಮನಿಸಬೇಕಾಗುತ್ತದೆ. ಸುಖವು ಮುಖ್ಯ. ಆದರೆ, ಸುಖ ಬರುವ ದಾರಿ ಮತ್ತಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಸುಖವು ಬರಬೇಕಾದ ದಾರಿಯಲ್ಲಿ ಬಂದರೆ ಮಾತ್ರ ಅದು ಸುಖ. ಯಾವುದೋ ದಾರಿಯಲ್ಲಿ ಬಂದರೆ ಅದು ಸುಖವಲ್ಲ, ಅದು ಸುಖಾಭಾಸ. ಸುಖದಂತೆಯೇ ಕಂಡರೂ ಅದು ದುಃಖ, ಸುಖವಲ್ಲ. ಅಲ್ಲಿ ದೊರಕಿದುದರ ಲೇಪನ ಮಾತ್ರ ಸುಖದ್ದು, ಅದರ ಒಳಗಡೆ ದುಃಖವೇ ಆಗಿರುತ್ತದೆ. ಹಾಗಾಗಿ ಸುಖವನ್ನು ಪಡೆಯುವಾಗ ಜಾಗ್ರತೆ ಬೇಕು.
ಸುಖ ಬರುವ ದಾರಿಗಳಲ್ಲಿ ಮೂರು ವಿಧ:
೧) ಏನೂ ಮಾಡದೆ ಬರುವಂತಹ ಸುಖ
೨) ಒಳ್ಳೆಯದು ಮಾಡಿ ಬರುವ ಸುಖ
೩) ಕೆಟ್ಟದ್ದು ಮಾಡಿ ಬರುವ ಸುಖ
೧) ಏನೂ ಮಾಡದೆ ಬರುವ ಸುಖ:
ಏನೂ ಮಾಡದಿದ್ದರೆ ಹೇಗೆ ಸುಖ ಬರಲು ಸಾಧ್ಯ? ಅದು ಸಾಧ್ಯ ಎಂದರೆ, ಧ್ಯಾನದಿಂದ ಮಾತ್ರ. ಏನೇನೂ ಮಾಡದಿದ್ದರೆ ಅದೇ ಧ್ಯಾನ. ಶಂಕರಾಚಾರ್ಯರು ಯೋಗತಾರಾವಳಿಯಲ್ಲಿ ಹೇಳುತ್ತಾರೆ, ಶ್ರೀಶೈಲತುಂಗದಲ್ಲಿನ ಗುಹೆಗಳಲ್ಲಿ ಧ್ಯಾನಕ್ಕೆ ಕುಳಿತು, ಮೈಮೇಲೆ ಬಳ್ಳಿಗಳು ಹಬ್ಬುವಷ್ಟು, ಕಿವಿಗಳಲ್ಲಿ ಹಕ್ಕಿಗಳು ಗೂಡು ಕಟ್ಟುವಷ್ಟು ಅಚಲ, ನಿಷ್ಕ್ರಿಯವಾಗಿ ಧ್ಯಾನ ಮಾಡುವಂತಹ ಸುಖ ದೊರೆಯಬೇಕು ಎಂದು. ರಮಣ ಮಹರ್ಷಿಗಳು ಧ್ಯಾನ ಮಾಡುವಾಗ ಇರುವೆಗಳು ಅವರ ಶರೀರದ ಭಾಗಗಳನ್ನು ತಿನ್ನುತ್ತಿದ್ದವಂತೆ. ಅಷ್ಟರ ಮಟ್ಟಿಗೆ ಧ್ಯಾನದಲ್ಲಿ ತಲ್ಲೀನವಾಗಬೇಕು. ಯಾಕೆಂದರೆ ಆತ್ಮದ ದನಿ ಕೇಳಬೇಕಿದ್ದರೆ ಉಳಿದ ಇಂದ್ರಿಯಗಳ ಚಟುವಟಿಕೆಗಳು ನಿಲ್ಲಬೇಕು.
ಉದಾಹರಣೆಗೆ, ಒಬ್ಬರು ಉತ್ತಮವಾಗಿ ಸಂಗೀತ ಹಾಡುವ ವೇಳೆ, ನೂರು ಜನರು ಗದ್ದಲ ಮಾಡುತ್ತಿದ್ದರೆ ಸಂಗೀತದ ಇಂಪಾದ ದನಿ ಕೇಳಿಸುವುದು ಸಾಧ್ಯವಿಲ್ಲ. ಅಂತೆಯೇ ಆತ್ಮದ ದನಿ ಕೇಳಿಸಬೇಕಾದರೆ, ಆತ್ಮದ ಅನುಭೂತಿಯಾಗಬೇಕಾದರೆ, ಆತ್ಮದ ಸುಖ ಸಿಗಬೇಕಾದರೆ ಎಲ್ಲ ಇಂದ್ರಿಯಗಳ, ಶರೀರದ ಚಟುವಟಿಕೆಗಳು ಸ್ತಬ್ಧವಾಗಲೇಬೇಕು. ಆತ್ಮದ ದನಿ ಎಂದರೆ, ಓಂಕಾರ. ಅದು ಕೇಳಿಸಿದಾಗ ದೊರಕುವುದು ಸುಖ-ಆನಂದ, ಅದನ್ನು ಬಣ್ಣಿಸಲು ಸುಖವೆಂಬ ಶಬ್ದ ಸಣ್ಣದಾಯಿತು. ಖ ಎಂದರೆ ಇಂದ್ರಿಯ, ಸುಖವೆಂದರೆ ಇಂದ್ರಿಯಗಳಿಂದ ದೊರಕುವಂತದ್ದು. ಧ್ಯಾನದಿಂದ ಬರುವ ಆನಂದವು ಇಂದ್ರಿಯದಾಚೆಯಿಂದ ಬರುವಂತದ್ದು. ಆನಂದವು ಸರ್ವಶ್ರೇಷ್ಠವಾಗಿರುತ್ತದೆ. ಅದು ಶಂಕರಾಚಾರ್ಯರು ಪಟ್ಟಂತಹ ಸುಖ, ಇಂದ್ರಿಯಗಳಿಂದ ಬಂದ ಸುಖವಲ್ಲ ಬದಲಾಗಿ ಧ್ಯಾನ ಸುಖವದು. ಅಷ್ಟೆತ್ತರಕ್ಕೆ ಏರಲು ನಮಗೆ ಸಾಧ್ಯವಿಲ್ಲ. ಹಾಗಾದರೆ ಸುಖಕ್ಕಾಗಿ ಒಳಿತನ್ನು ಮಾಡಬಹುದು. ಸುಖವನ್ನು ಪಡೆಯುವಂತಹ ಇನ್ನೊಂದು ದಾರಿ ಯಾವುದೆಂದರೆ ಒಳ್ಳೆಯದನ್ನು ಮಾಡುವುದು.
೨) ಒಳ್ಳೆಯದು ಮಾಡಿ ಬರುವಂತಹ ಸುಖ:
ಇದು ಒಳಿತು ಮಾಡಿ ಬರುವಂತಹ ಸುಖ, ಇದಕ್ಕೆ ಪುಣ್ಯ ಎಂದು ಹೆಸರು. ಧ್ಯಾನದ ಮಾರ್ಗವು ಸುಖ ಪಡೆಯಲು ಸರ್ವೋತ್ತಮ ದಾರಿಯಾಗಿದೆ. ಒಳಿತು ಮಾಡುವ ಮೂಲಕ ಸುಖ ಪಡುವಂತದ್ದು, ಎರಡನೆಯ ದಾರಿ. ಇದು ಮಧ್ಯಮ ದಾರಿ. ಮೊದಲನೆಯ ದಾರಿಗೆ ನಾವು ಮೆಟ್ಟಿಲೇರಬೇಕು ಎಂದಾದರೆ ಆ ಮೆಟ್ಟಿಲುಗಳೇ ಎರಡನೆಯ ದಾರಿ. ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ನಮ್ಮ ಸುಖವನ್ನು ಕಂಡುಕೊಳ್ಳುವಂತದ್ದು.
ಉದಾಹರಣೆಗೊಂದು ಕಥೆ:
ಒಬ್ಬ ಶಿಕ್ಷಕರು ತಮ್ಮ ತರಗತಿಯ ಎಲ್ಲ ಮಕ್ಕಳಿಗೂ ಒಂದೊಂದು ಬುಗ್ಗೆಯನ್ನು ನೀಡಿ ಅದರ ಮೇಲ್ಗಡೆ ತಮ್ಮ ತಮ್ಮ ಹೆಸರುಗಳನ್ನು ಬರೆಯಿಸುತ್ತಾರೆ. ಬಳಿಕ ಬುಗ್ಗೆಗಳನ್ನೆಲ್ಲಾ ಒಂದು ಕೋಣೆಯಲ್ಲಿಟ್ಟು ಬಿಡುತ್ತಾರೆ. ಮಕ್ಕಳಲ್ಲಿ ಕೋಣೆಯ ಒಳಗೆ ಹೋಗಿ ತಮ್ಮ ತಮ್ಮ ಬುಗ್ಗೆಗಳನ್ನು ಆರಿಸಿಕೊಳ್ಳಲು ಹೇಳುತ್ತಾರೆ. ಮಕ್ಕಳೆಲ್ಲಾ ಒಂದೇ ಸಮನೆ ಕೋಣೆಯೊಳಗೆ ಹೋಗಿ ಸದ್ದು ಗದ್ದಲ ಮಾಡಿಬಿಡುತ್ತಾರೆ. ಆದರೂ ಯಾರಿಗೂ ತಮ್ಮ ಹೆಸರಿರುವ ಬುಗ್ಗೆ ದೊರೆಯಲೇ ಇಲ್ಲ. ಈಗ ಶಿಕ್ಷಕರೊಂದು ಉಪಾಯವನ್ನು ಹೇಳುತ್ತಾರೆ. ಎಲ್ಲರೂ ಒಂದೊಂದು ಬುಗ್ಗೆಯನ್ನೆತ್ತಿ ಅದರಲ್ಲಿ ಯಾರ ಹೆಸರಿರುತ್ತದೆಯೋ ಅವರಿಗೆ ಕೊಡಲು ಹೇಳುತ್ತಾರೆ. ಈಗ ಎಲ್ಲರಿಗೂ ತಮ್ಮ ಹೆಸರಿರುವ ಬುಗ್ಗೆ ದೊರೆತಂತಾಯಿತು. ಇನ್ನೊಬ್ಬರಿಗೆ ಅಗತ್ಯವಾದುದನ್ನು ಮಾಡುವ ಮೂಲಕ ನಮ್ಮ ಸುಖವನ್ನು ನಾವು ಕಂಡುಕೊಳ್ಳಬಹುದು.
ಕಥೆ: ಸುರ-ಅಸುರರಲ್ಲಿ ಅಸುರರು ದೊಡ್ಡ ತಾಯಿಯ ಮಕ್ಕಳು, ಸುರರು ಸಣ್ಣ ತಾಯಿಯ ಮಕ್ಕಳು. ಆದರೂ ಸುರರಿಗೆ ಸ್ವರ್ಗ, ಅಸುರರಿಗೆ ಪಾತಾಳ. ಸುರರಿಗೆ ಪೂಜೆ-ಪುನಸ್ಕಾರಗಳು ನಡೆದರೆ ಅಸುರರಿಗೆ ಉಚ್ಛಾಟನೆ. ಇದು ನ್ಯಾಯವಲ್ಲ ಎಂಬುದಾಗಿ ದೂರು ನೀಡಲು ಅಸುರರು ಪ್ರಜಾಪತಿ ಬ್ರಹ್ಮನ ಬಳಿ ಬರುತ್ತಾರೆ. ಬ್ರಹ್ಮನು ಇದನ್ನೊಂದು ಗಂಭೀರ ಪ್ರಶ್ನೆಯಾಗಿ ಪರಿಗಣಿಸಿ, ಒಂದು ಔತಣಕೂಟ ಏರ್ಪಾಡು ಮಾಡಿ ತದನಂತರ ಈ ಬಗ್ಗೆ ಚರ್ಚಿಸೋಣ ಎನ್ನುತ್ತಾನೆ. ಔತಣ ಕೂಟ ಏರ್ಪಟ್ಟಿತು, ಸುರರದ್ದು, ಅಸುರರದ್ದು ಪಂಕ್ತಿ ಬೇರೆಯಾಯಿತು. ಊಟವನ್ನು ಬಡಿಸಿದಾಗ ಬ್ರಹ್ಮನು ಒಂದು ನಿಯಮವನ್ನು ಹೇಳುತ್ತಾನೆ. ಎಲ್ಲರೂ ಊಟ ಮಾಡಬಹುದು ಆದರೆ ಮೊಣಕೈ ಬಗ್ಗಿಸುವಂತಿಲ್ಲ. ನೆಟ್ಟಗೆ ಕೈಯಲ್ಲಿಯೇ ಊಟಮಾಡಬೇಕು. ರಾಕ್ಷಸರು ತುಂಬ ಪ್ರಯತ್ನ ಪಟ್ಟು ಕೊನೆಗೆ, ಇಷ್ಟೊಳ್ಳೆ ಊಟ ಬಡಿಸಿ ಉಣದಂತಹ ನಿಯಮವೇ? ಎಂದು ಬೈಯ್ಯುತ್ತಾ ಎದ್ದು ನಡೆದರು. ಆದರೆ ದೇವತೆಯರು ಆಲೋಚಿಸಿ, ತಾವು ಉಣಲು ಸಾಧ್ಯವಿಲ್ಲದಿದ್ದರೂ ಪಕ್ಕದವನ ಬಾಯಿಗೆ ನೀಡಬಹುದಲ್ಲವೇ ಎನ್ನುತ್ತಾ ಪಕ್ಕದವನಿಗೆ ಕೈತುತ್ತು ನೀಡಿದರು. ಹೀಗೆ ಪಕ್ಕದವನ ಕೈತುತ್ತು ಪ್ರತಿಯೊಬ್ಬರು ಕೂಡ ಉಂಡರು.
ಈ ರೀತಿಯಲ್ಲಿ ಇನ್ನೊಬ್ಬನಿಗೆ ಸುಖ ನೀಡಿ ನಾವೂ ಸುಖವನ್ನು ಪಡೆಯುವುದು.
೩) ಕೆಟ್ಟದ್ದು ಮಾಡಿ ಬರುವಂತಹ ಸುಖ:
ನೂಲಿನಂತೆ ಸೀರೆಯಿರುತ್ತದೆ. ಬಿಳಿ ನೂಲಿನಿಂದ ಕಪ್ಪು ಸೀರೆ ತಯಾರಿಸಲು ಸಾಧ್ಯವಿಲ್ಲ. ಹಾಗೆಯೇ, ಕೆಟ್ಟದ್ದರಿಂದ ಒಳ್ಳೆಯದನ್ನು ಸಂಪಾದಿಸಲು ಸಾಧ್ಯವಿಲ್ಲ. ಕೆಟ್ಟದ್ದರಿಂದ ಕೆಟ್ಟದ್ದು ಆಗಬಹುದು, ಒಳ್ಳೆಯದರಿಂದ ಒಳ್ಳೆಯದಾಗಬಹುದು. ಕೆಟ್ಟದ್ದು ಮಾಡಿ ದೊರಕುವ ಸುಖ, ಸುಖವಲ್ಲ. ಕೆಟ್ಟದ್ದರಿಂದ ಸುಖ ಬರುವುದಿಲ್ಲ, ಬಂದರೆ ಅದು ಸುಖವಲ್ಲ. ಬಂದರೂ ಅದು ತಾತ್ಕಾಲಿಕವಾದ ಭ್ರಮೆ ಮಾತ್ರ. ಅದರ ಮುಂದೆ ತುಂಬ ದೊಡ್ಡ ಅನರ್ಥ ಕಾದಿದೆ ಎಂದರ್ಥ. ಕೆಟ್ಟದ್ದನ್ನು ಮಾಡಿದರೆ ಅದು ಕ್ಷಣಿಕವಾಗಿ ಸಂತೋಷದ ಭ್ರಮೆಯನ್ನುಂಟು ಮಾಡಿ ಮುಂದೆ ನಮ್ಮನ್ನು ದೊಡ್ಡ ಕೂಪಕ್ಕೆ ನೂಕುವಂತದ್ದು. ಇದಕ್ಕೆ ಪಾಪವೆಂದು ಹೆಸರು. ಪಾಪದ ಪರಿಣಾಮವೆಂದೂ ಒಳ್ಳೆಯದಾಗಿರುವುದಿಲ್ಲ.
ಕಥೆ: ಕೈಕೇಯಿಯ ಮನಸ್ಸಿನಲ್ಲಿ ಆಕೆ ರಾಜಮಾತೆಯಾಗಬೇಕು ಎಂಬ ಅಪೇಕ್ಷೆಯನ್ನು ಮಂಥರೆಯು ಹುಟ್ಟುಹಾಕುತ್ತಾಳೆ. ಈ ಅಪೇಕ್ಷೆಯನ್ನು ಸಾಕಾರಗೊಳಿಸಲು ಆಕೆ ಆರಿಸಿದ ದಾರಿ, ಅದು ಕೆಟ್ಟದ್ದನ್ನು ಮಾಡಿ ಸುಖವನ್ನು ಪಡೆಯುವ ದಾರಿ. ವಂಚನೆಯ ದಾರಿ. ದಶರಥನ ಬಳಿ ಭಾಷೆಯನ್ನು ತೆಗೆದುಕೊಂಡ ಬಳಿಕವೇ ವರವನ್ನು ಕೇಳುತ್ತಾಳೆ. ಮಾತು ತೆಗೆದುಕೊಂಡ ಬಳಿಕವೇ ರಾಮನಲ್ಲಿ ಅಪೇಕ್ಷೆಯನ್ನು ಹೇಳಿಕೊಳ್ಳುತ್ತಾಳೆ. ಇವು ಸರಿಯಾದ ಹಾದಿಯಲ್ಲ. ದಶರಥನು ರಾಮನಲ್ಲಿ ಕೈಕೇಯಿ ವಂಚಿಸಿರುವುದಾಗಿ ಹೇಳುವುದು ರಾಮಾಯಣದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರ ಪರಿಣಾಮವಾಗಿ ಏನೆಲ್ಲಾ ಸಂಭವಿಸಿತು! ಕೈಕೇಯಿಯ ಸುಖಗಳಿಗೆ ಸಂಪೂರ್ಣ ಕಾರಣಕರ್ತನಾಗಿದ್ದ ದಶರಥ ನೊಂದುಕೊಳ್ಳುತ್ತಾನೆ. ಪ್ರಾಣ ಹೋಗುವ ಮಟ್ಟಕ್ಕೆ ನೊಂದುಕೊಳ್ಳುತ್ತಾನೆ. ಕೈಕೇಯಿ ವಿಧವೆಯಾಗುತ್ತಾಳೆ. ಆಕೆಯನ್ನು ರಾಜ್ಯ ಪೂರ್ತಿ ತಿರಸ್ಕಾರ ಭಾವದಿಂದ ಕಾಣುತ್ತದೆ. ಎಲ್ಲಿ ಹೋದರೂ ಆಕೆಗೆ ಅಪವಾದ, ಕೆಟ್ಟಮಾತುಗಳು. ಎಲ್ಲರೂ ಆಕೆಯನ್ನು ಶಪಿಸುವವರೇ. ಇಂತಹ ಸುಖ ಬೇಕೇ? ಕೊನೆಯ ಪಕ್ಷ ಭರತನಾದರೂ ಒಪ್ಪಿಕೊಂಡನೇ? ಭರತನ ಪಾಲಿಗೆ ತಾಯಿ ತಾಯಿಯಾಗಿ ಉಳಿಯಲಿಲ್ಲ. ಕೈಕೇಯಿಯನ್ನು ರಾಕ್ಷಸಿ ಎಂದು ಕರೆಯುತ್ತಾನೆ. ಕೈಕೇಯಿಗೆ ಕ್ಷಣಿಕ ಸುಖವು ದೊರೆಯಿತಾದರೂ ಅದು ಶಾಶ್ವತವಾಗಿ ಉಳಿಯಲಿಲ್ಲ. ಆಕೆಗಾಗಿ ಉಳಿದಿದ್ದು ತಿರಸ್ಕಾರ, ದೋಷಗಳೇ ಹೊರತು ಬೇರೇನೂ ಅಲ್ಲ.
ಕೆಟ್ಟದ್ದನ್ನು ಮಾಡಿದರೆ ಹತ್ತಾರು ವರುಷದ ಸುಖ ದೊರಕಬಹುದು. ಆದರೆ ಅದರ ಬಳಿಕ ಸಾವಿರಾರು ವರುಷದ ನರಕ ದೊರೆಯುತ್ತದೆ.
ಹೀಗೆ ಸುಖ ಬರುವ ಮೂರು ದಾರಿಗಳು ಇವೆ. ಮೊದಲನೆಯದ್ದರಲ್ಲಿ, ನಮಗೆ ಮುಕ್ತಿ ದೊರೆಯುತ್ತದೆ. ನಾವು ದೇವರಾಗುತ್ತೇವೆ. ನಾವೂ ಶಂಕರಾಚಾರ್ಯರಂತೆ, ಸದಾಶಿವ ಬ್ರಹ್ಮದೇವರಂತೆ, ಶುಕಮುನಿಗಳಂತೆ ಆಗುತ್ತೇವೆ.
ಎರಡನೇಯದಾಗಿ ಸತ್ಕಾರ್ಯದಿಂದ ಸುಖ ಬರಬಹುದು. ಸುಖ ಬರುವ ದಾರಿಯ ಕುರಿತು ತುಂಬಾ ಜಾಗ್ರತೆ ಬೇಕು. ಸುಖವು ಯಾವ ದಾರಿಯಲ್ಲಿ ಬಂತೆಂಬುದನ್ನು ನಾವು ನೋಡಿಕೊಳ್ಳಬೇಕು. ಎಲ್ಲ ದಾರಿಯಲ್ಲಿ ಬಂದರೆ ಅದು ಸುಖವಲ್ಲ, ಸುಖದ ವೇಷ ತೊಟ್ಟು ದುಃಖ, ಪಾಪ, ಕೇಡುಗಳು ಬರಬಹುದು. ಅವುಗಳನ್ನು ತಿರಸ್ಕರಿಸಬೇಕು. ಅವುಗಳನ್ನು ಸದಾ ನಿರಾಕರಿಸಬೇಕು. ಶಂಕರಾಚಾರ್ಯರು ಹೇಳಿದಂತೆ ನಿಜಕರ್ಮದಿಂದ ಬಂದ ವಿತ್ತದಿಂದ ಸಂತೋಷವನ್ನು ಪಡೆಯಬೇಕು. ಅದನ್ನು ಮಾತ್ರವೇ ಅಪೇಕ್ಷಿಸಬೇಕು. ಬೇರೆ ದಾರಿಯಲ್ಲಿ ಬಂದ ಸುಖ, ಸುಖವಾಗಿರುವುದಿಲ್ಲ. ಅದು ಮಾಯೆಯಾಗಿರುತ್ತದೆ. ಬಂದಿರುವುದು ಬಿಂದು ಸುಖವೋ, ಸಿಂಧು ದುಃಖವೋ ಎಂದು ನೋಡಬೇಕು.
ಕಥೆ:
ಸಂನ್ಯಾಸಿಯೊಬ್ಬನು ಶ್ರೀಮಂತನ ಮನೆಯಲ್ಲಿ ಭಿಕ್ಷೆ ಪಡೆದುಕೊಂಡು ಹೋಗುತ್ತಾನೆ. ಹೋಗಬೇಕಾದರೆ ಒಂದು ಬೆಳ್ಳಿಯ ಲೋಟೆಯನ್ನು ಕದಿಯುತ್ತಾನೆ. ಬಳಿಕ ಸನ್ಯಾಸಿಗೆ ಗೋಚರವಾಗುತ್ತದೆ. ಬೆಳ್ಳಿ ಲೋಟೆಯನ್ನು ಯಾತಕ್ಕಾಗಿ ತಂದೆ ಎಂದು ಆಲೋಚಿಸಿ ಪುನಃ ಶ್ರೀಮಂತನ ಮನೆಗೆ ಹೋಗಿ ಬೆಳ್ಳಿ ಲೋಟವನ್ನು ಹಿಂತಿರುಗಿಸುತ್ತಾನೆ. ಶ್ರೀಮಂತನಿಗೆ ಅಷ್ಟೊಂದು ಸೊತ್ತು ಬಂದ ದಾರಿ ಯಾವುದೆಂದು ವಿಚಾರಿಸುತ್ತಾನೆ. ಆ ಸೊತ್ತುಗಳಷ್ಟೂ ಕಳ್ಳ ದಾರಿಯಿಂದ ಬಂದ ಕಾರಣವೇ ಅಲ್ಲಿನ ಊಟವನ್ನು ಮಾಡಿದ ಸನ್ಯಾಸಿಗೂ ಅದೇ ಬುದ್ಧಿ ಬಂದಿರುವುದು. ಕೆಟ್ಟ ಹಾದಿಯನ್ನು ಹಿಡಿದು ಬಂದ ಸೊತ್ತು ಕೆಟ್ಟ ಪರಿಣಾಮವನ್ನೇ ನೀಡುವುದು. ಸುಖ ಬರುವ ಮೂರು ದಾರಿಗಳಲ್ಲಿ ಮೊದಲೆರಡು ದಾರಿಗಳನ್ನು ಆರಿಸಬೇಕು. ಕೊನೆಯದಾಗಿ ಮೊಟ್ಟಮೊದಲ ದಾರಿಯಲ್ಲಿ ನಿಂತುಕೊಳ್ಳಬೇಕು.
ಈಗ ಸುಖಕ್ಕಾಗಿ ಹೊರಗಿನ ವಸ್ತುಗಳ ಮೇಲೆ ಅಧೀನರಾಗಿರುವುದನ್ನು ನಾವು ಗಮನಿಸಬಹುದು.
ಕಥೆ: ದೇವದತ್ತನು ಸಮುದ್ರದ ಬಳಿಯಲ್ಲಿ ನಿಂತು ಮುಗುಳುನಗುತ್ತಿದ್ದನಂತೆ. ತೆನಾಲಿರಾಮನು ಕಾರಣವನ್ನು ಕೇಳಿದಾಗ, ತಾನು ಸೊತ್ತನ್ನು ಸಂಪಾದಿಸಿ, ಒಂದೊಳ್ಳೆ ಹುಡುಗಿಯನ್ನು ಮದುವೆಯಾಗಿ, ಹತ್ತಾರು ವಾಹನಗಳನ್ನು ಪಡೆಯುವ ಬಗ್ಗೆ ಆಲೋಚಿಸುತ್ತಿದ್ದೆ ಎಂದನಂತೆ. ತದನಂತರ ಏನು ಮಾಡುವುದಾಗಿ ತೆನಾಲಿರಾಮನು ಪ್ರಶ್ನಿಸಿದನಂತೆ. ದೇವದತ್ತನು ಆ ಬಳಿಕ ಹಾಯಾಗಿ ಸಮುದ್ರದ ಬದಿಯಲ್ಲಿ ಕೈಬೀಸಿ ಇರಬಹುದಲ್ಲ ಎಂದಾಗ ತೆನಾಲಿರಾಮನು, ಅದು ಈಗಲೇ ಮಾಡಬಹುದಲ್ಲ ಎಂದನಂತೆ.
ನಾವು ಯಾವುದೇ ಪರಿಕರವಿಲ್ಲದೆ ಸುಖ ಪಡುವಂತೆ ಆಗಬೇಕು. ಹೊರಗಿನ ವಸ್ತುವನ್ನು ಬಯಸದೇ ಸುಖ ಪಟ್ಟರೆ ನಾವು ಉದ್ಧಾರವಾಗಬಹುದು, ಅದನ್ನೇ ಗುರಿಯಾಗಿಸಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಯಜ್ಞ, ದಾನ, ತಪಸ್ಸು, ಪರೋಪಕಾರಗಳನ್ನು ಮಾಡುತ್ತಿರಬೇಕು. ಆಗ ಸುಖದ ಮರಿಗಳು, ಸುಖದ ಬಿಂದುಗಳು ನಮಗೆ ಸಿಗುತ್ತವೆ. ಮೊದಲನೆಯ ದಾರಿಯಲ್ಲಿ ಸುಖದ ಸಿಂಧು ಸಿಗುವಂತದ್ದು. ರಾಮನ ದಾರಿಯೂ ಇದುವೇ. ಇದನ್ನೇ ರಾಮಾಯಣವು ತಿಳಿಸುವುದು. ಬಿಂದು ಬಿಂದು ಸುಖವನ್ನು ಪಡೆಯುತ್ತಾ ಸಿಂಧು ಸುಖವನ್ನು ಪಡೆದುಕೊಳ್ಳುವಂತದ್ದು.
|| ಹರೇರಾಮ ||
Jagadguru Shankaracharya Sri Sri Raghaveshwara Bharati Mahaswamiji – Ramayana sessions – Akshararoopa
ಶ್ರೀಸಂಸ್ಥಾನದವರು ಅನುಗ್ರಹಿಸುತ್ತಿರುವ – ಧರ್ಮಭಾರತೀ ಪ್ರಕಟಿಸುತ್ತಿರುವ ‘ಭಾವ~ರಾಮಾಯಣ’ ವೇ ರಾಮಾಯಣ ಪಾಠದ ಪಠ್ಯ.
ಶ್ರೀಸಂಸ್ಥಾನದವರು ಧರ್ಮಭಾರತೀ ಮೂಲಕ ಮರ್ಯಾದಾ ಪುರುಷೋತ್ತಮನ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ.
ವಿ.ಸೂ: ಚಂದಾ ಮಾಡಲು ಸಂಪರ್ಕಿಸಿ – 9449595254
Leave a Reply