ನಮೋ ಬ್ರಹ್ಮಾದಿಭ್ಯೋ
ಬ್ರಹ್ಮ ವಿದ್ಯಾ ಸಂಪ್ರದಾಯ ಕರ್ತೃಭ್ಯೋ
ವಂಶ ಋಷಭ್ಯೋ
ನಮೋ ಗುರುಭ್ಯ:||

ನಮ್ಮ ಗುರುಕುಲದ ಅರಿವಿನ ಕುಡಿಗಳಿಗೆ ಶುಭಾಶೀರ್ವಾದಗಳು ಹಾಗೂ ಶುಭಾಶಂಸೆಗಳು. ಬರುವ ಒಂದು ವಿದ್ಯಾವರ್ಷ ನಿಮ್ಮೆಲ್ಲರಿಗೂ ಅಗಣಿತ ಪ್ರಮಾಣದಲ್ಲಿ ಜ್ಞಾನ ಸಂಪತ್ತು ಹಾಗೂ ವಿದ್ಯಾ ಸಂಪತ್ತನ್ನು ತಂದುಕೊಡಲಿ. ನಿಮ್ಮೆಲ್ಲರ ಬದುಕು ಈ ಒಂದು ವರ್ಷದಲ್ಲಿ ಸಮೃದ್ಧವಾಗಿ ತುಂಬಿಕೊಂಡಿರಲಿ. ಮನೆ ಶ್ರೀಮಂತವಾಗುವುದಕ್ಕಿಂತ ಮೊದಲು ಮನಸ್ಸು ಅಂದರೆ ಅಂತರಂಗ ಶ್ರೀಮಂತವಾಗಲಿ ಎಂದು ಆಶಿಸಿ ಆಶೀರ್ವದಿಸುತ್ತಾ, ಈ ಪ್ರವಚನ ಸರಣಿಯ ಮೊದಲ ಪ್ರವಚನಕ್ಕೆ ಉಪಕ್ರಮಿಸುತ್ತಿದ್ದೇವೆ.

ಪ್ರವಚನ ಒಂದು ದಿನದ್ದೋ ಏಳು ದಿನದ್ದೋ?! ಈ ಪ್ರವಚನದ ಥೀಮ್ (ವಿಷಯ) ಏನು ಎಂಬ ಕುತೂಹಲ ಇದೆಯೇ? ಇಲ್ಲದಿದ್ದರೆ ಒಂದು ಕುತೂಹಲ ಹುಟ್ಟಿಸಿಕೊಳ್ಳಿ. ಈ ಪ್ರವಚನದ ಥೀಮ್ ಏನು ಎಂದರೆ, ಮುಂದಾಲೋಚನೆ; ಸಂಸ್ಕೃತದಲ್ಲಿ ಹೇಳುವುದಾದರೆ, ದೂರದೃಷ್ಟಿ.
ಮುಂದಾಲೋಚನೆ ಅಥವಾ ದೂರದೃಷ್ಟಿ ಬೇಕೋ ಬೇಡವೋ?

ದೂರದೃಷ್ಟಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಒಂದು ಉದಾಹರಣೆ: ಈಗ ನೀವು ನಡೆದುಕೊಂಡು ಹೋಗುತ್ತಿದ್ದೀರಿ ಎಂದುಕೊಳ್ಳಿ. ನಿಮ್ಮೆಲ್ಲರಿಗೂ ಹಾವು ಎಂದರೆ ಪ್ರೀತಿಯಾ? ಇಲ್ಲಾ ಭೀತಿಯೋ?
ಹೆಚ್ಚಿನವರೆಲ್ಲರಿಗೂ ಹಾವನ್ನು ಕಂಡರೆ ಭೀತಿ ನಿಜ. ಅದಕ್ಕೆ ನಮ್ಮಷ್ಟು ಗಟ್ಟಿಯ ಎಲುಬಿಲ್ಲ ಆದರೂ ನಮ್ಮನ್ನು ಭಯಪಡಿಸುವಂತಹ ಸತ್ವವನ್ನು ಇಟ್ಟುಕೊಂಡಿದೆ. ಹಾವು ಎಂದರೆ ಎಲ್ಲರಿಗೂ ಭಯ. ಸ್ವಲ್ಪ ದೂರದಲ್ಲಿ ಹಾವು ಬರುತ್ತಿದೆ ಎಂದುಕೊಳ್ಳಿ. ನಿಮಗೆ ಅದು ಕಂಡಿತಾದರೆ, ಕೂಡಲೇ ರಕ್ಷಣೆಯ ದಾರಿ ಹುಡುಕುತ್ತೀರಿ. ಇದು ಗಂಭೀರ ಭಾಷೆ. ಅಂದರೆ, ಕಾಲಿಗೆ ಬುದ್ಧಿ ಹೇಳುತ್ತೀರಿ, ಪರಾರಿಯಾಗುತ್ತೀರಿ ಎನ್ನಬಹುದು. ಏನೇ ಆದರೂ ಅಷ್ಟು ದೂರದಲ್ಲಿ ಹಾವನ್ನು ಕಂಡರೆ, ಅದಕ್ಕೆ ಬೇಕಾದ ತಯಾರಿ, ಸಿದ್ಧತೆ, ಹೇಗೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳುತ್ತೀರಿ ಎಂಬುದು ನಿಮಗೆ ಸಾಧ್ಯವಿದೆ.

ದೂರದೃಷ್ಟಿ ಇಲ್ಲದಿದ್ದರೆ ಏನಾಗುತ್ತದೆ ಗೊತ್ತಾ? ನಿಮ್ಮ ಕಾಲ ಕೆಳಗೆ ಅಥವಾ ಕಾಲಿನ ಮುಂದೆ ಬಂದಾಗ ತಿಳಿಯುತ್ತದೆ.
ಹಿತವಾದ ಸ್ಪರ್ಶ ಇರಲಿ ಪಾಪ ಎಂದು ಕಾಲಿಡುತ್ತೀರಾ? ಅಥವಾ ಅಷ್ಟು ದೂರದಲ್ಲಿದೆ ಎಂದು ಜೀವವನ್ನು ಉಳಿಸಿಕೊಳ್ಳುವ ದಾರಿಯನ್ನು ಹುಡುಕುತ್ತೀರಾ?

ಹೌದು, ದೂರದೃಷ್ಟಿ ಬೇಕು. ಅದೇ ಪ್ರವಚನದ ವಸ್ತು. ದೂರದೃಷ್ಟಿ ಎಲ್ಲಿಯವರೆಗೆ, ಹೇಗೆ ಎಂಬುದನ್ನು ಈ ಪ್ರವಚನ ಬೆಳೆದಂತೆ ನೀವೇ ತಿಳಿದುಕೊಳ್ಳುತ್ತೀರಿ.
ನೀವೆಲ್ಲಾ ಗುರುಕುಲದ ವಿದ್ಯಾರ್ಥಿಗಳು. ವಿದ್ಯಾಭ್ಯಾಸಕ್ಕೆಂದು ಬಂದವರು. ವಿದ್ಯಾಭ್ಯಾಸ ಎಂದರೆ ಏನು ಗೊತ್ತಾ? ದೂರದೃಷ್ಟಿ. ನೀವು ಇಂದು ಮಾಡುತ್ತಿರುವ ವಿದ್ಯಾಭ್ಯಾಸ ಇಂದೇ ಉಪಯೋಗವಾಗುತ್ತಾ? ಆಲೋಚಿಸಿ. ಎಷ್ಟೋ ಸಂಗತಿಗಳು ಪೂರ್ತಿ ವಿದ್ಯಾಭ್ಯಾಸದ ನಂತರ ಅರ್ಥವಾಗುವಂತಹದ್ದು. ಸಮಗ್ರ ವಿದ್ಯಾಭ್ಯಾಸದ ಪರಿಕಲ್ಪನೆ ಹೇಗೆ ಎಂದರೆ, ಇಡೀ ಜೀವನಕ್ಕೆ ಪ್ರಯೋಜನವಾಗುವಂತಹದ್ದು. ಬದುಕಿರುವಷ್ಟು ಕಾಲವೂ ಉಪಯೋಗವಿದೆ. ಬದುಕಿನ ನಂತರದ ಬದುಕಿಗೂ ಕೂಡ ಉಪಯೋಗವಿದೆ. ಬದುಕಿನ ನಂತರವೂ ಬದುಕಿದೆ. ಸತ್ತ ಮೇಲೆಯೂ ಒಂದು ಬದುಕಿದೆ. ಇಂದು ಮಾಡುವ ವಿದ್ಯಾಭ್ಯಾಸಕ್ಕೆ ಅಲ್ಲಿಯೂ ಪ್ರಯೋಜನವಿದೆ. ಹಾಗಾಗಿ, ನಾವು ಮಾಡುತ್ತಿರುವ ಪ್ರವಚನ ಬೇರೇನೂ ಅಲ್ಲ, ನೀವೇನು ಮಾಡುತ್ತಿರುವಿರೋ ಅದಕ್ಕೆ ಪ್ರತಿಸ್ಪಂದನೆ ಇರುವಂತಹದ್ದು. ಅದಕ್ಕೇ ಸಂಬಂಧಿಸಿರುವಂತಹದ್ದು.
‘ದೂರದೃಷ್ಟಿ’.

ಇಂದಿನ ಪ್ರವಚನಕ್ಕೂ ಅದೇ ಥೀಮ್. ಏಳು ದಿನಗಳ ಪ್ರವಚನದ ಸರಣಿಯ ಸೂತ್ರ/ ಥೀಮ್ ಕೂಡ ಅದೇ ಆಗಿದೆ. ಜೀವಯಾನ ಎಂಬುದೂ ಅದರಲ್ಲೇ ಅಂತರ್ಗತವಾಗಿ ಬರುವಂತಹದ್ದು. ಮುಂದೆ ನೀವದನ್ನು ತಿಳಿಯಲಿದ್ದೀರಿ.

ಒಬ್ಬ ಬಾಲಕನ ಕಥೆಯಿದು. ನಿಮ್ಮದೇ ವಯಸ್ಸಿನ ಬಾಲಕನ ಕಥೆ ಹೇಳೋಣ.ಅವನು ಹೇಗೆ ಆಲೋಚನೆ ಮಾಡಿದ್ದ ಎಂಬುದನ್ನು ನೋಡಿ. ನೀವೂ ಹಾಗೆಯೇ ಆಲೋಚಿಸಲು ಸಾಧ್ಯವಾಗುತ್ತದೆ. ಇದು ಪುರಾಣ ಕಥೆಯೂ ಅಲ್ಲ, ಕಟ್ಟು ಕಥೆಯೂ ಅಲ್ಲ, ಇದು ವೇದದಲ್ಲಿ ಕಂಡ ಕಥೆ. ಕಠೋಪನಿಷತ್ ಕೇಳಿದ್ದೀರಾ?
ಅದರಲ್ಲಿ ಬರುವ ನಚಿಕೇತನ ಕಥೆಯಿದು. ಬಹಳಷ್ಟು ಜನ ಈ ಕಥೆಯನ್ನು ಕೇಳಿರುತ್ತೀರಿ. ಈ ಕಥೆಯನ್ನು ನಾವು ಆ ದೃಷ್ಟಿಯಿಂದ ನೋಡೋಣ. ನಮ್ಮ ಇಡೀ ಪ್ರವಚನಕ್ಕೆ ಈ ಕಥೆಯೇ ಪೀಠಿಕೆ ಆಗುವಂತಿದೆ. ಹಾಗಾಗಿ ಇದೇ ಕಥೆಯನ್ನು ನೋಡೋಣ.

ನಚಿಕೇತ ಎಂಬ ಸಣ್ಣ ವಯಸ್ಸಿನ ಒಬ್ಬ ಬಾಲಕ. ಆತನಿಗೆ ಎಷ್ಟು ವಿವೇಕ, ಎಷ್ಟು ಧೈರ್ಯ!. ಯಮ ಧೈರ್ಯ ಎಂದು ಹೇಳುತ್ತೇವಲ್ಲವ ಅದು ಇವನದ್ದೆ. ಹಾಗಾಗಿ ಇದನ್ನು ಅವಲೋಕನ ಮಾಡಬೇಕಾಗಿರುವಂತಹದ್ದು. ನೋಡಿ, ನಿಮಗೆ ಇದರಲ್ಲಿ ಏನು ಸಂಪತ್ತು ಸಿಗುತ್ತದೆ ಎಂಬುದನ್ನು ಹುಡುಕಿ.

ಅದರ ಪ್ರಾರಂಭ ಹೀಗೆ:

ಉಶನ್ ಹ ವೈ ವಾಜಶ್ರವಸಃ ಸರ್ವವೇದಸಂ ದದೌ|

ವಾಜಶ್ರವಸ ಯಾರು? ಆತ ನಚಿಕೇತನ ತಂದೆ. ವಾಜಶ್ರವಸ ಅಧ್ಯಯನ ಸಂಪನ್ನ. ಯಜ್ಞಶೀಲ ಮಾಡುವ ವ್ಯಕ್ತಿತ್ವವೂ ಹೌದು. ಒಮ್ಮೆ ಆತ ಒಂದು ಯಜ್ಞ ಮಾಡಿದ್ದನಂತೆ. ಯಜ್ಞ ಎಂದರೇನು? ದಕ್ಷಿಣೆಯಿಲ್ಲದೆ ಪೂರ್ತಿಯಾಗುವುದಲ್ಲ ಅದು. ಯಜ್ಞಪುರುಷನ ಪತ್ನಿ ದಕ್ಷಿಣೆ ಅಂತೆ. ಯಜ್ಞಕ್ಕೆ ಒಂದು ಆಕಾರ ಕೊಟ್ಟು, ಪುರುಷ ಎಂದು ಪರಿಭಾವಿಸುವುದಾದರೆ, ಆತನ ಪತ್ನಿ ದಕ್ಷಿಣೆ. ಅವರಿಬ್ಬರೂ ಜೊತೆಯಲ್ಲಿ ಇರುತ್ತಾರೆ. ಯಜ್ಞ ಪೂರ್ತಿಯಾಗುವುದಾದರೆ ಧಾರಾಳ ದಕ್ಷಿಣೆ ಕೊಡಬೇಕು. ಆದರೆ ಈ ಯಜ್ಞ ಎಂತಹದ್ದು ಎಂದರೆ, ಇಲ್ಲಿ ಸರ್ವಸ್ವವೂ ದಾನವಾಗಿ, ದಕ್ಷಿಣೆಯಾಗಿ ಕೊಡಬೇಕು. ಯಾವುದನ್ನೂ ಇಟ್ಟುಕೊಳ್ಳುವ ಹಾಗಿಲ್ಲ.
ಯಜ್ಞ / ಹೋಮ ಎಂದರೇನು?
ಅಲ್ಲಿ ಏನು ನಡೆಯುತ್ತೆ?
ಸಮರ್ಪಣೆ ನಡೆಯುವಂತಹದ್ದು. ಜೀವ ಸಮರ್ಪಣೆ ದೇವರಿಗೆ, ಅಂದರೆ ದೇವರುಗಳಿಗೆ ಜೀವ (ನಾವುನೀವೆಲ್ಲಾ) ನಮ್ಮಲ್ಲಿರುವ ದ್ರವ್ಯವನ್ನು ಸಮರ್ಪಣೆ ಮಾಡುವಂತಹದ್ದು. ನಮ್ಮಲ್ಲಿರುವ ದ್ರವ್ಯ ಅಂದರೆ ಯಾವುದದು? ದೇವರು ಕೊಟ್ಟಿದ್ದೇ. ದೇವತೆಗಳು ಕೊಟ್ಟಂತಹ ದ್ರವ್ಯವನ್ನು ಸಮರ್ಪಣೆ ಮಾಡುವಂತಹದ್ದು.

‘ತೇರ ತುಜಕೋ ಅರ್ಪಣ್ ‘ ಮೂರು ಶಬ್ಧ.
“ನೀನಿತ್ತಿಹ ಬಾಳ್ ನಿನ್ನರ್ಚನೆಗೆ “
ನೀ ಕೊಟ್ಟಿದ್ದು ನಿನಗೆ ಎಂದು.
ಯಾವುದಾದರು ಹಾಡು ನೆನಪಾಗುತ್ತಾ ?
‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬುದು, ಯಜ್ಞ ಎಂದರೆ ಅಂತಹದ್ದು. ದೇವತೆಗಳು ನಮಗೆ ಕೊಟ್ಟ ದ್ರವ್ಯವನ್ನೇ ಪುನಃ ನಾವು ಅವರಿಗೆ ಸಮರ್ಪಿಸುವಂತಹದ್ದು. ಅಗ್ನಿ ಅದಕ್ಕೆ ಮಾಧ್ಯಮ. ಅಗ್ನಿಯೇ ಅದಕ್ಕೆ ಮಾಧ್ಯಮವಾಗಬೇಕು ಎಂಬುದೇನು ಇಲ್ಲ. ಯಜ್ಞಕ್ಕೆ ಬೇರೆ ಬೇರೆ ಮುಖಗಳಿವೆ. ಆದರೆ ಪ್ರಧಾನವಾಗಿ ನಾವು ಯಜ್ಞ ಎಂದು ಕರೆಯುವುದಕ್ಕೆ ಅಗ್ನಿ ಮಾಧ್ಯಮ. ಅಲ್ಲಿ ಅಗ್ನಿಯನ್ನು ದ್ವಾರವಾಗಿ ಇಟ್ಟುಕೊಂಡು, ತನ್ಮೂಲಕ ದೇವರಿಗೆ ದ್ರವ್ಯವನ್ನು ಸಮರ್ಪಣೆ ಮಾಡುತ್ತೇವೆ.
ಯಾಗ ಎಂದರೆ ತ್ಯಾಗ. ಸುಲಭವಿದೆ. ಹಿಂದೊಂದು ಅಕ್ಷರ ಸೇರಿಸಿ. ತ್ಯಾಗವಿಲ್ಲದೆ ಯಾಗವಿಲ್ಲ. ತ್ಯಾಗವಿದ್ದರೆ ಮಾತ್ರ ಯಾಗ; ತ್ಯಾಗವೇ ಯಾಗ.

ದೇವತೋದ್ದೇಶ್ಯಕ ದ್ರವ್ಯ ತ್ಯಾಗೋ ಯಾಗಃ|

ವಿವರಣೆ ಹೀಗಿದೆ:
ದೇವತೆಗಳನ್ನು ಉದ್ದೇಶವಾಗಿಟ್ಟುಕೊಂಡು ದ್ರವ್ಯವನ್ನು ತ್ಯಜಿಸುವಂತಹದ್ದು ಅದು ಯಾಗ.

ತ್ಯಾಗ ಎಂದರೆ ನಾವು ಅದನ್ನು ಬಿಟ್ಟುಕೊಡಬೇಕು, ಕೈ ಎತ್ತಿ, ಕೈ ಬಿಚ್ಚಿ ಕೊಡಬೇಕು. ಎಷ್ಟಿದೆಯೋ ಅಷ್ಟನ್ನು ಸಮರ್ಪಣೆ ಎನ್ನುವ ಹಾಗೆ. ಯಜ ಧಾತುವಿಗೆ ದೇವಪೂಜ, ಸಂಗತಿಕರಣ ಮತ್ತು ದಾನ ಎಂಬ ಮೂರು ಅರ್ಥವಿದೆ. ದೇವಪೂಜೆ ಯಾವರೀತಿ ಎಂದರೆ, ದಾನದ ರೂಪದಲ್ಲಿ. ಅದು ಮನುಷ್ಯರಿಗಲ್ಲ. ಭಗವಂತನಿಗೆ ಸಮರ್ಪಣೆ ಮಾಡುವುದು. ಮನುಷ್ಯರಿಗೆ ಕೊಡುವುದು ದಾನ, ದೇವರಿಗೆ ಕೊಡುವುದು ಸಮರ್ಪಣೆ.

ಉತ್ತಮೋತ್ತಮನಿಗೆ ಉತ್ತಮವಾದುದನ್ನೇ ಕೊಡಬೇಕು ಅಲ್ಲವಾ? ನಿಮ್ಮ ಮನೆಗೆ ಯಾರೋ ದೊಡ್ಡವರು ಬಂದರೆ ಹಳಸಿ ಹೋಗಿದ್ದನ್ನೋ, ಕೊಳೆತು ಹೋಗಿದ್ದನ್ನೋ ಕೊಡುತ್ತೀರಾ? ಒಳ್ಳೆಯವರು ಬಂದಾಗ ಒಳ್ಳೆಯದನ್ನೇ ಕೊಡುತ್ತೀರಿ. ಭಗವಂತ ಉತ್ತಮೋತ್ತಮನು. ಹಾಗಾಗಿ ದೇವರು ನಮಗೆ ಕೊಟ್ಟಿದ್ದರಲ್ಲಿ ಉತ್ತಮವಾದುದನ್ನೇ ನಾವು ಕೊಟ್ಟಾಗ ಆ ದಾನಕ್ಕೆ ಒಳ್ಳೆಯ ಫಲ ಮತ್ತು ಅರ್ಥ ಬರುತ್ತದೆ.

ತ್ಯಾಗ ಎಂದರೆ ಏನು? ನಮಗೆ ಬೇಡವಾದುದನ್ನು ಕೊಟ್ಟರೆ ತ್ಯಾಗ ಎಂಬುದಲ್ಲ. ಉದಾಹರಣೆಗೆ, ಬಾಳೆ ಹಣ್ಣನ್ನು ಸುಲಿದು, ಹಣ್ಣನ್ನು ತಿಂದು, ಸಿಪ್ಪೆಯನ್ನು ದಾನ ಮಾಡುವುದು ಎಂದು ಆಗುತ್ತದಾ? ಇಲ್ಲ, ನಾವು ಉತ್ತಮವಾದುದನ್ನೇ ದಾನ ಮಾಡಬೇಕು ಅಲ್ಲವಾ? ಉತ್ತಮವಾದುದನ್ನು ನಾವು ತಿಂದು ಬೇಡವಾದುದನ್ನು ಎತ್ತಿ ಕೊಡುವುದು ಸರಿ ಅಲ್ಲ ಎಂಬುದು ನಮ್ಮ ಮನಸ್ಸಲ್ಲಿ ಇರಬೇಕು.

ಅಂಗಡಿಗಳಲ್ಲಿ ಹೋಮ, ಪೂಜೆಗಾಗಿಯೇ ಕೆಲವೊಂದಿಷ್ಟು ಸಾಮಗ್ರಿಗಳು ಇರುತ್ತವೆ. ಒಂದು ಚಿಕ್ಕ ತೆಂಗಿನಕಾಯಿ, ಇಬ್ಬರಿಗೆ ಪದಾರ್ಥ ಮಾಡಲೂ ಸಾಧ್ಯವಾಗುವುದಿಲ್ಲ ಅಷ್ಟು ಚಿಕ್ಕದು, ಅದನ್ನು ಯಜ್ಞಕ್ಕೆ ಎಂದು ಬಳಸುವುದು ಸರಿಯಾ? ನಿಮಗೆ ಅದನ್ನು ಕೊಟ್ಟರೆ ಒಪ್ಪುತ್ತೀರಾ ನೀವು? ಒಳ್ಳೆಯದನ್ನು ಕೊಡಬೇಕು ಎಂದು ಬಯಸುತ್ತೀರಿ ಅಲ್ಲವಾ? ಹಾಗಾದರೆ, ದೇವರಿಗೆ ಎಂತಹದ್ದನ್ನು ಕೊಡಬೇಕು ಅದು ನಿಮ್ಮ ಮನಸ್ಸಲ್ಲಿ ಇರಬೇಕು. ನಚಿಕೇತನ ಮನಸ್ಸಲ್ಲೂ ಅಷ್ಟು ಚಿಕ್ಕ ವಯಸ್ಸಲ್ಲೇ ಆ ವಿವೇಕ ಮೂಡಿತ್ತು. ಯಜ್ಞ ಎಂದರೇನು? ದಾನ ಎಂದರೇನು? ಎಂತಹದ್ದನ್ನು ದಾನ ಮಾಡಬೇಕು? ಎಂತಹ ಮನಸ್ಸಿರಬೇಕು? ತುಂಬಾ ವಿವೇಕವಿತ್ತು ಆತನಿಗೆ ಆ ವಯಸ್ಸಿನಲ್ಲಿ.

“ತಸ್ಯಃ ನಚಿಕೇತ ನಾಮ ಪುತ್ರ ಆಸಾ|”

ತಸ್ಯ ಎಂದರೆ, ವಾಜಶ್ರವಸ. ಆತನಿಗೆ ನಚಿಕೇತ ನಾಮ ಪುತ್ರ ಆಸಾ.

“ತಾಂ ಹ ಕುಮಾರಂ ಸಂತ”

ಚಿಕ್ಕವನು ಪಾಪ ಆತ. ಪುಟ್ಟ ಬಾಲಕ. ಆತನಿಗೆ 71 ವರ್ಷವೂ ಅಲ್ಲ 21 ಅಲ್ಲ. ತುಂಬಾ ಚಿಕ್ಕವನು.

“ದಕ್ಷಿಣಾಸು ನಿಯಮಾನಾಸು ಶ್ರದ್ಧಾ-ವಿವೇಶ”

ಯಜ್ಞ ನಡೆಯುತ್ತಿದೆ. ತಂದಂತಹ ದಕ್ಷಿಣೆ ನೀಡುತ್ತಿದ್ದಾನೆ. ಅದನ್ನು ನೋಡುವಾಗ ನಚಿಕೇತನಲ್ಲಿ ಒಂದು ಶ್ರದ್ಧೆ ಮೂಡಿತು. ಪ್ರಶ್ನೆ ಮೂಡಿತು ಅಲ್ಲ. ಶ್ರದ್ಧೆ ಮೂಡಿತು.
ಶ್ರದ್ಧೆ ಎಂದರೇನು? ಶ್ರದ್ಧೆ ಎನ್ನುವ ಭಾವ ಯಾವುದು? ನಿಮಗೆಲ್ಲ ಶ್ರದ್ಧೆ ಇದೆಯೋ ಇಲ್ಲವೋ? ಶ್ರದ್ಧೆ ಇರುವುದಕ್ಕೆ ನೀವು ಹೀಗೆ ಕುಳಿತಿದ್ದೀರಿ. ಶ್ರದ್ಧೆ ಇಲ್ಲದಿದ್ದರೆ, ನೀವೆಲ್ಲಾ ಹೀಗೆ ಕೂತು ಪ್ರವಚನ ಕೇಳುತ್ತಿರಲಿಲ್ಲ.
ಶ್ರದ್ಧೆ ಇದ್ದರೆ ಸುಖಾಸನದಲ್ಲಿದ್ದು, ಬೆನ್ನು, ಕುತ್ತಿಗೆ ನೇರವಿರುತ್ತದೆ. ದೃಷ್ಟಿ ಒಂದೇ ಕಡೆ ಇರುತ್ತದೆ.
ಶ್ರದ್ಧೆ ಇರಬೇಕಾದರೆ, ನಿಮ್ಮ ಹೃದಯ ಸಂಪೂರ್ಣವಾಗಿ ಈ ಕಡೆಗೇ ಇರಬೇಕು. ಅದು ಶ್ರದ್ಧೆ.
ಉದಾಹರಣೆ: ಗುರುಗಳಿಗೆ ತೆಂಗಿನಕಾಯಿ ಇಡಬೇಕು. ಶ್ರದ್ಧೆ ಇದ್ದರೆ ಆತ ಏನು ಮಾಡುತ್ತಾನೆ? ತೆಂಗಿನಕಾಯಿ ಸುಲಿದು, ಶುಚಿಗೊಳಿಸಿ, ನೋಡಲು ದರ್ಶನೀಯವಾಗುವ ಹಾಗೆ ಮಾಡಿ, ಒಳ್ಳೆಯ ಹರಿವಾಣದಲ್ಲಿಟ್ಟು, ಜೊತೆಗೆ ಬೇಕಾದ ಫಲ ಪುಷ್ಪವಿಟ್ಟು, ಸಾಷ್ಟಾಂಗ ಪ್ರಣಾಮ ಮಾಡುತ್ತಾನೆ. ಶ್ರದ್ಧೆ ಇಲ್ಲದಿದ್ದರೆ, ಕಾಯಿಯನ್ನು ತಂದು ಎಸೆಯುತ್ತಾನೆ. ಅದು ಶ್ರದ್ಧೆಯಾ?

ಒಂದು ಕೆಲಸವನ್ನು ಶ್ರದ್ಧೆಯಿಂದ ಮಾಡುವುದು ಅಂದರೆ ಇಡೀ ಅಂತರಂಗವನ್ನು ಕೊಟ್ಟು ಮಾಡುವುದು. ನಾವು ಏನನ್ನು ಮಾಡುತ್ತಿರುತ್ತೇವೆಯೋ ಆ ವಿಷಯದ ಕುರಿತು ಸಂಪೂರ್ಣ ಗೌರವ ಇಟ್ಟುಕೊಂಡು ಪೂರ್ಣ ಮನಸ್ಸನ್ನು ಧಾರೆಯೆರೆದರೆ ಅದು ಶ್ರದ್ಧೆ. ಶ್ರದ್ಧೆಗೆ ಪೂರ್ಣ ಮನ ಬೇಕು. ಪೂರ್ಣ ಗೌರವ ಬೇಕು. ವಿಷಯದ ಕುರಿತು ಆದರ ಬೇಕು. ಅದು ಇದ್ದಾಗ ಮಾತ್ರ ಶ್ರದ್ಧೆ ಆಗುವುದು. ಅವನಲ್ಲಿ ಸಂಪೂರ್ಣ ಶ್ರದ್ಧೆ ಮೂಡಿತು. ಯಜ್ಞ ಎಂದರೆ ಹೇಗೆ ಮಾಡಬೇಕು? ಅದೂ ಇಂತಹ ಯಜ್ಞ! ಸರ್ವಸ್ವ ದಕ್ಷಿಣಾಕವಾದ ಯಜ್ಞ; ಅದ್ಭುತವಾದ ಯಜ್ಞ; ಆ ಶ್ರದ್ಧೆ ಹುಟ್ಟಿದ ಫಲವೇನು ಗೊತ್ತಾ? ಏನಪ್ಪಾ ಇದು ಎಂದು ಅನಿಸಿತು ಅವನಿಗೆ ಒಮ್ಮೆ.

ಪೀತೋದಕಾಃ ಜಗ್ದತೃಣಾ: ದುಗ್ಧದೋಹಾ: ನಿರಿಂದ್ರಿಯಾಃ ||

ಗೋವುಗಳ ದಾನವನ್ನ ತಂದೆ ಮಾಡುತ್ತಿದ್ದ ಆ ಸಂದರ್ಭದಲ್ಲಿ. ಗೋದಾನ ತುಂಬಾ ಪುಣ್ಯವಂತೆ. ಗೋದಾನ ಮಾಡಿದವರಿಗೆ ವೈತರಣಿ ಇಲ್ಲ. ವೈತರಣಿ ಕೇಳಿದ್ದೀರಾ? ಭಯಂಕರವಾದ ನದಿಯದು. ಸತ್ತವರೆಲ್ಲ ಆ ನದಿಯನ್ನು ದಾಟಿಯೇ ಹೋಗಬೇಕಂತೆ. ಯಮಮಾರ್ಗ ಅಂತಹದ್ದು. ಹಾಗಾಗಿ ಅದನ್ನು ಎದುರಿಸಲೇಬೇಕಾಗುತ್ತದೆ. ಅಲ್ಲಿ ರಕ್ತ, ಮಾಂಸ, ಕೀವು ಇಂತಹದ್ದೇ ಹರಿಯುವಂತಹ, ಅತಿ ಭಯಂಕರವಾದ, ಕಲ್ಪನೆಯೇ ಇಲ್ಲದಂತಹ, ರೋಮಗಳೇ ನಿಮಿರಬೇಕು ಹಾಗೆ ಮಾಡುವಂತಹ ನದಿಯಿದು. ಆ ನದಿ ದಾಟುವ ಪರಿಸ್ಥಿತಿ ಎಲ್ಲರಿಗೂ ಬಂದೇ ಬರುತ್ತದಂತೆ. ಅತ್ಯಂತ ದೊಡ್ಡ ಪುಣ್ಯಾತ್ಮರ ವಿಷಯ ಬೇರೆ. ಆ ಸಮಯದಲ್ಲಿ ಯಮದೂತರು ಬಂದು ಕೇಳುತ್ತಾರಂತೆ, ನಿಮ್ಮಲ್ಲಿ ಯಾರು ಗೋದಾನ ಮಾಡಿದ್ದೀರಿ ಎಂದು. ಗೋದಾನ ಮಾಡಿದವರನ್ನು ವೈತರಣಿ ದಾಟಿಸಲು ನಾವೆ ಬರುತ್ತದಂತೆ. ಯಾರು ಗೋದಾನ ಮಾಡಿದ್ದೀರಿ ನಾವೆಯನ್ನು ಏರಿ ಎಂದು ಕೇಳುತ್ತಾರಂತೆ. ಮಾಡದವರನ್ನು ನದಿಯಲ್ಲಿ ಎತ್ತಿ ಬಿಸಾಡುತ್ತಾರಂತೆ. ಅಲ್ಲಿ ಇಲ್ಲದ ಕ್ರಿಮಿ ಕೀಟ, ಜಂತುಗಳಿಲ್ಲ ಎಂದು. ಅತೀ ಭಯಂಕರ ಅಲ್ಲಿ. ಗೋದಾನ ಎಷ್ಟು ಪುಣ್ಯದ್ದು ಅಂದರೆ, ಯಾರಾದರೂ ಸಾವಿಗೆ ಹತ್ತಿರವಾಗುತ್ತಿದ್ದಾರೆ ಅಂದರೆ ನೀವು ಮಾಡಬೇಕಾಗಿರುವ ಮೊದಲ ಕೆಲಸ ಏನು ಹೇಳಿ? ಗೋದಾನ. ಅವರಿಗೆ ಇಷ್ಟದ ಪದಾರ್ಥ ಮಾಡಿ ಕೊಡುವುದಲ್ಲ. ಅದರ ಬದಲು ಅವರ ಹೆಸರಿನಲ್ಲಿ ಗೋದಾನ ಮಾಡಿದರೆ, ಅವರಿಗೆ ಬಹುದೊಡ್ಡ ಉಪಕಾರ ಮಾಡಿದಂತೆ ನೆನಪಿರಲಿ. ಹಾಗಾಗಿ ಅತ್ಯಂತ ಶ್ರೇಷ್ಠವಾದುದು ಗೋದಾನ ಎಂಬುದು. ಗೋದಾನ ಮಾಡಬೇಕು. ಅಂಥಹ ಗೋದಾನವನ್ನು ತಂದೆ ಮಾಡುತ್ತಾ ಇದ್ದಾನೆ. ಎಂಥಹ ಗೋದಾನ ಅಂದರೆ ‘ಪೀತೋದಕಾಃ’ ಅಂದರೆ ನೀರು ಕುಡಿದಿವೆ. ‘ಜಗ್ದತೃಣಃ’, ಹುಲ್ಲು ತಿಂದಿವೆ. ‘ದುಗ್ಧದೋಹಃ’, ಹಾಲು ಕರೆದಿವೆ. ಇಂಥಹ ಹಸುವನ್ನು ಕೊಡುವುದಾ? ಸಹಜ ಹಸು ಅಂದ ಮೇಲೆ ಹುಲ್ಲು ತಿನ್ನುತ್ತದೆ. ನೀರು ಕುಡಿಯುತ್ತದೆ. ಹಾಲು ಕೊಡುತ್ತದೆ. ಅಂದ ಮೇಲೆ ಒಳ್ಳೆಯ ಹಸುವನ್ನೇ ಕೊಡುತ್ತಿದ್ದಾರೆ ಎಂದು ಅಂದುಕೊಳ್ಳಬೇಡಿ. ಮುಂದಿನ ಶಬ್ಧವಿದೆ ನಿರಿಂದ್ರಿಯಾಃ. ಅಂದರೆ ಯಾವ ಇಂದ್ರಿಯವು ಕೆಲಸ ಮಾಡುತ್ತಿಲ್ಲ. ಅದರ ಕಣ್ಣು, ಕಾಲು ಸರಿಯಿಲ್ಲ. ಅದರ ಹಲ್ಲು ಸಡಿಲವಾಗಿದೆ. ಆ ಕೊನೆಯ‌ ಶಬ್ದದ ಮೇಲೆ ಮೊದಲ ಶಬ್ದದ ಅರ್ಥವಿದೆ. ಹಾಗಾಗಿ ಒಂದು ಶಬ್ದದಿಂದ ಇತರ ಶಬ್ದದ ಅರ್ಥ ಬದಲಾಗುತ್ತದೆ. ನಿರಿಂದ್ರಿಯಾಃ ಶಬ್ದ ಬಂದ ಮೇಲೆ ಉಳಿದ ಮೂರು ಪದಗಳ ಅರ್ಥ ಬದಲಾಯಿತು. ಅಂದರೆ ಪೀತೋದಕಾಃ ನೀರು ಕುಡಿಯುವಷ್ಟು ಕುಡಿದಿದೆ ಇನ್ನೂ ಕುಡಿಯುವುದಕ್ಕೆ ಜೀವನದಲ್ಲಿ ಏನು ಇಲ್ಲ. ಆ ಹಸುಗೆ ಆಯಸ್ಸು ತೀರಿದೆ ಎಂದರ್ಥ. ನೀರು ಕುಡಿಯುವಷ್ಟು ಕುಡಿದಿದೆ, ಸಾವು ಒಂದೇ ಬಾಕಿ ಇದೆ. ಜಗ್ದತೃಣಃ ಅಂದರೆ ಹುಲ್ಲು ತಿನ್ನುವಷ್ಟು ತಿಂದು ಮುಗಿದಿದೆ. ಇನ್ನು ಹುಲ್ಲು ತಿನ್ನುವುದಕ್ಕೆ ಹಲ್ಲು ಇಲ್ಲ ಎಂದರ್ಥ. ದುಗ್ಧದೋಹಃ ಅಂದರೆ ಬತ್ತಿ ಹೋಗಿದೆ. ಇನ್ನು ಹಾಲು ಕೊಡುವ ಪರಿಸ್ಥಿತಿ ಇಲ್ಲ. ಅದರ ಜೀವನದಲ್ಲಿ ಎಷ್ಟು ಹಾಲು ಕೊಡಬೇಕೊ ಅಷ್ಟು ಕೊಟ್ಟು ಮುಗಿದಿದೆ. ಹಾಗಾಗಿ ನಿರಿಂದ್ರಿಯಾಃ. ಆ ಪದ ಬರದೆ ಇದ್ದರೆ ಒಳ್ಳೆ ಅರ್ಥವನ್ನೇ ಕೊಡುತಿತ್ತು. ಭಾಷೆಯ ವೈಶಿಷ್ಟ್ಯ ಅದು. ಆ ಹಸುವಿನಲ್ಲಿ ಏನು ಇಲ್ಲ. ಅಂಥಹ ಹಸುವನ್ನು ಕೊಡುತ್ತಿದ್ದಾನೆ. ಅಂಥಹ ಪುಟ್ಟ ನಚಿಕೇತನಿಗೂ ಅದರ ಫಲವೇನು ಎಂದು ತಿಳಿದಿದೆ. ಅನಂದಾನಾಮ ತೇ ಲೋಕಾಃ ತಾನ್ ಸಗಚ್ಛತಿ ತಾ ದದತು, ಇಂಥಹ ಹಸು ಕೊಟ್ಟರೆ ಪುಣ್ಯ ಬರುವುದಿಲ್ಲ. ಅದರ ಬದಲಾಗಿ ಪಾಪ ಬರುತ್ತದೆ. ದಾನ ಮಾಡಿ ಪಾಪ ಕಟ್ಟಿಕೊಳ್ಳುವುದೆಂದರೆ ಇದು. ದಾನ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು ಇಂಥಹದನ್ನು ಮಾಡಿದರೆ ಪಾಪ ಬರುತ್ತದೆ. ದಾನ ಯೋಗ್ಯರಾದವರಿಗೆ ಕೊಡಬೇಕು ಅಯೋಗ್ಯರಿಗಲ್ಲ. ಹಸುವನ್ನು ಕಟುಕನಿಗೆ ದಾನ ಮಾಡಿದರೆ ಪುಣ್ಯ ಬರುತ್ತಾ?
ನಾಳೆ ಹಸುವನ್ನು ಕಡಿಯುವವನಿಗೆ ದಾನ ಮಾಡಿದರೆ ಪುಣ್ಯ ಬರುತ್ತಾ? ಇಲ್ಲ. ಸತ್ಪಾತ್ರರಿಗೆ ಕೊಡಬೇಕು ಯೋಗ್ಯರಿಗೆ ಕೊಡಬೇಕು. ಆ ವಸ್ತುವನ್ನು ಬಾಳಿಸುವಂತಿರುವವರಿಗೆ ಕೊಡಬೇಕು. ಹಾಗೆ ಕೊಡಬೇಕಾಗಿರುವುದನ್ನು ಕೊಡಬೇಕಾಗುತ್ತದೆ. ಇಂಥಹ ಹಸುವನ್ನು ದಾನ ಮಾಡಿದರೆ ಒಳ್ಳೆ ಲೋಕಗಳಿಗೆ ಹೋಗುವುದಿಲ್ಲ. ಪಾಪಮಯವಾದ ಲೋಕಕ್ಕೆ ಅವನು ಹೋಗುತ್ತಾನೆ. ಅನಂದ ಅಂದರೆ ಅನಾನಂದ – ಎಲ್ಲಿ ಆನಂದವು ಇಲ್ಲವೋ, ಎಲ್ಲಿ ಸುಖವು ಇಲ್ಲವೋ ಅಂತಹ ಲೋಕಕ್ಕೆ, ಅಂಥಹ ಜನ್ಮಕ್ಕೆ ಹೋಗುತ್ತಾನೆ. ಇಂಥಹ ದಾನ ಮಾಡಬೇಕಾ?

ಕಾಶಿಗೆ ಹೋಗಿ ಏನ್ನನ್ನು ಬಿಟ್ಟು ಬರಬೇಕು?
ನಮ್ಮ ಉಪಾಧ್ಯಾಯರು ಹೇಳುತ್ತಿದ್ದರು. ಮೈಸೂರಿನ ಶಂಕರನಾರಾಯಣ ಜೋಯಿಸರು ನಮಗೆ ಪಾಠ ಮಾಡಿದವರು, ಅವರು ಒಂದು ಉದಾಹರಣೆ ಕೊಡುತ್ತಿದ್ದರು. ನಡೆದಿದೆ ಘಟನೆ ನಡದಿಲ್ಲವಾದ ಘಟನೆ ಅಲ್ಲ. ಯಾರೋ ಒಬ್ಬರು ಕಾಶಿಗೆ ಹೋಗಿ ಹೆಂಡತಿ ಬಿಟ್ಟು ಬಂದರಂತೆ. ಹೆಂಡತಿಗೂ ಇವರಿಗೂ ದಿನ ಜಗಳ. ಅವರಿಗೆ ಹೆಂಡತಿ ಇಷ್ಟ ಅಲ್ಲ ಅನಿಷ್ಟ. ಅವರ ಮುಖ ನೋಡಿದರೆ ಆಗುತ್ತಿರಲಿಲ್ಲ. ಹೇಗಾದರೂ ಪೀಡೆಯನ್ನು ಕಳೆದುಕೊಳ್ಳಬೇಕಾಗಿತ್ತು. ಹಾಗಾಗಿ ಹೆಂಡತಿಯನ್ನು ಕಾಶಿಗೆ ಕರೆದುಕೊಂಡು ಹೋಗಿ ಜನ ತುಂಬಿದ ಜಾಗದಲ್ಲಿ ಬಿಟ್ಟು ಬಂದರು, ಪಾಪ ಆಕೆಗೆ ವಾಪಸ್ಸು ಬರುವುದಕ್ಕೆ ದಾರಿಯೇ ಗೊತ್ತಿಲ್ಲ. ಎಲ್ಲರೂ ಬದನೆಕಾಯಿ, ತೊಂಡೆಕಾಯಿ ಬಿಟ್ಟು ಬಂದರೆ, ಈ ಪುಣ್ಯಾತ್ಮ ಹೆಂಡತಿ ಬಿಟ್ಟು ಬಂದಿದ್ದ.
ಹಾಗೆಲ್ಲ ಮಾಡಬಾರದು ಅದು ಪಾಪದ ಕೆಲಸ. ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ ಅಂತ ವಿವಾಹವಾಗಿ ಧರ್ಮವಿರಲಿ, ಕಾಮವಿರಲಿ, ಅರ್ಥವಿರಲಿ ನಿನ್ನನ್ನು ಬಿಟ್ಟು ಬದುಕಲು ಆಗುವುದಿಲ್ಲ ಎಂದು ಮದುವೆ ಆಗಿ, ಅಗ್ನಿಸಾಕ್ಷಿಯಾಗಿ ಕೈ ಹಿಡಿದು ಬಂದವಳನ್ನ ಹೀಗೆ ಬಿಟ್ಟು ಬಂದರೆ ಖಂಡಿತಾ ಮುಂದೆ ಒಳ್ಳೆಯದಾಗುವುದಿಲ್ಲ. ಅದು ಪರಿಹಾರ ಆಗದೇ ಇರುವ ಪಾಪ. ಇಂಥಹ ಪಾಪ ಮಾಡಿದವರು ಎಂದೂ ಉದ್ಧಾರವಾಗುವುದಿಲ್ಲ. ಕಾಶಿಗೆ ಹೋಗಿ ವಿಶ್ವನಾಥನಿಗೆ ನಮಗೆ ಇಷ್ಟವಾಗಿರುವುದನ್ನು ಅರ್ಪಣೆ ಮಾಡಬೇಕು. ಪ್ರಿಯವಾಗಿರುವಂತಹದನ್ನ ತ್ಯಾಗ ಮಾಡಿದರೆ, ತ್ಯಾಗ ಅಂತ‌ ಹೆಸರು‌. ಮನೆಯಲ್ಲಿ ಕಸಗುಡಿಸುವದನ್ನ ತ್ಯಾಗ ಅಂತೀರಾ? ಇಷ್ಟು ಕಸವನ್ನು ಪಕ್ಕದ ಮನೆಯವರಿಗೆ ಕೊಟ್ಟೆ, ಅವರ ಮನೆ ಅಂಗಳದಲ್ಲಿ, ದೇವರ ಮನೆಯಲ್ಲಿ ಕಸ ಇಟ್ಟು ಬಂದೆ ಅಂದರೆ ದಾನವಾಗುವುದಿಲ್ಲ. ತ್ಯಾಗ ಅಂದರೆ ಹೃದಯದಿಂದ ಬಿಟ್ಟು ಕೊಡಬೇಕು. ನಮ್ಮ ಮನಸ್ಸಿಗೆ ಇಷ್ಟವಿಲ್ಲದನ್ನ ಕೊಟ್ಟರೆ ಅದು ದಾನವಲ್ಲ. ನಮಗೆ ಅಂದರೆ ಮೇಲೆ ಭಾವ ಇರಬೇಕು ಅಂತಹದನ್ನ ಕೊಟ್ಟರೆ ದಾನವಾಗುತ್ತದೆ.
ಹಾಗಾಗಿ ಇಲ್ಲಿ ದಾನದ ಬದಲು ಲೋಭವಾಗುತ್ತಿದೆ. ವಸ್ತುಗಳ ಮೇಲೆ ಸಲ್ಲದ ವ್ಯಾಮೋಹ. ಲೋಭ ಅಂದರೆ ಏನೂ? ಉದಾಹರಣೆಗೆ ಅಕ್ಕಿ ಮೇಲೆ ಲೋಭವಾದರೆ ಆತ ಊಟವನ್ನೆ ಮಾಡುವುದಿಲ್ಲ. ಅಕ್ಕಿ ಅಳೆದು ಹಾಕುವಾಗ ಕೈ ತಡೆಯುತ್ತದೆ. ಆಗ ಹೆಂಡತಿ ಮಕ್ಕಳಿಗೆ ಅರೆಬರೆ ಹೊಟ್ಟೆ ಮಾಡುತ್ತಾನೆ. ಅದರಿಂದ ಒಳ್ಳೆಯದಾಗುತ್ತದಾ? ಇಲ್ಲ
ಅಂಥಹದ್ದು ಇರಬಾರದು. ದಾನ ಮಾಡುವಾಗ ಲೋಭ ಬಂದರೆ ಆತ ಒಳ್ಳೆಯ ದಾನ ಮಾಡುವುದಿಲ್ಲ.
ಇಲ್ಲಿ ಹೇಗೆ ಆಗಿದೆ ಅಂದರೆ,
ದಾನ ಮಾಡುವಾಗ ಲೋಭ ಬಂದಿದೆ, ಹಾಗಾಗಿ ಒಳ್ಳೆ ಹಸುವನ್ನು ತಾನು ಇಟ್ಟುಕೊಂಡು, ಯಾವ ಹಸು ಮುದಿಯಾಗಿದೆ, ಯಾವ ಹಸು ಇನ್ನು ಕರು ಹಾಕುವುದಿಲ್ಲ, ಯಾವ ಹಸುವನ್ನು ಸಾಕುವುದು ಕಷ್ಟ, ಅವನ ಭಾವನೆ ಪ್ರಕಾರ ಯಾವ ಹಸು ಉಪಯೋಗಕ್ಕೆ ಬರುವುದಿಲ್ಲ, ಎಲ್ಲ ಹಸುವೂ ಉಪಯೋಗಕ್ಕೆ ಬಂದೇ ಬರುತ್ತದೆ. ಅವನು ತಪ್ಪು ಮಾಡುತ್ತಿದ್ದಾನೆ, ನಚಿಕೇತನಿಗೆ ಅವನು ಮಾಡುತ್ತಿರುವುದು ಸರಿ ಎಂದು ಅನಿಸಲಿಲ್ಲ.

ಒಂದು ತಪ್ಪು ನಡೆಯುತ್ತಿದ್ದನ್ನು ಕಂಡಾಗ‌ ಏನು ಮಾಡಬೇಕು? ದಾರಿ ಮೇಲೆ ಮುಳ್ಳು ಬಿದ್ದಿದೆ. ಆಗ ನಿಮಗೆ ನಾಲ್ಕು ದಾರಿಯಿದೆ. ಒಂದು ಮುಳ್ಳನ್ನು ಕಂಡು ವಾಪಸ್ಸು ಹೋಗುವುದು, ಇನ್ನೊಂದು ಮುಳ್ಳನ್ನು ಚುಚ್ಚಿಸಿಕೊಂಡು, ಚುಚ್ಚಿಸಿಕೊಂಡು ಹೋಗುವುದು. ಇನ್ನೊಂದು ಮುಳ್ಳನ್ನು ದಾಟಿಕೊಂಡು ಹೋಗುವುದು. ನಾಲ್ಕನೆಯದು ಮುಳ್ಳನ್ನು ತೆಗೆದುಹಾಕುವುದು. ತಪ್ಪನ್ನು ಕಂಡು ಕೈ ಕಟ್ಟಿ, ಕಣ್ಣು ಮುಚ್ಚಿಕೊಂಡು ಕೂರುವುದಲ್ಲ. ಆ ತಪ್ಪನ್ನು ಸರಿಪಡಿಸುವುದಕ್ಕೆ ನೋಡಬೇಕು. ಆದರೆ ವಿವೇಕದಿಂದ ಮಾಡಬೇಕು. ದೊಡ್ಡವರು ತಪ್ಪು ಮಾಡುತ್ತಿದ್ದರೆ ಸೀದವಾಗಿ ಹೋಗಿ ಬುದ್ಧಿ ಹೇಳುವುದಲ್ಲ.
ತಪ್ಪನ್ನು ತಪ್ಪು ಎಂದು ಯಾರಿಗೆ ಹೇಗೆ ಹೇಳಬೇಕೆಂಬ ಪರಿಭಾಷೆಯಿದೆ. ನಾವು ಯಾರು? ಮತ್ತೆ ಅವರು ಯಾರು? ಅವರಿಗೆ ನಾವು ಹೇಗೆ ಹೇಳಬೇಕು? ಒಬ್ಬ ರಾಜನಿಗೆ ಅವನ ತಪ್ಪನ್ನು ಹೇಗೆ ಹೇಳಬೇಕು? ನಮ್ಮ ಮಕ್ಕಳಿಗೆ, ನಮ್ಮ ಶಿಷ್ಯರಿಗೆ, ಎಲ್ಲದಕ್ಕೂ ವ್ಯತ್ಯಾಸವಿದೆ. ಭಾಷೆ ಬೇಕು. ಗುರುಗಳು ಹೇಳಿದ್ದಾರೆ ತಪ್ಪು ಕಂಡರೆ ಸಹಿಸಬೇಡ ಎಂದು ಅಪ್ಪನ ಮೇಲೆ ಕೈ ಮಾಡುವುದಲ್ಲ. ಆ ರೀತಿ ಮಾಡಿ ಪಾಪ ಕಟ್ಟಿಕೊಳ್ಳಬೇಡಿ. ಯಾರಿಗೆ ಹೇಗೆ ಅವರಿಗೆ ತಪ್ಪನ್ನು ತಿಳಿಸಬೇಕೆಂಬ ರೀತಿ ನೀತಿ ಇದೆ. ಆದರೆ ತಪ್ಪನ್ನು ಒಪ್ಪಿಕೊಳ್ಳುವಂತಹದಲ್ಲ. ತಪ್ಪನ್ನು ಕಂಡು ಕೈ ಕಟ್ಟಿ ಕಣ್ಣು ಮುಚ್ಚಿಕೊಂಡು ಕೂರುವುದಲ್ಲ. ತಪ್ಪನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು. ನಮ್ಮ ಜೀವನದಲ್ಲಿ ಮಾಡಬೇಕಾದಂತಹ ಕೆಲಸ. ಹಾಗಾಗಿ ನಚಿಕೇತನಿಗೆ ಅದು ತಪ್ಪು ಅನಿಸಿತು. ಅವನು ತಂದೆಯ ಮೇಲೆ ಗದರಲಿಲ್ಲ. ತಂದೆಯ ತಪ್ಪು ಎಂದು ತಂದೆಗೆ ಅವಮಾನ ಆಗುವಂತಹ ಯಾವ ಶಬ್ಧವನ್ನು ಬಳಸಲಿಲ್ಲ. ಅಷ್ಟು ಸಣ್ಣವನ್ನಾದರೂ ವಿವೇಕವಿತ್ತು. ತಪ್ಪನ್ನು ಗುರುತಿಸಿ, ಈ ತಪ್ಪು ಒಪ್ಪಿಕೊಳ್ಳುವಂತೆ ಹೇಳಿಲ್ಲ, ನಮ್ಮ ಅಪ್ಪನಿಗೆ, ನಮ್ಮ ವಂಶಕ್ಕೆ ಒಳ್ಳೆಯದಲ್ಲ ಅಂತಹ ಪ್ರಜ್ಞೆ ಇತ್ತು. ತಂದೆಗೆ ತಪ್ಪು ಎಂದು ಹೇಳುವಾಗ ಗಂಭೀರವಾದ ಶಬ್ಧ ಬಳಸುತ್ತಾನೆ. ತತ್ ಕಸ್ಮೈ ಮಾಮದಾಸ್ಯಸಿ.
ತತ್ ಅಂದರೆ ತಾತ, ತಾತ ಅಂದರೆ ಅಜ್ಜ ಎನ್ನುವ ಅರ್ಥ ಒಂದೇ ಅಲ್ಲ. ಸಂಸ್ಕೃತದಲ್ಲಿ ಪ್ರೀತಿಯಲ್ಲಿ ಬಳಸುವ ಶಬ್ಧ. ತಾತ ಎಂಬ ಶಬ್ದವನ್ನು ತಂದೆಗೆ ಅಜ್ಜನಿಗೂ ಬಳಸುತ್ತಾರೆ. ಅಪ್ಪ ನನ್ನನ್ನು ಯಾರಿಗೆ ದಾನ ಕೊಡುತ್ತೀರಾ? ಪ್ರಿಯವಾದದು ದಾನ ಮಾಡಬೇಕು. ನಾನು ನಿಮಗೆ ಪ್ರಿಯ. ಪರೋಕ್ಷವಾಗಿ ತಂದೆಯನ್ನ ಎಚ್ಚರಿಸುತ್ತಾ ಇದ್ದಾನೆ. ಸರ್ವಸ್ವವನ್ನು ದಾನಮಾಡುವ ಯಜ್ಞ ಅದರಲ್ಲಿ ನಾನು ಬಂದೆ. ನನ್ನನ್ನೂ ದಾನಮಾಡಬೇಕು. ಪ್ರಿಯವಾದದ್ದನ್ನು ಕೊಡಬೇಕು, ಬೇಡವಾಗಿದ್ದನ್ನಲ್ಲ ಕಲಿತುಕೊಳ್ಳಬೇಕು.

ತಂದೆಗೆ ಸ್ವಲ್ಪ ಉರಿಯಿತು, ತಲೆಗೆ ತಾಗಿತು. ಈ ಎರಡು ವಿಷಯವು ಅರ್ಥ ಆಯಿತು. ಓಹೊ ನಾನು ಮಾಡುತ್ತಿರುವುದು ಸರಿಯಿಲ್ಲ. ಪ್ರಿಯವಾದದ್ದನ್ನು ಕೊಡಬೇಕು, ಸರ್ವಸ್ವವನ್ನೂ ಕೊಡಬೇಕು ಎಂದು ಅರ್ಥವಾಯಿತು. ಆದರೆ ಅರ್ಥವಾಗಿದೆ, ಹಾಗೆ ಮನಸ್ಸಿಗೆ ಚುಚ್ಚಿದೆ. ಏನದು? ನನಗೆ ಬುದ್ದಿ ಹೇಳುತ್ತಾನೆ ಎಂದು ಮನಸ್ಸಿಗೆ ಚುಚ್ಚಿದೆ. ಐದು ವರ್ಷದ ಮಗನಿಂದ ಬುದ್ದಿ ಹೇಳಿಸಿಕೊಳ್ಳಬೇಕಲ್ಲ ಎಂದು. ಉತ್ತರ ಕೊಡಲಿಲ್ಲ. ಅಂದರೆ ಮೌನವೇ ಅದಕ್ಕೆ ಉತ್ತರ. ಇನ್ನೊಂದು ಸರಿ ಕೇಳಿದ ತಂದೆ ಉತ್ತರ ಕೊಡಲಿಲ್ಲ, ತೃತೀಯಂ ಮೂರನೇ ಬಾರಿ ತಾತ ಕಸ್ಮೈ ಮಾಮದಾಸ್ಯಸಿ ಆಗ ಪಿತ್ತ ನೆತ್ತಿಗೆ ಏರಿತು, ಸಿಟ್ಟು ನಾಲಿಗೆಗೆ ಬಂತು. ಬುದ್ದಿಯ ನಿಯಂತ್ರಣ ಸಿಟ್ಟಿನ ಕೈಗೆ ಹೋಯಿತು. ಸಿಟ್ಟು ಬುದ್ದಿ ಕೆಡಿಸುತ್ತದೆ. ಹಾಗಾಗಿ ಎತ್ತಿದ ಬಾಯಲ್ಲಿ “ಮೃತ್ಯವೇ ತ್ವಾದದಾಮಿ” ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ. ಮೃತ್ಯುವಿಗೆ ಮಗನನ್ನು ಕೊಡುವುದಲ್ಲ, ಮಗನನ್ನು ಗದರಿಸುವ ಕ್ರಮ.
ನನ್ನನ್ನು ಪ್ರಶ್ನೆ ಮಾಡುತ್ತೀಯಾ? ನಾನು ಮಾಡುವುದನ್ನು ತಪ್ಪು ಎಂದು ಹೇಳುತ್ತೀಯಾ? ಯಾರು ನೀನು? ಮನಸ್ಸಿನಲ್ಲಿ ಈ ರೀತಿಯ ಪ್ರಶ್ನೆಗಳು ಬಂತು.

ಆದರೆ ಬಾಯಲ್ಲಿ ಬಂದಿದ್ದು
ಮೃತ್ಯವೇ ತ್ವಾದದಾಮಿ. ಅದನ್ನು ಹಾಗೇ ಸ್ವೀಕರಿಸುತ್ತಾನೆ ನಚಿಕೇತ. ಅದೇ ಅರ್ಥದಲ್ಲಿ ನಚಿಕೇತ ಸ್ವೀಕರಿಸಿದ್ದರಿಂದ ಪ್ರಕರಣ ಗಂಭೀರವಾಯಿತು.

ಮುಂದಿನದ್ದು ನಾಳೆ ನೋಡೋಣ. ತಂದೆ ಮಗನನ್ನು ಯಮನಿಗೆ ಕೊಡುವಲ್ಲಿಗೆ ಬಂದು ನಿಂತಿದ್ದಾನೆ. ಸುಲಭವಿಲ್ಲ ಮುಂದಿನ ದಾರಿ, ಯಮಲೋಕಕ್ಕೆ ಹೋಗಬೇಕು, ದಾರಿ ಹೇಗೆ? ಧೈರ್ಯ? ನೀವು ನಿಮ್ಮನ್ನು ಆ ಸ್ಥಾನದಲ್ಲಿ ಕಲ್ಪಿಸಿಕೊಳ್ಳಿ. ಒಂದು ವೇಳೆ ನೀವು ಯಮಲೋಕಕ್ಕೆ ಹೋಗಬೇಕಾಗಿ ಬಂದರೆ?!. ನೀವು ಹೋಗಬೇಡಿ, ನೀವು ನಮಗೆ ಬೇಕು. ಹಾಗಲ್ಲ, ಈ ನಚಿಕೇತ ಹೋದಹಾಗೆ ಎಂದು ಅಂದುಕೊಳ್ಳಿ. ಹೀಗೆ ಅಂದುಕೊಳ್ಳಿ ಯಮನ ಭೇಟಿಯಾಗಲು ನೀವು ತಯಾರಿದ್ದೀರಾ? ಯಮ ಮುಂದೆ ಬಂದು ನಿಂತರೆ ನೋಡುವ ಧೈರ್ಯ ಇದೆಯಾ? ಇಲ್ಲ. ಅಂತಹ ರುದ್ರರೂಪ ಅವನದ್ದು. ನೋಡಿದವರ ಎದೆ ಝಲ್ ಅನ್ನುವಂತಹ ರೂಪ ಯಮನದ್ದು. ಯಾಕೆಂದರೆ ದಂಡಧರ ಅವನು. ಜಗತ್ತಿನಲ್ಲಿ ಯಾರೇ ಇರಲಿ, ರಾವಣನಾಗಲಿ, ಹಿರಣ್ಯ ಕಶ್ಯಪನಾಗಲಿ ಅವರನ್ನ ದಂಡಿಸುವಂತಹವನು ಯಮ. ಎಂಥ ರಾಕ್ಷಸರಿಗೂ ಭಯವಾಗಬೇಕು ಅಂಥಹ ಸ್ವರೂಪ ಅವನದ್ದು. ಅಂಥಹ ಯಮನನ್ನು ಐದು ವರ್ಷದ ಬಾಲಕ ಭೇಟಿ ಆಗಬೇಕು. ಅವನು ಮುಂದೆ ಹೋಗಿ ನನ್ನ ತಂದೆ ನನ್ನನ್ನು ನಿನಗೆ ಕೊಟ್ಟಿದ್ದಾರೆ ಎಂದು ಒಪ್ಪಿಸಿಕೊಳ್ಳಬೇಕು. ನಿಮ್ಮನ್ನು ನೀವು ಆ ಸ್ಥಾನದಲ್ಲಿ ಕಲ್ಪಿಸಿಕೊಳ್ಳಿ. ನಚಿಕೇತ ಯಾರು ಎಂದು ಗೊತ್ತಾಗುತ್ತದೆ. ಸಾಧ್ಯವಿದೆಯಾ? ಆ ಪರಿಸ್ಥಿತಿಯಲ್ಲಿ ನಚಿಕೇತ‌ ಏನು ಮಾಡಿದ ಎಂದು ನಾಳೆ ನೋಡೋಣ ಮಕ್ಕಳೇ. ನಾಳೆ ಭೇಟಿ ಆಗೋಣ.
ನೀವು ಪಾಪ ಯಮನವರೆಗೆ ಹೋಗೋದೂ ಬೇಡ, ಭೇಟಿಯಾಗುವುದು ಬೇಡ. ನಾಳೆ ನಾವು ನೀವು ಭೇಟಿಯಾಗೋಣ, ಮಾತಾಡೋಣ. ಆ ಸುದ್ದಿ ಮಾತನಾಡೋಣ, ನಚಿಕೇತ ಯಮಲೋಕ ಎಂದು ಪ್ರೀತಿಯಿಂದ ಮಾತನಾಡಿಕೊಳ್ಳೋಣ. ಖುಷಿಯಿಂದ ನಾಳೆ ಬನ್ನಿ, ನಚಿಕೇತನ ಧೈರ್ಯವನ್ನು ಬೆಳೆಸಿಕೊಳ್ಳಿ. ನಚಿಕೇತನ ಆ ಶ್ರೇಷ್ಠತೆಯನ್ನು ನಿಮ್ಮಲ್ಲಿ ಅವಾಹನೆ ಮಾಡಿಕೊಳ್ಳಬೇಕು.

Jagadguru Shankaracharya SriSri Raghaveshwara Bharati Mahaswamiji – “Jeevayaana” – Pravachana – Akshararoopa

#Jeevayaana
#SriSamsthana
#SriRaghaveshwaraBharatiSwamiji
#SriMatha

Facebook Comments Box