|| ಹರೇ ರಾಮ ||
ಯುವಕನೊಬ್ಬ ಸಹಾಯಾರ್ಥಿಯಾಗಿ ಊರಿನ ದೊಡ್ಡ ಶ್ರೀಮಂತನ ಬಳಿ ಸಾರಿದ..
” ನನ್ನದೆಂಬುದಾಗಿ ಬಿಡಿಗಾಸಿನ ಮೌಲ್ಯದವಸ್ತುವೂ ನನ್ನಲ್ಲಿಲ್ಲ. ಏನಾದರೂ ಸಹಾಯ ಮಾಡುವಿರೇ..?”
“ಐದು ಲಕ್ಷ ಕೊಡುವೆ. ಆದರೆ, ನಿನ್ನ ಮೂತ್ರಕೋಶವನ್ನು ಕೊಡುವೆಯಾ..?”
ಗಲಿಬಿಲಿಗೊಂಡ ಯುವಕ ಹೇಳಿದ, ”ಇಲ್ಲ ಕೊಡಲಾರೆ ”
“ಹತ್ತು ಲಕ್ಷಕೊಡುವೆ, ನಿನ್ನ ಬಲಗೈ ಕೊಡುವೆಯಾ..?”
ಯುವಕ ಧೃಢಸ್ವರದಲ್ಲಿ ಹೇಳಿದ “ಖಂಡಿತಾ ಇಲ್ಲ”..
” ಹೋಗಲಿ ಬಿಡು ಇಪ್ಪತ್ತು ಲಕ್ಷ ಕೊಡುವೆ. ನಿನ್ನದೊಂದು ಕಣ್ಣು ಕೊಡುವೆಯಾ..?”
ಆಕ್ರೋಶಭರಿತ ಧ್ವನಿಯಲ್ಲಿ ಯುವಕ ಉತ್ತರಿಸಿದ, ” ಅದು ಹೇಗೆ ಸಾಧ್ಯ?ಇಲ್ಲವೇ ಇಲ್ಲ, ಯಾವುದೇ ಕಾರಣಕ್ಕೂ ಇಲ್ಲ ”
ಆಗ ಶ್ರೀಮಂತ ಶಾಂತ ಸ್ವರದಲ್ಲಿ ಯುವಕನಿಗೆ ಹೇಳಿದ. ” ನೋಡು ತಮ್ಮಾ, ಐದು ಲಕ್ಷಕ್ಕೂ ಮೀರಿ ಬೆಲೆಬಾಳುವ ಮೂತ್ರಕೋಶ,
ಹತ್ತು ಲಕ್ಷಕೊಟ್ಟರೂ ಕೊಡಲಾರದ ಬಲಗೈ, ಬೆಲೆ ಕಟ್ಟಲಾಗದ ಕಣ್ಣುಗಳು,
ಇವೆಲ್ಲವನ್ನೂ ಇಟ್ಟುಕೊಂಡ ನೀನು ಬಡವ ಹೇಗಾದೆ..?
ಭುವಿಗೆ ಕಳುಹುವಾಗ ದೇವರು ಪ್ರೀತಿಯಿಂದ ನಮಗಿತ್ತ ಅಮೂಲ್ಯ ಸಂಪತ್ತಿದು ಶರೀರ..!
ಅದನ್ನೇ ಮರೆತು ನಾ ಬಡವನೆನ್ನುವುದು ದೇವರಿಗೆ ಮಾಡುವ ಅಪಚಾರವಲ್ಲವೇ..?”
ಹಿಂದಿನ ಲೇಖನದ ಕೊನೆಯಲ್ಲಿ ಶ್ರೀರಾಮನನ್ನು ‘ಶ್ರೀಮಾನ್’ ಎಂದು ವರ್ಣಿಸಿದೆ..
ಜೀವನದ ಮಧ್ಯೆ ಬಂದು – ಹೋಗುವ ಬೇರೆ ಸಂಪತ್ತುಗಳ ಮಾತು ಹಾಗಿರಲಿ, ಸಾಟಿಯಿಲ್ಲದ ಶರೀರಶ್ರೀ ಆತನದಾಗಿತ್ತು…
ಶರೀರವೆಂದರೆ ಆತ್ಮದ ಅಭಿವ್ಯಕ್ತಿ.
ಆತ್ಮವೆಂದರೆ ಚೆನ್ನು…
ಶರೀರವು ಆತ್ಮದ ಅಭಿವ್ಯಕ್ತಿ ಎಂದಾದಮೇಲೆ ಅದು ಎಲ್ಲೆಲ್ಲೂ ಚನ್ನಾಗಿಯೇ ಇರಬೇಕಲ್ಲವೇ..?
ಆತ್ಮವೇ ಮನಸ್ಸು….
ಆತ್ಮವೇ ಇಂದ್ರಿಯಗಳು…..
ಆತ್ಮವೇ ಶರೀರ.. ಅಂದ ಮೇಲೆ ಆತ್ಮದ ಹಾಗೆ ಇವೆಲ್ಲವೂ ಆನಂದಮಯವಾಗಿ, ತೇಜೋಮಯವಾಗಿ, ಚೆಲುಚೆಲುವಾಗಿಯೇ ಇರಬೇಕಲ್ಲವೇ..?
ಪಾಪದೋಷಗಳು ಮಧ್ಯೆ ಬಾರದಿದ್ದರೆ ನಮ್ಮೆಲ್ಲರ ಶರೀರಗಳು ಹಾಗೆಯೇ ಇರುತ್ತಿದ್ದವು….!!!
ಆದರೆ ಅಂತಹ ಮಾನವ ಪ್ರಕೃತಿಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ……!
ಬಹುಶಃ ಮಾನವರಿಗೆ ‘ಅವರ ಶರೀರ, ಮನಸ್ಸು, ಜೀವನಗಳು ಹೇಗಿರಲು ಸಾಧ್ಯ?’ ಎಂಬುದನ್ನು ಪ್ರತ್ಯಕ್ಷ ತೋರಿಸಬೇಕೆಂದು ದೇವರಿಗೇ ಅನಿಸಿರಬೇಕು..!
ಶ್ರೀರಾಮನ ರೂಪದಲ್ಲಿ ಮಾನವರ ಮಧ್ಯೆ ದೇವರ ಆಗಮನವಾಯಿತು…
ನಾರದರ ಪರಿಶುದ್ಧ ದೃಷ್ಟಿಗೆ ಗೋಚರವಾದ ರಾಮನ ರೂಪವಿದು..
ಅತಿ ಎತ್ತರವೂ ಅಲ್ಲದ – ಅತಿ ಕುಬ್ಜವೂ ಅಲ್ಲದ,
ಅತಿ ಸ್ಥೂಲವೂ ಅಲ್ಲದ – ಅತಿ ಕೃಶವೂ ಅಲ್ಲದ,
ಅತಿ ಬಿಳಿಯೂ ಅಲ್ಲದ – ಅತಿ ಕಪ್ಪೂ ಅಲ್ಲದ,
ಸಮಶರೀರವವನದು…
ವೀರ ಕ್ಷತ್ರಿಯನಾತನಾದುದರಿಂದ, ಯಾವುದೇ ಶತ್ರುವಿನ ಎಂತಹಾ ಆಘಾತವನ್ನಾದರೂ ಸಹಿಸಲು ಬೇಕಾದ..
ಎಂತಹಾ ಶತ್ರುವನ್ನಾದರೂ ಮಣಿಸುವಂತೆ ಪ್ರಹರಿಸಲು ಬೇಕಾದ.. ಶರೀರಸೌಷ್ಠವ ಆತನದಾಗಿತ್ತು..!
ಅತ್ಯಾಶ್ಚರ್ಯವೆಂದರೆ, ಇಷ್ಟಾದರೂ ಕುಸುಮಸುಕುಮಾರ ಶರೀರವವನದು..!
ಮಳೆಮೋಡವನ್ನು ಹೋಲುವ, ನುಣುಪಾದ, ಹೊಳಪಾದ, ಸೊಗಸಾದ ವರ್ಣದವನವನು..
ನಾರದರು ಆತನನ್ನು ಸ್ನಿಗ್ಧವರ್ಣನೆಂದೇ ಬಣ್ಣಿಸುತ್ತಾರೆ…
ಸ್ನಿಗ್ಧವೆಂದರೆ ಸ್ನೇಹಯುಕ್ತವೆಂದರ್ಥ..
ಭೌತಿಕವಾಗಿ ಹೇಳಬೇಕೆಂದರೆ, ಪದಾರ್ಥದಲ್ಲಿರುವ ಜಿಡ್ಡಿನ ಅಂಶಕ್ಕೆ ಸ್ನೇಹವೆಂದು ಹೆಸರು.
ಭಾವುಕವಾಗಿ ಹೇಳಬೇಕೆಂದರೆ, ಅಂತರಂಗವು ದ್ರವಿಸುವಂತೆ ಮಾಡುವ ಪ್ರೀತಿಗೆ ಸ್ನೇಹವೆಂದು ಹೆಸರು..
(ನೇತ್ರಸ್ನೇಹೇನ ಸೌಭಾಗ್ಯo ದಂತಸ್ನೇಹೇನ ಭೋಜನಮ್ |
ತ್ವಚ: ಸ್ನೇಹೇನ ಶಯ್ಯಾ ಚ ಪಾದಸ್ನೇಹೇನ ವಾಹನಮ್ || – ವರರುಚಿ)
ಶುಷ್ಕವಲ್ಲದ ಮೈ-ಮನಗಳು ಅವನವು..
ಆತನ ಸ್ನಿಗ್ಧವರ್ಣ – ಸ್ನಿಗ್ಧ ಮನಸ್ಸುಗಳು ಲೋಕದ ಕಣ್ಮನಗಳನ್ನು ತಣಿಸಿದವು..
ಇತಿಹಾಸದಲ್ಲಿ ಧನುರ್ಧಾರಿಗಳೆಷ್ಟಿಲ್ಲ..?
ಆದರೆ ಕೋದಂಡರಾಮನೆನ್ನುವುದು ಆತನಿಗೆ ಮಾತ್ರ..!
ಸಾಮಾನ್ಯವೀರರ ಅಳವಿಗೆ ನಿಲುಕದ ಮಹಾಕೋದಂಡವನ್ನು ಧರಿಸಲು ಬೇಕಾದ ಶರೀರ – ಸಾಮಥ್ಯ೯ಗಳುಳ್ಳವನವನು..
ಆತನ ಶರೀರದಲ್ಲಿ ಅವಯವಗಳು ಸಮವಾಗಿ ವಿಭಾಗಿಸಲ್ಪಟ್ಟಿದ್ದವು.
ಎತ್ತರಕ್ಕೆ ತಕ್ಕ ಅಗಲ,
ಶರೀರಕ್ಕೆ ಒಪ್ಪುವಂಥ ಶಿರಸ್ಸು,
ಶಿರಸ್ಸಿಗೆ ತಕ್ಕಂತೆಯೇ ಇರುವ ವಕ್ಷಸ್ಥಲ,
ವಕ್ಷಸ್ಥಲಕ್ಕೊಪ್ಪುವ ಭುಜಗಳು,
ಹೀಗೆ ಒಂದಕ್ಕೊಂದು ಹೊಂದಿಕೊಳ್ಳುವ ಅವಯವಗಳು..
ಕಿವಿಗಳು, ಕಣ್ಣುಗಳು, ಕೈಗಳು ಮೊದಲಾದ ಜೋಡಿ ಅವಯವಗಳು ಒಂದಕ್ಕೊಂದು ಸಮವಾಗಿದ್ದವು..
ರಾಜ ಲಕ್ಷಣವಿದು..
ಭ್ರುವೌ ನಾಸಾಪುಟೇ ನೇತ್ರೇ ಕರ್ಣಾವೋಷ್ಠೌ ಚ ಚೂಚುಕೇ |
ಕೂರ್ಪರೌ ಮಣಿಬಂಧೌ ಚ ಜಾನುನೀ ವೃಷಣೌ ಕಟೀ |
ಕರೌ ಪಾದೌ ಸ್ಫಿಜೌ ಯಸ್ಯ ಸಮೌ ಜ್ಞೇಯಃ ಸಃ ಭೂಪತಿಃ || -ಸಾಮುದ್ರಿಕ)
ಸಮವೃತ್ತವಾದ, ಛತ್ರದಂತೆ ಕ್ರಮವಾಗಿ ಇಳಿಯುವ, ಶೋಭನವಾದ ಶಿರಸ್ಸು ಅವನದು..
(ಏಕಚ್ಛತ್ರಾಧಿಪತಿಯ ಲಕ್ಷಣವಿದು- ಸಮವೃತ್ತ ಶಿರಾಶ್ಚೈವ ಛತ್ರಾಕಾರಶಿರಾಸ್ತಥಾ |
ಏಕಛತ್ರಾಂ ಮಹೀ ಭುಂಕ್ತೇ ದೀರ್ಘಮಾಯುಶ್ಚ ವಿಂದತಿ || – ನಾರದ )
ಅರ್ಧಚಂದ್ರಾಕಾರದ, ಉನ್ನತವಾದ, ಅನೇಕ ರೇಖೆಗಳಿಂದ ಕೂಡಿರುವ ವಿಶಾಲವಾದ ಹಣೆ ಅವನದು…
( ರಾಜಲಕ್ಷಣವಿದು :- ಅರ್ಧಚಂದ್ರನಿಭಂ ತುಂಗಂ ಲಲಾಟಂ ಯಸ್ಯ ಸ ಪ್ರಭುಃ -ಸಾಮುದ್ರಿಕ)
ಕಮಲದಳದಂತೆ ವಿಶಾಲವಾದ, ಕಡೆಗೆಂಪಾದ ಅವನ ಕಣ್ಣುಗಳು..
ಸಮಸ್ತ ಜೀವಗಳೆಡೆಗೆ ಪ್ರೇಮ ಪ್ರವಾಹವನ್ನೇ ಹರಿಸುವ ಮಹಾದ್ವಾರಗಳು…!
( ರಕ್ತಾಂತೈಃ ಪದ್ಮಪತ್ರಾಭೈಃ ಲೋಚನೈಃ ಸುಖಭಾಗಿನಃ – ಸಾಮುದ್ರಿಕ )
ಪುಷ್ಟವಾದ, ಉನ್ನತವಾದ ಕಪೋಲಗಳ ಮೇಲ್ಭಾಗ ಅವನದು…
(ಇದೂ ರಾಜಲಕ್ಷಣವೇ :- ಪೂರ್ಣಮಾಂಸಲಹನುಸ್ತು ಭೂಪತಿಃ – ಸಾಮುದ್ರಿಕ )
ಶಂಖದಂತೆ ನುಣುಪಾದ ಆತನ ಕೊರಳಲ್ಲಿ ಮೂರು ರೇಖೆಗಳಿದ್ದವು.
ಸಮೀಚೀನವಾಗಿ ಹೊರಹೊಮ್ಮಿಸಲ್ಪಟ್ಟ ಶಂಖಧ್ವನಿಯು ಪ್ರಣವವನ್ನೇ ಪ್ರತಿಧ್ವನಿಸುತ್ತಾ, ಕೇಳುಗರ ಮೇಲೆ ಪರಮಸಾತ್ವಿಕವಾದ ಪರಿಣಾಮವನ್ನುಂಟುಮಾಡುತ್ತದೆ..
ಶಂಖದ ಶಾರೀರ ಶ್ರೀರಾಮನದು..
“ಜಗದ ಸಕಲ ಜೀವರಾಶಿಗಳ ಜೀವದ ಭಾರವ ಹೊರಲು ನಾ ಬಂದಿರುವೆ” ಎನ್ನುವಂತೆ ಮಾಂಸಲವಾದ, ಉನ್ನತವಾದ ಹೆಗಲುಗಳು…
(ಮಹಾಪುರುಷ ಲಕ್ಷಣವಿದು..:- ಉನ್ನತ ಸ್ಕಂಧವತ್ತ್ವಂ ಮಹಾಪುರುಷ ಲಕ್ಷಣಮ್ – ಸಾಮುದ್ರಿಕ)
ವಕ್ಷಸ್ಥಲ ಮತ್ತು ಭುಜಗಳ ಮಧ್ಯೆ ಇರುವ ಮೂಳೆಗೆ ಜತ್ರುವೆಂದು ಹೆಸರು.
ತುಂಬಿಕೊಂಡ ಭುಜ-ಎದೆಗಳಿಂದಾಗಿ, ಉನ್ನತವಾಗಿದ್ದರೂ ಆತನ ಜತ್ರುವು ತೋರುತ್ತಲೇ ಇರಲಿಲ್ಲ…!!
( ವಿಷಮೈ: ಜತ್ರುಭಿಃ ನಿಸ್ಸ್ವಾಃ ಅತಿಸೂಕ್ಷ್ಮೈಶ್ಚ ಮಾನವಾಃ |
ಉನ್ನತೈಃ ಭೋಗಿನಃ ನಿಮ್ನೈಃ ನಿಸ್ಸ್ವಾಃಪೀನೈ ನರಾಧಿಪಾಃ || – ಸಾಮುದ್ರಿಕ )
ದುಂಡಾದ, ತುಂಬಿದ, ಆತನ ತೋಳುಗಳು ನೇರನಿಲುವಿನಲ್ಲಿಯೂ ಮೊಣಕಾಲಿಗೆ ತಗಲುವಷ್ಟು ದೀರ್ಘವಾಗಿದ್ದವು.
( ಆಜಾನುಲಂಬಿನೌ ಬಾಹೂ ವೃತ್ತಪೀನೌ ಮಹೀಶ್ವರೇ – ಸಾಮುದ್ರಿಕ )
ಮಹತ್ಕಾರ್ಯಗಳನ್ನು ಸಾಧಿಸುವ, ಮಹಾಸಂಗ್ರಾಮಗಳನ್ನು ಗೆಲ್ಲುವ, ಮಹಾಯೋಗ್ಯತೆಯನ್ನು ಸಾರಿ ಹೇಳುವಂತಿದ್ದವು ಅವು…!!
ತನ್ನೊಲವಿನ ಜೀವಗಳು ಅದೆಷ್ಟೇ ದೂರ ದೂರ ಸಾಗಿದರೂ ಮರಳಿ ತನ್ನೆಡೆಗೆ ಬರಸೆಳೆದುಕೊಳ್ಳುವಂತಿದ್ದವು..
( ದೀರ್ಘ-ಭ್ರೂ-ಬಾಹು-ಮುಷ್ಕಶ್ಚ ಚಿರಂಜೀವೀ ಧನೀ ನರ:)
ಶತ್ರುಮರ್ದನವನ್ನು ಸೂಚಿಸುವ ‘ಅರಿಂದಮಾ’ ಎಂಬ ವಿಶಿಷ್ಟರೇಖೆಯೊಂದು ಆತನ ಶರೀರವನ್ನಲಂಕರಿಸಿತ್ತು…!
ಹಿಮಾಲಯದಂತೆ ಸ್ಥಿರವಾದ, ಮಹಾಸಾಗರದಂತೆ ವಿಶಾಲವಾದ,
ವಜ್ರದಂತೆ ಕಠೋರವಾದ, ಅಂಬರದಂತೆ ಉನ್ನತವಾದ… ಸುಪುಷ್ಠವಾದ, ಸಮವಾದ ವಕ್ಷಸ್ಥಲ ಆತನದಾಗಿತ್ತು..
ಅಲ್ಲಿ ಅವರಿವರೆನ್ನದೆ ಸಕಲರಿಗೂ ಆಶ್ರಯವಿತ್ತು..!
( ಸ್ಥಿರಂ ವಿಶಾಲಂ ಕಠಿಣಂ ಉನ್ನತಂ ಮಾಂಸಲಂ ಸಮಂ |
ವಕ್ಷೋ ಯಸ್ಯ ಮಹೀಪಾಲಸ್ತತ್ಸಮೋ ವಾ ಭವೇನ್ನರಃ || – ಸಾಮುದ್ರಿಕ )
ಗಜರಾಜನನ್ನೋ, ಮೃಗರಾಜನನ್ನೋ ಹೋಲುವ ಧೀರ – ಗಂಭೀರ ನಡಿಗೆಯವನದು…
ದಾರಿ ತಪ್ಪದ,ಗುರಿ ಮರೆಯದ,ಋಜುವಾದ ಆತನ ನಡೆತೆಯೂ ನಡಿಗೆಯಂತೆಯೇ ಸರಿ..
( ಸಿಂಹರ್ಷಭ ಗಜವ್ಯಾಘ್ರಗತಯೋ ಮನುಜಾ ಮುನೇ |
ಸರ್ವತ್ರ ಸುಖಮೇಧಂತೇ ಸರ್ವತ್ರ ಜಯಿನಃ ಸದಾ || – ಜಗದ್ವಲ್ಲಭಾ)
ಮನೋಹರವಾದ ಫಲದೊಳಗಿರುವ ಮಧುರ ರಸದಂತೆ….
ಭವ್ಯ ಶರೀರದೊಳಗೊಂದು ದಿವ್ಯಚೇತನ…
ಇದು ಶ್ರೀರಾಮಚಂದ್ರನ ಲಕ್ಷಣ…..!
|| ಹರೇ ರಾಮ ||
May 24, 2010 at 7:16 AM
ಕಳೆದ ಶೀರ್ಷಿಕೆ “ಅನಂತಗುಣಾಭಿರಾಮ..” ಇದು ಅನ೦ತ______?
.
ರಾಮನೇಕೆ ಮಹಾನ್ ಸಾಧಕರಿಗೂ ನಾಯಕನಾದ ಎ೦ಬುದಕ್ಕೆ ಗುಣ ಮತ್ತು ದೇಹ ಕಾರಣ ಸಿಕ್ಕಿದವು, ಮತ್ತೆ ಏನೇನೂ ಸಿಗುವುದೋ ನೋಡೋಣ
.
ಜೈ ಶ್ರೀರಾಮ್
May 25, 2010 at 11:31 AM
ನಾವು ಈ ಮಟ್ಟಕ್ಕೆ ಮುಟ್ಟುವುದು ಅಸಾಧ್ಯ.
July 3, 2010 at 4:02 PM
ಒಂದೊಂದಾಗಿ ಓದುತ್ತ ಹೋದಂತೆ ಶ್ರೀರಾಮ ಕಣ್ಣ ಮುಂದೆ ಬಂದು ನಿಂತಂತೆ ಅನ್ನಿಸಿತು, ಆದರೆ ಕಣ್ಣೆದುರು ಇದ್ದುದು ಅದೇ ಹಳೇ ಗೋಡೆ!! ಕಣ್ಣು ಮುಚ್ಚಿ ಕುಳಿತೆ….ಕಣ್ತೆರೆಯುವ ಮನಸ್ಸಾಗಲಿಲ್ಲ…ಕೋದಂಡರಾಮನ ರೂಪ ಮನಸ್ಸಿನ ತುಂಬೆಲ್ಲಾ ಮುಂಜಾವಿನ ಮಂಜಿನಂತೆ ಆವರಿಸಿತ್ತು….ಸಂತಸದಲ್ಲಿ ಕಣ್ತೆರೆದೆ….ಪ್ರಮಾದಗಳ ಬಿಸಿಲು ಆ ಮಂಜನ್ನು ಕರಗಿಸುವ ಭಯದಲ್ಲಿ ಮತ್ತೆ ಕಣ್ಮುಚ್ಚಿದೆ.
February 20, 2011 at 12:53 PM
ಹರೇ ರಾಮ… ಆನಂದ ಆಯ್ತು.
October 29, 2012 at 6:57 AM
ದೇಹವಿರುವುದು, ದೇವನಿರುವನು, ಜಗವಿರುವುದು, ಕುಣಿದು ಕುಪ್ಪಳಿಸಲು ಆತ್ಮನಿಧಿ ಇರುವುದು,
ಸಾವಿರ ಲಕ್ಷ ಕೋಟಿಯಿದ್ದರು ಕರುಬಿ ಕಳೆಯುವೆವು,
ಪಿತ್ರಾರ್ಜಿತ ಆತ್ಮನಿಧಿ ಆಸ್ತಿ ಮನವರಿಕೆಯಾಗಲು ಬ್ಯಾ೦ಕ್-ಲಾಕರ್-ನಲ್ಲಿ ಇರದೇ ಉಪಯೋಗಿಸಿಕೊಳ್ಳಲು ಗುರುವಾಕ್ಯವಕಾಲತ್ತು ಬೇಕು..
** ಹರೇರಾಮ (ಬ್ಲಾಗ್ಸ್) ಗುರುಗಳೇ –ವಿಭೀಷಣ **