“ಗೋವಿನ ಕುರಿತಾದ ಅನ್ವೇಷಣೆಗಳಾಗಲಿ” ವಿಜ್ಞಾನಿಗಳಿಗೆ ಶ್ರೀಗಳ ಕರೆ

ಬೆಂಗಳೂರು, ಜು.20 : ಜಗನ್ಮಾತೆಯಾದ ಗೋವು ಜಗತ್ತನ್ನು ರಕ್ಷಿಸುತ್ತದೆ, ಸಂತರು ಗೋಸಂರಕ್ಷಣೆಗೆ ಮುಂದಾಗಬೇಕು ಎಂದು ಒಡಲು ಸಭಾಂಗಣದ ಮಡಿಲು ವೇದಿಕೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ಗೋಚಾತುರ್ಮಾಸ್ಯಸಂದೇಶದಲ್ಲಿ ಕರೆನೀಡಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ಶ್ರೀಪರಿವಾರದ ಸರ್ವಸೇವೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಗುರುವನ್ನು ಮೂರ್ತಿ ಎಂದು ಭಾವಿಸಿದರೆ, ಪರಿವಾರದವರು ದೇವಾಲಯವಿದ್ದಂತೆ. ದೇವರ ದರ್ಶನಕ್ಕೆ ಹೇಗೆ ಮೆಟ್ಟಿಲು ಅವಶ್ಯಕವೋ ಹಾಗೆಯೇ, ಗುರುವಿನ ದರ್ಶನಕ್ಕೆ ಪರಿವಾರದವರು ಮೆಟ್ಟಿಲಾಗಿ, ಭಕ್ತರೂ ಹಾಗೂ ಗುರುಗಳ ಮಧ್ಯೆ ಸೇತುವಾಗಿ ಸೇವೆಸಲ್ಲಿಸುತ್ತಾರೆ ಎಂದರು.
ಹಿರಿಯ ವಿಜ್ಞಾನಿಗಳಾದ ಎ.ಓಬೀ ರೆಡ್ಡಿ ಅವರಿಗೆ ಗೋಸೇವಕ ಪುರಸ್ಕಾರವನ್ನು ಅನುಗ್ರಹಿಸಿ, ವಿಜ್ಞಾನಿಗಳೇ, ಬಂದು ಗೋವನ್ನು ನೋಡಿರಿ, ಗೋವಿನ ಕುರಿತಾಗಿ ಅನ್ವೇಷಣೆ ಗಳಾಗಲಿ ಎಂದು ವಿಜ್ಞಾನಿಗಳಿಗೆ ಶ್ರೀಗಳು ಕರೆನೀಡಿದರು.
ಸಂತಸಂದೇಶವನ್ನು ನೀಡಿದ ಅಗಡಿ ಆನಂದವನದ ಪೂಜ್ಯ ಗುರುದತ್ತಮೂರ್ತಿ ಚಕ್ರವರ್ತಿಗಳು, ಪೀಠಾಧಿಪತಿಗಳ ಚಾತುರ್ಮಾಸ್ಯ ಕೇವಲ ಅವರ ಅನುಷ್ಠಾನಗಳಿಗೆ ಸೀಮಿತವಾಗಿರದೇ, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತಿರಬೇಕು. ಈ ದಿಶೆಯಲ್ಲಿ ಶ್ರೀರಾಮಚಂದ್ರಾಪುರಮಠದ ಶ್ರೀಗಳು ಸಮಾಜಮುಖಿಯಾಗಿ ಚಾತುರ್ಮಾಸ್ಯವನ್ನು ನೆಡೆಸುತ್ತಿರುವುದು ಶ್ಲಾಘನೀಯ ಎಂದರು.
“ಗೋವನ್ನು ರಕ್ಷಿಸೋಣ ಎಂದರೆ ಸಂಸತ್ತು,ಸಂಪತ್ತು,ಬಾಹುಬಲ ನಮ್ಮ ಕೈಯಲ್ಲಿಲ್ಲ, ಹಾಗಾಗಿ ಗೋವನ್ನು ಮೊದಲು ನಮ್ಮ ಮನಸ್ಸಿನಲ್ಲಿ ಸಾಕೋಣ,ಗೋಸಂರಕ್ಷಣೆಗೆ ನಮ್ಮಲ್ಲಾಗುವ ಸಹಕಾರನೀಡೋಣ” ಎಂಬ ಶ್ರೀಗಳ ಮಾತುಗಳನ್ನು ಉಲ್ಲೇಖಿಸಿದ ಪೂಜ್ಯ ಗುರುದತ್ತಮೂರ್ತಿ ಚಕ್ರವರ್ತಿಗಳು, ಸಮಾಜದ ಎಲ್ಲಾ ಅಂಗಗಳೂ ಗೋಸಂರಕ್ಷಣೆಗೆ ತಮ್ಮಲ್ಲಾಗುವ ಸಹಕಾರ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಸೇವಕ ಪುರಸ್ಕಾರ ಸ್ವೀಕರಿಸಿದ , ಎನ್.ಡಿ.ಆರ್.ಐ. ಸಂಸ್ಥೆಯ ನಿವೃತ್ತ ಹಿರಿಯ ವಿಜ್ಞಾನಿಗಳಾದ ಎ.ಓಬೀ ರೆಡ್ಡಿ ಅವರು, ದೇಶದಲ್ಲಿ ಭಾರತೀಯ ಗೋತಲಿಗಳ ಇಂದಿನ ಸ್ಥಿತಿಗತಿಗಳ ಕುರಿತು ಆಂತಕ ವ್ಯಕ್ತಪಡಿಸಿದರು, ಶ್ರೀಗಳು ಸುಮಾರು ಹತ್ತುವರ್ಷಗಳ ಹಿಂದೆಯೇ ಕೈಗೊಂಡಿದ್ದ ‘ದತ್ತ ಶಂಕರ ಗೋಯಾತ್ರೆ’ಯಲ್ಲಿ ಸಾವಿರಾರು ಗೋವುಗಳನ್ನು ರಾಜಸ್ಥಾನದಿಂದ ನಮ್ಮ ರಾಜ್ಯಕ್ಕೆ ತಂದು ಉಚಿತವಾಗಿ ಹಂಚಿದ್ದನ್ನು ಸ್ಮರಿಸಿಕೊಂಡರು. ನಂತರ ಈ ಕುರಿತು ಪ್ರಶ್ನೋತ್ತರಗಳು ನಡೆಯಿತು.

ಇದೇ ಸಂದರ್ಭ ಹಿಂದಿನ ಶ್ರೀಗಳ ಪರಿವಾರದಲ್ಲಿ ಸೇವೆ ಸಲ್ಲಿಸಿದ ಕೃಷ್ಣಮಂಜುನಾಥ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಅವರು, ಹಿಂದಿನ ಗುರುಗಳ ಕಾಲದಲ್ಲಿ ತಮ್ಮ ಸೇವಾದಿನಗಳನ್ನು ಮೆಲಕುಹಾಕಿದರು. ಶ್ರೀಭಾರತೀಪ್ರಕಾಶನವು ಹೊರತಂದ ಶ್ರೀಮಠೀಯ ನಿತ್ಯವಿಧಿ ಎಂಬ ಪುಸ್ತಕ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ಧ್ವನಿಮುದ್ರಿಕೆಯನ್ನು ಶ್ರೀಗಳು ಲೋಕಾರ್ಪಣೆಮಾಡಿದರು.

ಶ್ರೀಮನ್ ನಿ|| ಪ್ರ|| ಸ್ವ|| ಒಂಕಾರಮೂರ್ತಿ ಶ್ರೀ ಶಿವಾನಂದ ಮಹಾಸ್ವಾಮಿಗಳು, ಏಕದಳ ಬಿಲ್ವ ಬಂಡೇಮಠ, ನಿ|| ಪ್ರ|| ಸ್ವ|| ಹುಚ್ಚಪ್ಪ ಸ್ವಾಮಿಗಳು, ಬಿಡದಿ ಚೌಕಿ ಮಠ, ಶ್ರೀ ಷ|| ಬ್ರ|| ಶ್ರೀ ಓಂಕಾರೇಶ್ವರ ಸ್ವಾಮಿಗಳು,ಶ್ರೀ ಸಿದ್ಧಮಲ್ಲೇಶ್ವರ ಪಟ್ಟದ ಮಠ, ಷ|| ಬ್ರ|| ಶ್ರೀ ನಂದೀಶ ಶಿವಾಚಾರ್ಯ ಸ್ವಾಮೀಜಿಶ್ರೀ ವೀರಸಿಂಹಾಸನ ಮಠ, ಷ|| ಬ್ರ|| ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಶ್ರೀಮಠ ಪೂರಿಗಾಲಿ ಇವರುಗಳು ಶ್ರೀಶ್ರೀಗಳನ್ನು ಸಂದರ್ಶಿಸಿ ಗೋಸೇವೆಗೆ ತಮ್ಮ ಸಹಕಾರವನ್ನು ವ್ಯಕ್ತಪಡಿಸಿದರು.

ಕಾರ್ಯನಿರ್ವಹಣಾಧಿಕಾರಿ ಕೆ. ಜಿ. ಭಟ್, ಶ್ರೀಸಂಸ್ಥಾನದವರ ಎಲ್ಲಾ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

21-07-2016ರ ಕಾರ್ಯಕ್ರಮಗಳು:

  • ಬೆಳಗ್ಗೆ 9.00 : ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ
  • ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
  • ಬೆಳಗ್ಗೆ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
  • ಅಪರಾಹ್ನ 3.00 :
    ಗೋಸಂದೇಶ : ಗೋವು ಮತ್ತು ವಿಶೇಷ ಮಕ್ಕಳು
    ಲೋಕಾರ್ಪಣೆ :ಹನುಮದ್ವಿಕಾಸ – ಪುಸ್ತಕ, ಸಾಧನಾಪಂಚಕ ಪ್ರವಚನಮಾಲಿಕೆ -ಧ್ವನಿಮುದ್ರಿಕೆ
    ಗೋಸೇವಕ ಪುರಸ್ಕಾರ : ಭಾಜನರು – ಶ್ರೀಕಾಂತ ಬೆಟಗೇರಿ
    ಸಂತ ಸಂದೇಶ : ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು, ಭಂಡಾರಕೇರಿಮಠ, ಭಾಗವತಾಶ್ರಮ, ಬೆಂಗಳೂರು.
    ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
  • ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
  • ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ
Facebook Comments Box