ಮುಂಬಯಿ.ಫೆ ೧೬. ಶೋಧನೆ ಎಂಬುದು ಎಲ್ಲರ ಬದುಕಿನಲ್ಲಿಯೂ ಎಲ್ಲ ಕಾಲದಲ್ಲಿಯೂ ಅತ್ಯಗತ್ಯ. ಎಲ್ಲ ರೀತಿಯ ಸಾಧನೆಯ ಹಿನ್ನೆಲೆಯಲ್ಲಿಯೂ ಶೋಧನೆಯ ತಳಹದಿಯಿದೆ.ಪ್ರತಿಯೊಂದು ಆವಿಷ್ಕಾರವೂ ಸತತಶೋಧನೆಯ ತುಡಿತದ ಫಲ.ಲೋಕದ ಇತಿಹಾಸದಲ್ಲಿ ಮೊಟ್ಟಮೊದಲನೆಯ ಅತಿದೊಡ್ಡಮಟ್ಟದ ಶೋಧವೆಂದರೆ ರಾಮಭಕ್ತಾಗ್ರೇಸರ ಆಂಜನೇಯನ ಸೀತಾನ್ವೇಷಣೆ.ಕೋಟಿ,ಕೋಟಿ ಸಂಖ್ಯೆಯ ಕಪಿಗಳ ತಂಡದ ನೇತೃತ್ವವನ್ನು ವಹಿಸಿ ದಕ್ಷಿಣದಿಕ್ಕಿನಲ್ಲಿ ಸೀತಾನ್ವೇಷಣೆಯನ್ನು ನಡೆಸಿದ ಅಂಗದನ ಗುಂಪಿನಲ್ಲಿದ್ದ ಆಂಜನೇಯ ಶತಯೊಜನ ವಿಸ್ತೀರ್ಣದ ಸಾಗರವನ್ನು ಲಂಘಿಸಿದ. ರಾವಣನ ಲಂಕೆಯಲ್ಲಿದ್ದ ಅಶೋಕವನದಲ್ಲಿ ಸೀತೆಯನ್ನು ಕಂಡು ಶುಭವಾರ್ತೆಯನ್ನು ಶ್ರೀರಾಮನಿಗೆ ನೀಡಿದ.ಇಂತಹ ದೊಡ್ಡಮಟ್ಟದ ಶೋಧನೆ ಲೋಕೋತ್ತರವಾದದ್ದು ಎಂದರೆ ಅತಿಶಯೋಕ್ತಿಯಲ್ಲ.ಆದರೆ ಇಂತಹ ಅಮೋಘವಾದ ಸಾಧನೆಯನ್ನು ಮಾಡಿ ಶ್ರೀರಾಮನ ವಿಶೇಷಾನುಗ್ರಹಕ್ಕೆ ಪಾತ್ರನಾದರೂ ಆಂಜನೇಯ ಅದರಿಂದ ಗರ್ವಪಡದೆ ತಾನು ಭಗವಂತನ ಸೇವೆಯಲ್ಲಿ ಒಂದು ಸಾಧನ ಮಾತ್ರ ಎಂದು ತಿಳಿದು ಸರ್ವಸಮರ್ಪಣಭಾವದಿಂದ ತನ್ನನ್ನೇ ತಾನು ಪರಮಾತ್ಮನಿಗೆ ಅರ್ಪಿಸಿಕೊಂಡ. ಇಂತಹ ಸಮರ್ಪಣಾಭಾವವು ನಮ್ಮ ಬದುಕಿಗೆ ಮಾರ್ಗದರ್ಶಕವಾಗಬೇಕು ಎಂದು ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಸ್ವಾಮಿಗಳು ಹೇಳಿದ್ದಾರೆ.
ಮುಂಬಯಿಯ ದೊಂಬಿವಲಿಯಲ್ಲಿನ ನೂಪುರ ಸಭಾಂಗಣದಲ್ಲಿ ಫೆ.೧೫ ರಿಂದ ೧೯ ರವರೆಗೆ ಆಯೋಜಿತವಾದ ಐದುದಿನಗಳ “ಶ್ರೀರಾಮಕಥಾ” ಕಾರ್ಯಕ್ರಮದ ಪ್ರಾರಂಭದಿನವಾದ ೧೫ ಶುಕ್ರವಾರದ ಪ್ರವಚನದಲ್ಲಿ ವಾಲ್ಮೀಕಿರಾಮಾಯಣದ ಸುಂದರಕಾಂಡ ದ ಮೇಲೆ ಮಾತನಾಡುತ್ತ ವಾಸ್ತವವಾಗಿ ದಕ್ಷಿಣದಿಕ್ಕಿನಲ್ಲಿ ಸೀತೆಯನ್ನು ಹುಡುಕುತ್ತ ಸಾಗರತೀರದಲ್ಲಿ ಕುಳಿತು ಸಾಗರೋಲ್ಲಂಘನದ ಬಗ್ಗೆ ನಿರಾಶರಾಗಿದ್ದ ಸ್ಥಿತಿಯಲ್ಲಿ ಆಂಜನೇಯನ ಶಕ್ತಿ-ಸಾಮರ್ಥ್ಯದ ಬಗ್ಗೆ ಅರಿವನ್ನು ಮೂಡಿಸಿ ಅವನಲ್ಲಿ ಸುಪ್ತವಾಗಿದ್ದ ಅಗಾಧಬಲಸಂಪನ್ನತೆಯನ್ನು ತಿಳಿಹೇಳಿ ಎಚ್ಚರಿಸಿದವನು ವೃದ್ಧನಾದ ಜಾಂಬವಂತ.ವಾಸ್ತವವಾಗಿ ಗುರುವಾದವನೂ ಇದೇ ರೀತಿಯಲ್ಲಿ ಶಿಷ್ಯನಲ್ಲಿ ಅರಿವಿನ ಬೆಳಕನ್ನು ಹರಡುತ್ತಾನೆ.
ಇದು ರಾಮಾಯಣಕ್ಕೆ ಮಾತ್ರ ಸೀಮಿತವಾದ ವಿಷಯವಾಗದೆ ನಮ್ಮೆಲ್ಲರ ಬದುಕಿಗೆ ಪ್ರಸ್ತುತವಾದ ವಿಷಯವೂ ಹೌದು.ನಮ್ಮ ಬದುಕಿನಲ್ಲಿಯೂ ಅನವರತವಾದ ಹುಡುಕಾಟವಿದೆ. ಆದರೆ ಯಾವುದನ್ನು ಹುಡುಕಬೇಕೋ ಅದನ್ನು ಹುಡುಕದೆ ಬೆಲೆಯಿಲ್ಲದ ಸಾಮಾನ್ಯವಸ್ತುವಿಗೆ ಮರುಳಾಗಿ ಅದರ ಅನ್ವೇಷಣೆಯಲ್ಲಿ ತೊಡಗುತ್ತೇವೆ.ಅಂತಹ ಅಜ್ಞಾನವನ್ನು ದೂರಮಾಡಿ ನಮ್ಮ ಅನ್ವೇಷಣೆಯ ಗುರಿಯನ್ನು ಸೀತಾರಾಮರತ್ತ ಆತ್ಮಜ್ಞಾನದತ್ತ ತಿರುಗಿಸುವ ಗುರು ಅತ್ಯಂತ ಅಗತ್ಯ.ವಾಲ್ಮೀಕಿರಾಮಾಯಣವು ಇಂತಹ ಅನನ್ಯಲಭ್ಯವಾದ ಗುರುವಿನ ಮಾರ್ಗದರ್ಶನವನ್ನು ಮಾಡಿ ಜೀವನಸಫಲತೆಯೆಡೆಗೆ ನಮ್ಮನ್ನು ಕರೆದೊಯ್ಯುತ್ತದೆ.ಈ ಹಿನ್ನೆಲೆಯಲ್ಲಿ ರಾಮಾಯಣವು ಸಾರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿ ನಮ್ಮೆಲ್ಲರ ಬಾಳಿಗೆ ಬೆಳಕಾಗುತ್ತದೆ ಎಂದೂ ಹೇಳಿದ ಪೂಜ್ಯಶ್ರೀಗಳು ಜೀವನಕ್ಕೆ ಬುದ್ಧಿಯ ಜೊತೆಗೆ ಭಾವವೂ ಬೇಕು.ಇಂತಹ ಉದಾತ್ತವಾದ ಭಾವ-ಬುದ್ಧಿಗಳ ಸಂಗಮ ನಮ್ಮ ಹೃದಯಮಂದಿರದಲ್ಲಾಗಬೇಕು ಎಂದೂ ಹೇಳಿದರು.
ಶ್ರೀರಾಮಕಥಾ ವೃಂದದ ಕಲಾವಿದರಾದ ಶ್ರೀಪಾದ ಭಟ್, ವೆಂಕಟಗಿರಿ ಹಾಗೂ ಕುಮಾರಿ ದೀಪಿಕಾ ಭಟ್ ಇವರ ಮನೋಜ್ಣವಾದ ಗಾಯನ,ಉದಯ ಭಂಡಾರಿಯವರ ಕೀಬೋರ್ಡ್, ಮಹೇಶ್ ಗಾಡವಿ ಯವರ ತಬಲಾ ವಾದನಗಳು ಶ್ರೋತೃಗಳನ್ನು ಬೇರೊಂದುಲೋಕಕ್ಕೆ ಕರೆದೊಯ್ದವು.ಆಶುಚಿತ್ರಕಾರ ಖ್ಯಾತ ವ್ಯಂಗ್ಯಚಿತ್ರಕಾರ ಗಣಪತಿ ನೀರ್ನಳ್ಳಿ ಯವರ ಮಿಂಚಿನಸಂಚಾರದ ಚಿತ್ರರಚನೆ ಅದ್ಭುತವಾಗಿತ್ತು. ಕರ್ನಾಟಕದ ಸುಪ್ರಸಿದ್ಧ ಯಕ್ಷಗಾನಕಲಾವಿದರಾದ ಶ್ರೀ ವಿಷ್ಣುಭಟ್ ಮೂರೂರು ಹಾಗೂಶ್ರೀ ಈಶ್ವರ ಭಟ್ ಕಟ್ಟೆ ಇವರಿಂದ “ಜಾಂಬವತ್ಪ್ರಚೋದನೆ” ಎಂಬ ರೂಪಕವು ಪ್ರದರ್ಶಿತವಾಯಿತು.ದೊಂಬಿವಲಿ ವಲಯದ ಗೀತಾ ರಾಮಚಂದ್ರ ಹೆಗಡೆ ದಂಪತಿಗಳು ಪೂಜ್ಯಶ್ರೀಗಳಿಗೆ ಮಾಲಾರ್ಪಣೆ ಮಾಡಿ ಗುರುವಂದನೆ ಸಲ್ಲಿಸಿದರು.ಶ್ರೀರಾಮಕಥಾ ನಿರ್ವಹಣಾಸಮಿತಿಯ ಅಧ್ಯಕ್ಷ ಶ್ರೀ ಎಮ್.ಕೆ.ಜನಾರ್ದನ ಪ್ರಾಸ್ತಾವಿಕವಾಗಿ ಶ್ರೀಮಠ ಹಾಗೂ ಶ್ರಿ ರಾಮಕಥಾ ಕಾರ್ಯಕ್ರಮಗಳ ಪರಿಚಯ ನೀಡಿದರು.ಮುಂಬಯಿನಗರದಲ್ಲಿ ಪ್ರಥಮಬಾರಿಗೆ ಸಂಪನ್ನವಾಗುತ್ತಿರುವ ಈ ರಾಮಕಥೆಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಶ್ರೋತೃಗಳು ಆಗಮಿಸಿ ರಾಮಕಥೆಯನ್ನು ಆಸ್ವಾದಿಸಿದರು.
ಪೋಟೋಗಳುಃ
Leave a Reply