ಬೆಂಗಳೂರು : ಗುರುವನ್ನು ತಿರಸ್ಕರಿಸಿದರೆ, ಗುರುವನ್ನು ಅಗೌರವದಿಂದ ಕಂಡರೆ ನೋವು – ಪತನ ನಿಶ್ಚಿತ, ದೇವರಾಜ ಇಂದ್ರ ದೇವಗುರು ಬೃಹಸ್ಪತಿಯನ್ನು ಅಗೌರವದಿಂದ  ಕಂಡದ್ದರಿಂದ ದಾನವರ ಜೊತೆ ನಡೆದ ಯುದ್ಧದಲ್ಲಿ ಸೋತು ಸರ್ವಪತನ ಹೊಂದಿದ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀರಾಮಚಂದ್ರಾಪುರದ ಬೆಂಗಳೂರು ಶಾಖಾಮಠದಲ್ಲಿ ಸಂಪನ್ನವಾದ ಗೋಕಥಾದಲ್ಲಿ ಸಮುದ್ರ ಮಥನ – ಕಾಮಧೇನು ಆವಿರ್ಭಾವದ ಕಥೆಯನ್ನು ನಿರೂಪಿಸಿದ ಶ್ರೀಗಳು, ದೇವ ದಾನವರು ಸಮುದ್ರವನ್ನು ಮಥಿಸುವಾಗ ಮೊದಲು  ದುಃಖ-ನೋವುಗಳು ಇದ್ದವು,   ಕಾಮಧೇನುವಿನ ಆವೀರ್ಭಾವದ ನಂತರ ಸುಖ ಸಂಪತ್ತುಗಳು ಕ್ಷೀರಸಾಗರದಿಂದ ಆವೀರ್ಭವಿಸಿದವು. ಸಮುದ್ರಮಥನದ ಸಮಯದಲ್ಲಿ ದೇವ ದಾನವರ ಇಬ್ಬರು ಮನಸ್ಸಿನಲ್ಲೂ ಅಮೃತವನ್ನು ತಾವೇ ಪಡೆಯಬೇಕು ಎಂದಿತ್ತು. ನಮ್ಮ ಬಯಕೆ ಏನೇ ಇದ್ದರು ಭಗವಂತನ ಇಚ್ಛೆ ಇನ್ನೊಂದಿರುತ್ತದೆ, ನಾವು ಚಾಪೆ ಕೆಳಗೆ ನುಸುಳಬಯಸಿದರೆ, ಭಗವಂತ ರಂಗೋಲಿಯ ಕೆಳಗೆ ನುಸುಳಲು ಸಮರ್ಥ, ಭಾವ ಶುದ್ಧವಾಗಿದ್ದರೆ ಭಗವಂತ ಒಲಿಯುತ್ತಾನೆ  ಎಂದು ಹೇಳಿದರು.

ಗೋವಿಗೂ – ಗುರುವಿಗೂ ಸಂಬಂಧ:

ಸಮುದ್ರ ಮಥನದಲ್ಲಿ ಕಾಮಧೇನು ಆವಿರ್ಭಾವವಾದಾಗ, ಶಿವನ ಅಣತಿಯಂತೆ ಸಂತಗಣಕ್ಕೆ ಕಾಮಧೇನು ಕೊಡಲ್ಪಟ್ಟಿತು, ಹಾಗಾಗಿ ಗೋವಿಗೂ – ಗುರುವಿಗೂ(ಸಂತರಿಗೂ) ಇರುವ ಸಂಬಂಧ ಪ್ರಾಚೀನವಾದದ್ದಾಗಿದೆ. ಹೀಗಾಗಿಯೇ ನಮಗೂ ಗೋವಿಗೂ ಅವಿನಾಭಾವ ಸಂಬಂಧ ಬೆಳೆಯಿತು ಎಂದು ಅಭಿಪ್ರಾಯ ವ್ಯಕ್ತಪದಿಸಿದ ಶ್ರೀಗಳು, ಗೋವಿನ ರಕ್ಷಣೆ ಸಂತರ ಹೊಣೆಯಾಗಿದ್ದು, ಸಂತರೆಲ್ಲರೂ ಗೋರಕ್ಷಣೆಯಲ್ಲಿ  ತೊಡಗಿಕೊಳ್ಳಬೇಕು ಎಂದು ಕರೆನೀಡಿದರು.

 

ಗೋವಿದ್ದಲ್ಲಿ ನೋವು – ವಿಘ್ನಗಳಿಲ್ಲ:

ಕಳೆದ ಕೆಲವರ್ಷಗಳಿಂದ ಚಾತುರ್ಮಾಸ್ಯದ ಸಮಯದಲ್ಲಿ ಒಂದಿಲ್ಲೊಂದು ಮಿಥ್ಯಾರೊಪ ಮಾಡಿ ವಿಘ್ನವನ್ನು ಉಂಟುಮಾಡುವುದು ಒಂದು ಪದ್ಧತಿ ಆಗಿದೆ, ಆದರೆ ಈ ವರ್ಷ ಗೋವಿಗೆ ಸಂಬಂಧಿಸಿದ ಚಾತುರ್ಮಾಸ್ಯವಾಗಿದ್ದರಿಂದಲೋ ಏನೋ ನಿರ್ವಿಘವಾಗಿ ಸಾಗುತ್ತಿದೆ ಎಂದ ಶ್ರೀಗಳು, ಗೋವಿದ್ದಲ್ಲಿ ನೋವು-ಸೋಲುಗಳನ್ನು ಗೆಲ್ಲಬಹುದು ಎಂದರು.

ಪ್ರವಚನ, ಕಥನ, ಗಾಯನ, ರೂಪಕಗಳನ್ನೊಳಗೊಂಡ ಈ ಗೋಕಥೆಯಲ್ಲಿ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ನೀರ್ನಳ್ಳೀ ಗಣಪತಿ ಅವರು ಮನಮೋಹಕವಾಗಿ ಚಿತ್ರಿಸಿದರು. ಡಾ| ಗಜಾನನ ಶರ್ಮ ಅವರ ಸಾಹಿತ್ಯ ಸಹಕಾರ, ಗಾಯನದಲ್ಲಿ ಶ್ರೀಪಾದ ಭಟ್, ದೀಪಿಕಾ ಭಟ್, ಸಾಕೇತ ಶರ್ಮ, ಸತ್ಯಜಿತ್ ಜೈನ್ ಕೊಲ್ಕೋತಾ, ಪೃಥ್ವಿ, ಪೌಷಾ,  ರಘುನಂದನ ಬೇರ್ಕಡವು ಹಾಗೂ ಸಂಗೀತ ವಾದ್ಯಗಳಲ್ಲಿ ಪ್ರಜ್ಞಾನಲೀಲಾಶುಕ ಉಪಾಧ್ಯಾಯ, ಗಣೇಶ್ ಕೆ.ಎಸ್., ಗಣೇಶ್ ಗುಂಡ್ಕಲ್, ಆದಿತ್ಯ ಭಟ್ ಕೆಕ್ಕಾರು ಮೊದಲಾದವರು ಭಾಗವಹಿಸಿದ್ದರು. ಅನಂತರ ಸಮುದ್ರಮಥನದ  ರೂಪಕ ಜನರ ಮನತಟ್ಟಿತು.  ಸಾವಿರಾರು ಜನರು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಗೋಕಥೆಯ ನಂತರ ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಮಧ್ಯಾಹ್ನ ನಡೆದ ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ಸಾಧನಾಪಂಚಕ ದೃಶ್ಯಮುದ್ರಿಕೆ ಹಾಗೂ ಅ.ಪು ನಾರಾಯಣಪ್ಪ ಅವರು ರಚಿಸಿದ ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳು ಎಂಬ ಪುಸ್ತಕವನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆಗೊಳಿಸಿದರು. ಶ್ರೀಸಂಸ್ಥಾನದ ಶಾಸನತಂತ್ರ ಇಂದಿನ ಗೋಕಥಾ ಪ್ರಾಯೋಜಕತ್ವವನ್ನು ವಹಿಸಿತ್ತು. ಶ್ರೀಮಠದ ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಶ್ರೀ ಸೂಕ್ತ ಜಪ, ಶ್ರೀ ಸೂಕ್ತ ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ ನಡೆಯಿತು.

ಗೋಕಥಾದಲ್ಲಿ ಕಥೆಯನ್ನು ನಿರೂಪಿಸಿದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಗೋಕಥಾದಲ್ಲಿ ಕಥೆಯನ್ನು ನಿರೂಪಿಸಿದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಗೋಕಥಾ ಕಾರ್ಯಕ್ರಮಕ್ಕೆ ಭಕ್ತಸಾಗರದ ನಡುವಿನಿಂದ ಆಗಮಿಸುತ್ತಿರುವ  ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಗೋಕಥಾ ಕಾರ್ಯಕ್ರಮಕ್ಕೆ ಭಕ್ತಸಾಗರದ ನಡುವಿನಿಂದ ಆಗಮಿಸುತ್ತಿರುವ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು

ಗೋಕಥಾದಲ್ಲಿ ಮೂಡಿಬಂದ ಸಮುದ್ರಮಥನದ  ರೂಪಕ

ಗೋಕಥಾದಲ್ಲಿ ಮೂಡಿಬಂದ ಸಮುದ್ರಮಥನದ ರೂಪಕ

ಗೋಕಥೆಯ ನಂತರ ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು

ಗೋಕಥೆಯ ನಂತರ ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು

12.09.2016 ರ ಕಾರ್ಯಕ್ರಮ

  • ಬೆಳಗ್ಗೆ 7.00 : ಕಾಮಧೇನು ಹವನ
  • ಬೆಳಗ್ಗೆ 9.00 : ಕುಂಕುಮಾರ್ಚನೆ
  • ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
  • ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
  • ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
  • ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ
Facebook Comments Box