|| ಹರೇ ರಾಮ ||

ಶ್ರೀಮಠ ಮತ್ತು ಶ್ರೀಗಳವರ ಕುರಿತಾದ ನನ್ನ ಹೃದಯದ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಶ್ರೀರಾಮಚಂದ್ರಾಪುರಮಠದೊಂದಿಗೆ ನಮ್ಮ ಮನೆಯ ಒಡನಾಟ ಬಹಳ ಹಿಂದಿಂದ ಬಂದಿದ್ದು. ಅಜ್ಜ ಮುತ್ತಜ್ಜರ ಕಾಲಕ್ಕಿಂತ ಹಿಂದಿನದು.
ಅಜ್ಜ ಶ್ರೀ ಚದರವಳ್ಳಿ ಮಹಾಬಲೇಶ್ವರ ಭಟ್ಟರು ಬ್ರಹ್ಮೈಕ್ಯ ಶ್ರೀರಾಮಚಂದ್ರ ಭಾರತೀ ಮಹಾಸ್ವಾಮಿಗಳ ಸಮಯದಲ್ಲಿ ಶ್ರೀಗಳಿಂದ ಕರೂರು ಸೀಮೆಗೆ ಆಚಾರ ವಿಚಾರ ಭಟ್ಟರಾಗಿ ನಿಯೋಜಿತಗೊಂಡಿದ್ದರು.
ಶ್ರೀರಾಮಚಂದ್ರ ಭಾರತೀ ಮಹಾಸ್ವಾಮಿಗಳು ಅಜ್ಜನ ಬಗ್ಗೆ ಅತ್ಯಂತ ವಿಶ್ವಾಸವಿಟ್ಟವರು. ನನಗೆ ಮಠದ ಪರಿಚಯವಾಗಿದ್ದು ಸುಮಾರು ಹತ್ತರ ಆಜುಬಾಜಲ್ಲಿ ಅನ್ನಿಸೊತ್ತೆ.
ಹಿಂದೆ ನಮ್ಮೂರ ಸಮೀಪದ ಗುಮಗೋಡಿಗೆ ಬ್ರಹ್ಮೈಕ್ಯ ಶ್ರೀರಾಘವೇಂದ್ರಭಾರತೀ ಮಹಾಸ್ವಾಮೀಜಿ ಒಮ್ಮೆ ಬಂದಿದ್ದರು. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ದೊಡ್ಡ ಗುರುಗಳನ್ನು ನೋಡಿದ್ದು. ಅಂದು ನಮ್ಮ ಶ್ರೀಗಳವರು ಸಹ ದೊಡ್ಡ ಗುರುಗಳನ್ನು ಪ್ರಪ್ರಥಮವಾಗಿ ನೋಡಿದ್ದು. ದೊಡ್ಡಗುರುಗಳು ಗಂಭೀರ, ಕೋಪ ಜಾಸ್ತಿ ಅಂತೆಲ್ಲಾ ಕೇಳಿದ್ದೆ. ಹಾಗಾಗಿ ಅವರನ್ನು ಹತ್ತಿರದಿಂದ ನೋಡಲು ಭಯವಾಗಿತ್ತು. ಎಲ್ಲಾದರು ಬೈಯ್ದರೆ ಅನ್ನೋ ಹೆದರಿಕೆ. ಆಮೇಲೆ ಅಜ್ಜನ ಜೊತೆ ಬಹಳಷ್ಟು ಸಾರಿ ಮಠಕ್ಕೆ ಹೋಗಿದ್ದೆ. ಇದು ನಮ್ಮ ಮಠ. ಇವರು ನಮ್ಮ ಗುರುಗಳು ಅಂತೆಲ್ಲಾ ಅಜ್ಜ ಹೇಳಿದ್ದರು.

ಮಠದ ಸಂಪರ್ಕ ಹೆಚ್ಚಾಗಿದ್ದು ಶಿಷ್ಯ ಸ್ವೀಕಾರದ ನಂತರ. ಅಲ್ಲಿಂದ ಇಲ್ಲಿಯವರೆಗೆ ಮಠ ನನ್ನ ಜೀವನದ ಅವಿಭಾಜ್ಯ ಅಂಗ.
ಮಠದ ಸಾಮಾಜಿಕ ಕೆಲಸಗಳಲ್ಲಿ ಅಳಿಲು ಸೇವೆಗೆ ಸದಾ ಸಿದ್ಧ. ಹಿಂದೆಲ್ಲ ಮಠದ ತೇರಿಗೆ ಜನ ಇರುತ್ತಿರಲಿಲ್ಲ ಅಂತೆಲ್ಲಾ ಊರಲ್ಲಿ ಹೇಳಿದ್ದು ಕೇಳಿದ್ದೆ.
ಆದರೆ ಈಗ ಎಲ್ಲಾ ಊರಲ್ಲೂ ಮಠದ ತೇರೇ. ಅತ್ಯಂತ ಶೀಘ್ರವಾಗಿ ಮಠ ಪ್ರಸಿದ್ದಿಗೆ ಬಂದಿದೆ. ಮಠ ಕೇವಲ ಒಂದು ಸಮುದಾಯಕ್ಕೆ ಮೀಸಲಾಗದೆ ಎಲ್ಲರನ್ನು ಹತ್ತಿರಕ್ಕೆ ಸೆಳೆದಿದೆ.
ಇದಕ್ಕೆಲ್ಲ ಕಾರಣೀಭೂತರು ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ.

“ಮನುಷ್ಯ ಜೀವನದಲ್ಲಿ ಎಷ್ಟು ವರ್ಷ ಬದುಕುತ್ತಾನೆ ಅನ್ನೋದು ಮುಖ್ಯವಲ್ಲ,
ಹೇಗೆ ಬದುಕುತ್ತಾನೆ ಅನ್ನೋದು ಮುಖ್ಯ”

– ಇದು ತೊಂಬತ್ತರ ದಶಕದಲ್ಲಿ ಶ್ರೀಗಳವರು ಪೂರ್ವಾಶ್ರಮದಲ್ಲಿದ್ದಾಗ ನನಗೆ ಬರೆದ ಒಂದು ಪತ್ರದಲ್ಲಿದ್ದ ವಾಕ್ಯ.

ಈ ವಾಕ್ಯ ಅಂದಿನಿಂದ ಇಂದಿನವರೆಗೆ ನನ್ನ ಮನಸ್ಸಲ್ಲಿ ಸದಾ ಅಚ್ಚಳಿಯದೇ ಉಳಿದಿದೆ.
ಈ ಜೀವ ಸಂಕುಲದಲ್ಲಿ ಕೆಲವರು ಸಾಧನೆಯತ್ತ ಮುಖ ಮಾಡಿ ಜೀವನ ಸಾರ್ಥಕ ಮಾಡಿಕೊಂಡರೆ ಇನ್ನು ಕೆಲವರು ಅದಕ್ಕೆ ತದ್ವಿರುದ್ದವಾಗಿ ನಿರರ್ಥಕ ಬದುಕನ್ನು ನಡೆಸುತ್ತಾರೆ.
ಪ್ರತಿ ಕ್ಷಣ ತಮ್ಮ ಬದುಕನ್ನು ಹಳಿಯುತ್ತಾ, ತಮ್ಮ ಸ್ಥಿತಿಗೆ ಇನ್ನೊಬ್ಬರನ್ನು ದೂಷಿಸುತ್ತಾ ಬದುಕಿದರೆ, ಮಹಾತ್ಮರು ತಮಗೆ ಸಿಕ್ಕ ಜೀವನದ ಪ್ರತಿಕ್ಷಣ/ಪ್ರತಿ ಘಟನೆಯನ್ನು ಸದ್ವಿನಿಯೋಗ ಮಾಡಿಕೊಳ್ಳುತ್ತಾರೆ.
ಅಂತಹ ಅಪರೂಪದ ಶಕ್ತಿ ಶ್ರೀಗಳವರು.

ಆಧುನಿಕತೆಗೆ ಮಾರುಹೋಗಿದ್ದ ಈ ಜಗತ್ತಲ್ಲಿ ಯಾರಾದರೂ ಸಂನ್ಯಾಸ ತೆಗೆದುಕೊಳ್ಳುತ್ತಾರೆ ಅಂದರೆ ತಕ್ಷಣ ಎಲ್ಲರೂ ಹೇಳೋದು ಅವರಿಗೆ ಜೀವನದಲ್ಲಿ ಜುಗುಪ್ಸೆ ಬಂದಿದೆ ಅಂತ.
ಜೀವನದಲ್ಲಿ ಜುಗುಪ್ಸೆ ಬಂದವರು ಮಾತ್ರ ಸಂನ್ಯಾಸಿಗಳಾಗುತ್ತಾರೆ ಅನ್ನೋದು ಹಲವರ ಅಂಬೋಣ. ಆದರೇ ಶ್ರೀಗಳವರು ಜುಗುಪ್ಸೆ ಬಂದು ಸಂನ್ಯಾಸಕ್ಕೆ ಶರಣಾಗಿದ್ದಲ್ಲ.
ಅದನ್ನು ಒಪ್ಪಿಕೊಂಡು ಅಪ್ಪಿಕೊಂಡಿದ್ದು.
ಸಂನ್ಯಾಸ ತೆಗೆದುಕೊಂಡ ನಂತರ ಇದ್ದಕಿದ್ದ ಹಾಗೆ ಪ್ರಸಿದ್ದಿಗೆ ಬಂದಿಲ್ಲ. ಆರಂಭದ ದಿನಗಳು ಬಹಳ ಕಷ್ಟವಾಗಿತ್ತು ಅಂತ ಕೇಳಿದ್ದೆ.
ಅದರಲ್ಲೂ ಶ್ರೀಗಳವರು ವಿದ್ಯಾಬ್ಯಾಸದ ನಂತರ ಹೊಸನಗರಕ್ಕೆ ಹೋದಾಗ ಅವರ ಜೊತೆಯಲ್ಲಿದ್ದಿದ್ದು ಕೆಲವೇ ಕೆಲವು ಮಂದಿ.
ಆ  ಅಜ್ಞಾತವಾಸವೇ ಬಹುಷಃ ಅವರ ಮುಂದಿನ ಹೆಜ್ಜೆಗೆ ಪ್ರೇರಕವಾಗಿರಬಹುದು ಅಥವಾ ಅವರ ಮನಸ್ಸಲ್ಲಿ ಮುಂದಿನ ಕಾರ್ಯಗಳ ಬಗ್ಗೆ ಚಿಂತನೆ ಪ್ರಾರಂಭವಾಗಿರಬಹುದು.
ಅಲ್ಲಿಂದ ಪ್ರಾರಂಭವಾದ ಓಟ ನಿರಂತರವಾಗಿ ಸಾಗಿದೆ. ಜೊತೆಗೆ ಯಾರೇ ಇರಲಿ ಬಿಡಲಿ ಆ ಓಟ ನಿಂತಿಲ್ಲ. ಆ ವೇಗಕ್ಕೆ ಯಾರೂ ಸರಿಸಾಟಿಯಲ್ಲ. ಅದೆಷ್ಟೋ ಮಂದಿ ಅಡ್ಡಬಂದರು, ಅದೆಷ್ಟೋ ಮಂದಿ ದಾರಿ ತಪ್ಪಿಸಲು ನೋಡಿದರು, ಅದೆಷ್ಟೋ ಮಂದಿ ಜೊತೆಯಲ್ಲಿದ್ದು ಮೋಸ ಮಾಡಲು ನೋಡಿದರು…. ಆದರೆ ಆ ಓಟ ನಿಂತಿಲ್ಲ. ಆ ಓಟದ ಗುರಿ ಸ್ಪಷ್ಟವಾಗಿತ್ತು. ಹಾಗಾಗಿ ಅದು ನಿರಂತರವಾಗಿ ಸಾಗಿದೆ.
ಓಟದ ಹಿಂದಿರುವ ಶಕ್ತಿಗೆ ನಮೋ ನಮಃ.

“ಮನ ಏವ ಹಿ ಕಾರಣಂ” – ಆಂಜನೇಯನ ಈ ವಾಕ್ಯ ಅದೆಷ್ಟು ಸುಂದರ.
ಅಧ್ಬುತವಾದ ಶಕ್ತಿ ಮನಸ್ಸಿಗಿದೆ. ಯಾವಾತ ತನ್ನ ಮನಸ್ಸನ್ನು ಹಿಡಿದಿಟ್ಟುಕೊಳ್ಳುತ್ತಾನೋ/ಯಾವಾತ ತನ್ನನ್ನು ಗೆಲ್ಲುತ್ತಾನೋ ಆತ ಪ್ರಪಂಚವನ್ನೇ ಗೆದ್ದ ಹಾಗೆ.
ಆದರೆ ಸಾಮಾನ್ಯನಿಗೆ ಈ ಮನಸ್ಸನ್ನ ಹಿಡಿದಿಟ್ಟುಕೊಳ್ಳೋದು ಬಹಳ ಕಷ್ಟ ಅಲ್ಲವೇ? ಅಂತಹ ಮನಸ್ಸನ್ನು ಸದಾ ಹಿಡಿತದಲ್ಲಿಟ್ಟುಕೊಂಡವರು ಶ್ರೀಗಳವರು. ಇದು ಮುಖಸ್ತುತಿಯಲ್ಲ.
ಸೂರ್ಯೋದಯಕ್ಕೆ ಮುಂಚೆ ಪ್ರಾರಂಭವಾಗೋ ದಿನಚರಿ ಬಹಳಷ್ಟು ದಿನ ಮುಗಿಯುವುದು ಮರುದಿನ ಸೂರ್ಯೋದಯಕ್ಕೆ ಮುನ್ನ. ಹಾಗಂತ ವಿಶ್ರಾಂತಿಯಿಲ್ಲ. ಮತ್ತೆ ದಿನಚರಿ ಪ್ರಾರಂಭ.
ಅಂತಹ ಕ್ಷಣದಲ್ಲೂ ಪಾದರಸದ ರೀತಿ ಇರುತಿತ್ತು ಶ್ರೀಗಳವರ ಮನಸ್ಸು. ನಿರಂತರವಾಗಿ ಹರಿಯುತ್ತಿದ್ದ ಆ ಮುಗುಳ್ನಗೆಗೆ ಸರಿಸಾಟಿ ಯಾವುದು ಹೇಳಿ. ಸೂರ್ಯನ ಕಿರಣಕೆ ಸೂರ್ಯನೆ ಸಾಟಿ ಹೇಗೋ ಹಾಗೇ ಶ್ರೀಗಳ ಮುಗುಳ್ನಗೆಗೆ ಶ್ರೀಗಳೇ ಸಾಟಿ…

ಒಂದು ವ್ಯಕ್ತಿಯನ್ನು ಸಾವಿರಾರು ಜನ ಅನುಸರಿಸುತ್ತಾರೆ ಅಂತಾದರೆ ಅವರನ್ನು ವ್ಯಕ್ತಿ ಅನ್ನೋದಕ್ಕಿಂತ ಶಕ್ತಿ ಅನ್ನಬಹುದು” ಅಂತಹ ವಿಶಿಷ್ಟ ಮಾಂತ್ರಿಕತೆ ಶ್ರೀಗಳವರಲ್ಲಿದೆ.
ಶ್ರೀಗಳವರು ವ್ಯಕ್ತಿಯಲ್ಲ… ಅವರು ಶಕ್ತಿ. ಶ್ರೀಗಳವರನ್ನು ಅನುಸರಿಸೋ ಎಲ್ಲರೂ ಇಂದು ಸಮಾಜದ ಹತ್ತು ಹಲವು ಪುಣ್ಯ ಕೆಲಸದಲ್ಲಿ ತೊಡಗಿದ್ದಾರೆ.
ಅದೆಷ್ಟು ಸಾಮಾಜಿಕ ಕ್ರಾಂತಿ ಶ್ರೀಗಳವರಿಂದ ಆಗಿದೆ. ಪ್ರತಿಯೊಂದರಲ್ಲೂ ಸ್ವಾರ್ಥ ಮನೋಭಾವ ಬೆಳಸಿಕೊಂಡು, ಸಂಬಂಧವನ್ನು ಗಾಳಿಗೆ ತೂರಿದ್ದ ಇಂದಿನ ಜಗತ್ತಲ್ಲಿ ಸಂಘಟನೆ ಎನ್ನೋದು ಅಲ್ಲಲ್ಲಿ ಮಾತ್ರ ಕಾಣುವಂತಾಗಿತ್ತು.
ಇಂದು ಶ್ರೀಗಳವರ ನೇತೃತ್ವದಲ್ಲಿ ಅತ್ಯಂತ ಶೀಘ್ರವಾಗಿ ಸಂಘಟನೆಯಾಗಿದ್ದು ಒಂದು ಪವಾಡ.

ತಾಯಿಯ ಎದೆ ಹಾಲಿನ ನಂತರ ನಾವು ಕುಡಿದಿದ್ದು ಗೋವಿನ ಹಾಲು. ನಮ್ಮ ಏಳ್ಗೆಗೆ ಗೋವಿನ ಕೊಡುಗೆ ಅಪಾರ. ಆದರೆ ಗೋವಿನ ಬಗ್ಗೆ ಜನರಲ್ಲಿ ಇದ್ದ ಭಾವನೆ ಮಾತ್ರ ಶೂನ್ಯವಾಗಿತ್ತು.
ಗೋವು ನಮ್ಮ ಮಾತೃ ಸಮಾನ ಎನ್ನುವ ಭಾವನೆ ಸಮಾಜದಿಂದ ಮರೆಯಾಗುವ ಹಂತದಲ್ಲಿತ್ತು.
ಗೋವಿನ ಮಹತ್ವ ಏನು ಎನ್ನುವುದು ಇಂದು ಜಗತ್ತಿಗೆ ವಿಶ್ವ ಗೋ ಸಮ್ಮೇಳನ, ಕೋಟಿ ನೀರಾಜನ, ದೀಪಗೋಪುರ, ವಿಶ್ವ ಮಂಗಳ ಗೋಗ್ರಾಮ ಯಾತ್ರ ಮುಂತಾದ ಕಾರ್ಯಕ್ರಮಗಳ ಮೂಲಕ ನಮ್ಮ ಶ್ರೀಗಳವರು ಸಾರಿದರು.
ನಶಿಸಿ ಹೋಗುತ್ತಿರುವ ಭಾರತೀಯ ಗೋತಳಿಗಳು ಇಂದು ಅರಳುತ್ತಿವೆ. ಇಟ್ಟರೇ ಸಗಣಿಯಾದೆ, ತಟ್ಟಿದರೆ ಕುರುಳಾದೆ ಎನ್ನೋದು ಮತ್ತು ಪುಣ್ಯಕೋಟಿ ಹಾಡಾದ ಧರಣಿ ಮಂಡಲ ಮದ್ಯದೊಳಗೆ ಎನ್ನೋದು ಕೇವಲ ಪಾಠದಲ್ಲಿ ಮಾತ್ರ ಇತ್ತು.
ಇಂದು ಗೋವು ಅಂದರೆ ನೆನಪಾಗೋದು ಶ್ರೀಗಳವರು. ಕೇವಲ ಗೋವಿನ ವಿಷಯ ಮಾತ್ರವಲ್ಲದೇ ಅನೇಕ ಸಾಮಾಜಿಕ ಕೆಲಸಗಳು ಶೀಗಳವರ ನೇತೃತ್ವದಲ್ಲಿ ಆಗುತ್ತಲಿದೆ.
ಶ್ರೀಮಠದ ಅಡಿಯಲ್ಲಿ ಈಗ ೨೬ ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ನಡೆಯುತ್ತಿದೆ. ಪುರಾತನ ಶಿಕ್ಷಣದಿಂದ ಆಧುನಿಕ ಶಿಕ್ಷಣವನ್ನು ಬೋಧಿಸುವ ಸಂಸ್ಥೆಗಳು ನಡೆಯುತ್ತಿದೆ.

ಇದಲ್ಲದೇ ವಿದ್ಯಾದಾನ, ಜೀವನದಾನ, ಮುಷ್ಟಿಭಿಕ್ಷಾ, ನಾರೀನಿಕೇತನ, ಮಹಿಳೋದಯ ಮತ್ತು ಅನುಗ್ರಹ, ಪುನರುಜ್ಜೀವಿನಿ, ಶ್ರೀಭಾರತೀ ಪ್ರಕಾಶನ, ಉಪಾಸನ, ಗೋ ಸಂಜೀವಿನಿ, ಅವಲಂಬನ ಮುಂತಾದವುಗಳು ಶ್ರೀಗಳವರ ನೇತೃತ್ವದಲ್ಲಿ ನಡೆಯುತ್ತಿದೆ.
ಶ್ರೀಮಠದ ಅಡಿಯಲ್ಲಿ ಹತ್ತಕ್ಕೂ ಹೆಚ್ಚು ವೈಧ್ಯಕೀಯ ಕೇಂದ್ರಗಳು ಮತ್ತು ಆಸ್ಪತ್ರೆಗಳು ನಡೆಯಿತ್ತಿವೆ.
ಇತ್ತೀಚೆಗೆ ಪ್ರಕೃತಿ ವಿಕೋಪಕ್ಕೆ ಸಿಕ್ಕಿ ಮನೆ ಮತ್ತು ಮನಗಳು ಬಿದ್ದು ಮಣ್ಣಾಗಿ ಹೋಗಿದ್ದವು.
ಹಾಗೆ ಬಿದ್ದು ನಾಶವಾಗಿದ್ದ ಮನೆ ಮನಗಳನ್ನು ಪುನಃ ಎತ್ತಿಕಟ್ಟಿ ಅವರ ಬಾಳಿಗೊಂದು ಆಸರೆ ಕೊಟ್ಟ ಪುಣ್ಯಕೆಲಸ ಶ್ರೀಗಳವರ ನೇತೃತ್ವದಲ್ಲಿ ಆಯಿತು.
ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನ ನಾಡಿನಲ್ಲೇ ಪ್ರಮುಖ ದೇವಸ್ಥಾನ. ಎಂದೋ ಶ್ರೀಮಠದಿಂದ ಬಿಟ್ಟು ಹೋಗಿದ್ದ ಈ ದೇವಸ್ಥಾನ ಶ್ರೀಮಠಕ್ಕೆ ಹಸ್ತಾಂತರಗೊಂಡಿದೆ.
ಶ್ರೀಮಠದ ಆಡಳಿತಕ್ಕೆ ಮತ್ತೆ ಬಂದ ದೇವಸ್ಥಾನದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ. ಒಮ್ಮೆ ಗೋಕರ್ಣಕ್ಕೆ ಹೋದರೆ ಎಲ್ಲರಿಗೆ ಅರಿವಾಗುತ್ತದೆ. ದೇವಾಲಯ ಸ್ವಚ್ಛವಾಗಿದೆ.
ಉಚಿತ ಊಟದ ವ್ಯವಸ್ಥೆಯಾಗಿದೆ. ಇದಲ್ಲದೇ ಮೂಲಮಠ ಅಶೋಕೆಯ ಅಭಿವೃದ್ಧಿಯ ಕೆಲಸವೂ ಸಹ ಶ್ರೀಗಳವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಹನುಮಂತನ ಜನ್ಮಸ್ಥಳ ಗೋಕರ್ಣದ ಸಮೀಪ ಇದೆ ಅಂತ ಹೆಚ್ಚಿನವರಿಗೆ ತಿಳಿದಿಲ್ಲ.
ಅದರ ಅಭಿವೃದ್ಧಿಯ ಕೆಲಸವೂ ಆಗುತ್ತಲಿದೆ. ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಶ್ರೀಗಳವರಿಂದ ಆಗುತ್ತಲಿದೆ.

ಸಮಾಜದಲ್ಲಿ ಆದ ಧಾರ್ಮಿಕ ಪರಿವರ್ತನೆಗಳು ಬಹಳ. ಹಿಂದೆಲ್ಲಾ ಪಂಚೆ ಕೇವಲ ಪುರೋಹಿತರು ಮತ್ತು ವಯಸ್ಸಾದವರಿಗೆ ಮೀಸಲಾಗಿತ್ತು.
ಆದರೆ ಇಂದು ನೀವು ಶ್ರೀಮಠಕ್ಕೆ ಬಂದು ನೋಡಿದರೆ ಎಲ್ಲರೂ ಪಂಚೆಯಲ್ಲೇ ಕಾಣುತ್ತಾರೆ. ಹಾಗಂತ ಇಲ್ಲಿ ಯಾರ ಮೇಲೂ ಒತ್ತಡವಿಲ್ಲ.
ಎಲ್ಲ ಇಷ್ಟಪಟ್ಟು ಉಡುಗೆಯನ್ನು ಮಠದಲ್ಲಿ ಬದಲಾಯಿಸಿಕೊಂಡಿದ್ದಾರೆ. ದೂರವಾಣಿಯಲ್ಲಿ ಹಿಂದಿನಂತೆ ಹಲೋ ಎನ್ನುವ ಉತ್ತರ ಬರುವುದಿಲ್ಲ. ಅದರ ಜಾಗದಲ್ಲಿ “ಹರೇರಾಮ” ಕಿವಿಗೆ ಇಂಪಾಗಿ ಕೇಳಿಸುತ್ತದೆ.
ನಶಿಸಿಹೋಗುತ್ತಿರುವ ಸಾಮವೇದ ಇಂದು ಮತ್ತೆ ನಳನಳಿಸುತ್ತಿದೆ. ತಾಳೆಗರಿಗಳ ದೊಡ್ಡ ಸಂಗ್ರಹವಾಗಿದೆ. ಜನರ ಮನಸ್ಸಲ್ಲಿ ಮೂಲನಂಬಿಕೆಗಳು ಮತ್ತು ಮೂಢನಂಬಿಕೆಗಳ ಬಗ್ಗೆ ಸ್ಪಷ್ಟತೆ ಮೂಡಿದೆ.
ಹವ್ಯ ಕವ್ಯಗಳಲ್ಲಿ ಪ್ರಸಿದ್ದಿಯಾಗಿದ್ಧ ಹವ್ಯಕರಲ್ಲಿ ಧಾರ್ಮಿಕ ಮನೋಭಾವ ಕಡಿಮೆಯಾಗಿತ್ತು. ಈಗ ಕೋಟಿರುದ್ರ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಂದ ಎಲ್ಲರ ಬಾಯಲ್ಲಿ ರುದ್ರಪಠಣವಾಗುತ್ತಿದ್ದೆ.
ಎಲ್ಲವನ್ನೂ ಬಿಟ್ಟವ ಇಂದು ಮತ್ತೆ ಗೂಡಿಗೆ ಮರಳಿದ್ದಾನೆ. ಪ್ರತಿದಿನ ಸಂಜೆ ರುದ್ರ ಕಲಿಯಲು ಹೋಗುತ್ತಿದ್ದಾನೆ.
ಆತನ ಬಾಯಲ್ಲಿ “ಓಂ ನಮೋ ಭಗವತೇ ರುದ್ರಾಯ…..” ನಲಿಯುತ್ತಿದೆ.
ಅದೆಷ್ಟೋ ಧಾರ್ಮಿಕ ಸಂಘಸಂಸ್ಥೆಗಳು ಶ್ರೀಮಠದ ಅಡಿಯಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿದೆ. ಅದೆಷ್ಟೋ  ದೇವಸ್ಥಾನಗಳು ಜೀರ್ಣೋದ್ಧಾರವಾಗಿದೆ.

“ಪರಿವರ್ತನೆ ಜಗದ ನಿಯಮ”. ಇಡೀ ಸಮಾಜದಲ್ಲಿ  ಪರಿವರ್ತನೆಯಾಗಬೇಕಾದರೆ ಅದಕ್ಕೆ ಬಹಳ ಪರಿಶ್ರಮ ಬೇಕು, ನಿರಂತರ ಸ್ಪೂರ್ತಿ ಬೇಕು, ಕೆಚ್ಚೆದೆ ಬೇಕು, ವಾತ್ಸಲ್ಯ ಬೇಕು, ಮಮತೆಯಿರಬೇಕು…
ಇದೆಲ್ಲದರ ಸಾಕಾರ ನಮ್ಮ ಶ್ರೀಗಳು. ನಿಂತ ನೀರಾಗದೆ ಎಲ್ಲ ಕಡೆ ಸಂಚರಿಸಿ ಮನೆ ಮನಗಳನ್ನು ಶುದ್ಧ ಮಾಡಿ ಮುಂದೆ ಮುಂದೆ ಸಾಗುತ್ತಿದ್ದಾರೆ.
ಜೊತೆಗೆ ಬಂದ ಕಳೆ ಕೊಳೆಯನ್ನು ತೆಗೆದು ಸ್ವಚ್ಛ ಮನಸ್ಸನ್ನು ಮಾಡುತ್ತಿದ್ದಾರೆ. ನಿರಂತರವಾಗಿ ಹರಿಯುತ್ತಿರುವ ಮನಸ್ಸಿನ ಧಾರೆಗೆ ನಿರ್ದಿಷ್ಟ ರೂಪು ಕೊಟ್ಟು ಸ್ವಷ್ಟ ದಾರಿಯತ್ತ ಪಯಣಿಸುತ್ತಿದ್ದಾರೆ.
ಅವರ ಹೆಜ್ಜೆಗೆ ಗೆಜ್ಜೆಯಾಗಿ ಹೋಗೋ ಸೌಭಾಗ್ಯ ನನಗೆ ದೊರಕಿದೆ. ಮನಸ್ಸು ಬಾಡಿಹೋದಾಗ ಒಮ್ಮೆ ಶ್ರೀಗಳವರ ನೆನಪು ಮಾಡಿಕೊಂಡರೆ ಸಾಕು ಮತ್ತೆ ಉಲ್ಲಾಸ ಮೂಡುತ್ತದೆ.
ಯಾವುದೇ ಒಂದು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದರೆ ಗೆಲುವು ಸಿದ್ಧ ಅನ್ನೋ ಅವರ ವಾಕ್ಯ ಮನಸ್ಸಲ್ಲಿ ಸದಾ ಹರಿಯುತ್ತಿದೆ.
ಆ ಶಕ್ತಿಗೆ ಶರಣು ಶರಣು.

ಒಂದು ದೊಡ್ಡ ಆನೆಯ ವಿಸ್ತಾರ, ಮಹತ್ವ ಎಲ್ಲವನ್ನೂ ಬಣ್ಣಿಸಲು ಇರುವೆಗೆ ಹೇಗೆ ಅಸಾಧ್ಯವೋ ಹೇಗಾಗುತ್ತದೆಯೋ ಹಾಗೆ ನನಗಾಗಿದೆ. ಶ್ರೀಗಳಂತಹ ದೊಡ್ಡ ವ್ಯಕ್ತಿ-ಶಕ್ತಿಯ ಬಗ್ಗೆ ನನ್ನ ಸಾಮರ್ಥ್ಯಕ್ಕೆ ತಕ್ಕಷ್ಟು ಹೇಳಿದ್ದೇನೆ.
ತಪ್ಪುಗಳು ತಿದ್ದಿಕೊಳ್ಳಲಿಕ್ಕೆ; ಒಪ್ಪುಗಳು ಅವರ ಪಾದಕಮಲಗಳಿಗೆ. ಶ್ರೀಗಳವರ ಬಗ್ಗೆ ನೆನಪಾದಾಗ ನನ್ನ ಮನಸ್ಸಿಗೆ ಹೊಳೆಯೋದು ಈ ದಾಸ ವಾಣಿ

ಇಂಥಾ ಗುರುಗಳ ಕಾಣೆ ನಾ
ಭೂತಳದೊಳು
ಇಂಥಾ ಯತಿಗಳ ಕಾಣೆ ನಾ…

 

ವ್ಯಕ್ತಿ ಪರಿಚಯ:

ಯಜ್ಞೇಶ್ – ಜೀವನವನ್ನು ಸಾದ್ಯವಾದಷ್ಟು ಸಮ ಪ್ರಮಾಣದಲ್ಲಿ ನೋಡುವ ಆಸೆ ಹೊತ್ತ ವ್ಯಕ್ತಿ.
ಮಲೆನಾಡಿನ ಚದರವಳ್ಳಿಯಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದು ಕೆಲವು ವರ್ಷಗಳಿಂದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ.
ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಘಟನೆಯಲ್ಲಿ ಆಸಕ್ತಿ. ಶ್ರೀಮಠಕ್ಕೆ ಅಳಿಲು ಸೇವೆ ಮಾಡುತ್ತಿರುವ ಶಿಷ್ಯ.

ಮಿಂಚಂಚೆ: yajnesh@gmail.com

Facebook Comments Box