ವಿಕೃತಿ ಸಂವತ್ಸರದ ನಿಜವೈಶಾಖ ಶುದ್ಧ ಅಷ್ಟಮಿ-ನವಮಿ…
೨೦೧೦ ಮೇ ತಿಂಗಳ ೨೧, ೨೨..
ಶಿರೂರಿನ ಸಮೀಪದ ಗೋಳಿಗುಂಡಿಯ ಅಮೃತಧಾರಾ ಗೋಶಾಲೆಯಲ್ಲಿ ವಸತಿ ಮಾಡಿದ್ದೆವು.
ರಾತ್ರಿ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. . .
ಪಕ್ಕದಲ್ಲಿಯೇ ಸಂಕದಗುಂಡಿ ಹೊಳೆಯೂ ಹರಿಯುತ್ತಿತ್ತು . .
ಮಳೆ-ಹೊಳೆಗಳನ್ನು ಕಂಡಾಗ ಅದೇಕೋ ಮನುಷ್ಯ ಸಮೂಹದ ನೆನಪಾಯಿತು..
ಮಳೆಯಲ್ಲಿ ಅಸಂಖ್ಯ ಜಲಬಿಂದುಗಳು ಒಮ್ಮೆಲೇ ಧರೆಗಿಳಿಯುವವಲ್ಲವೇ..?
ಹೊಳೆಯಲ್ಲಿ ಅಸಂಖ್ಯ ಜಲಬಿಂದುಗಳು ಜೊತೆಗೂಡಿ ಹರಿಯುವವಲ್ಲವೇ..?
ಜಲಬಿಂದುಗಳಹಾಗೆ ಮನುಷ್ಯರೂ ಸಹಾ ಸೇರುವುದುಂಟು..!
ಸೇರುವಿಕೆಯಲ್ಲಿ ಎರಡು ವಿಧ:
- ಬೃಹತ್ ಕಾರ್ಯಕ್ರಮಗಳು…
- ಸಂಘಟನೆಗಳು..
ಮಳೆ ಹನಿಗಳು ಒಮ್ಮೆಲೇ ಧರೆಗಿಳಿದರೂ ಒಂದೊಂದೂ ಸ್ವತಂತ್ರವಾಗಿರುವಂತೆ…
ಬೃಹತ್ ಕಾರ್ಯಕ್ರಮಗಳಲ್ಲಿ ಮನುಷ್ಯರು ಭೌತಿಕವಾಗಿ ಜೊತೆಗಿದ್ದರೂ ಮಾನಸಿಕವಾಗಿ ಎಲ್ಲರೂ ಸ್ವತಂತ್ರರೇ..!
ಅಲ್ಲಿ ಸಂವಾದ ಸಾಧ್ಯವಿಲ್ಲ …ಕೆಲವರು ಹೇಳುವುದು ಮತ್ತು ಹಲವರು ಕೇಳುವುದು ಮಾತ್ರ..!
ಆದರೆ ಸಂಘಟನೆ ಹಾಗಲ್ಲ..
ಅಲ್ಲಿ ಭೌತಿಕವಾಗಿ ಜೊತೆಗಿರದಿದ್ದರೂ ಮನಸ್ಸುಗಳು ಒಂದಾಗಿರಬೇಕು..
ಜಲಬಿಂದುಗಳು ಭೇದವೇ ಇರದಂತೆ – ಒಂದಿಷ್ಟೂ ಅಂತರವೇ ಇರದಂತೆ ಬೆರೆತು ಹರಿಯುವಂತೆ..
ಹಲವು ಮನಸ್ಸುಗಳು ಒಂದೇ ವಿಚಾರಧಾರೆಯಲ್ಲಿ ಬೆರೆತು, ಮಹೋನ್ನತವಾದ ಲಕ್ಷ್ಯವೊಂದರೆಡೆಗೆ ಜೊತೆಗೂಡಿ ಹರಿದಾಗ…
ಅದಕ್ಕೆ ಸಂಘಟನೆಯೆಂಬ ಹೆಸರು ಬಂತು..
ಮಳೆಬಂದಾಗ ಎಲ್ಲೆಲ್ಲೂ ನೀರು, ನಾಲ್ಕುದಿನ ಕಳೆದರೆ ಎಲ್ಲಿಯೂ ನೀರಿಲ್ಲ…!!!
ಹೊಳೆ ನೀರು ಅದರ ಪಾತ್ರದಲ್ಲಿ ಮಾತ್ರ…
ಆದರೆ, ವರ್ಷವಿಡೀ ನಿಲ್ಲದ ಹರಿವು ಅದರದು…!!
ಅತ್ಯಂತ ಭಿನ್ನ ಸ್ವಭಾವದ ಈ ಎರಡು ಜಲಮೂಲಗಳು ಒಂದಕ್ಕೊಂದು ಪರಮೋಪಕಾರಿ…
ಮಳೆಯಿದ್ದರೆ ಹೊಳೆ. .
ಮಳೆಗಾಲದಲ್ಲಿ ಸತತವಾಗಿ ಬೀಳುವ ಮಳೆಯಿಂದಲ್ಲವೇ ಹೊಳೆ ಮೈದುಂಬಿ ಹರಿಯುವುದು…?
ಕೆಲಸಮಯ ಮಳೆಯಿಲ್ಲದಿದ್ದರೆ ಮತ್ತೆ ಹೊಳೆ ಉಳಿಯುವುದೇ ಇಲ್ಲ….!
ಮಳೆಯ ಮೂಲವೇ ಹೊಳೆ…
ಮೋಡವಿಲ್ಲದೇ ಮಳೆಯೆಲ್ಲಿ..?
ಹೊಳೆ – ಕೆರೆ- ಸಮುದ್ರಗಳ ನೀರಲ್ಲವೇ ಸೂರ್ಯಕಿರಣಗಳಿಂದ ಆವಿಯಾಗಿ ಮೋಡವಾಗುವುದು..?
ವಿಶಾಲ ಜನಸಭೆಗಳಲ್ಲಿ, ಬೃಹತ್ ಕಾರ್ಯಕ್ರಮಗಳಲ್ಲಿ ತೋರುವ ಮಳೆಯ ಇನ್ನಷ್ಟು ಸಾಮ್ಯಗಳನ್ನು ಗಮನಿಸಿ. . . !
ಮಳೆ ಬಂದಾಗ ಎಲ್ಲೆಲ್ಲೂ ನೀರಿರುವಂತೆ ವಿಶಾಲ ಜನಸಭೆಗಳ ಸಮಯದಲ್ಲಿ ಅದೇ ವಾತಾವರಣ. . .
ಮಳೆಯ ಹಾಗೆ ಎಲ್ಲೆಡೆ ಅದೇ ಸದ್ದು. . .
ಅದೇ ಸುದ್ದಿ…!!
ಎಲ್ಲಿ ನೋಡಿದರಲ್ಲಿ ಬ್ಯಾನರುಗಳು, ಪೋಸ್ಟರ್ ಗಳು – ಮಾಧ್ಯಮಗಳಲ್ಲಿಯೂ ಅದೇ ಸಮಾಚಾರ..!
ನಾಲ್ಕುಜನ ಸೇರಿದಲ್ಲಿಯೂ ಅದೇ ಚರ್ಚೆ…!
ಎಲ್ಲರ ಮನ-ಗಮನಗಳೂ ಆ ಕಡೆಗೇ…
ಕಾರ್ಯಕ್ರಮ ಮುಗಿಯಿತೋ – ನಾಲ್ಕುದಿನ ಕಳೆಯಿತೋ . . .
ಮತ್ತೆ ಸದ್ದೇ ಇಲ್ಲ…!!!
ಹೊಳೆ ಸಂಘಟನೆಯ ಪ್ರತೀಕ..
ಹೊಳೆಯ ಹಾಗೆ ಸಂಘಟನೆಯದೂ ದೊಡ್ಡಸದ್ದಿಲ್ಲ; ಆದರೆ ಹರಿವು ವರ್ಷವಿಡೀ ನಿಲ್ಲುವುದಿಲ್ಲ..!
ನಿರ್ದಿಷ್ಟ ಗಮ್ಯದೆಡೆಗೆ ಹೊಳೆ ನಿರಂತರವಾಗಿ ಹರಿಯುತ್ತಿರುತ್ತದೆ…
ಹಾಗೆಯೇ ನಿರ್ದಿಷ್ಟ ಉದ್ದೇಶಕ್ಕಾಗಿ ಸಂಘಟನೆ ಕಾರ್ಯನಿರತವಾಗಿರುತ್ತದೆ..
ಒಮ್ಮೆ ಸೇರಿದರೆ ಸಭೆ, ನಿರಂತರ ಸೇರಿದರೆ ಸಂಘಟನೆ. . .!
ಮಳೆ – ಹೊಳೆಗಳ ಹಾಗೆ ಸಂಘಟನೆ ಹಾಗೂ ಬೃಹತ್ ಕಾರ್ಯಕ್ರಮಗಳು ಒಂದಕ್ಕೊಂದು ಪೂರಕ..
ಬೃಹತ್ ಕಾರ್ಯಕ್ರಮಗಳು ಸಂಘಟನೆಗಳಿಗೆ ಶಕ್ತಿ ತುಂಬುತ್ತವೆ..
ಅದೆಷ್ಟೋ ಜನರನ್ನು ವಿಚಾರಧಾರೆಯೆಡೆಗೆ ಆಕರ್ಷಿಸುತ್ತವೆ…ಸಂಘಟನೆಯಲ್ಲಿ ಜೋಡಿಸುತ್ತವೆ..
ಅಡಿಪಾಯವಿಲ್ಲದೆ ಬೃಹತ್ ಕಟ್ಟಡವೊಂದು ನಿಲ್ಲಲು ಸಾಧ್ಯವಿಲ್ಲ…
ಹಾಗೆಯೀ,ಸಂಘಟನೆಯಿಲ್ಲದೆ ಬೃಹತ್ ಕಾರ್ಯಕ್ರಮವೊಂದು ನಡೆಯಲು ಸಾಧ್ಯವೇ ಇಲ್ಲ…!!
ಜನ-ಜನಗಳೂ, ಮನ-ಮನಗಳೊ ಬೆರೆತು ಕಾರ್ಯಗಳನ್ನು ಹಂಚಿಕೊಂಡು, ಸಮಯದಲ್ಲಿ ನಿರ್ವಹಿಸಿದರಲ್ಲವೇ ಕಾರ್ಯಕ್ರಮಗಳು ನಡೆಯುವುದು..?
ಚಂದ್ರನಿಂದ ಆಕಾಶಕ್ಕೆ ಶೋಭೆ, ಆಕಾಶದಿಂದ ಚಂದ್ರನಿಗೆ ಶೋಭೆ..
ಇವೆರಡರಿಂದಲೂ ರಾತ್ರಿಗೆ ಶೋಭೆ..
ಹಾಗೆಯೇ,
ಸಂಘಟನೆಯಿಂದ ಸಭೆ – ಸಭೆಯಿಂದ ಸಂಘಟನೆ..
ಇವೆರಡರಿಂದಲೂ ಸಮಾಜ..
ಸಂಘಟನೆ, ಸಭೆಯೆಂಬ ಎರಡು ಚಕ್ರಗಳು ಸಮರ್ಪಕವಾಗಿ ಮುನ್ನಡೆದರೆ, ಸಮಾಜವೆಂಬ ರಥ ಸರಿಯಾದ ಗುರಿಯತ್ತ ಸಾಗೀತು..
ಪ್ರಕೃತಿಯನ್ನು ನೋಡಿ ಕಲಿಯೋಣ ಪಾಠ…
ಬಿರುಗಾಳಿ ಬೀಸಿದರೆ ಒಂಟಿಮರಗಳು ಬುಡಮೇಲಾಗುವುವು..
ಆದರೆ, ಮರಗಳ ಸಂಘಟನೆಯೇ ಆದ ಕಾಡಿನಲ್ಲಿ ಅವು ಸುರಕ್ಷಿತ..!
ಒಂದು ಕಟ್ಟಿಗೆಯನ್ನು ಮುರಿಯಲು ಕಷ್ಟವೇನಲ್ಲ,
ಆದರೆ, ಹತ್ತಾರು ಕಟ್ಟಿಗೆಗಳನ್ನು ಕೂಡಿಸಿ ಹೊರೆಕಟ್ಟಿದರೆ…?!
ಅಷ್ಟು ದೂರವೇಕೆ, ನಮ್ಮ ಕೈ ಬೆರಳುಗಳೇ ನಮಗೆ ಪಾಠ ಹೇಳುತ್ತವೆ…..!
ಬಿಡಿ-ಬಿಡಿ ಬೆರಳುಗಳಿಗಿಲ್ಲ ಶಕ್ತಿ.. ಅದೇ ಬೆರಳುಗಳು ಕೂಡಿದರೆ.. ಇಡಿಯಾದರೆ.. ಹಿಡಿಯಾದರೆ.. ಅದೆಂಥ ಶಕ್ತಿ..!?
ಭಗವಂತ ನಮ್ಮೆಲ್ಲರನ್ನೂ ಭುವಿಗೆ ಜೊತೆಯಾಗಿ ಕಳುಹಿದುದರ ಉದ್ದೇಶವೇ ಕೂಡಿ ಬದುಕಲೆಂದು, ಹಂಚಿ ತಿನ್ನಲೆಂದು..!
ಜೀವವು ದೇವರೊಂದಿಗೆ ಬೆರೆಯುವುದಕ್ಕೆ ಮುಕ್ತಿ ಎಂದು ಹೆಸರು..
ಮೊದಲು ಭುವಿಯಲ್ಲಿ ನಮ್ಮ ಸಹಜೀವಿಗಳೊಂದಿಗೆ ಬೆರೆಯೋಣ…
ಮುಕ್ತಿಯ ಅಭ್ಯಾಸವನ್ನು ಇಲ್ಲಿಯೇ ಮಾಡೋಣ…
(ಚಿತ್ರಕೃಪೆ: ಅಂತರ್ಜಾಲ)
May 24, 2010 at 7:12 AM
ಅದ್ಭುತ, ಹೊಳೆಯ ನೀರು ನೆಲದಡಿಯ ಸೆಲೆಯ ಹೆಚ್ಚಿಸುವ೦ತೆ, ಈ ಹೊಳೆ ದೊಡ್ಡ ಸೆಲೆಯಾಗಲಿ, ವಿಧ ವಿಧದ ಶಕ್ತಿ ಸೇರಲಿ. ವಿಧ ವಿಧದ ಉಪಕಾರವಾಗಲಿ, ಕಡೆಗೆ ಗುರುವಿನೊ೦ದಿಗೆ ಸಮುದ್ರ ಸೇರಲಿ. ಸಮುದ್ರ ಸ್ವಾಗತಿಸಲಿ, ಬಿಗಿದಪ್ಪಲಿ
.
ಶ್ರೀ ಗುರುಭ್ಯೋ ನಮಃ
May 25, 2010 at 11:29 AM
ಅದ್ಭುತ. ಅದ್ಭುತ. ಅದ್ಭುತ. ಮಳೆ ಹೊಳೆಯ ಉದಾಹರಣೆ ಅತ್ಯದ್ಭುತ.
May 26, 2010 at 11:58 AM
ಹರೇ ರಾಮ.
‘ಮಳೆಯಿಂದ ಹೊಳೆ.. ಹೊಳೆಯಿಂದ ಮಳೆ’ – ‘ಜನರಿಂದ ಸಂಘಟನೆ.. ಸಂಘಟನೆಯಿಂದ ನಿಜ ಮನುಷ್ಯ(ತ್ವ) ನಿರ್ಮಾಣ’
ಅದ್ಭುತ ಪ್ರಾಕೃತಿಕ ಹೋಲಿಕೆ!
October 26, 2012 at 10:32 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಮಾನವನ ವಿಕೃತಿಗೆ ಬಲಿಯಾಗಿ ಎಲ್ಲೋ ಮೂಲೆಯಲ್ಲಿ ಪ್ಲಾಸ್ಟಿಕ್ ಡಬ್ಬದೊಳಗೆ ಬಂಧಿಯಾಗಿರುವ ನೀರಿಗೂ ಗುರುಕೃಪೆಯಿಂದಾಗಿ ರಾಮಸಾಗರವನ್ನು ಸೇರುವ ಅವಕಾಶಗಳು ಸಿಗುತ್ತಿವೆ… ಸಹಜತೆಗೆ ಮರಳುತ್ತಿವೆ… “ಸಂಕಲ್ಪಿತ ಕಾರ್ಯ ಸಿದ್ದಿ ಪ್ರವೀಣ……….. ಭೋ ಪರಾಕ್…….”