ವಾಲ್ಮೀಕಿ ರಾಮಾಯಣ: ಭಾಗ – 38
ವಿವಿವಿ ಗುರುಕುಲಗಳಲ್ಲಿ ವಾಲ್ಮೀಕಿ ರಾಮಾಯಣವು ಒಂದು ಪಠ್ಯ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಗುರುಕುಲಗಳ ವಿದ್ಯಾರ್ಥಿಗಳಿಗೆ ಅನುಗ್ರಹಿಸುತ್ತಿರುವ ರಾಮಾಯಣ ಪಾಠದ ಅಕ್ಷರರೂಪ.

ಶಂ ನೋ ಅಸ್ತು ದ್ವಿಪದೇ ಶಂ ಚತುಷ್ಪದೇ”*ನಾವೆಲ್ಲಾ ಬಹಳ ಬಾರಿ ಕೇಳಿದ ವೇದದ ಸುಪ್ರಸಿದ್ಧ ಸಾಲುಗಳು. ಎರಡು ಕಾಲು ಇರುವ ಮನುಷ್ಯರಿಗೆಲ್ಲಾ ಒಳಿತಾಗಲಿ, ಅಷ್ಟು ಮ‌ಾತ್ರ ಅಲ್ಲ ನಾಲ್ಕು ಕಾಲುಗಳಿರುವ ಪ್ರಾಣಿಗಳಿಗೆಲ್ಲಾ ಒಳಿತಾಗಲಿ ಎನ್ನುವ ವೇದ ಮಂತ್ರ. ವೇದಗಳ ವಾತ್ಸಲ್ಯ ಎಷ್ಟು ಅದ್ಭುತವಾಗಿದೆ!. ಅದು ಕೇವಲ ಮನುಷ್ಯರಿಗೆ ಸೀಮಿತವಲ್ಲ, ಕ್ರಿಮಿ-ಕೀಟಗಳು, ಪ್ರಾಣಿ-ಪಕ್ಷಿಗಳು, ಗಿಡ-ಮರಗಳು, ಸಮಸ್ತ ಜೀವಜಾಲಗಳನ್ನು ಆ ವಾತ್ಸಲ್ಯ ವ್ಯಾಪಿಸಿರುವುದು ಈ ಮಂತ್ರದಿಂದ ತಿಳಿಯುತ್ತದೆ. ಆಧುನಿಕ ಸಮಾಜ ಹೇಗಿದೆ ಎಂದರೆ ಮನುಷ್ಯರನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಬಾಕಿ ಜೀವಗಳಿಗೂ ಜೀವ ಇದೆ ಎನ್ನುವ ಅರಿವೇ ಇಲ್ಲದಂತೆ ವ್ಯವಹಾರ ಮಾಡುತ್ತದೆ. ಆದರೆ ವೇದಗಳ ದೃಷ್ಟಿ ಹಾಗಲ್ಲ, ಯಾವ ಉಸಿರಿನಲ್ಲಿ ಎರಡು ಕಾಲಿನವರಿಗೆ ಒಳಿತಾಗಲಿ ಎಂದು ಹೇಳಿದರೋ, ಅದೇ ಉಸಿರಿನಲ್ಲಿ ಎಲ್ಲಾ ಪ್ರಾಣಿಗಳಿಗೂ ಕೂಡ ಒಳಿತಾಗಲಿ ಎಂದು ಹಾರೈಸುವ ಅದ್ಭುತ ಹೃದಯ ಅದರಲ್ಲಿದೆ.

ಛಾಂದೋಗ್ಯ ಉಪನಿಷತ್ ಏನು ಹೇಳುತ್ತದೆ ಅಂದರೆ – ಈ ಪ್ರಪಂಚವೆಲ್ಲಾ ಸೃಷ್ಟಿಯಾಗುವ ಮೊದಲು ಪರಮಾತ್ಮ ಅಥವಾ ಪರತತ್ವ ಇತ್ತು. ಅದೊಂದು ಬಿಂದು ಅಥವಾ ಚೈತನ್ಯ. ಅದೇ ಈ ವಿಶ್ವಕ್ಕೆಲ್ಲಾ ಮೂಲ. ವಿಶ್ವವನ್ನು ಅದೇ ನಡೆಸುತ್ತಿದೆ, ವಿಶ್ವವೆಲ್ಲಾ ಕೊನೆಗೆ ಲೀನವಾಗುವುದು ಅಲ್ಲಿಯೇ. “ಏಕಮೇವ ಅದ್ವೀತಿಯ” ಎನ್ನುವ ತತ್ವ ಮೊದಲಿತ್ತು. ಒಂದೇ ಒಂದಾಗಿ ಇದ್ದ ಪರಮಾತ್ಮನಿಗೆ ಬಂದ ಭಾವವೇ “ಬಹುಸ್ಯಾಂ ಪ್ರಜಾಯೇಯ”. ‘ನಾನು ಅನಂತನಾಗುವೆ, ನನ್ನ ಸಂತಾನ ಬೆಳೆಯಲಿ, ಪೀಳಿಗೆ – ಪೀಳಿಗೆಗಳಿಗೆ ನಾನು ಜನಕನಾಗುತ್ತೇನೆ’ ಎಂಬ ಭಾವ ಪರಮಾತ್ಮನಿಗೆ ಬಂತು. ತೈತ್ತಿರೀಯ ಉಪನಿಷತ್ತಿನಲ್ಲಿ ‘ಸೋsಕಾಮಯತ ಬಹುಸ್ಯಾಂ ಪ್ರಜಾಯೇಯ’- ಸೃಷ್ಟಿಗಿಂತ ಮೊದಲು ಒಬ್ಬನೇ ಇ‌ದ್ದ ಪರಮಾತ್ಮ ‘ತಾನು ಬಹುವಾಗುವೆ’ ಎಂದು ಬಯಸಿದ. 

ಈ ಉಪನಿಷತ್ತನ್ನು ಕಗ್ಗದ ಕವಿಗಳು ತಮ್ಮದೇ ಭಾಷೆಯಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದಾರೆ-“ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು|ಹೊಮ್ಮುವೆನು ಕೋಟಿರೂಪದಲಿ ನಾನೆಂದು|| ಬೊಮ್ಮನೆಳಸಿದನಂತೆ”.

ಗ್ರಹ-ನಕ್ಷತ್ರಗಳಾಗಿ, ಪಶು-ಪಕ್ಷಿ, ಕ್ರಿಮಿ-ಕೀಟ, ಮರ-ಗಿಡ ಹೀಗೆ ಅನಂತ ರೂಪವಾಗಿ ಹೊರಹೊಮ್ಮುತ್ತೇನೆಂದು ಪರಮಾತ್ಮನು ಬಯಸಿದನಂತೆ. ದೇವರ ಆ ಒಂದು ಭಾವವೇ ಈ ಪ್ರಪಂಚ. ನಾವು, ನಮ್ಮ ಸುತ್ತ-ಮುತ್ತ ಏನು ಕಾಣುತ್ತಿದ್ದೇವೆಯೋ ಇದು ಭಗವಂತ ಮಾಡಿರುವ, ಮಾಡುತ್ತಿರುವ ಏಕಪಾತ್ರಾಭಿನಯ. ನಮ್ಮ ಕಣ್ಣಿಗೆ ಕಾಣುವ ಪ್ರತಿಯೊಂದು ಕೂಡ ಭಗವಂತನ ಸೃಷ್ಟಿಯೇ ಆಗಿದೆ. ಸಮುದ್ರವನ್ನು ದಾಟಬಾರದು ಎಂದು ಹೇಳುತ್ತಾರೆ. ಅದಕ್ಕೆ ಮುಖ್ಯ ಕಾರಣ ಏನೆಂದರೆ, ಸಮುದ್ರ ಎಂಬುದು ಭಗವಂತನ ರೂಪ. ಅದನ್ನು ದಾಟಿ ಹೋಗುವುದು ಚೆನ್ನಾಗಿರುವುದಿಲ್ಲ. ಪೂಜ್ಯ ವಸ್ತುವನ್ನು ದಾಟಿ ಹೋಗಬಾರದು. *”ಗಂಗೆ ಎಂದರೆ ಅದು ಕರಗಿದ ಭಗವಂತ”*. 

ಕಗ್ಗದ ಕವಿ ಹೇಳುವುದು:”ಒ‌ಬ್ಬನುಣುವೂಟದಲಿ ಸವಿಯಿಲ್ಲ, ಸೊಗವಿಲ್ಲ|ಇಬ್ಬರಾಗುವೆನೆಂದನಂತೆ ಪರಬೊಮ್ಮಂ||ಹೆಬ್ಬದುಕನೊಂಟಿತನದೊಳದೇನು ಬದುಕುವೆಯೋ?|ತಬ್ಬಿಕೊಳೋ ವಿಶ್ವವನು – ಮಂಕುತಿಮ್ಮ||


ಹತ್ತಾರು ಜನ ಒಟ್ಟಿಗೆ ಸೇರಿ ಊಟಮಾಡಿದರೆ ಪ್ರೀತಿ ಹೆಚ್ಚು, ಊಟಕ್ಕೆ ರುಚಿ ಹೆಚ್ಚು. ಒಬ್ಬನೇ ಊಟಮಾಡುವಾಗ ರುಚಿಕರವಾದ ಊಟವಾದರೂ ಅದು ಸಪ್ಪೆ. ದೊಡ್ಡದಾದ ಬದುಕನ್ನು ಒಂಟಿತನದಲ್ಲಿ ಏಕೆ ಬದುಕುತ್ತೀಯೆ? ಈ ಜಗತ್ತಿನ ಜೊತೆಗೆ ನಾವು ಬೆರೆಯಬೇಕು. ‘ಊರಿಗೆ ಒಂದು ದಾರಿಯಾದರೆ ಪೋರನಿಗೆ ಒಂದು ದಾರಿ’ ಎಂಬ ಗಾದೆ ಮಾತಿನಂತಲ್ಲ. ನಾನು ಹೋಗಿ *”ನಾವು”* ಆಗಬೇಕು. ಕೂಡಿ ಬದುಕಬೇಕು ಎನ್ನುವ ತಾತ್ಪರ್ಯ. ಉದಾಹರಣೆಗೆ ದೂರ್ವೆ. ದೂರ್ವೆಯ ಒಂದು ಸೊಬಗು ಏನೆಂದರೆ, ಅದು ಒಂದೇ ಬೆಳೆಯದೇ ಕವಲೊಡೆದು ಗುಂಪುಗುಂಪಾಗಿ ಬೆಳೆಯುತ್ತದೆ. ಹಾಗೆಯೇ ನಾವು ಸಮೂಹದಲ್ಲಿ ಬೆಳೆಯಬೇಕು ಹೊರತು ಒಂಟಿಯಾಗಿ ಅಲ್ಲ. ಹಾಗೆ ಬೆಳೆಯುವಿಕೆ ಎನ್ನುವುದು ಸಮಷ್ಟಿ, ಯಾವುದು ಒಂದೇ ಇರುತ್ತದೋ ಅದು ಕೊರತೆ.

ಶ್ರೀರಂಗ ಮಹಾಗುರುಗಳು, ಅವರು ಸಿದ್ಧಪುರುಷರು. ಅವರಿಗೆ, ಅವರ ಗುರುಗಳ ಬಗ್ಗೆ ಒಬ್ಬರು ಕೇಳಿದರಂತೆ: “ನಿಮ್ಮ ಚಿಕ್ಕ ವಯಸ್ಸಿನಲ್ಲಿ ಆ ಗುರುಗಳು ಇಲ್ಲದಿದ್ದರೆ ಏನಾಗುತ್ತದೆ? ಅವರು ಅನಿವಾರ್ಯವಾ?” ಎಂದು. ಅವರು ಹೇಳುತ್ತಾರೆ- “ಅನಿವಾರ್ಯ ಅಂತ ಅಲ್ಲ. ಒಂದು ಗೋಡೆಯಲ್ಲಿ ಒಂದು ಇಟ್ಟಿಗೆ ತೆಗೆದರೆ ಗೋಡೆ ಬಿದ್ದು ಹೋಗುವುದಿಲ್ಲ. ಆದರೆ ಇಟ್ಟಿಗೆ ತೆಗೆದ ಜಾಗ ಅದು ರಂಧ್ರವೇ, ಅಲ್ಲಿ ಕೊರತೆ ಕಾಣುತ್ತದೆ.” ಈ ಮಾತುಗಳು, “ನಾನೊಬ್ಬನೇ ಬದುಕುತ್ತೇನೆ, ಏನೀಗ?” ಎನ್ನುವ ಮನೋಭಾವನೆ ಇದ್ದರೆ ಅದಕ್ಕೆ ಉತ್ತರ. ಹಾಗಾಗಿ ಮನುಷ್ಯರಿಗೆ ಮಾತ್ರವಲ್ಲ, ಮೃಗ-ಪಕ್ಷಿಗಳಿಗೂ ಶುಭವಾಗಬೇಕು. ಹಾಗಾಗಿ ನಮ್ಮಲ್ಲಿ ಪಶು ಅಷ್ಟೇ ಎಂಬ ಭಾವ ಇಲ್ಲ, ಪಶುಸಂಪದವದು. ಪಶುಗಳು ಅಂದರೆ ಲಕ್ಷ್ಮೀಯ ಒಂದು ಸ್ವರೂಪ.
ಇವತ್ತಿನ ಕಾಲದಲ್ಲಿ ಪ್ರಾಣಿಗಳ ಬಗ್ಗೆ ಕೂಗಿದೆ, ಆದರೆ ಕಾಳಜಿಯಿಲ್ಲ. ಆದರೆ ಅವತ್ತಿನ ಕಾಲದಲ್ಲಿ ತುಂಬಾ ಪ್ರೀತಿ ಮತ್ತು ಕಾಳಜಿಯಿತ್ತು. ಅದಕ್ಕೆ ಉದಾಹರಣೆ ಕೊಡುವುದಾದರೆ- ದಶರಥನು ಅಶ್ವಮೇಧಯಾಗದಲ್ಲಿ ಹತ್ತು ಲಕ್ಷ ಗೋವುಗಳನ್ನು ದಾನ ಮಾಡಿದ. ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ವಿವಾಹದ ಸಮಯದಲ್ಲಿ ಒಂದೊಂದು ಮಗನ ಲೆಕ್ಕದಲ್ಲಿ ಒಂದೊಂದು ಲಕ್ಷ ಗೋವುಗಳನ್ನು ಮಿಥಿಲೆಯಲ್ಲಿ ದಾನ ಮಾಡುತ್ತಾನೆ. ನಾಲ್ಕು ಲಕ್ಷಗೋವುಗಳನ್ನು ದಾನ ಮಾಡಬೇಕಾದರೆ ದಶರಥನಲ್ಲಿ ಒಟ್ಟು ಎಷ್ಟು ಗೋವುಗಳಿದ್ದವು?! ರಾಮ ಕಾಡಿಗೆ ಹೋಗಬೇಕಾದರೆ ಸರ್ವಸ್ವವನ್ನೂ ದಾನ ಮಾಡಿ ಹೋಗುತ್ತಾನೆ. ಎಲ್ಲವನ್ನೂ ದಾನ ಮಾಡಿದ ಮೇಲೆ ತ್ರಿಜಟ ಎನ್ನುವ ಬಡ ಬ್ರಾಹ್ಮಣ ಬಂದು ದಾನ ಕೇಳಿದಾಗ, ಸರಯೂ ನದಿ ತೀರದವರೆಗೆ ನಿಲ್ಲುವಷ್ಟು ಗೋವುಗಳನ್ನು ದಾನ ಮಾಡಿದ. ಅದು ರಾಜ ಭಂಡಾರದ ಗೋವುಗಳಲ್ಲ, ರಾಮನ ಖಾಸಗಿ ಗೋವುಗಳು. ಹಾಗಾಗಿ ಈ ರಾಜ ಪರಿವಾರ, ಅವತ್ತಿನ ಕಾಲದಲ್ಲಿ ಎಷ್ಟು ಗೋವುಗಳನ್ನು ಸಾಕಿರಬಹುದು?! 

ರಾಮನು ಕಾಡಿಗೆ ಹೋಗುತ್ತಾನೆ. ಒಂದನೇ ರಾತ್ರಿ ತಮಸಾ ನದಿ ತೀರದಲ್ಲಿ ಮಲಗುತ್ತಾನೆ, ಎರಡನೇ ರಾತ್ರಿ ಗಂಗಾ ತೀರದಲ್ಲಿ, ಗುಹನ ಪರಿಸರದಲ್ಲಿ ವಿಶ್ರಾಂತಿ ಪಡೆಯುತ್ತಾನೆ. ಗುಹನು ರಾಮನಿಗೆಂದು ಕಾಡಿನಲ್ಲಿ ಸಿಗುವ ರುಚಿಯಾದ ಭಕ್ಷ್ಯ-ಭೋಜ್ಯಗಳನ್ನು ತರುತ್ತಾನೆ, ಅದನ್ನು ರಾಮನು ಸ್ವೀಕಾರಮಾಡುವುದಿಲ್ಲ. ಗುಹನ ಮೇಲೆ ರಾಮನಿಗೆ ಪ್ರೀತಿಯಿಲ್ಲದೆ ಅಲ್ಲ. ಗುಹನನ್ನು ‘ತನ್ನ ಆತ್ಮ’ ಎನ್ನುತ್ತಾನೆ ರಾಮ. ಆದರೆ ಸ್ವೀಕರಿಸುವುದಿಲ್ಲ. ಏಕೆಂದರೆ, ಕ್ಷತ್ರಿಯರಿಗೆ ಪ್ರತಿಗೃಹ ವರ್ಜ್ಯ – “ನ ಚ ವರ್ತೇ ಪ್ರತಿಗೃಹೇ”. ರಾಮ ಹೇಳುತ್ತಾನೆ “ಗುಹ! ನನ್ನ, ನಿನ್ನ ಬಾಂಧವ್ಯ ಬೇರೆ. ಆದರೆ ಕ್ಷತ್ರಿಯನಾಗಿ, ಅಯೋಧ್ಯೆಯ ರಾಜಕುಮಾರನಾಗಿ ನಾನು ಏನ್ನನ್ನೂ ಸ್ವೀಕರಿಸಲಾರೆ” ಎಂದು ನೀರು ಕುಡಿದು ಮಲಗಿದ ರಾಮ. ಅಯೋಧ್ಯೆಯಿಂದ ಹೊರಟ ನಂತರ ಲಕ್ಷ್ಮಣ ತಂದುಕೊಟ್ಟ ನೀರನ್ನು ಬಿಟ್ಟು ಬೇರೆ ಯಾವ ಆಹಾರವನ್ನೂ ಸೇವಿಸಲಿಲ್ಲ. ಗುಹನು ಸಮರ್ಪಿಸಿದ ಹಣ್ಣು-ಹಂಪಲು, ಜೇನು ಇತ್ಯಾದಿ ಏನನ್ನೂ ಸ್ವೀಕರಿಸಲಿಲ್ಲ. ಆದರೆ ರಾಮ ಗುಹನಿಗೆ ಹೇಳುತ್ತಾನೆ, “ಕುದುರೆಗಳಿಗೆ ಏನಾದರು ತಿನ್ನಿಸು, ಅವುಗಳಿಗೆ ಹೊಟ್ಟೆ ತುಂಬಿದರೆ ನನಗೆ ಹೊಟ್ಟೆ ತುಂಬಿದಂತೆ”. ಅದು ಸ್ವಾರ್ಥವಲ್ಲ, ಅವರ ಮುಂದಿನ ವನವಾಸದ ಪ್ರಯಾಣದ ಸಲುವಾಗಿ ಅಲ್ಲ, ಬದಲಾಗಿ ಕುದುರೆಯ ಮೇಲಿನ ಪ್ರೀತಿಯಿಂದ.

‘ಅಶ್ವ ತೃಪ್ತಿಯಿಂದ ರಾಮ ತೃಪ್ತಿ’ ಇದನ್ನು *”ಆತ್ಮ ವಿಸ್ತರಣಾ”* ಎಂದು ಹೇಳುತ್ತಾರೆ. ಹಾಗೆಂದರೆ ರಾಮನ ಆತ್ಮ ರಾಮನಿಗೆ ಮಾತ್ರ ಸೀಮಿತವಾಗಿರಲಿಲ್ಲ. ಪ್ರಜೆಗಳಲ್ಲಿ, ಕುದುರೆಗಳಲ್ಲಿ, ಗೋವುಗಳಲ್ಲಿ ಇಲ್ಲೆಲ್ಲಾ ವಿಸ್ತರಿಸಿತ್ತು. ಹಾಗಾಗಿ ಕುದುರೆಗಳಿಗೆ ತೃಪ್ತಿಯಾದರೆ, ರಾಮನಿಗೆ ತೃಪ್ತಿಯಾಗುತಿತ್ತು. ಪ್ರಜೆಗಳಿಗೆ ಸಂತೋಷವಾದರೆ, ರಾಮನಿಗೆ ಸಂತೋಷವಾಗುತ್ತಿತ್ತು. ಅವುಗಳೂ ಕೂಡ ರಾಮನನ್ನು ಅಷ್ಟೇ ಪ್ರೀತಿಸುತಿದ್ದವು. ರಾಮನ ಪರಿವಾರ ಅದು ಒಂಟಿತನವಲ್ಲ, ಕೂಡಿ ಬದುಕುವುದು ಹೇಗಿದೆ ಎಂದರೆ ರಾಮ ಒಬ್ಬನಿಗೆ ವನವಾಸ, ಆದರೂ ಎಲ್ಲಾ ಪ್ರಜೆಗಳು ಕಾಡಿಗೆ ಬರುತ್ತಾರೆ. ರಾಮನು ಗಂಗಾ ನದಿಯನ್ನು ದಾಟಿ ಹೋದಾಗ ಕುದುರೆಗಳು ಕಣ್ಣೀರು ಸುರಿಸುತ್ತಾ ನಿಂತಿದ್ದವು, ಅವುಗಳು ಅಯೋಧ್ಯೆಗೆ ಮರಳಿ ಹೋಗಲು ಒಪ್ಪಲಿಲ್ಲ. 

ಭರತನು ಮಾವನ ಮನೆಗೆ ಹೋಗಿ ಮರಳಿ ಅಯೋಧ್ಯೆಗೆ ಬರುವಾಗ, ಅವನ ಅಜ್ಜ ಅಶ್ವಪತಿ ಮತ್ತು ಮಾವ ಯುಧಾಜಿತ್ ಅವನಿಗೆ ಉಡುಗೊರೆಯನ್ನು ಕೊಟ್ಟು ಕಳುಹಿಸುತ್ತಾರೆ. ಆ ಉಡುಗೊರೆಯಲ್ಲಿ ನಾಲ್ಕು ನಾಯಿಗಳು ಇದ್ದವು. ಒಂದೊಂದು ನಾಯಿಯೂ ವ್ಯಾಘ್ರದಂತಹ ಬಲವುಳ್ಳವು ಹಾಗೂ ಬಹಳ ಎತ್ತರವಾಗಿದ್ದವು. ಅವುಗಳ ಹಲ್ಲುಗಳು ಚೂರಿಯಂತೆ ಇದ್ದವು. ಅಂದಿನ ಕಾಲದಲ್ಲಿ ಪಶುಗಳು, ಪ್ರೀತಿಗೆ ಒಂದು ದ್ಯೋತಕವಾಗಿ ಇದ್ದವು ಎಂಬುದು ಇಲ್ಲಿ ಗೋಚರಿಸುತ್ತದೆ.
ವಿಶ್ವಾಮಿತ್ರರು ಮಿಥಿಲೆಗೆ ಹೊರಟ ಸಂದರ್ಭ: ಯಜ್ಞ ರಕ್ಷಣೆಯ ಸಲುವಾಗಿ, ಮಾರೀಚ – ಸುಬಾಹುವಿನ ಸಂಹಾರವಾದ ಮೇಲೆ ವಿಶ್ವಾಮಿತ್ರರು, ರಾಮ-ಲಕ್ಷಣರ ಜೊತೆಗೆ ಮಿಥಿಲೆಗೆ ಹೊರಟಾಗ ಕಾಡಿನ ಎಲ್ಲಾ ಮೃಗ ಪಕ್ಷಿಗಳೂ ಜೊತೆಗೆ ಬಂದವಂತೆ. ಅಷ್ಟು ಪ್ರೀತಿ ಇತ್ತು ಅವುಗಳಿಗೆ.


ರಾಮನ ಅರಮನೆಯಲ್ಲಿ ಜಲಚರ ಪಕ್ಷಿಗಳು, ಸಾರಸ ಪಕ್ಷಿಗಳು, ನವಿಲುಗಳು ಇತ್ಯಾದಿ ಪಕ್ಷಿಗಳಿದ್ದವು. ಅರಮನೆ ಎಂದರೆ ಬರೇ ಮನುಷ್ಯರು, ಆನೆ, ಕುದುರೆಗಳಂತಹ ಪ್ರಾಣಿಗಳು ಮಾತ್ರವಲ್ಲದೆ ಪಂಜರದಲ್ಲಿ, ಉದ್ಯಾನವನದಲ್ಲಿ ನಾನಾ ಬಗೆಯ ಪಕ್ಷಿಗಳು ಕೂಡ ಇದ್ದವು. ಸಹಬಾಳ್ವೆ ಎಂದರೆ ಇದು. ನಮ್ಮ ಬದುಕು ಹೇಗಿರಬೇಕೆಂದರೆ ಗಿಡ, ಮರ, ಪ್ರಾಣಿ, ಪಕ್ಷಿ, ಇವುಗಳ ಜೊತೆಗೆ ನೀರು, ಬೆಟ್ಟ, ಗುಡ್ಡಗಳನ್ನು ಒಳಗೊಂಡಿರಬೇಕೇ ವಿನಃ ಮನುಷ್ಯರು ಮಾತ್ರ ಇರುವಲ್ಲಿ ಇರಬಾರದು.
ಮಹಾಭಾರತದ ಉದಾಹರಣೆ: ಪಾಂಡವರ ಮಹಾಪ್ರಸ್ಥಾನದ ಒಂದು ಸಂದರ್ಭ. ಹೊರಟಿದ್ದು ಆರು ಜನ, ಪಾಂಡವರು ಹಾಗೂ ದ್ರೌಪದಿ. ಹೋಗುವ ದಾರಿಯಲ್ಲಿ ಒಬ್ಬೊಬ್ಬರಿಗೇ ಮರಣ ಬರುತ್ತದೆ. ಅಂತಿಮವಾಗಿ ಧರ್ಮರಾಜ ಉಳಿಯುತ್ತಾನೆ. ಆದರೆ ಒಂದು ನಾಯಿ ಅವನ ಜೊತೆಯಲ್ಲಿಯೇ ಬರುತ್ತಿತ್ತು, ಮರಳಿ ಬಾರದ ಪ್ರಯಾಣಕ್ಕೆ, ಜೊತೆಯಾಗಿ. ಪ್ರಾಣಿಗಳ ಪ್ರೀತಿ ಅಂತಹದ್ದು.


ಜಪಾನಿನ ಹಚಿಕೋ:ಜಪಾನಿನಲ್ಲಿ ಒಬ್ಬರು ಪ್ರೊಫೆಸರ್ ನಿತ್ಯವೂ ರೈಲಿನಲ್ಲಿ ಓಡಾಟ ಮಾಡುತಿದ್ದರು. ಒಂದು ಬಾರಿ ಅವರಿಗೆ ರೈಲಿನಲ್ಲಿ ಒಂದು ನಾಯಿ ಸಿಗುತ್ತದೆ. ಅದನ್ನು ಅವರು ಸಾಕುತ್ತಾರೆ. ಅವರು ಕಾಲೇಜಿಗೆ ಹೋಗುವಾಗ ಆ ನಾಯಿ ಕೂಡ ಅವರ ಜೊತೆಯಲ್ಲಿಯೇ ಬರುತಿತ್ತು. ಅವರು ರೈಲು ಹತ್ತಿ ಹೋಗುತ್ತಿದ್ದರು. ಆ ನಾಯಿ ಅವರು ಮರಳಿ ಬರುವಲ್ಲಿಯವರೆಗೆ ರೈಲ್ವೇ ಸ್ಟೇಷನ್ನಿನಲ್ಲಿಯೇ ಕಾಯುತಿತ್ತು. ಒಂದು ದಿನ ಪ್ರೊಫೆಸರ್ ಕಾಲೇಜಿನಲ್ಲಿಯೇ ತೀರಿಕೊಳ್ಳುತ್ತಾರೆ. ಆದರೆ ಆ ನಾಯಿ ರೈಲ್ವೇ ಸ್ಟೇಷನ್ನಲ್ಲಿ ಅವರಿಗಾಗಿ ಕಾಯುತಿತ್ತು. ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿಯೇ ಕಾದು ಕೊನೆಗೆ ಅಲ್ಲಿಯೇ ತೀರಿಕೊಳ್ಳುತ್ತದೆ. ಇಷ್ಟು ಪ್ರೀತಿಯನ್ನು ಯಾವ ಮನುಷ್ಯರು ತಾನೇ ಕೊಡುತ್ತಾರೆ?! ನಮಗಾಗಿ ಎಷ್ಟೋ ಸಲ ಪ್ರಾಣಿ-ಪಕ್ಷಿಗಳು ಪ್ರಾಣ ಕೊಡುತ್ತವೆ. ಅವುಗಳು ಮನುಷ್ಯರ ಪರಿಚಯ ಕೂಡ ಮರೆಯುವುದಿಲ್ಲ. ಅಂತಹ ಪ್ರೀತಿ, ಆ ಪ್ರೀತಿಯ ಸ್ಮೃತಿ, ಅದು ಕೊಡುವಂತಹ ಪವಿತ್ರತೆ, ಮನುಷ್ಯರು ಕೊಡಲು ಸಾಧ್ಯವಿಲ್ಲ.

ಕೊಟ್ಟ ಕೊನೆಯಲ್ಲಿ ಧರ್ಮರಾಜನಿಗೆ ಸ್ವರ್ಗಕ್ಕೆ ಹೋಗಲು ವಿಮಾನ ಬಂದಾಗ ಧರ್ಮರಾಜನು ಒಂದು ಷರತ್ತನ್ನು ದೇವತೆಗಳ ಮುಂದಿಟ್ಟ, ಆ ನಾಯಿಯನ್ನೂ ಕೂಡ ಅವನ ಜೊತೆಯಲ್ಲಿ ಸ್ವರ್ಗಕ್ಕೆ ಕರೆದುಕೊಂಡು ಹೋಗಬೇಕು, ಇಲ್ಲದಿದ್ದರೆ ತಾನೂ ಕೂಡ ಬರುವುದಿಲ್ಲ ಎಂದು. ಆದರೆ ದೇವತೆಗಳು ಆ ಷರತನ್ನು ಒಪ್ಪದೆ ಯಾಕೆಂದು ಕೇಳಿದಾಗ, ಧರ್ಮರಾಜ ಹೇಳುತ್ತಾನೆ “ಎಲ್ಲವೂ ನನ್ನ ಕೈ ಬಿಟ್ಟು ಹೋದವು; ರಾಜ್ಯ, ಸಿಂಹಾಸನ, ಕಿರೀಟ, ಏಳು ಅಕ್ಷೋಹಿಣಿ ಸೈನ್ಯ, ಬಂಧು-ಬಾಂಧವರು, ಪ್ರಜೆಗಳು, ಕೊನೆಗೆ ಸೋದರರು ಮತ್ತು ಪತ್ನಿ ಕೂಡ. ಆದರೆ ಈ ನಾಯಿ ಮಾತ್ರ ನನ್ನನ್ನು ಬಿಟ್ಟು ಹೋಗಲಿಲ್ಲ. ಹಾಗಾಗಿ ನಾನೂ ಅದನ್ನು ಬಿಟ್ಟು ಹೋಗುವುದಿಲ್ಲ.” ಆಗ ಆ ನಾಯಿ ತನ್ನ ನಿಜ ರೂಪವನ್ನು ತೋರಿತು. ಅದು ಧರ್ಮ. ನಮ್ಮ ದೃಷ್ಟಿ ಚೆನ್ನಾಗಿದ್ದರೆ ನಾಯಿ ಕೂಡ ದೇವರಂತೆ ಕಾಣಬಹುದು. ನಾಯಿ ಧರ್ಮದೇವತೆ ಆಗಿತ್ತು ಅದು ಧರ್ಮರಾಜನನ್ನು ಬಿಟ್ಟು ಹೋಗಲಿಲ್ಲ. ಧರ್ಮರಾಜನೂ ಕೂಡ ಧರ್ಮವನ್ನು ಬಿಡಲಿಲ್ಲ.


ನಾವು ಎಷ್ಟೋ ಬಾರಿ ಪಶು-ಪಕ್ಷಿಗಳನ್ನು ಉಪೇಕ್ಷಿಸುತ್ತೇವೆ, ಅವುಗಳ ಮೇಲೆ ಕ್ರೌರ್ಯವನ್ನು ತೋರುತ್ತೇವೆ, ಅವುಗಳನ್ನು ಭೋಗದ ವಸ್ತುಗಳನ್ನಾಗಿ ಕಾಣುತ್ತೇವೆ. ಅವುಗಳಿಗೂ ಜೀವವಿದೆ, ಭಾವವಿದೆ, ಸಂವೇದನೆ ಇದೆ ಎನ್ನುವುದನ್ನು ನಾವು ಮರೆತು ಬಿಡುತ್ತೇವೆ. ಎಲ್ಲಿ ಜೀವ ಇದೆಯೋ ಅಲ್ಲಿ ನೋವಿದೆ, ಎಲ್ಲಿ ನಾವು ನೋವು ಮಾಡುತ್ತೇವೋ, ಅಲ್ಲಿ ನಾವು ಪಾಪ ಕಟ್ಟಿಕೊಳ್ಳುತ್ತೇವೆ. ಹಾಗಾಗಿ ಪ್ರಾಣಿಗಳಿಗೂ ಕೂಡ ನೋವನ್ನು ಮಾಡಬಾರದು. ಯಾರು ಸಂತೋಷವನ್ನುಂಟು ಮಾಡುತ್ತಾರೋ, ಅವರಿಗೆ ಪುಣ್ಯವಿದೆ. ಪ್ರಾಣಿಗಳಿಗೆ ಸಂತೋಷವನ್ನುಂಟು ಮಾಡಿದರೆ, ಆ ಪುಣ್ಯವು ಮುಂದೊಂದು ದಿನ ನಮ್ಮನ್ನು ಕಾಪಾಡುತ್ತದೆ. ಅದೇ ರೀತಿ ನಾವು ಅವುಗಳಿಗೆ ಪ್ರೀತಿಯನ್ನು ಕೊಡಬೇಕೇ ಹೊರತು ನೋವಲ್ಲ ಮತ್ತು ಅವುಗಳ ಜೊತೆಗೆ ಬಾಳಬೇಕು. ಅವುಗಳಲ್ಲಿಯೂ ದೇವರಿದ್ದಾನೆ, “ಬಹುಸ್ಯಾಂ ಪ್ರಜಾಯೇಯ” ಭಗವಂತ ತಾನು ನೂರು, ಸಾವಿರ, ಕೋಟಿ ರೂಪಗಳನ್ನು ತಾಳುತ್ತೇನೆ ಎಂದು ಸಂಕಲ್ಪ ಮಾಡಿದಾಗ ಈ ಪ್ರಪಂಚ ಬಂದಿರುವುದು. ಹಾಗಾಗಿ ಇದೆಲ್ಲವೂ ಭಗವಂತನ ರೂಪವೇ ಎಂದು ನೋಡಬೇಕು.


ಅಯೋಧ್ಯೆಯು ಪಶು ಸಮೃದ್ಧವಾಗಿತ್ತು. ಮನುಷ್ಯರು ಮಾತ್ರವಲ್ಲದೆ ಪ್ರಾಣಿ, ಪಕ್ಷಿಗಳಿಂದ ಒಳಗೂಡಿಕೊಂಡಿತ್ತು. ಅವು ಸಂತುಷ್ಟ, ಸರ್ವೋತ್ತಮ ಮತ್ತು ಸುಪುಷ್ಟವಾಗಿದ್ದವು. ಕಾಂಭೋಜ, ಬಾಹ್ಲೀಕ, ವನಾಯು ಮತ್ತು ಸಿಂಧೂ ರಾಜ್ಯಗಳ ಉತ್ತಮ ಜಾತಿಯ ಅಶ್ವಗಳು ಅಯೋಧ್ಯೆಯ ಅಶ್ವಶಾಲೆಯನ್ನು ಅಲಂಕರಿಸಿದ್ದವು. ಇಂದ್ರನ ಐರಾವತದ ಕುಲದಲ್ಲಿ ಹುಟ್ಟಿದ ಆನೆಗಳು ಅಯೋಧ್ಯೆಯಲ್ಲಿದ್ದವು. ಆನೆಗಳಲ್ಲಿ ಮೂರು ತಳಿಗಳು ಭದ್ರ, ಮಂದ್ರ, ಮೃಗ. ಭದ್ರ ಎಂದರೆ ಹಿಮಾಲಯದ ತಳಿ. ಮಂದ್ರ ಎಂದರೆ ವಿಂಧ್ಯ ಪರ್ವತದ ತಳಿ. ಮೃಗ ಎಂದರೆ ಸಹ್ಯ ಪರ್ವತದ ತಳಿ. ಈ ಮೂರೂ ತಳಿಯ ಆನೆಗಳು ಅಯೋಧ್ಯೆಯಲ್ಲಿದ್ದವು. ಅದಲ್ಲದೆ ಈ ಮೂರೂ ತಳಿಗಳ ಉಪತಳಿಗಳು ಭದ್ರಮಂದ್ರ, ಭದ್ರಮೃಗ, ಮೃಗಮಂದ್ರ ಇವುಗಳೂ ಕೂಡ ಅಯೋಧ್ಯೆಯಲ್ಲಿದ್ದವು. ಆನೆಗಳಲ್ಲದೆ ಒಂಟೆಗಳು, ಕತ್ತೆಗಳು ಮೊದಲಾದ ಬೇರೆ ಬೇರೆ ಪ್ರಾಣಿಗಳು, ಪಕ್ಷಿಗಳು ಅಲ್ಲಿದ್ದವು.


ಗೋವುಗಳು ಕೂಡ ಅಯೋಧ್ಯೆಯಲ್ಲಿದ್ದವು. ಆ ಕಾಲದಲ್ಲಿ ಯಾರಲ್ಲಿ ಗೋವುಗಳು ಹೆಚ್ಚಿದ್ದವೋ ಅವರು ಶ್ರೀಮಂತರು. ಹಾಗಾಗಿ ದಶರಥ ಶ್ರೀಮಂತ. “ಗೋವು ಇರುವವನು ಧನ, ಗೋವು ಇಲ್ಲದವನು ನಿರ್ಧನ, ದರಿದ್ರ.” ಗೋವೆಂದರೆ ಪಶುತ್ವದಿಂದ ಪೂಜ್ಯತ್ವದವರೆಗೆ ವ್ಯಾಪ್ತಿ ಇದೆ. ಗೋವುಗಳು ಮಾನವರಿಗೆ ಮಿಗಿಲಾದ ಪ್ರೀತ್ಯಾದರಗಳನ್ನು ಪಡೆದು, ಎಣಿಸಲಾರದ ಸಂಖ್ಯೆಯಲ್ಲಿದ್ದು, ಅಯೋಧ್ಯೆಯ ಸಮೃದ್ಧಿಯನ್ನು ಅನಂತಕ್ಕೇರಿಸಿದ್ದವು. 


ಅಂದು ಅಯೋಧ್ಯೆಯು ಹೇಗಿತ್ತು ಎಂದರೆ “ಶಂ ನೋ ಅಸ್ತು ದ್ವಿಪದೇ ಶಂ ಚತುಷ್ಪದೇ”. ನಮಗೆ ಎಷ್ಟು ಬದುಕಲು ಹಕ್ಕಿದೆಯೋ ಅಷ್ಟೇ ಹಕ್ಕು ಅವುಗಳಿಗೂ ಇದೆ. ಈ ಸೃಷ್ಟಿಯು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ. ಎಲ್ಲರಿಗೂ ಅವಕಾಶವಿದೆ ಈ ಸೃಷ್ಟಿಯಲ್ಲಿ. ಆದರೆ ಈಗಿನ ಕಾಲದಲ್ಲಿ ಮನುಷ್ಯರು ಅವರ ದೃಷ್ಟಿಯಿಂದ ಮಾತ್ರ ಯೋಚಿಸುತ್ತಾರೆ. ಪಶುಗಳಿಗೆ, ಬೇರೆಯವರಿಗೆ ಏನಾದರೆ ನಮಗೇನು ಎಂದು ಭಾವಿಸುತ್ತಾರೆ. ಏನನ್ನು ತಿನ್ನಬೇಕು ಎನ್ನುವ ಹಕ್ಕು ಅವುಗಳಿಗೂ ಇದೆ. ಪ್ರಕೃತಿ ಅವುಗಳಿಗೆ ಯಾವ ಆಹಾರಗಳನ್ನು ನಿಶ್ಚಯ ಮಾಡಿದೆಯೋ ಅದನ್ನೇ ನೀಡಬೇಕು. ಎಂದೂ ಪಶು-ಪಕ್ಷಿಗಳಿಗೆ, ಗಿಡ-ಗಂಟಿಗಳಿಗೆ, ಕ್ರಿಮಿ-ಕೀಟಗಳಿಗೆ ಕೇಡನ್ನು ಬಯಸಬಾರದು. ಯಾವುದು ಮನುಷ್ಯತ್ವದ ಒಳಗಡೆ, ನಮಗೆ ಅನಿವಾರ್ಯವೋ ಅದಷ್ಟು ದೋಷಗಳಿಗೆ ಪರಿಹಾರವಿದೆ. ಅದರಾಚೆಗೆ ಯಾವ ಜೀವಿಗೆ ಕೆಡುಕನ್ನು ಮಾಡಿದರೂ ಅದೆಲ್ಲವೂ ದೋಷಕರ.


ಮತ್ತೆ ನಮ್ಮ ನಾಡನ್ನು ಅಯೋಧ್ಯೆಯಂತೆ, “ದ್ವಿಪದ” ಮತ್ತು “ಚತುಷ್ಪದ” ಇವುಗಳೆಲ್ಲ ಒಟ್ಟಿಗೆ ಸುಖವಾಗಿ ಬಾಳುವಂತಹ ದಿನಗಳನ್ನು ಕಾಣುವಂತಾಗಲಿ. ನಮ್ಮ ಸುತ್ತ ಮುತ್ತಲಿರುವ ಎಲ್ಲಾ ಜೀವಗಳನ್ನು ತುಂಬಾ ಪ್ರೀತಿಯಿಂದ ನೋಡಬೇಕು, ಅಲ್ಲಿ ದೇವರ ನೆಲೆಯಿದೆ, ಅಸ್ತಿತ್ವವಿದೆ.
|| ಹರೇರಾಮ ||
Jagadguru Shankaracharya Sri Sri Raghaveshwara Bharati Mahaswamiji – Ramayana sessions – Akshararoopa 

ಶ್ರೀಸಂಸ್ಥಾನದವರು ಅನುಗ್ರಹಿಸುತ್ತಿರುವ – ಧರ್ಮಭಾರತೀ ಪ್ರಕಟಿಸುತ್ತಿರುವ  *’ಭಾವ~ರಾಮಾಯಣ’* ವೇ ರಾಮಾಯಣ ಪಾಠದ ಪಠ್ಯ.
*ಶ್ರೀಸಂಸ್ಥಾನದವರು ಧರ್ಮಭಾರತೀ ಮೂಲಕ ಮರ್ಯಾದಾ ಪುರುಷೋತ್ತಮನ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ.* 
ವಿ.ಸೂ: ಚಂದಾ ಮಾಡಲು ಸಂಪರ್ಕಿಸಿ – 9449595254

Facebook Comments Box