|| ಹರೇ ರಾಮ ||
ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ
ಶ್ರೀರಾಮಚಂದ್ರಾಪುರಮಠ
ಪ್ರಧಾನಮಠ : ಹೊಸನಗರ

ಶಿವಮೊಗ್ಗ ಜಿಲ್ಲೆಯ ಹೊಸನಗರ ಸಮೀಪ ನಾಡಿನ ಜೀವನದಿಯಾದ ಪವಿತ್ರ ಶರಾವತೀ ತೀರದಲ್ಲಿ ಮಹರ್ಷಿ ಅಗಸ್ತ್ಯರ ತಪೋಭೂಮಿಯ ಸುಂದರ ಪರಿಸರದಲ್ಲಿ ನಮ್ಮ ಪ್ರಧಾನಮಠವಾದ ಶ್ರೀಮದ್ರಾಮಚಂದ್ರಾಪುರಮಠವು ಸ್ಥಾಪಿತವಾಗಿದೆ. ಅಗಸ್ತ್ಯಸಂಪೂಜಿತನಾದ ಪ್ರಭು ಶ್ರೀರಾಮಚಂದ್ರ ಉತ್ತರದ ಸರಯೂ ತೀರದಿಂದ ಈ ಶರಾವತೀ ತೀರಕ್ಕೆ ಬಂದು ನೆಲೆನಿಂತಿದ್ದಕ್ಕೆ ಪ್ರಾಯಶಃ ವನವಾಸಕಾಲದ ಆಕರ್ಷಣೆಯೇ ಕಾರಣವೇನೋ ! ಅಂದು ದಟ್ಟಕಾಡುಗಳಿಂದ ಆವೃತವಾಗಿ  ದಂಡಕಾರಣ್ಯವೆಂದು ಖ್ಯಾತವಾಗಿದ್ದ ಈ ಪ್ರದೇಶವು ಇಂದು ಶ್ರೀರಾಮಪದಗಳಿಂದ ಪುನೀತವಾಗಿ ಸಮೃದ್ಧ ನಾಗರಿಕತೆಯನ್ನು ಹೊಂದಿದೆ. ಶ್ರೀಮದಾಚಾರ್ಯಶಂಕರಭಗವತ್ಪಾದರಿಂದ ಗೋಕರ್ಣದ ಸಮೀಪ ಅಶೋಕೆಯಲ್ಲಿ ಸಂಸ್ಥಾಪಿತವಾದ ಶ್ರೀರಘೂತ್ತಮಮಠದ ಹನ್ನೊಂದನೆಯ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳವರು ಶ್ರೀಗುರುಪರಂಪರೆಯ ಮೊದಲ ರಾಘವೇಶ್ವರಭಾರತೀ ಪದಾಭಿಧರು. ತಮ್ಮ ಗುರುಗಳಾದ ಶ್ರೀ ಶ್ರೀಚಿದ್ಬೋಧಭಾರತೀ ಶ್ರೀಗಳಂತೆಯೇ ವಿಜಯನಗರದ ಅರಸರಿಂದ ಹಂಪೆಯ ಶ್ರೀವಿರೂಪಾಕ್ಷದೇವರ ಸನ್ನಿಧಿಯಲ್ಲಿ ಸ್ವರ್ಣಮಯ ಪಂಚಕಲಶಯುಕ್ತ ಆಂದೋಲಿಕಾದಿ ರಾಜಲಾಂಛನಗಳಿಂದ ಸತ್ಕೃತರಾದ ಮಹಾತಪಸ್ವಿಗಳು. ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ಕಾಶೀಕ್ಷೇತ್ರದಲ್ಲಿದ್ದು ವಿಶೇಷ ಪಾಂಡಿತ್ಯವನ್ನು ಗಳಿಸಿ ವಾಪಸು ಬರುವಾಗ ಸಹಸ್ರ ಶಾಲಗ್ರಾಮಗಳನ್ನು ತಂದ ಮಹಾಮಹಿಮರು. ಜ್ಯೌತಿಷ, ಖಗೋಲಶಾಸ್ತ್ರಗಳೂ ಸೇರಿದಂತೆ ಹಲವು ಶಾಸ್ತ್ರಗಳಲ್ಲಿ ನಿಷ್ಣಾತರಾದವರು ಎಂದು ಇತಿಹಾಸವು ಪೂಜ್ಯರನ್ನು ಗುರುತಿಸಿದೆ. ಇವರ ಶಿಷ್ಯರು ಶ್ರೀ ಶ್ರೀರಾಮಚಂದ್ರಭಾರತೀ ಶ್ರೀಗಳು. ಆಕಾಲದಲ್ಲಿ ಕೆಳದಿ ಸಂಸ್ಥಾನದ ಸಂಸ್ಥಾಪಕನಾದ ಚೌಡಪ್ಪ ನಾಯಕನು ತಮ್ಮ ಪ್ರಾಂತದಲ್ಲಿ ಕೆಲಕಾಲವಿದ್ದು ಧರ್ಮಮಾರ್ಗವನ್ನು ಉಪದೇಶಿಸಬೇಕೆಂದು ಒತ್ತಾಯದಿಂದ ಪ್ರಾರ್ಥಿಸಿದಾಗ ವಿಜಯನಗರದ ಸೋಮಣ್ಣ ನಾಯಕರೂ ಸಹ ಇದೇ ಬೇಡಿಕೆಯನ್ನು ಶ್ರೀಗಳ ಮುಂದಿಟ್ಟಾಗ ಅವರ ಪ್ರಾರ್ಥನೆಯನ್ನು ಮನ್ನಿಸಿ ಹೊಸನಗರದ ಕಾರಣಗಿರಿಯ ಸಮೀಪದ ಅಗಸ್ತ್ಯತೀರ್ಥದ ಬಳಿ  ಆಶ್ರಮವೊಂದನ್ನು ಸ್ಥಾಪಿಸಿದರು. ವಿಜಯನಗರ ಮತ್ತು ಕೆಳದಿನಗರ ಸಂಸ್ಥಾನಿಕರು ಶ್ರದ್ಧಾಭಕ್ತಿಗಳಿಂದ ಸಮರ್ಪಿಸಿದ ಉಂಬಳಿ ಉತಾರಗಳನ್ನು ಸ್ವೀಕರಿಸಿ ಬೃಹತ್ತಾದ ಮಠವನ್ನೂ ನಿರ್ಮಾಣಮಾಡಿಸಿದರು. ಇಡೀ ಗ್ರಾಮವೇ ಪೂಜ್ಯಶ್ರೀಗಳಿಗೆ ಉಂಬಳಿಯಾಗಿ ದೊರೆತದ್ದರಿಂದ ಆ ಪ್ರದೇಶಕ್ಕೇ ಶ್ರೀರಾಮಚಂದ್ರಾಪುರ ಎಂದೇ ಹೆಸರಾಯಿತು. ಹೀಗೆ ಈ ಮಠವು ಸುಮಾರು ಕ್ರಿ.ಶ. ೧೫೦೦ರಿಂದ ೧೫೦೫ರಲ್ಲಿ ಸಂಸ್ಥಾಪಿತವಾಗಿ ಅಂದಿನಿಂದಲೂ ಪ್ರಧಾನಮಠದ ಸ್ಥಾನದಲ್ಲಿ ವಿರಾಜಮಾನವಾಗಿದೆ. ಇವರ ಶಿಷ್ಯರು ಪರಂಪರೆಯ ಎರಡನೆಯ ಶ್ರೀ ಅಭಿನವ ರಾಘವೇಶ್ವರಭಾರತೀಶ್ರೀಗಳು. ಹಿರೇಒಡೆಯರೆಂದೇ ಪ್ರಸಿದ್ಧರಾದವರು. ವಿಜಯನಗರದ ಅರಸರು ಬಾರಕೂರು ಮಾಗಣೆಯ ಹಲವಾರು ಗ್ರಾಮಗಳನ್ನು ಪೂಜ್ಯಶ್ರೀಗಳಿಗೆ ಸಮರ್ಪಿಸಿದ್ದರು. ಅಲ್ಲದೆ ಪರಿಸರದ ನಲ್ಲುಂಡೆ, ಹೆದ್ಲಿ, ಹನಿಯ ಮೊದಲಾದ ಅನೇಕ ಗ್ರಾಮಗಳನ್ನು ಇಕ್ಕೇರಿ ಸಂಸ್ಥಾನಿಕರೂ ಶ್ರೀರಾಮನ ಪೂಜಾಕೈಂಕರ್ಯಕ್ಕೆಂದು ಉಂಬಳಿ  ನೀಡಿದರು. ಇವರ ಶಿಷ್ಯರು ಶ್ರೀ ಶ್ರೀರಾಮಯೋಗೀಂದ್ರಭಾರತೀ ಶ್ರೀಗಳು. ಹದಿನಾಲ್ಕನೆಯ ಪೀಠಾಧಿಪತಿಗಳು. ಈ ಮಠದ ಹದಿನೇಳನೆಯ ಪೀಠಾಧಿಪತಿಗಳಾದ ಶ್ರೀ ಶ್ರೀರಾಮಭದ್ರಭಾರತೀ ಶ್ರೀಗಳ ಕಾಲದಲ್ಲಿ ಶ್ರೀಮಠವು ಮತ್ತಷ್ಟು ವಿಸ್ತಾರವಾಗಿಯೂ ಭದ್ರವಾಗಿಯೂ ನಿರ್ಮಾಣವಾಯಿತು. ಇಪ್ಪತ್ತನೆಯ ಪೀಠಾಧೀಶರಾದ ಶ್ರೀ ಶ್ರೀರಘುನಾಥಭಾರತೀ ಶ್ರೀಗಳು ತೀರ್ಥಹಳ್ಳಿಯಲ್ಲಿ ನೂತನವಾದ ಮಠವನ್ನು ಸ್ಥಾಪಿಸಿದರು. ಮೂವ್ವತ್ತೊಂದನೆಯ ಪೀಠಾಧಿಪತಿಗಳಾದ ಶ್ರೀ ಶ್ರೀರಾಮಚಂದ್ರಭಾರತೀ ಶ್ರೀಗಳು ಪೂರ್ವಾಶ್ರಮದಲ್ಲಿ ಇಲ್ಲಿಯ ಹೆದ್ಲಿ ಗ್ರಾಮದವರು. ಇವರ ಆಳ್ವಿಕೆಯ ಕಾಲದಲ್ಲಿ ಕೆಕ್ಕಾರಿನ ಶ್ರೀರಘೂತ್ತಮಮಠದ ಹದಿಮೂರನೆಯ ಯತೀಂದ್ರರೂ ಶ್ರೀರಾಮಚಂದ್ರಭಾರತೀ ಶ್ರೀಗಳವರ ವಿದ್ಯಾಗುರುಗಳೂ ಆದ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳು ಕೆಕ್ಕಾರಿನ ರಘೂತ್ತಮಮಠದ ಸಮಸ್ತ ಅಧಿಕಾರವನ್ನೂ ಪ್ರಧಾನಮಠಕ್ಕೇ ಒಪ್ಪಿಸಿ ವಿಲೀನಗೊಳಿಸಿದರು. ಮೂವ್ವತ್ತಮೂರನೆಯ ಪೀಠಾಧ್ಯಕ್ಷರಾದ ಪರಮತಪೋನಿಧಿಗಳೆಂದೇ ಖ್ಯಾತರಾದ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳವರು ಈಗಿನ ಮಠದ ಒಳಪ್ರಾಕಾರದ ಶಿಲಾಮಯಭವನವನ್ನು ನಿರ್ಮಿಸಿದರು.

ಪ್ರಕೃತಿರಮಣೀಯವಾದ ಶರಾವತೀ ತೀರದಲ್ಲಿ ವಿರಾಜಮಾನವಾದ ಈ ಮಠದಲ್ಲಿ ಸೀತಾಲಕ್ಷ್ಮಣಸಹಿತನಾದ ಪ್ರಭು ಶ್ರೀರಾಮಚಂದ್ರ ಆರಾಧ್ಯನಾಗಿದ್ದಾನೆ. ಗೋವರ್ಧನಗಿರಿಧಾರಿಯಾದ ಅಮೃತಶಿಲೆಯ ಸುಂದರ ಶ್ರೀಕೃಷ್ಣ, ಶ್ರೀಮದಾಚಾರ್ಯಶಂಕರಭಗವತ್ಪಾದರ ಮನಮೋಹಕ ಮೂರ್ತಿಗಳು ಶ್ರೀಮದಾಂಜನೇಯ, ಚಂದ್ರಕಾಂತಶಿಲೆಯಿಂದ ನಿರ್ಮಿತವಾದ ವಿದ್ಯಾಧಿದೇವತೆಯಾದ ಸರಸ್ವತಿಯ ವಿಗ್ರಹಗಳು ಹಾಗೂ ಪ್ರಾಕ್ತನ ಗುರುಪರಂಪರೆಯ ಸಮಾಧಿಗಳು ಇಲ್ಲಿ ಆರಾಧನೆಗೊಳ್ಳುತ್ತಿವೆ. ಶ್ರೀಮಠದ ಪ್ರಾಕಾರದ ಬಲಭಾಗದಲ್ಲಿ ಹಿಂದಿನ ಪೀಠಾಧಿಪತಿಗಳು ವಾಸಿಸುತ್ತಿದ್ದ ವಿದ್ಯಾಮಂಟಪವೂ ಇದೆ. ಈ ಮಠದ ನೂತನ ನಿರ್ಮಿತಿಯು ನಡೆದಿದ್ದು ಮೂವ್ವತ್ತೈದನೆಯ ಪೀಠಾಧೀಶರಾದ ಶ್ರೀಗುರುಪರಂಪರೆಯ ದ್ವಿತೀಯ ಶ್ರೀ ಶ್ರೀಮದ್ರಾಘವೇಂದ್ರಭಾರತೀ ಶ್ರೀಗಳವರ ದಿವ್ಯಸಂಕಲ್ಪದ ಫಲವಾಗಿ ಸಾಗರಪ್ರಾಂತದ ಶಿಷ್ಯರ ವಿಶೇಷ ದೇಣಿಗೆಯಿಂದ ೧೯೭೧ರಲ್ಲಿ ಸುಮಾರು ಐದು ಲಕ್ಷರೂಪಾಯಿಗಳ ವೆಚ್ಚದಲ್ಲಿ ಈ ನಿರ್ಮಾಣವು ರೂಪುಗೊಂಡಿದೆ. ಯೋಗೀಶ್ವರ ಶ್ರೀಕೃಷ್ಣ ಹಾಗೂ ಶ್ರೀಮದಾಚಾರ್ಯಶಂಕರಭಗವತ್ಪಾದರ ವಿಗ್ರಹಪ್ರತಿಷ್ಠೆಗಳು ೧೯೭೫ರಲ್ಲಿ ಸಂಪನ್ನಗೊಂಡಿವೆ. ೧೯೯೨ರಲ್ಲಿ ಪೂಜ್ಯಶ್ರೀಗಳ ಸಂಕಲ್ಪದ ಫಲವಾಗಿ ಅತಿರುದ್ರಮಹಾನುಷ್ಠಾನ, ರಾಮಾಯಣ ಭಾಗವತಾದಿ ವಿವಿಧ ಪವಿತ್ರಗ್ರಂಥಗಳ ಪಾರಾಯಣ ಮೊದಲಾದ ಹಲವು ಧಾರ್ಮಿಕವಿಧಿಗಳೊಂದಿಗೆ ಶ್ರೀಮಠದ ನೂತನ ಭವನದ ಪ್ರವೇಶೋತ್ಸವವೂ ಪೂಜ್ಯಶ್ರೀಗಳ ದಿವ್ಯೋಪಸ್ಥಿತಿಯಲ್ಲಿ ನೆರವೇರಿದೆ. ಪರಂಪರೆಯ ಹೆಚ್ಚಿನ ಶ್ರೀಗಳು ಈ ಪ್ರಧಾನಮಠದಲ್ಲಿ ಬಹುಕಾಲವುಳಿದು ಚಾತುರ್ಮಾಸ್ಯವ್ರತಗಳನ್ನು ಪೂರೈಸಿದ್ದಾರೆ. ಮೂವ್ವತ್ತಾರನೆಯ ಪೀಠಾಧ್ಯಕ್ಷರಾದ ಶ್ರೀಗುರುಪರಂಪರೆಯ ಒಂಬತ್ತನೆಯ  ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳು ಆರಾಧ್ಯದೇವತಾನಿವಹಗಳೊಂದಿಗೆ ಪ್ರಥಮಬಾರಿಗೆ ಆಗಮಿಸಿದ್ದೂ ಈ ಮಠಕ್ಕೆ. ಅಷ್ಟೇ ಅಲ್ಲ ಪೂಜ್ಯಶ್ರೀಗಳ ಸಮಾಜ ಸಂಘಟನೆಯ ಕುರಿತಾದ ಪ್ರಾಥಮಿಕ ಕಾರ್ಯಗಳೆಲ್ಲವೂ ಯೋಜಿತವಾದದ್ದೂ ಈಮಠದಲ್ಲಿ. ಶ್ರೀರಾಮಾಯಣಮಹಾಸತ್ರ, ವಿಶ್ವಗೋಸಮ್ಮೇಳನ ಮೊದಲಾದ ಹಲವಾರು ಜಾಗತಿಕಸ್ತರದ ಕಾರ್ಯಕ್ರಮಗಳು ಆಯೋಜಿತವಾಗಿ ಸಮಸ್ತ ವಿಶ್ವವನ್ನೇ ಈಮಠದತ್ತ ಆಕರ್ಷಿಸಿದ್ದು ಈಗ ಇತಿಹಾಸದ ಮಾತು. ಲಭ್ಯವಿರುವ ಸಮಸ್ತ ಭಾರತೀಯ ಗೋತಳಿಯ ಗೋವುಗಳಿಂದ ತುಂಬಿದ ಅಪೂರ್ವ ಗೋಲೋಕ, ಗವ್ಯೋತ್ಪನ್ನಕೇಂದ್ರ, ನಿರ್ಮಾಣದ ಹಂತದಲ್ಲಿರುವ ವಿಶಿಷ್ಟಶೈಲಿಯ ಶ್ರೀ ಚಂದ್ರಮೌಳೀಶ್ವರ ದೇವಾಲಯ, ಭವ್ಯ ಭಾರತದ ನಿರ್ಮಾಣದ ಕನಸನ್ನು ಹೊತ್ತ ಶ್ರೀಭಾರತೀ ಗುರುಕುಲಮ್ ಮೊದಲಾದ ಹಲವು ದರ್ಶನೀಯ ಸ್ಥಳಗಳು ಶ್ರೀಮಠದ ಆವರಣದಲ್ಲಿ ಸ್ಥಾಪಿತವಾಗಿವೆ.

|| ಹರೇ ರಾಮ ||

ವಿಳಾಸ :
ಶ್ರೀರಾಮಚಂದ್ರಾಪುರಮಠ,
ಅಂಚೆ ಹನಿಯ, ಹೊಸನಗರ ತಾಲೂಕು,
ಶಿವಮೊಗ್ಗ ಜಿಲ್ಲೆ
ದೂರವಾಣಿ : 08185 – 256050
E-mail : pradhanamatha@gmail.com

ಪ್ರಧಾನಮಠದಲ್ಲಿ ಯಾತ್ರಾರ್ಥಿಗಳ ವಾಸ್ತವ್ಯಕ್ಕಾಗಿ ಕಲ್ಪಿಸಿರುವ ವ್ಯವಸ್ಥೆ..

Facebook Comments Box