ಪೀಠಾರೋಹಣ ವಾರ್ಷಿಕೋತ್ಸವವನ್ನು   “ಜೀವಸೇವಾ ಸಂಕಲ್ಪದಿನ”ವಾಗಿ ಆಚರಿಸಿರಿ – ಶ್ರೀಸಂಸ್ಥಾನ

ಸಮಾಜಮುಖಿಯಾದ  ಸೇವಾಯೋಜನೆಗಳ ಉದ್ಘೋಷಣೆಯ ಮೂಲಕ ನಮ್ಮನ್ನು ನಾವು ಸಮಾಜಕ್ಕೆ ಅರ್ಪಿಸಿಕೊಂಡ ಪೀಠಾರೋಹಣದ ವಾರ್ಷಿಕೋತ್ಸವದ ಈ ದಿನವನ್ನು “ಜೀವಸೇವಾ ಸಂಕಲ್ಪದಿನ”ವಾಗಿ ಆಚರಿಸಿರಿ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಪೀಠಾರೋಹಣ ವಾರ್ಷಿಕೋತ್ಸವದಂದು ಶ್ರೀಸಂಸ್ಥಾನದವರಿಗೆ ವಿಶಿಷ್ಟವಾದ ವ್ಯಾಸಪೀಠ ಸಹಿತ ಭಗವದ್ಗೀತೆಯನ್ನು ಭಕ್ತರು ಸಮರ್ಪಿಸಿದರು.

ಪೀಠಾರೋಹಣ ವಾರ್ಷಿಕೋತ್ಸವದಂದು ಶ್ರೀಸಂಸ್ಥಾನದವರಿಗೆ ವಿಶಿಷ್ಟವಾದ ವ್ಯಾಸಪೀಠ ಸಹಿತ ಭಗವದ್ಗೀತೆಯನ್ನು ಭಕ್ತರು ಸಮರ್ಪಿಸಿದರು.

ಗಿರಿನಗರದ ಶ್ರೀರಾಮಾಶ್ರಮದಲ್ಲಿ  ಪೀಠಾರೋಹಣದ ವಾರ್ಷಿಕೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಶ್ರೀಗಳು ಮಾತನಾಡಿದರು. ಈ ದಿನವನ್ನು ಯಾವರೀತಿ ಆಚರಿಸಬೇಕು ಎಂಬ ಭಕ್ತರ ಪ್ರಶ್ನೆಗೆ ಉತ್ತರಿಸಿದ ಪೂಜ್ಯ ಶ್ರೀಗಳು, ಅಂದು ನಾವು ಪೀಠಾರೋಹಣ ಮಾಡಿದಾಗ ಶ್ರೀಶಂಕರಾಚಾರ್ಯರ ನೆನಪಿನಲ್ಲಿ ವಿದ್ಯಾಯೋಜನೆಗಳು, ಶ್ರೀರಾಮನ ಹೆಸರಿನಲ್ಲಿ ಸೇವಾಯೋಜನೆಗಳನ್ನು ಸಂಕಲ್ಪಿಸುವುದರಮೂಲಕ ಸಮಾಜದ ಉನ್ನತಿಗೆ ಸಂಕಲ್ಪಿಸಿ ನಮ್ಮನ್ನು ನಾವು ತೊಡಗಿಸಿಕೊಂಡೆವು, ಹಾಗೆಯೇ ನಮ್ಮ ಶಿಷ್ಯಭಕ್ತರು, ಸಮಾಜಕ್ಕೆ ಸಹಕಾರಿಯಾಗುವ, ಜೀವಜಗತ್ತಿಗೆ ಉಪಕಾರಿಯಾಗುವ ಯಾವುದಾದರೂ ಒಳ್ಳೆಯ ಕಾರ್ಯದೋಂದಿಗೆ ಈ ದಿನವನ್ನು“ಜೀವಸೇವಾ ಸಂಕಲ್ಪದಿನ” ಆಚರಿಸಿರಿ, ಗುರುಸ್ಮರಣೆಯೊಂದಿಗೆ ಜೀವಜಗತ್ತಿನ ಹಿತಕಾಯುವ ಸೇವೆಮಾಡಲು ಯಾವುದೇ ಆಡಂಬರದ ಅವಶ್ಯಕತೆ ಇಲ್ಲ, ಸರಳವಾಗಿ ಆಚರಿಸಿ ಆದರೆ ಈ “ಜೀವಸೇವಾ ಸಂಕಲ್ಪದಿನ” ಅರ್ಥಪೂರ್ಣವಾಗಿರಲಿ ಎಂದು ಆಶಂಸಿಸಿದರು.

ಪ್ರಾಸ್ತಾವಿಕ ಮಾತನಾಡಿದ ವಿದ್ವಾನ್ ಜಗದೀಶ್ ಶರ್ಮಾ ಅವರು, ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಪ್ರಮಾಥಿನಾಮ ಸಂವತ್ಸರದ ವೈಶಾಖ ಶುದ್ಧ ತ್ರಯೋದಶಿಯಂದು(೨೮/೦೪/೧೯೯೯) ಪೀಠಾರೋಹಣವನ್ನುಮಾಡಿ, ಅಂದಿನಿಂದ ಇಂದಿನವರೆಗೆ ಅವಿಶ್ರಾಂತವಾಗಿ ಸಮಾಜದ ಏಳಿಗೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಗೋಸಂರಕ್ಷಣೆಯ ಸಂಕಲ್ಪದ ಕಾಮದುಘಾ, ಮುಷ್ಟಿಭಿಕ್ಷಾ,ಜೀವನದಾನ,ಆರ್ತತ್ರಾಣ ನಿಧಿ,ಗ್ರಾಮರಾಜ್ಯ, ವನಜೀವನಯಜ್ನದಂತಹ ಹತ್ತು ಹಲವು ಯೋಜನೆಗಳ ಮೂಲಕ ಜೀವಜಗತ್ತಿನ ಹಿತಕಾಯುವ ಕಾರ್ಯಗಳನ್ನು ಮಾಡುತ್ತಿದ್ದರೆ ಎಂದರು. ಇದೇ ಸಂದರ್ಭದಲ್ಲಿ ಉದ್ಯಮಿಗಳಾದ ಚಿಂಚನೂರು ಮಹಾಭಲೇಶ್ವರ ಅವರು ಶ್ರೀಗಳು ಸೂಚಿಸಿದ ಜೀವಸೇವಾ ಸಂಕಲ್ಪದ ನಿಮಿತ್ತ ಬರಪೀಡಿತ ಕಲಬುರ್ಗಿಯ ಪಾಣೇಗಾವ್ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆಮಾಡುತ್ತಿರುವುದಾಗಿ ತಿಳಿಸಿದರು. ಶ್ರೀಮಠದ ಮುಖ್ಯಕಾರ್ಯನಿರ್ವಹಣಾದಿಕಾರಿಗಳಾದ ಶ್ರೀ ಕೆ,ಜಿ ಭಟ್, ಶ್ರೀಸಂಸ್ಥಾನದ ಎಲ್ಲಾ ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗು ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments Box