|| ಹರೇ ರಾಮ ||
ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ
ಶ್ರೀರಾಮಚಂದ್ರಾಪುರಮಠ
ಶಾಖೆ : ಕೆಕ್ಕಾರು

ಶ್ರೀರಾಮಚಂದ್ರಾಪುರಮಠದ ಹನ್ನೊಂದನೆಯ ಪೀಠಾಧೀಶರಾಗಿದ್ದ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ಸನ್ಯಾಸದೀಕ್ಷೆಯನ್ನು ಪಡೆದ ಶ್ರೀ ಶ್ರೀರಘೂತ್ತಮಭಾರತೀ ಶ್ರೀಗಳು ಕ್ರಿ. ಶ. ಸುಮಾರು ೧೫೧೦ರಲ್ಲಿ ಉತ್ತರಕನ್ನಡ ಜಿಲ್ಲೆಯ ಕೆಕ್ಕಾರಿನಲ್ಲಿ ಮಠವೊಂದನ್ನು ಸ್ಥಾಪಿಸಿದರು. ಈ ಮಠಕ್ಕೆ ರಘೂತ್ತಮಮಠವೆಂದೇ ಹೆಸರಾಯಿತು. ಇವರ ಶಿಷ್ಯರು ಶ್ರೀ ವಿಶ್ವರೂಪಭಾರತೀ ಶ್ರೀಗಳು. ನಂತರ ಕ್ರಮವಾಗಿ ಶ್ರೀಸತ್ಯರೂಪಭಾರತೀ, ಶ್ರೀಸರ್ವೇಶ್ವರಭಾರತೀ, ಶ್ರೀರಘುನಾಥಭಾರತೀ, ಶ್ರೀನೃಸಿಂಹಭಾರತೀ ಶ್ರೀರಾಮಚಂದ್ರಭಾರತೀ, ಶ್ರೀರಘೂತ್ತಮಭಾರತೀ, ಶ್ರೀರಾಘವೇಶ್ವರಭಾರತೀ, ಶ್ರೀರಘುನಾಥಭಾರತೀ, ಶ್ರೀರಘೂತ್ತಮಭಾರತೀ, ಶ್ರೀರಾಮಚಂದ್ರಭಾರತೀ ಶ್ರೀಗಳು ಈ ಮಠದ ಅಧಿಪತಿಗಳಾಗಿದ್ದು ಸಾಮಾಜಿಕರಿಗೆ ಧರ್ಮಕರ್ಮಮಾರ್ಗಗಳನ್ನು ತೋರಿಸಿ ಸಮಾಜಕ್ಕೆ ಅರಿವಿನ ಬೆಳಕನ್ನು ಅನುಗ್ರಹಿಸಿದರು. ಇವರ ಶಿಷ್ಯರಲ್ಲಿ ಒಬ್ಬರಾದ ಶ್ರೀನೃಸಿಂಹಭಾರತೀ ಶ್ರೀಗಳು ನೆಲೆಮಾವಿನಲ್ಲಿ ನೂತನ ಮಠವೊಂದನ್ನು ಸ್ಥಾಪಿಸಿ ಅಲ್ಲಿಯೇ ಉಳಿದರು. ಹೀಗೆ ಈ ಮಠದಲ್ಲಿ ಹನ್ನರಡು ಯತಿಶ್ರೇಷ್ಠರು ಮಠಾಧೀಶರಾಗಿದ್ದರು. ಹದಿಮೂರನೆಯ ಮಠಾಧಿಪತಿಗಳಾದ ಶ್ರೀ ಶ್ರೀರಾಘವೇಶ್ವರಭಾರತೀ ಶ್ರೀಗಳವರು ಶ್ರೀರಾಮಚಂದ್ರಾಪುರಮಠದ ಮೂವ್ವತ್ತೊಂದನೆಯ ಪೀಠಾಧೀಶರಾದ ಶ್ರೀ ಶ್ರೀಮದ್ರಾಮಚಂದ್ರಭಾರತೀ ಮಹಾಸ್ವಾಮಿಗಳ ಸಮಕಾಲಿಕರು. ಕ್ರಿ. ಶ. ೧೮೨೫ರಲ್ಲಿ ಶ್ರೀರಾಮಚಂದ್ರಾಪುರಮಠದ ಮೂವ್ವತ್ತನೆಯ ಪೀಠಾಧ್ಯಕ್ಷರಾದ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳು ಮುಕ್ತರಾದಾಗ ಉತ್ತರಾಧಿಕಾರಿಗಳಾದ ಶ್ರೀ ಶ್ರೀಮದ್ರಾಮಚಂದ್ರಭಾರತೀ ಮಹಾಸ್ವಾಮಿಗಳು ವಯಸ್ಸಿನಲ್ಲಿ ಚಿಕ್ಕವರಾಗಿದ್ದರಿಂದ ಶ್ರೀಮಠದ ಆಡಳಿತ, ಶಿಷ್ಯರ ಆಚಾರ-ವಿಚಾರಾದಿಗಳನ್ನು ಈ ಕೆಕ್ಕಾರು ಮಠದ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳವರೇ ನಿರ್ವಹಿಸುತ್ತಿದ್ದರು. ಹಾಗೂ ನೂತನ ಶ್ರೀಗಳಿಗೆ ವಿದ್ಯಾಗುರುಗಳೂ ಆಗಿದ್ದರು. ಕೊನೆಯಲ್ಲಿ ಶ್ರೀ ರಾಘವೇಶ್ವರಭಾರತೀ ಶ್ರೀಗಳು ಕೆಕ್ಕಾರಿನ ರಘೂತ್ತಮ ಮಠದ ಯಾವತ್ತೂ ಆಸ್ತಿ-ಜವಾಬ್ದಾರಿಗಳನ್ನು ಶ್ರೀರಾಮಚಮದ್ರಾಪುರಮಠಕ್ಕೇ ವಹಿಸಿ ಕೆಕ್ಕಾರಿನ ಮಠವನ್ನು ಶ್ರೀರಾಮಚಂದ್ರಾಪುರಮಠದಲ್ಲಿ ವಿಲೀನಗೊಳಿಸಿದರು. ಕೆಕ್ಕಾರಿನ ಶ್ರೀರಘೂತ್ತಮಮಠದಲ್ಲಿ ಹದಿಮೂರು ಯತಿಶ್ರೇಷ್ಠರು ಪ್ರತ್ಯೇಕವಾಗಿ ಆಡಳಿತ ನಡೆಸಿದ್ದರು. ನಂತರ ಈ ಮಠಕ್ಕೆ ಪ್ರತ್ಯೇಕವಾಗಿ ಪೀಠಾಧಿಪತಿಗಳಾಗಲಿಲ್ಲ. ಹೀಗೆ ಶ್ರೀಮಠದ ಹನ್ನೊಂದನೆಯ ಪೀಠಾಧಿಪತಿಗಳಾದ ಪೂಜ್ಯಶ್ರೀ ಶ್ರೀಮದ್ರಾಘವೇಶ್ವರಭಾರತೀ ಹಾಗೂ ಶ್ರೀ ಶ್ರೀ ರಾಮಚಂದ್ರಭಾರತೀ ಮಹಾಸ್ವಾಮಿಗಳ ಕಾಲದಲ್ಲಿ ಶಾಖಾರೂಪದಲ್ಲಿ ಬೇರಾಗಿದ್ದ ಮಠವು ಅದೇ ನಾಮದಿಂದ ಪ್ರಸಿದ್ಧರಾದ ಇಬ್ಬರು ಪೀಠಾಧೀಶರ ಕಾಲದಲ್ಲಿಯೇ ಪುನಃ ಒಂದಾಗಿದ್ದು ಇತಿಹಾಸದ ವಿಸ್ಮಯಗಳಲ್ಲಿ ಒಂದೆಂದರೆ ಅತಿಶಯೋಕ್ತಿಯಲ್ಲ.

ಸೀತಾಲಕ್ಷ್ಮಣಸಮೇತನಾದ ಪ್ರಭು ಶ್ರೀರಾಮಚಂದ್ರನು ಇಲ್ಲಿಯ ಮುಖ್ಯ ಆರಾಧ್ಯದೇವತೆಯಾಗಿದ್ದು ಶ್ರೀಲಕ್ಷ್ಮೀನೃಸಿಂಹ, ಸಾಲಿಗ್ರಾಮ ಹಾಗೂ ಶ್ರೀಚಕ್ರಗಳೂ ಪೂಜಿತವಾಗುತ್ತವೆ. ಅಲ್ಲದೆ ದುರ್ಗಾ, ವಿಷ್ಣು, ಗಣಪತಿ, ಶಿವಪಾರ್ವತಿ, ಶಕ್ತಿಸಂಕೇತವಾದ ವೃತ್ತಾಕಾರದ ಶಿಲೆಯಲ್ಲಿಡಲ್ಪಟ್ಟ ಎರಡು ತೆಂಗಿನಕಾಯಿಗಳು ಹಾಗೂ ಚಿಕ್ಕ ಆಂಜನೇಯನ ಮೂರ್ತಿ ಮತ್ತು ಪೂರ್ವಯತಿಗಳ ಮೂರುಸಮಾಧಿಗಳಿಗೂ ಇಲ್ಲಿ ಅರ್ಚನೆ ನಡೆಯುತ್ತದೆ. ಜಗದ್ವಿಖ್ಯಾತವಾದ ಹಸ್ತಿದಂತಸಿಂಹಾಸನವನ್ನು ಮಾಡಿಸಿ ನಾನಾದೇಶಗಳ ವಿದ್ವಜ್ಜನರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಭೌಮ ಶ್ರೀಮಹಾಬಲೇಶ್ವರನಸನ್ನಿಧಿಯಲ್ಲಿ ಆ ಸಿಂಹಾಸನವನ್ನು ಆರೋಹಿಸಿ ವಿಖ್ಯಾತವ್ಯಾಖ್ಯಾನಸಿಂಹಾಸನಾಧೀಶರೆಂಬ ಬಿರುದನ್ನು ಸಾರ್ಥಕಪಡಿಸಿದ ಮೂವ್ವತ್ತನಾಲ್ಕನೆಯ ಪೀಠಾಧೀಶರಾಗಿದ್ದ ಶ್ರೀ ಶ್ರೀಮದ್ರಾಮಚಂದ್ರಭಾರತೀ ಮಹಾಸ್ವಾಮಿಗಳು ಈ ಮಠದಲ್ಲಿಯೇ ಮುಕ್ತರಾಗಿದ್ದು ಶ್ರೀದೇವರ ಬಲಭಾಗದಲ್ಲಿಯೇ ಅವರ ಸಮಾಧಿಯಿದೆ. ಶ್ರೀಗುರುಪರಂಪರೆಯ ಅನೇಕ ಯತಿಶ್ರೇಷ್ಠರು ಈ ಮಠದಲ್ಲಿ ಚಾತುರ್ಮಾಸ್ಯವ್ರತವನ್ನು ಕೈಗೊಂಡಿದ್ದಕ್ಕೆ ದಾಖಲೆಯಿದೆ. ಶ್ರೀಮಠದಿಂದ ಸುಮಾರು ಒಂದು ಕಿ. ಮೀ. ದೂರದಲ್ಲಿ ಕೆಕ್ಕಾರು ಮೂಲಮಠದ ಕುರುಹುಗಳು ಕಂಡುಬರುತ್ತಿದ್ದು ಇದೇ ಮೂಲಮಠವಾಗಿತ್ತೆಂದು ಪ್ರತೀತಿಯಿದೆ. ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ನಾಡಿನ ಪ್ರಾಚೀನ ವಿದ್ಯಾಸಂಸ್ಥೆಯಾದ ಶ್ರೀ ವಿದ್ಯಾರಣ್ಯ ಸಂಸ್ಕೃತ ಪಾಠಶಾಲೆಯು ಶ್ರಿಮಠದ ವತಿಯಿಂದ ಯೋಜಿತವಾಗಿದ್ದು ಯಜುರ್ವೇದ, ಸಾಮವೇದ, ಸಂಸ್ಕೃತಗಳ ಬೋಧನೆ ನಡೆಯುತ್ತಿದೆ. ಅಂದಾಜು ೬೦ ಲಕ್ಷರೂಪಾಯಿಗಳ ವೆಚ್ಚದಲ್ಲಿ ಶ್ರೀಮಠದ ಆವರಣದ ಸನಿಹದಲ್ಲಿ ಸಂಸ್ಕೃತಪಾಠಶಾಲೆ, ಸಂಗೀತವಿದ್ಯಾಲಯ ಮತ್ತು ಬೃಹತ್ ಸಭಾಭವನ ವಸತಿನಿಲಯಗಳನ್ನು ನಿರ್ಮಿಸಲಾಗಿದೆ.

|| ಹರೇ ರಾಮ ||

ವಿಳಾಸ :
ಶ್ರೀರಘೂತ್ತಮಮಠ,
ಕೆಕ್ಕಾರು, ಹೊನ್ನಾವರ ತಾಲೂಕು,
ಉತ್ತರ ಕನ್ನಡ ಜಿಲ್ಲೆ – ೫೮೩ ೩೮೯
ದೂರವಾಣಿ : 08386 – 285001

Facebook Comments Box